ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು ಹೊಸ ಕವಿತೆಗಳು
ವಿಪರ್ಯಾಸ
ಹಸುಳೆಗುಂಟೇ ಹಾಲಿನ ಭೇದ
ಉಸಿರುಗುಂಟೇ ಗಾಳಿಯ ಪ್ರಭೇದ
ಪಂಚಭೂತಗಳ ಸಮಾಗಮದ ಈ ಸೃಷ್ಟಿ
ಪಂಚಭೂತಗಳಲ್ಲಿ ವಿಲೀನವಾಗಲು
ರಕ್ತ ಮಾಂಸದ ಮುದ್ದೆಯಾದ ಮಾನವ
ಹುಟ್ಟುತ್ತಾ ಯಾರ ಮುಖವ ನೋಡಿರುವೆ ?
ತಿಳಿದಿರುವೆಯಾ ಸಾಯುತ್ತಾ ನಿನ್ನ ರೆಪ್ಪೆ ಮುಚ್ಚೋರು ಯಾರೋ?
ಮರಣ ಮರವಣಿಗೆಯ ಹೊರುವರು ಯಾರೋ?
ಅರಿತಿರುವೆಯಾ ನಿನ್ನ ನಾಳೆಯ ಭಾಗ್ಯವ?
ಹೋಗುತ್ತಾ ಜೊತೆಗೆ ಏನಾದರೂ ಒಯ್ಯುವೆಯಾ?
ಒಯ್ಯಲು ನೀನಿಲ್ಲಿ ತಂದಿರುವುದಾದರೂ ಏನು?
ಮೂರು ದಿನಗಳ ಪಯಣದಲ್ಲಿ
ಅನುಭವಗಳ ಹೊತ್ತು ಹೋಗೋ
ತಾತ್ಕಾಲಿಕ ಅತಿಥಿ ನೀನು
ಮತ್ತೇಕೆ ಈ ಮೋಸ, ದ್ವೇಷ, ಉದ್ವೇಗ
ಯಾವ ಹಕ್ಕಿಗೆ ಹಂಗಿನ ಹೋರಾಟ
ಆಕ್ರೋಶದ ಚೀರಾಟ, ರಕ್ತದೋಕುಳಿಯ ಚೆಲ್ಲಾಟ
ಒಂದು ಕೂಸಿಗೆ ತಹತಹಿಸುವ
ಒಂದು ಹೊತ್ತಿನ ಕೂಳಿಗೆ ಹೊಯ್ದಾಡುವ
ಸಂಬಂಧಗಳ ಗೊಂದಲದಲ್ಲಿ ಒದ್ದಾಡುವ
ಮಮತೆ ಆಸರೆಗಾಗಿ ಹುಡುಕಾಡುವ ಜನಗಳ ನಡುವೆ
ದೇಹಗಳ ಬಿಸಿರಕ್ತ ಬಗೆಯಲು ಬಾಯಾರುತ
ಹದ್ದಿನಂತೆ ಕಾಯುವ ಮಂದಿ
ಏಕಿಂಥ ವಿಪರ್ಯಾಸ?
ಬಾಳಿ ಬದುಕಬೇಕಾದ
ಜೀವನ ಗಾಳಿಪಟ, ಚಿಂದಿಯಾದ ಬದುಕಿನ ತಟ
ಒಂದೇ ಧರ್ಮ ;ಅದು ಮಾನವ ಧರ್ಮ
ಒಂದೇ ಜಾತಿ ;ಅದು ಮನುಷ್ಯ ಜಾತಿ
ಒಂದೇ ಕುಲ ; ಅದು ಮನುಕುಲ
ಜಗದ ಯಾವ ಮೂಲೆಯಲ್ಲಿದ್ದರೇನು
ಆಚಾರ-ವಿಚಾರ ಭೇದವಿದ್ದರೇನು?
ಮಾತು ನುಡಿ ಬೇರೆಯಾದರೇನು?
ಬಣ್ಣ ಎತ್ತರದ ಅಂತರವಿದ್ದರೇನು?ಏನಾದರೂ
ಮಾನವೀಯತೆಗೆ ಮೇರೆ ಹಾಕಿದವರು ಯಾರು?
ದೇಶ, ಪ್ರಾಂತ್ಯಗಳ ಎಲ್ಲೆ ಬರೆದವರು ಯಾರು?
ಮಾಯೆಯ ಬಗೆದರೆ ಎಲ್ಲವೂ ಶೂನ್ಯ
ಕಪ್ಪು ಚುಕ್ಕೆಯೊಳಡಗಿಹ ಸೃಷ್ಟಿಯ ಮರ್ಮ.
*****************
ತಾರತಮ್ಯ
ಜನ ಮಾನಸದಲ್ಲಿ
ಜೀವ ಜಂತುಗಳಲ್ಲಿ
ಸೂರ್ಯ-ಚಂದ್ರರಲ್ಲಿ
ಗ್ರಹ ಕಾಯಗಳಲ್ಲಿ
ರುಚಿಯಲ್ಲಿ ಬಣ್ಣದಲ್ಲಿ ರೂಪದಲ್ಲಿ
ಗಂಡು-ಹೆಣ್ಣಿನಲ್ಲಿ ದೇವರಿಟ್ಟ ತಾರತಮ್ಯ
ದೊಡ್ಡವರು ಮಕ್ಕಳಲ್ಲಿ
ಬೇರು ಗಂಟಿಗಳಲ್ಲಿ
ಖನಿಜ ಲವಣಗಳಲ್ಲಿ
ಪ್ರಾಣಿ-ಪಕ್ಷಿಗಳಲ್ಲಿ
ಪ್ರಕೃತಿಯೆ ವೈವಿಧ್ಯಮಯ
ನಾದ ಲಯದಲ್ಲಿ
ಗಾತ್ರ ಆಕೃತಿಗಳಲ್ಲಿ
ವರ್ಗ ಪ್ರಭೇದಗಳಲ್ಲಿ
ಪ್ರೀತಿ ವೈರಾಗ್ಯದಲ್ಲಿ
ಪ್ರಕೃತಿ ಎಲ್ಲೆಡೆ ನಾನಾ ಬಗೆಯ ವ್ಯತ್ಯಾಸ
ಸೋಲು ಗೆಲುವಿನಲ್ಲಿ
ಸುಖ-ದುಃಖಗಳಲ್ಲಿ
ಸ್ನೇಹ ಸಂಬಂಧಗಳಲ್ಲಿ
ಹಗಲು-ಇರುಳು ಎಂಬ ತಾರತಮ್ಯ
ಸೃಷ್ಟಿಯಲ್ಲಿ ಅಡಗಿಹುದು
ಅಗಾಧ ಪ್ರಬುದ್ಧ ವೈಶಿಷ್ಟ್ಯ