ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.

ಸ್ವಾತಂತ್ರ್ಯ ಹೋರಾಟಗಾರ್ತಿ ಜಾನಕಿ ದೇವಿ ಬಜಾಜ್ (1893-1979)

ಜಾನಕಿದೇವಿ ಬಜಾಜ್‍ರವರು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದು, 1932ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲುವಾಸ ಅನುಭವಿಸಿದ್ದರು.

ಜಾನಕಿಯವರು ಜನವರಿ 7, 1893ರಲ್ಲಿ ಮಧ್ಯಪ್ರದೇಶದ ಜೋರಾ ಎಂಬ ಗ್ರಾಮದಲ್ಲಿ ಜನಿಸಿದರು. ಇವರು ಮಾರ್ವಾಡಿ ಕುಟುಂಬಕ್ಕೆ ಸೇರಿದರಾಗಿದ್ದಾರೆ. ಜಾನಕಿಯವರು ತಮ್ಮ 8ನೇ ವಯಸ್ಸಿನಲ್ಲಿ 12 ವರ್ಷದ ಜಮನ್‍ಲಾಲ್ ಬಜಾಜ್‍ರವರನ್ನು ಭಾರತೀಯ ಸಂಪ್ರದಾಯದ ಪ್ರಕಾರ ವಿವಾಹವಾದರು. ಜಾನಕಿಯವರು ಸಂಪ್ರದಾಯ ಪ್ರಿಯರಾಗಿದ್ದರು. ಜಮನ್‍ಲಾಲ್ ಬಜಾಜ್‍ರವರ ಕುಟುಂಬವು ಮದುವೆಯ ಸಮಯದಲ್ಲಿ ಮಧ್ಯಮ ವರ್ಗದ ಒಂದು ವ್ಯಾಪಾರಿ ಕುಟುಂಬವಾಗಿತ್ತು, ನಂತರ ಜಮನ್‍ಲಾಲ್‍ರವರು ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ಅತೀ ದೊಡ್ಡ ಮಟ್ಟದಲ್ಲಿ ಬೆಳೆಸುತ್ತಲೇ ಭಾರತದ ಅತೀ ದೊಡ್ಡ ಕೈಗಾರಿಕೋದ್ಯಮವನ್ನು ಸ್ಥಾಪಿಸಿದರು.  

ಜಮನ್‍ಲಾಲ್ ದಂಪತಿಗಳು ತುಂಬಾ ಸರಳ ಜೀವನವನ್ನು ನಡೆಸುತ್ತಿದ್ದರು. ಐಶಾರಾಮಿ ಜೀವನದಿಂದ ದೂರ ಉಳಿದಿದ್ದರು. ಸರಳ ಜೀವನ ನಡೆಸುವುದೇ ಭಾರತೀಯ ಸಂಸ್ಕೃತಿ ಎಂದು ದಂಪತಿಗಳಿಬ್ಬರೂ ಹೇಳಿಕೊಳ್ಳುತ್ತಿದ್ದರು. ಜಮನ್‍ಲಾಲ್‍ರವರ ಜೀವನಶೈಲಿ, ಗುಣಗಳು, ಸರಳತೆಯನ್ನು ಕಂಡ ಗಾಂಧಿಜಿಯವರು ‘ಜಮನಾಲಾಲ್ ನನ್ನ ಐದನೇ ಮಗ’ ಎಂದು ಹೇಳಿಕೊಂಡಿದ್ದರು. ಅಷ್ಟರಮಟ್ಟಿಗೆ ಜಾನಕೀಯವರ ಕುಟುಂಬವು ಗಾಂಧೀಜಿಯವರ ವಿಶ್ವಾಸಕ್ಕೆ ಪಾತ್ರವಾಗಿತ್ತು.

ಜಾನಕಿದೇವಿ ಮತ್ತು ಜಮನ್‍ಲಾಲ್ ದಂಪತಿಗಳಿಬ್ಬರೂ ಚಳುವಳಿಯಲ್ಲಿ ತೊಡಗಿಸಿಕೊಂಡರು. ಜಾನಕಿಯವರು ಚರಕದಿಂದ ಖಾದಿ ನೂಲುವ ಕೆಲಸವನ್ನು ಮಾಡಿದರು. 1928ರಲ್ಲಿ ಹರಿಜನರ ಉದ್ಧಾರಕ್ಕಾಗಿ ಮತ್ತು ಅವರ ದೇವಸ್ಥಾನ ಪ್ರವೇಶಕ್ಕಾಗಿ ಚಳುವಳಿ ಮಾಡಿದರು. ನಂತರ ವಿನೋಭಾ ಭಾವೆಯವರೊಂದಿಗೆ ಸೇರಿಕೊಂಡು ಭೂಧಾನ ಚಳುವಳಿಯಲ್ಲಿ ತೊಡಗಿಸಿಕೊಂಡರು. 1942 ರಿಂದ ಹಲವಾರು ವರ್ಷಗಳ ಕಾಲ ಅಖಿಲ ಭಾರತ ಗೋಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಭಾರತ ಸರ್ಕಾರವು 1956ರಲ್ಲಿ ಭಾರತದ ಎರಡನೇ ಅತ್ಯುತ್ತಮ ನಾಗರೀಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿ ನೀಡಿ ಜಾನಕಿಯವರನ್ನು ಗೌರವಿಸಿತು. 1965ರಲ್ಲಿ “ಮೇರಿ ಜೀವನ ಯಾತ್ರಾ” ಎಂಬ ಆತ್ಮಚರಿತ್ರೆಯನ್ನು ಬರೆದರು.

1979ರಲ್ಲಿ ಜಾನಕಿ ದೇವಿಯವರು ನಿಧನರಾದರು. ಜಾನಕಿದೇವಿ ಬಜಾಜ್‍ರವರ ಸವಿನೆನಪಿಗಾಗಿ “ಜಾನಕಿದೇವಿ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್”, ಜಾನಕಿ ದೇವಿ ಸರ್ಕಾರಿ ಪಿಜಿ ಬಾಲಕಿಯರ ಕಾಲೇಜು ಕೋಟಾದಲ್ಲಿ, ಬಜಾಜ್ ಎಲೆಕ್ರ್ಟಿಕಲ್ಸ್, ಜಾನಕಿ ದೇವಿ ಬಜಾಜ್ ಗ್ರಾಮ್ ವಿಕಾಸ್ ಸಂಸ್ಥೆ ಹೀಗೆ ಅನೇಕ ಶಿಕ್ಷಣ ಸಂಸ್ಥೆಗಳು ಮತ್ತು ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. 1992-19 ರಲ್ಲಿ ಗ್ರಾಮೀಣ ಉದ್ಯೋಗಿಗಳಿಗಾಗಿ ಐ.ಎಂ.ಸಿ ಲೇಡೀಸ್ ವಿಂಗ್ ಜಾನಕಿ ದೇವಿ ಬಜಾಜ್ ಪುರಸ್ಕಾರ ನೀಡುವುದರ ಜೊತೆಗೆ ಲೇಡೀಸ್ ವಿಂಗ್ ಆಫ್ ಇಂಡಿಯನ್ ಮರ್ಚಂಟ್ಸ್ ಚೇಂಬರನ್ನು  ಇವರ ಹೆಸರಿನಗಲ್ಲಿ ಸ್ಥಾಪಿಸಲಾಗಿದೆ. 

ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್  ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು:  ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿದೆ

Leave a Reply

Back To Top