ಲೇಖನ

ಗೃಹಿಣಿ ಮತ್ತು ಸಾಹಿತ್ಯ

ಜ್ಯೋತಿ  ಡಿ.ಬೊಮ್ಮಾ

92,096 Beautiful Woman Illustrations & Clip Art - iStock

ಪ್ರಾಚೀನಕಾಲದಿಂದಲೂ ಸ್ತ್ರೀ ಎರಡನೆ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಪುರುಷ ಮೇಲು ಸ್ತ್ರೀ ಕೀಳು ಎಂಬ ಭಾವನೆಯಿಂದ  ಸ್ತ್ರೀ ಯು ಶಿಕ್ಷಣದಿಂದ ವಂಚಿತಳಾಗಿದ್ದಳು. ಹಾಗಾಗಿ ಸ್ತ್ರೀ ಯು ಸಾಹಿತ್ಯ ರಚನೆಯಲ್ಲಿ ಹಿಂದೆ ಬಿದ್ದಳು.  ಮೊಟ್ಟಮೊದಲ ಸಾಹಿತ್ಯ ರಚಿಸಿರುವದು ಹನ್ನೆರಡನೆ ಶತಮಾನದ ವಚನಗಾರ್ತಿಯರು .

ಎರಡನೆಯ ಹಂತ ದೇಶದ ಸ್ವತಂತ್ರ ಚಳುವಳಿಗಳ ಸಂದರ್ಭದಲ್ಲಿ. ಹನ್ನೆರಡನೆಯ ಶತಮಾನದ ವಚನಗಾರ್ತಿಯರು ತಮ್ಮ ವಚನಗಳ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಿಸಿದರು.ಸಾಮಾಜಿಕ ಸ್ವಾತಂತ್ರ್ಯ ಅಂದೋಲನ ರಚಿಸಿದರು. ಸ್ವಾತಂತ್ರ್ಯ ದ ಸಂದರ್ಭದಲ್ಲಿ ದೇಶಭಕ್ತಿ ಯ ಪರ ಪದ್ಯ ರಚಿಸಿ ರಾಷ್ಟ್ರ ಪ್ರೇಮ ಸಾರಿದರು.

ಹಾಗೆ ನೋಡಿದರೆ ೨೦ ನೆಯ ಶತಮಾನದ ವರೆಗೂ ಮಹಿಳೆಯರು ರಚಿಸಿದ ಮಹಿಳಾ ಸಾಹಿತ್ಯದಲ್ಲಿ ವಿಶೇಷ ವೇನು ಕಂಡು ಬಂದಿಲ್ಲ. ೨೦ ನೇ ಶತಮಾನದ ವರೆಗೆ ಮಹಿಳೆ ತನ್ನ ಮನದ ತುಮಲವನ್ನು ಸಾಹಿತ್ಯದ ಮೂಲಕ ಹಂಚಿಕೊಂಡಿರುವ ಉದಾಹರಣೆಗಳಿಲ್ಲ.

ಹದಿಬದೆಯ ಧರ್ಮ ದ ಸಂಚಿಯ ಹೊನ್ನಮ್ಮನ್ನೆ ಇರಲಿ ,ಹೆಳವನ ಕಟ್ಟೆಯ ಗಿರಿಯಮ್ಮನೆ ಇರಲಿ ,ಜಾನಪದ ಲೋಕದ ಗರತಿಯರೆ ಇರಲಿ ಇವರೆಲ್ಲರೂ ಬರೆದಿರುವದು ತ್ಯಾಗದ ಉಪದೇಶಗಳೆ. ಹನ್ನೆರಡನೆ ಶತಮಾನದ ವಚನಗಾರ್ತಿಯರಲ್ಲಿ ಅಕ್ಕಮಹದೇವಿ ಮಾತ್ರ ಸ್ತ್ರೀ ಜಗತ್ತಿನ ತಲ್ಲಣಗಳಿಗೆ  ದ್ವನಿಯಾಗಿ ನಿಲ್ಲುತ್ತಾಳೆ.

