ರಾಜದ್ರೋಹ ವರ್ಸಸ್ ಕಲೆ

ರಹಮತ್ ತರೀಕೆರೆ

1 ವ್ಯಕ್ತಿ ಮತ್ತು ಪಠ್ಯ 'FOR REWARD INFORMATION LEADING το THE APPREHENSION OF JESUS CHRIST WANTED -FOR SEDITION, CRIMINAL ANARCHY- VAGRANCY, AND CONSPIRING τO OVERTHROW THE ESTABLISHED GOVERNMENT DRESSES POORLY. SAID TO BE CARPENTER 84 TRADE ILL- NOURISHED, HAS VISIONARY IDEAS ASSOCIATES WITH COMMON WORKING PEOPLE THE UNEMPLOYED AND BUMS, ALIEN 一 BELEIVED το BE JEW ALIAS: PRINCE OF PEACE, SON OF MAN'-'LIGHY OF THE WORLD &c &c PROFESSIONAL AGITATOR RED BEARD, MARKS ON HANDS AND FEET THE RESULT OF INJURIES INFLICTED BY AN ANGRY MOB LED BY RESPECTABLE CITIZENS AND LEGAL AUTHORITIES. Youn' ಹೇಳುತ್ತಿದೆ ನ ಚಿತ್ರವಾಗಿರಬಹುದು

ಅಮೆರಿಕೆಯ ವ್ಯಂಗ್ಯಚಿತ್ರಕಾರ ಅರ್ಥರ್ ಯಂಗ್,  ಅನೇಕ ಮೊಕದ್ದಮೆ-ವಿಚಾರಣೆಗಳನ್ನು ಎದುರಿಸಿದ ಕಲಾವಿದ. ಒಮ್ಮೆ ಆತನ ಒಂದು ವ್ಯಂಗ್ಯಚಿತ್ರ (1917) ಕೋಲಾಹಲ ಹುಟ್ಟಿಸಿತು. ಅದೊಂದು ಏಸುವಿನ ಚಿತ್ರ. ಚಿತ್ರದ ಮೇಲೆ `ಸ್ಥಾಪಿತ ಸರ್ಕಾರವನ್ನು ಉರುಳಿಸುವುದಕ್ಕೂ ಜನರಲ್ಲಿ ಅಶಾಂತಿ ಮತ್ತು ಅರಾಜಕತೆ ಹುಟ್ಟಿಸುವುದಕ್ಕೂ ಕಾರಣನಾದ ಈ ವ್ಯಕ್ತಿಯನ್ನು ಹಿಡಿದುಕೊಟ್ಟವರಿಗೆ ಬಹುಮಾನ ಕೊಡಲಾಗುವುದು’ ಎಂಬ ಒಕ್ಕಣೆ; ಕೆಳಗೆ ಸದರಿ ವ್ಯಕ್ತಿಯ ಚಹರೆಯನ್ನು ಹೀಗೆ ವಿವರಿಸಲಾಗಿತ್ತು: `ಸಾಮಾನ್ಯವೇಷ, ಬಡಗಿ ಕೆಲಸಗಾರ, ಬಡಕಲು ದೇಹ; ದಾರ್ಶನಿಕ ಮುನ್ನೋಟಗಳಿವೆ, ನಿರುದ್ಯೋಗಿ ಮತ್ತು ಸಾಮಾನ್ಯ ಜನರ ಒಡನಾಟವಿದೆ. ಚಳವಳಿಗಾರ. ಮೈಮೇಲೆ ಗೌರವಾನ್ವಿತ ನಾಗರಿಕರೂ ಅಧಿಕಾರಿಗಳೂ ಮಾಡಿರುವ ಗಾಯದ ಗುರುತುಗಳಿವೆ’.

