ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೊಳೆಯ ಹೊಳಹು

ನಿತ್ಯನೂತನವಿತ್ತು
ನಡೆವ ದಾರಿಗಳಲ್ಲಿ
ಮಲ್ಲಿಗೆಯ ಮೊಗವಿತ್ತು
ಮನದ ತುಂಬೆಲ್ಲಾ
ಸವಿಜೇನ ಸಿಹಿಯಿತ್ತು

ಗೆಳತಿಯರ ಗುಂಪಲ್ಲಿ
ಗೆಲುವಿನಾ ನಗುವಿತ್ತು
ನೆಗೆನೆಗೆದು ಕುಣಿವಾಗ
ಕಾಲುಗಳಲ್ಲಿ ಇನಿದನಿಯ
ಗೆಜ್ಜೆಯಾ ಧನಿಯಿತ್ತು

ನದಿಯ ಮೈಸವರಿ
ನಲಿನಲಿದು ನಿಂತಾಗ
ತಂಪು ನೀರೆಲ್ಲಾ
ನನ್ನ ಮೈಮನವನ್ನೆಲ್ಲಾ
ಹೌಹಾರಿ ಮುತ್ತಿಕ್ಕುತ್ತಿತ್ತು

ಸುಳಿಸುಳಿವ ಸುಳಿರಾಶಿ
ಹೊಳೆಹೊಳೆವ ಹೊಳೆರಾಶಿ
ಸುತ್ತಲೂ ಸುತ್ತುವರಿದ
ಜಲನ ಮೈ ರಾಶಿ
ಕೇಂದ್ರ ನಾನಿಲ್ಲಿ ಮೌನ ಹಾಸಿ

ಕಣ್ಣರಳಿದಷ್ಟೂ ಬೆಟ್ಟಗಳ ಸಾಲು
ಬೆಟ್ಟಗಳ ಮೈಮೇಲೆ ಹಸಿರು ನೂಲು
ಹೊಂಬಣ್ಣದ ರವಿಯಿಲ್ಲಿ ಮಲಗುತ್ತಿರಲು
ಸಂಗೀತದ ಸರಮಾಲೆಯಲ್ಲಿ ಹಕ್ಕಿಗಳ ಸಾಲುಸಾಲು

ಎಲ್ಲರ ದಾರಿಯೊಂದೇ
ತಮ್ಮ ತಮ್ಮ ಗೂಡುಗಳಿಗೆ
ಬೆಳಕ ಮರೆಮಾಚಿದ ರವಿಯು
ಬೆಟ್ಟದ ಹಸಿರೆಲ್ಲ ಕಪ್ಪುನೆರಳು

ನಾನೀಗ ಏಕಾಂಗಿಯೇ?
ಕತ್ತಲಿದೆ ಜೊತೆಗೆ
ಚಂದ್ರನಿರುವನು ಮೋಡದ ಒಳಗೆ
ನದಿಯ ನಾದವಿದೆ
ಜೀರುಂಡೆಗಳ ನಿನಾದವಿದೆ

ಇದ್ದರೂ ಇಲ್ಲಾ ಎನ್ನುವ ಭಾವವಿದೆ
ಭಯ ಬಿಗಿದ ಹೃದಯ ಬಡಿತವೂ ಇದೆ
ನನ್ನೆದೆಯ ಚಂದ್ರನಿಗೆ
ತಂಪಿಟ್ಟ ಪ್ರಕೃತಿಗೆ
ಬೆನ್ನು ಮಾಡಲು
ಒಲ್ಲದಾ ಮನಸ್ಸಿನ
ದಾರಿಯೂ ಇದೆ

ನಡೆವೆನೋ? ಓಡುವೆನೋ?
ಮನೆಯ ಮುಟ್ಟುವೆನೋ?
ತಿಳಿಯದಾ ದಾರಿಯಲಿ
ಕಪ್ಪು ಕತ್ತಲಿದೆ….

****

ಹಡಗು

business man on a boat watching the future with binoculars

ಶರಧಿಯ ಮೈಮೇಲೆ
ತುಳುಕುತ್ತಾ ಬಳುಕುತ್ತಾ,
ಸಾಕಷ್ಟು ಹೆಜ್ಜೆ ಇರಿಸಿದ್ದೇನೆ
ಆದರೆ ಲೆಕ್ಕವಿರಿಸಿಲ್ಲ

ಅಂಬೆಗಾಲಿನಿಂದ ತೊಡರಿ
ಎಡರಿ ಬಿದ್ದು ಎದ್ದುನಿಂತು
ಬಿರುಸಾದ ಹೆಜ್ಜೆಯನ್ನು ಇರಿಸಿದ್ದೇನೆ
ಆದರೂ ಲೆಕ್ಕವಿರಿಸಿಲ್ಲ

