ಅಂಕಣ ಸಂಗಾತಿ

ನೆನಪಿನದೋಣಿಯಲಿ

ದಸರಾ

Mysore Dasara - Wikipedia

ಮೈಸೂರು ದಸರಾ 

ಎಷ್ಟೊಂದು ಸುಂದರಾ 

ಚೆಲ್ಲಿದೆ ನಗೆಯಾ ಪನ್ನೀರ 

ಎಲ್ಲೆಲ್ಲೂ ನಗೆಯಾ ಪನ್ನೀರ 

ಬಾಲ್ಯ ಎಂದರೆ ಹಬ್ಬಗಳ ಆಚರಣೆ ಮನದಲ್ಲಿ ಎಂದಿಗೂ ಹಸಿರು . ಅದರಲ್ಲೂ ಮೈಸೂರಿನಲ್ಲಿ ಹುಟ್ಟಿ ಬೆಳೆದ ನನಗೆ ದಸರಾ ಎಂದರೆ ಜೀವನದ ಒಂದು ಅವಿಭಾಜ್ಯ ಅಂಗದಂತೆ.   ದಸರೆಯನ್ನು ನೆನಪು ಮಾಡಿಕೊಳ್ಳದ ನೆನಪಿನ ದೋಣಿಯ ಪಯಣ ಅರ್ಥಹೀನ ಅನ್ನಿಸಿಬಿಡುತ್ತದೆ. ಹಾಗಾಗಿಯೇ ಇಂದಿನ ನೆನಪಿನ ದೋಣಿಯ ಯಾನವಿಡೀ ದಸರೆಯ ಸ್ಮರಣೆ.  

ನವರಾತ್ರಿ ದಸರಾ ಎಂದರೆ ಧಾರ್ಮಿಕ ಆಧ್ಯಾತ್ಮಿಕ ಸಾಂಸ್ಕೃತಿಕ ಸಂಭ್ರಮಗಳ ಸಂಗಮ.ಬಾಲ್ಯದಲ್ಲಿ ಆಧ್ಯಾತ್ಮಿಕ ಆಯಾಮದ ಬಗ್ಗೆ ಬಿಡಿ. ಅಂತಹದ್ದೇನೂ ಇಲ್ಲ . ಆದರೆ ಧಾರ್ಮಿಕ ಆಚರಣೆಗಳು ಹಾಗೂ ಸಾಂಸ್ಕೃತಿಕ ಸಂಭ್ರಮಗಳು! ಇಡೀ ಬಾಲ್ಯದ ಸೊಗಸನ್ನು ಇಮ್ಮಡಿಗೊಳಿಸಿದ ಶ್ರೀಮಂತವಾಗಿಸಿದ ಅನುಭವಗಳು ಅವು.

ಮೊದಲನೆಯ ಅರ್ಧವಾರ್ಷಿಕ ಪರೀಕ್ಷೆಗಳು ಮುಗಿದು ರಜೆ ಶುರುವಾಗಿ ಬಿಡುತ್ತಿತ್ತು. ಮೈಸೂರು ಅಂದಮೇಲೆ ಮಹಾಲಯ ಅಮಾವಾಸ್ಯೆಯಿಂದಲೇ ರಜೆ . ದಸರೆ ಎಂದರೆ ಮನೆಯೊಳಗಿನ ಸಂಭ್ರಮ ಹೊರಗಿನ ಸುತ್ತಾಡುವ ಸಂಭ್ರಮ  ಎರಡೂ. ಮೈಸೂರಿನ ನಿವಾಸಿಯಾದ ನನಗೆ ದಸರೆಯೆಂದರೆ ಆಗಮಿಸಿದ ನೆಂಟರಿಷ್ಟರ, ದಿನವೂ ಮಾಡುವ ಹಬ್ಬದಡಿಗೆಗಳ ಸಂಜೆಯ ಸಾಂಸ್ಕೃತಿಕ ಸಮಾರಂಭಗಳ ನೆನಪು ಸಾಲಾಗಿ ಬರುತ್ತದೆ. 

ಮೊದಲಿಗೆ ಗೊಂಬೆ ಕೂಡಿಸುವ ಸಂಭ್ರಮದ ಬಗ್ಗೆ ಹೇಳಿಬಿಡುವೆ. ನಮ್ಮ ಮನೆಯಲ್ಲಿ ಮೂಲಾನಕ್ಷತ್ರ ಸಪ್ತಮಿಯ ದಿನದಿಂದ ಗೊಂಬೆ ಕೂರಿಸುವ ಸಂಪ್ರದಾಯ. ಹಾಗಾಗಿ 

