ಅಂಕಣ ಬರಹ

ಗಜಲ್ ಲೋಕ

ಸಂವೇದನೆಯ ಮೂರ್ತ ರೂಪ

ಡಾ. ಜಯದೇವಿ ಗಾಯಕವಾಡ

ನಮಸ್ಕಾರ ಎಲ್ಲ ಸಹೃದಯರಿಗೆ, ಇಂದು ಮತ್ತೊಮ್ಮೆ ಮತ್ತೊಬ್ಬ ಗಜಲ್ ಸಂವೇದನಕಾರರೊಂದಿಗೆ ನಿಮ್ಮ ಮುಂದೆ ಬಂದಿರುವೆ..!!

ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೆದ್ದರೆ ನೀನು ನನ್ನ ಸಂಗಾತಿ

                        ಚೆ. ಗುವೆರಾ

     ಮಣ್ಣಿನ ಗರ್ಭದಲ್ಲಿ ಅಡಗಿರುವ ಬೇರುಗಳೆಂದಿಗೂ ಸಾವಿಲ್ಲ. ಅವು ತಾಯಿ ಗರ್ಭದ ಕೂಸಿನ ಹಾಗೆ ಸದಾ ಮಿಡಿಯುತ್ತಿರುತ್ತವೆ. ಈ ನೆಲೆಯಲ್ಲಿ ದಲಿತ ಸಾಹಿತ್ಯ ಎನ್ನುವುದೊಂದು ಪ್ರಜ್ಞೆ. ದಲಿತ ಸಾಹಿತ್ಯ ರಚನೆ ಒಂದು ಮನೋಧರ್ಮ. ಅದರಲ್ಲಿ ಸ್ತ್ರೀ ಸಂವೇದನೆ ಎನ್ನುವುದೊಂದು ಮುಖ್ಯ ಆಯಾಮವಾಗಿದೆ!! ಇಂದು ಸ್ತ್ರೀ ಸಂವೇದನೆಯ ಚಿಂತನೆ ಅಂತರ್ ಶಿಸ್ತೀಯ ಅಧ್ಯಾಯನವಾಗಿ, ಜ್ಞಾನಶಿಸ್ತುವಿನಂತೆ ಬೆಳೆದು ಬರುತ್ತಿದೆ!! ಇಂದಿನ ಜಾಗತೀಕರಣದ ಸಂಕ್ರಮಣ ದಿನಗಳಲ್ಲಿ ಮಹಿಳೆ ತನ್ನ ಲಿಂಗ ತಾರತಮ್ಯವನ್ನು ದಾಟಿ ತನ್ನೊಳಗಿನ ಸಾಮರ್ಥ್ಯವನ್ನು ಅನಾವರಣಗೊಳಿಸುತಿದ್ದಾಳೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ನಮ್ಮ ಗಜಲ್ ಗರಡಿ ಮನೆ!! ಹಿಂದೆಂದಿಗಿಂತಲೂ ಇಂದು ಮಹಿಳೆಯರು ಹೆಚ್ಚೆಚ್ಚು ಗಜಲ್ ಗಳನ್ನು ರಚಿಸುತ್ತಿರುವುದು, ಆ ರಚನೆಗಳಿಗೆ ಪ್ರಕಟಣೆಯ ಆಶ್ರಮ ಕಲ್ಪಿಸುತ್ತಿರುವುದು!! ಗಜಲ್ ಎಂದರೆ ಕೇವಲ ಪ್ರೀತಿ, ಪ್ರೇಮದ ರಸಸ್ವಾದವಲ್ಲ, ಅದು ತಾಯಿಯ ಮಮತೆಯ ತೊಟ್ಟಿಲೂ ಸಹ ಹೌದು! 