ಮೊಟ್ಟಮೊದಲ ಬಾರಿಗೆ ಲಿಂಗ ತಾರತಮ್ಯ ದ ಬಗ್ಗೆ ದ್ವನಿ ಎತ್ತುತ್ತಾಳೆ . ಆಕೆ  ಹೆಣ್ತನಕ್ಕೆ  ಲೋಕ ಹೋರಿಸಿರುವ  ಮಿತಿಯನ್ನು ಮೀರುವ , ಮೀರಿದ್ದನ್ನು ಹೇಳುವ ಪ್ರಯತ್ನ ಮಾಡುತ್ತಾಳೆ.

ನಂತರ ಸಂಚಿಯ ಹೊನ್ನಮ್ಮ ಪುರುಷ ಪ್ರಧಾನ್ಯತೆಯನ್ನು ಸಂಪೂರ್ಣ ಒಪ್ಪಿಕೊಂಡರು ಹೆಣ್ಣಿನ ಮೇಲಾಗುತ್ತಿರುವ ಅನ್ಯಾಯಕ್ಕೆ ವಿರುದ್ದವಾಗಿ  ಒಂದು ಸಣ್ಣ ಪ್ರತಿಭಟನೆ ಸೂಚಿಸುತ್ತಾಳೆ. ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು ,ಎಂದು ದ್ವನಿ ಎತ್ತುತ್ತಾಳೆ.

ಜನಪದ ಗೀತೆಯ ಗರತಿಯರು ತಮ್ಮ ಗೀತೆಗಳಲ್ಲಿ ಹೆಚ್ಚಾಗಿ ಯಾವದೇ ಪ್ರತಿರೋಧ ಒಡ್ಡದೆ ,ಪತಿಯ ಅನ್ಯಾಯಗಳಿಗೆ ಪ್ರತಿಯಾಗಿ ಕ್ಷಮಾಗುಣ ರೂಢಿಸಿಕೊಂಡು  ಬಾಳಿದರೆ ಬಾಳು ಹಸನು ಎಂಬ ಮಾತಿಗೆ ಹೆಚ್ಚು ಒತ್ತು ಕೊಟ್ಟಿರುವರು.

೧೯ ನೆ ಮತ್ತು ೨೦ ಶತಮಾನದಲ್ಲಿ ಮತ್ತೆ ಸ್ತ್ರೀ ಪರ ಆಲೋಚನೆಗಳು ಕಾಣತೊಡಗಿದವು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಮಹಿಳೆಯರು ಬರೆಯತೊಡಗಿದರು. ಇಲ್ಲಿವರೆಗೆ ಮಹಿಳೆಯರ ಪರವಾಗಿ ಪುರುಷರೆ ಬರೆಯಬೇಕಾದ  ಸಂದರ್ಬವಿತ್ತು. ಅವನು ಬರೆಯುವದು ಸ್ತ್ರೀ ಲೋಕದ ಅರಿವಿಲ್ಲದ ಸಾಹಿತ್ಯ. ಮುಂದೆ ೨೦ ನೆ ಶತಮಾನದಲ್ಲಿ ಮಹಿಳೆಗೆ ಶಿಕ್ಷಣದ ಬಾಗಿಲು ತೆರೆಯಿತು.ತಮ್ಮ ಮನದ ಅಭಿವ್ಯಕ್ತಿ ಯನ್ನು ಮುಕ್ತವಾಗಿ ಹರಿಬಿಡುವ ಧೈರ್ಯ ಲೇಖಕಿಯರು ಮೈಗೂಡಿಸಿಕೊಂಡರು.