ಪಾಡ್ಯದ ದಿನದಿಂದಲೇ ರಾಗಿ ಮೊಳಕೆ ಹಾಕುವ ಕೆಲಸ .     ಅಟ್ಟದಲ್ಲಿದ್ದ ಹಸಿರು ಟ್ರಂಕ್ ಕೆಳಗಿಳಿದ ಕೂಡಲೇ ನಾವು ಮೂವರೂ ಅದರ ಸುತ್ತ. ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಒಂದೊಂದೇ ಗೊಂಬೆಗಳು ಈಚೆಗೆ ಬರುತ್ತಿದ್ದಂತೆ ಒಂದೊಂದು ರೀತಿಯ ಉದ್ಗಾರದ ಸ್ವಾಗತ. ದೇವರ ಮಣ್ಣಿನ ವಿಗ್ರಹಗಳು ಬಂದಾಗ ಸ್ವಲ್ಪ ಮೌನವೇ. ಆದರೆ ಶೆಟ್ಟ ಶೆಟ್ಟಿ ಗೊಂಬೆಗಳು ಬಂದವೆಂದರೆ  ಓ ಎಂಬ ಉದ್ಗಾರ. ವಿದೂಷಕ ಗೊಂಬೆಗಳು ಬಂದಾಗ ಹಾಹಾ

ಹೋ ಹೋ. ಕಿರುಚಬೇಡಿರೇ ಎಂಬ ಅಮ್ಮನ ಎಚ್ಚರಿಕೆಯ ಮಾತು ನಮ್ಮ ಅಬ್ಬರದ ಮಧ್ಯೆ ಉಡುಗಿಹೋಗುತ್ತಿತ್ತು.   ಇದು ಹೊಸದು ಅದು ಹೊಸದು ಅಂಥ ಹಣಕಿ ಹಾಕುವುದು. ಮುಟ್ಟಬೇಡಿ ಒಡೆಯಬೇಡಿ ಅಂಥ ಮಧ್ಯೆಮಧ್ಯೆ ತಾಕೀತು . ಇವುಗಳ ಮಧ್ಯೆ ಪ್ರತಿವರ್ಷವೂ ಅಮ್ಮ ಪ್ರತಿಯೊಂದು ಗೊಂಬೆಯನ್ನು ಅದು ಅಲ್ಲಿ ತಗೊಂಡಿದ್ದು ಇದು ಇಲ್ಲಿ  ತಗೊಂಡಿತ್ತು ಎನ್ನುವ 

ಪರಿಚಯದ ಪ್ರಸ್ತಾವನೆ .

ಹಳೆಯ ನೆಂಟರನ್ನು ಬರಮಾಡಿಕೊಂಡಂತೆ .ಈಗಿನ ಹಾಗೆ ಥೀಮ್ ಪ್ರಕಾರ ಜೋಡಿಸುವುದೇನೂ ಇರುತ್ತಿರಲಿಲ್ಲ .ಸ್ವಲ್ಪ ಮಟ್ಟಿನ ಬದಲಾವಣೆ ವರ್ಷದಿಂದ ವರ್ಷಕ್ಕೆ ಅಷ್ಟೇ. ಅತಿಶಯವಾಗಿ ಹೊಸ ಗೊಂಬೆಗಳು ಏನೂ ಸೇರುತ್ತಿರಲಿಲ್ಲ .ನನಗೆ ನೆನಪಿದ್ದಂತೆ ಬಳಪದ ಕಲ್ಲಿನ ದೇಗುಲದ ಗೋಪುರದ ಒಂದು ಮಾದರಿ ಇತ್ತು .ಮರಳು ತಂದು ಬೆಟ್ಟದ ರೀತಿ ಮಾಡಿ ಮೆಟ್ಟಿಲು ಕಲ್ಲುಗಳನ್ನು ಜೋಡಿಸಿ ತುದಿಯಲ್ಲಿ ದೇಗುಲದ ಮಾದರಿ ಇಟ್ಟರೆ ಅದೇ ಚಾಮುಂಡಿ ಬೆಟ್ಟ .ಟ್ರೇಗಳಲ್ಲಿ ಹಾಕಿದ ರಾಗಿ ಮೊಳಕೆ ಬಂದಿರುತ್ತಿದ್ದವು. ಅವುಗಳ ಮಧ್ಯೆ ಗಾಜಿನ ಬಿಲ್ಲೆ ಇಟ್ಟರೆ ಅದೇ ಮದ್ಯದ ಕೆರೆ ಕಟ್ಟೆಗಳು .ಆಗ ಬಿನಾಕಾ ಟೂತ್ಪೇಸ್ಟಿನ ಜೊತೆ ಪ್ಲಾಸ್ಟಿಕ್ಕಿನ ಸಣ್ಣ ಸಣ್ಣ ಪ್ರಾಣಿಯ ಆಕೃತಿಗಳನ್ನು ಕೊಡುತ್ತಿದ್ದರು. ಅವುಗಳನ್ನು ಮಧ್ಯೆ ಮಧ್ಯೆ ಇಡುತ್ತಿದ್ದೆವು..ಜೇಡದ ಮಣ್ಣಿನ ಗೊಂಬೆಗಿರುತ್ತಿದ್ದವು. ಅದರಲ್ಲಿ ಒಂದು ಶೆಟ್ಥರ ಗಂಡ ಹೆಂಡತಿ ಗೊಂಬೆ .ಅವುಗಳ ಮುಂದೆ ಪುಟ್ಟ ಪುಟ್ಟ ಪ್ಲಾಸ್ಟಿಕ್ ತಟ್ಟೆಯಲ್ಲಿ ಅಕ್ಕಿ ಬೇಳೆ ಎಲ್ಲ ತುಂಬಿ ಇಟ್ಟು ರಟ್ಟಿನ ಬೋರ್ಡ್ ತಗುಲಿ ಹಾಕಿ ಪ್ರಾವಿಷನ್ ಸ್ಟೋರ್ .ಬಳಪದ ಕಲ್ಲಿನ ಪ್ಲಾಸ್ಟಿಕ್ಕಿನ ಹಾಗೂ ಹಿತ್ತಾಳೆಯ ಅಡಿಗೆ ಪಾತ್ರೆಗಳ ಮಿನಿಯೇಚರ್ ಸೆಟ್ ಇದ್ದು ಅವುಗಳನ್ನು ಜೋಡಿಸುತ್ತಿದ್ದೆವು.ನಾವೇ ತಯಾರಿಸಿದ ಮಣಿಯಿಂದ ಮಾಡಿದ ಸಾಮಾನುಗಳೂ.

