ಲಲಿತ ಪ್ರಬಂಧ
ನಿದ್ದೆ ಬಾರದಿದ್ದಾಗ
ಸಮತಾ ಆರ್.
ಹಸಿವು,ಬಾಯಾರಿಕೆ, ನಿದ್ರೆ,ಕಾಮನೆಗಳೆಂಬ ಬೇಸಿಕ್ ಇನ್ಸ್ಟಿಂಕ್ಟ್ ಗಳಿಂದ ತಪ್ಪಿಸಿಕೊಂಡಿರುವವರು ಯಾರು?ವಿಜ್ಞಾನ ಶಿಕ್ಷಕಿಯಾಗಿ ವಿದ್ಯಾರ್ಥಿಗಳಿಗೆ ಜೀವಿಗಳ ಗುಣಲಕ್ಷಣಗಳ ಬಗ್ಗೆ ಹೇಳುವಾಗ ಮೊದಲು ಹೇಳುವುದೇ ಇವುಗಳ ಬಗ್ಗೆ. ಬೇರೇ ಜೀವಿಗಳಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಇವುಗಳು ಇದ್ದರೂ , ಇಲ್ಲದೇ ಇರುವ ಜೀವಿಗಳಂತೂ ಇಲ್ಲವೇ ಇಲ್ಲ.
ಮನುಷ್ಯರಲ್ಲಿ ಕೇವಲ ಜೀವಕ್ರಿಯೆಗಳಾಗಿ ಮಾತ್ರ ಇರದೇ ಸುಖದ ಸಾಧನಗಳಾಗಿ ಬಿಟ್ಟಿವೆ.ಯಾವುದಾದರೊಂದು ಜೀವಿ ಹೊಟ್ಟೆ ತುಂಬಿಸಿಕೊಳ್ಳುವುದರ ಹೊರತು, ಬೇಸರ ಕಳೆಯಲೋ,ಇಲ್ಲವೇ ಸಂಭ್ರಮಪಡಲೋ ತಿನ್ನುವುದನ್ನು ನೋಡಿದ್ದೀರಾ!ಸುಮ್ಮನೆ ಆರಾಮಾಗಿ, ವಿಶ್ರಾಂತಿಗಾಗಿ, ಸುಖವಾಗಿ, ಹೊತ್ತಲ್ಲದ ಹೊತ್ತಿನಲ್ಲಿ ಹೊದ್ದು ಮಲಗುವ ಜೀವಿ ಮನುಷ್ಯ ಮಾತ್ರ.
ಇಡೀ ದಿನದ ಜಂಜಾಟ,ದುಡಿತದ ದಣಿವು,ನೋವು, ಸಂಕಟ,ಆಯಾಸ ಎಲ್ಲವನ್ನೂ ಸ್ವಲ್ಪ ಹೊತ್ತಾದರೂ ಮರೆಯುವ ಹಾಗೆ ನಿದ್ದೆ ಮಾಡುತ್ತದೆ.
ನಿದ್ದೆ ಅನ್ನೋದು ಹಗಲಿಡೀ ದುಡಿದು ದಣಿದ ದೇಹಗಳಿಗೆ
ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಮತ್ತೆ ತುಂಬಿಕೊಳ್ಳಲು,ದಣಿವು ಹೋಗಲಾಡಿಸಿಕೊಂಡು ಇನ್ನೊಂದು ದಿನದ ಉಳಿವಿಗಾಗಿ ಹೋರಾಟ ಮಾಡಲು ಪ್ರಕೃತಿ ನೀಡಿರುವ ಒಂದು ವರ.
ಆದರೆ ಎಚ್ಚರವಿರದ ಹಾಗೆ ಸತತ ಏಳರಿಂದ ಎಂಟು ಗಂಟೆಯವರೆಗೆ ತಡೆರಹಿತ ನಿದ್ದೆ ಮಾಡುವ ಸುಖ ಎಲ್ಲರೂ ಏನೂ ಪಡೆದುಕೊಂಡು ಬಂದಿರುವುದಿಲ್ಲ.ಈಗೀಗ ಅಂತೂ ಓದಿನ, ಕೆಲಸದ,ಆಧುನಿಕ ಕಾಲದ ಹಲವು ವಿಧದ ಒತ್ತಡಗಳ ಜಂಜಾಟಗಳ ಬದುಕಲ್ಲಿ “ಅಯ್ಯೋ! ಯಾಕೋ ರಾತ್ರಿ ಹೊತ್ತು ನಿದ್ದೆನೇ ಬರೋಲ್ಲ ಕಣ್ರೀ,”ಅಂತ ಹೇಳೋರು ಜಾಸ್ತಿಯೇ ಆಗ್ತಾ ಇದ್ದಾರೆ.
ನನ್ನ ಗೆಳತಿಯೊಬ್ಬಳು ಟಿವಿ ಸೀರಿಯಲ್ ಗಳ ಅಭಿಮಾನಿ.ಕನ್ನಡ, ಹಿಂದಿ, ಇಂಗ್ಲಿಷ್ ಅಂತ ಇರೋ ಬರೋ ಕಾರ್ಯಕ್ರಮಗಳನ್ನೆಲ್ಲ ನೋಡಿಕೊಂಡು ಮಲಗೋದು ರಾತ್ರಿ ಹನ್ನೆರಡಕ್ಕೆ.ಅವಳ ಗಂಡನೋ ಯೋಗಾಭ್ಯಾಸದ ಅಭಿಮಾನಿ.ಬೆಳಗ್ಗೆ ನಾಲ್ಕಕ್ಕೆ ಎದ್ದು ಟಿವಿಯಲ್ಲಿ ಬರುವ ಬಾಬಾ ರಾಮದೇವರ ಯೋಗದ ಪ್ರಾತ್ಯಕ್ಷಿಕೆ ನೋಡಿ ಯೋಗ ಕಲಿಯುವ ಚಪಲ ಅವನಿಗೆ.ಹಾಗಾಗಿ ಅವರ ಮನೆಯ ಟಿವಿ ನಾನ್ ಸ್ಟಾಪ್ ಬಸ್ ನ ಹಾಗೆ ಯಾವಾಗಲೂ ಓಡ್ತಾ ಇರುತ್ತೆ.ಇದರ ಕಿರಿ ಕಿರಿ ಮಾತ್ರ ಅವಳತ್ತೆ ಅನುಭವಿಸಬೇಕು.
