ಅಂಕಣ ಸಂಗಾತಿ
ಗಜಲ್ ಲೋಕ
ರಜಪೂತರ ಗಜಲ್ ನಾದದಲ್ಲೊಂದು ಸುತ್ತು
…
ಹಾಯ್….
ಏನು ಯೋಚಿಸ್ತಾ ಇದ್ದೀರಾ, ಇಂದು ಯಾವ ವಾರ ಎಂದೋ…? ನಾನು ಓರ್ವ ಗಜಲ್ ಗೋ ಅವರ ಪರಿಚಯದೊಂದಿಗೆ ಬಂದಿದ್ದೇನೆ ಎಂದರೆ ಇಂದು ‘ಗುರುವಾರ’ ಎಂದಲ್ಲವೇ…!! ಶುಭೋದಯ, ನನ್ನ ಎಲ್ಲ ಕಸ್ತೂರಿ ಕನ್ನಡದ ಹೃದಯಗಳಿಗೆ ಈ ಮಲ್ಲಿನಾಥನ ಮಲ್ಲಿಗೆಯಂತ ನಮಸ್ಕಾರಗಳು.
“ಆ ಹೆಜ್ಜೆಗಳ ಸದ್ದನ್ನು ನಾವು ಬಹಳ ಮೊದಲೇ ತಿಳಿಯುತ್ತೇವೆ
ಹೇಯ್ ಜೀವನವೇ..ನಾವು ನಿನ್ನನ್ನು ದೂರದಿಂದಲೇ ಗುರುತಿಸುತ್ತೇವೆ”
–ಫಿರಾಕ್ ಗೋರಖಪುರಿ
‘ಜೇನು’ ಎಂದ ತಕ್ಷಣವೇ ನಮ್ಮ ಬಾಯಿಯು ಒದ್ದೆಯಾಗುತ್ತದೆ, ಅಲ್ಲವೆ..! ನಾವು ಜೇನು ಸವಿಯೋದು ರುಚಿಗಾಗಿಯಾದರೂ ಅದರ ಫಲ ಮಾತ್ರ ರುಚಿಯ ಆಚೆಗೆ ಇದೆ! ಆ ಜೇನಿನ ಮಕರಂದವು ನಮ್ಮ ದೇಹವನ್ನು ಪ್ರವೇಶಿಸಿ ರಕ್ತದ ಉತ್ಪತ್ತಿಗೆ ಕಾರಣವಾಗುತ್ತದೆ, ನಮ್ಮ ಸದೃಢ ಆರೋಗ್ಯಕ್ಕೆ ಬುನಾದಿಯಾಗುತ್ತದೆ. ಇದರಂತೆಯೇ ಸಾಹಿತ್ಯದಿಂದ ಮನೋರಂಜನೆ ದೊರೆಯುತ್ತದೆ ಎಂಬುದು ಮೇಲ್ನೋಟಕ್ಕೆ ದಿಟವೆನಿಸಿದರೂ ಸಾಹಿತ್ಯದ ಕರಾಮತ್ತು ಮನೋರಂಜನೆಯನ್ನು ದಾಟಿಕೊಂಡು ವ್ಯಕ್ತಿಯ ವ್ಯಕ್ತಿತ್ವದ ವಿಕಾಸಕ್ಕೆ, ಸಂಸ್ಕಾರಕ್ಕೆ ತಳಪಾಯ ಹಾಕುತ್ತದೆ, ಹಾಕುತ್ತಿದೆ ಕೂಡ! ಕಾಂತೆಯಂತೆ ಸಂತೈಸುತ್ತದೆ, ತಾಯಿಯಂತೆ ಜೋಗುಳವಾಡುತ್ತದೆ, ಇವಾಗಲೂ ಇದನ್ನೆ ಮಾಡುತ್ತಿದೆ! ಪ್ರತಿ ಭಾಷೆಯ ಬೇರುಗಳಲ್ಲಿ ಅಕ್ಷರದ ಅಕ್ಷಯ ಪಾತ್ರೆ ಇದೆ. ಇದು ಮನುಕುಲಕ್ಕೆ ಬೆಂಗಾವಲಾಗಿ, ಜ್ಯೋತಿಯಾಗಿ ಬೆಳಕನ್ನು ನೀಡಿದೆ, ನೀಡುತ್ತಿದೆ. ಕನ್ನಡದ ಹಣತೆಯು