ಆಗ ಸಿಗುತ್ತಿದ್ದ ಟಿನ್ನಿನ ಡಬ್ಬಿಗಳನ್ನು ಜೋಡಿಸಿ ಅವುಗಳ ಮೇಲೆ  ಮಂಚದ ಹಲಿಗೆಗಳ ಹಂತಗಳನ್ನು ಮಾಡಿ ಬಿಳಿ ಪಂಚೆ ಹಾಸಿ ಗೊಂಬೆ ಜೋಡಿಸುತ್ತಿದ್ದು. ಮಧ್ಯದಲ್ಲಿ ಪಟ್ಟದ ಗೊಂಬೆಗಳು ಮತ್ತು ಕಳಶ .ಅಮ್ಮನ ಮನೆಯಲ್ಲಿ ಸಪ್ತಮಿ ಮೂಲಾ ನಕ್ಷತ್ರದಿಂದ ಬೊಂಬೆ ಕೂಡಿಸುವ ಪರಿಪಾಠ .ಅಯ್ಯೋ ಮೊದಲಿನಿಂದ ಕೂಡಿಸಬಾರದೇ ಅಂತ ಬೇಸರ .ಈಗಿನ ಹಾಗೆ ವರ್ಷವರ್ಷವೂ ಹೊಸ ಸೆಟ್ ತೆಗೆದುಕೊಳ್ಳುವ ಪರಿಪಾಠವೂ ಇರಲಿಲ್ಲ ಅಷ್ಟು ಹಣವೂ ಇರಲಿಲ್ಲ. ಇದ್ದುದರಲ್ಲೇ ಸಂತೋಷಪಡುವ ಬುದ್ದಿಯಂತೂ ಸಮೃದ್ಧಿಯಾಗಿತ್ತು.  ಮುಖ್ಯ ಆಡಂಬರ ವೈಭವ ತೋರಿಸಿಕೊಳ್ಳುವ ಬುದ್ಧಿ ಇರಲಿಲ್ಲ ಸಾಂಪ್ರದಾಯಿಕ ಧಾರ್ಮಿಕ ಆಚರಣೆ ಎಂಬುದು ಆಗಿನ ಅಭ್ಯಾಸ . 

Mangalore Today | Latest main news of mangalore, udupi - Page  -rsquo-Nammavaru-rsquo-Dasara-Bombe-Pradarshana-from-Oct-13

ಸಂಜೆಗೆ ಕುಂಕುಮಕ್ಕೆ ಕರೆದವರ ಮನೆಗೆಲ್ಲ ಗುಂಪು ಕಟ್ಟಿಕೊಂಡು ಹೋಗುವುದು .ಹಾಗೆ ನಮ್ಮ ಮನೆಗೆ ಬಂದಾಗ ನಾವು ಆತಿಥೇಯರು .ಎಲ್ಲರ ಮನೆಯ ಗೊಂಬೆ ಬಾಗಿನ ಹಾಕಿಸಿಕೊಳ್ಳಲು ಒಂದು ಡಬ್ಬಿ. ಪ್ರತಿಯೊಬ್ಬರ ಮನೆಯಲ್ಲೂ ಹಾಡು ನೃತ್ಯ ಏಕಪಾತ್ರ ಅಭಿನಯ ಶ್ಲೋಕ ಹೇಳುವುದು ಯಾವುದಾದರೂ ಒಂದು ಮಾಡಿದ ಮೇಲೇ ಅವರ ಮನೆಯಲ್ಲಿ ಬಾಗಿನ ಕೊಡುತ್ತಿದ್ದುದು. ಒಂದು ರೀತಿಯ “ಪ್ರತಿಭಾ ಕಾರಂಜಿ”. ನಾವು ಮೂವರೂ ಸತ್ಯು ಮತ್ತು ಅವಳ  ಮೂವರು ತಮ್ಮಂದಿರು ಎದುರುಮನೆಯ ಹರ್ಷ ಅವನ ಇಬ್ಬರು ತಮ್ಮಂದಿರು ಭಾರತಿ ಹಾಗೂ ಅವಳ ಮೂವರು ತಂಗಿಯರು ಜೊತೆಗೆ ಬಂದ ನೆಂಟರಿಷ್ಟರ ಮಕ್ಕಳು ಮೊದಲಾದಂತೆ 1ದೊಡ್ಡ ಪಟಾಲಮ್ಮೇ ಹೊರಡುತ್ತಿತ್ತು . ಈ ಕುಂಕುಮಕ್ಕೆ ಕರೆಯುವ ಪದ್ದತಿ ಇದು 1 ರೀತಿಯ ಬೈ ಡಿಫಾಲ್ಟ್ . 1ದಿನ ಕರೆದರೆ ಇಡೀ ನವರಾತ್ರಿಗೆ ಆಹ್ವಾನ ಅಂತ ಅರ್ಥ. ನಮ್ಮ ಮನೆಯ ಚರುಪುಗಳು ಮೊದಲೇ ಡಿಸೈಡೆಡ್ .ಸರಸ್ವತಿ ಹಬ್ಬದ ದಿನ ಎರೆಯಪ್ಪ, ಅಷ್ಟಮಿಯ ದಿನ ಆಂಬೊಡೆ ನವಮಿಯ ದಿನ ರವೆ ಉಂಡೆ ಹಾಗೂ ವಿಜಯದಶಮಿಗೆ ಕೊಬ್ಬರಿಮಿಠಾಯಿ ಅಥವಾ ಸೆವೆನ್ಕಪ್ .ಮೊದಲೇ ಮಾಡಿಟ್ಟುಕೊಂಡಿದ್ದರೆ ದಸರಾ ಜಂಬೂಸವಾರಿಯಿಂದ ಬಂದ ತಕ್ಷಣ ಸುಲಭ ಎಂದು.  ಇನ್ನೂ ಕೆಲವರು ಬಿಸ್ಕತ್ತು ಚಾಕಲೇಟು ಬಾಳೆಹಣ್ಣು ಕೊಡುತ್ತಿದ್ದುದೂ ಉಂಟು . ಸರಸ್ವತಿ ಹಬ್ಬದ ದಿನ ಎಲ್ಲ ಪುಸ್ತಕಗಳನ್ನು ಪೂಜೆಗಿಟ್ಟು ಬಿಡುತ್ತಿದ್ದೆವು. ನಾಲ್ಕು ದಿನ ಓದು ಅಂತ ಅನ್ನಬಾರದು ಹಾಗೆ. ಆಯುಧ ಪೂಜೆಯಲ್ಲಿ ಕತ್ತರಿ ಚಾಕು ಎಲ್ಲದಕ್ಕೂ ಪೂಜೆ. 

