ಅಂಕಣ ಸಂಗಾತಿ
ನೆನಪಿನದೋಣಿಯಲಿ
ವರ್ತನೆಯವರು
ಪ್ರಲಾಪಿಸಬೇಡ ನೆನೆದು ಹಪಹಪಿಸಿ ಕಳೆದುಹೋದದ್ದನ್ನ
ಕಾಲ ಏಕಾಏಕಿ ಬಂದು ಮೇದದ್ದನ್ನ
ನೆನೆ ಇದನು ಮರೆಯದೆ
ಲುಕ್ಸಾನಿಗೆದೆ ಮರುಗದೆ
ಕಳೆದುಕೊಂಡದ್ದು ನಿನ್ನೊಡನೆ ಇದ್ದಷ್ಟು ದಿನ ಹಿಗ್ಗ ನೀಡಿದ್ದನ್ನ
ಕೆ ಎಸ್ ನಿಸಾರ್ ಅಹ್ಮದ್
ಅಂದು ವಾಯುವಿಹಾರ ಮುಗಿಸಿ ಬಂದ ರವೀಶ್ “ನೋಡು ದಿನಾ ಹಾಲಿನ ಪ್ಯಾಕೆಟ್ ತೊಗೋತಿದ್ನಲ್ಲ ಪಾಪ ಆ ವ್ಯಕ್ತಿ ಕರೋನಾ ಬಂದು ಹೋಗಿ ಬಿಟ್ನಂತೆ ಪಾಪ” ಎಂದು ಪೇಚಾಡಿಕೊಂಡರು. ಯಾಕೋ ನನಗೆ ಥಟ್ಟಂತ ನನ್ನ ಬಾಲ್ಯ ನೆನಪಾಯಿತು. ಅಂದು ನನ್ನ ಹುಟ್ಟಿದ ಹಬ್ಬ. ಅಂದೇ ಬೆಳಿಗ್ಗೆ ನಮ್ಮ ಮನೆಗೆ ಮೊಸರು ವರ್ತನೆಗೆ ಹಾಕುತ್ತಿದ್ದವಳ ಮರಣದ ಸುದ್ದಿಯೂ ಬಂತು.ಅಮ್ಮ ಹುಟ್ಟುಹಬ್ಬವನ್ನೇ ಮರುದಿನಕ್ಕೆ ಪೋಸ್ಟ್ ಪೋನ್ ಮಾಡಿ ಅವಳ ಮರಣದ ಶೋಕಾಚರಣೆ ಆಚರಿಸಿದರು. ನನ್ನ ಮುಖ ಕೊಂಚ ಗಡಿಗೆ ಗಾತ್ರ ಆಗಿದ್ದು ಸುಳ್ಳಲ್ಲ.
ವರ್ತನೆಯೆಂದರೆ ನಿಘಂಟಿನಲ್ಲಿ ನಡವಳಿಕೆ ರೂಢಿ ಎಂದು ಅರ್ಥ . ಆದರೆ ಜನಸಾಮಾನ್ಯರ ಭಾಷೆಯಲ್ಲಿ ದಿನವೂ ಅಥವಾ ನಿಯಮಿತವಾಗಿ ವಸ್ತುಗಳನ್ನು ಸರಬರಾಜು ಮಾಡಿ ತಿಂಗಳಿಗೊಮ್ಮೆ ಹಣ ಪಡೆಯುವವರಿಗೆ ವರ್ತನೆಯವರು ಎಂದು ಕರೆಯುವ ಅಭ್ಯಾಸ.
ಪ್ರತಿಯೊಂದಕ್ಕೂ ಅಂಗಡಿಯನ್ನು ಅವಲಂಬಿಸದ ಕಾಲ ಅದು. ಮನೆಯ ಬಾಗಿಲಿಗೆ ಹಾಲು ಮೊಸರು ಹೂವು ತರಕಾರಿ ಎಲ್ಲವನ್ನೂ ಒದಗಿಸುತ್ತಿದ್ದರು. ಒಮ್ಮೊಮ್ಮೆ ಈಗಿನ ಆನ್ ಲೈನ್ ಸೇವೆಗಳನ್ನು ನೋಡಿದಾಗ ಅದೇ ನೆನಪಾಗುತ್ತದೆ .ಆದರೆ ಆಗಿನ ಆತ್ಮೀಯತೆ
ಪರಿಚಯದ ಭಾವ ಇಂದಿನ ತಲುಪಿಸುವ ವ್ಯವಸ್ಥೆಗಳಿಗೆಲ್ಲಿ ಬರಬೇಕು?
