ಅನುವಾದಿತ ಅಬಾಬಿಗಳು
ಆಕರ : ಕಾಲಂ ಸಾಕ್ಷಿಗಾ
(ತೆಲುಗು ಅಬಾಬಿಗಳ ಸಂಕಲನ)
ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್
ಕನ್ನಡಾನುವಾದ : ಧನಪಾಲ ನಾಗರಾಜಪ್

೫೧)
ಯಾಕಿಷ್ಟು ಕರ್ಕಶ?
ಏನಾಗಿದೆ ಈ ಮನುಷ್ಯರಿಗೆ?
ಮಾನವತ್ವವನು ಮರೆತು ದಾನವರಂತೆ
ಹಕೀಮಾ
ಸ್ತ್ರೀ ಅಂದರೆ ಪ್ರಾಣಿಯೆ ಅಥವಾ ಗುಲಾಮಳೆ?
೫೨)
ಬಲಿಯಾಗುತಿಹರು ಮಹಿಳಾ ಮೂರ್ತಿಗಳು
ಮಾನಸಿಕೆ ವೇದನೆಯಿಂದ ಜೀವಚ್ಛವಗಳಾಗಿ
ಮೈ ಮೇಲಿನ ಗಾಯಗಳಂತಿರಲಿ ಮನಸ್ಸೇ ಗಾಯ
ಹಕೀಮಾ
ಪರ ಸ್ತ್ರೀಯಲ್ಲಿ ನಮ್ಮ ತಾಯಿ ಕಾಣುವುದಿಲ್ಲವೆ?
೫೩)
ಮುಷ್ಠಿ ಅನ್ನಕ್ಕೆ ಪರದಾಟ
ರಸ್ತೆಯಲ್ಲಿ ಹರಿದ ಎಲೆಯಾದ ಜೀವನಗಳು
ಅನಾಥರು ಆರ್ತನಾದದ ವಾರಸರೆ?
ಹಕೀಮಾ
ಕತ್ತಲೆಯಲ್ಲಿ ಮಾಡಿದ ಕಡುಪಾಪಕ್ಕೆ ಸಾಕ್ಷಿಗಳು!
೫೪)
ಮಳೆಯ ಹನಿಗಳ ಸಪ್ಪಳ
ಮಕ್ಕಳು ಆಡುತ ಹೊಳವರು ಫಳಫಳ
ಅಂದವಾದ ಅನುಭವ ಬಾಲ್ಯ
ಹಕೀಮಾ
ಅದಕ್ಕೆ ಅಲ್ಲೇ ನಿಂತು ಬಿಡೋಣ!
೫೫)
ಸ್ವಾರ್ಥದ ಮುಸುಕಿನಲ್ಲಿರುವ ಮನುಷ್ಯ
ಜೀವನವಿಡೀ ನಾನು, ನನ್ನದು ಎಂದು
ಸದಾ ತನಗಾಗಿಯೇ ಬಾಳುವನು
ಹಕೀಮಾ
ಹಣದ ಮೋಜಿನಲ್ಲಿ ಮುಳುಗಿಹನು.
೫೬)
ಮನಸ್ಸಿಗೆ ಪ್ರಶಾಂತತೆ ಎಲ್ಲಿ?
ಮನುಷ್ಯನೇ ಚಿವುಟಿ ಹಾಕುತ್ತಿಹನಿಲ್ಲಿ
ಸಂಬಂಧಗಳನ್ನು ಕಡಿದುಕೊಳ್ಳುತ್ತ ಓಡುತಿಹನು
ಹಕೀಮಾ
ಗುಲಾಮಗಿರಿಯತ್ತ ಹೆಜ್ಜೆಗಳು ಸಾಗಿವೆ.
೫೭)
ಆಲಸ್ಯವನ್ನು ಬೇಗನೇ ಬಿಡು
ಭಯವನ್ನು ಹೊರಗೋಡಿಸು
ನಿಸ್ವಾರ್ಥದಿಂದ ಜೀವಿಸು
ಹಕೀಮಾ
ತುಂಬು ಮನದಿಂದ ಮಾತಾಡಿಸು.