ಒಮ್ಮೆ ಅವರ ಮನೆಗೆ ಹೋದಾಗ ಅವರತ್ತೆ ಬೆಳಿಗ್ಗೆ ಹನ್ನೊಂದು ಗಂಟೆಗೇ,ಮಾತಿನ ಮಧ್ಯೆ ಆಕಳಿಸಿಕೊಂಡು,ತೂಕಡಿಸಿಕೊಂಡು ಕುಳಿತಿದ್ದರು.”ಯಾಕೆ ಆಂಟಿ,ರಾತ್ರಿ ನಿದ್ದೆ ಸರಿಯಾಗ ಲಿಲ್ವ” ಅಂದಿದ್ದಕ್ಕೆ,”ಯಾರಿಗಮ್ಮ ನನ್ನ ಕಷ್ಟ ಹೇಳಲಿ,ರಾತ್ರಿ ಹನ್ನೆರಡರವರೆಗೆ ಮಲಗಲು ಏಕ್ತಾ ಕಪೂರ್ ಬಿಡೋದಿಲ್ಲ,ಬೆಳಿಗ್ಗೆ ನಾಲ್ಕು ಗಂಟೆಗೇ ಬಾಬಾ ರಾಮದೇವ್ ಏಳಿಸಿ ಬಿಡ್ತಾನೆ,ಅದಕ್ಕೆ ಹಗಲೊತ್ತೇ ಸ್ವಲ್ಪ ನಿದ್ದೆ ಮಾಡಿಕೊಳ್ತೀನಿ,”ಎಂದು ನಕ್ಕರು.ನನ್ನ ಗೆಳತಿ ಮುಖ ಪೆಚ್ಚಾಗಿ ಹೋಯಿತು. ನಾನೂ ನಂತರ ಅವಳಿಗೆ ಬೈದು ಹೇಳಿದೆ.”ಅಲ್ಲಾ ಕಣೆ, ವಯಸ್ಸಾದವರು ಸ್ವಲ್ಪ ನಿದ್ದೆ ಮಾಡೋಕೂ ಬಿಡಬಾರದ? ಅದಿನ್ನೆಂತ ಟಿವಿ ಹುಚ್ಚು ನಿಂದು “ಎಂದಾಗ,”ಹೂಂ ಕಣೆ,ಇನ್ಮೇಲೆ ಅತ್ತೆಗೆ,ಮೇಲಿನ ಮಹಡಿ ರೂಂ ನಲ್ಲಿ ಮಲಗೋಕೆ ವ್ಯವಸ್ಥೆ ಮಾಡ್ತೀನಿ.ಟಿವಿ ಹಾಲ್ ಪಕ್ಕದಲ್ಲೇ ಅವರ ರೂಂ,ಅದಕ್ಕೆ ಅವರಿಗೆ ನಿದ್ದೆ ಹಾಳಾಗುತ್ತಿತ್ತು.”ಎಂದು ಹೇಳಿ ಅದರಂತೆ ಮಾಡಿದ ಮೇಲೆ ಅವರತ್ತೆಗೆ ಎಷ್ಟೋ ಸಮಾಧಾನವಾಯಿತು.
ಬರೀ ಟಿವಿ ಮಾತ್ರವಲ್ಲ,ಇಂಟರ್ ನೆಟ್,ಸ್ಮಾರ್ಟ್ ಫೋನ್ ಬಂದ ಬಳಿಕ ರಾತ್ರೆ ಬಹಳ ಹೊತ್ತಿನ ವರೆಗೆ,ಫೇಸ್ ಬುಕ್, ವಾಟ್ಸಾಪ್, ಇನ್ಸ್ ಸ್ಟ
ಗ್ರಾಂ , ಯೂ ಟ್ಯೂಬ್ ಅಂತೆಲ್ಲ ನಿದ್ದೆಗೆಡೋರ ಸಂಖ್ಯೆಯೂ ಜಾಸ್ತಿಯೇ. ಇನ್ನು ಅಂತರ್ಜಾಲದ ಮುಖಾಂತರ ಲ್ಯಾಪ್ ಟಾಪ್,ಕಂಪ್ಯೂಟರ್ ಬಳಸಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡೋರ ಕೆಲಸದ ವೇಳೆ ರಾತ್ರಿ ಪಾಳಿಯಾದರಂತೂ ನಿದ್ರೆಗೆಟ್ಟು ಕೆಲಸ ಮಾಡಬೇಕು.
ಮಕ್ಕಳಿಗಂತೂ ಓದುವುದು ರಾಶಿ ರಾಶಿ ಬಿದ್ದಿರುತ್ತದೆ.ನಮ್ಮ ಕಾಲದಲ್ಲಿ ನಾವೆಲ್ಲ ಆರಾಮಾಗಿ ಓದಿಕೊಂಡು ಕೆಲಸ ತೆಗೆದುಕೊಳ್ಳಲೇ ಇಲ್ಲವಾ?ಈಗಿನ ಮಕ್ಕಳಿಗೇಕೆ ವಿದ್ಯಾಭ್ಯಾಸದ ಸಲುವಾಗಿ ಇಷ್ಟೊಂದು ಒತ್ತಡ ಅನ್ನಿಸಿದರೂ, ಸ್ಪರ್ಧೆಯೂ ಅಷ್ಟೇ ಏರುಮುಖವಾಗಿ ಸಾಗುತ್ತಿದೆಯಲ್ಲವಾ ಅನ್ನಿಸುವುದು ಕೂಡ ಹೌದು.
ಒಟ್ಟಾರೆ ಚಿಕ್ಕವ – ದೊಡ್ಡವರೆನ್ನದೆ ಬಹುತೇಕ ಜನರ ಸಮಸ್ಯೆ ಈ ನಿದ್ರಾಹೀನತೆ.”ಚಿಂತೆ ಇಲ್ಲದ ಮುಕ್ಕ ಸಂತೇ ಲೂ ನಿದ್ದೆ ಮಾಡಿದ “ಅಂತ ಒಂದು ಗಾದೆ ಇದೆ.ಅದು ನಿಜವೇ. ಸುಖವಾದ ನಿದ್ದೆ ಬೇಕು ಅಂದರೆ ಯಾವುದೇ ವಿಧದ,ಆತಂಕ,ಚಿಂತೆ ಇಲ್ಲದ ಸ್ಥಿತಿ ಇರಬೇಕು.ಈಗೀಗ ಅಂತೂ ಸಾವಿರದ ಮನೆಯಿಂದ ಸಾಸಿವೆಯೇನೋ ತಂದು ಬಿಡಬಹುದು, ಆದರೆ ಚಿಂತೆ ಇಲ್ಲದ ಮುಕ್ಕನನ್ನು ಎಲ್ಲಿ ಹುಡುಕುವುದು? ದಿನಾ ಬೆಳಗೆದ್ದು,ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಎಲ್ಲರೂ ಓಡುತ್ತಿರುವ ಈ ಕಾಲದಲ್ಲಿ ಚಿಂತೆ,ಆತಂಕ,ಒತ್ತಡಗಳು ಜೀವನದ ಭಾಗವೇ ಆಗಿ ಹೋಗಿ ಬಿಟ್ಟಿವೆ.ಇವುಗಳ ನೇರ ಪರಿಣಾಮ ಮಾತ್ರ ನಮ್ಮಗಳ ನಿದ್ದೆ ಮೇಲೆ ಆಗುತ್ತಿದೆ.
