ವಿಶೇಷ ಲೇಖನ
ಕಣ್ಣಿಲ್ಲದ ಲೋಕಕ್ಕೆ ಕಣ್ಣು ಕೊಟ್ಟ ಡಾಕ್ಟರು
ಡಾ. ಬಿ. ಎಂ. ತಿಪ್ಪೇಸ್ವಾಮಿ
ಕೃತಿ: -‘ಮುಟ್ಟಿಸಿಕೊಂಡವರು:
ಡಾ. ಬಿ.ಎಂ. ತಿಪ್ಪೇಸ್ವಾಮಿ ನೆನಪಿನ ಪುಸ್ತಕ’ (1998)
ಸಂಪಾದಕರು: –ಬಿ.ವಿ. ವೀರಭದ್ರಪ್ಪ, ಬಿ.ಟಿ. ಜಾಹ್ನವಿ
ಎಷ್ಟೋ ಜನರಿಗೆ ಹುಟ್ಟುತ್ತಲೇ ಕಣ್ಣಿರುವುದಿಲ್ಲ. ಅದು ಮನುಷ್ಯನ ಸಾಧ್ಯತೆಯನ್ನು ಮೀರಿಸಿದ ನಿಸರ್ಗದ ಸೃಷ್ಟಿ.
ಅದರ ಮುಂದೆ ಮನುಷ್ಯ ನಿಸ್ಸಹಾಯಕ.
ಆದರೆ ಇನ್ನು ಕೆಲವು ಜನರಿಗೆ ಕಣ್ಣಿರುತ್ತವೆ. ಲೋಕದ ಮೇಲಿನ ಎಲ್ಲವೂ ಕಾಣುತ್ತವೆ ಕೂಡಾ.
ಆದರೆ ಅವರಲ್ಲಿ ಕಾಣಬೇಕಾದ್ದನ್ನೇ ಕಾಣಲೊಪ್ಪದೆ ಮನಸಿನ ತುಂಬಾ ಅಹಮ್ಮಿನ ಕುರುಡುತನ ಆವರಿಸಿಬಿಟ್ಟಿರುತ್ತದೆ.
ಈ ಅಹಮ್ಮಿಗೆ ಜಾತಿ ಮೇಲರಿಮೆ, ಶ್ರೀಮಂತಿಕೆ, ಅಧಿಕಾರ ಮುಂತಾದ ಅಹಂಕಾರಗಳು ಸೇರಿದರಂತೂ ಮುಗಿದೇ ಹೋಯಿತು.. ಹೃದಯವಿದ್ದರೂ ಅದು ಕಲ್ಲಿನಂತಿರುತ್ತದೆ. ಅಲ್ಲಿ ಮನುಷ್ಯತ್ವ ಮಿಡಿಯುವುದೇ ಇಲ್ಲ.
ಈ ವಿಕಾರಗಳೆಲ್ಲವೂ ಜಾತಿಗ್ರಸ್ತ ಭಾರತದಲ್ಲಿ ಅತ್ಯಂತ ಸಹಜವೆಂಬಂತೆ ಈ ಹೊತ್ತಿಗೂ ನಡೆಯುತ್ತಲೇ ಇರುತ್ತವೆ..
ಇದೆಲ್ಲವನ್ನೂ ಯಾಕೆ ಹೇಳಬೇಕಾಯ್ತೆಂದರೆ…
ಕೆಲವೇ ದಶಕಗಳ ಹಿಂದೆ ಮುಟ್ಟಿಸಿಕೊಳ್ಳಬಾರದವರೆಂದು ಹಣೆಪಟ್ಟಿ ಹಚ್ಚಿಸಿಕೊಂಡು ಅಸ್ಪೃಶ್ಯರೆಂದು ಊರಾಚೆ ತಳ್ಳಲ್ಪಟ್ಟ ಸಮುದಾಯದ ಹುಡುಗನೊಬ್ಬನಿದ್ದ. ಆತ ಹುಟ್ಟಿ ಬೆಳೆದದ್ದು ದಲಿತರ ಕೇರಿ. ನೋವುಗಳೆ ತುಂಬಿದ ಕೇರಿಯಾಚೆಗೆ ಆತ ಜಿಗಿಯಬಯಸಿದ. ಜಾತಿ, ಬಡತನ, ಅಸ್ಪೃಶ್ಯತೆಗಳ ಕಾರಣಕ್ಕೆ ಅತಿ ಕ್ರೂರ ಅವಮಾನಗಳನ್ನು ಅನುಭವಿಸಿದ. ಆದರೆ ಅದೆಲ್ಲವನ್ನೂ ಮೀರಿ ಬೆಳೆದ. ಅಗಾಧ ಓದಿನ ಬಲದಿಂದ ಅಪಾರ ಜ್ಞಾನ ಪಡೆದ.