       ದಲಿತತ್ವದ ಜೀವನಾನುಭವ, ಹೆಣ್ಣಿನ ಅಂತರಾಳದ ತಳಮಳ, ಪ್ರೀತಿ-ಅಂತಃಕರಣ-ಮಾನವೀಯತೆಯ ಗುಣಗಳನ್ನು ಒರೆಗೆ ಹಚ್ಚಿ ಬರೆಯುವ ಗಜಲ್ ಕಾರ್ತಿ ಡಾ. ಜಯದೇವಿ ಗಾಯಕವಾಡ ಅವರು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಎಂಬ ಗ್ರಾಮದಲ್ಲಿ ಮಲ್ಲಪ್ಪ ಗಾಯಕವಾಡ ಹಾಗೂ ಬಸಮ್ಮ ದಂಪತಿಗಳ ಮಗಳಾಗಿ 1975 ರ ಜುಲೈ ೦1 ರಂದು ಜನಿಸಿದರು. ತಮ್ಮ ಹುಟ್ಟೂರಿನಲ್ಲಿಯೆ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಮುಗಿಸಿ, ಹುಮನಾಬಾದಿನ ಶ್ರೀ ವೀರಭದ್ರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎ ಪದವಿಯನ್ನು ಪಡೆದು, ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ, ಎಂ.ಫಿಲ್, ಪಿಎಚ್. ಡಿ ಪದವಿಯನ್ನು ಪೂರೈಸಿದ್ದಾರೆ. ಪ್ರಸ್ತುತ ಬೀದರ್ ಜಿಲ್ಲೆಯ ಚಿಟಗುಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

       ಬರೆಯದ ಕವಿತೆಗಳ ಒಂದು ಗುಚ್ಚದಂತೆ ಕಾಣುವ ಇವರು ಅತಿ ಕಡಿಮೆ ಮಾತಾಡಿ ಅತಿ ಹೆಚ್ಚು ಹೀರಿಕೊಳ್ಳುವ ಸ್ವಭಾವದವರು. ಇವರ ಸಾಹಿತ್ಯದ ಹೆಜ್ಜೆ ಗುರುತುಗಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಬಹುದು. ಆದರೆ ಮೂರ್ತರೂಪ ಪಡೆದುಕೊಂಡದ್ದು ಕ್ರಿ.ಶ 2೦೦೦ ದಲ್ಲಿ!! ಕಾವ್ಯ, ಹೈಕು, ವಚನ, ಕಾದಂಬರಿ, ವ್ಯಕ್ತಿ ಚಿತ್ರಣ, ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ ಹಾಗೂ ಗಜಲ್ ಸೇರಿದಂತೆ ಸುಮಾರು ೨೫ಕ್ಕೂ ಹೆಚ್ಚು ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಇವರ “ಯಾಜ್ಞಸೇನೆಯ ಆತ್ಮಕಥೆ” ಎಂಬ ದ್ರೌಪದಿ ಕುರಿತ ಕಾದಂಬರಿಯು ಆಂಗ್ಲ, ಹಿಂದಿ, ತೆಲುಗು ಹಾಗೂ ಮರಾಠಿ ಭಾಷೆಗಳಿಗೆ ಅನುವಾದಗೊಂಡಿದೆ. ಇವರಿಗೆ ಅಮ್ಮ ಗೌರವ ಪ್ರಶಸ್ತಿ, ಅಂತರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಕಲಬುರಗಿ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಉರಿಲಿಂಗ ಪೆದ್ದಿ ಪ್ರಶಸ್ತಿ, ಡಾ. ಅಂಬೇಡ್ಕರ್ ಫೆಲೋ ಪ್ರಶಸ್ತಿಗಳು ಲಭಿಸಿವೆ. ಹೈದರಾಬಾದ್ ಕರ್ನಾಟಕ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ, ನಾಲ್ಕನೆಯ ಬಸವಕಲ್ಯಾಣ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಗಳು ಇವರಿಗೆ ಸಂದಿವೆ!!