ಹಲವರ ಬೌದ್ಧಿಕ ಚಲನೆಯಿಂದ ದೇದಿಪ್ಯಮಾನವಾಗಿ ಪ್ರಕಾಶಿಸುತ್ತಿದೆ. ಇದಕ್ಕೆ ಅನ್ಯ ಭಾಷೆಯ ಸಾಹಿತ್ಯ ರೂಪಗಳು ತೈಲದಂತೆ ಸಾಥ್ ನೀಡುತ್ತಿವೆ. ಅಂತಹ ತೈಲಗಳಲ್ಲಿ ‘ಗಜಲ್’ ಗೆ ವಿಶಿಷ್ಟವಾದ ಸ್ಥಾನವಿದೆ. ಆಧ್ಯಾತ್ಮಿಕ ನೆಲೆಯಲ್ಲಿ ಜಗುಲಿ ಮೇಲೆ ರಂಗೋಲಿ ಹಾಕುತಿದೆ, ಜೊತೆ ಜೊತೆಗೆ ರಸೋಯಿ ಕೋಣೆಯಲ್ಲಿ ಅನ್ನಪೂರ್ಣೆಯಾಗಿಯೂ ಕಾರ್ಯ ನಿರ್ವಹಿಸುತಿದೆ. ಈ ನೆಲೆಯಲ್ಲಿ ಇಡೀ ಮನುಕುಲಕ್ಕೆ ದಾರಿ ದೀಪವಾಗಿದೆ. ಕನ್ನಡದಲ್ಲಿ ಇಂದು ಅಸಂಖ್ಯಾತ ಗಜಲ್ ಗೋ ಇದ್ದಾರೆ. ಅವರುಗಳಲ್ಲಿ ಉತ್ತಮ ಗಜಲ್ ಗೋ ಹಾಗೂ ಸುಶ್ರಾವ್ಯ ಕಂಠಾಧಿಪತಿಯಾದ ವಿಜಯಪುರದ ಶ್ರೀ ಪ್ರಕಾಶ್ ಸಿಂಗ್ ರಜಪೂತ್ ಅವರು ಪ್ರಮುಖರು.
ಶಿಶುಪಾಲಸಿಂಗ್ ರಘುನಾಥಸಿಂಗ್ ರಜಪೂತ್ ಹಾಗೂ ಶ್ರೀಮತಿ ಶಶಿಕಲಾಬಾಯಿ ದಂಪತಿಗಳ ಮುದ್ದಿನ ಮಗುವಾಗಿ ಶ್ರೀ ಪ್ರಕಾಶ್ ಸಿಂಗ್ ರಜಪೂತ್ ಅವರು 1954ರ ಅಕ್ಟೋಬರ್ 24 ರಂದು ಜನಿಸಿದ್ದಾರೆ. ಡಿಪ್ಲೋಮಾ ಇನ್ ಇಲೆಕ್ಟ್ರೀಕಲ್ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿ ತಮ್ಮನ್ನು ತಾವು ಓರ್ವ ವ್ಯಾಪಾರಿಯಾಗಿ ತೊಡಗಿಸಿಕೊಂಡಿರುವ ಶ್ರೀಯುತರು ಪ್ರವೃತ್ತಿಯಿಂದ ಬಹುಭಾಷಾ ಕವಿಗಳು ಹಾಗೂ ಗಾಯಕರು ಆಗಿ ಸಾಂಸ್ಕೃತಿಕ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ. ಕನ್ನಡ, ಹಿಂದಿ, ಇಂಗ್ಲೀಷ್, ಮರಾಠಿ, ಗುಜರಾತಿ ಹಾಗೂ ಉರ್ದು ಭಾಷೆಗಳನ್ನು ಬಲ್ಲವರಾಗಿದ್ದು, ಈ ಭಾಷೆಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ವಿಶೇಷವಾಗಿ ಭಾಷಾಂತರ ಕಾರ್ಯದಲ್ಲಿ ನಿರತರಾಗಿರುವ ರಜಪೂತ್ ರವರು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು.. ಮುಂತಾದ ಶರಣರ ವಚನಗಳನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಹೆಸರಾಂತ ಹಿಂದಿ, ಉರ್ದು ಕವಿಗಳ 80 ಗಜಲ್ ಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಹರಿವಂಶರಾಯ ಬಚ್ಚನ್ ಅವರ ‘ಮಧುಶಾಲಾ’ ಕೃತಿಯನ್ನು ಕನ್ನಡ ಮತ್ತು ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ಕಬೀರ್ ದಾಸ್, ರಹೀಮ್, ತುಳಸಿದಾಸರ ದೋಹೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇದರೊಂದಿಗೆ ಹಲವಾರು ಹಿಂದಿ ಕವಿಗಳ ಕಾವ್ಯವನ್ನು ಕನ್ನಡ ಅಂಗಳದಲ್ಲಿ ಬಿತ್ತನೆ ಮಾಡಿದ್ದಾರೆ. ಇನ್ನೂ 2014ರಲ್ಲಿ “ಬಾಳಿನ ರಾಗ” ಎಂಬ 54 ಗಜಲ್ ಗಳ ಸಂಕಲನವನ್ನು ಪ್ರಕಟಿಸಿದ್ದಾರೆ. ಶಾರದೆಯ ಆರಾಧಕರಾದ ಶ್ರೀಯುತರು ಹಲವಾರು ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರೀಯರಾಗಿದ್ದು, ವಿವಿಧ ಸಾಹಿತ್ಯ ಸಮ್ಮೇಳನಗಳು, ಕವಿಗೋಷ್ಠಿ, ಗಜಲ್ ಮುಶಾಯಿರಾ ದಂತಹ ಮಧುರ ಕ್ಷಣಗಳಲ್ಲಿ ತಮ್ಮ ನೆನಪುಗಳನ್ನು ಶಾಶ್ವತಗೊಳಿಸಿಕೊಂಡಿದ್ದಾರೆ. ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ನಾಡಿನ ಜನರಿಗೆ ರಂಜಿಸಿದ್ದಾರೆ. ಹತ್ತು ಹಲವಾರು ಸಂಘ ಸಂಸ್ಥೆಗಳು ಪ್ರಕಾಶ್ ಸಿಂಗ್ ರಜಪೂತ್ ರವರ ಪಾರದರ್ಶಕ ವ್ಯಕ್ತಿತ್ವವನ್ನು ಪ್ರೀತಿಸುತ್ತ ಸನ್ಮಾನಿಸಿವೆ, ಗೌರವಿಸಿವೆ!!
