ಕಾವ್ಯ ಸಂಗಾತಿ
ನಮ್ಮಮ್ಮ ಹೀಗಿದ್ದಳು
ಡಾ.ಸುರೇಖಾ ರಾಠೋಡ್
ಯಾವ ಭೂಮಿಗೆ
ಯಾವ ಬೆಳೆ ಬರುತ್ತದೆಂದು
ಯಾವ ಬೀಜ ಬಿತ್ತಬೇಕೆಂದು
ನೆಲ ಎಷ್ಟು
ಹಸಿಯಾಗಿರಬೇಕೆಂದು
ತಿಳಿದಿರುವ
ನಮ್ಮಮ್ಮ ಭೂವಿಜ್ಞಾನಿ ಏನಲ್ಲ
ಯಾವ ಸಮಯಕ್ಕೆ
ಯಾವ ಮಳೆಗೆ
ಯಾವ ಬೆಳೆ
ಬಿತ್ತಬೇಕೆಂದು,
ಎಷ್ಟು ಗೊಬ್ಬರ,
ಯಾವ ಗೊಬ್ಬರ
ಹಾಕಬೇಕೆಂದು
ತಿಳಿದಿರುವ
ನಮ್ಮಮ್ಮ ಬೆಳೆ ವಿಜ್ಞಾನಿಯಾಗಿರಲಿಲ್ಲ
ಯಾವ ಬೀಜ
ಎಷ್ಟು ದಿನಕ್ಕೆ
ಮೊಳಕೆ ಒಡೆಯುವುದೆಂದು,
ಯಾವ ಸಮಯಕ್ಕೆ
ಕಳೆ ತಗೆಯಬೇಕೆಂದು,
ಯಾವ ಸಮಯಕ್ಕೆ
ನೀರು ಹಾಯಿಸಬೇಕೆಂದು
ತಿಳಿದಿರುವ
ನಮ್ಮಮ್ಮ ಸಹಜ ಮನುಷ್ಯಳಾಗಿದ್ದಳು
ಯಾವಾಗ ಮಳೆ ಬಂದರೆ
ಬೆಳೆ ಚೆನ್ನಾಗಿ
ಬೆಳೆಯತ್ತ,
ಯಾವಾಗ ಮಳೆ ಬಂದರೆ
ಬೆಳೆ ಹಾಳಾಗತ್ತೆ,
ಯಾವಾಗ ಬೆಳೆಗೆ
ರೋಗ ಬರತ್ತೆಂದು,
ರೋಗಕ್ಕೆ ಯಾವ
ಔಷಧಿ
ಸಿಂಪಡಿಸಬೇಕೆಂದು
ತಿಳಿದಿರುವ
ನಮ್ಮಮ್ಮ ಪದವೀಧರೆಯಾಗಿರಲಿಲ್ಲ
ನಮ್ಮಮ್ಮ ಅಕ್ಷರ
ಕಲಿಯದೇ
ಕೃಷಿ ಕಲಿತಿರುವ
ಭೂಮಿಯೇ ಆಗಿದ್ದಳು
…..————————–
ಅಮ್ಮನಂತೆ ಚೆಂದದ ಕವಿತೆ