ಯಾವ ಗುಣಗಳಿಗಾಗಿ ಏಸುವನ್ನು ಆರಾಧಿಸಲಾಗುತ್ತಿದೆಯೊ, ಅವೇ ಗುಣವುಳ್ಳ ಚಳುವಳಿಗಾರರನ್ನು ದೇಶದ್ರೋಹಿಗಳು ಎಂಬಂತೆ ಸರ್ಕಾರವು ನೋಡುವ ಬಗ್ಗೆ ಚಿತ್ರವು ವ್ಯಂಗ್ಯವಾಗಿ ಪ್ರಶ್ನೆಯೆತ್ತಿತು. ಈ ಚಿತ್ರಕ್ಕೆ ಚಾರಿತ್ರಿಕ ಹಿನ್ನೆಲೆಯೂ ಇದೆ. ಏಸುವಿಗೆ ಮರಣದಂಡನೆ ವಿಧಿಸಿದ್ದು ರಾಜಕೀಯ ಪ್ರಭುತ್ವ ಮಾತ್ರವಲ್ಲ, ಧಾರ್ಮಿಕ ವ್ಯವಸ್ಥೆ ಕೂಡ. ಏಸು ದೇವರ ಸಾಮ್ರಾಜ್ಯದ ಪ್ರಸ್ತಾಪ ಮಾಡಿದನು. ಅವನು ದೇವರು ಕಳಿಸಿದ ಮಸೀಹನೆಂದು ಅನುಯಾಯಿಗಳು ಒಪ್ಪಿದ್ದರು. ಇದು ಪವಿತ್ರದೊರೆ ಡೇವಿಡನ ಪರಿಕಲ್ಪನೆಗೆ ಎಸೆದ ಸವಾಲೆಂದು ಯಹೂದಿ ಸಂಪ್ರದಾಯವಾದಿಗಳು ಆತಂಕಿತರಾದರು; ತನ್ನನ್ನು ದೇವರ ಮಗನೆಂದು ಕರೆದುಕೊಂಡವನು ಮುಂದೆ ತಾನೇ ರಾಜನೆಂದು ಕರೆದುಕೊಳ್ಳುವ ಸಾಧ್ಯತೆಯಿದೆಯೆಂದೂ, ಚಕ್ರವರ್ತಿ ಸೀಜರನ ಅಧಿಕಾರವನ್ನು ಪ್ರಶ್ನಿಸುತ್ತದೆಯೆಂದೂ ರೋಮನ್ ಚಕ್ರಾಧಿಪತ್ಯ ಶಂಕಿಸಿತು. ಎಂತಲೇ ಶಿಲುಬೆಗೇರಿಸುವಾಗ ಏಸುವಿನ ಕೊರಳಲ್ಲಿ `ನಜರೇತಿನ ದೊರೆ’ ಎಂದು ವ್ಯಂಗ್ಯವಾಗಿ ಬರೆದ ಹಲಗೆ ತೂಗುಹಾಕಲಾಗಿತ್ತು.

ಜಗತ್ತಿನ ಬಹುತೇಕ ಧರ್ಮ ಸ್ಥಾಪಕರು ಸಮಕಾಲೀನ ಪ್ರಭುತ್ವಗಳ ಕಣ್ಣಲ್ಲಿ ವಿದ್ರೋಹಿಗಳೇ. ಶಾಕ್ಯ ಬುಡಕಟ್ಟು ರೋಹಿಣಿ ನದಿಯ ನೀರಿಗಾಗಿ ಕೋಲಿಯ ಬುಡಕಟ್ಟಿನ ಮೇಲೆ ಯುದ್ಧ ಸಾರಿದಾಗ, ಗೌತಮ ಯುದ್ಧಮಾಡಲು ನಿರಾಕರಿಸಿದನು. ಇದು ಬುಡಕಟ್ಟು ಸಂಘದ ತೀರ್ಮಾನಕ್ಕೆ ವ್ಯತಿರಿಕ್ತವಾಗಿತ್ತು. ಅದಕ್ಕೆ ಶಿಕ್ಷೆಯೆಂದರೆ ಮರಣದಂಡನೆ ಇಲ್ಲವೇ ಕುಟುಂಬದ ಬಹಿಷ್ಕಾರ. ಈ ಶಿಕ್ಷೆ ನಿವಾರಿಸಲು ಗೌತಮ ಸ್ವಯಂ ದೇಶಭ್ರಷ್ಟನಾದನು. ಪ್ರವಾದಿ ಮಹಮದ್ ಮೆಕ್ಕಾ ಬಿಟ್ಟು ಹೋಗಲು ಕಾರಣ, ಅರಬರ ಬುಡಕಟ್ಟು ದೈವಗಳನ್ನು ನಿರಾಕರಿಸಿ ಹೊಸ ದೇವರ ಕಲ್ಪನೆಯನ್ನು ಮಂಡಿಸಿದ್ದು ಮಾತ್ರವಲ್ಲ; ಬಲಿಷ್ಠರಾದ ಖುರೈಶಿ ಬುಡಕಟ್ಟಿನ ರಾಜಕೀಯ ನಾಯಕತ್ವವನ್ನು ಪ್ರಶ್ನಿಸಿದ್ದು ಕೂಡ. ಬಿಜ್ಜಳನಿಗೆ ಬಸವಣ್ಣನನ್ನು ರಾಜದ್ರೋಹಿ ಎಂದು ಪರಿಭಾವಿಸುವಲ್ಲಿ, ಆತ ಜನತೆಯ ನಾಯಕನಾಗಿ ಜನಪ್ರಿಯನಾಗುತ್ತಿದ್ದ ಪರಿ, ಪ್ರಭುತ್ವಕ್ಕೆ ಸಂಚಕಾರ ತರಬಹುದು; ಆತನ ಹೊಸಧರ್ಮ, ಶ್ರೇಣೀಕೃತ ಸಮಾಜದ ಬುಡವನ್ನು ಅಲ್ಲಾಡಿಸಬಹುದು ಎಂಬ ಭಯವಿತ್ತು. ಸಂಪ್ರದಾಯವಾದಿಗಳು ಬಸವಣ್ಣನ ಕ್ರಾಂತಿಯನ್ನು ಹಣಿಯಲು ಬಿಜ್ಜಳನೊಟ್ಟಿಗೆ ಸೇರಿಕೊಂಡರು. ಸೂಫಿ ದರ್ಶನದಿಂದ ಪ್ರಭಾವಿತನಾಗಿದ್ದ ದಾರಾಶುಕುವನ್ನು ರಾಜದ್ರೋಹದ ಆಪಾದನೆಯಲ್ಲಿ ಕೊಲ್ಲುವಾಗಲೂ, ಔರಂಗಜೇಬನ ಬೆನ್ನಿಗೆ ದೆಹಲಿಯ ಮೌಲವಿಗಳಿದ್ದರು. ಈಗಲೂ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರಭುತ್ವಗಳು ತಮ್ಮ ರಾಜಕೀಯ ಎದುರಾಳಿಗಳನ್ನು ನಿವಾರಿಸಲು, ದೇಶದ್ರೋಹದ ಜತೆಗೆ ನಾಸ್ತಿಕತೆಯ ಆಪಾದನೆ ಹೊರಿಸುವುದುಂಟು.

ಈ ನಿದರ್ಶನಗಳಲ್ಲಿ, ಸಮುದಾಯದ್ರೋಹ ರಾಜದ್ರೋಹ ದೇಶದ್ರೋಹದ ಪರಿಕಲ್ಪನೆಗಳು, `ಸ್ಥಾಪಿತ ಪ್ರಭುತ್ವವನ್ನು ಬುಡಮೇಲು ಮಾಡಿ, ಅರಾಜಕತೆ ಹಿಂಸೆ ಮಾಡುವ ಸಂಚು’ ಎಂಬ ರಾಜಕೀಯ ಅರ್ಥವನ್ನು ಪಡೆದುಕೊಂಡಿವೆ. ಆದರೆ ಇವು ತಮ್ಮ ರಾಜಕಾರಣಕ್ಕಾಗಿ ಧರ್ಮ, ಸಂಸ್ಕøತಿ, ಪರಂಪರೆಗಳ ಆಸರೆ ಪಡೆದಿರುವುದು ಗಮನಾರ್ಹ. `ದ್ರೋಹ’ ಶಬ್ದಕ್ಕೆ ವಿಶ್ವಾಸವಿಟ್ಟವರಿಗೆ ವಂಚಿಸು, ನಿಷ್ಠೆ ಬದಲಿಸು, ಬಂಡಾಯವೇಳು ಎಂಬರ್ಥಗಳಿವೆ.  