ಬಾಲ್ಯದ ನೆನಪುಗಳು

ಕಾವ್ಯಯಾನ

ಬಾಲ್ಯದ ನೆನಪುಗಳು

ಶಾಲಿನಿ ಕೆಮ್ಮಣ್ಣು

ಬಾಲ್ಯದಲ್ಲಿ ಇದ್ದವು ಸುಂದರ ಕನಸುಗಳು
ಕಲ್ಪನಾಲೋಕದಲ್ಲಿ ವಿಹರಿಸುತ್ತ
ರಾಜಕುಮಾರಿಯಾಗಿ ಮೆರೆದ ದಿನಗಳು
ಬೆಳೆದಂತೆ ಕಮರಿ ಸೊರಗಿದವು

ಏನೇನೋ ಸಾಧಿಸಬೇಕೆಂಬ ಹಂಬಲ
ದಿನಗಳೆದಂತೆ ವಯಸ್ಸು ಸರಿದದ್ದೇ ಗೊತ್ತಾಗಲಿಲ್ಲ
ಸಣ್ಣಪುಟ್ಟ ಖುಷಿಗೂ ಸಂತಸಪಡುತ್ತಿದ್ದ ಮುಗ್ಧತೆ ತುಂಟತನದಿ ಮೈ ಮರೆತು ಗೆಲ್ಲುವ ಆತುರತೆ
ಇದ್ದದ್ದನ್ನು ಸಂಭ್ರಮಿಸುವ ಸರಳತೆ

ಸ್ವಾರ್ಥಕ್ಕೆ ಅಲ್ಲಿ ಸ್ಥಳವಿರಲಿಲ್ಲ
ಅಕ್ಕರೆಗೆ ಪಾರವಿರಲಿಲ್ಲ
ಬೈದರೂ, ಹೊಡೆದರೂ ಅಳುವಿನೊಳು ಮಾಯವಾಗುತ್ತಿತ್ತು ನೋವು
ಮತ್ತೆ ಮುಖದಲ್ಲಿ ಅದೇ ನಗು,ನಲಿವು

ದೀಪಾವಳಿ ಬಂತೆಂದರೆ
ಹೊಸ ಬಟ್ಟೆ ತೊಡುವ ಸಂಭ್ರಮ
ರಜೆ ಬಂತೆಂದರೆ ಆಟದ ತಿರುಗಾಟದ ಅಬ್ಬರ
ಆಡಂಬರದ ಅರ್ಥ ಕಾಣಲಿಲ್ಲ
ಬಯಸಿದಂತೆ ತಿನಿಸು ಸಿಗುತ್ತಿರಲಿಲ್ಲ

ಪುರಾಣ, ನೀತಿ ಕಥೆ ಎಂದರೆ ಬಲು ಇಷ್ಟ
ರಾತ್ರಿ ಯಕ್ಷಗಾನ ನೋಡಿತರಗತಿಯಲ್ಲಿ
ತೂಕಡಿಸಿದಾಗ ಅಧ್ಯಾಪಕರ ಗುದ್ದಿಗೆ
ಕಣ್ಣಲ್ಲಿ ಮಿಂಚು ಹರಿದ ಅನುಭವ

ಕಣ್ಣಾಮುಚ್ಚಾಲೆ, ಲಗೋರಿ, ಕೆರೆ ದಡ,
ಕಳ್ಳ-ಪೊಲೀಸ್, ಗಿರ್ಗಿಟ್,ಚೆನ್ನಮಣೆ,
ಬುಗುರಿ, ಲೂಡೋ ಮನೆಯಾಟ
ತ್ರೋಬಾಲ್ ಕೊಕ್ಕೋ ಆಡಿ
ದಣಿಸಿದ ಹೈಸ್ಕೂಲ್ ಗ್ರೌಂಡ್

ತೋಡಿನಲ್ಲಿ ನೀರಾಟ ಆಡಿ
ಏಡಿ,ಸಿಗಡಿ ಹಿಡಿಯುವಾಗ
ನೀರು ತುಂಬಿದ ಹೊಲದಲ್ಲಿ
ಏಡಿ ಬೆನ್ನಿಗೆ ಕತ್ತಿ ತೂರಿಸಿದಾಗ
ಯಾವ ಭಯ ಹೇಸಿಗೆಯೂ ಅನಿಸಲಿಲ್ಲ

ಭಾನುವಾರ ಬಂತೆಂದರೆ
ರಾಮಾಯಣ,ಮಹಾಭಾರತ,
ಮಕ್ಕಳ ಕಾರ್ಟೂನ್, ಸೀರಿಯಲ್
ನೋಡಲು ಎಲ್ಲೆಲ್ಲ ಅಲೆಯುತ್ತಿದ್ದೇವು

ಸಮಾರಂಭಗಳಿಂದ ಅಪ್ಪ
ರುಮಾಲಿನಲ್ಲಿ ಕಟ್ಟಿತರುವ
ಹೋಳಿಗೆ, ಲಾಡು, ಜಿಲೇಬಿ ಅದೆಂಥ ರುಚಿ
ಸ್ವಾತಂತ್ರ್ಯ ದಿನಾಚರಣೆಯ
ಪೆಪ್ಪರ್ ಮಿಠಾಯಿ, ಲಾಡು ಮನೆಗೆ ತಂದು ಅಮ್ಮನೊಡನೆ ಹಂಚಿ ತಿನ್ನುವ ಮಮತೆ

ಮರೆಯಲಾರದ ಗೆಳೆಯ, ಗೆಳತಿಯರು
ಊಹಿಸಲಾರದ ಸ್ವಚ್ಛ ಸಂಬಂಧಗಳು
ಎಂದೆಂದೂ ಮರೆಯಬೇಡ, ಚೆನ್ನಾಗಿರು
ಎಂದು ಬರೆದ, ಹಾರೈಸಿದ ಆಟೋಗ್ರಾಫ್ ಗಳು

ಪರೀಕ್ಷೆಯ ದಿನಗಳು,
ಹೋಂವರ್ಕ್ ಮುಗಿಸಲಾಗದ ದಿನಗಳು
ಶಾಲೆಯ ದಾರಿಯಲ್ಲಿ ದೈವಗಳ ಮೊರೆ ಹೊಕ್ಕು
ಹರಕೆ ಡಬ್ಬಿ ತುಂಬಿಸಿದ ನೆನಪುಗಳು

ಆಹಾ ಆ ದಿನಗಳು, ಸುಮಧುರ ಕ್ಷಣಗಳು,
ಸಿಹಿ ಅನುಭವಗಳು ನೋಡನೋಡುತ್ತ
ಎಲ್ಲಿ ಮರೆಯಾದವು?
ನೆನಪಿನ ಬುತ್ತಿ ಖಾಲಿಯಾಗುವ ಮೊದಲು ಒಮ್ಮೆಹಿಂತಿರುಗಿ ನೋಡುವ ಬಯಕೆ.
ಓ ಬಾಲ್ಯವೇ ನೀನು ಮತ್ತೆ ಬರಬಾರದೇಕೇ?


2 thoughts on “ಬಾಲ್ಯದ ನೆನಪುಗಳು

Leave a Reply

Back To Top