ಹಾಲಿನ ಗಡಿಗೆಗಳನ್ನು ಬಿದಿರಿನ ಬುಟ್ಟಿಯಲ್ಲಿ ಇಟ್ಟುಕೊಂಡು ಬರುತ್ತಿದ್ದ ಹಾಲಿನ ಮಹದೇವಮ್ಮ ನನ್ನ ನೆನಪಿನಿಂದ ಏಕೋ ಇನ್ನೂ ಮರೆಯಾಗಿಯೇ ಇಲ್ಲ .ಹಸಿರು ಅಥವಾ ಕೆಂಪು ಚೌಕಳಿಯ ಹತ್ತಿ ಸೀರೆ ಎಲ್ಲದಕ್ಕೂ ಬಿಳಿ ರವಿಕೆಯನ್ನೇ ತೊಟ್ಟು ಹಣೆತುಂಬ ಕಾಸಗಲ ಕುಂಕುಮ ಇಟ್ಟ ನಲ್ವತ್ತೈದು ಐವತ್ತರ ಆಸುಪಾಸಿನ ಮಹಿಳೆ. ಸಾಸಿವೆ ಎಳ್ಳು ಬೆರೆಸಿದಂಥ ಬಣ್ಣದ ನೆರೆತಲೆ. ಕಾಡು ಹೂವಾದರೂ ಸರಿ ಹೂ ಮುಡಿಯದೆ ಇರುತ್ತಿರಲಿಲ್ಲ. ಕೈತುಂಬಾ ಜರುಗಲು ಸಾಧ್ಯವಿರದಷ್ಟು ಗುತ್ತನಾಗಿ ಹಸಿರುಬಳೆ ತೊಡುತ್ತಿದ್ದಳು .ತಪ್ಪದೆ ರೇಡಿಯೋದ 7 ಮೂವತ್ತೈದರ ಕನ್ನಡ ವಾರ್ತೆಯ ಸಮಯಕ್ಕೆ ಹಾಲು ತರುತ್ತಿದ್ದ ಅವಳ ಸಮಯಪಾಲನೆ ನಿಜಕ್ಕೂ ಆಶ್ಚರ್ಯ . ಆಗ ಲೀಟರ್ ಕಾಲ ಅಲ್ಲ ಪಾವು ಸೊಲಿಗೆ ಗಳಲ್ಲಿ ಅಳತೆ. ಹೆಚ್ಚು ಹಾಲು ತೆಗೆದುಕೊಂಡ ದಿನ ಒಂಟಿಕೊಪ್ಪಲ್ ಕ್ಯಾಲೆಂಡರ್ನಲ್ಲಿ + ಚಿಹ್ನೆ ಹಾಕಿ ಎಷ್ಟು ಹೆಚ್ಚು ಎಂದು ಬರೆಯುವ ಕೆಲಸ ಹಾಗೆಯೇ ತೆಗೆದುಕೊಳ್ಳದ ,ಕಡಿಮೆ ತೆಗೆದುಕೊಂಡಾಗ _ ಚಿಹ್ನೆ ಹಾಕಿ ಗುರುತು ಮಾಡುತ್ತಿದ್ದುದು . ತಿಂಗಳ ಕೊನೆಯಲ್ಲಿ ಅವಳು ಹೇಳಿದ ಲೆಕ್ಕ ನಮ್ಮದಕ್ಕೆ ತಾಳೆಯಾಗುತ್ತಿತ್ತು ಅಷ್ಟೊಂದು ಮನೆಗಳ ಲೆಕ್ಕಾಚಾರ ಬಾಯಿಯಲ್ಲೇ ನೆನಪಿಡುವ ಅವಳ ಬುದ್ದಿವಂತಿಕೆ ನಿಜಕ್ಕೂ ಶ್ಲಾಘನೀಯವೇ. ಮಕ್ಕಳ ಮದುವೆ ಮಾಡಿದಾಗಲೆಲ್ಲ ನವವಧುವರರನ್ನು ಕರೆದುಕೊಂಡು ಬಂದು