ಧಾರಾವಾಹಿ
ಭಾರತಿ ಸಂ ಕೋರೆ
ಐದನೆ ಕಂತು
ಪ್ರೀತಿಯ ಪಯಣ
ಪ್ರೀತಿಯ ಬಂಧ
ಜಾತಿ ಬೇರೆ ಬೇರೆ ಆದರೂ ದೇವಕಿ ಮತ್ತು ರಾಜ ಇಬ್ಬರದೂ ಕೇವಲ ಆಕರ್ಷಣೆಯ ಪ್ರೀತಿ ಆಗಿರಲಿಲ್ಲ. ಮೊದಲ ನೋಟದಲ್ಲೇ, ಮೊದಲ ಭೇಟಿಯಲ್ಲೇ ರಾಜನು ಮನದಲ್ಲಿ ಅಂದುಕೊಳ್ಳುತ್ತಾನೆ. ಇವಳು ನನ್ನ ಜೀವನ ಸಂಗಾತಿಯಾಗಿ ಬಂದರೆ ಎಷ್ಟು ಚೆನ್ನಾಗಿರುತ್ತೆ ಅಂತ. ದೇವಕಿಯು ಕೂಡ ಅವತ್ತೇ ಅಂದುಕೊಂಡಿದ್ದಳು. ಇಬ್ಬರು ಮನದಲ್ಲಿ ಅಂದುಕೊಂಡ ಹಾಗೇ ಇಬ್ಬರ ಜೀವನದಲ್ಲಿ ದೇವರ ಕೃಪೆಯಿಂದ, ದೇವರ ಸಾಕ್ಷಿಯಾಗಿ ಸಾಧ್ಯವೂ ಮತ್ತು ಸತ್ಯವೂ ಆಯಿತು. ನಿಜವಾದ ಪ್ರೀತಿ ಎಂದರೆ ಇಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಾರೆ. ಇಬ್ಬರ ನಡುವೆ ಒಡೆದು ಹೋಗಲಾರದಂತಹ ಬಂಧವೊಂದು ಬೆಳೆದುಬಿಟ್ಟಿರುತ್ತದೆ.
ದೇವಕಿ ಮತ್ತು ರಾಜನ ಪ್ರೀತಿ ಪರಿಶುದ್ಧ ಮತ್ತು ಸ್ವಾರ್ಥವಿಲ್ಲದ ನಿಜವಾದ ಪ್ರೀತಿ.ಅಂತಹ ನಿಜವಾದ ಪ್ರೀತಿಯನ್ನು ನಿರೂಪಿಸುವುದು ಕಷ್ಟವಾದರೂ ಒಬ್ಬರಿಗೊಬ್ಬರು ನಿಜವಾದ ಪ್ರೀತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವೇನೂ ಆಗಲಿಲ್ಲ.
ಅವರಿಬ್ಬರ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆದರೆ ರಾಜನ ದೇವಕಿಗೆ ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ? ಎಂಬ ಪ್ರಶ್ನೆ ಕಾಡುತಿತ್ತು. ಪ್ರೀತಿ ಮಾಡುವ ಹೆಣ್ಣಿನ ಮನದಲ್ಲಿ ಮೂಡುವ ಪ್ರಶ್ನೆ ಇದು. ನಿಜವಾದ ಪ್ರೀತಿ ಅನ್ನೋದು ಪರಿಪೂರ್ಣ ಪ್ರಣಯವದು.ಆದರೆ ಅದನ್ನು ಗುರುತಿಸಿಕೊಳ್ಳುವುದು ಸುಲಭವಲ್ಲ.ಪ್ರೀತಿಯನ್ನು ಹೃದಯ ಬಡಿತದಿಂದ ಅನುಭವಿಸಲು ಸಾಧ್ಯವಿಲ್ಲ. “ಲವ್ ಅಟ್ ಫಸ್ಟ್ ಸೈಟ್” ಅನ್ನೋದು ವ್ಯಾಮೋಹ ಹೊರತು ಬೇರೆ ಅಲ್ಲ. ಆದರೆ ಪ್ರೀತಿ ಶುರುವಾಗೋದು ಅಲ್ಲಿಂದಲೇ ಅಲ್ಲವೇ???
