ಅಂಕಣ ಬರಹ
ಸಾಧಕಿಯರ ಯಶೋಗಾಥೆ
‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ
ಸಮಾಜ ಸೇವಕಿ ಬೇಗಂ ಐಜಾಜ್ ರಸೂಲ್ (1909-2001)
ಬೇಗಂ ಐಜಾಜ್ ರಸೂಲ್ ಅವರು ಭಾರತೀಯ ಸಂವಿಧಾನ ಕರಡು ಪ್ರತಿ ರಚನಾ ಸಮಿತಿಯ ಏಕಮಾತ್ರ ಮುಸ್ಲಿಂ ಸದಸ್ಯೆಯಾಗಿದ್ದರು. ಇವರು 1909 ಏಪ್ರೀಲ್ 3 ರಂದು ಅಂದಿನ ಬ್ರಿಟಿಷ್ ಭಾರತದ ಲಾಹೋರ್ ಪಂಜಾಬ್ನಲ್ಲಿ ಜನಿಸಿದರು. ಇವರ ತಂದೆ-ಸರ್ ಜುಲ್ಫಿಕರ್ ಅಲಿಖಾನ್, ತಾಯಿ ಮಹಮುದಾ ಸುಲ್ತಾನ್. ಬೇಗಂ ಐಜಾಕರ್ ಮೊದಲ ಹೆಸರು ಕೂಡ್ಸಿಯಾ ಬೇಗಂ. ಕೂಡ್ಸಿಯಾರವರು 1929 ರಲ್ಲಿ ನವಾಬ್ ರಸೂಲ್ ಅವರೊಂದಿಗೆ ವಿವಾಹವಾದರು. ಮುಸ್ಲಿಂ ಸಂಪ್ರದಾಯದ ಪ್ರಕಾರವೇ ಇವರ ಮದುವೆಯನ್ನು ತಂದೆಯವರು ನೇರವೇರಿಸಿದರು. ಇವರು 14 ವರ್ಷದವರಿರುವಾಗ ತಂದೆ ಮರಣ ಹೊಂದಿದರು. ತಂದೆಯ ಮರಣದ ನಂತರ ಗಂಡನ ಸಂಬಂಧಿಕರು ಬಂದು ಸ್ಯೆಂಡಿಲಾಕ್ಕೆ ಕರೆದುಕೊಂಡು ಹೋದರು. ಗಂಡನ ಮನೆಯಲ್ಲಿ ಕೂಡ್ಸಿಯಾರವರ ಹೆಸರನ್ನು ಬದಲಾಯಿಸಿ ಗಂಡನ ಹೆಸರಿನಿಂದಲೇ ಇವರನ್ನು ಗುರುತಿಸಲು ಪ್ರಾರಂಭಿಸಿದ್ದರು. ಹಾಗೇಯೆ ಕೂಡ್ಸಿಯಾರವರ ಎಲ್ಲಾ ದಾಖಲೆಗಳನ್ನು ಕೂಡ ಬೇಗಂ ಐಜಾಜ್ ರಸೂಲ್ ಎಂದು ಪರಿವರ್ತಿಸಲಾಯಿತು.
1935ರ ಹೊತ್ತಿಗೆ ಭಾರತ ಸರ್ಕಾರದ ಚುನಾವಣಾ ಕಾಯ್ದೆ ಬಂದ ನಂತರ ದಂಪತಿಗಳಿಬ್ಬರು ರಾಜಕೀಯ ಪ್ರವೇಶ ಪಡೆದರು. ಉತ್ತರ ಪ್ರದೇಶದಲ್ಲಿ ಮೀಸಲಾತಿ ಇಲ್ಲದೆ, ವಿಧಾನಸಭೆಗೆ ಸ್ಪರ್ಧಿಸಿ ಯಶಸ್ವಿಯಾಗಿ ಆಯ್ಕೆಯಾದ ಕೆಲವೇ ಮಹಿಳೆಯರಲ್ಲಿ ಇವರೂ ಕೂಡ ಒಬ್ಬರಾಗಿದ್ದಾರೆ. ಇವರು 1952 ರವರೆಗೆ ವಿಧಾನಸಭೆಯ ಸದಸ್ಯರಾಗಿದ್ದರು. ಬೇಗಂ ಐಜಾಜ್ರವರು 1937 ರಿಂದ 1940 ರವರೆಗೆ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. ಈ ಸ್ಥಾನವನ್ನು ಅಲಂಕರಿಸಿದ ಭಾರತದ ಮೊದಲ ಮಹಿಳೆ ಮತ್ತು ವಿಶ್ವದ ಮೊದಲ ಮುಸ್ಲಿಂ ಮಹಿಳೆಯಾರಾಗಿದ್ದಾರೆ. ಬೇಗಂ ಐಜಾಜ್ ಅವರು ಜಮೀನ್ದಾರಿ ಪದ್ಧತಿ ನಿರ್ಮೂಲನೆಗಾಗಿ ಹೋರಾಡಿದರು. ಹಾಗೇಯೆ ಧರ್ಮದ ಆಧಾರದ ಮೇಲೆ ಪ್ರತ್ಯೇಕವಾದ ಮತದಾರರ ಬೇಡಿಕೆಯನ್ನು ಬಲವಾಗಿ ವಿರೋಧಿಸಿದ್ದವರಾಗಿದ್ದಾರೆ.