ಕೆಲವರಿಗಂತೂ ನಿದ್ದೆಗೆಡೋಕೆ ಅಂಥಾ ಏನೂ ದೊಡ್ಡ ಸಮಸ್ಯೆಯೇ ಎದುರಾಗಬೇಕು ಅಂತಾ ಏನೂ ಇಲ್ಲ,ಸಣ್ಣ ಸಣ್ಣ ಸಂಗತಿಗಳೇ ಸಾಕು.”ನಾಳೆ ಬೆಳಿಗ್ಗೆಗೆ ತಿಂಡಿ ಏನು ಮಾಡೋದು,ಸಂಬಳ ಈ ತಿಂಗಳು ಕೂಡ ಏಕೆ ತಡವಾಗ್ತಿದೆ,ಕಾರ್ ಬ್ಯಾಟರಿ ಇಷ್ಟು ಬೇಗ ಹಾಳಾಯಿತಲ್ಲ,ಮಗಳಿಗೆ ಗಣಿತದಲ್ಲಿ ಕಮ್ಮಿ ಅಂಕ ಬಂದಿದೆ,ಪಕ್ಕದ ಮನೆಯ ಗೆಳತಿ ಹೊಸ ಬಳೆ ಮಾಡಿಸ್ಕೊಂಡು ಮಿಂಚುವಾಗ ನಾನು ಯಾವಾಗ ಮಾಡಿಸಿಕೊಳ್ಳೋದು,ಫೇಸ್ ಬುಕ್ ನಲ್ಲಿ ಅಚಾನಕ್ ಎಂದು ಕಣ್ಣಿಗೆ ಬಿದ್ದ ಕಾಲೇಜು ದಿನಗಳ ಎದೆ ಮಿಡಿತವೊಂದಕ್ಕೆ ಫ್ರೆಂಡ್ ರಿಕ್ವೆಸ್ಟ್ ಕಳಿಸುವುದಾ?ಬೇಡ್ವಾ? ನಾಳೆ ಮನೆಕೆಲಸದಾಕೆ ರಜ ಮಾಡ್ತಾಳಲ್ಲ”, ಹೀಗೆ ಚಿಲ್ರೆ ಚಿಲ್ರೆ ವಿಷಯಗಳಿಗೆ ಜನರಿಗೆ ನಿದ್ದೆಗೆಡಷ್ಟು ಯಾವ ಗ್ಲೋಬಲ್ ವಾರ್ಮಿಂಗ್ ಗೂ ಕೆಡೊಲ್ಲ ಬಿಡಿ. ಇನ್ನು ಕೆಲಸದ ಸ್ಥಳದಲ್ಲಿ ಒತ್ತಡ,ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಬಾಂಧವ್ಯ ಇರದೇ ಹೋದರೆ ನಿಮ್ಮ ನಿದ್ದೆ ಕಥೆ ಮುಗಿದಂತೆಯೇ ಸರಿ.
ಎಷ್ಟೋ ಜನರಿಗೆ ಯಾವುದಾದರೂ ದುರ್ಘಟನೆಗಳ ಕಣ್ಣಾರೆ ಕಂಡಾಗ ಆಗುವ ತಲ್ಲಣ,ಆತಂಕ, ಭಯಗಳು ವರ್ಷಗಟ್ಟಲೆ ಕಾಡಿ ನಿದ್ದೆಗೆಡಿಸುತ್ತವೆ.ಇತ್ತೀಚಿನ ಟಿವಿ ವಾಹಿನಿಗಳು ಪ್ರಸಾರ ಮಾಡುವ ಸುದ್ದಿಗಳನ್ನು ಎಡೆಬಿಡದೆ ಒಂದು ವಾರ ನೋಡಿಬಿಡಿ,ಕನಿಷ್ಟ ಒಂದು ವರ್ಷವಾದರೂ ನಿದ್ದೆಗೆಡದಿದ್ದರೆ ಹೇಳಿ.
ನನಗಂತೂ ಈ ನಿದ್ದೆಗೆಡುವ ಖಾಯಿಲೆ ಎಷ್ಟು ವರ್ಷಗಳಿಂದ ಇದೆ ಅನ್ನೋದೇ ಮರೆತು ಹೋಗಿ ಬಿಟ್ಟಿದೆ.
ಅದರಲ್ಲೂ ಬೆಳಿಗ್ಗೆ ಬೇಗ ಏಳಲು ಅಲಾರ್ಮ್ ಇಟ್ಟು ಮಲಗಿರುವ ರಾತ್ರಿ ವೇಳೆ ಏನಾದರೂ ಬೆಳಗಿನ ಜಾವ ಎರಡು ಇಲ್ಲ ಮೂರು ಗಂಟೆಗೆ ಎಚ್ಚರವಾಗಿ ಬಿಟ್ಟರೆ ಮುಗೀತು.”ಇನ್ನೇನು ಅಲಾರ್ಮ್ ಹೊಡೆಯುತ್ತೆ,ಇನ್ನೇನು ಅಲಾರ್ಮ್ ಹೊಡೆಯುತ್ತೆ,” ಅಂದುಕೊಂಡೇ ನಿದ್ದೆ ಬಾರದು ಅಂದ್ರೆ ಬಾರದು.ಒಂದು ದಿನ ನಿದ್ದೆಗೆಟ್ಟರೆ ಅದರ ಮಂಕನ್ನು ಕಳೆದುಕೊಳ್ಳಲು ಇನ್ನು ಒಂದು ವಾರವಾದರೂ ಬೇಕು.”ನಿದ್ದೆ ಗೆಟ್ಟೋ,ಬುದ್ಧಿ ಗೆಟ್ಟೋ,”ಅನ್ನೋ ಮಾತಿನ ಹಾಗೆ ಆಗುವ ಕಸಿ ವಿಸಿ ಅಷ್ಟಿಷ್ಟಲ್ಲ.
ಹಾಗಂತ ದಿನಾ ನಿದ್ದೆ ಮಾತ್ರೆ ತೆಗೆದು ಕೊಂಡು ಮಲಗಲು ಸಾಧ್ಯವೇ? ಹಾಗಾಗಿ ನಿದ್ದೆ ಚೆನ್ನಾಗಿ ಬರಲು ಏನೇನು ಉಪಾಯಗಳು ಸಾಧ್ಯವೋ ಅವನ್ನೆಲ್ಲ ಹುಡುಕಿದೆ.
ಸಲಹೆ ಸೂಚನೆಗಳ ಹುಡುಕಿ ಹೊರಟಾಗ ಎರಡು ಜನ್ಮಕ್ಕಾಗೋವಷ್ಟು ಪುಕ್ಕಟ್ಟೆ ಸಲಹೆಗಳು ಸಿಕ್ಕವು.”ರಾತ್ರಿ ಸಕ್ಕರೆ ಹಾಕಿದ ಹಾಲು ಕುಡಿದು ಮಲಗಿ,ರಾತ್ರೆ ರಾಗಿ ಮುದ್ದೆ ತಿಂದು ಮಲಗಿ,ನಿದ್ದೆ ವದ್ದುಕೊಂಡು ಬರುತ್ತೇ,ಒಂದೆಲಗ ಸೊಪ್ಪಿನ ಕಷಾಯ ಕುಡಿಯಿರಿ,ತಲೆಗೆ ಹರಳೆಣ್ಣೆ ಒತ್ತಿಕೊಳ್ಳಿ,ಸಂಜೆ ಹೊತ್ತು ಟೀ ಕಾಫೀ ಕುಡಿ ಯೋದು ಬಿಟ್ಟು ಬಿಡಿ”, ಹೀಗೆ ಒಂದು ರಾಶಿ ರಾಶಿ ಬಂದು ಬಿದ್ದವು.ಯಾವುದನ್ನು ಮಾಡೋದು ಯಾವುದನ್ನು ಬಿಡೋದು? ಅದರಲ್ಲೂ ಇವೆಲ್ಲವನ್ನೂ ನೆನಪಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯ ನನ್ನ ಮರೆಗುಳಿ ತಲೆಗೂ ಇಲ್ಲ.
