ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

ಸಮಾಜ ಸುದಾರಕಿ, ರಾಜಕಾರಣಿ

ಟಿ. ಎಸ್. ಸೌಂದರಮ್ (1904-1984)

ಟಿ. ಎಸ್. ಸೌಂದರಂ ಅವರು ಭಾರತೀಯ ವೈದ್ಯೆ, ಸಾಮಾಜ ಸುಧಾರಕಿ ಮತ್ತು ರಾಜಕಾರಣಿಯು ಕೂಡಾ ಆಗಿದ್ದರು. ಇವರು 18 ಅಗಸ್ಟ್ 1904ರಲ್ಲಿ ಆಗಿನ ಬ್ರಿಟಿಷ್ ಇಂಡಿಯಾದ, ಮದ್ರಾಸ್ ಪ್ರಸಿಡೆನ್ಸಿಯ, ತಿರುನೆಲ್ವೆಲಿಯಲ್ಲಿ ಜನಿಸಿದರು.  ಇವರ ತಂದೆ ಟಿ.ಬಿ ಸುಂದರ್ ಅಯ್ಯಂಗಾರ. ಇವರು ಟಿ.ವಿ ಸುದರಂ ಅಯ್ಯಂಗಾರ್ ಮತ್ತ ಸನ್ಸ್ ಲಿಮಿಟೆಡ್‍ನ ಸ್ಥಾಪಕರಾಗಿದ್ದಾರೆ. ಇಂದು ದೇಶದಾದ್ಯಂತ ಟಿವಿಎಸ್ ಗ್ರೂಪ್ ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಪಡೆದಿದೆ. ಇದು ಭಾರತದ ಅತಿ ದೊಡ್ಡ ಕೈಗಾರಿಕೆಗಳಲ್ಲಿ ಒಂದಾಗಿದೆ.

    ಟಿ.ಎಸ್. ಸೌಂದರಮ್ ಅವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಡಾ. ಸೌಂದರಾಜನ್ ಅವರೊಂದಿಗೆ ವಿವಾಹವಾದರು. ಪತಿಯು ಇವರಿಗೆ ಓದಲು ಪ್ರೋತ್ಸಾಹಿಸುತ್ತಿದ್ದರು. ಗಂಡ ತೀರಿಕೊಂಡಾಗ ಇವರು ಹದಿಹರೆಯದವರಾಗಿದ್ದರು. ಹಾಗಾಗಿ ಇವರ ಕುಟುಂಬದವರು ಇವರಿಗೆ ವಿದ್ಯಾಭ್ಯಾಸವನ್ನು ಮುಂದುವರೆಸಲು ಒತ್ತಾಯಿಸಿದರು. ಕುಟುಂಬದವರ ಒತ್ತಾಯದ ಮೇರೆಗೆ ಲೇಡಿ ಹಾರ್ಡಿಂಗ್ ವೈಧ್ಯಕೀಯ ಕಾಲೇಜು, ದೆಹಲಿಗೆ ಹೋಗಿ ಮೆಡಿಕಲ್ ಪದವಿಯನ್ನು ಪಡೆದುಕೊಂಡರು.

 ದೆಹಲಿಯಲ್ಲಿ ಓದುತಿದ್ದಾಗ ಸುಶೀಲಾ ನಯ್ಯರ್ ಅವರೊಂದಿಗೆ ಸ್ನೇಹವನ್ನು ಬೆಳೆಸಿಕೊಂಡರು. ಸುಶೀಲಾ ನಯ್ಯರ್ ಮೂಲಕ ಸೌಂದರಮ್ ಅವರು ಗಾಂಧಿಜೀಯವರನ್ನು ಭೇಟಿ ಮಾಡಿದರು. ಗಾಂಧಿಜೀಯವರನ್ನು ಭೇಟಿಯಾದ ನಂತರ ಸ್ವಾತಂತ್ರ್ಯ ಸಂಗ್ರಾಮದತ್ತ ಸಳೆಯಲ್ಪಟ್ಟರು. ಆದರೆ ಮಧ್ಯದಲ್ಲಿ ಅಧ್ಯಯನವನ್ನು ಬಿಡಲಿಲ್ಲ. ಅಧ್ಯಯನದ ಜೊತೆಗೆ ಸ್ವತಂತ್ರ್ಯ ಸಂಗ್ರಾಮದಲ್ಲಿಯು ಭಾಗಿಯಾದರು. 1936ರಲ್ಲಿ ಇವರು ವೈದ್ಯ ಪದವಿ ಪಡೆದಾಗ 32 ವರ್ಷ ವಯಸ್ಸು. ಪದವಿ ಪಡೆದ ನಂತರವು ಸ್ವ ಇಚ್ಛೆಯಿಂದ ಸ್ವತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

    ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿರುವಾಗಲೇ ಗಾಂಧಿಜೀಯವರ ಸಮಕ್ಷಮದಲ್ಲಿ ಜಿ. ರಾಮಚಂದ್ರ ಅವರನ್ನು ಭೇಟಿಯಾದರು. ರಾಮಚಂದ್ರರವರು ಕೇರಳಿಯ ಹರಿಜನ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗಿಯಾಗುತ್ತಿರುವಾಗ ಸೌಂದರಮ್ ಮತ್ತು ರಾಮಚಂದ್ರರವರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇವರು ವಿವಾಹವಾಗಲು ನಿರ್ಧರಿಸಿದರು. ಆದರೆ ಸೌಂದರಮ್ ಅವರ ಕುಟುಂಬದವರು ತೀವ್ರವಾಗಿ ವಿರೋಧಿಸಿದರು. ಆಗ ಗಾಂಧಿಜೀಯರು ಇವರಿಬ್ಬರಿಗೆ ಒಂದು ವರ್ಷದವರೆಗೆ ನೀವು ಒಬ್ಬರನ್ನೊಬ್ಬರು ಬೇಟಿಯಾಗಕೂಡದು ಎಂದು ಸಲಹೆ ನೀಡಿದರು. ತದನಂತರ ಅವರು ಭೇಟಿ ಮಾಡಿದಾಗ ಮೊದಲಿನ ರೀತಿಯಲೇ ಪ್ರೀತಿಯ ಭಾವನೆಗಳು ಅವರಿಬ್ಬರಲ್ಲಿ ಇದಿದ್ದನ್ನು ಕಂಡ ಗಾಂಧಿಜೀಯವರು ಅವರಿಗೆ ವಿವಾಹವಾಗಲು ಒಪ್ಪಿಗೆ ನೀಡಿ ಅವರಿಗೆ ಆರ್ಶೀವಾದವನ್ನು ಮಾಡುತ್ತಾರೆ. ಸೌಂದರಮ್ ಅವರು ನೆವೆಂಬರ್ 7, 1940ರಂದು ಮರುಮದುವೆಯಾದರು. ಮದುವೆಯ ನಂತರ ಪತಿ ಪತ್ನಿಯರಿಬ್ಬರು ಕ್ವಿಟ್‍ಇಂಡಿಯಾ ಚಳುವಳಿಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು.

    ಗಾಂಧಿಜೀಯವರು ಸ್ವತಂತ್ರ್ಯ ಚಳುವಳಿಯ ತೀವ್ರತೆ ಹೆಚ್ಚಾದ ಸಂದರ್ಭದಲ್ಲಿ ದಕ್ಷಿಣ ಭಾರತದ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‍ನ್ ಪ್ರತಿನಿಧಿಯಾಗಿ ಸೌಂದರಮ್‍ರನ್ನು ನೇಮಕ ಮಾಡುವುದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸುವ ಜವಾಬ್ದಾರಿಯನ್ನು ನೀಡುತ್ತಾರೆ. ಹಾಗಾಗಿ ಇವರು ಅತಿ ಬಡವರ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆಗಲೇ ‘ಗಾಂಧಿಗ್ರಾಮ್’ ಎಂಬ ಕಲ್ಪನೆಯು ಹುಟ್ಟಿಕೊಂಡಿತು. ಗ್ರಾಮಗಳಲ್ಲಿ ಜನರಿಗೆ ಕೌಶಲ್ಯ ತರಬೇತಿಗಳನ್ನು ನೀಡಲಾಯಿತು, ಗ್ರಾಮ ಕೈಗಾರಿಕೆಗಳು ಮತ್ತು ಗ್ರಾಮೀಣ ಸಮುದಾಯದ ಆರ್ಥಿಕತೆಯನ್ನು ಪುನರ್‍ಜೀವನಗೋಳಿಸಲು ಪ್ರೋತ್ಸಹಿಸಲಾಯಿತು. ಹಾಗೇಯೆ ಸುತ್ತಮುತ್ತಲೀನ ಗ್ರಾಮೀಣ ಸಮುದಾಯಗಳಲ್ಲಿನ ಆರೋಗ್ಯ ರಕ್ಷಣೆ, ಶಿಕ್ಷಣ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣಗಳನ್ನು ಕೇಂದ್ರವಾಗಿರಿಸಿಕೊಂಡು ಅನೇಕ ಯೋಜನೆಗಳನ್ನು ರೂಪಿಸಿದರು.

