ರೂಪಾಂತರ

ಕಾವ್ಯ ಸಂಗಾತಿ

ರೂಪಾಂತರ

ಏನೇ ಹೇಳಿ ಮನುಷ್ಯನಷ್ಟು
ವೈರಸ್ ರೂಪಾಂತರ ಹೊಂದಲ್ಲ

ಸಾಲ ಬೇಕಾದಾಗ ಒಂದು ರೂಪ
ಮರು ಪಾವತಿಗೆ ಇನ್ನೊಂದು ರೂಪ
ನೌಕರಿ ಇಲ್ಲದಾಗ ಒಂದು ರೂಪ
ನೌಕರಿ ಸಿಕ್ಕ ಮೇಲೆ ಸುರೂಪ

ಏನೇ ಹೇಳಿ ಮನುಷ್ಯನಷ್ಟು
ವೈರಸ್ ರೂಪಾಂತರ ಹೊಂದಲ್ಲ

ತಿಂದಾಗ ಒಂದು ರೂಪ
ತಿಂದು ತಿನ್ನದಂತೆ ಇರೊ ಇನ್ನೊಂದು ರೂಪ
ಕುಡಿಯದ ಮೊದಲು ಒಂದು ರೂಪ
ಕುಡಿದ ಮೇಲೆ ಹಲವು ರೂಪ

ಚುನಾವಣೆ ಮೊದಲು ಒಂದು ರೂಪ
ಗೆದ್ದ ಮೇಲೆ ಅಪರೂಪ
ಅಧಿಕಾರದಲ್ಲಿ ಇದ್ದಾಗ ಒಂದು ರೂಪ
ವಿರೋಧ ಪಕ್ಷದಲ್ಲಿದ್ದಾಗ ಮತ್ತೊಂದು ರೂಪ

ಏನೇ ಹೇಳಿ ಮನುಷ್ಯನಷ್ಟು
ವೈರಸ್ ರೂಪಾಂತರ ಹೊಂದಲ್ಲ

ಪ್ರವಚನದಲ್ಲಿ ಒಂದು ರೂಪ
ಪಲ್ಲಂಗದಲ್ಲಿ ಇನ್ನೊಂದು ರೂಪ
ಮಾಧ್ಯಮಗಳು ಒಳಗೊಂದು ರೂಪ
ಹೊರಗೆ ಬಹುರೂಪ

ಮಾತಿನಲ್ಲಿ ಒಂದು ರೂಪ
ಮೌನದಲ್ಲಿ ಇನ್ನೊಂದು ರೂಪ
ಬರಹದಲ್ಲಿ ಒಂದು ರೂಪ
ಬದುಕಿನಲ್ಲಿ ಇನ್ನೊಂದು ರೂಪ
ಬಹಿರಂಗ ಒಂದು ರೂಪ
ಅಂತರಂಗ ಕುರೂಪ

ಏನೇ ಹೇಳಿ ಮನುಷ್ಯನಷ್ಟು
ವೈರಸ್ ರೂಪಾಂತರ ಹೊಂದಲ್ಲ…


ಡಾ.ಶಿವಕುಮಾರ್ ಮಾಲಿಪಾಟೀಲ

One thought on “ರೂಪಾಂತರ

Leave a Reply

Back To Top