ಈಗೀಗ ಬರಿ ಸ್ನೇಹಿತರ,ನೆಂಟರಿಷ್ಟರ,ಅಕ್ಕಪಕ್ಕದವರ ಸಲಹೆ ಸೂಚನೆ ಮಾತ್ರವಲ್ಲ,ಪುಕ್ಕಟ್ಟೆ ಉಪಾಯಗಳು ಅಂತರ್ಜಾಲದ ಕೃಪೆಯಿಂದಾಗಿ ಸ್ಮಾರ್ಟ್ ಫೋನ್ ಗಳ ಲ್ಲೂ ಸಿಗುತ್ತವೆ.ಹಾಗೆ ಯಾವುದೋ ಒಂದು ಯೂ ಟ್ಯೂಬ್ ವಿಡಿಯೋದಲ್ಲಿ ಆಧ್ಯಾತ್ಮ ಗುರುವೊಬ್ಬ,”ಮಲಗಿದಾಗ ನಿಮ್ಮ ಉಸಿರಾಟದ ಮೇಲೆ ಗಮನವಿಡಿ,ಎರಡು ನಿಮಿಷದಲ್ಲಿ ನಿದ್ದೆ ಬರುತ್ತೇ,”ಅನ್ನೋದನ್ನು ಕೇಳಿಕೊಂಡು ಅದನ್ನೇ ಅನುಸರಿಸಿದೆ.ನಿದ್ದೆ ಏನೋ ಬಂತು ಆದರೆ ಜೊತೆ ಜೊತೆಗೆ ಗೊರಕೆಯೂ ಜೋರಾಯಿತು.ನನ್ನ ಗೊರಕೆ ಏನೋ ನನಗೆ ಕೇಳಿಸದು ಬಿಡಿ.ಆದರೆ ನನ್ನ ಗಂಡನಿಗಾದ ಹಿಂಸೆ ಅಷ್ಟಿಷ್ಟಲ್ಲ.ಉಪನ್ಯಾಸಕ ವೃತ್ತಿಯ ಅವರು ಪಾಪ ಓದಿಕೊಂಡು ಮಲಗಲು ಬರುವಷ್ಟರಲ್ಲಿ ರಾತ್ರಿ ಹನ್ನೊಂದು ಕಳೆದಿರುತ್ತೆ. ಇನ್ನು ಹತ್ತು ಗಂಟೆಗೇ ಮಲಗಿ ಗರಗಸ ಕುಯ್ಯುವ ನನ್ನ ನಿದ್ದೆಯ ಹಾವಳಿಯಿಂದ ಅವರಿಗೆ ಎಷ್ಟೊತ್ತಾದರೂ ನಿದ್ರೆ ಬಾರದು ಅಂದ್ರೆ ಬಾರದು.ಎಷ್ಟೋ ಬಾರಿ ನನ್ನನ್ನು ಅಲ್ಲಾಡಿಸಿ ಏಳಿಸಿ,”ಸ್ವಲ್ಪ ಪಕ್ಕಕ್ಕೆ ತಿರುಗಿ ಮಲಗೆ,”ಎಂದು ಗೋಗರೆದಿದ್ದಾರೆ. ಅವರಿಗೋ ರಾತ್ರೆ ದಿಂಬಿಗೆ ತಲೆ ಕೊಟ್ಟ ತಕ್ಷಣವೇ ನಿದ್ದೆ ಬಂದು ಬಿಡಬೇಕು.ಹಾಗಾಗಿ ನನ್ನ ಗೊರಕೆ ಹಾವಳಿ ತಡೆಯಲಾರದೆ ಮಗನ ರೂಮಿಗೆ ಶಿಫ್ಟ್ ಆಗಿಬಿಟ್ರು. ಮಗಳು ನನ್ನ ರೂಮಿಗೆ ಬಂದು ಬಿಟ್ಟಳು.
ಆ ರೀತಿ ಗೊರಕೆ ಹೊಡೆದುಕೊಂಡು ಬರುವ ಗಾಢ ನಿದ್ರೆ ಮಲಗಿದ ಶುರುವಿನಲ್ಲಿ ಬಂದರೂ,ಮತ್ತೆ ಬೆಳಗಿನ ಜಾವ ಮೂರು,ನಾಲ್ಕಕ್ಕೆಲ್ಲ ಎಚ್ಚರವಾದರೆ ಮತ್ತೆ ನಿದ್ರೆ ಬರೋಲ್ಲ.
ಹೀಗೆ ನಿದ್ದೆಗೆಟ್ಟು ಸಾಕಾಗಿ ಹೋದಾಗ ಯಾರೋ ವೈದ್ಯರ ಬಳಿ ಹೋಗಲು ಸಲಹೆ ಕೊಟ್ಟರು.
ವೈದ್ಯರ ಬಳಿ ಹೋದರೆ ಅವರೋ ಇಡೀ ಜೀವನ ಚರಿತ್ರೆಯನ್ನೇ ಕೇಳಿದರು.ಕೆಲಸ, ಓಡಾಟ ಇತ್ಯಾದಿಗಳಿಂದ ಆಗಿರುವ ಒತ್ತಡದಿಂದ ನಿದ್ದೆ ಕಡಿಮೆ ಯಾಗುತ್ತಿದೆ ಅನ್ನೋ ನನಗೆ ಗೊತ್ತಿರುವ ಕಾರಣವನ್ನೆ ಹೇಳಿ ಒಂದಷ್ಟು ನಿದ್ದೆ ಮಾತ್ರೆ ಕೊಟ್ಟು ಕಳುಹಿಸಿದರು.
ನಿದ್ದೆ ಮಾತ್ರೆ ತೊಗೊಳ್ಳಲು ಮನಸ್ಸು ಬಾರಲಿಲ್ಲ.
ಹಾಗೆ ಹೇಗೋ ರಾತ್ರಿ ಹೊತ್ತು ಸ್ವಲ್ಪ ನಿದ್ದೆ ಮಾಡಿಕೊಂಡು, ದಿನಾ ಕೆಲಸಕ್ಕೆಂದು ಬಸ್ ನಲ್ಲಿ ಪ್ರಯಾಣಿಸುವಾಗ ತೂಕಡಿಸಿಕೊಂಡು ಕಾಲ ಹಾಕಿದ್ದಾಯಿತು.
ಹೀಗಿರುವಾಗ ಒಮ್ಮೆ ಸಹೋದ್ಯೋಗಿಯೊಬ್ಬರು ರಾತ್ರೆ ಮಲಗುವ ಮುನ್ನ ಅಂಗಾಲಿಗೆ ಚೆನ್ನಾಗಿ ಕೊಬ್ಬರಿ ಎಣ್ಣೆ ಮಸಾಜ್ ಮಾಡಿಕೊಂಡು ಮಲಗಲು ಹೇಳಿದರು.ಕೊನೆಯ ಪ್ರಯತ್ನವೆಂಬಂತೆ ಅದು ಶುರು ಮಾಡಿದ ಮೇಲೆ ನಿದ್ದೆ ರಾತ್ರಿ ಪೂರ್ತಿ, ಗಾಢವಾಗಿ ಬರಲು ಶುರುವಾಯಿತು.
