ನಾಗರಾಜ್ ಹರಪನಹಳ್ಳಿ ಕವಿತೆ ಖಜಾನೆ

ಪೃಥ್ವಿ ನಸು ನಕ್ಕಿತು

ಕರಗಿ ಹೋಗುವೆ ನಾ
ನೀ ಅಂಗೈ ಹಿಡಿದು ಮುದ್ದಿಸಿ
ಪ್ರೀತಿ ಬರೆದ ಕ್ಷಣ ನೆನೆದು

ಸಮುದ್ರ ನಿದ್ದೆ ಹೋಗಿದೆ ಈಗ
ಎಲ್ಲವೂ ಶಾಂತ

ಭೂಮಿಯ ಹೊಕ್ಕಳಿಗೆ ಮುತ್ತಿಟ್ಟು
ಸುಮ್ಮನೆ ಮಲಗಿದೆ ನಿನ್ನ ಮಡಿಲಲ್ಲಿ

ಆಕಾಶ ಬಾಗಿ ಬಾಗಿ ಕ್ಷಿತಿಜವ
ಮಾತಾಡಿಸಿ ಮೌನವಾಯಿತು

ನಿನ್ನ ಕಾಲುಗಳ ಹಿಡಿದು ಗೆಜ್ಜೆ ನಾದಕೆ
ಕಿವಿಗೊಟ್ಟೆ
ಭೂಮಿಯ ಥಕಥೈ ಎಂದು ಕುಣಿದು
ಮಣಿದು ದಣಿದು ,ಮೈಯಲ್ಲಿ ವಸಂತವುಕ್ಕಿತು

ಹಾಗೆ ನಿನ್ನ ಎದೆಯ ಕಣಿವೆ ಪರ್ವತಗಳಲ್ಲಿ
ಹೆಜ್ಜೆ ಹಾಕಿದೆ , ಎಲ್ಲವೂ ಮೊಗೆ ಮೊಗೆದು ಕೊಟ್ಟ ಪೃಥ್ವಿ ನಸು ನಕ್ಕಿತು

ಹಸಿರೊದ್ದ ವೊಡಲು ಮಗು ಕನಸಲ್ಲಿ
ನಕ್ಕಂತೆ ನಸು ನಾಚಿತು

ಗಲ್ಲಕೆ ಗಲ್ಲ‌ ಹಚ್ಚಿ ಪ್ರೇಮದ ಪಿಸುಮಾತು ಬಿತ್ತಿದೆವು
ಇಡೀ ನಭದ ಎದೆ ಝೆಲ್ಲೆಂದೆತು

ಮತ್ತೆ ಮತ್ತೆ ಕರಗುತ್ತೇನೆ ನಿನ್ನ ಕರಗಳಲ್ಲಿ
ಪ್ರೇಮವೇ ಆಗಿ
ಪ್ರೇಮವನ್ನೇ ಜಗದ ಒಡಲಿಗೆ ಹಂಚಿ

ಗೊತ್ತಾ ನಿನಗೆ ?!?
ಪ್ರೇಮವೆಂದರೆ ಕರಗುವುದು

ಮಗುವೊಂದರ ತುಟಿಯಲ್ಲಿ ಮೊಲೆಹಾಲು ಎದೆತುಂಬಿ ಹರಿಯುವುದು

**************

ಅನ್ನದೊಳಗೆ ಒಂದಗುಳ…

ಅನ್ನದೊಳಗೆ ಒಂದಗುಳ
ಬಯಸಿದೆ
ಬಸವಣ್ಣ ಎಚ್ಚರಿಸಿದ

ಸೆರಗಿನ ನಾದ ಹಿಡಿದೆ
ಪ್ರೀತಿಯ ಬಣ್ಣ ಸುಳಿಯೇ
ಅಕ್ಕ ಕದಳಿಯ ತೋರಿದಳು

ಕಡಲ ಅಲೆಯ ಮಾತಾಡಿಸಿದೆ
ದುಃಖದ ಸ್ವರ ಎದೆಗಿಳಿಯಿತು
ನೆರೋಡಾ ಕೈಚಾಚಿ ಹಸ್ತಲಾಘವ ಮಾಡಿದ

ನದಿಯ ಹರಿವಿಗೆ ಕಿವಿಗೊಟ್ಟೆ
ಮೌನದ ಧ್ಯಾನ ಕಂಡಿತು
ದಂಡೆಯಲಿ ಮೀನು ಹಿಡಿಯುತ್ತಿದ್ದ ಹೆಮಿಂಗ್ವೇ
ನಸು ನಕ್ಕರು

ಬಯಲು ಆಲಯವ ಮಾತಾಡಿಸಿದೆ
ಅಲ್ಲಮನ ಪ್ರತಿರೂಪ ಎದುರು ನಿಂತಿತು

ಬೀದಿಯ ದುಃಖ ಹಾದಿ ನೇವರಿಸಿದಂತೆ
ಶರೀಫನ‌ ತಂಬೂರಿ ನಾದ ಸಾಂತ್ವನ ಹೇಳಿತು

ಬೀಜ ದಿಂದ ಮರ ಬೆಳೆದು
ಮತ್ತೆ ಹಣ್ಣಾಗಿ ಬೀಜವ ಚೆಲ್ಲಿತು
ಮರದ ಕೆಳಗೆ ನಿಂತ ಕವಿ ಶಿವರುದ್ರಪ್ಪ ನಕ್ಕರು

