ಲೇಖನ

ಓಡುತ್ತಿರುವ ಜೀವನಕ್ಕೆ

ಜಯಶ್ರೀ.ಜೆ. ಅಬ್ಬಿಗೇರಿ

Peaceful world by Peace Simon | Peace poster, Peace drawing, Peace art

ಇಂದು ನಾವು ನಡೆಸುತ್ತಿರುವ ಜೀವನದ ಕ್ರಮದ ಕುರಿತು ಕೊಂಚ ಯೋಚಿಸಿದರೆ ಭಯ ಹುಟ್ಟುತ್ತದೆ. ಹಾಗೆ ನೋಡಿದರೆ ಹಾವು ಏಣಿಯಾಟದ ಚರಿತ್ರೆ ನಮ್ಮ ಹಿಂದಿದೆ. ಹೀಗಿದ್ದಾಗ್ಯೂ ದೈವಸೃಷ್ಟಿಯಲ್ಲಿ ನಾವೇ ಶ್ರೇಷ್ಠವೆಂದು ಕೊಚ್ಚಿಕೊಳ್ಳುತ್ತೇವೆ. ನಮ್ಮ ಬುದ್ಧಿವಂತಿಕೆಗೆ ಶಹಬ್ಬಾಸಗಿರಿ ಕೊಟ್ಟುಕೊಳ್ಳುತ್ತೇವೆ. ಎಲ್ಲ ಕೆಲಸಗಳಿಗೂ ಯಂತ್ರಗಳನ್ನು ಕಂಡು ಹಿಡಿದು ಯಂತ್ರ ನಾಗರಿಕತೆಯಲ್ಲಿ ಬದುಕುತ್ತಿದ್ದೇವೆ. ಆಧುನಿಕ ಜೀವನಶೈಲಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಗರ ಕೇಂದ್ರೀಕೃತ ಬದುಕಿಗೆ ಆಕರ್ಷಿತರಾಗಿದ್ದೇವೆ. ದೋಚುವ ಉಪಭೋಗಿಸುವ ಕೊಳ್ಳುಬಾಕ ಸಂಸ್ಕೃತಿಯನ್ನು ಬಾಚಿ ತಬ್ಬಿಕೊಂಡಿದ್ದೇವೆ. ಭೂಮಿಯ ಹೊಟ್ಟೆ ಬಗೆದು ಗಣಿಗಾರಿಕೆಗೆ ಇಳಿದಿದ್ದೇವೆ. ಲಾಭಕೋರತನ ಪೀಡಿತರಾಗಿದ್ದೇವೆ. ಆರೋಗ್ಯ ರಕ್ಷಣೆಯನ್ನು ಲಾಭದಾಯಕ ಉದ್ಯಮವಾಗಿಸಿದ್ದೇವೆ. ಕೇಡುಗಳ ಕಸವು ಬೃಹದಾಕಾರವಾಗಿ ಬೆಳೆದುಬಿಟ್ಟಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ  ಬದುಕು ಲಾಭದಾಸೆಗೆ ಬಿದ್ದ ಧನದಾಹಿಗಳ ಕೈಗೊಂಬೆಯಾಗುತ್ತಿದೆ. ಕೊಳ್ಳುಬಾಕ ಸಂಸ್ಕೃತಿಯು ಸುಖ ತಂದು ಕೊಡುವುದೆಂದು ಭ್ರಮಿಸಿದ್ದೇವೆ. ಆದರೆ ಅದು ವಾಸ್ತವದಲ್ಲಿ ಸಾವನ್ನು ಎದುರಿಗೆ ತಂದು ನಿಲ್ಲಿಸಿದೆ. ಇತಿಹಾಸದ ಪುಟದಲ್ಲಿ ಅಚ್ಚಾದ ದುರಂತಗಳ ಹಿಂದೆ ಸತ್ಯದ ಸ್ವರೂಪವನ್ನು ಅರಿಯಲಾಗದೇ ಹೋದ ಪ್ರಸಂಗಗಳು ಕಣ್ಣಿಗೆ ರಾಚುತ್ತವೆ. ಮಾನವ ಮತ್ತು ಪ್ರಕೃತಿಯ ನಡುವೆ ಒಂದು ಅವಿನಾಭಾವ ಸಂಬAಧವಿದೆ. ಆ ಸಂಬAಧದ ಕೊಂಡಿಯನ್ನು ಕಾಪಾಡಿಕೊಳ್ಳಲೇಬೇಕು. ಇಲ್ಲದಿದ್ದರೆ ಪ್ರಳಯದಂಥ ಅನಾಹುತ ಖಚಿತ. ಪ್ರಳಯವೆಂಬುದು ಒಂದೇ ಸಲ ಸಂಭವಿಸುವ ವಿದ್ಯಮಾನವಲ್ಲ. ಅದು ನಮ್ಮ ದಾಷ್ಟö್ರ್ಯತನದಿಂದ ಪ್ರತಿದಿನ ಪ್ರತಿಕ್ಷಣ ಆವರಿಸಿಕೊಳ್ಳುತ್ತಿದೆ ಎಂಬುದನ್ನು ಅರಿತು ನಡೆಯಬೇಕಿದೆ.
ಬೆಳೆ ಭೂಮಿಯೊಳಗೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು ಎಚ್ಚರಲೀಯದು
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ ಲಿಂಗತAದೆ
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ.
           