ನಿದ್ದೆ ಗಾಢವಾದಷ್ಟೂ ಗೊರಕೆ ಸದ್ದು ಕೂಡ ಅಷ್ಟೇ ತೀವ್ರವಾಗಿ ಏರತೊಡಗಿತು.ಎಷ್ಟು ಅಂದರೆ ನನ್ನ ಗೊರಕೆ ಸದ್ದಿಗೆ ನನಗೇ ಎಚ್ಚರವಾಗುವಷ್ಟು.ಅದೇನೋ ಹೇಳ್ತಾರಲ್ಲ,”ಹುಚ್ಚು ಬಿಡದೆ ಮದುವೆ ಆಗೋಲ್ಲ, ಮದುವೆ ಆಗದೇ ಹುಚ್ಚು ಬಿಡಲ್ಲ,”ಅನ್ನೋ ಹಂಗೆ ,ನಿದ್ದೆ ಬೇಕು ಅಂದ್ರೆ ಗೊರಕೆ ತಪ್ಪಲ್ಲ,ಗೊರಕೆ ಬೇಡ ಅಂದ್ರೆ ನಿದ್ರೆ ಬರೋಲ್ಲ ಅನ್ನೋ ಹಾಗಾಗಿ ಬಿಟ್ಟಿತು.ನನ್ನ ನಿದ್ರಾ ಸುಖಕ್ಕಾಗಿ ಮನೆಯವರ ನಿದ್ದೆಯನ್ನು ಬಲಿ ತೆಗೆದು ಕೊಳ್ಳೋದು ಯಾವ ನ್ಯಾಯ ಹೇಳಿ.
ನನ್ನ ಗೊರಕೆಯ ಮೊದಲ ಬಲಿಪಶುವಾದ ನನ್ನ ಮಗಳು ಎಷ್ಟೋ ದಿನ ನಿದ್ದೆಯಿಲ್ಲದೆ ಹೊರಳಾಡಿ ಕಡೆಗೆ
ಒಂದು ದಿನ ,”ಅಮ್ಮ, ಇನ್ನು ನಿನ್ನ ಪಕ್ಕ ನಾನೆಂದೂ ಮಲಗಲಾರೆ,”ಎಂದು ಮುಷ್ಕರ ಹೂಡಿಯೇ ಬಿಟ್ಟಳು.ಹೇಗೋ ಅವಳಿಗೆ ಪೂಸಿ ಹೊಡೆಯಲು, ಪರಿಹಾರವಾಗಿ ಒಂದು ಮೃದುವಾದ ತುಪ್ಪಳದ ಹಿಮಕರಡಿ ಗೊಂಬೆಯೊಂದನ್ನ ಅವಳಿಗೆ ಕೊಡಿಸಿದೆ.ರಾತ್ರಿ ಅವಳಷ್ಟೇ ಗಾತ್ರದ ಆ ಗೊಂಬೆಯನ್ನು ತಬ್ಬಿ ಮಲಗಿದರೆ ಅವಳಿಗೆ ಸುಖನಿದ್ರೆ.ಈಗೀಗ ನನ್ನ ಗೊರಕೆ ಸದ್ದು ಕೂಡ ಅವಳ ಏಳಿಸದಷ್ಟು ನೆಮ್ಮದಿ ನಿದ್ರೆ ಅವಳಿಗೆ ಆ ಗೊಂಬೆ ತಂದು ಕೊಟ್ಟಿದೆ.
ಈ ಗೊರಕೆ ಅನ್ನೋದು ಖಾಯಿಲೆ ಏನೂ ಅಲ್ಲ.ಒಂದು ವಿಧದ ಡಿಸ್ ಆರ್ಡರ್ ಅಷ್ಟೇ. ಅಲ್ಲದೇ ಇದು ವಂಶ ಪಾರಂಪರ್ಯವಾಗಿ ಬಂದಿರುವ,ಅದರಲ್ಲೂ ನಮ್ಮಪ್ಪ,ಅಣ್ಣನಿಂದ ಬಂದಂತಹ ಕೊಡುಗೆ.ಅಷ್ಟು ಸುಲಭವಾಗಿ ಹೊರಟು ಹೋಗು ಅಂದ್ರೆ ಹೋಗದು.
ಅಣ್ಣನ ಗೊರಕೆ ಎಷ್ಟು ತೀವ್ರ ಎಂದರೆ ಅದಕ್ಕೆ ಗರಗಸದ ಹೊರತಾಗಿ ಬೇರ್ಯಾವ ಉಪಮೆಯೂ ಸಾಟಿಯಲ್ಲ. ಹೋಗುತ್ತಲೂ ಕುಯ್ಯುವುದು,ಬರುತ್ತಲೂ ಕುಯ್ಯುವುದು.ಒಮ್ಮೊಮ್ಮೆ ಅವರ ಗೊರಕೆ ಸದ್ದಿಗೆ ಅವರಿಗೇ ಎಚ್ಚರಿಕೆಯಾಗಿ ದೂರುತ್ತಾ ಇದ್ದದ್ದು ಮಾತ್ರ ಅಮ್ಮನನ್ನೇ.ಒಂದು ರಾತ್ರಿ ಮಾತ್ರ ಅಮ್ಮ ಎಷ್ಟು ಹೊತ್ತಾದರೂ ಮಲಗದೆ ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡು ಓದುತ್ತಾ ಕುಳಿತು, ಅಣ್ಣನಿಗೆ ಅವರ ಗೊರಕೆಯಿಂದ ಎಚ್ಚರವಾದಾಗ ,”ನೋಡಿ ನಾನಿನ್ನೂ ಮಲಗೇ ಇಲ್ಲ,ನಿಮ್ಮ ಗೊರಕೆಯೇ ನಿಮ್ಮನ್ನು ಏಳಿಸುವುದು,”ಎಂದು ಸಾಕ್ಷಿ ಸಮೇತ ಸಾಧಿಸಿ ತೋರಿಸಿದ ಬಳಿಕ ಅಣ್ಣ ಹಲ್ಲು ಕಿರಿದುಕೊಂಡು ಸುಮ್ಮನಾಗಿದ್ದರು.
ಅಣ್ಣನ ಈ ಬಳುವಳಿ ನನಗೊಬ್ಬಳಿಗೆ ಮಾತ್ರವಲ್ಲ ತಮ್ಮನಿಗೂ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟು ಹೋಗಿದ್ದಾರೆ.ಅವನು ನಿದ್ದೆ ಮಾಡುವ ಕ್ರಮವಂತೂ ಒಂದು ವೈದ್ಯಕೀಯ ಅಚ್ಚರಿಯೇ ಸರಿ. ಹೀಗೆ ಎಲ್ಲ ರೊಟ್ಟಿಗೆ ಮಾತನಾಡುತ್ತಾ ಕುಳಿತಿರುವಾಗಲೇ ಅದ್ಯಾವ ಮಾಯದಲ್ಲಿ ನಿದ್ದೆಗೆ ಜಾರುತ್ತಾನೋ ತಿಳಿಯದು.ಸೋಫಾದಲ್ಲಿ ಕುಳಿತು ಕಾಲು ನೀಡಿ ಹಾಗೇ ಹಿಂದಕ್ಕೆ ವರಗಿ ಕುಳಿತು, ಮಾತನಾಡುತ್ತಿರುವಾಗಲೆ, ಕಣ್ಣು ತೂಗಿ ಬಂದು ಸಣ್ಣಗೆ ಗೊರಕೆ ಹೊಡೆದುಕೊಂಡು ಮಲಗಿ ಬಿಡುತ್ತಾನೆ.ಯಾರಾದರೂ ಅಲ್ಲಾಡಿಸಿ ಏಳಿಸಿ ಮಾತು ಮುಂದುವರೆಸಬೇಕು. ಇನ್ನು ರಾತ್ರಿ ಮಲಗಿದಾಗ ಅವನ ಗೊರಕೆ ಸದ್ದಿನ ಆರ್ಭಟ ಕೇಳಿಯೇ ತಣಿಯಬೇಕು.ಮೂರು ರೂಮುಗಳಾಚೆ ಮಲಗಿದ್ದರೂ ,ಗೋಡೆ ಬಾಗಿಲುಗಳ ತೂರಿ ಬಂದು ಕಿವಿಯ ತಮ್ಮಟೆಗಳ ಮೇಲೆ ನರ್ತಿಸುವ ನಾದದ ಹಾವಳಿ ರಜೆಗೆ ಅವನ ಮನೆಗೆ ಹೋದಾಗ ಎಷ್ಟೋ ದಿನ ನಿದ್ದೆ ಗೆಡಿಸಿದೆ.ಅವನ ಹೆಂಡತಿ ಮದುವೆಯ ಶುರುವಿನಲ್ಲಿ ನಿದ್ದೆ ಗೆಡುತ್ತಿದ್ದರೂ,ಈಗ ಸಲೀಸಾಗಿ ಆ ಸದ್ದಿಗೆ ಹೊಂದಿ ಕೊಂಡು ಬಿಟ್ಟಿದ್ದಾಳೆ.