    1947ರಲ್ಲಿ ಮಧುರೈನ ದಿಂಡಿಗಲ್ ಹೆದ್ದಾರಿಯಲ್ಲಿರುವ ಸಣ್ಣ ಪಟ್ಟಣವಾದ ಚಿನ್ನಲಪಟ್ಟಿಯಲ್ಲಿರುವ ಮನೆಯಲ್ಲಿ ಎರಡು ಹಾಸಿಗೆಯುಳ್ಳ ‘ಕಸ್ತೂರ ಬಾ’ ಆಸ್ಪತ್ರೆಯನ್ನು ಸೌಂದರಮ್ ಅವರು ಪ್ರಾರಂಭಿಸಿದರು. ಈ ಆಸ್ಪತ್ರೆಯು ಗ್ರಾಮೀಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಹಲವಾರು ಆಯಾಮಗಳನ್ನು ಒದಗಿಸಿಕೊಟ್ಟಿತ್ತು. ಎರಡು ಹಾಸಿಗೆಗಳಿಂದ ಪ್ರಾರಂಭವಾದ ಆಸ್ಪತ್ರೆಯು ನಂತರದ ದಿನಗಳಲ್ಲಿ 220 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮಾರ್ಪಟ್ಟಿತು.

    ಸೌಂದರಮ್ ಅವರು ಪತಿಯೊಂದಿಗೆ ಸೇರಿಕೊಂಡು, ಮಹಾತ್ಮ ಗಾಂಧಿಜೀಯವರ ಪತ್ನಿಯಾದ ಕಸ್ತೂರ್ಬಾ ಗಾಂಧಿಯವರ ಸ್ಮರಣಾರ್ಥವಾಗಿ 1947ರಲ್ಲಿ ‘ಗಾಂಧಿಗ್ರಾಮ್ ಗ್ರಾಮೀಣ ಸಂಸ್ಥೆ’ಯನ್ನು ರಾಷ್ಟ್ರೀಯ ದೇಣಿಗೆ ನಿಧಿಯೊಂದಿಗೆ ಸ್ಥಾಪಿಸಿದರು. ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಅತ್ಯಂತ ವಂಚಿತ ಜನರಿಗಾಗಿ ಸೇವೆ ಸಲ್ಲಿಸಲು, ಗ್ರಾಮೀಣ ಸಂಸ್ಥೆಯನ್ನು ಸ್ಥಾಪಿಸಿದರು. 1976ರಲ್ಲಿ ಗಾಂಧಿಗ್ರಾಮ, ಗ್ರಾಮೀಣ ಶಿಕ್ಷಣ ಸಂಸ್ಥೆ ಸ್ವಾಯತ್ತ ವಿಶ್ವವಿದ್ಯಾಲಯವಾಗಿ ಪರಿಗಣಿಸಲಾಯಿತು. 

    ಸೌಂದರಮ್ ಅವರು ಆಗಿನ ಮದ್ರಾಸ್ ರಾಜ್ಯದಿಂದ ಎರಡು ಬಾರಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ಮೊದಲು 1952ರಲ್ಲಿ ಅಥೂರ್ ರಾಜ್ಯ ವಿಧಾನಸಭಾ ಕ್ಷೇತ್ರ, ಎರಡನೇಯದಾಗಿ 1957ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸನ್ನು ಪ್ರತಿನಿಧಿಸುವ ವೇದಸುಂದರ್ ರಾಜ್ಯ ವಿಧಾನಸಭಾ ಕ್ಷೇತ್ರದಿಂದ, ನಂತರ 1962ರಲ್ಲಿ ಸಂಸದರು ದಿಂಡಿಗಲ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸೇವೆ ಸಲ್ಲಿಸಿದರು. ನಂತರ ಸೌಂದರಮ್ ಅವರು ದೆಹಲಿಗೆ ತೆರಳಿದರು. ಅಲ್ಲಿ ಕೇಂದ್ರ ಶಿಕ್ಷಣ ಸಚಿವರನ್ನಾಗಿ ನೇಮಿಸಲಾಯಿತು. ಹಾಗೆಯೇ ಇವರು ಉಪಮುಖ್ಯಮಂತ್ರಿಯಾಗಿದ್ದಾಗ ಭಾರತದಾದ್ಯಂತ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣದ ಪರಿಕಲ್ಪನೆಯನ್ನು ಪರಿಚಯಿಸಿದರು. ಇವರು ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಪ್ರಾರಂಭಿಸಲು ಸಹಕರಿಸಿದರು. ಇದು ಗ್ರಾಮೀಣ ಜನರ ಸೇವೆಗಾಗಿ ಪ್ರಮುಖವಾದ ಅಂಶಗಳನ್ನು ಒಳಗೊಂಡಿರುವ ಪ್ರಮುಖ ಯೋಜನೆಯಾಗಿ ಹೊರಹೊಮ್ಮಿತು.

   1984 ರಲ್ಲಿ ನಿಧನರಾದ ಸೌಂದರಮ್ ಅವರು ಸಾಮಾಜಿಕವಾಗಿ ನೀಡಿದ ಕೊಡುಗೆಗಳನ್ನು ಗಮನಿಸಿ, ಭಾರತ ಸರ್ಕಾರವು 1967ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇವರ ಸ್ಮರರ್ಣಾಥಕವಾಗಿ ಅಕ್ಟೋಬರ್ 2, 2005ರಂದು ಅಂಚೆ ಚೀಟಿ ತರಲಾಯಿತು.


ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್  ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು:  ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿ

Leave a Reply

Back To Top