ವಿಶೇಷವೆಂದರೆ ತಾನು ಪಡೆದ ಆ ಜ್ಞಾನ, ಪ್ರತಿಭೆಗಳೆಲ್ಲವನ್ನೂ ನೊಂದ ಜನರ ನೋವು ನಿವಾರಣೆಗೆ ಬಳಸಿದ. ತನ್ನನ್ನು ಜಾತಿ ಕಾರಣಕ್ಕೆ ನೋಯಿಸಿದವರೂ ಸಹ ಕಣ್ಣು ಕಳಕೊಂಡು ಕಟ್ಟ ಕಡೆಯದಾಗಿ ದೈನೇಸಿಯಾಗಿ ಬಂದು ತನ್ನೆದುರು ನಿಂತಾಗಲಂತೂ ಇನ್ನಷ್ಟು ಮಾನವ ಪ್ರೀತಿಯಿಂದ ಅವರನ್ನು ಮುಟ್ಟಿ ಮಾತಾಡಿಸಿ ಸಂತೈಸಿದ. ಅವರಿಗೆ ಕಣ್ಣು ಕೊಟ್ಟ.
ಅಲ್ಲಿ ಆಧುನಿಕ ಅಂಗುಲಿಮಾಲರ ಕ್ರೌರ್ಯದ ಎದುರು ಬುದ್ದನ ಕರುಣೆ ಮರುಹುಟ್ಟು ಪಡೆದಿತ್ತು.
ಆ ಮಹಾನ್ ಕರುಣೆಯೆ ಡಾ. ಬಿ. ಎಂ. ತಿಪ್ಪೇಸ್ವಾಮಿಗಳಾಗಿ ರೂಪ ತಳೆದಿತ್ತು.
ಕನ್ನಡದ ಮೇರು ಲೇಖಕ ಪಿ.ಲಂಕೇಶರು ಅತ್ಯಂತ ಮನಮಿಡಿಯುವಂತ ರೂಪಕಾತ್ಮಕವಾದ ಬರೆಹ ‘ಮುಟ್ಟಿಸಿಕೊಂಡವನು’ ಬರೆದದ್ದು ಇದೇ ತಿಪ್ಪೇಸ್ವಾಮಿಗಳ ಬಗೆಗೆ.
ಅಪರಿಮಿತ ಜ್ಞಾನ ಮತ್ತು ಮಾನವೀಯತೆಗಳು ಏಕೀಭವಿಸಿದ ತಿಪ್ಪೇಸ್ವಾಮಿಯವರು ದಾವಣಗೆರೆ ಚಿತ್ರದುರ್ಗ ಭಾಗದ ಹಳ್ಳಿಗಾಡಿನ ಜಾತಿ ಮೀರಿ ಬಡವರ ಬದುಕಿಗೆ ನೆರವಾದರು.
ಕಾಯಿಲೆಗಳು ಮತ್ತು ನೋವುಗಳು ಮನುಷ್ಯನ ಅಹಮ್ಮಿನ ಕೋಟೆಗಳನ್ನು ನುಚ್ಚುನೂರು ಮಾಡುವ ಬಲಶಾಲಿ ಆಯುಧಗಳು. ಸಾವು ಮತ್ತು ಬದುಕಿನ ಹೋರಾಟದ ಹೊಸ್ತಿಲಿಗೆ ಬಂದು ನಿಂತಾಗಲಂತೂ ಮನುಷ್ಯ ತನ್ನ ಜೀವ ಉಳಿದರೆ ಸಾಕೆನ್ನುವ ಅನಿವಾರ್ಯತೆಗೆ ಸಿಲುಕುತ್ತಾನೆ. ಆಗ ಆತನಲ್ಲಿ ಅಪ್ಪಟ ಮನುಷ್ಯನೊಬ್ಬ ಬದುಕುಳಿಯಲಿಕ್ಕಾಗಿ ಚಡಪಡಿಸುತ್ತಾನೆ. ಅದುವರೆಗೆ ಜಾತಿಯನ್ನು ಕಾಪಾಡಿಕೊಂಡಿದ್ದವನು ತನಗೆ ಎರಗಿದ ಕಾಯಿಲೆಯಿಂದ ತನ್ನನ್ನು ಪಾರು ಮಾಡಲು ಬರುವ ವೈದ್ಯ ಯಾವ ಜಾತಿಯಾದರೇನು, ತನ್ನ ಜೀವ ಉಳಿದರೆ ಸಾಕೆನ್ನುವ ತಹತಹದಲ್ಲಿರುತ್ತಾನೆ. ಹಾಗೆ ನೋಡಿದರೆ ಭಾರತದಂತಹ ದೇಶದಲ್ಲಿ ಪ್ರತಿ ಜಾತಿವಂತನೂ ತನ್ನ ಜಾತಿಮೀರಿ ವಿಶ್ವಮಾನವನಾಗುವುದು ಸಾವಿನ ದವಡೆಯಲ್ಲಿ ಸಿಕ್ಕಿಕೊಂಡಾಗ ಮಾತ್ರ.
ಅಂತಹ ಸಾವಿನ ದವಡೆಗೆ ಸಿಕ್ಕಿಕೊಂಡ ಸರ್ವ ಜಾತಿಗಳ ಸಾವಿರ ಸಾವಿರ ಜನರನ್ನು ತಿಪ್ಪೇಸ್ವಾಮಿಗಳು ಉಳಿಸಿದ್ದಾರೆ. ದಾವಣಗೆರೆ ಚಿತ್ರದುರ್ಗದ ಹಳ್ಳಿಗಾಡಲ್ಲಿ ಅಡ್ಡಾಡುವಾಗ ಜನ ಈಗಲೂ ಕೃತಜ್ಞತೆಯಿಂದ ನೆನೆಯುವುದನ್ನು ನೋಡಿದರೆ ಡಾಕ್ಟರು ಎಂತಹ ಮನುಷ್ಯ ಪ್ರೇಮಿ ಎಂಬುದು ತಿಳಿಯುತ್ತದೆ. ಈಗಲೂ ಅವರ ಹೆಸರು ಜನರ ನೆನಪಿನಲ್ಲಿ ಡಾಕ್ಟರು ಅಂತ ಮಾತ್ರ ಉಳಿದಿದೆ.
ಕಣ್ಣಿನ ಕಾರಣಕ್ಕಾಗಿ ಅಷ್ಟೇ ಅಲ್ಲ, ಬಡವರ ಹುಡುಗರ ಓದಿಗೆ, ಹಸಿದಾಗ ಅನ್ನಕ್ಕೆ, ತಲೆಮೇಲೊಂದು ಸೂರಿಗೆ.. ಹೀಗೆ ತಿಪ್ಪೇಸ್ವಾಮಿಯವರು ತಾನು ಬದುಕಿದ್ದಷ್ಟೂ ದಿನ ಹತ್ತಾರು ವಿಧದಲ್ಲಿ ನೆರವಾದರು. ಡಾ. ತಿಪ್ಪೇಸ್ವಾಮಿಗಳು ದಲಿತ ಲೋಕ ಕಂಡ ಅತಿ ದೊಡ್ಡ ಕಣ್ಣಿನ ಡಾಕ್ಟರು. ಕಣ್ಣಿಲ್ಲದ ಲೋಕಕ್ಕೆ ಕಣ್ಣಾದ ಮಹಾಮಾನವ.
