ಕಥಾ ಸಂಗಾತಿ

ನಿರ್ಧಾರ

ವಿಜಯಾಮೋಹನ್

Indian Woman I by artist Agacharya A | ArtZolo.com

ನಿರ್ಧಾರ

ಮನೇಲಿ ಇಂಗೆ ನನ್ನ ತಾಯಿಯ ಸಲುವಾಗಿ,ಒಬ್ಬರಿಂದ ಒಬ್ಬರಿಗೆ ಹುಟ್ಟಿಕೊಂಡಿದ್ದ  ಮಾತುಗಳು, ಅವು ಬರೀ ಮಾತಾಗಿರದೆ, ನನ್ನ ಹೃದಯವನ್ನ ಘಾಸಿ ಮಾಡುವಂತೆ ಮಸಿಯುತ್ತಿದ್ದವು. ಅವು ಇಷ್ಟೊಂದು ವಿಕೋಪಕ್ಕೆ ತಿರುಗುತ್ತವೆ ಎಂದು, ನಾನು ಕೂಡ ಯಾವತ್ತು ಎಣಿಸಿರಲಿಲ್ಲ. ಇಂಗೆ ಬದುಕಿನ  ಸಂದರ್ಭಗಳು ಒಂದೆ ಸಮವಾಗಿರುವುದಿಲ್ಲ, ಅಥವ ನಾವಂದುಕೊಂಡಂತೆ ಸುಲಭವಾಗೂ ಇರುವುದಿಲ್ಲ, ಈಗ ಮೂರು ದಿವಸದಿಂದ ಮನೇಲಿ, ನನ್ನ ಮತ್ತು ಅಮ್ಮನ ವಿರುದ್ದ  ಮಾತನಾಡುತ್ತಿರುವ ದ್ವನಿಗಳು.ಎಗ್ಗು ಸಿಗ್ಗಿಲ್ಲದೆ ನನ್ನ ವಿರುದ್ದ ಎದ್ದು ನಿಂತಿರುವುದರಿಂದ. ನಾನು ಯಾರ ಜೊತೆ ಮಾತಾಡ್‌ದಂಗೆ ಇದ್ದು ಬಿಟ್ಟಿದ್ದೆ,  ನೆನ್ನೆ ಸಂಜೇಲಿ ಮನೆಯ ಡೈನಿಂಗ್ ಟೇಬಲ್ಲಿನ ಮ್ಯಾಲಿದ್ದ. ನಾಕು ತುತ್ತು ಅನ್ನ ತಿಂದಿದ್ದು ಬಿಟ್ಟರೆ. ಬೆಳಿಗ್ಗೆಯಿಂದ ಒಂದು ತೊಟ್ಟು ರಸಾ ಅನ್ನೋದು ಇಳಿದಿರಲಿಲ್ಲ, ನೀನು ತಿನ್ನು ಬಾ ಅನ್ನುವವರೆಲ್ಲ, ಬಿಂಕವಾದ ಮುಷ್ಕರಕ್ಕೆ ತಿರುಗಿಕೊಂಡಿದ್ದರು. ಅಂಗಾಗೆ ನನ್ನೊಳಗೆ ನಾನಿರಲಾಗದೆ, ಕಾರು ತಗೊಂಡು ಸೀದ ಊರಿನ ಕಡೆ ಹೊರಟೆ, ಮೊದಲಿನಿಂದಲು ನಾನು ಹಸಿವು ತಡಕೊಂಡವನಲ್ಲ. ಒಂತರಾ ಹಾಳೂರ ದೆವ್ವಿನಂಗೆ ಉಂಡವನು,ಅಂತ ಹಸಿವನ್ನು ಅದುಮಿಕೊಂಡು. ಕಾರಿನಲ್ಲಿ ಬರುತ್ತಿದ್ದವನಿಗೆ.ನಮ್ಮೂರ  ಹೋಬಳಿ ಹೆಡ್‌ಕ್ವಾರ್ಟರ್ ಸಿಕ್ಕಿತ್ತು, ಕೂಡ್ಲೆ ಬಸ್‌ಟಾಪಿನ ಪಕ್ಕ ಎರಡು ದೊಡ್ಡ ವಿಶಾಲವಾದ, ಕೆಂಖೇಸರಿ ಮರದ ಕೆಳಗೆ. ನನ್ನ ಕಾರನ್ನು ನಿಲ್ಲಿಸಿದೆ, ಸೀದಾ ಹೋಟೆಲ್ ಶಾರದಾ ಎಂಬಲ್ಲಿಗೆ ಹೋಗಿ ಕುಂತು ಕೊಂಡೆ, ಹೋಟೆಲ್ ಸರ್ವರ್‌ನತ್ತಿರ ಅಲ್ಲಿರುವ ತಿಂಡಿಗಳ ವಿವರವನ್ನು ತಿಳುಕೊಂಡು, ಒಳ್ಳೆದೊಂದು ದೋಸೆ ಕೊಡಪ್ಪ ಎಂದೇಳಿ ಕಾಯುತ್ತ ಕುಂತು ಕೊಂಡೆ. ಒಳಗೆ ಹೋದ ಸರ್ವರ್ ಎಷ್ಟೊತ್ತಾದರು ಬರಲೇ ಇಲ್ಲ,  ನನಗೆ ಬರಬೇಕಿರುವ ದೋಸೆಗೋಸ್ಕರ ಕಾಯ್‌ತಾ ಕೂತಿದ್ದೆ, ಅಷ್ಟೊತ್ತಿಗಾಗಲೆ ನಮ್ಮೂರಿನ ವಾಡೆ ಮನೆಯ ನಾಗನೆಂಬೋನು ಬಂದು, ನನ್ನ ಪಕ್ಕಕ್ಕೆ ಕುಂತುಕೊೊಡು. ಯಣ ಯಾಕಣ ಇಂಗ್ ಬಡವಾಗಿದ್ದೀಯ? ಅಂದ, ಅವನ ಕೆನ್ನೆಗಳ ಮೇಲಿದ್ದ ಕಣ್ಣುಗಳು ರೋಡು ಪಕ್ಕದಲ್ಲಿನ ಗುಂಡಿಗಳಂತೆ ಒಳಕ್ಕೋಗಿದ್ದವು. ತಲೆ ಅಲ್ಲಲ್ಲಿ ಬಿಳಿ ಪುಕ್ಕದಂತೆ ತರಕಲಾಗಿ ಬೆಳ್ಳಗಾಗಿತ್ತು, ನನಗೊಂದು ಗಳಿಗೆ ಇವನ್ಯಾರಪ್ಪ ಅಂಬೊ ತಬ್ಬಿಬ್ಬಿನಲ್ಲಿ. ಅವನನ್ನೆ ಬಿಟ್ಟ ಕಣ್ಣು ಬಿಟ್ಟಂತೆ ದಿಟ್ಟಿಸಿ ನೋಡಿದೆ. ಯಾಕಣ ನನ್ ಗುರುತ್ ಸಿಗಲಿಲ್ಲವೆ? ನಾನ್ ಕಣಣ ವಾಡೆ ಮನೆ ನಾಗ ಅಂದ, ತಟಕ್ಕನೆ ನನ್ನ ಮನಸ್ಸಿಗೆ ಅರಿವಾಯಿತು, ನಾಗ ಚೆನ್ನಾಗಿದ್ದೀಯೇನೊ ಅಂದೆ ಕಕ್ಕುಲಾತಿಯಿಂದ. ಏನ್ ಚಂದ್‌ವೊ ಏನ್ ಚಾರ್‌ವೊ? ನಿಮ್ಮಂಗೆ ನೆರಳು ಮರೇಲಿ ನಾವು ಬದುಕೋರಲ್ಲ, ಸುಖುವಾಗಿ ಉಣ್ಣೋರಲ್ಲ, ಬೆಳಗೆದ್ರೆ ಬಿಸಿಲು ಬ್ಯಾಗೆ ಅನ್ನದಂಗೆ ಕೂಲಿ ಕೆರೀಬೇಕು  ಹಿಟ್ಟುಣ್ಣಬೇಕು. ತಗಿಯಣ ನನ್ ಚೆಂದಾನ ಏನಂತ ಕೇಳ್‌ತ್ತಿಯಾ? ಎಂದು ಮುಖ ಕಿವುಚಿಕೊಂಡು ಹೇಳ್‌ದ. ನನಗು ಅವನನ್ನು ನೋಡಿ ಪೆಚ್ಚೆನಿಸಿತು, ಎಂಗೊ ಮನೇಲೆಲ್ಲಾ ಚೆನ್ನಾಗವರೇನಪ್ಪ ಅಂದೆ. ಊನಣ ಎಲ್ಲಾ ಚೆನ್ನಾಗವರೆ ಅಂದವನು ಬಾಯಿಗೆ ಬಿಡುವು ಕೊಡದೆ. ನಿಮ್ಮನೇಲಿ  ಗಂಗಮ್ಮಜ್ಜಿ ಎಂಗ್ಯೆತಣ? ಅಂದ ಅವನು ತಟ್ಟೆಂದು ಕೇಳಿದ ಪ್ರಶ್ನೆಗೆ. ಯಾವುದನ್ನು ಸಲೀಸಾಗಿ ಹೇಳಲಾಗಲಿಲ್ಲ. ಯಾಕೆಂದರೆ ನನ್ನ ಮಾತಿಗೆ ಅವನು ಅವಕಾಶ ಕೊಡದಂಗೆ, ಕೂಡಲೆ ನೀವೆಂಗಾ ಇರ‍್ರಪ್ಪ, ಗಂಗಮ್ಮಜ್ಜೀನ್ ಮಾತ್ರ ಸೆಂದಾಕ್ ನೋಡ್‌ಕಳಪ್ಪ. ನಿಮಗೆಲ್ಲಾ ಹಿಟ್ಟು-ಬಟ್ಟೆ ಹೊಂಚಾಕಾಗಿ, ನೀವು ಈ ಮಟ್ಟಕ್ಕೆ ಬರಾಕಾಗಿ, ಆವಮ್ಮ ಬಾಳಾ ಕಷ್ಟ ಬಿದ್ದೈತೆ ಕಣ್ರಪ್ಪ. ಅವಮ್ಮನೆ ಇಲ್ಲದಿದ್ರೆ ನೀವು ಇಷ್ಟು ಮಾತ್ರಕ್ಕೆ ಬರ್‌ತಿರಲಿಲ್ಲ ಕಣಪ್ಪ, ಅಂತ ಅವನ ಜೇಬಲ್ಲಿದ್ದ ಮೋಟು ಬೀಡಿಯೊಂದನ್ನ ತಡಕಿ ತಡಕಿ ತಗದ, ಪಕ್ಕದ ಟೇಬಲ್ಲಿನವನ ಕಡೆಗೆ ತಿರುಗಿ. ಯಣ ಬೆಂಕಿ ಪಟ್ನ ಇದ್ರೆ ಕೊಡು ಅಂದ, ಇರೊ ನಾಗ ತಿಂಡಿ ತಿನ್ನಿವಂತೆ,ಬೀಡಿ ಆಮೇಲ್ ಸೇದೀವಿ ಅಂದೆ ಉನ್ನಾರವಾಗಿ. ಬ್ಯಾಡ್  ಕಣಣ  ಮನೆಯಾಗೆ ಸಪ್ಪೆಸರು, ಬಿಸಿ ಮುದ್ದೆ ಉಂಡು ಬಂದಿದ್ದೀನಿ. ನನಗೆ ತಿಂಡಿ ಬ್ಯಾಡ ಕಣಪ್ಪ, ಒಂದ್ ಲೋಟ ಟೀ ಕುಡಿಯಾನ ಅಂತ ಒಳಕ್ ಬಂದೆ ನಿರ್ವಿಕಾರವಾಗಿ  ಮಾತಾಡದ. ಅವನ ಆ ಮಾತಿಗೆ ನಾನು ಏನೊಂದು ಉತ್ತರಿಸಲಿಲ್ಲ, ಎಂಗೋ ನೀನ್ ಸಿಕ್ಕಿದ್ದಕ್ಕೆ ಬಾಳ ಖುಷಿಯಾತು ಅಂದ, ಯಾಕಪ್ಪ ನನ್ ಬಗ್ಗೆ ನಿನಗೆ ಅಂತಾ ಖುಷಿ ಮನಸ್ಸು ಉಬ್ಬಿಸಿಕೊಂಡು ಕೇಳಿದೆ, ಇನ್ನೇನಪ್ಪ ಎಲ್ಲೊ ಹೋಗಿ ಆ ಮಾಯಾ ನಗರದಲ್ಲಿ ಸೇರ್‌ಕಂಡಿದ್ದಿರಾ. ನಿಮ್ಮಂತವರ ಮುಖಾನ  ನಾವು ವರ್ಷಾನುಗಟ್ಲೆ ನೋಡಾಕಾಗಲ್ಲ. ಯಾಕಂದ್ರೆ ನಮ್ಮವರು, ತಮ್ಮವರು, ಕುಲೊಸ್ತರು, ಅಣ್ಣತಮ್ಮಂದ್ರು, ಹಬ್ಬ ಹರಿದಿನಗಳು, ಅನ್ನುವಂತ ಕಕ್ಕುಲಾತಿ ಅಂಬೋದು. ನಮ್ಮನ್ನ ಬಾದ್‌ಸಂಗೆ ನಿಮ್ಮುನ್ನ ಬಾದ್‌ಸಲ್ಲ ಕಣಣ್ಣ, ಅದಿಕ್ಕೆ ನಾನು ಈ ಮಾತೇಳ್‌ದೆ. ನೀವೆಲ್ಲ ನೆರಳು ಮರೇಲಿರೋರು ಸುಖಪುತ್ರರು, ನಿಮಗೆ ದುಡ್ಡೊಂದಿದ್ರೆ ಸಾಕು,  ನಿಮ್ಮನ್ನ ಯಾವುದು ಬಾದ್‌ಸಲ್ಲ ಅಂದ. ಇಷ್ಟು ಮಾತುಗಳನ್ನ ನನಗೆ ಅವಕಾಶವಿಲ್ಲದಂಗೆ. ಅವನೊಬ್ಬನೆ ಲೇವಡಿ ಮಾಡುತ್ತ ಮಾತಾಡ್ ಬುಟ್ಟ  . ಮುಖ ಕಿವುಚಿಕೊಂಡಿತ್ತು. ನಾನು ಏನೊಂದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅವನ ಹರಿತವಾದ ಮಾತುಗಳಿಗಾಗಿ, ನನ್ನ ಮುಖವು ನನಗರಿವಿಲ್ಲದಂಗೆ ಕಳಾ ಹೀನವಾಗಿತ್ತು. ಮುಂದಿದ್ದ ತಟ್ಟೆಯೊಳಗಿನ ದೋಸೆಯು ಕೂಡ, ಕಾವು ಕಳೆದುಕೊಂಡು ತಣ್ಣಗೆ ಮೈ ಚಾಚಿಕೊಂಡಿತ್ತು.ಅವನು ಸುತಾರಾಂ ನನಗೆ ತಿಂಡಿ ಬ್ಯಾಡವೇ ಬ್ಯಾಡಂದ, ನಾನು ದೋಸೆಯ ಚೂರನ್ನ ಮುರಿದು ಬಾಯಿಗಿಟ್ಟು ಕೊಂಡಾಗ. ಅದರ ರುಚಿಯೆ ಸರಿಯಾಗ್ಲಿಲ್ಲವೊ? ನನ್ ಬಾಯೆ ರುಚಿಕಳಕಂತೊ? ನಾಗನ  ಬಾಯಿಂದ ಬಂದ ಎಲ್ಲ ಮಾತುಗಳು, ನನ್ನ ಮನಸ್ಸನ್ನ ಅಪ್ಪಟವಾಗಿ ಕುಕ್ಕಿದವು.

  ಅದು ಯಾಕೆಂದರೆ ಊರಲ್ಲಿ ನಮ್ಮ ದೊಡ್ಡಣ್ಣಯ್ಯನ ಹೊಲವೊಂದನ್ನ, ಈ ನಾಕೈದು ವರ್ಷದಿಂದ ಇದೇ ನಾಗನೆ ಕೋರಿಗೆ ಮಾಡುತ್ತಿದ್ದ. ಮೈಸೂರಿನಲ್ಲಿದ್ದ ನಮ್ಮಣ್ಣ, ಸರಿಯಾಗಿ ಬೆಳೆಯ ಖರ್ಚು ಕೊಡಲಾರದೆ, ಕಿತಾಪತಿ ಮಾಡ್‌ತ್ತಿದ್‌ನಂತೆ. ನೀನಿಷ್ಟೇನೆ ಬೆಳೆಯೋದು? ನಮಗಿಷ್ಟೇನೆ ಕೊಡೊದು? ಯಾಕೋ ಈಗೀಗ ಗಾಂಚಾಲಿ ಜಾಸ್ತಿ ಮಾಡ್‌ತ್ತೀಯ? ಎಂದು ಸಿಕ್ಕಾಗಲೆಲ್ಲ, ಏನಾದ್ರು ಒಂದನ್ನು ಕೊಂಕಿಸಿಕೊಂಡು ಬೈಯ್ಯುತ್ತಿರುತ್ತಾನಂತೆ. ನಾಗನಿಗು ಕೇಳಾತಂಕ ಕೇಳಿ ಬೇಜಾರಾಗಿತ್ತೆಂದು, ನಮ್ಮೂರಿನ ಜನ ಅಂಗು ಇಂಗು, ಇವನ ಮತ್ತು ನಮ್ಮಣ್ಣಯ್ಯನ ವಿಚಾರವನ್ನ ಹೇಳ್‌ತ್ತಾನೆ ಇದ್ರು. ಈ ಸಲವಂತು ನಾಗ ಮುಂಗಾರಿಗೂ ಮುಂಚೆಯೆ ಕಲ್ಲು ಮುಳ್ಳು ಹಾಯಿದು. ಹಸನು ಮಾಡಿಕೊಂಡಿದ್ದ ಹೊಲವನ್ನ, ನಮ್ಮಣ್ಣ ನಿಷ್ಟುರವಾಗಿ ಬಿಡಿಸಿ, ಬೇರೆಯವರಿಗೆ ಕೊಡಿಸಿದನೆಂದು, ನಾಗನಿಗೆ ಬಾಳ ಸಂಕಟವಾಗಿತ್ತು. ಇಂತದ್ದೊಂದು ವಿಷಯವನ್ನ, ನಮ್ಮೂರಿನ ಮನೆ ಪಕ್ಕದ ಎಂಕಟೇಶಿ ಎಂಬೋನು ಫೋನು ಮಾಡಿ. ಯಣ ನಿಮ್ಮಣ್ಣಯ್ಯ ವಾಡೆ ನಾಗನಿಗೆ. ಬಾರಿ ಅನ್ಯಾಯ ಮಾಡ್‌ಬುಟ್ಟ ಕಣಣ. ಅಂತ ಊರಲ್ಲಿ ನಡೆದ ವಿದ್ಯಮಾನವನ್ನೆಲ್ಲ. ಈಗ ಆರು ತಿಂಗಳ ಮುಂಚೆಯೆ ಹೇಳಿದ್ದು ನೆನಪಾಯಿತು. ಜೊತೆಗೆ ಇವತ್ತು ನನ್ನನ್ನ ಚುಚ್ಚಿ ಮಾತಾಡುತ್ತಿರುವ. ಮರ್ಮದ ಬಗ್ಗೆಯು ಅರಿವಾಗತೊಡಗಿತು. ಯಣ ಟೀ ಹೇಳಾನೊ? ಕಾಫಿ ಹೇಳಾನೊ? ಇನ್ನೊಂದು ಸಲ ವಾಡೆನಾಗನ ದ್ವನಿಗೆ, ನನ್ನ ತಟ್ಟೇಲಿದ್ದ ದೋಸೆ ಖಾಲಿಯಾಗಿ, ಕೊನೆ ಚೂರೊಂದು ಉಳುಕಂಡಿದ್ದು. ನನ್ನ ನಿಗಕ್ಕೆ ಬಂತು. ನಾನು ಅವನ ಪ್ರಶ್ನೆಗೆ ಉತ್ರ ಹೇಳಾಕ್ ಮುಂಚೆಯೆ. ಏ ರಾಜ ಒಳ್ಳೆವೆರೆಡು ಗಟ್ಟಿ ಟೀ ತಗಂಬಾರಲ, ಅನುತ ಕೂಗಿ ಅವನೆ ಆಡ್ರು ಮಾಡ್ ಬುಟ್ಟ. ನಾನೀಗ ಊರಿಗೆ ಬರುತ್ತಿರುವ ವಿಚಾರವನ್ನಾಗಲಿ. ಇವನ ಮತ್ತು ನಮ್ಮಣ್ಣಯ್ಯನ ಮದ್ಯೆ ನಡೆದಿರುವ ವಿಚಾರವನ್ನಾಗಲಿ. ಕೆದಕಲು ತಯಾರಿಲ್ಲದವನಾದೆ. ಕಳ್ಳನ ಮನಸ್ಸು ಉಳ್ಳುಳ್ಳಗೆ ಎಂಬಂತೆ, ಮತ್ತೆ ಮಾತಿಗೆ ಮಾತಿನ ಚರ್ಚೆ ಯಾಕೆಂದು. ಇಬ್ಬರು ಮೌನವಾಗಿ ಟೀ ಕುಡುದ್‌ವಿ. ಕೊನೆಗೆ ನನಗಿಂತ ಮುಂಚೆ ಎದ್ದೋಗಿ, ದೋಸೆಯ ಬಿಲ್ಲನ್ನು ಸೇರಿಸಿ, ಅವನೆ ದುಡ್ಡು ಕೊಟ್ಟು ಬಂದ. ಯಾಕೊ ನಾನ್ ಕೊಡುತ್ತಿರ್‌ಲಿಲ್ಲವೇನೊ, ನಿನ್ ಋಣ ನನಗ್ಯಾಕಪ್ಪ ಅಂದೆ. ಓ ಬಾರಪ್ಪ ಇದೇನ್ ಋಣ? ನೀವು ಬೆಂಗಳೂರಿನ್ ಜನವೆ ಇಂಗೆ, ಎಂಜಲು ಕೈಯ್ಯಲ್ಲಿ ಕಾಗೆ ಓಡುಸೊ ಜನ, ಎಂದು ಮುಖಕ್ಕೊಡದಂತೆ ಮಾತಾಡ್‌ಬುಟ್ಟ. ಅಲ್ಲು ಮೌನವಾಗಿದ್ದೆ, ಸರಿ ಊರಾಕ್ ಬರ್‌ತ್ತೀಯ ಕಾರ್ ತಂದಿದ್ದೀಯ? ಎಂದು ಮತ್ತೊಮ್ಮೆ ಮಾತು, ಕೆದಕಿದ ಹೌದೆಂದು ಮೌನವಾಗಿ ಗೋಣಾಡಿಸಿದೆ, ಸರಿ ಇರು ನಾನು ಬರ್‌ತ್ತೀನಿ, ಡಿಬ್ಬಯ್ಯನ ಅಂಗಡೀಲಿ ಎರಡು ಗೊಬ್ಬರದ ಚೀಲ ಮಡಗಿದ್ದೀನಿ, ತಗಂಡೋಗಾನ ಅನುತ, ಬಿರ ಬಿರನೆ ಕೆಳಗಡೆ, ಬೀದಿಯ ಕಡೆಗೆ ಇಳಿದು ಹೋದ. ನಾನು ಒಂದೆರೆಡೆಜ್ಜೆ ಮುಂದೆಯಿದ್ದ, ಕೆಂಕೇಸರಿ ಮರದ ಕೆಳಗೆ, ವಿಶಾಲವಾದ ನೆರಳಲ್ಲಿ ನಿಂತುಕೊಂಡು. ಜೇಬಲ್ಲಿದ್ದ ಸಿಗರೇಟೊಂದನ್ನ ಹಚ್ಚಿದೆ. ನಾನು ಓದಿದ, ಹಳೆಯ ಹೈಸ್ಕೂಲೊಂದರ ಗಾಯಗೊಂಡ  ಗೋಡೆಗಳು, ಪಕ್ಕದಲ್ಲೆ ಹೊಸ ಕಟ್ಟಡಗಳ ಕೊಠಡಿಗಳು. ಅಪ್ಪನಿಗೆ ನಾನು ಐಸ್ಕೂಲು ಸೇರಲು ಇಷ್ಟವಿರಲಿಲ್ಲ, ಇದ್ದೂರಲ್ಲಿ ಓದಿದ್ದು ಸಾಕು ಬಿಡೊ, ಬೇರೂರಿನ ಇಸ್ಕೂಲಿನಲ್ಲಿ ಓದಿ, ಬೂದಿ ಉಯ್ಯಾದೇನು ಬ್ಯಾಡ ಬಿಡೊ?ಸುಮ್ಮನತ್ತ ಮನೇಲಿರೊ ಕುರಿಗಳನ್ನ ಮೇಯಿಸ್ ಬಾರಲ, ಅನುತ ಬೆಳಗ ಸಂಜೆ ಸಿಕ್ಕಾ ಪಟ್ಟೆ ತಕರಾರು ಮಾಡುತ್ತಿದ್ದ, ಓದ್ಲಿ ಬಿಡು ಓದಾ ಹುಡುಗರಿಗ್ಯಾಕೆ ಬಾದೆ ಇಕ್‌ತ್ತೀಯಾ? ನಿನ್ ಕುರಿ ಬೇಕಾದ್ರೆ ನಾನ್ ಮೇಸ್‌ತ್ತೀನಿ. ನಾವಂತು ಓದ್‌ಲಿಲ್ಲ, ಅವರಾದ್ರು ಓದ್ಲಿ ಅಂತೇಳಿದ ಅವ್ವ. ಅಪ್ಪ ನೆಚ್ಚಿಕೊಂಡಿದ್ದ ಹತ್ತು ಹದಿನೈದು ಕುರಿಗಳನ್ನ  ಹೊಡುಕಂಡು. ಹೊಲಗಳ ಬದುಗಳಲ್ಲಿ ಮೇಯಿಸಿಕೊಂಡು ಬಂದು, ಮನೇಲಿ ಕಸ-ಮುಸುರೆ, ಹಿಟ್ಟು ಸಾರು, ಅಂತ ಸವೆದು-ಸವೆದು ಸೋತವಳು. ಅಪ್ಪ ದಿನವು ಬೆಳಗ್ಗೆ ಎದ್ದೋಗಿ, ಮರಿ ಮೇವು ತರೋದೊಂದು ಬಿಟ್ರೆ. ಇನ್ನು ಯಾವ ಇಳುವು ಬಳುವೆನ್ನುವ, ಬದುಕನ್ನ ಸೋಕಿಸಿಕೊಳ್ಳದಾದ. ಅಮ್ಮ ಹೊತ್ತೊತ್ತಿಗೆ ಮಾಡಿದ್ದು ಉಂಡುಂಡು, ಊರಾಚೆಯ ವಂಗೆ ತೋಪಿನೊಳಗೆ, ಇಸ್ಪಿಟಾಟ ಆಡಿ ಬರುತ್ತಿದ್ದ. ಅಂಗೆ ಸುಮ್ಮನೆ ಬರುತ್ತಿರಲಿಲ್ಲ. ಕೈಲಿದ್ದ ಪುಡಿಗಾಸನ್ನೆಲ್ಲ ಕಳುಕೊಂಡು ಬರುತ್ತಿದ್ದ, ಮನೆಗೆ ಬಂದವನು ತೆಪ್ಪಗೆ ಸುಮ್ಮನಿರಾಕಾಗ್‌ದೆ. ನಾನೆ ಬದ್ದನೆಂದು, ನಾನೆ ಈಮನೆಗೆ ಗನಂದಾರಿ ಯಜಮಾನನೆಂದು. ನೀವೇ ಅಪರಾದಿಗಳೆಂದು, ಮನೇಲಿ ಅಮ್ಮ ಮತ್ತೆ ನಮ್ಮಗಳ ಮ್ಯಾಲೆಲ್ಲ ಕೂಗಾಡ್‌ತಾ. ಮೈಮ್ಯಾಲೆ ದೇವ್ರು ಬಂದೋನಂಗೆ  ಬಾದೆ ಬೀಳ್‌ತಿದ್ದ. ಇಂತ ತಾಳ್ಮೆ ಇಲ್ಲದ ಗಂಡನ  ಕೂಟೆ. ಕಾಲವರಣೆ ಮಾಡಿದ ಅಮ್ಮನ. ಮತ್ತು ನಮ್ಮ ಮುಂದೆ ಅಪ್ಪ ಅಲ್ಲಿಗೆ ಸುಮ್ಮನಾಗದೆ. ಅಮ್ಮ ಬಾದೆ ಬಿದ್ದು ಮೇಯಿಸುತ್ತಿದ್ದ. ಒಂದೊಂದೆ ಕುರಿಗಳನ್ನು ಕದ್ದು ಮುಚ್ಚಿ ಮಾರಾಟಕ್ಕೆ ನಿಂತು ಬುಟ್ಟ.ಅಷ್ಟಾದರು ಅಮ್ಮ ಕೂಲಿನಾಲಿ ಮಾಡಿ ನಮ್ಮನ್ನು ಚೆನ್ನಾಗಿ ಓದಿಸಿದ್ದಳು. ಅವಳು ಆವತ್ತು ಓದಿಸಿದ ಫಲವೆ, ಅಣ್ಣ ಮೈಸೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದಾನೆ.ಅಲ್ಲೇ ಮನೆ ಗಿನೆ ಕಟ್ಟಿಸಿಕೊಂಡು ನನಗಿಂತ ಚೆನ್ನಾಗಿದ್ದಾನೆ. ನಾನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾದ್ಯಾಪಕನಾದೆ. ಇನ್ನೇನು ಬೇಕು ನನಗೆ ಒಳ್ಳೆ ಹೆಂಡತಿ ಮಕ್ಕಳು ಮನೆಯು ಕಟ್ಟಿಸಿದೆ ಮಗ ಈ ವರ್ಷದ ಸೆಮ್‌ಗಳನ್ನೆಲ್ಲ  ಮುಗಿಸಿ, ಒಳ್ಳೆ ಕಂಪನಿಯಲ್ಲಿ ಕೆಲಸಕ್ಕೋಗುತ್ತಿದ್ದಾನೆ.ಮಗಳು ಈಗ ಪಿ ಯು ಸಿ ಗೆಂದು ಕಾಲೇಜಿಗೆ ಸೇರಿಕೊಂಡಳು, ಸದ್ಯಕ್ಕೆ ಯಾವುದೆ ಸಮಸ್ಯೆಯಿಲ್ಲ.ಆದರೆ ನನ್ನ ಹೃದಯಕ್ಕಂಟಿರುವಂತ ನೋವು, ಆ ನೋವನ್ನ ಯಾರು ಬಗೆ ಹರಿಸಲಾರರು. ಅದು ನನಗ್ ನಾನೆ ಪರಿಹರಸ್ಕಳ್‌ಬೇಕು, ನನ್ನನ್ನ ಹೆತ್ತು ಹೊತ್ತು, ಈ ಭೂಮಿಯೆಂಬ ತತ್ವಗಳ ಮ್ಯಾಲೆ, ಒಬ್ಬ ಮನುಷ್ಯನಾಗುವ ತನಕ ಹಪ-ಹಪಿಸಿದ್ದ ಅಮ್ಮನನ್ನು. ಬೆಂಗಳೂರಲ್ಲೆ ನನ್ನ ಮನೆಗೆ ಕರೆದುಕೊಂಡೋಗಿ ಹತ್ತು ವರ್ಷಗಳಾದವು. ಅಂಗೆ ಕರೆದುಕೊಂಡು  ಹೋದ, ಎರಡು ವರ್ಷದ ತನಕ, ಅಮ್ಮ ಮತ್ತು ಹೆಂಡತಿ ಚೆನ್ನಾಗಿದ್ದವರು. ಆಮೇಲಾಮೇಲೆ ಸಣ್ಣ ಪುಟ್ಟದ್ದಕ್ಕೆಲ್ಲಾ, ದೊಡ್ಡ ಅಸಮಾದಾನಗಳ ಗೋಡೆ ಕಟ್ಟಿಕೊಳ್ಳಲಾರಂಬಿಸಿದ್ದರು, ನಾನು ಇಬ್ಬರ ಮಾತುಗಳಿಗು ಕಿವಿ ಕೊಡದಂಗೆ, ಯಾರ ವಿಚಾರವನ್ನು ಅತಿ ಮಾಡ್‌ಕಳದಂಗೆ ಕಾಲವರಣೆ ಮಾಡುತ್ತಿದ್ದವನು. ಇಷ್ಟುದಿನ ಯಾರಿಗು ಹೇಳ್‌ದಂಗೆ ಸುಮ್ಮನಿದ್ದೆ, ಯಾಕೆಂದರೆ ಇತ್ತೀಚೆಗಂತು ನಮ್ಮ ಅಮ್ಮನನ್ನು ಮನೆಯ ಸದಸ್ಯರು ವಿಪರೀತ ತಿರಸ್ಕರಿಸುತ್ತಿದ್ದರು. ಅಮ್ಮ ಏನೊಂದು ಮಾತನಾಡದೆ.ಮೌನವಾಗಿ ನುಂಗುತ್ತಿದ್ದಳು. ಇಂತದ್ದೊಂದು ನೋವನ್ನ ನುಂಗಿಕೊಂಡು ಬಂದಿರುವ ನನ್ನ ಮುಂದೆ. ಈ ನಾಗನ ಮುಲಾಜುಗಳಾಚಿಗೆನ ಮಾತುಗಳನ್ನ ಕೇಳುತ್ತಿದ್ದರೆ.ನಾನೆ ಮಹಾ ದೊಡ್ಡ ಅಪರಾಧಿಯೆನ್ನುವಂತಾಯಿತು.ನನ್ನ ಅಮ್ಮ ತಬ್ಬಲಿಯಾಗುವ ವಿಷಯವನ್ನ ಈ ನಾಗನತ್ತಿರ ಹೇಳಿದರೆ. ನನ್ನ ಕಥೆ ಮುಗಿಸೇ ಬಿಡುತ್ತಾನೆ.ಇವನತ್ತಿಗೇನ ಅಮ್ಮನ ವಿಚಾರವೆತ್ತಿಕೊಂಡು ಸಿಗಾಕಿಕೊಂಡರೆ. ಗ್ರಾಚರವನ್ನ ಗಮ್ಮೆನಿಸಿಬಿಡುತ್ತಾನೆ,ಮುಂದಾಲೋಚನೆ ಮಾಡಿಕೊಂಡು. ಸುಮ್ಮನೆ ಮೌನ ವಹಿಸಿದ್ದೆ, ಯಣ ಹೊರಡಾನ ಹೊತ್ತು ಮೀರ್‌ತಾಐತೆ, ನನ್ ದನಾಕರಾ ಇನ್ನು ಮನೇಲೆ ಬಿದ್ದಾವೆ, ಎಂದುಕೊಳ್ಳುತ್ತ ನಾಗ ನನ್ನ ಮುಂದೆ ತಟ್ಟನೆ ಹಾಜರಾದ. ಅವನ ಮಾತಿಗೆ ಏನು ಹೇಳದೆ ಹೋಗಿ ಕಾರಿನಲ್ಲಿ ಕುಂತುಕೊಂಡೆ. ರಸ್ತೆ ಬದಿಯ ಹೊಲಗಳನ್ನ, ಸುತ್ತಲು ಇದ್ದ ಬಟಾ ಬಯಲನ್ನೆಲ್ಲ ಬಗೆಯುತ್ತ ಹೋಗಿರುವ ರೋಡಿನಲ್ಲಿ, ನನ್ನ ಕಾರು ಸರಾಗವಾಗಿ ಹೋಗುತ್ತಿತ್ತು. ಕುಂತಿದ್ದ ನಾಗ ಯಣ ನನ್ ಮಕ್ಕಳು ನಿನ್ನಂಗೆ ಓದೋದ್ಯಾವಾಗ? ಇಂತ ಕಾರ್ ತರೋದು ಯಾವಾಗ? ಎಂದು ಆಸೆ ಗಣ್ಣುಗಳನ್ನ ಅಗಲಿಸಿಕೊಂಡು, ಅವನ ಎರಡೂ ಕೈಗಳಲ್ಲು ನನ್ನ ಕಾರಿನ ಗ್ಲಾಸುಗಳನ್ನ, ಸೀಟುಗಳನ್ನ ಮುಟ್ಟಿ ಮುಟ್ಟಿ. ಅವನ ಪಾಡಿಗವನು ತುಟಿ ಬಿಚ್ಚಿಕೊಂಡ ಬಾಯಿಂದ ಮಾತಾಡ್‌ತಿದ್ದ, ನನ್ನ ಪಾಡಿಗೆ ನಾನು ಮೀಸೆ ಮರೆಯಲ್ಲಿ ನಗುವ ಕಕ್ಕಿ ಸುಮ್ಮನಾದೆ, ಯಾಕಂದ್ರೆ ನಾನ್ ಏನ್ ಮಾತಾಡೀರು, ಮಾತಿಗ್ ಮಾತು ಪೋಣಿಸಿಕೊಂಡು. ಪೇಟೆ ವಳಗಿರೋವರೆಲ್ಲ ಇಂತೋರು, ಅದ್ರೊಳಗು ನಾನು ಅಪರಾದಿಯೇನೊ ಅನ್ನಂಗ್ ಮಾತಾಡ್‌ತಿದ್ದ, ಈ ನಾಗನ ಮುಂದೆ ನಾನು ಊರಿಗ್ಯಾಕ್ ಬರ್‌ತ್ತಿದ್ದೀನಿ. ಅನ್ನೋದನ್ನ ಹೇಳ್‌ಬೇಕಾಗಿತ್ತು. ಈಗ್ ಊರ್ ಸಿಗೋ ಮುಂಚೆಯೆ ಹೇಳ್ಳಿಲ್ಲ ಅಂದ್ರು ಬಿಡಲ್ಲ, ಇರೋ ಸತ್ಯಾಂಶ ಹೇಳೀರು ಸುಮ್ಮನೆ ಬಿಡೊ ಆಸಾಮಿಯಲ್ಲ, ಮನಸ್ಸು ಹೊಯ್ದಾಟಕ್ಕಿಟ್ಟುಕೊಂತು. ಊರಲ್ಲಿ ಅಮ್ಮನ ಅತಂತ್ರದ ಪರಿಸ್ತಿತಿಯನ್ನು, ಯಾರಿಗೆಳೀರು ಕ್ಯಾಕರಸಿ ಉಗಿತಾರೆ. ಅನ್ನೋದು ನನಗೆ ಚೆನ್ನಾಗ್ ಗೊತ್ತು. ಆದರು ಯಾವ್ ದೈರ್ಯದ್ ಮೇಲೆ ಊರಿಗೆ ಬಂದು ಬಿಟ್ಟೆನೊ? ಆ ಭಗವಂತನಿಗೆ ಗೊತ್ತು. 