ಆಶೀರ್ವಾದ ಕೊಡಿಸುತ್ತಿದ್ದಳು . ವಾರದಲ್ಲಿ ಒಂದೋ ಎರಡೋ ದಿನ ಹನ್ನೊಂದು ಗಂಟೆಗೆ ವಾಪಸ್ಸು ಹೋಗುವಾಗ ಅಮ್ಮ ಕೊಟ್ಟ ತಿಂಡಿ/ಊಟವನ್ನು ಮಾಡಿ ಹೋಗುತ್ತಿದ್ದಳು. ಬೆಳಿಗ್ಗೆ ಬಂದಾಗ ಒಮ್ಮೊಮ್ಮೆ ಕೇಳಿ ಕಾಫಿ ಕುಡಿಯುತ್ತಿದ್ದಳು. ನಾನು ದೊಡ್ಡವಳಾದಾಗ ಕೊಬ್ಬರಿ ತುಪ್ಪ ಆರೈಕೆಗೆಂದು ಅಕ್ಕರೆಯಿಂದ ತಂದುಕೊಟ್ಟದ್ದು ಇನ್ನೂ ಹಸಿರು . ನನ್ನ ಕಡೆಯ ತಂಗಿಗೆ 1ಪುಟ್ಟ ಗಿಂಡಿಯ ತುಂಬಾ ಹಾಲು ಕೊಡುತ್ತಿದ್ದಳು; ಅದಕ್ಕೆ ಲೆಕ್ಕವಿಡುತ್ತಿರಲಿಲ್ಲ.
ಮೊಸರಿನ ಗಂಗಮ್ಮ ಇವಳಿಗಿಂತ ಭಿನ್ನ
ಸ್ವಲ್ಪ ನಾಜೂಕಿನ ನಾರಿ ..ಆಗಿನ ಕಾಲದ ಲೆಕ್ಕದಲ್ಲಿ ಸ್ಟೈಲ್ ವಾಲಿ . ಮೂವತ್ತರ ಒಳಗಿನ ವಯಸ್ಸು .ಮಧ್ಯಾಹ್ನ ಹನ್ನೊಂದು ಗಂಟೆ ಸಮಯಕ್ಕೆ ಬರುತ್ತಿದ್ದಳು .ನಾವು ಶಾಲೆಗೆ ಹೋಗದ ದಿನಗಳಲ್ಲಿ ಮಾತ್ರ ಅವಳ ದರ್ಶನ ಭಾಗ್ಯ . ಮೊಸರು ಮಜ್ಜಿಗೆಯ ಗಡಿಗೆಗಳನ್ನು ಬಿದಿರಿನ ಬುಟ್ಟಿಯಲ್ಲಿ ಒಪ್ಪವಾಗಿ ಇಟ್ಟು ಕೊಂಡು ಬಂದು ಅಚ್ಚುಕಟ್ಟಾಗಿ ಅಳೆದುಕೊಡುತ್ತಿದ್ದಳು. ಇವಳಿಗೋ ಲೆಕ್ಕದ ಗಂಧವೇ ಇಲ್ಲ .ಅದನ್ನು ಮುಚ್ಚಿಟ್ಟುಕೊಳ್ಳಲು “ನೀವು ಕೊಟ್ಟಷ್ಟು ಕೊಡಿ ಮೋಸ ಮಾಡೋರಲ್ಲ ಬಿಡಿ” ಅಂದುಬಿಡುತ್ತಿದ್ದಳು. ಪಾಪ 9 ತಿಂಗಳು ತುಂಬುವವರೆಗೂ ಗರ್ಭಿಣಿ ಹೆಂಗಸು ಬಂದು ಮೊಸರು ವ್ಯಾಪಾರ ಮಾಡ್ತಿದ್ದಳು. ಹೆರಿಗೆಯಲ್ಲಿ ಕಷ್ಟವಾಗಿ ಸತ್ತುಹೋದಳು. ಈ ಪ್ರಸಂಗವನ್ನೇ ನಾನು ಮೇಲೆ ಹೇಳಿದ್ದು.
ಮನೆಯ ತೋಟದಲ್ಲಿ ರಾಶಿ ಹೂ ಬಿಟ್ಟಿದ್ದರಿಂದ ಹೂವಿಗೆ ವರ್ತನೆಯವರಿರಲಿಲ್ಲ . ಆದರೆ ಒಬ್ಬ ಹಣ್ಣು ಮುದುಕಿ ಹತ್ತಿರದ ಹಳ್ಳಿಯಿಂದ ಸಂಪಿಗೆ ಕೆಂಡ ಸಂಪಿಗೆ ಹೂ ತರುತ್ತಿದ್ದರು. ಬಂದಾಗಲೆಲ್ಲ ಅಮ್ಮ ಬೋಣಿ ಮಾಡಬೇಕು ಕಾಫಿ ತಿಂಡಿ ತೀರ್ಥ ಕೊಡಬೇಕು ಅವರಿಗೆ .ಪೈಸೆಗೆ 1ಸಂಪಿಗೆ ಹೂವು ಹತ್ತು ಇಪ್ಪತ್ತು ಸಂಪಿಗೆ ಹೂಗಳನ್ನು ಪೋಣಿಸಿ ದಿಂಡೆ ಮಾಡಿ ಮುಡಿದು ಕೊಳ್ಳುತ್ತಿದ್ದೆವು. ಆಕೆಯ ಹೆಸರೇನೋ ಮರೆತು ಹೋಗಿದೆ . ಆದರೆ ಏಕವಚನದಲ್ಲಿ ಮಾತನಾಡಿಸಿ ಆನಂತರ ನಮ್ಮ ತಂದೆಯಿಂದ ಬೈಗುಳ ಮತ್ತು ಹಾಗೆ ಮಾಡಬಾರದೆಂಬ ಧೀರ್ಘ ಲೆಕ್ಚರ್ ಕೇಳಿದ್ದು ಮರೆತಿಲ್ಲ. ಭಿಕ್ಷುಕರನ್ನೂ ಬಹುವಚನದಿಂದ ಮಾತನಾಡಿಸುವ ನನ್ನ ಅಭ್ಯಾಸಕ್ಕೆ ಇದು ನಾಂದಿಯಾಗಿತ್ತು.
ಹಾಗೆಯೇ ದೂರದ ಎಲೆತೋಟದ ಬಳಿಯಿಂದ ತಂದು ವಿಳ್ಳೆಯದೆಲೆ ಕವಳಿಗೆ ಲೆಕ್ಕದಲ್ಲಿ ಕೊಡುತ್ತಿದ್ದ ಎಲೆಯ ನಂಜಮ್ಮ ಸಹ ಒಬ್ಬರು ವರ್ತನೆಯವರು . ಅವರ ಕಿವಿಯ ತೂತು ತುಂಬಾ ದೊಡ್ಡದಾಗಿದ್ದು ಈಗ ನಾವು ಗೌರಿ ಬಾಗಿನಕ್ಕೆ ಇಡುವ ಬಳೆಬಿಚ್ಚೋಲೆಯನ್ನೇ ಕಿವಿಗೆ ಧರಿಸಿಕೊಳ್ಳುತ್ತಿದ್ದುದು ನಮ್ಮ ಬೆರಗಿಗೆ ಆಗ ಕಾರಣವಾಗಿತ್ತು. ಆಕೆಯೂ ಬಂದಾಗಲೆಲ್ಲಾ ಕಾಫಿ ಕೇಳಿ ಕುಡಿಯುತ್ತಿದ್ದರು. ಒಮ್ಮೊಮ್ಮೆ ಮಾತ್ರ ಊಟ ಮಾಡುತ್ತಿದ್ದರು.