ದೇವಕಿ ಮತ್ತು ರಾಜನ ಪ್ರೀತಿ ಪರಿಪೂರ್ಣತೆ ಪಡೆದುಕೊಳ್ಳಲು ಸುಮಾರು
1 ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ದೇವಕಿಯ ಜೀವನದಲ್ಲಿ ರಾಜನು ಬಂದ ಮೇಲೆ ಮತ್ತೆ ಮತ್ತೆ ಅವನ ನೋಡಬೇಕು,ಮಾತನಾಡಬೇಕು,ಅವನು ನೆನಪಾದ ತಕ್ಷಣ ಮುಖದ ಮೇಲೆ ನಗು,ಸಂತೋಷ ಅನಿಸುತ್ತೆ. ಅವನ ಬಳಿ ಗಂಟೆಗಟ್ಟಲೆ ಮಾತನಾಡಿದರು ಸಾಕೇನಿಸುವುದಿಲ್ಲ. ದೇವಕಿ ತನ್ನ ಬಗ್ಗೆ ಯೋಚನೆ ಬಿಟ್ಟು ರಾಜನ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾಳೆ. ಅವನ ಇಷ್ಟ ಕಷ್ಟಗಳ ಬಗ್ಗೆ,ಉಡುಗೆ ತೊಡುಗೆ ಬಗ್ಗೆ ಆಸಕ್ತಿ ತೋರಿಸುತ್ತಾಳೆ. ಅವನು ಕೂಡ ಇವತ್ತು ಯಾವ ಡ್ರೆಸ್ ಹಾಕಿದಿರಿ? ಅದು ಸರಿ ಕಾಣೋಲ್ಲ, ಇದು ಹಾಕಿ,ಎನ್ನುವ ಮಟ್ಟಿಗೆ ಫೋಟೋ ನೋಡುವ ಮೂಲಕ ಪ್ರೀತಿ ಸಂತೋಷ ಹಂಚಿಕೊಳ್ಳುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಒಬ್ಬರಿಗೊಬ್ಬರು ನೆನಪು ಮಾಡಿಕೊಳ್ಳುವುದು. ಎದ್ದ ತಕ್ಷಣ ಫೋನಿನಲ್ಲಿ ಫೋಟೋ ನೋಡುವ ತವಕ.ಹೀಗೆ ಫೋನ್ ಕಾಲ್ ಬಂದಾಗ ನಗುತ್ತ ಅವರದೇ ಕಾಲ್ ಇರಬಹುದು ಅಂತ ಊಹೆ. ರಾಜನ ಮೆಸೇಜ್ ಓದುವಾಗ ತುಟಿಯಂಚಿನಲ್ಲಿ ಕಿರುನಗೆ ಅವಳಿಗೆ ಗೊತ್ತಿಲ್ಲದೆ ಬರುತಿತ್ತು.
ಅಲ್ಲಿ ಅಸೂಯೆ ಹೊಟ್ಟೆ ಕಿಚ್ಚು ಕೂಡ ಪಡುತ್ತಿದ್ದಳು ದೇವಕಿ.ಏಕೆಂದರೆ ರಾಜ ಬೇರೆಯವರ ಜೊತೆ ಮಾತನಾಡಿದರೆ ,ಸಮಯ ಕಳೆದರೆ ಈ ಥರ ಭಾವನೆ ದೇವಕಿಯ ಮನದಲ್ಲಿ ಉಂಟಾಗುತ್ತಿತ್ತು.
ಇದು ಅವಳ ಸಂದೇಹವಲ್ಲ ಬದಲಾಗಿ ನನ್ನ ಹುಡುಗ ನನ್ನ ಜೊತೆ ಅಷ್ಟೇ ಮಾತನಾಡಬೇಕು ಬೇರೆ ಹೆಣ್ಣು ಮಕ್ಕಳ ಜೊತೆ ಬೇಡ ಅನ್ನುವ ಸ್ವಾರ್ಥ.
ಎಲ್ಲ ಅರ್ಥ ಮಾಡಿಕೊಳ್ಳುವ ದೇವಕಿ ಈ ವಿಷಯದಲ್ಲಿ ಮಾತ್ರ ರಾಜನ ಮೇಲೆ ಸಿಟ್ಟಾಗುತ್ತಿದ್ದಳು. ಅಂದರೆ ಅದು ಅವಳಿಗೆ ಗೊತ್ತಿಲ್ಲದೆ ಅಷ್ಟು ಗಾಢವಾಗಿ ಪ್ರೀತಿ ಮಾಡುತ್ತಿದ್ದಳು ಎಂದು ತೋರಿಸುತ್ತದೆ ಅವಳ ಪ್ರೀತಿ.