ಈ ಅರ್ಥದಲ್ಲಿ  ರಾಜದ್ರೋಹ ದೇಶದ್ರೋಹ ಧರ್ಮದ್ರೋಹ ಕುಟುಂಬದ್ರೋಹ ಪತಿದ್ರೋಹ ಇತ್ಯಾದಿಗಳು ಒಳಸಂಬಂಧವುಳ್ಳ ಪರಿಕಲ್ಪನೆಗಳೆ.  ಇಲ್ಲಿ ರಾಜ, ಪ್ರಭುತ್ವ, ಧರ್ಮ, ಗಂಡಾಳಿಕೆಯ ಕುಟುಂಬ ಮತ್ತು ದಾಂಪತ್ಯಗಳು ಪವಿತ್ರೀಕರಣಗೊಂಡಿವೆ. ಎಂತಲೇ ಜನದ್ರೋಹ ಸತಿದ್ರೋಹ ಮಾನವದ್ರೋಹ ಪರಿಸರದ್ರೋಹ ಎಂಬ ಪರಿಕಲ್ಪನೆಗಳು ಚಾಲ್ತಿಯಲ್ಲಿಲ್ಲ. ದೊರೆ, ಸರ್ಕಾರ, ದೇಶ, ಧರ್ಮ, ಸಂಸ್ಕøತಿಯಂತಹ ಅಧಿಕಾರಸ್ಥ ಸಂಸ್ಥೆಗಳನ್ನು ಪವಿತ್ರೀಕರಣ ಮತ್ತು ಧಾರ್ಮೀಕರಣ ಮಾಡಿದರೆ, ಅವನ್ನು ಪ್ರಶ್ನಿಸುವವರನ್ನು ದ್ರೋಹಿಗಳೆಂದು ಘೋಷಿಸುವುದು ಸುಲಭ. ರಾಜನ ಅಥವಾ ಅಧಿಕಾರಸ್ಥರ ದೈವೀಕರಣವು ಜಗತ್ತಿನ ಬಹುತೇಕ ಎಲ್ಲ ಸಮಾಜಗಳಲ್ಲೂ ಇದೆ. ರಾಜಪ್ರಭುತ್ವವುಳ್ಳ ಕೆಲವು ಇಸ್ಲಾಮಿಕ್ ದೇಶಗಳಲ್ಲಿ ಪ್ರವಾದಿ ಹಾಗೂ ಕುರಾನುಗಳ ಜತೆ ರಾಜನನ್ನು ಅಪಮಾನಿಸುವುದೂ ದೇಶದ್ರೋಹ.

ದಮನಕಾರಿ ನಡೆಗಳಿಂದ ಆಳಬಯಸುವ ಅಧಿಕಾರಸ್ಥ ರಚನೆಗಳು ನಿರಂಕುಶ ವರ್ತನೆಗೆ ಬೇಕಾಗಿ ಕಾನೂನು ರಚಿಸಿಕೊಂಡಿರುತ್ತವೆ. ಅವುಗಳ ಜಾರಿಗೆ ಪೋಲಿಸು, ನ್ಯಾಯಾಲಯ ಜೈಲುಗಳನ್ನು ಸೃಷ್ಟಿಸಿಕೊಂಡಿರುತ್ತವೆ. ಈ ಕಾನೂನುಜಾರಿ ಸಂಸ್ಥೆಗಳು ಪ್ರಭುತ್ವದ ಪರವಾದರೆ, ಭಿನ್ನಮತೀಯರರನ್ನು ದ್ರೋಹದ ಆಪಾದನೆಯಲ್ಲಿ ಶಿಕ್ಷಿಸುವುದು ಸಲೀಸು. ಕಾನೂನುಗಳು ಹಗ್ಗಗಳಂತೆ. ಅವು ಯಾವಾಗ ಪ್ರಜೆಗಳ ಕೈಕಾಲು ಕಟ್ಟುವ ಹಗ್ಗ ಇಲ್ಲವೇ ಕಚ್ಚುವ ಸರ್ಪ ಆಗುತ್ತವೆ. ಇದನ್ನು ಆಯಾ ಚಾರಿತ್ರಿಕ ಸಂದರ್ಭಗಳು