     ಗಜಲ್ ಎಂಬುದು ಆತ್ಮದ ಪಿಸುಮಾತು. ಹೃದಯದ ಮಾತುಗಳು ಜೀವಕಾರುಣ್ಯದಿಂದ ಸ್ನಿಗ್ಧವಾಗಿರುತ್ತವೆ. ಸಕಲ ಜೀವಿಗಳೊಂದಿಗಿನ ಪ್ರೇಮಭಾವದಿಂದ ಮಾಧುರ್ಯವನ್ನು ಪಡೆಯುತ್ತವೆ. ಮನುಷ್ಯತ್ವದಿಂದ ಭಾವೈಕ್ಯವನ್ನು ಸಾಧಿಸುತ್ತವೆ. ಮನುಷ್ಯರ ಮೇಲಿನ ತೀವ್ರವಾದ ಕಳಕಳಿಯಿಂದ ಸಿಡಿದೇಳುತ್ತವೆ. ಅನುಭವದಿಂದಾಗಿ ರಸಾತ್ಮಕವಾಗಿರುತ್ತವೆ. ಅನುಭಾವದಿಂದಾಗಿ ಅಲೌಕಿಕ ಆನಂದವನ್ನು ನೀಡುತ್ತವೆ. ಈ ಹಿನ್ನೆಲೆಯಲ್ಲಿ ಆತ್ಮದ ನುಡಿಗಳು ಗಜಲ್ ರೂಪ ಪಡೆದು ನಮ್ಮ ಬಾಳನ್ನು ಸುಂದರಗೊಳಿಸುತ್ತವೆ.‌ ಈ ಕಾರಣಕ್ಕಾಗಿಯೇ ಗಜಲ್ ಎನ್ನುವುದು ಬದುಕಿನಲ್ಲಿ ಸದಾ ಹೊಸತನವನ್ನು ಅನುಭವಿಸಲು ಕಲಿಸುತ್ತದೆ. ಈ ನೆಲೆಯಲ್ಲಿ ಜಯದೇವಿ ಗಾಯಕವಾಡ ಅವರ ಮೂವತ್ತೊಂದು ಗಜಲ್ ಗಳು (2೦೦5), ಪ್ರಜ್ಞೆ-ಶೀಲ-ಕರುಣೆಯ ಗಜಲ್ ಗಳು (2೦14), ವೈಶಾಖ ಪೂರ್ಣಿಮೆಯ ಗಜಲ್ ಗಳು (2೦18) ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ‘ಜಗದಲ್ಲಿರುವುದು ವಿರಹದ ನೋವೊಂದೇ ಅಲ್ಲ, ಇನ್ನೆಷ್ಟೋ ನೋವುಗಳಿವೆ’ ಎಂಬ ಫೈಜ್ ಅಹ್ಮದ್ ಫೈಜ್ ಅವರ ಉದ್ಗಾರ ಜಯದೇವಿ ಗಾಯಕವಾಡ ಅವರ ಗಜಲ್ ಗಳ ಸ್ಥಾಯಿ ಭಾವವಾಗಿದೆ!! ಈ ಹಿನ್ನೆಲೆಯಲ್ಲಿ ಡಾ. ಚೆನ್ನಣ್ಣ ವಾಲೀಕಾರ ರವರು ಇವರ ‘ವೈಶಾಖ ಪೂರ್ಣಿಮೆಯ ಗಜಲ್ ಗಳು” ಸಂಕಲನಕ್ಕೆ ಬೆನ್ನುಡಿ ಬರೆಯುತ್ತಾ “ದಲಿತ ಗಜಲ್ ಗಳ ರಾಣಿ” ಎಂದು ಕರೆದಿರುವುದು ಉಲ್ಲೇಖವಿದೆ!! ಸಮುದ್ರಮಂಥನದಂತೆ ಗಜಲ್ ಗಳಲ್ಲಿ ವಿಷವನ್ನು ಸವಿದು ಅಮೃತವನ್ನು ನೀಡುವ ಜೀವನ ಮೌಲ್ಯಗಳ ಪ್ರತಿಪಾದನೆಯನ್ನು ಇವರ ಗಜಲ್ ಗಳಲ್ಲಿ ಕಾಣಬಹುದು.

ಬೆಳದಿಂಗಳ ರಾತ್ರಿಯಲ್ಲಿ ನನ್ನ ನಿನ್ನ ಕೇರಿಗಳು ಒಂದಾಗಬೇಕಿದೆ ಗೆಳತಿ ಬಾ ಮೆಲ್ಲ ಮೆಲ್ಲನೆ

ಸಂಜೆಗಂಪಿನಲ್ಲಿ ತಂಪಿನಲ್ಲಿ ನಾನೀನೆಂಬಭೇದ ಅಳಿಸಬೇಕಾಗಿದೆ ಗೆಳತಿ ಬಾ ಮೆಲ್ಲ ಮೆಲ್ಲನೆ

ಇದೊಂದು ಮಜಲುನ್ ರದೀಫ್ ನ ಲಂಬಿ ಬೆಹರ್ ಗಜಲ್. ಗಜಲ್ ತನ್ನ ಮೂಲಭೂತ ವಿಷಯಗಳಿಂದ ಸಾಮಾಜಿಕ ಸಮತೆಯತ್ತ ವಾಲಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ! ಹಾಗೆ ನೋಡಿದರೆ ಪ್ರತಿ ಸಾಹಿತ್ಯದ ಆಶಯವೆ ಸಮ ಸಮಾಜದ ನಿರ್ಮಾಣ. ಈ ಮೇಲಿನ ಷೇರ್ ಇದನ್ನೇ ಪ್ರತಿಧ್ವನಿಸುತ್ತಿದೆ. ‘ಕೇರಿಗಳು ಒಂದಾಗಬೇಕು’ ಎಂಬುದು ಇಲ್ಲಿಯ ಧ್ವನಿಯಾಗಿದೆ. ಕೇರಿಯ ಮುಖವಾಡ ಕಳಚಿ ಎಲ್ಲರೂ ಮುಕ್ತವಾಗಿ ಬಾಳಬೇಕು ಎಂಬುದು ಗಜಲ್ ಗೋ ಅವರ ಆಶಯವಾಗಿರುವುದು ಅವರ ಪ್ರಗತಿಪರ ಆಲೋಚನೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ!!

ಯಾವ ಅಮೃತ ಹಸ್ತಗಳು ನನ್ನ ಜೊತೆ ಕೈಗೂಡಿಸಲಿಲ್ಲ ನೆಲದಲ್ಲಿ

ಒಂದು ಸಲವೂ ತುಟಿ ಬಿಚ್ಚಿ ಮನಸಾರೆ ನಾನು ನಗಲೇ ಇಲ್ಲ ನೆಲದಲ್ಲಿ

ಇದೊಂದು ಸ್ತ್ರೀ ಸಂವೇದನೆಯ ಸಶಕ್ತ ಷೇರ್ ಆಗಿದೆ. ಹೆಣ್ಣಿನ ಮೂಕಲೋಕವೊಂದರ ಮೌನದ ಪಿಸುಮಾತು ಇಲ್ಲಿದೆ!! ಹೆಣ್ಣಿನ ಅಂತಃಕರಣದ ಬೊಗಸೆಯಲ್ಲಿ ಇಡೀ ಬ್ರಹ್ಮಾಂಡವಿರುವುದನ್ನು ಇದು ಸಾರುತ್ತದೆ.‌ ಯಾರದೋ ಜೀವವಾಗಿದ್ದದ್ದು ಎಲ್ಲರ ಒಳ ಮಿಡಿತಗಳಾಗಿ ತಲ್ಲಣಿಸುವಾಗ, ಇಡೀ ಜಗವೇ ತಂತಮ್ಮ ನಿರಾಳತೆ ಹುಡುಕುತ್ತ ದೂರ ಉಳಿದ ಮಾನವೀಯ ದುರಂತವನ್ನು ಈ ಷೇರ್ ಪ್ರತಿನಿಧಿಸುವಂತಿದೆ. ಜಯದೇವಿಯವರ ತೆರೆದಿಟ್ಟ ಕಕ್ಕುಲಾತಿ ಇಲ್ಲಿದೆ.‌ ಈ ಮಣ್ಣಿನಲ್ಲಿ ದಲಿತಳಾಗಿಯೂ, ಹೆಣ್ಣಾಗಿಯೂ ಜನಿಸಿದರೆ ಎಂತಹ ಅಸಹನೀಯ ಬದುಕನ್ನು ಮುಖಾಮುಖಿಯಾಗಬೇಕಾಗುತ್ತದೆ ಎನ್ನುವುದರ ಸೂಚ್ಯವನ್ನು ನಾವು ಇಲ್ಲಿ ಗಮನಿಸಬಹುದು. ಹೆಣ್ಣಿನ ನೋವು, ಸಮಾಜದಲ್ಲಿರುವ ಅಸಮಾನತೆ, ಉಳ್ಳವರ ದಬ್ಬಾಳಿಕೆ, ಮೌಢ್ಯದ ದುರ್ಭರ ಆಳ್ವಿಕೆಯಿಂದ ಹಲವು ಸಂಗತಿಗಳು ಗಜಲ್ ಕಾರ್ತಿಯವರಿಗೆ ಕಾಡಿರುವುದು ಅವರ ಹಲವು ಅಶಅರ್ ನಿಂದ ತಿಳಿದು ಬರುತ್ತದೆ!!