ಇನ್ನು ಅಣ್ಣನ ತಂಗಿ, ನಮ್ಮತ್ತೆ ಗೊರಕೆಯ ಸದ್ದಿಗೆ ಸಮಾನ ಸದ್ದು ನಾನು ಎಲ್ಲೂ ಕೇಳಿಲ್ಲ.ಅವರೊಟ್ಟಿಗೆ
ನಮಗೆ ಅಷ್ಟು ಬಳಕೆಯಿಲ್ಲದ ಕಾರಣ ಎಷ್ಟೋ ವರ್ಷಗಳಲ್ಲಿ ಒಮ್ಮೆ ಅವರ ಭೇಟಿಯಾಗುತ್ತಿತ್ತು.ಹಾಗೆ ಒಂದು ಬಾರಿ ಮನೆಗೆ ಬಂದು ಉಳಿದು ಕೊಂಡವರು ರಾತ್ರಿ ಮಲಗಿದ ತಕ್ಷಣವೇ ಹೊರಟ ಗೊರಕೆಯ ಆರ್ಭಟಕ್ಕೆ ಮನೆ ಮಂದಿಯೆಲ್ಲ ನಿದ್ದೆ ಗೆಟ್ಟು ಕುಳಿತ್ತಿದ್ದಾಯಿತು.ಹಲವು ಟ್ರೈನ್ ಗಳು ದಡ ದಡನೆ ಓಡುತ್ತಿವೆಯೋ,,ಸಾಮಿಲ್ ಒಂದು ಮನೆಯ ಪಕ್ಕದಲ್ಲೇ ಶುರುವಾಯಿತೋ,ಅಕ್ಕಿ ಮಿಲ್ ಒಂದೇ ಸಮನೆ ಓಡುತ್ತಿದೆಯೋ,ಇತ್ಯಾದಿ ಇತ್ಯಾದಿ ಭಾವನೆಗಳು ನಮ್ಮಲ್ಲಿ ಮೂಡುವಷ್ಟು ಸದ್ದು ಅವತ್ತು ನಮ್ಮತ್ತೆ ಹೊರಡಿಸಿದ್ದರು. ಅಣ್ಣನೇ ಗೊರಕೆಯ ಚಾಂಪಿಯನ್ ಅಂದುಕೊಂಡಿದ್ದ ನಮಗೆ ಅವತ್ತು ತಿಳಿದಿದ್ದು ಅತ್ತೆ ಚಾಂಪಿಯನ್ ಆಫ್ ಚಾಂಪಿಯನ್ಸ್ ಎಂದು.
ಗಾಢ ನಿದ್ದೆ ಹಾಗೂ ಗೊರಕೆಗಳೆರಡೂ ಎಡಬಿಡದ ಒಡನಾಡಿಗಳು ಬಿಡಿ.ತುಂಬಾ ದಣಿವಾದ ದಿನ ಚೆನ್ನಾಗಿ ಗೊರಕೆ ಹೊಡೆದುಕೊಂಡು ಮಲಗಿ ಎದ್ದ ಬಳಿಕ ಮೈ ಕೈ ಎಲ್ಲಾ ಹಗುರಾಗಿ ಬಿಡುತ್ತದೆ. ಅದಕ್ಕೇ ಇಂಗ್ಲಿಷ್ ನಲ್ಲಿ ಒಳ್ಳೇ ನಿದ್ದೆಗೆ”ಸೌಂಡ್ ಸ್ಲೀಪ್” ಅಂತ ಹೇಳ್ತಾರೇನೋ.ಆದರೆ ಪಕ್ಕ ಮಲಗಿದವರ ಕಥೆ ಮಾತ್ರ ಕೇಳಬೇಡಿ. ಮೊದಲು ನಿದ್ರೆಗಾಗಿ ಉಪಾಯಗಳ ಹುಡುಕಿದ ಹಾಗೆ ಈಗ ನಾನು ಗೊರಕೆ ತಪ್ಪಿಸಲು ಹುಡುಕುವಂತಾಗಿದೆ. ಆದರೂ ಪರಿಹಾರವೇನೂ ಸಿಕ್ಕಿಲ್ಲ ಬಿಡಿ.
ಹೀಗೆ ಗೊರಕೆ ಹೊಡೆದು ಸುಖನಿದ್ರೆ ಮಾಡುವವರದು ಒಂದು ರೀತಿಯಾದರೆ,ನಿದ್ರಾಹೀನತೆ, ಇನ್ಸೋಮ್ನಿಯಾ ಅನ್ನೋ ಕಾಯಿಲೆ ಬಾಧಿಸುವವರಿಗೆ ಎಷ್ಟು ಪ್ರಯತ್ನ ಪಟ್ಟರೂ ದಿನಕ್ಕೆ ಮೂರು ನಾಲ್ಕು ಗಂಟೆ ಗಿಂತ ಹೆಚ್ಚು ನಿದ್ರಿಸಲು ಆಗದು. ಅವರ ಕಷ್ಟಅವರಿಗೇ ಗೊತ್ತು.
ಈ ಇನ್ಸೋಮ್ನಿಯಾಕ್ ಗಳಲ್ಲಿ ಹಲವರು ಸಾಧಕರನ್ನೂ ನೋಡಬಹುದು.ನಿದ್ರೆ ಬಾರದ ಸಮಯದಲ್ಲಿ ಏನಾದರೂ ಕೆಲಸ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾದವರೂ ಸಾಕಷ್ಟಿದ್ದಾರೆ.ನನ್ನ ಕಸಿನ್ ಒಬ್ಬ ಈ ರೀತಿ ನಿದ್ರಾಹೀನತೆಯಿಂದ ನರಳಿದರೂ ಅದರ ಪ್ರಯೋಜನ ಆತನ ಹೆಂಡತಿಗೆ ಸಾಕಷ್ಟು ಆಗಿದೆ.ಅವರ ಎರಡೂ ಮಕ್ಕಳ ಬಾಣಂತನದಲ್ಲಿ ರಾತ್ರಿಯೆಲ್ಲಾ ಎಚ್ಚರವಿದ್ದು ಮಕ್ಕಳನ್ನು ನೋಡಿದ್ದು ಆತನೇ.ಹಾಗಾಗಿ ಅವಳಿಗೆ ಮಕ್ಕಳ ಪಾಲನೆ ಪೋಷಣೆಯಲ್ಲಿ ಅಷ್ಟು ತ್ರಾಸವೇ ಆಗಲಿಲ್ಲ. ಇನ್ನು ಪರೀಕ್ಷೆ ಸಮಯದಲ್ಲಿ ನಿದ್ದೆ ಗೆಟ್ಟು ಓದುವ ಮಕ್ಕಳ ನಿಗಾ ನೋಡಲೂ ಅವನಿಗೆ ಸಾಧ್ಯವಾಗಿದೆ.