ಪ್ರೀತಿ ಎನ್ನುವುದು ಒಂದು ವಿಶೇಷ ಭಾವನೆ. ಪ್ರೀತಿಯಲ್ಲಿ ಬಿದ್ದರೆ ಅದರ ಹುಚ್ಚುತನ ಪ್ರಪಂಚಕ್ಕೆ ಖಂಡಿತ ಕಾಣುತ್ತದೆ. ವ್ಯಾಮೋಹ,ಸಂತೋಷ, ಉತ್ಸಾಹ,ಹೆದರಿಕೆ, ಎಲ್ಲದರ ಮಿಶ್ರಣ ಈ ಪ್ರೀತಿ. ರಾಜನು ದೇವಕಿಯ ಜೊತೆ ಇದ್ದಾಗ ಹೆಚ್ಚು ಉತ್ಸಾಹ ಮತ್ತು ಸಂತೋಷದಿಂದ ಇರುತ್ತಿದ್ದಳು. ಅವನು ಹೋದ ತಕ್ಷಣ ಮತ್ತೆ ಯಾವಾಗ ಬರುತ್ತಾರೆ ಎಂದು ಕಾಯುತ್ತ ಕುಳಿತು ಬಿಡುತ್ತಿದ್ದಳು. ರಜೆ ಇದ್ದಾಗ ಇಡೀ ದಿನ ಅವನ ಜೊತೆ ಕಳೆದರೂ ಅವನು ಹೋದ ಮೇಲೆ ಮತ್ತೆ ಒಂಟಿತನ ಅನುಭವಿಸುತ್ತಿದ್ದಳು. ಅವನು ನನ್ನ ಬಗ್ಗೆ ಯೋಚನೆ ಮಾಡುತ್ತಾನೆಯೇ? ಇಲ್ಲವೇ? ಎಂದು ಯೋಚಿಸುತ್ತ ನೋವಿನಲ್ಲೂ ಸಂತೋಷ ಅನುಭವಿಸುತ್ತ ದೇವಕಿ ನಿದ್ರೆಗೆ ಜಾರಿದಳು.
ರಜೆ ಇದ್ದಾಗ ರಾಜನ ಜೊತೆ ಸಮಯ ಕಳೆಯಲು ಬಯಸುತ್ತಿದ್ದಳು. ರಾಜನು ಕೂಡ ಅವಳ ರಜೆ ದಿನವ ಕಾಯುತ್ತಿದ್ದ. ಇಬ್ಬರು ಪರಸ್ಪರ ಇಬ್ಬರು ಇಷ್ಟ ಕಷ್ಟಗಳ ಹಂಚಿಕೊಳ್ಳಲು ಮತ್ತು ಅವರವರ ಆಸಕ್ತಿಗಳನ್ನು ತಿಳಿದುಕೊಳ್ಳಲು ಸಮಯ ಮಿಸಲಿಡುತ್ತಿದ್ದರು.
ಇಬ್ಬರು ಸಹ ಪ್ರೀತಿಯಲ್ಲಿ ಸಂಪೂರ್ಣವಾಗಿ ಆಳವಾದ ಸಂಬಂಧದಲ್ಲಿ ನಂಬಿಕೆಯ ಗೋಡೆ ಭದ್ರ ಬುನಾದಿಯ ಅಡಿಪಾಯದಲ್ಲಿ ಮತ್ತಷ್ಟು ಗಟ್ಟಿಯಾಗುತ್ತದೆ. ದೇವಕಿ ರಾಜನ ಜೊತೆಗೆ ಇದ್ದಾಗ ಬಹಳ ಸುರಕ್ಷಿತ ಭಾವನೆ ಅನುಭವಿಸುತ್ತಿದ್ದಳು ದೇವಕಿ.