ವೃತ್ತಿ ಹೊಟ್ಟೆಯನ್ನು ತುಂಬಿಸಿದರೆ ಪ್ರವೃತ್ತಿ ಹೃದಯದ ಹಸಿವನ್ನು ನೀಗಿಸುತ್ತದೆ. ಅಂತೆಯೇ ವ್ಯಕ್ತಿ ಹವ್ಯಾಸದಲ್ಲಿ ತನ್ನ ದಣಿವನ್ನು ಮರೆಯುತ್ತಾನೆ. ಈ ನೆಲೆಯಲ್ಲಿ ಗಜಲ್ ಗೋ ಪ್ರಕಾಶ್ ಸಿಂಗ್ ರಜಪೂತ್ ರವರ ಗಜಲ್ ಭಾವ ದೀಪ್ತಿಯ ಚಲನೆ ನಿರಂತರವಾಗಿ ಸಾಗುತ್ತಿದೆ. ಹಿಂದಿ, ಉರ್ದು ಗಜಲ್ ತೋಟಗಳಲ್ಲಿ ಸುಳಿದಾಡಿ ಆಕರ್ಷಿತರಾದ ಇವರು ತಮ್ಮ ಗಜಲ್ ಗಳಲ್ಲಿ ಭಾವಯಾನಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತ, ಸಂಗೀತಕ್ಕೆ ಅಳವಡಿಸುತ್ತ ಬಂದಿದ್ದಾರೆ. ಕೇವಲ ತಮ್ಮ ಗಜಲ್ ಗಳನ್ನು ಮಾತ್ರ ಹಾಡದೇ, ಇನ್ನಿತರರ ಗಜಲ್ ಗಳನ್ನು ಹಾಡಿ ಸಂಭ್ರಮಿಸುವುದು ಅವರ ಸಕಾರಾತ್ಮಕ ವ್ಯಕ್ತಿತ್ವದ ಕೈಗನ್ನಡಿಯಾಗಿದೆ! ಗಜಲ್ ಎಂದರೆ ಅಂತರಂಗ ಅನಾವರಣಗೊಳಿಸುವ ಧ್ಯಾನಸ್ಥ ಸ್ಥಿತಿ. ಇದು ಆಡಂಬರದ ಡಂಗುರ ಸಾರುವ ದುಡಿಯಲ್ಲ, ಇದೊಂದು ಮನಸ್ಸಿಗೆ ಮುದ ನೀಡುವ ಢಮರುಗ. ಮಧ್ಯರಾತ್ರಿಯಲ್ಲೂ ಮನದ ಸ್ಮೃತಿಯಲ್ಲಿ ನೇಸರನನ್ನು ಮೂಡಿಸುವ ಗಜಲ್ ಹೃದಯದ ಬಡಿತವಾಗಿದ್ದು, ಕಲಾರಸಿಕರನ್ನು ತನ್ನ ತೆಕ್ಕೆಯಲ್ಲಿ ಹಿಡಿದುಕೊಂಡು ವಿಶ್ವಪರ್ಯಟನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದೊಂದು ಭಾವಪೂರ್ಣ ಕಾವ್ಯ ಪ್ರಕಾರ!!
“ಅವಳ ನಗೆ ಮುತ್ತು ನಾನು ಸಂಗ್ರಹಿಸಬೇಕು
ಪಾಲಿನಲ್ಲಿ ಬಂದ ಪಾತ್ರ ನಾ ವಹಿಸಬೇಕು”
ಎನ್ನುವ ಮತ್ಲಾ ಬಯಕೆಗಳ ಜೊತೆ ಜೊತೆಗೆ ಕರ್ಮ ಸಿದ್ಧಾಂತವನ್ನು ಅರುಹುತ್ತಿದೆ. ನಗೆ ಮುತ್ತು ಸಂಗ್ರಹಿಸುವ ಕಾರ್ಯಕ್ಕೆ ತೊಡಗಿರುವ ಮನವು ‘ಪಾಲಿಗೆ ಬಂದದ್ದು ಪಂಚಾಮೃತ’ ಎನ್ನುವ ಸ್ಥಿತಪ್ರಜ್ಞೆಗೆ ಅಂಟಿಕೊಂಡಿರುವುದು ಮನದಟ್ಟಾಗುತ್ತದೆ. ಪ್ರೀತಿಯ ದಾರಿಯಲ್ಲಿ ಎರಡು ಕವಲುಗಳು ಇರುವುದನ್ನು ಈ ಷೇರ್ ಸೂಚ್ಯವಾಗಿ ದಾಖಲಿಸುತ್ತದೆ. ‘ಮುತ್ತು ಸಂಗ್ರಹಿಸಿದರೆ’ ಶೃಂಗಾರ, ‘ಪಾಲಿನಲ್ಲಿ ಬಂದ ಪಾತ್ರ’ ಎಂಬುದು ವಿಪ್ರಲಂಭ ಶೃಂಗಾರವನ್ನು ಪ್ರತಿಧ್ವನಿಸುತ್ತಿದೆ.