ಇನ್ನೊಬ್ಬ ವ್ಯಕ್ತಿ ಸೈಕಲ್ ನಲ್ಲಿ ಬೇರೆ ಬೇರೆ ಡಬ್ಬಗಳನ್ನು ಕಟ್ಟಿಕೊಂಡು ಬಂದು ಎಣ್ಣೆ ಮಾರುತ್ತಿದ್ದುದು ನೆನಪು . ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿಎಣ್ಣೆ, ಹರಳೆಣ್ಣೆ ಇದೆಲ್ಲಾ ಆತನ ಬಳಿಯೇ ತೆಗೆದುಕೊಳ್ಳುತ್ತಿದ್ದುದು. ಪ್ರತೀ ಶನಿವಾರ ಬರುತ್ತಿದ್ದರು ಅನ್ನಿಸತ್ತೆ . ಆತನ ತಿಳಿನೀಲಿ ಷರಟು ಹಾಗೂ ತಲೆಗೆ ಕಟ್ಟಿಕೊಳ್ಳುತ್ತಿದ್ದ ಟವಲ್ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ .
ಇನ್ನೊಬ್ಬಾತನೂ ಹಾಗೆ ಸೈಕಲ್ಲಿನಲ್ಲಿ ಬರುತ್ತಿದ್ದರು. ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ತಂದು ಮಾರುತ್ತಿದ್ದರು . ಆಗೆಲ್ಲಾ ಕೆಜಿಯ ಲೆಕ್ಕವೇ ಇಲ್ಲ ಇಡೀ ಹಲಸು, ಗೂಡೆಗಟ್ಟಲೆ ಮಾವು ಕಿತ್ತಳೆ, ಗೊನೆಬಾಳೆ ಹೀಗೆಯೇ. ತೆಂಗಿನಕಾಯಿಯಂತೂ
ಪ್ರತಿ ಬಾರಿಯೂ ತರುತ್ತಿದ್ದರು . ಸೊಪ್ಪು ತರಕಾರಿಯ ತಾಯಮ್ಮ, ಪೌರಕಾರ್ಮಿಕ ನಾಗಿ, ತೋಟದ ಕೆಲಸ ಮಾಡಲು ಬರುತ್ತಿದ್ದ ರಂಗಯ್ಯ ಎಲ್ಲರೂ ನೆನಪಿನಲ್ಲಿದ್ದಾರೆ .ಮನೆಗೆ ಬರುವ ಅತಿಥಿಗಳಿಗೆ ಕೊಡುವಂತೆ ಕಾಫಿ ತಿಂಡಿ ಊಟ ಕೊಟ್ಟು ಆದರಿಸುತ್ತಿದ್ದ ಅಮ್ಮ ಅವರಿಗೆಲ್ಲಾ ಅನ್ನಪೂರ್ಣೆಯೇ. ಹಬ್ಬಗಳ ವಿಶೇಷ ಭಕ್ಷ್ಯಗಳು, ಗೋಕುಲಾಷ್ಟಮಿ ತಿಂಡಿ, ಸಂಕ್ರಾಂತಿಯ ಎಳ್ಳು ಎಲ್ಲದರಲ್ಲೂ ಅವರಿಗೆ ಪಾಲು ಇದ್ದೇ ಇರುತ್ತಿತ್ತು. ಅದರ ಜೊತೆಗೆ ಮಕ್ಕಳನ್ನು ಚೆನ್ನಾಗಿ ಓದಿಸಿರಿ ಎಂಬ ಬೋಧನೆಯೂ ಕೂಡ. ಹಳೆಯ ಬಟ್ಟೆಗಳು, ಉಪಯೋಗಿಸಿದ ವಸ್ತುಗಳು ಇವನ್ನೆಲ್ಲಾ ನೆನಪಿನಲ್ಲಿಟ್ಟುಕೊಂಡು ಇವರಿಗೆ ಇವರಿಗೆ ಎಂದು ವಿತರಿಸುತ್ತಿದ್ದುದು, ಅವರ ಮನೆಯ ಸಮಾರಂಭಗಳಿಗೆ ಉಡುಗೊರೆ ಹಣ ಕೊಡುತ್ತಿದ್ದುದು ಆಗ ಏನೂ ಅನಿಸದಿದ್ದರೂ ಈಗ ಅಮ್ಮ ಅಪ್ಪನ ವಿಶಾಲ ಮನೋಭಾವದ ಅರಿವಾಗಿಸುತ್ತಿದೆ.