ಸ್ತ್ರೀ ಯರು ಬರವಣಿಗೆಗೆ ತೊಡಗಿದಾಗ ಅಡುಗೆ ಮನೆ ಸಾಹಿತ್ಯವೆಂದರು.ಪ್ರಗತಿಪರವಾಗಿ ಬರೆದಾಗ ಸ್ತ್ರೀ ವಾದಿ ಎಂಬ ಹಣೆಪಟ್ಟಿ ಅಂಟಿಸಿದರು.ವೈಚಾರಿಕ ನೆಲೆಗಟ್ಟಿನಲ್ಲಿ ಬರೆದಾಗ ಬಂಡಾಯಗಾರ್ತಿ ಎಂದು ಸಾರಿದರು. ಇಂತಹ ಹಣೆಪಟ್ಟಿಗಳಿಲ್ಲದೆ ಮಹಿಳೆಯರ ಬರಹವನ್ನು ಸಾಹಿತ್ಯದೊಳಗೆ  ಮುಕ್ತ ವಾಗಿ ಸ್ವಾಗತಿಸುವ ದಿನಗಳು ಬರಬಹುದೇ.ಎಂಬುವದೆ ಒಂದು ಪ್ರಶ್ನೆ.

ವಚನಗಾರ್ತಿರು ಮತ್ತು ಜನಪದ ಸಾಹಿತ್ಯ ರಚಿಸಿರುವ ಮಹಿಳೆಯರೆಲ್ಲ ಗೃಹಿಣಿಯರೆ. ಅವರು ತಮ್ಮ ದೈನಂದಿನ ಕಾರ್ಯದೊಂದಿಗೆ , ವಚನಗಳು ,ಗಾದೆಗಳು ,ಒಗಟುಗಳು ರಚಿಸಿದರು. ಜನಪದ ಸಾಹಿತ್ಯವನ್ನು ಬಿ.ಎಂ ಶ್ರೀಕಂಠಯ್ಯ ಅವರು  ಜನವಾಣಿ ಬೇರು , ಕವಿವಾಣಿ ಹೂ ಎಂದು ಕರೆದಿದ್ದಾರೆ. ಕುಟ್ಟುವ ಬೀಸುವ ಪದಗಳು. ಕಂದನನ್ನು ಮಲಗಿಸುವ ಜೋಗುಳ ಪದಗಳು , ದೇವರ ನಾಮಗಳು , ಆರತಿ ಪದಗಳು ಇವೆಲ್ಲವೂ ಗೃಹಿಣಿಯರಿಂದ ಹೊಮ್ಮಿದ ಸಾಹಿತ್ಯವೆ.

ಮುಂದೆ ನವ್ಯಸಾಹಿತ್ಯ ಯುಗ ಆರಂಭವಾಯಿತು.ನಂತರ ಅಧುನಿಕ ಸಾಹಿತ್ಯ ಯುಗ.ಇಷ್ಟರಲ್ಲಿ ಎಲ್ಲರೂ ಅಕ್ಷರಸ್ಥರಾಗುತಿದ್ದರು. ಅನೇಕ ಮಹಿಳಾ ಕಾದಂಬರಿಗಾರರು ಮುನ್ನಲೆಗೆ ಬಂದರು.ತಮ್ಮ ಕಲ್ಪನೆ ಗೆ ಅಕ್ಷರ ರೂಪ ಕೊಟ್ಟು ಕಥೆ ಕಾದಂಬರಿ ಕವನ ರಚಿಸತೊಡಗಿದರು.  ಸ್ತ್ರೀ ಯ ತವಕ ತಲ್ಲಣಗಳು , ಸಾಮಾಜಿ ಮತ್ತು ರಾಜಕೀಯ ಸ್ಥಿತಿ ಗತಿಗಳು ,ಪ್ರೀತಿ ಪ್ರೇಮ ಗಳ ನವಿರುತನ ಮುಂತಾದ ವಿಷಯಗಳ ಬರವಣಿಗೆಯಲ್ಲಿ ಮಹಿಳಾ ಸಾಹಿತಿಗಳು ಮೇಲುಗೈ ಸಾಧಿಸಿದರು.

ಇಷ್ಟಾಗಿಯೂ ಮಹಿಳಾ ಸಾಹಿತಿಗಳು ಪುರುಷ ಸಾಹಿತಿಗಳೊಡನೆ ಸಮಾನವಾಗಿ ಗುರುತಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿರಲು ಕಾರಣವೇನು..! 