“ಯಾರು ತಂದೆ, ಯಾರು ತಾಯಿ, ಬಾಳಲು ಬೇಕು ರೂಪಾಯಿ
ಹೊಟ್ಟೆ ತುಂಬಾ ಜೀವ ಬೇಡಿದೆ, ನುಂಗಲು ರಾಗಿಯ ಮುದ್ದಿ“
ಎನ್ನುವ ಈ ಷೇರ್ ಜೀವನದ ಆಯಾಮಗಳ ಜೊತೆಗೆ ಬಾಳಿನ ಅಂತಿಮ ದರ್ಶನವನ್ನು ಮಾಡಿಸುತ್ತದೆ. ಇಲ್ಲಿಯ ಮಿಸರೈನ್ ಸಂವಾದ ರೂಪದಲ್ಲಿ ಮೂಡಿ ಬಂದಿವೆ. ಈ ಜಗದೊಳಗೆ ಎಲ್ಲ ಸಂಬಂಧಗಳ ರಿಂಗ್ ಮಾಸ್ಟರ್ ದುಡ್ಡು ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಹಸಿದ ಒಡಲಿಗೆ ಬೇಕಾಗಿರುವುದು ತುತ್ತು ಅನ್ನ ಮಾತ್ರ!! ಈ ಕಾರಣಕ್ಕಾಗಿಯೇ ದುಡ್ಡನ್ನು ಉಪ್ಪಿಗೆ ಹೋಲಿಸಲಾಗಿದೆ.
ಮನುಷ್ಯನ ಬದುಕೆನ್ನುವುದು ಕೊಳಲಿನ ನಾದದಂತೆ, ನುಡಿಸಲು ಬಂದರೆ ಅದುವೇ ಗೆಲುವು, ಇಲ್ಲದಿದ್ದರೆ….! ಈ ಮಾತು ನಮ್ಮ ಗಜಲ್ ಅಮೃತವರ್ಷಿಣಿಗೂ ಅನ್ವಯವಾಗುತ್ತದೆ. ಗಜಲ್ ರಚನೆಯೆಂದರೆ ಗಾಢವಾದ ಮೌನದೊಳಗಿನ ಕಲರವ, ತಪಸ್ಸಿನೊಳಗಿನ ಪ್ರವಚನ ; ನಿದ್ದೆಯಲ್ಲಿನ ಸೂಪ್ತಾವಸ್ಥೆಯಂತೆ. ಗಜಲ್ ಗೋ ಪ್ರಕಾಶ್ ಸಿಂಗ್ ರಜಪೂತ್ ರವರ ಗಜಲ್ ಗಾನಯಾನ ದಣಿವರಿಯದ ಪಾರಿವಾಳದಂತೆ ಆಗಸದಲ್ಲಿ ರೆಕ್ಕೆ ಬಿಚ್ಚಿ ಹಾರಾಡಲಿ ಎಂದು ಹೃನ್ಮನದಿ ಶುಭ ಕೋರುತ್ತೇನೆ.
“ಎಲ್ಲ ಕೆಲಸ ಹೂವೆತ್ತಿದಂತೆ ಹಗುರವಾಗೋದು ಕಷ್ಟ
ಮನುಷ್ಯರಾಗಿ ಹುಟ್ಟಿದವರಿಗೂ ಮನುಷ್ಯರಾಗೋದು ಕಷ್ಟ!”
–ಮಿರ್ಜಾ ಗಾ0ಲಿಬ್
ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಮ್ಮೆ ನಿಮ್ಮ ನೆಚ್ಚಿನ ಗಜಲ್ ಉಸ್ತಾದರೊಂದಿಗೆ ನಿಮ್ಮ ಮುಂದೆ ಪ್ರತ್ಯಕ್ಷನಾಗುವೆ. ಅಲ್ಲಿಯವರೆಗೂ ಧನ್ಯವಾದಗಳು…
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಅಂದ ಚಂದ ವಾದ ಪ್ರಸ್ತುತಿಗೆ ತಲೆ ಬಾಗುವೆ
ನಿಮ್ಮ ಲೇಖನಿಯ ಚಿರ ಋಣಿ ಆಗುವೆ