ದಿನಾಲೂ ಅರಮನೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಭೇಟಿ . ಆಚೆ ಹುಲ್ಲ ಮೇಲೆ ಕುಳಿತು ದೊಡ್ಡ ತೆರೆಯಲ್ಲಿ ಒಳಗಿನ ಕಲಾಪಗಳನ್ನು ವೀಕ್ಷಿಸುವುದು ಜೊತೆಗೆ ಕುರುಕುಲು ಬಿಸಿ ಬಿಸಿ ಕಡಲೆ ಕಾಯಿ ಚುರುಮುರಿ ಒಗ್ಗಗರಣೆ ಪುರಿಗಳು ದಸರೆಯ ಗೊಂಬೆ ಬಾಗಿನದ ಚರುಪುಗಳು. ಅಬ್ಬಾ ಎಂಥ ಸವಿ ಗಳಿಗೆಗಳು. ಒಂದು ದಿನ ಫಲಪುಷ್ಪ ಪ್ರದರ್ಶನದ ಭೇಟಿ.ಅಲ್ಲಿ ಸಮೋಸ ತುಂಬಾ ಚೆನ್ನಾಗಿರ್ತಿತ್ತು .ಈಗಲೂ ನೆನೆಸಿಕೊಂಡರೆ ಬಾಯಲ್ಲಿ ನೀರು. ಎಲ್ಲದಕ್ಕಿಂತ ಹೆಚ್ಚು ಕಾತರದಿಂದ ಕಾಯ್ತಾ ಇದ್ದಿದ್ದು ದಸರಾ ಜಂಬೂ ಸವಾರಿಗೆ. ಮೆರವಣಿಗೆ ನೋಡಲು ಫಲಾಮೃತ ಮಹಡಿ ಮೇಲೆ ಜಾಗ ಕಾದಿರಿಸಿಕೊಂಡು ರಾಶಿ ತಿಂಡಿಗಳನ್ನು ಹೊತ್ತು ಅಕ್ಕಪಕ್ಕದ ಮನೆಯವರ ಜೊತೆ ನಮ್ಮ ತಂಡ ಹೊರಡುತ್ತಿತ್ತು. ಊರಿನಿಂದ ತಂದ ಬಂದ ನೆಂಟರು ತಂದ ತಿಂಡಿ ಉಳಿದ ಚರುಪು ಗಳು ಹಾಗೂ ಇದಕ್ಕಾಗಿಯೇ ವಿಶೇಷವಾಗಿ ಮಾಡಿಕೊಂಡಅವಲಕ್ಕಿ ಪುರಿ ಒಗ್ಗರಣೆ ಕಡಲೆಪುರಿ ಒಗ್ಗರಣೆಗಳು. ಎಲ್ಲಾ ತಿಂಡಿಗಳು ಬರುವಷ್ಟರಲ್ಲಿ ಖಾಲಿ . ಅಕ್ಕಪಕ್ಕದ ಸ್ನೇಹಿತರು ನಾಲ್ಕೈದು ಮನೆಯವರು ಕೂಡಿ   ಸಿಟಿ ಬಸ್ ನಲ್ಲಿ ಅಲ್ಲಿಗೆ ತಲುಪಿ ಜಾಗ ಹಿಡಿದುಕೊಂಡು ಪಟ್ಟಾಂಗ ಹೊಡೆಯುತ್ತ ಮೆರವಣಿಗೆ ಬರುವ ತನಕ ಸಮಯ ದೂಡಿ ನಂತರ ಕೃಷ್ಣರಾಜ ಸರ್ಕಲ್ ಸುತ್ತುತ್ತಿದ್ದ ಆಕರ್ಷಕ ದೃಶ್ಯ ಕಣ್ಣು ತುಂಬಿಕೊಳ್ಳುತ್ತಿದ್ದವು ಮೊದಲು ಆ ಅಜಾನುಬಾಹು ಗೊಂಬೆಗಳ ಕುಣಿತ ಕುದುರೆ ವೇಷ ನಂದಿಕೋಲು ಕೋಲಾಟ ಡೊಳ್ಳು ಮದ್ದಳೆಯ ಎಷ್ಟು ಹೊತ್ತು ಬಾರಿಸುತ್ತಾ ಕುಣಿಯುತ್ತಿದ್ದರು. ವಿವಿಧ ರೀತಿಯ ಸ್ತಬ್ಧಚಿತ್ರಗಳನ್ನು ನೋಡಿ ನಮ್ಮ ವಿಮರ್ಶೆ ಮೌಲ್ಯಮಾಪನ .ನಾವು ಹೇಳಿದ ತರಹವೇ ಮಾರನೆಯ ದಿನ ಬಹುಮಾನ ಪ್ರಕಟವಾಗಿದ್ದರಂತೂ ನಮ್ಮನ್ನು ಹಿಡಿಯುವವರೇ ಇರಲಿಲ್ಲ. ಕಡೆಯಲ್ಲಿ ತಾಯಿ ಚಾಮುಂಡಿಯ ಬಂಗಾರದ ಪಲ್ಲಕ್ಕಿ ಪಲ್ಲಕ್ಕಿ ದರ್ಶನ. ಮಧ್ಯೆ ಮಧ್ಯೆ ತಿಂಡಿ ತೀರ್ಥ ಸೇವನೆ ಅಂತೂ ಸಾಂಗವಾಗಿ ನಡೆದೇ ಇರುತ್ತಿತ್ತು. ವಾಪಸ್ಸು ಬರುವಾಗ ಮಾತ್ರ ಫಲಾಮೃತ ಐಸ್ ಕ್ರೀಂ ಕೊಡಿಸುವ ಭರವಸೆ .ಪ್ರತಿ ವರ್ಷ ಮೆರವಣಿಗೆಗೂ ಮಳೆಗೂ ಏನೋ ನಂಟು ಕೆಲವೊಮ್ಮೆ ಮಧ್ಯದಲ್ಲೇ ಧಾರಾಕಾರ ಮಳೆ ಸುರಿದು ತೊಯ್ದು ಮುದ್ದೆಯಾದರೂ ಚೆಲ್ಲಾಪಿಲ್ಲಿಯಾಗದ ಕದಲದ ಜನಸ್ತೋಮ .ಮಳೆಯಲ್ಲಿ ಐಸ್ಕ್ರೀಮ್ ತಿನ್ನುವ ಅಭ್ಯಾಸ ಶುರುವಾದದ್ದು ಆಗಲೇ ಅನ್ನಿಸುತ್ತೆ .ಇನ್ನು ಮನೆಗೆ ನೆಂಟರು ಬಂದಿದ್ದಂತೂ ಇನ್ನೂ ಮಜಾ .ಅಮ್ಮ ಪ್ರತಿ ವಿಜಯದಶಮಿಯಂದು ಜಾಮೂನ್ ಬಿಸಿ ಬೇಳೆ ಬಾತ್ ಮಾಡುತ್ತಿದ್ದರು. ಹನ್ನೊಂದು ಮೂವತ್ತಕ್ಕೆ ಊಟ ಮುಗಿಸಿ ಹನ್ನೆರಡು ಮೂವತ್ತಕ್ಕೆ ಫಲಾಮೃತ ಬಳಿ ಹಾಜರು