ಎಷ್ಟು ಹಾದು ಸಾಗಿದರೂ
ನನ್ನೆದೆಯ ಮೈದಾನದಲ್ಲಿ
ರಾಶಿ ರಾಶಿ ಯೋಚನೆಗಳ ಸರಕು
ಭಾರ ಭಾರದ ಸರಕುಗಳ ಹೊತ್ತೊಯ್ಯುವ ಮನಸಿಗೆ ಯೋಚನೆಗಳು ಭಾರ
ಎಂದರೆ ಮಾತ್ರ ತಪ್ಪಲ್ಲ

ದಿನವೂ ನೊಂದು
ಬೆಂದು ಬೇಯುವ
ಅಕ್ಕಿಗೆ ಯಾರಿದ್ದಾರೆ?
ತನ್ನ ಬೇಗುದಿಯ ಹಂಚಿ ತೀರಲು
ಒಬ್ಬಂಟಿಯಾಗಿ ನೆನೆಯಬೇಕು
ಬೇಯಬೇಕು ಬೆಂದು ಅನ್ನವಾಗಬೇಕು
ಜೊತೆಗಿರುವ ನೀರು ಏನು ತಾನೆ ಮಾಡೀತು?
ಎಲ್ಲದಕ್ಕೂ ಸಹಕರಿಸುವುದನ್ನು ಬಿಟ್ಟು…

ನನ್ನ ಯೋಚನೆಗಳು ಸ್ಥೀಮಿತದಲ್ಲಿಲ್ಲ
ಎಲ್ಲೆ ಮೀರಿ ದಾಟಿ ನಡೆದೇ ಬಿಟ್ಟಿವೆ
ದಿಕ್ಕಿಲ್ಲ ದೆಸೆಯಿಲ್ಲ
ಗುರಿಯಂತೂ ಮೊದಲೇ ಇಲ್ಲ

ಗಾಳಿ ಬಂದ ಕಡೆ ತೂರಿಕೊಳ್ಳುವುದು
ಪ್ರಶಾಂತ ಸಾಗರನ ನರ್ತನಕ್ಕೆ
ಮಾರುಹೋಗಿ, ದಿಗ್ಭ್ರಾಂತನಾಗಿ
ಪೆಚ್ಚಾಗಿ, ಹುಚ್ಚಾಗಿ
ಕುಣಿಕುಣಿದು, ನಲಿನಲಿದು
ತಾಳ- ತಂತಿಯ ಮೀಟಿ
ರಾಗ ಅನುರಾಗಗಳಲ್ಲಿ ಬೆರೆತು
ಇನ್ನೇನೋ ಶರಧಿಯ ಎದೆಯೊಳಗೆ
ಮುಳುಗಿಬಿಡಬೇಕು ಅಷ್ಟರಲ್ಲಿ
ಅದಾವುದೋ ಅರಿವೊಂದು ಬಂದು
ಎಚ್ಚರಿಸಿತು ನನ್ನ

ನೋಡು ಶರಧಿಯ ಮೇಲೆ
ಪಾದವಿಟ್ಟ ಮಾತ್ರಕ್ಕೆ
ಹಮ್ಮಿನಲ್ಲಿ ತೇಲದಿರು
ಎಷ್ಟೇ ಬಾರಿ ನೀ ಹೆಜ್ಜೆಯಿಟ್ಟರೂ ಉದ್ದವಾಗಿ, ಅಡ್ಡಲಾಗಿ, ಅಡ್ಡಾಡಿದರೂ ಶರಧಿಯ ಆಳದರಿವು ಮಾತ್ರ
ನಿನ್ನ ಕೈಗೆಟುಕದ ಅಚ್ಚರಿಯ ನಂಟು

ತಿಳಿಯಲೇ ಬೇಕೆಂಬ ಹುಂಬ ಯತ್ನಕ್ಕೆ
ಹಟಕ್ಕೆ ಬಿದ್ದೆಯೆಂದರೆ
ಹೇಳ ಹೆಸರಿಲ್ಲದಂತೆ ಶರಧಿಗೆ
ಆಹುತಿಯಾಗುವೆ, ಮೂಕ ವಿಸ್ಮಿತಳಾಗುವೆ
ಎಷ್ಟೇ ಶಕ್ತಿ ಪ್ರದರ್ಶಿಸಿದರು
ನೀನೊಂದು ಮನುಷ್ಯ ನಿರ್ಮಿತ ಹಡಗು
ಎಂಬುದ ಮರೆತೆಯೇನು?
ಮನುಷ್ಯನೆಂಬುದನು ಮರೆತೆಯೇನು?


ಒಲವು

.

About The Author

Leave a Reply

You cannot copy content of this page

Scroll to Top