೫೮)
ನೀನು ಒಳ್ಳೆಯವನೆಂದುಕೊಳ್ಳುವೆ
ಎಲ್ಲರನ್ನೂ ಅಣಕಿಸುವೆ
ಮನದ ಕನ್ನಡಿಯಲ್ಲಿ ನೋಡಿಕೋ
ಹಕೀಮಾ
ನಿಜ ರೂಪವನ್ನು ಪರಿಶೀಲಿಸಿಕೋ.
೫೯)
ಯಾಕೆ ಜನರೆಂದರೆ ತಾತ್ಸಾರ
ಹೇಳುವವರ ಮಾತು ಕೇಳುತ್ತ
ನೀನು ವಾಸ್ತವವಾಗಿ ನಿಜವೇನಾ?
ಹಕೀಮಾ
ಅತ್ಯಗತ್ಯ ಆತ್ಮಜ್ಞಾನ ಪ್ರಕ್ಷಾಳನ.
೬೦)
ಎಟುಕದ ದ್ರಾಕ್ಷಿಗೆ ಹುಡುಕಾಟ
ಅತಿಯಾಸೆಯೆ ನಿನಗೆ ಹೆಣಗಾಟ
ಇರುವುದರಲ್ಲಿ ಹೊಂದಿಕೊಂಡಿರು ಒಳಿತು
ಹಕೀಮಾ
ಇಲ್ಲದಕ್ಕಾಗಿ ಪರದಾಟ ಅಗತ್ಯವಿಲ್ಲ.
೬೧)
ನೀತಿಯಲ್ಲಿದೆ ಪ್ರಶಾಂತ ಚಿತ್ತ
ನೈತಿಕ ಮೌಲ್ಯಗಳ ಸಾಧನೆ
ತರಬಲ್ಲದು ಸಮಾಜದಲ್ಲಿ ಸುಧಾರಣೆ
ಹಕೀಮಾ
ಸಂತೋಷದ ಸಿರಿಯಿಂದ ಬಾಳುವರು ಜನರು.
೬೨)
ಒಡಹುಟ್ಟಿದವರ ಬಗ್ಗೆ ಕಾಳಜಿಯಿಲ್ಲ
ಹೋರಾಟಗಳಲ್ಲಿ ಕ್ರಿಯಾಶೀಲ ಪಾತ್ರಗಳಂತೆ
ಫೇಸ್ಬುಕ್ಕಿನಲ್ಲಿ ಪೋಸ್ಟುಗಳು ಪೆಟ್ಟುಗಳಂತೆ
ಹಕೀಮಾ
ಮನುಷ್ಯನ ಮನಸ್ಸಿಗೆ ಮುಸುಕಿದೆಯೇನೋ?
೬೩)
ಕಾಲದೊಂದಿಗೆ ಎದ್ದು ಬಿದ್ದು ಓಡುತಿಹರು
ಸಮಯವಿರದ ಮನುಷ್ಯರು
ಜೊತೆಯಲ್ಲಿರುವವರೊಂದಿಗೆ ದೂರ
ಹಕೀಮಾ
ಜೀವನವೇ ಮಾನಸಿಕ ವೈಕಲ್ಯವೆ?
೬೪)
ಇರುವುದನ್ನು ಲೆಕ್ಕಿಸುವುದಿಲ್ಲ
ಇಲ್ಲದಕ್ಕಾಗಿ ಹುಡುಕಾಟ
ಮನುಷ್ಯನೆಷ್ಟು ಸ್ವಾರ್ಥಿ..!
ಹಕೀಮಾ
ಎಲ್ಲಾ ಬೇಕೆನ್ನುವ ಆಸೆಬುರುಕ.
೬೫)
ರಸ್ತೆ ಪಾಲಾಗುತ್ತಿರುವ ಜೀವನಗಳು
ಛಿದ್ರವಾಗಿ ರೋದಿಸುತ್ತಿರುವ ಮನಸ್ಸುಗಳು
ಗಮ್ಯವೇನೋ ತಿಳಿಯದೆ ಅಂಧಕಾರ
ಹಕೀಮಾ
ಗಮನವೇ ಇರದ ಜೀವನ ಕಾರಾಗಾರ.

ಸಂಗಾತಿ ಬಳಗಕ್ಕೆ ಧನ್ಯವಾದಗಳು
ಎಲ್ಲಾ ಅಬಾಬಿಗಳು ತುಂಬಾ ಅರ್ಥಗರ್ಭಿತವಾಗಿವೆ ಸರ್..