ಪುಸ್ತಕ ಸಂಗಾತಿ

ಕಾವೇರಿತೀರದಪಯಣ

ಪುಸ್ತಕವೊಂದು ಓದಲು ಮಡಿಲಿಗೆ ಬಿದ್ದಾಗ ಅದು ಕಾವೇರಿಯದೆಂದು ತಿಳಿದು ಕಣ್ಣರಳಿತು. ಇದೊಂದು ಅನುವಾದ ಕೃತಿಯೆಂಬುದು ಮತ್ತಷ್ಟು ಖುಷಿಕೊಟ್ಟಿತು. ಮೂಲ ಮಲಯಾಳಂ ಆಗಿದ್ದು , ಮಲಯಾಳಂ ಸಾಹಿತಿಯೊಬ್ಬರೂ ಕಾವೇರಿಯ ಜತೆ ಹೆಜ್ಜೆಯಿಡುತ್ತಲೇ ಕಾವೇರಿ ತೀರದ ಇತಿಹಾಸದ ಅನಾವರಣ ಮಾಡಿದ್ದಾರೆ. ಕನ್ನಡ ಮಣ್ಣಲ್ಲೇ ಹುಟ್ಟಿ, ಕಾವೇರಿಯ ಬಗಲಲ್ಲೇ ಉಸಿರಾಡಿ  ಈ ಕೃತಿಯನ್ನು ಓದುವ ಮೂಲಕವಾದರೂ  ನಾನೂ ಕಾವೇರಿಯೊಡನೆ  ಪ್ರಯಾಣ ಬೆಳೆಸಿದೆ.

ಕೊಡಗಿನ ತಲಕಾವೇರಿಯಿಂದ ಹೊರಟ ಜೀವನದಿ ಪೂಂಪುಹಾರ್ ತಲುಪುವವರೆಗೂ ಅದೆಷ್ಟು ರೋಚಕ ಕಥೆಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟಿಲ್ಲ! ನದಿಗಳೆಂದೂ ಸಂಸ್ಕೃತಿಯ ತೊಟ್ಟಿಲೇ ತಾನೇ? ರಾಜ ಮನೆತನಗಳು,  ಆಗಿನ ಜೀವನರೀತಿ , ಸಂಭ್ರಮ, ಸಂಕಟ ಎಲ್ಲವನ್ನೂ ಹೃದ್ಯವಾಗಿ ಮತ್ತು ಶಕ್ತವಾಗಿ  ಕಾವೇರಿ ತೀರದ ಪಯಣ ಉಣಬಡಿಸಿದೆ.

ಅದೆಷ್ಟೋ ಇತಿಹಾಸದ ಪುಟಗಳನ್ನು  ಸಾವಾಧಾನವಾಗಿ  ತಿರುವಿ ಕಲೆಹಾಕುತ್ತಲೇ  ಮೌಲ್ಯಾಧಾರಗಳ  ಕಂತೆಯನ್ನು ನಮ್ಮ ಮುಂದೆ ಸುರಿದಿದ್ದಾರೆ. ಕಾವೇರಿ  ನದಿಯ ಉದ್ಭವ ತಾಣದಿಂದ ಹಿಡಿದು ಸಮುದ್ರ ಸೇರುವವರೆಗಿನ ಕಾವೇರಿಯ  ವರ್ಣನೆ ನಿಜಕ್ಕೂ ತಲೆದೂಗುವಂತೆ ಮಾಡುತ್ತದಾದರೂ ಇಲ್ಲಿ ನದಿ ಹರಿದ  ಆಸುಪಾಸಿನ ತಾಣಗಳ  ಇತಿಹಾಸ ಮತ್ತು ವರ್ತಮಾನದ ವಿಶಿಷ್ಟ ಸಂಗತಿಗಳ ಜಗತ್ತನ್ನೇ ನಮ್ಮ ಮುಂದೆ ತೆರೆದಿಟ್ಟಿದ್ದಾರೆ.