ತೀರ ಬಡತನದ ಹಾಲು ಕೊಳ್ಳಲು ಶಕ್ತಿಯಿರದ ಕುಟುಂಬವೊಂದಿತ್ತು. ಆ ಮನೆಯ ಮಗುವಿಗೆ ಅಂತ 1 ಲೋಟ ಹಾಲು ಕೊಟ್ಟು ಹೋಗ್ತಿದ್ದರು ವರ್ತನೆಯವರು ಆಗೆಲ್ಲಾ. ಈಗ ಆ ರೀತಿಯ ಜನರನ್ನು ಕಾಣಲು ಸಾಧ್ಯವೇ?
ಈಗಿನ ಹಾಗೆ ಸದಾ ಕೈಯಲ್ಲಿ ಹಣ ಓಡಾಡದ ಅಂದಿನ ದಿನಗಳಲ್ಲಿ ಸಂಬಳ ಬಂದ ಕೂಡಲೇ ಇವರಿಗೆಲ್ಲ ಹಣಪಾವತಿ .ಒಮ್ಮೆ ಹೆಚ್ಚು ಲೆಕ್ಕವಾದಾಗ ಸ್ವಲ್ಪ ಉಳಿಸಿಕೊಂಡು ಮುಂದಿನ ತಿಂಗಳಿಗೂ ಕ್ಯಾರಿ ಫಾರ್ವರ್ಡ್ ಮಾಡುತ್ತಿದ್ದುದು.
ಸಾವು ಮದುವೆ ಊರಿನ ಓಡಾಟ ಅಂತ ಹೆಚ್ಚುವರಿ ಖರ್ಚುಗಳು ಇದ್ದಾಗಲೂ ಅಷ್ಟೇ. ಎಲ್ಲ ಸಮಯಕ್ಕೂ ಫ್ಲೆಕ್ಸಿಬಲ್. ಹಾಗೆಯೇ ಅವರಿಗೆ ಹೆಚ್ಚಿನ ಅಗತ್ಯವಿದ್ದಾಗ ನಮ್ಮಿಂದ ಮುಂಗಡವಾಗಿ ಹಣ ತೆಗೆದುಕೊಂಡು ತಿಂಗಳು ತಿಂಗಳು ಉತ್ತಾರ ಹಾಕ್ಕೊಳ್ತಾ ಹೋಗುವುದು. ಆ ಲೆಕ್ಕಾಚಾರಗಳನ್ನು ಕೇಳಿದರೆ ಒಂಥರಾ ಖುಷಿಯ ಅನುಭವ .ಎಲ್ಲಾ ಬಾಯಿಮಾತಿನ ಗಣಿತ ವಿಶ್ವಾಸದ ಲೆಕ್ಕಾಚಾರ .