ಅಲ್ಲಿಂದ ತುಂಬಾ ಚಂದ ಕಾಣುತ್ತಿತ್ತು ಮೆರವಣಿಗೆ. ಸುಮಾರು ವರ್ಷಗಳವರೆಗೂ ಇದೇ ಪರಿಪಾಠ ಇತ್ತು .ಈ ಪರಿಪಾಠ ಹೆಚ್ಚುಕಡಿಮೆ  ದೂರದರ್ಶನದಲ್ಲಿ ಮೆರವಣಿಗೆ ತೋರಿಸುವ ತನಕವೂ ನಡೆಯಿತು ನಂತರ ಮನೆಯಲ್ಲೇ ಕುಳಿತು ದೂರದರ್ಶನದಲ್ಲಿ ನೋಡುವ ಅಭ್ಯಾಸ ಆರಂಭವಾಯಿತು. ಈಗ ಗೋಲ್ಡನ್ ಪಾಸ್ ಇದ್ದರೂ ಹೋಗಲು ಮನಸ್ಸಿಲ್ಲ. ಸಣ್ಣ ಸಣ್ಣ ಸಂತೋಷಗಳಿಗೆ ಉಲ್ಲಾಸ ಪಡುವುದನ್ನು ಕಳೆದುಕೊಂಡು ಬಿಟ್ಟಿದ್ದೇವೆ ಅನ್ಸುತ್ತೆ .