ಕಾಲ ಎಸ್ಟು ಬದಲಾದರೂ ಪವಿತ್ರ ಪ್ರೀತಿ ಮಾತ್ರ ಯಾವ ಕಾರಣಕ್ಕೂ ಬದಲಾಗಿಲ್ಲ ಅನ್ನುವುದಕ್ಕೆ ಸಾಕ್ಷಿ ರಾಜ ಮತ್ತು ದೇವಕಿಯ ಪ್ರೀತಿ.
ಏಕೆಂದರೆ,
ಈಗಿನ ಜನರೇಶನ್ ನಲ್ಲಿ ತುಂಬಾ ಫಾಸ್ಟ್ ಆಗಿ ಶುರುವಾದ ಪ್ರೀತಿ.. ಅಷ್ಟೇ ಫಾಸ್ಟ್ ಆಗಿ ಬ್ರೇಕ್ ಅಪ್ ಆಗಿ, ಮತ್ತೆ ಹೊಸ ಲವರ್ ಹುಡುಕಿಕೊಳ್ಳುವಂತಹ ಕಾಲವಿದು. ಇಂತಹ ದಿನಗಳಲ್ಲಿ ರಾಜನ ಹಾಗೆ ಒಳ್ಳೆಯ ಸಭ್ಯ ಹುಡುಗ ಸಿಕ್ಕಿದ್ದು ನನ್ನ ಭಾಗ್ಯ ಎನ್ನುತ್ತಾಳೆ ದೇವಕಿ.
ಒಂದು ಸಲ ರಾಜನು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಬೇಕಾದಂತಹ ಸಂದರ್ಭ.
ದೇವಕಿಗೆ ತನ್ನ ಜೀವವೇ ಹೋದಂತ ಅನುಭವವಾಗುತ್ತದೆ. ಕೆಲಸದ ಒತ್ತಡದಲ್ಲಿ ರಾಜ ಕಾಲ್ ಸಹ ಮಾಡುವುದಿಲ್ಲ. ಇಲ್ಲಿ ಇವಳು ಸರಿಯಾಗಿ ಊಟ,ತಿಂಡಿ ಸಹ ಮಾಡದೇ ಬರಿ ಟೀ ಕುಡಿದು ಇರುತ್ತಾಳೆ.
ಬದುಕು ಬೇಸರ ಅನಿಸತೊಡಗಿತು. ಆಫೀಸಿನಲ್ಲಿ ಅಕ್ಷರಗಳು ಬೇರೆ ಬೇರೆ ಕಾಣತೊಡಗುತ್ತವೆ. ದೇವಕಿಯ ಮೊಬೈಲ್ ನಲ್ಲಿಯ ಕರೆಗಳು ರಾಜನ ಕಾಲ್??? ಮೆಸೇಜ್ ಗಳು ಬಂದರೆ ರಾಜನದೇ
ಎನ್ನುವಷ್ಟು ಕಾತುರ. ಹೀಗೆ 4 ದಿನ ಕಳೆದು ಆ ದಿನ ರಾತ್ರಿ ಅವನ ಕಾಲ್ ಬಂದಾಗ ಎಲ್ಲಿಲ್ಲದ ಸಂತೋಷ ಪಡುತ್ತಾಳೆ ದೇವಕಿ.ಕಾಲ್ ರಿಸೀವ್ ಮಾಡಿ ಹೇಳಿ ಎನ್ನುವಾಗ ಕಣ್ಣಲ್ಲಿ ನೀರು ತುಂಬಿ, ಗಂಟಲು ಬಿಗಿದಿರುತ್ತೆ. ರಾಜನು ಏನಾಯಿತು ಯಾಕ್ರೀ ಹುಷಾರಿಲ್ಲವೇ? ನೆಗಡಿ ಆಗಿದೆಯಾ?ನಿಮ್ಮ ಮಾತು ಯಾಕೆ ಹೀಗಿದೆ?ಎಂದು ಪ್ರಶ್ನೆ ಮಾಡಿದಾಗ, ಹಾಗೇನು ಇಲ್ಲರಿ ಹೋಗಿ ಇಷ್ಟು ದಿನ ಆಯಿತು ನೀವು. 1 ಮೆಸೇಜ್ ಇಲ್ಲ,ಕಾಲ್ ಇಲ್ಲ ಅದಕ್ಕೆ ಬೇಜಾರು ಅಂತ ಅಳಲು ಶುರು ಮಾಡಿದಾಗ ..