       ಜ್ಞಾನ, ತಪಸ್ಸು ಹಾಗೂ ನಿರಂತರ ಅಧ್ಯಯನದಿಂದ ಕೂಡಿದ ಷೇರ್ ಮಾತ್ರ ನಮ್ಮ ಜೀವನಕ್ಕೆ ಬೆಳಕು ನೀಡಬಲ್ಲದು. ಈ ನೆಲೆಯಲ್ಲಿ ಗಜಲ್ ಎಂಬುದು ಅಂತರಂಗದ ಬೆಳಕು. “ತನ್ನನ್ನು ತಾನು ತೆರೆದು ತೋರುವ, ಅಭಿವ್ಯಕ್ತಿಗೊಳಿಸುವ ಕಲೆಯೇ ‘ಕಾವ್ಯಕಲೆ’ ಎಂಬ ಗುರುದೇವ ರವೀಂದ್ರನಾಥ ಠಾಗೋರ್ ಅವರ ಮಾತು ನಮ್ಮ ಗಜಲ್ ಹಣತೆಗೂ ಅನ್ವಯಿಸುತ್ತದೆ!!

ಇನ್ನೇಸು ದಿನ ಸೂತಕದ ಛಾಯೆಗೆ ಮೌನ ವಹಿಸಲಿ

ಇನ್ನೇಸು ದಿನ ಸಾಂಪ್ರದಾಯದ ಹೊಗೆಗೆ ಉಸಿರುಗಟ್ಟಲಿ ನಾನು ಸಖಿ!”

ಈ‌ ಷೇರ್ ನ ತುಂಬಾ ತುಂಬಿರುವ ಹೃದಯದ ಯಾತನೆ, ಮನದ ತುಮುಲ ಓದುಗರ ಹೃದಯವನ್ನು ನೇರವಾಗಿ ತಟ್ಟುತ್ತದೆ!

       ಡಾ. ಜಯದೇವಿ ಗಾಯಕವಾಡ ಅವರ ಗಜಲ್ ಗಳಲ್ಲಿ ಮೂಲ ಗಜಲ್ ನ ನಯ, ನಾಜೂಕಿಗಿಂತ ದಲಿತ ಸಂವೇದನೆ, ಮಹಿಳೆಯ ಅಂತರಂಗದ ತೊಳಲಾಟ, ಹಸಿವಿನೊಂದಿಗಿನ ಸಾಮಾನ್ಯ ಜನರ ಕಾದಾಟ, ಮಾನವೀಯ ಮೌಲ್ಯಗಳ ಹುಡುಕಾಟ, ಸಾಮಾಜಿಕ ವ್ಯವಸ್ಥೆಯ ಬಗ್ಗೆ ಆಕ್ರೋಶ.. ಕಂಡು ಬರುತ್ತವೆ.‌ ಇವರಿಂದ ಇನ್ನೂ ವೈವಿಧ್ಯಮಯ ಗಜಲ್ ಗಳು ಮೂಡಿ ಬರಲಿ, ಓದುವ ; ರಸದಲ್ಲಿ ಮಿಂದೇಳುವ ಭಾಗ್ಯ ನಮ್ಮದಾಗಲಿ ಎಂದು ಆಶಿಸುತ್ತೇನೆ.

ಪ್ರಕೃತಿಯಲ್ಲಿ ನಿರಾಶೆ ತಲೆದೋರಿದೆ

ಸಾಯುವ ದುಃಖವೂ ಇಲ್ಲ; ಜೀವಿಸುವ ಸುಖವೂ ಇಲ್ಲ

                       –ಮೀರ್ ತಕೀ ಮೀರ್

      ಮತ್ತೆ ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಬ್ಬ ಗಜಲ್ ಮಾಂತ್ರಿಕರೊಂದಿಗೆ ಹಾಜರಾಗುವೆ. ಅಲ್ಲಿಯವರೆಗೂ ಧನ್ಯವಾದಗಳು…


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ.