ಈ ನಿದ್ರೆಗೆಡುವ ಕಾಯಿಲೆ ಸೂಕ್ಷ್ಮ ಮನಸ್ಸಿನವರನ್ನೇ ಹೆಚ್ಚು ಬಾಧಿಸುವುದೇನೋ.ಬಾಲ್ಯದ ದಾರುಣ ಅನುಭವಗಳು,ಹೊಂದಾಣಿಕೆಯ ಸಮಸ್ಯೆ ಇರುವವರು,ಜೀವನದ ಕಷ್ಟಕಾರ್ಪಣ್ಯಗಳು,ಕೆಲಸದ ಒತ್ತಡಗಳು,ಪ್ರಪಂಚ ಅಳತೆಗೋಲಾಗಿರಿಸಿಕೊಂಡಿರುವ ಯಶಸ್ಸಿನ ಗುರಿಗಳ ಸಾಧಿಸಲು ಆಗದಿರುವ ಹತಾಶೆ,ನೋವುಗಳು ನಿದ್ದೆಗೆಡಲು ಬಹಳ ಪ್ರಮುಖ ಕಾರಣಗಳೇ ಸರಿ.ಇತ್ತೀಚೆಗೆ ಯಾರೋ ಕವಿಯೊಬ್ಬರು ಬರೆದ,”ನಿಜವಾದ ಸುಖನಿದ್ರೆ ಮಣ್ಣಿನಲ್ಲಿ ಮಲಗಿದಾಗ ಮಾತ್ರ ಸಿಗುವುದೆನೋ,”ಎಂಬ ಸಾಲುಗಳ ಓದಿದಾಗ ಮಾತ್ರ ಅವರ ಬಗ್ಗೆ ಅಪಾರ ಕನಿಕರವೆನಿಸಿತು.
ಚಿಕ್ಕಂದಿನಲ್ಲೇನೂ ನಿದ್ರೆಯ ಸಮಸ್ಯೆಯೇ ಇರಲಿಲ್ಲ.ಬಾಲ್ಯವೇ ಹಾಗಲ್ಲವೇ? ಯಾವುದೇ ಚಿಂತೆ ಆತಂಕಗಳಿರದ ಕಾಲ. ನಿದ್ದೆಗೇನು ಬರ,ಒಂದು ಪುಸ್ತಕ ಹಿಡಿದುಕೊಂಡಿದ್ದರೆ ಸಾಕಿತ್ತು, ತೂಗಿ ತೂಗಿ ಬರುತ್ತಿತ್ತು.ಅದರಲ್ಲೂ ಪರೀಕ್ಷಾ ಸಮಯದಲ್ಲಂತೂ ಎಂದೂ ಬಾರದ ನಿದ್ದೆಯೇ ಬರೋದು.ಆದರೆ ಬಹಳಷ್ಟು ತರಗತಿಗಳಲ್ಲಿ ಪರೀಕ್ಷಾ ಸಮಯದಲ್ಲೇ,”ಯುದ್ಧಾ ಕಾಲೇ ಶಸ್ತ್ರಾಭ್ಯಾಸ “ಅನ್ನುವಂತೆ ಓದುತ್ತಿದ್ದ ನನಗೆ ಆಗ ನಿದ್ದೆ ತಡೆಯೋದು ಹೇಗೆ ಅನ್ನೋದೇ ದೊಡ್ಡ ಸಮಸ್ಯೆ ಯಾಗಿತ್ತು.ಉದ್ದುದ್ದ ಫ್ಲಾಸ್ಕ್ ನಲ್ಲಿ ಟೀ ಮಾಡಿಟ್ಟು ಕೊಂಡು ಓದಿನ ಮಧ್ಯೆ ಕುಡಿಯೋದು,ಆಗಾಗ್ಗೆ ಹೋಗಿ ಮುಖಕ್ಕೆ ತಣ್ಣಿರೆರಚಿಕೊಂಡು ಬರೋದು,ಕುಳಿತು ಕೊಂಡು ಓದದೇ,ಕೈಯಲ್ಲಿ ಪುಸ್ತಕ ಹಿಡಿದು ಓಡಾಡಿಕೊಂಡು ಓದೋದು,ಓದಿದ್ದನ್ನು ಬರೆಯೋದು,ಇಷ್ಟೆಲ್ಲಾ ಸರ್ಕಸ್ ಮಾಡಿಕೊಂಡು ನಿದ್ದೆ ಓಡಿಸಿಕೊಂಡು ಓದುತ್ತಿದ್ದೆ.
ಶಾಲಾ ಸಮಯದಲ್ಲಿ ಬೆಳಿಗ್ಗೆ ಅಮ್ಮ ತಟ್ಟಿ ಏಳಿಸುವವರೆ ಗೂ ಮಲಗಿ ನಿದ್ದೆ ಹೊಡೆದರೂ ,ರಜಾ ದಿನಗಳಲ್ಲಿ ಯಾರೂ ಏಳಿಸದೆಯೆ ಬೆಳಿಗ್ಗೆ ಬೆಳಿಗ್ಗೆಯೇ ಎಚ್ಚರವಾಗಿ ಬಿಡುತ್ತಿತ್ತು.ರಜದಲ್ಲಿ ಆಡಲು ಇದ್ದ ಅಷ್ಟೊಂದು ಆಟಗಳು,ತಿರುಗಲು ಇದ್ದ ಅಷ್ಟೊಂದು ಬೀದಿಗಳ ಸುತ್ತುವುದು ಬಿಟ್ಟು ನಿದ್ದೆಗೆ ಸಮಯ ಹಾಳು ಮಾಡುವುದೇ!
ರಜದಲ್ಲಿ ಅಜ್ಜಿ ಊರಿಗೆ ಹೋದರೆ,ತೋಟದೊಳಗೆ ಇದ್ದ ಅಜ್ಜಿ ಮನೆಯಲ್ಲಿದ್ದ ಮಾವಂದಿರ ಮಕ್ಕಳ ಜೊತೆ ಸೇರಿ ಇಡೀ ದಿನ ತೋಟ,ಬಾವಿ ಅಂತ ಆಟವೇ.ಸಂಜೆಯೇ ಮನೆ ಸೇರುತ್ತಾ ಇದ್ದದ್ದು.ಇಡೀ ದಿನ ಕುಣಿದಿದ್ದರಿಂದ ರಾತ್ರೆ ಎಂಟು ಗಂಟೆಗೆಲ್ಲ ತೂಕಡಿಸಿಕೊಂಡೇ ಒಂದಷ್ಟು ತಿಂದು ಮಲಗಿದರೆ, ಆನೆ ಬಂದು ತುಳಿದಿದ್ದರೂ ಎಚ್ಚರವಾಗುತ್ತಿರಲಿಲ್ಲವೇನೋ.ಆಗೆಲ್ಲ ಈಗಿನಂತೆ ಟಿವಿ ಹಾವಳಿ ಏನೂ ಇರಲಿಲ್ಲವಾದ್ದರಿಂದ,ಎಲ್ಲರೂ ಹೆಚ್ಚು ಕಡಿಮೆ ರಾತ್ರಿ ಒಂಬತ್ತರೊಳಗೆ ಮಲಗಿ ಬಿಡುತ್ತಿದ್ದರು.