ಆ ಕಾಲಕ್ಕೆ ಅಕ್ಷರಸ್ಥರೆ ಇಲ್ಲದ ಜಾತಿಯಲ್ಲಿ ಓದಿ ಜನಪರ ವೈದ್ಯರಾಗಿ ಹೆಸರಾದ ಕಾರಣಕ್ಕೆ ರಾಜಕಾರಣದ ಅಂಗಳಕ್ಕೆ ಪ್ರವೇಶ ದೊರೆಯಿತು. ಶಾಸಕರಾಗಿ ಅಧಿಕಾರವೂ ದಕ್ಕಿತು. ಅಧಿಕಾರ ಸಿಕ್ಕಿದ್ದಕ್ಕೆ ಡಾಕ್ಟರು ಎಂದೂ ಹಿಗ್ಗಲಿಲ್ಲ. ಸಮಕಾಲೀನ ವೃತ್ತಿರಾಜಕಾರಣಿಗಳ ಹಾಗೆ ದರ್ಪ, ದವಲತ್ತು ತೋರಿದವರಲ್ಲ. ಇತರರ ಹಾಗೆ ತನ್ನದೇ ಆದ ಪಟಾಲಂ ಕಟ್ಟಲಿಲ್ಲ.. ಸ್ವಂತಕ್ಕೆ, ತನ್ನ ಮಕ್ಕಳು ಮರಿಗಾಗಿ ಆಸ್ತಿ ಮಾಡಲಿಲ್ಲ. ಸಾಯುವವರೆಗೂ ತಾನು ಅಧಿಕಾರದಲ್ಲಿರಬೇಕೆಂಬ ವ್ಯಸನ ಡಾಕ್ಟರಿಗೆ ಎಂದಿಗೂ ಇರಲಿಲ್ಲ.
ಬದಲಿಗೆ ಆ ಅಧಿಕಾರವನ್ನೂ ಕೂಡಾ ನೊಂದವರ ನೆರವಿಗೆ ಬಳಸಿದರು.
ದಲಿತ ರಾಜಕಾರಣವು ತಾತ್ವಿಕವಾಗಿ ಹೇಗೆ ಜನಪರವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ಇರಬೇಕೆಂಬ ಆಶಯದ ಪ್ರತಿರೂಪವಾಗಿದ್ದವರು ತಿಪ್ಪೇಸ್ವಾಮಿಯವರು. ಅಂಬೇಡ್ಕರ್ ಕಂಡ ದಲಿತ ರಾಜಕೀಯದ ಆಶಯಗಳನ್ನು ಕನ್ನಡ ನೆಲದಲ್ಲಿ ತನ್ನ ಬದುಕಿನುದ್ದಕ್ಕೂ ಅಳವಡಸಿಕೊಂಡು ಬದುಕಿದ್ದ ಕೆಲವೇ ಕೆಲವರಲ್ಲಿ ತಿಪ್ಪೇಸ್ವಾಮಿಯವರು ಮೊದಲಿಗರೆಂದರೆ ತಪ್ಪೇನಲ್ಲ.
ಸರಳತೆ , ಸಜ್ಜನಿಕೆಯ ವ್ಯಕ್ತಿತ್ವದ ಡಾಕ್ಟರ್ ತಿಪ್ಪೇಸ್ವಾಮಿಯವರು ನಿಜವಾದ ಅರ್ಥದಲ್ಲಿ People’s Doctor and People’s Politician.
****************
ಬಿ.ಎಲ್.ರಾಜು
ತಿಪ್ಪೆಸ್ವಾಮಿಯವರ ಬಗ್ಗೆ ಪಿ.ಲಂಕೇಶ್ ಬರೆದ ಬರಹ ಕೆಳಗೆ ಕೊಡಲಾಗಿದೆ
ನಗೆ ಮತ್ತು ಪ್ರೀತಿ.