ಯಾವುದೇ ಒಂದು ವಿಷಯ ಸಾಮಾಜೀಕ , ಧಾರ್ಮಿಕ , ರಾಜಕೀಯ , ಶಿಕ್ಷಣ  ,  ಇತಿಹಾಸ ಲೈಂಗಿಕತೆ , ಕಾಮ ಮತ್ತು ಪ್ರೇಮ ದ ವಿಷಯಗಳ ಬಗ್ಗೆ ಪುರುಷರು ಬರೆದ ಸಾಹಿತ್ಯ ವನ್ನು ಸಾಮಾನ್ಯವಾಗಿ ಸ್ವೀಕರಿಸುವ ಈ ಸಮಾಜ  ಅದೇ ಬರಹ ಮಹಿಳೆ ಬರೆದರೆ ತರ್ಕಿಸುತ್ತದೆ.  ಲೈಂಗಿಕತೆ ಕಾಮ ಪ್ರೇಮದ ವಿಷಯಗಳು ಮುಕ್ತವಾಗಿ ಬರೆಯುವದಕ್ಕೆ ಮಹಿಳಾ ಸಾಹಿತಿಗಳು ಸಂಕೋಚಪಡುತ್ತಾರೆ. ಬರೆದವರ ವ್ಯಕ್ತಿತ್ವ ದೊಂದಿಗೆ ತಳಕು ಹಾಕಿ ಓದುವ ಓದುಗರು ಇದು ನಿಮ್ಮ ಸ್ವಂತ ಅನುಭವವೇ ಎಂದು ಕೇಳಿದಾಗ ಮುಜುಗರ ಅನುಭವಿಸಬೇಕಾಗುತ್ತದೆ. ಆದರೆ ಪುರುಷರು ಏನು ಬರೆದರು ನಡೆಯುತ್ತದೆ.  ಮಹಿಳಾ ಬರಹಗಾರರು ನಿರಂತರ ಈ ತರತಮ ಅನುಭವಿಸುತ್ತಿದ್ದಾರೆ.

ಪುರುಷರ ದಬ್ಬಾಳಿಕೆ ಖಂಡಿಸಿ ಬರೆದರೆ  ‘ ಫೇಮಿನಿಷ್ಟ ‘ ಎಂಬ ಹಣೆಪಟ್ಟಿ ಅಂಟಿಸಿಬಿಡುತ್ತಾರೆ. ಎಷ್ಟೋ ಬರಹಗಾರ್ತಿಯರು ಈ ಹಣೆಪಟ್ಟಿಗೆ ಹೆದರೆ ತಮ್ಮ ಆಲೋಚನೆಗಳನ್ನು ಮುಕ್ತ ವಾಗಿ ಹೇಳಲಾಗದೆ ಬರೆಯಲಾಗದೆ ಇಬ್ಬಂದಿತನದಲ್ಲಿ ತೊಳಲಾಡುತ್ತಾರೆ.

ವೈಚಾರಿಕ ನಿಲುವನ್ನು ತಳೆದ ಸ್ತ್ರೀ ಯು ಸಮಾಜದಲ್ಲಿ ಒಂಟಿತನ ಅನುಭವಿಸಬೇಕಾಗುತ್ತದೆ.ಮೂಢ ನಂಬಿಕೆಗಳನ್ನು ವೀರೋಧಿಸಿದರೆ , ದೇವರ ಅಸ್ಥಿತ್ವ ಅಲ್ಲಗಳೆದರೆ ,ಪ್ರಖರ ವೈಚಾರಿಕ ಚಿಂತನೆಗಳನ್ನು ಮಂಡಿಸಿದರೆ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೆ ಬೇರೆಯಾಗುತ್ತದೆ.