ಬರೀ ವ್ಯಾವಹಾರಿಕವಾಗಿಯಲ್ಲದೆ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಗಳಿಂದ ಕೂಡಿದ ಸಂಬಂಧಗಳು ಅವು. ಒಬ್ಬರಿನ್ನೊಬ್ಬರ ಹರ್ಷಕ್ಕೆ ಸಂತಸಪಟ್ಟು ಸಂಕಟದಲ್ಲಿ ಸಹಾನುಭೂತಿ ತೋರುತ್ತಿದ್ದ ಅಂದಿನ ಕಾಲ ಸಮರಸದ ಪಾಠವನ್ನು ಸೋದಾಹರಣ ಕಲಿಸುತ್ತಿತ್ತು. ನಿಜ! ಜಾತಿಯ ಕಟ್ಟುಪಾಡುಗಳು ಆಗ ಸಮಾಜದಲ್ಲಿ ಇನ್ನೂ ಬಿಗಿಯಾಗಿತ್ತು. ಅದನ್ನು ಮೀರದೆಲೆಯೇ ಸೌಹಾರ್ದದ ನಂಟಿತ್ತು ಮಿಡಿಯುವ ತುಡಿತವಿತ್ತು. ಜಾತಿಯ ಬೇಲಿಯನ್ನೂ ಮೀರಿ ಅಂತಃಕರಣದ ಸರಿತೆ ಹರಿಯುತ್ತಿತ್ತು . ಬರುಬರುತ್ತಾ ಅಂಗಡಿಗಳು ಮಾಲ್ ಗಳು ಹೆಚ್ಚಿದಂತೆಲ್ಲಾ ವರ್ತನೆಯವರು ಕಡಿಮೆಯಾಗಿದ್ದಾರೆ . ಇದ್ದರೂ ಮೊದಲಿನಂತೆ ವ್ಯವಧಾನದಿಂದ ಕೂತು ಮಾತನಾಡುವಷ್ಟು ಕಷ್ಟಸುಖ ವಿಚಾರಿಸುವಷ್ಟು ಸಮಯ ತಾಳ್ಮೆ ಯಾರಿಗಿದೆ? ಕಾಲನ ನಾಗಾಲೋಟದಲ್ಲಿ ನಾವೂ ರೇಸಿಗೆ ಬಿಟ್ಟ ಕುದುರೆಗಳಂತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಓಡುತ್ತಲೇ ಇದ್ದೇವೆ . ವರ್ತನೆಯವರು ಇರಲಿ ಮನೆಯವರ ಜತೆ ತಾನೆ ಸಮಾಧಾನದಿಂದ ಕುಳಿತು ಮಾತನಾಡುವ ಹರಟೆ ಹೊಡೆಯುವ ಕಷ್ಟಸುಖ ಹಂಚಿಕೊಳ್ಳುವ ಪುರುಸೊತ್ತಾದರೂ ನಮಗಿದೆಯೇ?
ವಿಲಾಪಿಸಬೇಡ ಕಳೆದುಕೊಂಡದ್ದಕ್ಕೆ
ನೀನೇ ಕಳೆದು ಹೋಗುವ ಮುನ್ನ
ಮೃತ್ಯು ಹೊತ್ತೊಯ್ದು ಮತ್ತೊಬ್ಬನಿಗೆ ಅರ್ಪಿಸುವ ಮುನ್ನ
ನಿನ್ನ ಜೀವದನರ್ಘ್ಯ ಅಪರಂಜಿಯನ್ನ
ನಿಸಾರ್ ಅಹ್ಮದ್
ನಿಜ! “ಪುರಾಣಮಿತ್ಯೇವ ನ ಸಾಧುಸರ್ವಂ” ಎಂಬಂತೆ ನೆನಪಿನ ಭಿತ್ತಿಯ ಹರಳುಗಳನ್ನು ನೋಡಿ ನೆನೆದು ಖುಷಿ ಪಡಬೇಕು. ಇಲ್ಲದುದಕ್ಕೆ ಪರಿತಪಿಸಬಾರದು. ಕಾಲಪ್ರವಾಹದಲ್ಲಿ ಸಾಗಿಹೋಗುವ ಹುಲ್ಲು ಕಡ್ಡಿಯಂತೆ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಾ ಹಳೆಯ ನೆನಪಿನ ಮೆಲುಕಿನ ಬೇರುಗಳಲ್ಲಿ ಹೊಸ ಅನುಭವದ ಚಿಗುರು ಪಲ್ಲವಿಸುತ್ತಿರಬೇಕು. ಇದುವೇ ಜೀವನ ಇದು ಜೀವ ತಾನೇ? “ಕಾಲಾಯ ತಸ್ಮೈ ನಮಃ “.
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು.
ಪ್ರಕಟಣೆಗಾಗಿ ಸಂಪಾದಕರಿಗೆ ಧನ್ಯವಾದಗಳು
ಸುಜಾತಾ ರವೀಶ್