ಕಾವ್ಯಯಾನ
ಬೆಳಕಿನ ಹಂಬಲ
ಮಮತಾ ಶಂಕರ್
ಜಗತ್ತು ತನ್ನ ಯೌವ್ವನವನ್ನು ಅನುಭವಿಸಿ
ಆನಂದಿಸಿ ನಲಿಯುತ್ತಿರುವಾಗ
ನೋಡಲು ಕಿಟಕಿಯೊಂದನ್ನು ತಡಕಾಡಿ
ಹುಡುಕುತಿತ್ತು ಕತ್ತಲೆಯೊಳಗಿದ್ದ ಆತ್ಮ
ಅವಳು ಮಾತಾಡದಂತೆ
ತುಟಿಗಳನ್ನು ಹೊಲೆದಿದ್ದರು
ಯಾವ ಸೂಜಿದಾರ ಎಂದು ಯಾರಿಗೂ ಕಾಣಲಿಲ್ಲ
ಅವಳ ಕೈಗಳನ್ನು ಕಟ್ಟಿಹಾಕಿದ್ದರು
ಬಿಗಿದ ಹಗ್ಗ ಯಾರಿಗೂ ಕಾಣಲಿಲ್ಲ
ಅವಳು ಎಲ್ಲಿಗೂ ಹೋಗಲಾರದಂತೆ
ಕಾಲುಗಳನ್ನು ಬಂಧಿಸಿದ್ದರು
ಸಂಕೋಲೆಗಳ ಸರಪಳಿ ಯಾರಿಗೂ ಕಾಣಿಸಲಿಲ್ಲ
ಮೈಮನಗಳ ತುಂಬಾ
ಕೇವಲ ನೋಟ, ಮೌನ, ನಡೆನುಡಿಗಳ ಹತಾರದಿಂದಾದ ಗಾಯ
ಎಂತಹ ಮುದ್ದು ಮೊನಲಿಸಾ ಮಂದಹಾಸ
ಎಂದವರಿಗೆ ಬಿಕ್ಕುವ ಆತ್ಮ ಕಾಣಿಸಲಿಲ್ಲ
ಕತ್ತಲೆಯ ಕೋಣೆಯಲ್ಲಿ ಅವಳು ಹಚ್ಚಿದ್ದ
ನಂಬಿಕೆಯ ಮೇಣದ ಬತ್ತಿ
ಕರಗಿ ನೀರಾಗಿ ಹೋಗುತ್ತಿತ್ತು
ಅವಳು ಅರಸುವ ಬೆಳಕು ಬೀರಲಿಲ್ಲ
ಅವಳೀಗ ಬೆಳಕಿನ ವಿಸ್ಮಯಕ್ಕಾಗಿ ಪರಿತಪಿಸುತ್ತಿಲ್ಲ
ಶಾಂತ ಬೆಳಕಿನಂತೆ
ಅವಳು ಅಲ್ಲೇ
ಇದ್ದಳು
ಇದ್ದಾಳೆ
ಮತ್ತು
ಇರುತ್ತಾಳೆ …..
An excellent poem on femail tarture
ಧನ್ಯವಾದಗಳು ಮೇಡಂ
ಧನ್ಯವಾದಗಳು ಮೇಡಂ