1946 ರಲ್ಲಿ ಭಾರತದ ಸಂವಿಧಾನದ ಸಭೆಗೆ ಆಯ್ಕೆಯಾದ 28 ಜನ ಮುಸ್ಲಿಂಲೀಗ್ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಇವರು ಅಸಂಬ್ಲಿಯ ಒಬ್ಬಳೇ ಮುಸ್ಲಿಂ ಮಹಿಳೆಯಾಗಿದ್ದರು. 1950ರಲ್ಲಿ ಮುಸ್ಲಿಂ ಲೀಗ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಾಗ ಬೇಗಂ ಐಜಾಜ್ ಅವರು ಕಾಂಗ್ರೇಸ್ಗೆ ಸೇರಿಕೊಂಡರು. ಇವರು 1952 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ನಂತರ 1969 ರಿಂದ 1989 ರವರೆಗೆ ಉತ್ತರ ಪ್ರದೇಶದ ವಿಧಾನ ಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
1969 ರಿಂದ 1971 ರವರೆಗೆ ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಸಚಿವರಾಗಿದ್ದರು. 2000 ರಲ್ಲಿ ಸಾಮಾಜಿಕ ಕಾರ್ಯಗಳಿಗೆ ಸಲ್ಲಿಸಿದ ಕೊಡುಗೆಗಳಾಗಿ ಸರ್ಕಾರವು ಇವರಿಗೆ ಪದ್ಮಭೂಷಣ ನೀಡಿ ಗೌರವಿಸಿತು. ಇವರು 2001 ರಲ್ಲಿ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು.
ಬೇಗಂ ಐಜಾಜ್ ಅವರು 20 ವರ್ಷಗಳ ಕಾಲ ಭಾರತೀಯ ಮಹಿಳಾ ಹಾಕಿ ಒಕ್ಕೂಟದ ಅಧ್ಯಕ್ಷರಾಗಿದ್ದರು ಮತ್ತು ಏಷ್ಯನ್ ಮಹಿಳಾ ಹಾಕಿ ಒಕ್ಕೂಟದ ಅಧ್ಯಕ್ಷರಾಗಿದ್ದರು. ಭಾರತೀಯ ಮಹಿಳಾ ಹಾಕಿ ಕಪ್ಗೆ ಬೇಗಂ ಐಜಾಜ್ ಅವರ ಹೆಸರನ್ನು ಇಡಲಾಗಿದೆ. ಇವರು ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದರು. ಇವರು ‘ತ್ರಿವಿಕ್ ಇನ್ ಜಪಾನ್’ ಎಂಬ ಪುಸ್ತಕವನ್ನು ಬರೆದಿದ್ದಾರೆ ಹಾಗೂ ಇವರು ಅನೇಕ ಪತ್ರಿಕೆಗಳಿಗೆ, ಮ್ಯಾಗಜಿನ್ಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಬೇಗಂ ಐಜಾಜ್ ಅವರ ಆತ್ಮ ಚರಿತ್ರೆ “ಪರ್ದಾ ಟು ಪಾರ್ಲಿಮೆಂಟ್: ಎ ಮುಸ್ಲಿಂ ವುಮೆನ್ ಇನ್ ಇಂಡಿಯನ್ ಪಾಲಿಟಿಕ್ಸ್” ಎಂಬುದಾಗಿದೆ.
ಡಾ.ಸುರೇಖಾ ರಾಠೋಡ್