ಮೂಕಜ್ಜಿ ಕನಸು ಕಾಣುತ್ತಿತ್ತು
ಹಠಾತ್ ಬಂದ ಕಾರಂತರು
ಸಂವಿಧಾನ ಕೈಗಿಟ್ಟರು

ಕಲ್ಲು ಕರಗುವ ಸಮಯಕ್ಕೆ
ಪ್ರೇಮಿಗಳು ಕಾದಿದ್ದರು
ದೂರದಲ್ಲಿ ನಿಂತ ಲಂಕೇಶರು
ಕಣ್ಣು ಮಿಟುಕಿಸಿದರು

ರೈತರ ಸಾವುಗಳಿಗೆ ಕುರುಡಾಗಿದ್ದ ದೊರೆ
ಕೊನೆಗೂ ಸಾವಿಗೆ ಮಣಿದ
ಹೋರಾಟದ ಹಾದಿಗೆ ಸಾವಿರಾರು ನದಿ ಹರಿಸಿದ
ಸಿದ್ದಲಿಂಗಯ್ಯ ಸ್ವರ್ಗದಿಂದ ಸಿಡಿದೆದ್ದರು
…….

ನನ್ನ ನಿನ್ನ ನಡುವೆ
ಪ್ರತಿ ಅಪೂರ್ಣ ಮಾತು
ಪ್ರೀತಿಯ ಹೊಸ ತುಡಿತ

ಪ್ರತಿ ಜಗಳ ವಾದ ಚರ್ಚೆ
ಹೊಸ ಮನ್ವಂತರ

ಪ್ರತಿ ಮುತ್ತು ಉನ್ಮಾದ
ಹೊಸ ಜನ್ಮದ ಉಗಮ

ಪ್ರತಿ ಸಾಮಿಪ್ಯ
ದಂಡೆಯಲ್ಲಿನ ಹೊಸ‌ಹೊಸ ಕನಸುಗಳು

ನನ್ನ ನಿನ್ನ ನಡುವಿನ
ಅಂತರ
ಸಾಮಿಪ್ಯದ ಬೀಜ ಮಣ್ಣೊಳಗೆ
ಪಿಸುಗುಡುವ ದನಿ

ನಾವು ತುಳಿದ ನೆಲ
ಪ್ರೇಮದ ಹೊಸ ಭಾಷ್ಯ

ನಮ್ಮೊಳಗಿನ ನದಿ ಕಡಲು ದಂಡೆ
ಕಾನನಗಳು
ನಮ್ಮನ್ನು ಬೆಸೆದ ಜೀವಕೊಡುವ
ಮೌನ ಜೀವದನಿಗಳು

ಇನ್ನೇನಿಲ್ಲ ;
ಸಾಕಲ್ಲ , ಬೇಗಂ ಬದುಕಲು
ಬುಟ್ಟಿ ತುಂಬಾ ಕನಸುಗಳು
ಹೊತ್ತು ನಡೆದಿದ್ದೇವೆ
ದಾರಿಹೋಕರಿಗೆ ನಗೆ ಹಂಚುತ್ತಾ
………………………..


ನಾಗರಾಜ್ ಹರಪನಹಳ್ಳಿ

7 thoughts on “ನಾಗರಾಜ್ ಹರಪನಹಳ್ಳಿ ಕವಿತೆ ಖಜಾನೆ

  1. ಎಷ್ಟೊಂದು ಚೆಂದ… ಮೊದಲು ತೊಟ್ಟ ಗೆಜ್ಜೆಯ ಗಲ್ ದನಿಯಂತೆ….!

    1. ಕವಿತೆಯ ಪ್ರತಿ ಸಾಲುಗಳು ಬಸವಾದಿ ಶರಣರನ್ನ ತತ್ವಪದಕಾರರನ್ನ ನೆನಪಿಸಿವೆ ವಾಸ್ತವದ ಹೊಸ ಬಣ್ಣದೊಂದಿಗೆ ನವಿರಾಗಿ ಮೈಳೆದು ನಿಂತ ಪರಿ ಚೆಂದವಾಗಿ ಮೂಡಿ ಬಂದಿದೆ

  2. ಒಂದೊಂದು ಕವಿತೆಯೂ ಸುಂದರ ಮತ್ತು ಅರ್ಥಪೂರ್ಣ.ಇಂತಹ ಕವನಗಳನ್ನು ಓದುವುದು ಮನಸ್ಸಿಗೆ ಹಿತ

    1. ಥ್ಯಾಂಕ್ಯೂ …
      ಅಕ್ಕರೆಯ ಕಾವ್ಯ ಓದಿಗೆ

  3. ಒಲವಲೇ..ಮಿಂದೆದ್ದ ಕವಿತೆ. ಅಭಿನಂದನೆ ಕವಿಗೆ ಮತ್ತೂ…. ಒಲಿದ ಕವಿತೆಗೆ.

    1. ಮುದ್ದು ಮುದ್ದಾದ ಪ್ರತಿಕ್ರಿಯೆ……

Leave a Reply

Back To Top