ಹೇಗಿದ್ದರೂ ಬೆಳಗಿನ ಜಾವಕ್ಕೆ ಎದ್ದು ಹೊಲಗದ್ದೆ ಕೆಲಸ ಬೇರೆ ನೋಡಬೇಕಿತ್ತಲ್ಲ,ಹಾಗಾಗಿ ಬೇಗ ಮಲಗಿ ಬೇಗ ಏಳೋ ಪಾಲಿಸಿಯೆ ಊರಲೆಲ್ಲ.ಈಗೀಗ ಮಾತ್ರ ಊರ ಕಡೆ ಕೂಡ ಟಿವಿ ಸೀರಿಯಲ್ ಗಳ ನೋಡಿಕೊಂಡು ಜನ ತಡವಾಗಿ ಮಲಗುವುದು ಕಲಿತು ಬಿಟ್ಟಿದ್ದಾರೆ.
ಅಜ್ಜಿ ಮನೆ ರೈತರ ಮನೆಯಾದ್ದರಿಂದ ಹಾಸಿಗೆ,ಹೊದಿಕೆ ಗಳನ್ನೆಲ್ಲ ನಗರದವರಂತೆ ಯಾವಾಗಲೂ ಶುಚಿಗೊಳಿಸಿಕೊಂಡೇನೂ ಇರುತ್ತಿರಲಿಲ್ಲ.ಎಲ್ಲೋ ವರ್ಷದಲ್ಲಿ ಬರುವ ನಾಲ್ಕಾರು ಹಬ್ಬಗಳಲ್ಲಿ ಮಡಕೆ ತೆಗಿವಾಗ ಮನೆಯ ಒಂದೂ ಪಾತ್ರೆ ಪಡಗ ಬಿಡದೆ ತೊಳೆದು ಹಾಕುವಾಗ,ಹಾಸಿಗೆಗಳು ಬಿಸಿಲು ಕಂಡು ,ಹೊದಿಕೆಗಳು ತೊಳೆಸಿಕೊಳ್ಳುತ್ತಿದ್ದೋ.ಹಾಗಾಗಿ ಹಾಸಿಗೆ,ಹೊದಿಕೆ ,ತಲೆದಿಂಬುಗಳಿಗೆಲ್ಲ,ಅವುಗಳನ್ನು ಬಳಸಿ ಹೋದ ಜನರ ಮೈಯ ಗಂಧವೆಲ್ಲಾ ಸುತ್ತಿಕೊಂಡು ಒಂದು ರೀತಿಯ ವಿಶಿಷ್ಟ ವಾಸನೆ ಇರುತ್ತಿತ್ತು.ಆದರೂ ನಮ್ಮ ನಿದ್ರೆಗೇನು ಕೊರತೆಯಿರಲಿಲ್ಲ.ಇನ್ನೂ ಹೇಳಬೇಕೆಂದರೆ ರಜೆ ಮುಗಿಸಿ ಭದ್ರಾವತಿ ಮನೆಗೆ ಮರಳಿ ಬಂದ ಮೇಲೂ ಮಲಗಿದಾಗ,”ಅಯ್ಯೋ ಊರಲ್ಲಿ ಮಲಗಿದ ಹಾಗೆ ಮಲಗಲು ಆಗುತ್ತಿಲ್ಲಾ ಅನ್ನಿಸೋದು.”ಅಷ್ಟು ಗಾಢವಾಗಿ ಆ ವಾಸನೆ ನಮ್ಮ ನಿದ್ರೆ ಜೊತೆ ಸೇರಿ ಹೋಗಿತ್ತು.
ಬಾಲ್ಯದ ಅಂತಹ ಸವಿನಿದ್ರೆ ಮತ್ತೆ ಈಗೆಲ್ಲಿ ಸಿಕ್ಕೀತೂ.?
ಆದರೆ ಈಗೊಂದೆರಡು ವರ್ಷಗಳ ಹಿಂದೆ ಗೆಳತಿಯೊಬ್ಬಳ ಮನೆಯ ಹಬ್ಬಕ್ಕೆ ಎಂದು ಅವರ ಹಳ್ಳಿಗೆ ಹೋಗಿದ್ದೆ.ಅವರ ಮನೆಯೂ ತೋಟದ ಮನೆಯೇ.ರಾತ್ರಿ ನೆಂಟರಿಗೆಲ್ಲ ಮನೆಯ ಹಜಾರದಲ್ಲೇ ಹಾಸಿ ಕೊಟ್ಟಿದ್ದರು. ಎಷ್ಟೋ ವರ್ಷಗಳ ಬಳಿಕ ಸಿಕ್ಕ ಅವಳೂ ಕೂಡ ರಾತ್ರಿ ಪಕ್ಕದಲ್ಲೇ ಮಲಗಿ ಸುಮಾರು ಹೊತ್ತು ಹರಟಿದೆವು.ಆಗ ಅವರ ಮನೆ ಹಾಸಿಗೆ ಹೊದಿಕೆ ಗಳಿಗೂ ಅದೇ ನಮ್ಮ ಊರಿನ ವಾಸನೆಯೇ ಇದೆ ಅನ್ನಿಸಲು ಶುರುವಾಯಿತು.ಹೊದ್ದು ಮಲಗಿದವಳಿಗೆ ಎಷ್ಟೋ ವರ್ಷಗಳ ಬಳಿಕ ಅದೇ ಬಾಲ್ಯದ ಸವಿ ಸವಿ ಗಾಢ ನಿದ್ರೆ.
Madam. ರಾತ್ರಿ ನಿದ್ರೆ ಬರದಾಗಿನ ಹಿಂಸೆಯನ್ನು ಎಸ್ಟು ಸುಂದರವಾಗಿ ವಿವರಿಸಿದ್ದೀರಿ,ಜೊತೆಗೆ ಗೊರಕೆ ವೀರರ ಸಾಹಸವನ್ನು ಚೆನ್ನಾಗಿ varnisiddira ನಿಮ್ಮ ತಮ್ಮ ನ ಹಾಗೆ ನಿದ್ರೆ ಮಾಡುವ ಸುಖಪುರುಷರು ಎಸ್ಟು ಜನ ಇದ್ದಾರೆ ನಮ್ಮಲ್ಲಿ?
ಲೇಖನ. ತುಂಬಾ ಚೆನ್ನಾಗಿದೆ
Super
ತುಂಬಾ ಚೆನ್ನಾಗಿದೆ
ಸಮತಾ, ಅದ್ಭುತ ಬರೆಹ..ಎಂದಿನಂತೆ ನಗುತ್ತಾ ಓದಿದೆ.
ಪರಿಹಾರವನ್ನು ಸೂಚಿಸಿದ್ದರೆ ಇನ್ನೂ ಚೆನ್ನಾಗಿತ್ತು.ಅಭಿನಂದನೆಗಳು.