       ಜ್ಞಾನವನ್ನು ಗಳಿಸಿದ್ದೇನೆಂಬ ಅಹಮಿಕೆಯನ್ನು ತಲೆಗೇರಿಸಿಕೊಂಡಿದ್ದು ಮನಸ್ಸಿನಲ್ಲಿ ಕಸವನ್ನು ಹುಟ್ಟಿಸಿದೆ. ಈ ಕಸ ಬುದ್ಧಿಯನ್ನು ಆವರಿಸಿದೆ. ತಿಳುವಳಿಕೆಯನ್ನು ಎಚ್ಚರತಪ್ಪಿಸುತ್ತಿದೆ. ಅರಿವಿನ ಎಚ್ಚರಕ್ಕೆ ಅಡ್ಡಿಯಾಗುತ್ತಿರುವ ಕಸವನ್ನು ಕಿತ್ತೆಸೆಯದಿದ್ದರೆ ಸುಳಿದೆಗೆದು ಬೆಳೆಯುವ ಚೈತನ್ಯ ಬಾರದು. ಮನದೊಳಗಿನ ಕಸವನ್ನು ಶುದ್ಧಗೊಳಿಸದಿದ್ದರೆ ಸಾಮಾಜಿಕ ಸ್ವಾಸ್ಥö್ಯವನ್ನು ಕಾಪಾಡಲು ಸಾಧ್ಯವಿಲ್ಲವೆಂಬ ಎಚ್ಚರಿಕೆಯ ಸಂದೇಶ ಬಸವಣ್ಣನವರ ಈ ವಚನದಲ್ಲಿದೆ.
‘ಅನ್ನವನು ಉಣ್ಣುವಾಗ ಕೇಳ್ ಅದು ಬೇಯಿಸಿದ ನೀರ್
ನಿಮ್ಮ ದುಡಿಮೆಯೇ ಪರರ ಕಣ್ಣೀರ್’
  ಎಂದಿದ್ದಾರೆ ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿಯವರು. ಅವರ ಮಾತು ನಿಜಕ್ಕೂ ವಿಚಾರಣೀಯವಾದುದು. ಸತ್ಯ ಮತ್ತು ಧರ್ಮ ಮಾರ್ಗದಲ್ಲಿ ದುಡಿಯಬೇಕು. ಅನ್ಯಾಯದಿಂದ ಗಳಿಸಿದ್ದು ಎಂದಿಗೂ ಮನಸ್ಸಿಗೆ ಸಂತೋಷ ನೀಡದು. ಧರ್ಮದಿಂದ ದುಡಿದಿದ್ದನ್ನು ನಿಷ್ಕಲ್ಮಷ ಮನಸ್ಸಿನಿಂದ ಒಂದು ಹುಲ್ಲು ಕಡ್ಡಿ ಅರ್ಪಿಸಿದರೂ ಶ್ರೇಷ್ಠ. ಮತ್ತೊಬ್ಬರಿಗೆ ಮೋಸವೆಸಗದೇ ದುಡಿದ ಹಣ, ತಾತ್ವಿಕತೆಯಿಂದ ಸದ್ವಿಚಾರದಿಂದ ಗಳಿಸಿದ ಹಣ ಪವಿತ್ರವಾದುದು. ಅದು ದೈವಕ್ಕೆ ಸಲ್ಲುವಂಥದ್ದು. ಅಂಥ ಹಣವನ್ನು ದಾನ ಧರ್ಮ ಮಾಡುವುದರಿಂದ ಸತ್ಪಾತ್ರರಿಗೆ ಸಲ್ಲುತ್ತದೆ. ಇಲ್ಲವಾದರೆ ಅಪಪಾತ್ರ ದಾನವಾಗುತ್ತದೆ. ಅಹಮಿಕೆಯಿಂದ ಮಾಡಿದ ಕಾರ್ಯ ಪುಣ್ಯವಾಗುವುದಿಲ್ಲ. ಓಡುತ್ತಿರುವ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟುತ್ತೇವೆ. ಆದರೆ ಪಾಪ ಪುಣ್ಯದ ಅರಿವಿಲ್ಲದಂತೆ ಓಡುತ್ತಿರುವ ಜೀವನಕ್ಕೆ ಯಾವ ನೆಲೆಯಲ್ಲಿ ನಿಲ್ಲಿಸಿ ಅರಿವು ಮೂಡಿಸುವುದು? ಎಂಬ ಪ್ರಶ್ನೆ ಮೂಡುತ್ತದೆ. ಮನದೊಳಗಿನ ಕೇಡುಗಳೇ ಇದಕ್ಕೆಲ್ಲ ಕಾರಣವೆಂಬ ಉತ್ತರವೂ ಸಿಗುತ್ತದೆ. ಕೊನೆಯಿಲ್ಲದ ದಾಹಕ್ಕೆ ಕೊನೆ ಹಾಡದಿದ್ದರೆ ಕೇಡು ಖಚಿತ. ಅರಿವು ಜ್ಞಾನ ಕೌಶಲ್ಯಗಳ ಮೂಲಕ ಸತ್ಯ ಧರ್ಮ ಅಹಿಂಸೆಯ ನೀತಿಗೆ ಮರಳುವುದೊಂದೇ ಇದಕ್ಕೆ ದಾರಿ.
=======



Leave a Reply

Back To Top