    ಮನಸ್ಸು ಮತ್ತೆ ಅಮ್ಮನ ಕಡೆಯೆ ಓಡಲಾರಂಬಿಸಿತು.

ನಮ್ಮನ್ನೆಲ್ಲ ಸಾಕಿ ಸಲುಹಿರುವ, ನಮ್ಮ ಬದುಕೆಂಬ ಗೋಪುರವನ್ನ ಕಟ್ಟಲು, ಸಮರ್ಥವಾಗಿ ಕೂಲಿ ನಾಲಿ ಮಾಡಿರುವ ನನ್ನ ಹೆತ್ತಮ್ಮನನ್ನು. ಆವತ್ತು ಹಳ್ಳಿಯಲ್ಲಿ ತಮ್ಮನ ಮನೆಯಲ್ಲೆ ಬಿಡುವುದೆಂದು ತೀರ್ಮಾನಿಸಿದೆವು. ನಾನು ಮತ್ತು ಮೈಸೂರಿನಲ್ಲಿರುವ ಅಣ್ಣ ಇಬ್ಬರು, ಒಂದೊಂದು ತಿಂಗಳು ಅಮ್ಮನ ಖರ್ಚಿಗಾಗಿ. ಮೂರ್ ಮೂರ್ ಸಾವಿರ ದುಡ್ಡು ಕಳಿಸುವುದೆಂದು ತೀರ್ಮಾನಿಸಿಕೊಂಡಿದ್ದೆವು. ಅಂಗಂತ್ಲೆ ದುಡ್ಡು ಕಳಿಸಿ. ಅಮ್ಮ ಚೆನ್ನಾಗವಳೆಂದು ನಂಬಿಕೊಂಡಿದ್ದೆವು. ಆಮೇಲಾಮೇಲೆ ದಿನ ಕಳೆದಂತೆ ಒಂದು ಸತ್ಯ ಗೊತ್ತಾಯಿತು, ನಾವು ಕಳಿಸೊ ದುಡ್ಡು, ಊರಲ್ಲಿರುವ ತಮ್ಮನೆಂಡತಿಯ ಕೈ ಸೇರ್‌ತಿತ್ತಂತೆ. ಆ ಆರು ಸಾವಿರ ದುಡ್ಡೆನ್ನುವುದು ತಮ್ಮಂಗು ಸಿಗುತ್ತಿರಲಿಲ್ಲ, ಅಮ್ಮಂಗು ಸಿಗುತ್ತಿರಲಿಲ್ಲವಂತೆ. ಜೊತಿಗೆ ದಿನವು  ಅಮ್ಮ, ತಮ್ಮನೆಂಡತಿಯ ಜೊತೆ ಕೂಲಿ ಕೆಲಸಕ್ಕೆ ಹೋಗ್‌ಬೇಕಾಗಿತ್ತಂತೆ. ಮನೇಲಿ ದೂಸುರ ಮಾತಾಡದಂಗೆ, ಅವಳು ಇಕ್ಕಿದ್ದು ಅಮ್ಮ ಉಣ್ಣ ಬೇಕಿತ್ತಂತೆ,ಏನನ್ನು ಸ್ವತಂತ್ರವಾಗಿ ಮುಟ್ಟಂಗಿರಲಿಲ್ಲವೆನ್ನುವ, ಅಮ್ಮನ ತಬ್ಬಲಿತನದ ಸುದ್ದಿಗಳ ಬಗ್ಗೆ, ಅವಳ ಗಳಸ್ಯ-ಕಂಟಸ್ಯವೆಂದು ನಂಬಿದ್ದ. ನರಸಮ್ಮನ ಕಡೆಯಿಂದ ಗೊತ್ತಾಗಿ. ನನಗು ಅಣ್ಣನಿಗು ಬೇಸರವಾಗಿತ್ತು,ಇಂಗಿರುವ ಪರಿಸ್ಥಿತಿಯೊಳಗೆ, ಅಮ್ಮ ಎಲ್ಲಿದ್ದರೆ ಚೆನ್ನಾಗಿರುತ್ತಾಳೆಂಬ ಚರ್ಚೆಯಲ್ಲಿ ಮೀನಾ ಮೇಷ ಎಣಿಸುತ್ತಿರುವಾಗ,ಮೈಸೂರಿನಲ್ಲಿದ್ದ ಅಣ್ಣ, ಅಮ್ಮ ನಮ್ಮತ್ರವೆ ಇರಲಿ ಬಿಡೊ. ಎಂದು ಮುತುವರ್ಜಿಲಿ ಮೊದಲು ಅವನೆ ಕರೆದುಕೊಂಡೋದ. ಎಂಗೊ ಅಮ್ಮ ಈಗ್‌ಲಾದ್ರು, ನೆರಳು ಮರೆಯಲ್ಲಿದ್ದಾಳಲ್ಲ ಅಂದುಕೊಂಡು, ಮನಸ್ಸು ನಿರಾಳವಾಗಿತ್ತು. ಅಣ್ಣ ಸಿವಿಲ್ ಕಾಮಗಾರಿಗಳ ಇಂಜಿನಿಯರು. ಅತ್ತಿಗೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿನ ಪ್ರತಿಷ್ಟಿತ ಮನೆಯೊಂದರ ಹೆಣ್ಣು. ಮೈಸೂರಿನಲ್ಲಿ ವೈಬೋಗ್‌ವಾಗಿದ್ದ ಮನೆ. ಮನೇಲಿ ಆಳು ಕಾಳುಗಳನ್ನಿಟ್ಟುಕೊಂಡು ಕೆಲಸಮಾಡಿಸಿಕೊಳ್ಳುತ್ತಿದ್ದರು, ನಮ್ಮಮ್ಮ ಯಾವ ತಂಟೆಯು ಇಲ್ಲದಂಗೆ. ಸುಖವಾಗವಳೆಂದುಕೊಂಡಿದ್ದ ಭ್ರಮೆಯಲ್ಲಿದ್ದೆ. ಯಾಕಂದ್ರೆ ಅವ್ವ ಯಾವತ್ತು ನನಗಿಂತ ಕಷ್ಟ ಕಣ್ರಪ್ಪ, ಎಂದು ಬಾಯಿ ಬಿಟ್ಟು ಯಾವ ಮಕ್ಕಳತ್ರವು  ಹೇಳಿಕೊಂಡವಳಲ್ಲ. ಅಂಗಾಗೆ ನನಗು ಕೂಡ. ಮೈಸೂರಿನಲ್ಲಿದ್ದ ಅಮ್ಮನ ಬಗ್ಗೆ ಏನೊಂದು ಗೊತ್ತಿರಲಿಲ್ಲ. ಆವತ್ತು ಅಮ್ಮನನ್ನು ಕರೆದು ಕೊಂಡೋದ ತಿಂಗಳಿಗೇಯ ಅತ್ತಿಗೆಯೆನ್ನುವವಳು. ಅವಳ ಮನೆಯ, ತಿಕ್ಕಿ ತೊಳಿಯುವ ಕೆಲಸದವಳನ್ನ ಬಿಡಿಸಿ ಬಿಟ್ಟಳಂತೆ, ಪ್ರತಿ ದಿನವು ಅಣ್ಣ ಕೆಲಸಕ್ಕೊರಟ ಮೇಲೆ. ಅಮ್ಮನೆ ಮಂಕರಿಗಟ್ಟಲೆಯ ಪಾತ್ರೆಗಳನ್ನ ತೊಳಿಯಬೇಕಿತ್ತಂತೆ. ಆ ದೆವ್ವಿನಂತ ಮನೆಯ ಎಲ್ಲ ನೆಲವನ್ನು. ಒಂದು ಮೂಲೆಯು ಬಿಡದಂತೆ ತೊಳೆಯುವುದು, ವಾಷಿಂಗ್ ಮಿಷನ್ನು ಕೊಡುವ, ಬಟ್ಟೆಗಳನ್ನ ಒಣಗಿಸುವುದು ಮಡುಚುವುದು, ಅತ್ತಿಗೆ ಮಾಡುವ ತಿಂಡಿ ತೀರ್ಥಗಳಿಗೆಲ್ಲ. ತರಕಾರಿಗಳ ಸಿಪ್ಪೆ ಸುಲಿಯುವುದು. ಹಿಟ್ಟು ಕಲೆಸು, ಸೊಪ್ಪು ಸೋಸು, ಎನ್ನುವ ಪ್ರತಿ ಕೆಲಸವು ಅಮ್ಮನೆ ಮಾಡ್‌ತಿದ್ದಳಂತೆ. ಅತ್ತಿಗೆ ಮಾತ್ರ ತಿಂಗಳು ಕೆಲಸದವಳಿಗೆ ಕೊಡುವ. ಪ್ರತಿತಿಂಗಳ ಪಗಾರವನ್ನ, ಗಂಡನತ್ತಿರ ಮುಲಾಜಿಲ್ಲದಂಗೆ ವಸೂಲಿ ಮಾಡ್‌ತಿದ್ದಳಂತೆ. ಇಂತದ್ದೊಂದು ಅವ್ವನ ದುರಂತದ ಪಾಡೇನೆಂಬೋದನ್ನ, ಯಾರಿಗು ಗೊತ್ತಿಲ್ಲದಂಗೆ ಬಚ್ಚಿಟ್ಟುಕೊಂಡು. ನಾಜೊಕಿನಲ್ಲಿದ್ದ ಅತ್ತಿಗೆಯ ಮುಖವಾಡವೆನ್ನುವುದು. ನನ್ನ ಮಗಳಿಂದ ಬಹಿರಂಗವಾಗಿತ್ತು, ಒಂದು ಸಲ ಅವಳ ಕೊನೆಯ ವರ್ಷದಲ್ಲಿ. ಪಿ ಯು ಸಿ ಪರೀಕ್ಷೆ ಮುಗಿಯಿತೆಂದು. ಬೇಸಿಗೆ ರಜೆಗಾಗಿ ದೊಡ್ಡಪ್ಪನ ಮನೆಗೆ ಹೋಗಿದ್ದು ಬರ್‌ತ್ತೀನಿ. ಎಂದು ನನ್ನ ಮಗಳು ಮೈಸೂರಿಗೆ ಹೋಗಿದ್ದಾಗ. ಅಲ್ಲಿ ಅಜ್ಜಿಯ ಪರಿಸ್ಥಿತಿ ಹೇಗಿತ್ತೆಂಬುದನ್ನ ಕಣ್ಣಾರೆ ನೋಡಿದಳಂತೆ. ಹಾಗೆಂದು ಅವಳು ಬಂದು, ಅಜ್ಜಿಯ ಪಾಡನ್ನ ಕುರಿತು ಎಲ್ಲವನ್ನು ಹೇಳಿದಾಗ. ಆವತ್ತೆ ನನಗೆ ಅಗಾದ್‌ವಾದ ಸಂಕಟವಾಗಿತ್ತು. ಅಂತ ಸಂಕಟದಲ್ಲೆ ಅಣ್ಣನಿಗೆ ಫೋನ್ ಮಾಡಿ, ಬಾಯಿಗೆ ಬಂದಂತೆ ಬೈಯ್ಯಬೇಕೆಂದುಕೊಂಡಿದ್ದೆ. ಅಷ್ಟೊತ್ತಿಗೆ ನನ್ನೆಂಡತಿ, ಮುಂದೆ ಒದಗಬಹುದಾದ, ನಮ್ಮ ಅವರ ನಡುವೆಯ ಮನಸ್ತಾಪಗಳ ಬಗ್ಗೆ ಎಚ್ಚರಿಕೆ ನೀಡಿದಳು. ಆದ್ರೆ ನನ್ನ ಸಂಕಟವೆನ್ನುವುದು ತಾಮಸವಾಗದೆ. ಸರಿಯಮ್ಮ ಅಲ್ಲೆ ಬುಟ್ರೆ ಆವಜ್ಜಿ ಪಾಡು ಎಂಗಾಗಲ್ಲಮ್ಮ? ನಾವೆಲ್ಲ ಇದ್ದಂಗಾಯಿತೇನಮ್ಮ? ಅಂದಿದ್ದೆ, ನೆಟ್ಟಗೆ ಯಾವುದು ಉತ್ತರ ಕೊಡದಂಗೆ ತಲೆ ಸೊಟ್ಟಗಿಟ್ಟಿದ್ದಳು.

  ನಾನೆ ಮನಸ್ಸು ಮಾಡಿ, ಆದೇ ತಿಂಗಳ ಕೊನೆಯಲ್ಲಿ, ಅಣ್ಣ ಅಮ್ಮ ನನ್ನು ಕಳಿಸಿಕೊಡಿ ಒಂದೆರಡು ದಿನ ನಮ್ಮ ಮನೇಲು ಇದ್ದು ಬರಲಿ ಎಂಬ ನೆವ ಹೇಳಿ.ಅಮ್ಮನನ್ನು ನಮ್ಮ ಮನೆಗೆ ಕರೆದುಕೊಂಡು ಬಂದಮ್ಯಾಲೆ.ನನ್ನೆಂಡತಿ ಎಲ್ಲಿ ಇಲ್ಲದ ಮುತುವರ್ಜಿಲಿ ನೋಡಿಕೊಂಡಳು. ಅಮ್ಮನು ಅಷ್ಟೆ ಎಂದು ಯಾವತ್ತು, ಸುಖಾ ಸುಮ್ಮನೆ ಕುಂತು ಕಾಲವರಣೆ ಮಾಡಿದವಳಲ್ಲ. ಮತ್ತು ಅವಳು ತಿನ್ನುವ ಹಿಟ್ಟಿಗೆ, ಇವತ್ತು ನನ್ನ ಕೆಲಸದ ಪಾತ್ರವೇನೆಂದು ಚಿಂತಿಸುತ್ತಿದ್ದವಳು. ಮನೇಲಿರಲಿ ಹೊರಗಡೆಯಿರಲಿ ಇವರೆಚ್ಚು, ಅವರು ಕಮ್ಮಿಯೆಂದು, ಜನರನ್ನ ಯಾವತ್ತು ತೂಗಿದವಳಲ್ಲ. ಮತ್ತು ಎಂದು ಇಲ್ಲ ಸಲ್ಲದ ವಿಚಾರಗಳಿಗೆ. ತಲೆ ಕೆಡಿಸಿಕೊಂಡವಳು ಅಲ್ಲ. ಇಂತ ಅಮ್ಮ ನಮ್ಮ ಮನೆಗೆ ಬಂದು. ಒಂದೆರೆಡು ವರ್ಷವಾಗುವ ಹೊತ್ತಿಗೆ, ಮನೇಲಿ ಇದ್ದಕ್ಕಿದ್ದಂತೆ,ಅಮ್ಮ ಮತ್ತು ಹೆಂಡತಿಯ ಮದ್ಯೆ, ಅಸಮಾದಾನದ ಬಿರುಕು ಕಾಣಿಸಿಕೊಳ್ಳಲಾರಂಬಿಸಿತು. ನಿಮ್ಮಮ್ಮನಿಗೆ ನಾನು ಮಾಡೊ. ಎಣ್ಣೆಯ ತಿಂಡಿ ಹಿಡಿಯಲ್ಲವಂತೆ ರೀ, ಬೆಳಿಗ್ಗೆ ಸೊಗಸಾದ ಪಲಾವ್ ಮಾಡಿಟ್ರೆ. ಆವಜ್ಜಿ ಬದನೆ ಕಾಯಿ ಗೊಜ್ಜು ಕಲಸಿ. ಮುದ್ದೆ ಮಾಡಿ ತಿಂದೈತಲ್ಲ. ಇಂಗೆ ಒಂದೊಂದೆ ಹೆಂಡತಿಯ ಒಲ್ಲದ ಉಸಿರು ಸದಾ ಬುಸುಗರಿಯ ಲಾರಂಬಿಸಿತ್ತು.. ಪಪ್ಪ ನಮ್ಮನಿಗೆ ಬಂದು ನಾವೇಳ್‌ದಂಗೆ ಕೇಳಲ್ಲ ಅಂದ್ರೆ, ಅಜ್ಜಿಗು ಸುಮಾರಗೈತಪ್ಪ ಕೆಚ್ಚು. ಮಗಳ ಅಸಡ್ಡೆಯಮಾತು, ಅಮ್ಮನಿಗೆ ಶುಗರ್ ಎನ್ನುವ ತಬ್ಬಲಿ ಕಾಯಿಲೆ ಹುಟ್ಟುಕೊಂಡು, ಆಗಲೆ ಏಳೆಂಟು ವರ್ಷವಾಗುತ್ತ ಬಂತು. ನನಗೆ ತಿಂಡಿ ಬ್ಯಾಡ, ಎಣ್ಣೇದು ಬ್ಯಾಡ, ಬರಿ ಬಿಸಿ ಮುದ್ದೆ ಸಾಕೆಂದು ಹಂಬಲಿಸುತ್ತಿದ್ದಳು. ಈಗೀಗ ಎರಡು ಮೊಣಕಾಲಿನ ಮಂಡಿನೋವಿಗು ತುತ್ತಾದಳು. ಎದ್ರೆ ಕೂರಲಾರದ ಕುಂತರೆ ಏಳಲಾರದ ಹಿಂಸೆ ಪಡುತ್ತಿದ್ದವಳನ್ನ, ಈವಜ್ಜಿ ಈಗೀಗ ಯಾವ್ ಬದುಕು ಮಾಡ್‌ದಂಗೆ, ಉಂಡುಂಡು ಸುಮ್ಮನೆ ಕೂರ್‌ತ್ತಾಳ್ ಕಣ್ರಿ. ಹೆಂಡತಿ ಹೆಗ್ಗು ಸಿಗ್ಗಿಲ್ಲದಂಗೆ ಚಾಡಿ ಹೇಳ್‌ತ್ತಾನೆ ಬಂದ್ಲು, ಅಮ್ಮ ನಾನು ಕಾಲೇಜು ಮುಗಿಸಿಕೊಂಡು ಮನೆಗೆ ಬಂದರೆ. ನನ್ನ ಮುಂದೆ ಎಂದು ಮುಖಾ ಮುಖಿ ಕೂರಲಿಲ್ಲ. ನನಗೆ ಇಂತದ್ದೊಂದು ಬೇಕೆಂದು ಕೇಳಿದವಳಲ್ಲ, ಒಂದು ದಿನ ಹೆಂಡತಿ ಮಕ್ಕಳೆಲ್ಲ ಶ್ಯಾಪಿಂಗೆಂದು ಹೊರಗಡೆ ಹೋಗಿದ್ದಾಗ.  