3 thoughts on “

  1. ಎಲೆಮರೆಯಲಿ ಇರುವ ಕಾಯಂತಹ ಮಾಗಿದ ಲೇಖಕರನ್ನು ಪರಿಚಯಿಸುವ ತಮ್ಮ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.

  2. ಸ್ರ್ರೀ ಸಂವೇದನೆಯನ್ನೊಳಗೊಂಡ ಜಯಶ್ರೀ ಗಾಯಕವಾಡ್ ಅವರ ವೈಶಾಖ ಪೂರ್ಣಿಮೆ ಗಜಲ್ ಗಳ ಪರಿಚಯ ಸೊಗಸಾಗಿ ಮೂಡಿಬಂದಿದೆ.

  3. “ಬರೆಯದ ಕವಿತೆಗಳ ಒಂದು ಗುಚ್ಚದಂತೆ ಕಾಣುವ ಇವರು ಅತಿ ಕಡಿಮೆ ಮಾತಾಡಿ ಅತಿ ಹೆಚ್ಚು ಹೀರಿಕೊಳ್ಳುವ ಸ್ವಭಾವದವರು. – ಸಹೋದರಿ ಜಯದೇವಿ ಯವರ ಬಗ್ಗೆ ಬರೆದ ಈ ಮಾತು ತುಂಬಾ ಇಷ್ಟವಾಯಿತು.

    ವೈಶಾಖ ಪೂರ್ಣಿಮೆ ಗಜಲ್ ಗಳ ಪರಿಚಯ ಸೊಗಸಾಗಿ ಮೂಡಿಬಂದಿದೆ. – ಅಭಿನಂದನೆಗಳು

    ನನ್ನ ಒಂದು ಅನಿಸಿಕೆ ಹೀಗಿದೆ :
    ದೌರ್ಜನ್ಯದ ವಿರುದ್ಧ ಸಿಡಿದೇಳುವ ಅಭಿವ್ಯಕ್ತಿಗೆ , ಪಶ್ಚಿಮದವರೇ ಬೇಕೆಂದಿಲ್ಲ, ಅದರಲ್ಲೂ ಅರ್ಜೆಂಟೀನಾ ದಲ್ಲಿ ಹುಟ್ಟಿದ ಚೆ ಗುವೇರಾ , ಜಗತ್ತಿನಾದ್ಯಂತ ಪೋಸ್ಟರ್ ಬಾಯ್ ಆಗಿಬಿಟ್ಟಿದ್ದಾನೆ.
    ಒಂಥರಾ ಬ್ರಾಂಡ್ ಆಗಿದ್ದಾನೆ. ನಮ್ಮ ದೇಶದಲ್ಲೇ ಹುಟ್ಟಿದ ಯುಗಪುರುಷ ಅಂಬೇಡ್ಕರ್ ಗಿಂತ ಮಿಗಿಲಾದ ವ್ಯಕ್ತಿತ್ವ ರೋಲ್ ಮಾಡೆಲ್ ಇರಲು ಸಾಧ್ಯವೇ ?. ಇನ್ನೊಂದು ವಿಷಯ , ಚೆ ಗುವೇರಾ ಬಗ್ಗೆ ಹಲವು ವೈರುಧ್ಯದ ವಿಷಯಗಳು ಪ್ರಚುಲಿತ ದಲ್ಲಿ ಇಲ್ಲ. ಕ್ಯೂಬಾ ದಲ್ಲಿ ಚೆ ಗುವೇರಾ ಲಾ ಕಬಾನ ಫೋರ್ಟ್ರೆಸ್ ಜೈಲಿನ ಅಧಿಕಾರಿಯಾಗಿದ್ದಾಗ ೧೪೪ ಜನ ಕೈದಿಗಳ ವಿಚಾರಣೆ ಗೊಳಿಸದೆ ಎಲ್ಲರ ಮಾರಣ ಹೋಮಕ್ಕೆ ಕಾರಣನಾಗುತ್ತಾನೆ. !

    – ವಿಶ್ವನಾಥ್ ಶಾಸ್ತ್ರಿ

Leave a Reply

Back To Top