ಕಾವೇರಮ್ಮನ ಸನ್ನಿದಿಯನ್ನೇ ಉಸಿರಾಗಿಸಿಕೊಂಡಿರುವ  ನಮಗೆ ಕೊಡಗಿನ ಇತಿಹಾಸವನ್ನು ತಿಳಿದುಕೊಳ್ಳುವಂತೆ ಹೇಳುತ್ತಾ ಕಿವಿಹಿಂಡಿದಂತಿದೆ. ಕನ್ನಡದಲ್ಲಿ ಕೊಡವ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಿರುವುದು, ಕೊಡಗು ಪ್ರತ್ಯೇಕ ರಾಜ್ಯದ ಕೂಗು ,ಸ್ವಾತಂತ್ರ್ಯ ಬಯಸಿದ ಮಹಿಳೆಯೊಂದಿಗೆ  ಕಾವೇರಿಯನ್ನು ಹೋಲಿಸುತ್ತಾ ಸೊಗಸಾದ ಕಥೆ ಹೆಣೆಯಲಾಗಿದೆ. ಬಲಮುರಿ ಸ್ಥಳಕ್ಕೆ ಯಾಕೆ ಆ ಹೆಸರು ಬಂತು? ಸೀರೆಯ ನೆರಿಗೆ ಹಿಂದಕ್ಕೆ ಆದುದರ ಹಿನ್ನೆಲೆ ಏನು? ಹೀಗೆ ಸಾಕಷ್ಟು ಕೊಡಗಿನ ಮಾಹಿತಿಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಾರೆ.

ಕೊಡಗು, ಕಾವೇರಿ ಮತ್ತು ಇದರ ಸಂಬಂಧ ಇತರ ಕಥೆಗಳ ಜತೆ   ಭಾರತದಲ್ಲೇ ಟಿಬೆಟನ್ನರ ಅತಿದೊಡ್ಡ ಬೌದ್ಧ ಕೇಂದ್ರ  ಬೈಲುಕುಪ್ಪೆಯಲ್ಲಿ ಬೆಳೆದ ಮಾಹಿತಿ ಎಲ್ಲರ ಗಮನ ಸೆಳೆಯುವಂತಿದೆ. ವಿಕ್ಟೋರಿಯಾ ಗೌರಮ್ಮ ಎಂಬ ದುರಂತ ನಾಯಕಿಯ ಕುತೂಹಲಕಾರಿ ಬದುಕಿನ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಬೇಕೆಂಬ ಒಳತುಡಿತ ಹುಟ್ಟುಹಾಕಿದೆ.

 ಬೌದ್ಧ -ಜೈನ ತತ್ವಗಳ ಪ್ರಭಾವ, ದೇವಾಲಯಗಳು, ಆಚಾರ ವಿಚಾರಗಳು, ಸ್ಥಳವಿಶೇಷಗಳು , ರಾಜ ಮನೆತನಗಳಿಂದ ಹಿಡಿದು ಕಾವೇರಿ ಹರಿಯುವ ಊರುಗಳ ಇತಿಹಾಸವನ್ನೇ ಹೇಳುತ್ತಾಕಾವೇರಿ ತೀರದ ಪಯಣ ಬೆರಗಿನ ಲೋಕಕ್ಕೆ ಕೊಂಡೊಯ್ಯುತ್ತದೆ.

‘ಹರಿಯುವ ನದಿಯಲ್ಲಿ ಕಾಲೂರಿದಾಗಲೆಲ್ಲ ಆದು ಹೊಸ ನದಿಯೆಂದೇ ಭಾಸವಾಗುತ್ತದೆ’ ಎಂದು ಚಿಂತಕ ಹೆರಕ್ಲೀಟಸ್ ಹೇಳಿದಂತೆ ತನ್ನ ಪಯಣವನ್ನು ಮೆಲುಕಿಸುತ್ತಾ ಕಾವೇರಿಯ ಜತೆ ಅನೇಕ ಜನ್ಮಗಳಿಂದಲೂ ನಾನು ಹೆಜ್ಜೆ ಹಾಕಿದ್ದೇನೆ ಎಂದು ಹೇಳುವ ಮೂಲ ಕೃತಿಕಾರ ಓ.ಕೆ.ಜೋಣಿ  ಕೇರಳದವರು. ಇವರು ಜೀವನದಿಯ ಜಾಡು ಹುಡುಕುತ್ತಾ  ಹೊರಟು ಸಾಕಷ್ಟು ಅಧ್ಯಯನ ಮಾಡಿರುವುದು ಹೆಮ್ಮೆ ಅನಿಸುತ್ತದೆ.