ನನ್ನ ಮನಸ್ಸು ತಡೆಯಲಾರದೆ, ಅಮ್ಮನನ್ನು ಮುಂದೆ ಕೂರಿಸಿಕೊಂಡು, ಆರೋಗ್ಯ ಚೆನ್ನಾಗೈತೇನಮ್ಮ ಎಂದು ಕೇಳಿದ್ದೆ. ನನಗೇನಾಗೈತೊ ಮಾರಾಯ ಗುಂಡುಕಲ್ಲಿದ್ದಂಗಿದ್ದೀನಿ. ನೀನು ನನ್ ಬಗ್ಗೆ ಚಿಂತೆ ಮಾಡ್ ಬ್ಯಾಡ?ಎಂದು ಮುಖ ಮತ್ತೊಂದು ಕಡೆ ತಿರುಗಿಸಿಕೊಂಡು ಹೇಳಿದಳು. ದ್ವನಿಯಾಕೊ ಸೊರಗಿದಂತಿತ್ತು, ನಿನಗೆ ಯಾರ್ ಮನೆ ಇಷ್ಟ್ ಆಯಿತಮ್ಮ? ಅಣ್ಣಯ್ಯನ ಮನೆ ಇಷ್ಟವಾಯಿತೊ? ನನ್ ಮನೆ ಇಷ್ಟವಾಯಿತೊ?ಕುತೂ ಹಲ ತಡೆಯದೆ ಕೇಳಿದ್ದೆ,ಅಯ್ಯೊ ಸ್ವಾಮಿ ಮನಸ್ಸುಗಳೊಂದು ಇಷ್ಟವಾದ್ರೆ ಸಾಕೇಳಪ್ಪ, ಮನೆಗಳೇನ್ ಮಾಡ್‌ತ್ತಾವ್ ಕಣಲ? ಅಂದಳು, ಅಮ್ಮನ ಅರ್ಥಗರ್ಬಿತವಾದ ಮಾತು ನನ್ನ ಮುಖಕ್ಕೊಡದಂತಾಯಿತು. ಅಷ್ಟಕ್ಕೆ ಸುಮ್ಮನಾಗದ ಅಮ್ಮ, ಯಾರ್ ಮನೆ ಕಟ್ಟಿಕೊಂಡು ನನಗೇನಾಗ್ ಬೇಕಪ್ಪ, ಎಲ್ಲಾರ್ ಮನೆಯಲ್ಲು ಇದ್ದೀನಿ. ಎಲ್ಲ ಸುಖ ಸಂತೋಷ್‌ವು ಉಂಡಿದ್ದೀನಿ, ನಿಮ್ಮ ಬಾಳು ಬದುಕೆಂಬೋದನ್ನ, ಎರಡ್‌ಕಣ್ಣಾಗು ನೋಡಿದ್ದೀನಿ.ನನ್ನುನ್ನ ಊರಿಗ್ ತಗಂಡೋಗಿ ಬುಟ್‌ಬುಡಪ್ಪ. ವಯಸ್ಸಾದ್ ಮೇಲೆ, ಒಬ್ಬರಿಗೆ ತೊಂದರೆ ಕೊಟ್ಟುಕೊಂಡು ಇರ್‌ಬಾರದು ಕಣಪ್ಪ? ಇಷ್ಟೇಳುವ ವೊತ್ತಿಗೆ ಅಮ್ಮನ ಕಣ್ಣುಗಳು ತುಂಬಿಕೊಂಡಿದ್ದವು. ನನಗೆ ಗೊತ್ತಿಲ್ಲದಂತೆ ಸೆರಗಿನಲ್ಲಿ ಕಣ್ಣು ವರೆಸಿಕೊಂಡ್ಲು, ಯಾಕೊ ಅಮ್ಮನಿಗೆ ನನ್ನ ಹೆಂಡತಿ ಮಕ್ಕಳ ವಿರುದ್ದ, ತಾಕತ್ತಾದ ಉತ್ರ ಹೇಳಾಕ್ ಆಗ್‌ದಂಗೆ. ಗಂಟಲೊಳಗಿನ ಎಂಜಲು ನುಂಗಿಕೊಂಡು. ಅಮ್ಮನ ಮುಂದೆ ಕೂತಿರಲಾರದೆ, ನಾನೆ ಬಾಯಿ ಮುಚ್ಚಿಕೊಂಡು ಎದ್ದು ಹೋಗಿದ್ದೆ. ಆವತ್ತಿನಿಂದ ಈವತ್ತಿನ ತಂಕ, ಅಮ್ಮ ನನ್ನ ಮನೆಯಲ್ಲಿ ಚೆನ್ನಾಗಿಲ್ಲವೆಂದು ಕೊರಗುತ್ತಲೆ ಇದ್ದೆ. ಮತ್ತು ಅಮ್ಮನನ್ನು ಚೆನ್ನಾಗಿ, ನೋಡಿಕೊಳ್ಳಬೇಕೆಂದು ನಿರ್ದರಿಸಿಯು ಇದ್ದೆ. ಆದರೆ ನನ್ನ ವೃತ್ತಿಯಿನ್ನು, ಮುಗಿಯದೆ ಇದ್ದದ್ದರಿಂದ ಪರಿತಪಿಸುತ್ತಿದ್ದೆ. ಜೊತೆಗೆ ನನ್ನ ಹೆಂಡತಿ ಮಕ್ಕಳಿಗೆ, ಅಜ್ಜಿಯನ್ನು ನಾಜೋಕಾಗಿ ನೋಡ್‌ಕಳಬೇಕೆಂದು ಹೇಳಿದಾಗಲೆಲ್ಲ. ಅಲ್ಲಪ್ಪ ನೀನು ಹೇಳೋದು ನೋಡೀರೆ, ಆವಜ್ಜಿಗೆ ಊಟಕ್ಕೆ ಇಡಲ್ಲವೇನೊ? ಅನ್ನಂಗೈತಪ್ಪ, ನಮ್ಮನೆ ಊಟ ತಿಂಡಿ ಅಂದ್ರೇನು? ಅಜ್ಜಿ ಎಂದ್ರೇನು? ಎಂದು ಮಗಳು ತಟ್ಟನೆ ಉತ್ರ ಹೇಳ್‌ತಿದ್ಲು, ಹೆಂಡತಿ ಅಮ್ಮನ ವಿಷಯ ಬಂದಾಗ, ಮುಖ ಮೂತಿ ತಿರುಗಿಸುವಂತಾಗಿದ್ದಳು.ಕಾಲ ಕುದುರುತ್ತಿದ್ದರು, ಜನ ದುಬಾರಿಯಾಗುತ್ತಿದ್ದಾರೆನಿಸುತ್ತಿತ್ತು.  ಅಮ್ಮ ಹಳ್ಳಿಯಲ್ಲಿದ್ದು ಬಿಡುತ್ತೇನೆಂದು ಹೇಳಿ. ಐದಾರು ವರ್ಷವಾಗಿತ್ತು. ನಾನು ಕೂಡ ಅಮ್ಮನ ಮಾತನ್ನುಅಂಗೆ ತಳ್ಳಿಕೊಂಡು ಹೋಗಿ,  ಯಾವುದನ್ನು ಕಿವಿಯ ಮೇಲಾಕಿಕೊಳ್ಳದೆ ಇದ್ದುಬಿಟ್ಟಿದ್ದೆ. ಆದ್ರೆ ಈಗ ಈ ಐದಾರು ತಿಂಗಳಿಂದಲು, ಅಮ್ಮನ ಆರೋಗ್ಯ ಆಗಾಗ ಹದಗೆಡಲಾರಂಬಿಸಿ.ಬಲವಿಲ್ಲದಂತಾದಳು, ಅಮ್ಮನ ಮೂತ್ರದ ಬಟ್ಟೆಗಳನ್ನ, ಮತ್ತು ಬೇದಿಯ ಬಟ್ಟೆಗಳನ್ನ, ಯಾರು ಮುಟ್ಟದಾದರು, ಅಪ್ಪ ಇವತ್ತು ಕೆಲಸದವಳು, ಇಂತ ಗಲೀಜು ಬಟ್ಟೇನೆಲ್ಲ ಒಗಿಯಕಾಗಲ್ಲಮ್ಮ. ಅಂತ ಬಿಟ್ಟೋಗಿದ್ದಾಳೆ. ನೀನೆ ಒಗಿಯಪ್ಪ ಮಗಳ ಅನಾದಾರಣೆಯ ಮಾತು. ರೀ ಯಾಕೊ ಕಣ್ರಿ, ಮನೆಯೆಲ್ಲ ತುಂಬಾ ವಾಸನೆ ಕಣ್ರಿ. ನನಗಂತು ಊಟಾನೆ ಸೇರಲ್ಲಪ್ಪ.  ಹೆಂಡತಿಯು ಮೂಗು ಮುರಿಯಲು ಶುರುವು ಮಾಡಿದ್ದಾಳೆ. ಸದ್ಯ ಹೋದ್ ತಿಂಗಳು ಇಪ್ಪತ್ತೆರಡನೆ ತಾರೀಖಿನಂದು, ನಾನು ನನ್ನ ಕೆಲಸದಿಂದ ನಿವೃತ್ತಿಯಾದ ಮೇಲೆ,  ಏನಾದರು ಮಾಡಿ, ಅಮ್ಮನನ್ನು ಎಲ್ಲಾದರು ಕರೆದುಕೊಂಡೋಗಿ ಚೆನ್ನಾಗಿ ನೋಡಿಕೊಳ್ಳ ಬೇಕೆನಿಸಿತು. ಅಂಗಾಗೆ ಮನೆಯಲ್ಲಿ ಪ್ರಸ್ತಾಪಿಸಲು ಕುಂತಾಗ, ಅಪ್ಪ ಅಜ್ಜಿಯನ್ನ ಯಾವುದಾದರೊಂದು ಅನಾಥಾಶ್ರಮಕ್ಕೆ ಸೇರಿಸಿಬಿಡು. ಮಗನ ಸಲೀಸಾದ ನಿಷ್ಕರುಣೆಯ ಮಾತಿಗೆ, ಊನ್ರಿ ನಾವು ಉತ್ರ ಅಂದ್ರೆ, ಆವಜ್ಜಿ ದಕ್ಷಿಣ ಎನ್ನುತ್ತೆ. ಅಯ್ಯೋ ನಮ್ ಕೈಲಂತು ನಿಮ್ಮಮ್ಮುನ್ನ.