ಕಾವ್ಯ ಸಂಗಾತಿ
ಗಜಲ್
ಪ್ರಕಾಶಸಿಂಗ್ ರಜಪೂತ್
ಜೀವಿಗೆ ನೋವಿನಾ ಅಭ್ಯಾಸ ಬೇಕು
ಜೀವನಕ್ಕೆ ತನ್ನದೇ ಇತಿಹಾಸ ಬೇಕು
ಊಟದಾ ಅತಿರೇಕ ರೋಗಕ್ಕೆ ಮೂಲವೋ
ದೇಹಕ್ಕೆ ಅದಕ್ಕಾಗಿ ಉಪವಾಸ ಬೇಕು
ಕಣ್ಣಲ್ಲಿ ಹೊಸತನದ ಬಯಕೆ ನಿತ್ಯವಿಲ್ಲಿ
ದೇಹಕ್ಕೆ ಆಕರ್ಷಿಸುವ ವಿನ್ಯಾಸ ಬೇಕು
ನಿತ್ಯವೆ ಜಗದಿ ಬದಲಾವಣೆಯ ಬಯಕೆ
ಅರಳಲು ಮನ ಹೂವಿಗೆ ಮಧುಮಾಸ ಬೇಕು
ಬಿಸಿಲುಗಾಳಿಯ ಮಧ್ಯೆ ತೃಷೆಯು ತಣಿಸಲು
ಮಳೆಯಲಿ ಮನ ನೆನೆಯುವ ಉಲ್ಲಾಸ ಬೇಕು
ಆಶಾ ಚಕ್ರದಿ ತಿರುಗಿ ಸೋತಿದ ಚಾಂಚಲ್ಯಕೆ
“ಪ್ರಕಾಶ”ಕೊನೆಯ ಘಟ್ಟಲಿ ಸನ್ಯಾಸ ಬೇಕು