ಸಾರಿ ಪಾ ಜೊತೆಯಲ್ಲಿ ಎಲ್ಲರೂ ಇದ್ದರು ಅದಕ್ಕೆ ಮಾಡೋಕೆ ಆಗಲಿಲ್ಲ ಅಂತ ಹೇಳುತ್ತಾನೆ. ಯಾವಾಗ ಬರ್ತೀರಾ ಎಂದು ದೇವಕಿ ಕೇಳಿದಾಗ ರಾಜ ಮನದಲ್ಲಿ ಖುಷಿ ಪಡುತ್ತಾನೆ ಎಸ್ಟು ಪ್ರೀತಿ ಮಾಡ್ತಾಳೆ ನನ್ನ ಎಂದುಕೊಂಡು, ನಾಳೆ ಭೇಟಿಯಾಗುವ ಎಂದು ಹೇಳುತ್ತಾನೆ. ಆಗ ದೇವಕಿ ಹೌದಾ? ಬಂದಿದಿರಾ? ಊರಿಗೆ ಎಂದು ಕೇಳಿದಾಗ,ಹೌದು ಎಂದು ನಗುತ್ತ ಹೇಳುತ್ತಾನೆ. ಆಗ ದೇವಕಿ ಬನ್ನಿ ನಿಮಗೆ ಹೇಳತಿನಿ ಎನ್ನುತ್ತ ನಾಳೆಯ ಭೇಟಿಗಾಗಿ ಇಬ್ಬರು ಕಾಯುತ್ತಾರೆ..
ಮುಂದಿನ ಮಂಗಳವಾರ..ಕಥೆಯ ಮುಂದುವರೆದ ಭಾಗ..
ಭಾರತಿ ಸಂ ಕೋರೆ
ಭಾರತಿ ಸಂ ಕೋರೆ.
(ಲೇಖಕರು.ಸಾಹಿತಿಗಳು.
ಅಂಕಲಿ ಬೆಳಗಾವಿ ಜಿಲ್ಲೆ) ಇವರು ಪ್ರತಿಷ್ಠಿತ ಕೆ.ಎಲ್. ಇ ಸಂಸ್ಥೆಯ ಸಿ.ಎಸ್.ಕಿತ್ತೂರು ಪ್ರೌಢಶಾಲೆ ಅಥಣಿಯಲ್ಲಿ ಶಿಕ್ಷಕಿಯಾಗಿ ಒಂಬತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಣ (ಫ್ಯಾಷನ್ ಡಿಸೈನರ್) ಎಂ.ಎ.ಬಿ ಇಡಿ. ಇವರು ಶಾಲೆಯಲ್ಲಿ ಹಂಚಿಕೊಂಡ ಶಾಲಾ ವಿಭಾಗಗಳು – 04
ಸಾಹಿತ್ಯ ಕ್ಷೇತ್ರ ಮತ್ತು ಸಂಘಗಳು – 08 ಇವರ ಪ್ರಕಟಿತ ಕೃತಿ – 01(ಶಾರದಾ ಪ್ರಭೆ ಡಾ.ಪ್ರಭಾಕರ ಕೋರೆಯವರ ಕುರಿತು)
ಬಿಡುಗಡೆ ಹಂತದಲ್ಲಿರುವ ಕೃತಿಗಳು – 02
ಇವರ ಆಸಕ್ತಿ : ಕಥೆ,ಕವನ,ಕಾದಂಬರಿ ಬರೆಯುವುದು,ಓದುವುದು, ಸಂಗೀತ,ನೃತ್ಯ,ಚಿತ್ರಕಲೆ ಮುಂತಾದವು.
ಇನ್ನು ಇವರನ್ನು ಅರಸಿ ಬಂದ ಪ್ರಶಸ್ತಿಗಳು
04 ರಾಜ್ಯ ಪ್ರಶಸ್ತಿಗಳು
03 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ಭಾರತಿ ಕೋರೆಯವರು ಶಿಕ್ಷಕ ವೃತ್ತಿಯ ಜೊತೆಗೆ ನುಡಿ ಮುತ್ತುಗಳು,ಹನಿಗವನ,ಅಂಕಣ ಬರಹ ಮುಂತಾದವುಗಳನ್ನು ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.