ಸಂಬಾಳಿಸಲು ಆಗಲ್ಲವೊ ಮಾರಾಯ? ಹೆಂಡತಿ ಅಮ್ಮನಿಗೆ ಕೇಳಿಸುವಂತೆಯೆ ಹೇಳಿದಳು. ನಾವು ನಾಲ್ಕು ಜನರಿದ್ದು, ಅಜ್ಜೀನ ನೋಡ್‌ಕಳಾಕ್ ಆಗಲ್ಲವಂದ್ರೆ. ಮುಂದೆ ಇದೇ ವಯಸ್ಸಿಗೆ ನಮ್ಮುನ್ಯಾರ್ ನೋಡ್‌ಕಾ ಬೇಕು? ಪ್ರಶ್ನೆ ನನಗೆ ಗೊತ್ತಿಲ್ಲದಂತೆ ಈಚೆ ಬಂದಿತ್ತು.ಅಂದ್ರೆ ಸ್ವಾಮಿ ನಮಗು ನಿಮ್ಮಮ್ಮನಿಗು ಹೋಲುಸ್ ಬ್ಯಾಡ? ನಾವೆ ಬೇರೆ ನಿಮ್ಮಮ್ಮನೆ ಬ್ಯಾರೆ? ಎಂದು ಹೆಂಡತಿ ಮುಖ ತಿರುಗಿಸಿ ಕೊಂಡಿದ್ದಳು, ನಾನು ಕೂಡ ಯಾರಿಗು ಹೆಚ್ಚಾಗಿ ಹೇಳಲಾಗದೆ. ಯಾರ ಜೊತೆ ಹೆಚ್ಚಾಗಿ ಮಾತನಾಡದೆ. ನಾವು ಹುಟ್ಟಿ ಬೆಳದಿರುವ ಈ ಊರಿಗೆ, ಅಮ್ಮನನ್ನು ಬಿಡುವ ಮೊದಲು. ವಾತಾವರಣ ನೋಡಿಕೊಂಡೋಗುವ ಸಲುವಾಗಿ, ಬೆಂಗಳೂರಿನಿಂದ ಹಳ್ಳಿಗೆ ಬಂದೆ,

   ನಾನು ಕಾರು ಇಳಿದ ಕೂಡಲೆ,  ನಮ್ ಅಮ್ಮನ ಆತ್ಮೀಯ ಗೆಳತಿ. ನರಸಮ್ಮ ಎಂಬುವವಳ ಮನೆಗೆ, ನಾನೆ ಹುಡುಕಿಕೊಂಡು ಹೋದೆ. ಆಕೆ ನನ್ನನ್ನು ಕಕ್ಕುಲಾತಿಯಿಂದ ಕೂರಿಸಿ ಮಾತನಾಡಿಸಿದಳು. ನನ್ನ ಅಮ್ಮನ ನಿಸ್ಸಾಹಾಯಕತೆಯ ಬಗ್ಗೆ, ಮತ್ತು ಪುನಃ ಊರಿಗೆ ತಂದು ಬಿಡುವ ಯೋಚನೆಯ ಬಗ್ಗೆ ಹೇಳಿದೆ.ನರಸಮ್ಮ ನಖಾ ಶಿಕಾಂತ ಉರಿದು ಬಿಟ್ಟಳು. ಎಲ್ಲಾದರು ಉಂಟೇನೊ ಮಾರಾಯ.ಸುಖದ ಹಿಟ್ಟಿಕ್ಕುವ ಮಕ್ಕಳನ್ನ ನೆಚ್ಚಿಕೊಂಡು, ಹೋಗಿರುವ ಗಂಗಮ್ಮುನ್ನ.  ತಿರುಗಿ ಹಂಗಿನ ಹಿಟ್ಟಿಕ್ಕುವವಳ ಮನೆಗೆ. ವಾಪಸ್ಸು ತರುಬ್ಯಾಡವೋ ಮಾರಾಯ.ಎಂದು ಕಣ್ಣು ತುಂಬಿಕೊಂಡು ಹೇಳಿದಳು. ತಟ್ಟನೆ ನಾನು ವಾಪಸ್ಸು ಬೆಂಗಳೂರಿಗೆ ಬಂದು,ಶ್ರೀರಾಮಪುರದಲ್ಲಿ ಒಂದು ರೂಮು ಹಿಡುಕೊಂಡೆ, ಅಮ್ಮನನ್ನು ನಾನೆ ನೋಡಿಕೊಳ್ಳ ಬೇಕೆಂದು ನಿರ್ದಾರ ಮಾಡಿಕೊಂಡೆ, ಅದೇ ರಾತ್ರಿ ನನ್ನ ಮತ್ತು ಅಮ್ಮನ ಲಗೇಜು ಪ್ಯಾಕು ಮಾಡಿಕೊಂಡು, ಟ್ಯಾಕ್ಸಿ ಹತ್ತಿಸಿಕೊಂಡು ಹೊರಟುಬಿಟ್ಟೆ, ಮಾರನೆ ದಿನ ನಾನಿನ್ನು ಎದ್ದೇ ಇರಲಿಲ್ಲ. ಮೊಬೈಲು ಒಂದೇ ಸಮ ರಿಂಗಾಗತೊಡಗಿತ್ತು. ಅಪ್ಪ ಎಲ್ಲಿಗೋದೆ? ಮಗಳ ಪ್ರಶ್ನೆ, ರೀ ಇದೇನ್ರಿ ಹೇಳ್‌ದೆ ಕೇಳ್‌ದೆ ಎಲ್ಲೋದ್ರಿ? ಹೆಂಡತಿಯ ಅಳಲು, ಅಪ್ಪ ನೀನೆಲ್ಲಿದ್ದೀಯಾ? ನಾನು ಬರ್ತಿನಿ ಮಗನ ಒತ್ತಾಯ, ನಾನು ನಮಮ್ಮನ ಜೊತೆಯಿದ್ದೇನೆ, ಎಲ್ಲರಿಗು ಒಂದೇ ಉತ್ತರವೇಳಿದೆ. ಅಪ್ಪ ನೀನು ದಯವಿಟ್ಟು ಬಂದುಬಿಡು. ನಮಗೆ ನೀವು ಬೇಕೆ ಬೇಕು ಎಂದು, ಮಗ ಮತ್ತು ಮಗಳು ಒಂದೆ ಅಳಲು ಶುರುವಚ್ಚಿಕೊಂಡರು, ನನಗು ಅಷ್ಟೆ ನಮಮ್ಮ ಬೇಕೇ ಬೇಕು ಅಂದೆ.ರೀ ಬನ್ರಿ ಯಾರಾದ್ರು ನಗತ್ತಾರೆ, ನೀವು ಬೇರೆಯಲ್ಲ,ಅತ್ತೆಯು ಬೇರೆಯಲ್ಲ, ನಿಮ್ಮನ್ನ ಆಚೆ ಹೋಗೆಂದವರಾರು?ಎಂದು ಹೆಂಡತಿ ಬೈಯ್ಯಲು ಮುಂದಾದಳು. ನಾನು ಎರಡು ದಿನವಾದರು ಹೋಗದೆ ರೂಮಿನಲ್ಲೇ ಇದ್ದೆ. ಮೂರನೆ ದಿನ ಹೆಂಡತಿ ಮಗ ಮಗಳು, ಟ್ಯಾಕ್ಸಿ ತಗಂಡು ಅವರೆ ಖುದ್ದಾಗಿ ನಾವಿರುವಲ್ಲಿಗೆ ಬಂದರು. ಅಂಗೆ ಬಂದವರು ಒಂದು ಗಳಿಗೆಯು ನಿಲ್ಲದಂಗೆ,ನಮ್ಮನ್ನು ಲಗೇಜನ್ನು ಟ್ಯಾಕ್ಸಿಯಲ್ಲಿ ಹತ್ತಿಸಿಕೊಳ್ಳುವಾಗ,ಇಷ್ಟು ದಿನವು ಅಮ್ಮನನ್ನು ಮುಟ್ಟದೆ ಇದ್ದ ಹೆಂಡತಿ. ಅಮ್ಮನ ಮುಖಾ  ಮೂತಿಯನ್ನೆಲ್ಲ ಅವಳ ಸೆರಗಿನಲ್ಲಿ ಹೊರಸಿ, ತಲೆಯನ್ನು ನುಣ್ಣಗೆ ಬಾಚಿ, ತಾನೆ ಮುಂದು ಬಿದ್ದು, ಅಮ್ಮನನ್ನು ಟ್ಯಾಕ್ಸಿ ಹತ್ತಿಸಿ ಕೊಂಡಳು. ಇಷ್ಟು ದಿನ ಎದೆ ಬಾರವಾಗಿದ್ದ ಉಸಿರು,ಇವತ್ತು ನಿರಾಳವಾಗಿ ಈಚೆ ಬಂತು,


One thought on “

Leave a Reply

Back To Top