ಮೂಲ ಕೃತಿಕಾರರಾದ ಓ.ಕೆ. ಜೋಣಿ ಕೇರಳದ ವಯನಾಡ್ ಜಿಲ್ಲೆಯವರಾಗಿದ್ದು ರಾಷ್ಟ್ರ್ ಪ್ರಶಸ್ತಿ ಪುರಸ್ಕೃತರು. ಕಾವೇರಿಯ ವರ್ಣನೆ ಮತ್ತು ವಸ್ತುನಿಷ್ಠ, ಗಂಭೀರ ನಿರೂಪಣೆಯೊಂದಿಗೆ ವಿವರಿಸುವ ಇವರು ಸಂಶೋಧಕನಾಗಿ ಕಾವೇರಿ ದಡದಲ್ಲಿ ಪಯಣಿಸುತ್ತಾ ಬೇರೆ ಬೇರೆ ಆಕರಗಳಿಂದ  ಮಾಹಿತಿ ಸಂಗ್ರಹಿಸಿದ್ದಾರೆ.. ಇದರಿಂದಲೇ  ಕಾವೇರಿಯ ಹರಹನ್ನೂ, ಆಳವನ್ನೂ, ಹರಿವಿನ ಸಾನ್ನಿಧ್ಯವನ್ನೂ ಸಮೀಪಿಸಿ ಕ್ರೋಢೀಕರಿಸಲು ಹಾಗೂ ಇಷ್ಟು ಪರಿಣಾಮಕಾರಿಯಾದ ಅದ್ಭುತ ಕೃತಿಯ ಯಶಸ್ಸಿಗೆ ಸಾಧ್ಯವಾಯಿತು.

ಕೃತಿಯನ್ನು ಓದುತ್ತಾ ಕನ್ನಡದೇ ಮೂಲ ಕೃತಿ ಎನ್ನುವಷ್ಟು ಆಪ್ತ ಭಾಷೆಯಲ್ಲಿ ಅನುವಾದಿಸಿ ಮಲಯಾಳಂ ಕೃತಿಯೊಂದನ್ನು ಓದಲು ಅವಕಾಶ ಮಾಡಿಕೊಟ್ಟಿದ್ದಾರೆ ಪತ್ರಕರ್ತ ವಿಕ್ರಂ ಕಾಂತಿಕೆರೆಯವರು. ಅನುವಾದವೆಂದರೆ ಹೀಗಿರಬೇಕು ಎಂಬುದಕ್ಕೆ ಮಾದರಿಯಾಗಿ ತಮ್ಮ ಪಕ್ವ ಭಾಷೆಯಲ್ಲಿ ಮೂಡಿರುವ  ಅನುವಾದ ನಿಜಕ್ಕೂ ಕನ್ನಡದ್ದೇ ಎನ್ನುವಷ್ಟು  ಅದ್ಭುತವಾಗಿದೆ.

ಕಾವೇರಿ ತೀರದ ಪಯಣವನ್ನು ಹಲವು ಆಕರ ಗ್ರಂಥಗಳಿಂದ ಶೋಧಿಸಿರುವುದರಿಂದಲೂ, ಅಷ್ಟೇ ಪ್ರೌಢ ಅನುವಾದದಿಂದಲೂ ಇದೊಂದು ಅಧ್ಯಯನಯೋಗ್ಯ ಮತ್ತು ಸಂಗ್ರಹ ಯೋಗ್ಯ ಹೊತ್ತಗೆ ಎಂಬುದರಲ್ಲಿ ಎರಡು ಮಾತಿಲ್ಲ. ಇತಿಹಾಸ ಅದರಲ್ಲೂ ಜೀವನದಿಯ ಹೆಸರಲ್ಲಿ!. ನಾವೆಲ್ಲ ಈ ಕೃತಿಯನ್ನು ಓದಿಯೇ ಸವಿಯಬೇಕು.


ಸುನೀತ ಕುಶಾಲನಗರ

.

Leave a Reply

Back To Top