ಗಜಲ್

ಹಸಿರು ಸೀರೆ ಉಟ್ಟ ಬಸಿರ ಬಯಕೆಯಿದೆ ಹೇಗೆ ಹೇಳಲಿ ಒಡೆಯ
ಉಸಿರು ಉಸಿರಿನಲಿ ನಿನ್ನದೇ ಹೆಸರಿದೆ ಹೇಗೆ ಪೇಳಲಿ ಒಡೆಯ

ಕಣ್ಣ ಕಾಡಿಗೆಯ ಕನವರಿಕೆಗೆ ಕೊನೆಯೆಂಬುವುದಿಲ್ಲ ದೊರೆಯೆ
ಹಣೆಯ ಕುಂಕುಮ ಬೊಟ್ಟು ನಿನ್ನ ಧ್ಯಾನಿಸಿದೆ ಹೇಗೆ ಕೇಳಲಿ ಒಡೆಯ

ಕೈಗೆ ಹಚ್ಚಿದ ಮೆಹಂದಿಯಲಿ ನಿನ್ನ ಪ್ರೀತಿಯ ಎಳೆಗಳಿವೆ ಸಜನಾ
ನೀ ನೆನೆಪಾದಾಗ ಎದೆಯ ಮೇಲೆ ನವಿಲ ಕುಣಿತವಿದೆ ಹೇಗೆ ತಾಳಲಿ ಒಡೆಯ

ನನ್ನ ಕಣ್ಣಲ್ಲಿ ನಿನ್ನ ರೂಪು ಅಚ್ಚಾದ ಮೇಲೆ ನನಗೆ ಬೇರೇನೂ ಕಾಣುತ್ತಿಲ್ಲ
ಬದುಕ ಬಿರುಗಾಳಿಗೆ ತತ್ತರಿಸಿರುವೆ ನಿನ್ನ ಕೈ ಆಸರೆಯಿರದೆ ಹೇಗೆ ಏಳಲಿ ಒಡೆಯ

ಒಂದೇ ಒಂದು ಚಿಟಿಕೆ ಪ್ರೀತಿಗಾಗಿ ಅದೆಷ್ಟೋ ಬಾರಿ ಸತ್ತಿದ್ದಾಳೆ ಅರುಣಾ
ಉಡಿ ತುಂಬ ಸತ್ತ ಕನಸುಗಳ ಬೂದಿಯಿದೆ ಹೇಗೆ ಬಾಳಲಿ ಒಡೆಯ


         ಅರುಣಾ ನರೇಂದ್ರ

3 thoughts on “

  1. ತುಂಬ ಸೊಗಸಾದ ಗಜಲ್ ಮೇಡಮ್
    ಮತ್ತೆ ಮತ್ತೆ ಕಾಡುವ ಭಾವ

Leave a Reply

Back To Top