ಇನ್ನು ಮೈಸೂರಿನ ದಸರಾ ವಸ್ತು ಪ್ರದರ್ಶನ ಅದು ವಿಜಯದಶಮಿ ಕಳೆದ ಮೇಲಿನ ಭೇಟಿ ಕೊಡುವ ವಾಡಿಕೆ ಏಕೆಂದರೆ ಆ ವೇಳೆಗೆ ಎಲ್ಲಾ ಅಂಗಡಿಗಳು ಬಂದಿರುತ್ತಿದ್ದವು.  ಪ್ರತಿವರ್ಷ 2ಅಥವಾ 3ಬಾರಿ ಭೇಟಿ . ಶುರುವಲ್ಲೇ ಸಿಗುವ ಕಾಟನ್ ಕ್ಯಾಂಡಿ ಇಂದ ಹಿಡಿದು ಕಡೆಯಲ್ಲಿನ ಮಸಾಲೆ ದೋಸೆಯ ತನಕ ಸಿಕ್ಕಿದ್ದನ್ನೆಲ್ಲಾ ಮೆಲ್ಲುವ ಪರಿಪಾಠ .ದೊಡ್ಡ ದೊಡ್ಡ ಹಪ್ಪಳ ಚುರುಮುರಿ ಮೆಣಸಿನಕಾಯಿ ಬಜ್ಜಿ ಐಸ್ಕ್ರೀಮ್ ಒಂದೇ ಎರಡೇ ಅಷ್ಟೆಲ್ಲ ತಿನ್ನುತ್ತಿದ್ದುದು ನಾವೇನಾ ಅಂತ ಈಗ ಯೋಚಿಸಿದರೆ ಆಶ್ಚರ್ಯವಾಗುತ್ತೆ.   ಸಂಜೆ 4ಗಂಟೆಗೆ ಒಳಗೆ ಪ್ರವೇಶವಾದರೆ 8 ಎಂಟೂವರೆ ತನಕ ಸುತ್ತು ಸುತ್ತಿ ನಂತರ ಮನೆಗೆ ವಾಪಸ್ . ಆಗ ಈಗಿನಷ್ಟು ಆಟಗಳೇ ಇರಲಿಲ್ಲ. ಜಯಂಟ್ ವೀಲ್ ಮಾತ್ರ . ಅದರಲ್ಲೂ ನಾವು ಕುಳಿತುಕೊಳ್ಳ ದಿದ್ದುದರಿಂದ ಸೇಫ್ . ಆದರೆ ಸರಕಾರಿ ವಿಭಾಗಗಳು ಹಾಕಿದ ಎಲ್ಲ ಸ್ಟಾಲ್ ಗಳನ್ನು ಪಾರಂಗತವಾಗಿ ನೋಡುತ್ತಿದ್ದೆವು ಅದರಲ್ಲಿ ಕಾಡು ಅರಣ್ಯ ಇಲಾಖೆಯ ಕೊಡುಗೆ ತುಂಬಾ ವಿಶೇಷ ಆಕರ್ಷಣೆ. ಗೌರಿ ಹಬ್ಬಕ್ಕೆ ಕೊಟ್ಟ ದುಡ್ಡು ಮತ್ತು ವರ್ಷದ ಇಡೀ ಉಳಿತಾಯಗಳು ಖರ್ಚಾಗುತ್ತಿದ್ದು ವಸ್ತುಪ್ರದರ್ಶನದಲ್ಲಿ . ಬಿಂದಿ ಕ್ಲಿಪ್ಪು ಬಳೆ ಸರ ಒಂದೇ ಎರಡೇ ಈ ಹಣದಲ್ಲಿ ಯಾವುದು ತೆಗೆದುಕೊಳ್ಳಬೇಕು ಎಂದು ಪ್ರಾಮುಖ್ಯತೆ ಮತ್ತು ಮೂವರು ಬೇರೆ ಬೇರೆಯದನ್ನು ತೆಗೆದುಕೊಂಡು ವಿನಿಮಯ ಮಾಡಿಕೊಳ್ಳುವ ಪದ್ಧತಿ .  ಈಗ ವಸ್ತುಪ್ರದರ್ಶನಕ್ಕೆ ಭೇಟಿ ಕೊಡಲೇ ಬೇಸರ .ಇನ್ನೂ ಹೋದರೂ ಸುಮ್ಮನೆ 1 ಸುತ್ತು ಹಾಕಿ ಬರುವುದೇ ವಿನಃ ಸರಕಾರಿ ವಿಭಾಗಗಳ ಕಡೆ ಹೋಗುವುದೇ ಇಲ್ಲ ಏಕೆ ಈ ನಿರಾಸಕ್ತಿ ಅಂತ ಮಾತ್ರ ಗೊತ್ತಿಲ್ಲ.

ಇನ್ನೂ ಮನೆಗೆ ಬಂದ ನೆಂಟರ ಜೊತೆ ನಂಜನಗೂಡು ಶ್ರೀರಂಗಪಟ್ಟಣ ಚಾಮುಂಡಿಬೆಟ್ಟ ಭೇಟಿಗಳು ದಸರೆಯ ಸಮಯದಲ್ಲಿ ಕಡ್ಡಾಯ ನಡೆಯುತ್ತಿದ್ದವು

ಅಂತೂ ಕಾಲ ಕಳೆಯಲು ದೈನಂದಿನ ಏಕಾ ಗಿ ಏಕತಾನತೆಯಿಂದ ಪಾರಾಗಲು ಇವು ಆಗ ಇದ್ದ ಮಾರ್ಗಗಳು .ಅದನ್ನು ಪೂರ್ಣಪ್ರಮಾಣದಲ್ಲಿ ಅನುಭವಿಸಿ ಖುಷಿಯ ಸ್ಮರಣೆಗಳನ್ನು ಮೆಲುಕಬುತ್ತಿ ಗಳನ್ನಾಗಿಸಿಕೊಂಡು ಈಗ ಸವಿಯುವುದು.

ಪ್ರತಿ ದಿನ ದೇವಿ ಗೀತೆಗಳನ್ನು ಕೀರ್ತನೆಗಳನ್ನು ಹಾಡುವುದು ಲಲಿತಾ ಸಹಸ್ರನಾಮ ಪಠಣೆ ಮಹಿಷಾಸುರ ಮರ್ದಿನಿ ಸ್ತೋತ್ರ ಇವು ಆಗಿನ ಆಧ್ಯಾತ್ಮಿಕ ಆಚರಣೆಗಳು ಅನ್ನಬಹುದೇನೋ . 