“ಭಾರತದಂತಹ ಬಹುಮುಖದ, ಬಹುಸ್ತರದ ದೇಶದಲ್ಲಿ ತಿಪ್ಪೇಸ್ವಾಮಿಯಂಥವರು ಬದುಕಿದ್ದೇ ಒಂದು ಕುತೂಹಲಕರ ವಿಷಯವಾಗಬಲ್ಲದು; ಅವರು ಅಕ್ಷರದಿಂದ ವಂಚಿತರಾದ, ಜಾತಿಪದ್ಧತಿಗೂ ಕ್ರೂರವ್ಯವಸ್ಥೆಯ ಹೊರಗೇ ಉಳಿದಿದ್ದ ಪಂಚಮ ಸಮುದಾಯದಿಂದ ಬಂದವರು. ಅಂಥವರು ತಮ್ಮ ಹುಟ್ಟೂರನ್ನು ಬಿಟ್ಟು ಅಕ್ಕನ ಊರಿಗೆ ಹೋಗಿ ಶಾಲೆಗೆ ಸೇರದಿದ್ದರೆ, ಅಲ್ಲಿ ಕೂಡಾ ಜನರ ಅಸೂಯೆ, ಅವಮಾನಗಳನ್ನು ಸಹಿಸಿಕೊಂಡು ವಿದ್ಯೆಗಳಿಸಲೇಬೇಕೆಂಬ ನಿಶ್ಚಲ ಗುರಿಯಿಂದ ಮುಂದುವರೆಯದಿದ್ದರೆ ತಿಪ್ಪೇಸ್ವಾಮಿ ತಮ್ಮ ಹುಟ್ಟಿದೂರಾದ ಹಿರೇಹಳ್ಳಿಯಲ್ಲಿ ದನ ಕಾಯುತ್ತಾ ಜೀವನ ಸಾಗಿಸಬೇಕಾಗುತ್ತಿತ್ತು.
20ನೇ ಶತಮಾನದ ಭಾರತದ ಅಲ್ಲೋಲಕಲ್ಲೋಲ ಸಾಮಾಜಿಕ ವಾತಾವರಣದಲ್ಲಿ ತಿಪ್ಪೇಸ್ವಾಮಿಯವರು ಅನ್ಯಜಾತಿಯವರಿಂದ ಪಡೆದ ಸಹಕಾರ, ಪ್ರೀತಿ, ನಿರ್ಲಕ್ಷ್ಯ, ಅವಮಾನ ಇತ್ಯಾದಿ ದಾಖಲೆಯೇ ಒಂದು ಬೃಹತ್ ಕೃತಿಗೆ ವಸ್ತುವಾಗಬಲ್ಲದು. ಯಾಕೆಂದರೆ ತಿಪ್ಪೇಸ್ವಾಮಿ ಜಟಿಲ ಪರಿಸರದಲ್ಲಿ ವಿಶಿಷ್ಟ ಜೀವನಶೈಲಿ, ಸಾಮಾಜಿಕ ಕಾಳಜಿಯನ್ನು ಆರಿಸಿಕೊಂಡವರು…
ತಿಪ್ಪೇಸ್ವಾಮಿ ನಾನು ಬಲ್ಲ ಅತ್ಯಂತ ಆರೋಗ್ಯವಂತ ಮನಸ್ಸಿನ ವ್ಯಕ್ತಿ. ಅವರು ಎಲ್ಲರಂತೆಯೇ ಇದ್ದರು. ಅವರು ನಗಬಲ್ಲವರಾಗಿದ್ದರು. ಜಾತಿ, ವರ್ಗ ಯಾವುದನ್ನೂ ಪರಿಗಣಿಸದೆ ತಮ್ಮ ಪ್ರೀತಿಯನ್ನು ನೀಡಬಲ್ಲವರಾಗಿದ್ದರು. ನಗೆ ಮತ್ತು ಪ್ರೀತಿ ಅವರ ವ್ಯಕ್ತಿತ್ವದ main springs ಎಂದು ನನಗೆ ಅನ್ನಿಸುತ್ತದೆ.”
-ಪಿ. ಲಂಕೇಶ್
ಕನ್ನಡದ ಜೀವಸೆಲೆ ಹೀಗಿತ್ತು… ಜೀವನ ಪ್ರೀತಿಯೂ ಸಹ…
ಮನ ಮುಟ್ಟುವ ಲೇಖನ….