ಆದರೆ ಯಾವಾಗಲೂ ಒಂದೇ ಸಿದ್ದಾಂತಕ್ಕೆ  ಜೋತುಬಿದ್ದು ಒಂದು ಸಮುದಾಯವನ್ನು ಓಲೈಸುವ ಬರಹಗಾರ ಅಥವಾ ಸಾಹಿತಿ ತಮ್ಮ ಆತ್ಮವಂಚನೆ ಮಾಡಿಕೊಂಡಂತೆ. ಸಾಹಿತಿ ಯಾದವರು ಯಾರನ್ನು ಓಲೈಸದೆ ತಮ್ಮ ಅಭಿವ್ಯಕ್ತಿಯನ್ನು ಮುಕ್ತವಾಗಿ ಹರಿಯಬಿಡಬೇಕು.

ನಮ್ಮ ಸಮಾಜ ಗೃಹಿಣಿಯರನ್ನು ನೋಡುವ ದೃಷ್ಟಿಕೋನವೆಂದರೆ , ಅವಳು ಕೇವಲ ಗಂಡ , ಮನೆ ,ಮಕ್ಕಳು ಎಂಬ ಪರಿಧಿಯಲ್ಲಿಯೆ ಇರಬೇಕು.ಇದಕ್ಕೂ ಮೀರಿದ ಪ್ರಪಂಚ ಅನ್ಯರದು.

ಈಗ ಬರಹಗಾರರಲ್ಲಿ ಸ್ತ್ರೀ ಯರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತಿದ್ದಾರೆ.ಗೃಹಿಣಿಯರು ತಮ್ಮ ಗೃಹ ಕರ್ತವ್ಯ ದ ನಡುವೆಯೆ ಸಾಹಿತ್ಯದೆಡೆ ಹೆಚ ಒಲವು ತೋರುತಿದ್ದಾರೆ. ಓದುವ ಹವ್ಯಾಸ ಬೆಳೆಸಿಕೊಳ್ಳುತಿದ್ದಾರೆ. ಸುಧಾ ತರಂಗ ಮಯೂರ ಕರಮವೀರ ಪತ್ರಿಕೆಗಳೆಲ್ಲ ಗೃಹಿಣಿಯರ ಅಚ್ಚುಮೆಚ್ಚಿನ ಪತ್ರಿಕೆಗಳಾಗಿವೆ.ಮಕ್ಕಳ ಪಠ್ಯ ಪುಸ್ತಕ ಓದಿ ಅವರಿಗೆ ತಿಳಿಸುವ ಮತ್ತು ತಾವು ತಿಳಿದುಕೊಳ್ಳುವ ಆಸಕ್ತಿ ಗೃಹಿಣಿಯರಿಗೆ ಇದೆ.

ನಾನು ಒಬ್ಬ ಗೃಹಿಣಿ , ನನ್ನ ಬರಹ ಓದಿದವರು ತಾವು ಶಿಕ್ಷಕಿಯೆ ಎಂದು ಕೇಳುತ್ತಾರೆ. ನನ್ನನ್ನು ಸಾಹಿತ್ಯ ಸಂಬಂಧಿ ಕಾರ್ಯಕ್ರಮಕ್ಕೆ ಅಹ್ವಾನಿಸುವರು ನನ್ನ ಹೆಸರಿನ ಕೆಳಗೆ ಸಾಹಿತಿ ಎಂದೋ ಲೇಖಕಿ ಎಂದೋ ಬರೆಯುತ್ತಾರೆ. ಗೃಹಿಣಿ ಎಂದೆ ಬರೆಯಬಹುದಲ್ಲ. ಗೃಹಿಣಿ ಎಂದರೆ ಕೇವಲ ಗೃಹ ಕರ್ತವ್ಯ ಕ್ಕೆ ಮಾತ್ರ ಸೀಮಿತಳು ಎಂಬ ಧೋರಣೆ ಬದಲಾಗಬೇಕಿದೆ.