ಮದುವೆಯ ನಂತರ ಅತ್ತೆ ಮನೆಯಲ್ಲಿ ಗೊಂಬೆ ಕೂಡಿಸುವ ಪದ್ಧತಿ ಇರದ ಕಾರಣ ಅಮ್ಮನ ಮನೆಯಲ್ಲಿ ಗೊಂಬೆ ಕೂರಿಸುವ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದು. ಅಮ್ಮನೂ ಹೋದ ಮೇಲೆ ಈಗ ಗೊಂಬೆ ಕೂಡಿಸುವ ಪದ್ಧತಿಯೇ ಇಲ್ಲ .ಆದರೆ ಅಷ್ಟರಲ್ಲಿ ದೇವರು ದಿಂಡಿರು ಬಗ್ಗೆ ಹೆಚ್ಚಿನ ಆಸಕ್ತಿ ಬಂದಿರುವುದರಿಂದ ದಸರೆ ಎಂದರೆ ಲಲಿತಾ ಸಹಸ್ರನಾಮ ಸೌಂದರ್ಯಲಹರಿ ದೇವಿ ಮಹಾತ್ಮೆ ಗಳ ಪಠಣೆ ಕುಂಕುಮಾರ್ಚನೆ ಹೀಗೆ ಆಧ್ಯಾತ್ಮಿಕ ಸಡಗರ ತುಂಬಿದೆ .ಅದರಲ್ಲೇ ಜೀವಕ್ಕೂ ನೆಮ್ಮದಿ ಸಿಗುತ್ತಿದೆ.

ಆದರೂ ಬಾಳಿನ ವಿವಿಧ ಹಂತಗಳಲ್ಲಿ ದಸರೆಯ ವಿವಿಧ ಪ್ರಭಾವ ವರ್ಷವರ್ಷವೂ ದಸರೆಯ ಆಗಮನಕ್ಕೆ ಕಾತುರ ತಂದಿದೆ ತರುತ್ತಿದೆ ಮುಂದೆಯೂ ತರುತ್ತಲೇ ಇರುತ್ತದೆ.

ಹಬ್ಬದ ಈ ಸ್ಮರಣೆಗಳ ಸಮಯದಲ್ಲಿ ಡಿವಿಜಿಯವರ ಈ ಕಗ್ಗ ನೆನಪು ಬರುತ್ತದೆ 

ಕ್ಷಣವದೊಂದೆ ಅನಂತಕಾಲ ತಾನಾಗುವುದು 

ಅನುಭವಕೆ ಸತ್ಯ ಶಿವ ಸುಂದರಗಳ ಮರೆ ಮನ ತುಂಬು ಕಾಶಿಯಾಗಿ ನೆನಪ ಮೃತವಾಗುವುದು 

ಕ್ಷಣಗಳಕ್ಷಯ ಕಾಣೋ_ ಮಂಕುತಿಮ್ಮ

ನಿಜ ಹಿಂದಿನ ಘಟನೆಗಳು ನಾಳಿನ ನೆನಪುಗಳ  ಅವು ಅಮರ ಮಧುರ ವಾಗಿ ಮನದಲ್ಲಿ ಉಳಿಯುವುದು ಸಣ್ಣ ಸಣ್ಣ ಖುಷಿಗಳನ್ನು ನಮ್ಮದಾಗಿಸಿ ಮಕ್ಕಳಂತೆ ನಲಿದಾಗ ಮಾತ್ರ ಬರುಬರುತ್ತಾ ಮನ ಈ ಮಗು ತನವನ್ನು ಕಳೆದುಕೊಳ್ಳುವುದು ಈಗಿನ ದುರಂತ . ಅಲ್ಲದೆ ಎಲ್ಲವೂ ದೊರೆಯುವ ಕಾಲದಲ್ಲಿ ಯಾವುದನ್ನೂ ಬಯಸೀ  ಬಯಸೀ ಪಡೆಯುವ ಖುಷಿ ಇಲ್ಲದಾಗ ಸಿಗುವ ವಸ್ತುಗಳ ಅನುಭವಗಳ ಮಧುರತೆಯೂ ಕಡಿಮೆಯಾಗಿ ಬೆಲೆ ಇಲ್ಲದಂತಾಗುತ್ತಿದೆಯೇನೋ? 

ಏಕೋ ಬರೆಯುತ್ತಿದ್ದರೆ ಮುಗಿಯುತ್ತಲೇ ಇಲ್ಲ. ಬೋರು ಹೊಡೆಸಿದರೆ ಕ್ಷಮೆಯಿರಲಿ. ನೆನಪುಗಳ ಮಾತು ಮಧುರ ಅಲ್ಲವೇ ?


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು
.

One thought on “

  1. ಪ್ರಕಟಿಸಿದ್ದಕ್ಕೆ ಧನ್ಯವಾದಗಳು .

    ಸುಜಾತಾ ರವೀಶ್

Leave a Reply

Back To Top