ಈಗ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಒಂದು ಕೋಟಿ ದಾಟಿದೆಯಂತೆ.ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸ್ವೀಕರಿಸುವ ಗುರಿ ಇದೆ.ಆದರೆ ಎಷ್ಟು ಜನರು ಸಾಹಿತ್ಯಿಕವಾಗಿ ಸಕ್ರಿಯರಾಗಿದ್ದಾರೆ ಅವಲೋಕನ ಮಾಡಿಕೊಳ್ಳಬೇಕಿದೆ.ಒಟ್ಟು ಪ್ರಮಾಣದ ಸದಸ್ಯರಲ್ಲಿ ಸ್ತ್ರೀ ಯರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ.ಅದರಲ್ಲೂ ಗೃಹಿಣಿಯರು ಬೆರಳೆಣಿಯಷ್ಟು ಮಾತ್ರ ಇರುವರು. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇರುವ ಗೃಹಿಣಿಯರು ಸಾಹಿತ್ಯ ಕ್ಷೇತ್ರದಿಂದ ದೂರ ಇರುವದೇಕೆ..? ಒಬ್ಬ ಗೃಹಿಣಿ ಬರೆಯುತ್ತಾಳೆ ಎಂದರೆ ಅವಳೆನು ಬರೆಯಬಲ್ಲಳು ಎಂಬ ಧೋರಣೆ. ಬರಹಗಾರರು ಶಿಕ್ಷಣ ಕ್ಷೇತ್ರದವರೆ ಆಗಿರುತ್ತಾರೆಂಬ ಭಾವನೆ ಇದೆ.

ಪೂರ್ಣಚಂದ್ರ ತೇಜಸ್ವಿ ಯವರು ಒಂದು ಕಡೆ ಉಲ್ಲೆಖಿಸಿದ್ದರೆ. ಇಡಿಯ ಒಂದು ಭಾಷಾ ಸಮೂದಾಯದ ಅಭಿವ್ಯಕ್ತಿ ಯಾಗಬೇಕಾದ ಸಾಹಿತ್ಯ  ಕೇವಲ ಪಾಠ ಹೇಳುವರ ಕುಲಕಸುಬಿನಂತಾದರೆ ಅದು ಎಷ್ಟೆ ಸಹಜವಾಗಿ ಸಂಭವಿಸಿದರು ಆ ನಾಗರೀಕತೆ ರೋಗಗ್ರಸ್ತ ವಾದುದು ಎಂದು.

ಸಾಹಿತ್ಯ ಪರಿಷತ್ತು ಬೇರೆ ಕ್ಷೇತ್ರದವರನ್ನು ಗುರುತಿಸಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಒದಗಿಸಬೇಕು.ಸಾಹಿತ್ಯ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಹೋರಾಡುತ್ತಿರುವ ಮಹಿಳೆಯರಿಗೆ ಬೆಂಬಲಿಸಲಿ.

ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆ ಮಾಡಲು ಆಸಕ್ತಿ ಹೊಂದಿದ್ದ ಪರಿಷತ್ತು ಅನ್ಯ ಕ್ಷೇತ್ರದ ಸಾಹಿತ್ತಾಸಕ್ತರನ್ನು , ಮಹಿಳೆಯರನ್ನು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗೃಹಿಣಿಯರನ್ನು ಪರಿಷತ್ತಿನ ಸದಸ್ಯರನ್ನಾಗಿ ಸ್ವಿಕರಿಸಲಿ.


6 thoughts on “

  1. ವಾಸ್ತವಿಕ ಸತ್ಯದ ಅನಾವರಣ… ಗಟ್ಟಿತನದ ಲೇಖನ ತುಂಬಾ ಚನ್ನಾಗಿದೆ…

  2. ಕನ್ನಡ ಸಾಹಿತ್ಯಕ್ಕೆ ಗೃಹಣಿಯರ ಕೊಡುಗೆ ಅಪಾರವಾದುದು. ಮುಗಿದಾವ ನಿಮ್ಮ ಜೋಳ, ಉಳಿದಾವ ನಮ್ಮ ಹಾಡ…. ಎಂಬುವ ಜನಪದರ ಮಾತೇ ಇದಕ್ಕೆ ಸಾಕ್ಷಿ. ಲೇಖನ ಚೆನ್ನಾಗಿ ಮೂಡಿಬಂದಿದೆ.

Leave a Reply

Back To Top