ನಿರ್ಧರಿಸುತ್ತವೆ. ಪ್ರಭುತ್ವ ಬಿಕ್ಕಟ್ಟಿನಲ್ಲಿದ್ದಾಗ, ಸಣ್ಣ ಸಂಶಯವೂ ರಾಜದ್ರೋಹವಾಗಿ ಕಾಣುಬಹುದು. `ದ್ರೋಹ’ದ ವ್ಯಾಖ್ಯಾನವನ್ನು ಯಾರು ಯಾಕಾಗಿ ಮಾಡುತ್ತಾರೆ ಎಂಬುದರ ಮೇಲೆ, ಅಪರಾಧ ಮತ್ತು ಶಿಕ್ಷೆಯ ಸ್ವರೂಪ ನಿರ್ಧಾರವಾಗುತ್ತದೆ. ಸ್ವಾತಂತ್ರ್ಯ ಚಳುವಳಿಗಾರರನ್ನು ಬ್ರಿಟಿಶರು, ಇಂಗ್ಲೆಂಡಿನ ಚಕ್ರವರ್ತಿಯ ವಿರುದ್ಧ ಸಂಘಟಿತವಾದ ಹಿಂಸಾತ್ಮಕ ಯುದ್ಧ ಸಾರಿದವರು ಎಂದೇ ವ್ಯಾಖ್ಯಾನಿಸಿದರು;  ದಂಡಸಂಹಿತೆ 121ಎ ಅಡಿಯಲ್ಲಿ ಜೈಲಿಗಟ್ಟಿದರು.

ಕೆಲವೊಮ್ಮೆ ಪ್ರಭುತ್ವಗಳು ದೇಶದ್ರೋಹದ ಆಪಾದನೆ ಹೊರೆಸಲು ಬಲಿಪಶುಗಳನ್ನು ವಲಸೆಯ ಹಿನ್ನೆಲೆ, ಜಾತಿ, ಧರ್ಮ ಮತ್ತು ಜನಾಂಗ ಹಾಗೂ ನಂಬಿದ ಸಿದ್ಧಾಂತಗಳ ನೆಲೆಯಲ್ಲಿ ಹುಡುಕುತ್ತವೆ. ಬ್ರಿಟಿಶರು ಜಾಗತಿಕ ಮಹಾಯುದ್ಧಗಳಲ್ಲಿ ಜರ್ಮನ್ ಹಿನ್ನೆಲೆಯುಳ್ಳ ಸೈನಿಕರನ್ನು ಮತ್ತು ಅಧಿಕಾರಿಗಳನ್ನು ಸೇವೆಯಿಂದ ಹೊರಗಿಟ್ಟಿದ್ದರು. ಯಹೂದಿಗಳನ್ನು, ಜಿಪ್ಸಿಗಳನ್ನು, ಕಮ್ಯುನಿಸ್ಟರನ್ನು ರಾಷ್ಟ್ರನಿಷ್ಠರಲ್ಲ ಎಂದು ನಾಜಿಗಳು ಪ್ರಚಾರ ಮಾಡಿದರು; ಅವರನ್ನು ಶಿಕ್ಷಿಸಲು ಸಾಮಾಜಿಕ ಪರವಾನಗಿ ಉತ್ಪಾದಿಸಿದರು. ಟರ್ಕಿಯಲ್ಲಿ ಕುರ್ದಿಶ್ ಸಮುದಾಯದ ಬಗ್ಗೆ ಇಂಥವೇ ಅಭಿಪ್ರಾಯಗಳಿವೆ. ಅಲ್ಲಿ ಕುರ್ದಿಶ್ ಭಾಷೆಯನ್ನು ಆಡುವುದೂ ಅಪರಾಧ. ಕುರ್ದಿಶರ ಸ್ವಾಯತ್ತತೆಯ ಬೇಡಿಕೆಗೆ  ಬೆಂಬಲಿಸಿದ ನೊಬೆಲ್ ಪ್ರಶಸ್ತಿ ವಿಜೇತ ಲೇಖಕ ಒಲಾಫ್ ಪಾಮೆಯನ್ನು ದೇಶದ್ರೋಹಿಯೆಂಬಂತೆ ಬಿಂಬಿಸಲಾಯಿತು. ಚೀನಾ ವ್ಯೂಗರ್ ಮುಸ್ಲಿಮರ ಸಹಜ ರಾಜಕೀಯ ಆಶೋತ್ತರವನ್ನು ದಮನಿಸಿದೆ. ಸಾಮಾನ್ಯವಾಗಿ ವಲಸೆ ಹಿನ್ನೆಲೆಯುಳ್ಳ ಪ್ರಜೆಗಳ ದೇಶನಿಷ್ಠೆಯು ದುರಭಿಮಾನಿ ರಾಷ್ಟ್ರವಾದಗಳಿಂದ ಶಂಕೆಗೀಡಾಗುತ್ತದೆ. ಇದರಿಂದ, ತಮ್ಮ ರಾಜಕೀಯ ಹಕ್ಕುಗಳಿಗೆ ಹೋರಾಡಿದ ಶ್ರೀಲಂಕಾದ ತಮಿಳರನ್ನು ಹತ್ತಿಕ್ಕಲು ಶ್ರೀಲಂಕನ್ ರಾಷ್ಟ್ರವಾದಕ್ಕೆ ಸಾಧ್ಯವಾಯಿತು. ದೇಶವಿಭಜನೆಯ ನಂತರ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಉಳಿದ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ, ಬಾಂಗ್ಲಾ ಮೂಲದ ರೊಹಿಂಗ್ಯಾಗಳ ಕುರಿತು ಮ್ಯಾನ್ಮಾರಿನಲ್ಲೂ ಇಂತಹ ಶಂಕೆ ಮತ್ತು ಹಿಂಸೆಯನ್ನು ಉತ್ಪಾದಿಸಲಾಯಿತು. ಎಡಪಂಥೀಯ ಸಿದ್ಧಾಂತ ಹಿನ್ನೆಲೆಯ ರಾಜಕೀಯ ಚಿಂತಕರ ಬಗ್ಗೆಯೂ ಇಂತಹ ಗ್ರಹಿಕೆಯನ್ನು ಭಾರತದಲ್ಲಿ ಬಿತ್ತಲಾಗಿದೆ. ಹೀಗಾಗಿ ದೇಶದ್ರೋಹದ ಪರಿಕಲ್ಪನೆಯು ಕೇವಲ ಕಾನೂನಿನ ಪ್ರಶ್ನೆಯಾಗಿಲ್ಲ. ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕುವ, ಅಧಿಕಾರ ಮತ್ತು ಸಂಪತ್ತನ್ನು ನಿರ್ದಿಷ್ಟ ವರ್ಗಗಳು ಹಂಚಿಕೊಂಡು ಬದುಕಲು ನಿರಾಕರಿಸುವ ಆಶಯವನ್ನೂ ಒಳಗೊಂಡಿದೆ.

ರಾಜಕೀಯ ಚರಿತ್ರೆಯಲ್ಲಿ,  ದೊರೆಯನ್ನು ಕೆಳಗಿಳಿಸಲು ಅರಮನೆಗಳಲ್ಲಿ ನಡೆದ ಫಿತೂರಿ-ಹಿಂಸೆ-ಪ್ರತಿಹಿಂಸೆಗಳು ಎದೆ ನಡುಗಿಸುವಂತಿವೆ. ಇದಕ್ಕೆ ಮೊಗಲ್ ವಿಜಯನಗರ ಬಹಮನಿ ಆದಿಲಶಾಹಿ, ಟರ್ಕಿಯ ಒತ್ತೋಮನ್ ಗಡಿಗಳ ಮಿತಿಯೇ ಇದಕ್ಕಿಲ್ಲ. ತನ್ನ ಎಳೆಯ ಮಗನನ್ನು ಸಿಂಹಾಸನಕ್ಕೆ ಕೂರಿಸುವ ನಿರ್ಣಯಕ್ಕೆ ಸಮ್ಮತಿಸದ ಮಂತ್ರಿ ತಿಮ್ಮರಸನ ಕಣ್ಣುಗಳನ್ನು ಕೃಷ್ಣದೇವರಾಯ ಕೀಳಿಸುತ್ತಾನೆ; ತನ್ನ ಪಟ್ಟಕ್ಕೆ ಅಡ್ಡಬರಬಹುದೆಂದು ಸೋದರರನ್ನು ಔರಂಗಜೇಬ್ ಹತ್ಯೆ ಮಾಡಿಸುತ್ತಾನೆ. `ಮ್ಯಾಕ್ಬೆನತ್’ `ತುಘಲಕ್’ ನಾಟಕಗಳು ಇಂತಹ ರಾಜದ್ರೋಹದ ವಿದ್ಯಮಾನಗಳನ್ನೇ ವಸ್ತುವಾಗಿ ರಚನೆಯಾದವು. ಚೀನಾದ ಟ್ಯಾಂಗ್ ವಂಶದಲ್ಲಿ ತನ್ನ ಎದುರಾಳಿಗಳನ್ನು ಉಪಾಯವಾಗಿ ಕೊಂದು, ಮಲಮಗನನ್ನೇ ವರಿಸಿ, ರಾಣಿಯಾಗಿ ಆಳಿದ ವುಜೆಟೈನಳ ಕತೆ ರೋಚಕವಾಗಿದೆ. ಇತಿಹಾಸಕಾರರು ರಾಜರ ವಿರುದ್ಧವೆದ್ದ ಬಂಡಾಯ ಮತ್ತು ದಮನದ ವಿದ್ಯಮಾನಗಳನ್ನು ರಾಜಕೀಯ ನಿರ್ಲಿಪ್ತತೆಯಲ್ಲಿ ಮಂಡಿಸುತ್ತಾರೆ. ಆದರೆ ರಾಜವಂಶನಿಷ್ಠ ಅಥವಾ ಮತ ಧರ್ಮನಿಷ್ಠ ಚರಿತ್ರೆಕಾರರು, ತಮ್ಮ ಧರ್ಮದ/ನಾಡಿನ ದೊರೆಯ ವಿರುದ್ಧ ನಡೆವ ಬಂಡಾಯವನ್ನು ಧರ್ಮದ್ರೋಹ ದೇಶದ್ರೋಹ ಎಂಬಂತೆ ವ್ಯಾಖ್ಯಾನಿಸುತ್ತಾರೆ. ಈ ಪ್ರಭುತ್ವನಿಷ್ಠ ಧೋರಣೆಯು ರಾಜರನ್ನು ಕುರಿತ ಕನ್ನಡ ಸಿನಿಮಾಗಳಲ್ಲಿ ಢಾಳಾಗಿದೆ.

ಆದರೆ ಮಾನವತೆ ಪರವಾದ ಕಲಾಲೋಕವು ರಾಜದ್ರೋಹದ ಸಂಗತಿಗಳನ್ನು ಗ್ರಹಿಸಿರುವ ಮತ್ತು ಅಭಿವ್ಯಕ್ತಿಸಿರುವ ಪರಿಯು, ಮತಾಭಿಮಾನಿ ಪ್ರಾಂತ್ಯಾಭಿಮಾನಿ ಇತಿಹಾಸಕಾರರಿಗಿಂತ ಭಿನ್ನವಾಗಿದೆ. ಅದು ಬಲಿಷ್ಠವೂ ಕ್ರೂರವೂ ಜನವಿರೋಧಿಯೂ ಆಗಿರುವ ಪ್ರಭುತ್ವ ವಿರುದ್ಧವೆದ್ದ ಭಿನ್ನಮತ-ದಂಗೆಗಳನ್ನು ಸ್ವಾತಂತ್ರ್ಯ ಹೋರಾಟ ಎಂದು ಪರಿಭಾವಿಸುತ್ತದೆ. ಬಂಡುಕೋರರನ್ನು ನಾಯಕರಾಗಿ ಬಣ್ಣಿಸುತ್ತದೆ. ಅದಕ್ಕೆ ನಾಯಕ ಔರಂಗಜೇಬನಲ್ಲ, ರಾಜದ್ರೋಹದ ಆಪಾದನೆ ಮೇಲೆ ಕೊಲೆಯಾದ ದಾರಾ; ಅಥೆನ್ಸಿನ ಗಣರಾಜ್ಯಾಧಿಪತಿಯಲ್ಲ. ಅವನ ಫಿತೂರಿಗೆ ಬಲಿಯಾದ ಸಾಕ್ರೆಟಿಸ್; ರೋಮಿನ ಚಕ್ರವರ್ತಿಯಲ್ಲ, ಏಸು; ಬಿಜ್ಜಳನಲ್ಲ, ಬಸವಣ್ಣ. ಶರಣರ ಚಳುವಳಿ ಕುರಿತು ಬಂದಿರುವ `ತಲೆದಂಡ’ `ಸಂಕ್ರಾಂತಿ’ `ಮಹಾಚೈತ್ರ’ ನಾಟಕಗಳು ಒಂದು ಹೆಜ್ಜೆ ಮುನ್ನಡೆದು, ಬಸವಣ್ಣನಿಗೆ ಭಿನ್ನಮತ ತೋರುವ ಸಾಮಾನ್ಯರನ್ನೂ ನಾಯಕರಾಗಿಸಿದವು. ಜನಪದ ಕವಿಗಳು ಬಲಾಢ್ಯ ಶಕ್ತಿಯ ವಿರುದ್ಧ ಹೋರಾಡಿ ಹುತಾತ್ಮರಾದ ಚೆನ್ನಮ್ಮ, ಟಿಪ್ಪು, ವೆಂಕಟಪ್ಪ ನಾಯಕ, ಸರ್ಜಾ ಹನುಮಪ್ಪ ನಾಯಕ ಮುಂತಾದವರ ಪರವಾಗಿಯೇ ಲಾವಣಿ ಕಟ್ಟಿದರು. ಶತ್ರುಪಕ್ಷಕ್ಕೆ  ನೆರವಾದ ಮಲ್ಲಪ್ಪಶೆಟ್ಟಿ, ಮೀರಸಾದಿಕ್, ಪೂರ್ಣಯ್ಯರನ್ನು ದ್ರೋಹಿಗಳೆಂದು ಕಾಣಿಸಿದರು.

 ತನ್ನ ಸ್ಥಾನಪಲ್ಲಟಕ್ಕೆ ಯತ್ನಿಸಿದ ತಂಗಿಗೆ ಚಿಕವೀರರಾಜೇಂದ್ರ ವಿಧಿಸುವ ಶಿಕ್ಷೆಯೆಂದರೆ, ಅವಳ ಎಳೆಗೂಸನ್ನು ಮಲಗಿರುವಾಗ ತೊಟ್ಟಿಲಲ್ಲೇ ಕೊಲ್ಲುವುದು. ಪ್ರಭುತ್ವಗಳು ದಂಗೆಯೆದ್ದ ಬಂಡುಕೋರರನ್ನು ಶಿಕ್ಷಿಸುವ ಮುನ್ನ ಅವರ ವ್ಯಕ್ತಿತ್ವವನ್ನು ದುರುಳೀಕರಿಸುತ್ತವೆ. ರಾಜಕೀಯ ವಿರೋಧವನ್ನು ಧಾರ್ಮಿಕ ಅಪರಾಧವಾಗಿಸುತ್ತವೆ. ವಿಚಾರಣೆ, ಸೆರೆಮನೆ, ಗಡಿಪಾರು, ತಲೆದಂಡಗಳನ್ನು ಹತ್ಯಾರವಾಗಿ ಬಳಸುತ್ತವೆ. ಪ್ರತಿಯಾಗಿ ಬಂಡುಕೋರರೂ ಭೂಗತರಾಗುವ, ದೇಶಬಿಟ್ಟು ಹೋಗುವ, ಮಾರುವೇಷದಲ್ಲಿದ್ದು ಜನಾಭಿಪ್ರಾಯ ರೂಪಿಸುವ ಕೆಲಸ ಮಾಡುತ್ತಾರೆ- ನಿರಂಜನರು ಚಿತ್ರಿಸುವ `ಸ್ವಾಮಿ ಅಪರಂಪಾರ’ ಮತ್ತು `ಕಲ್ಯಾಣಸ್ವಾಮಿ’ ಅವರಂತೆ. ಇವರು ಪ್ರಭುತ್ವಕ್ಕೆ ತಟ್ಟನೆ ಅರಿವಾಗದ ಆದರೆ ಜನರಿಗೆ ತಿಳಿವ ಸಾಂಕೇತಿಕ ಭಾಷೆಯನ್ನು ಹುಟ್ಟಿಸಿಕೊಳ್ಳುತ್ತಾರೆ. ನೇರವಾಗಿ ಎದುರಾಗುವ ಪ್ರತಿರೋಧಕ್ಕಿಂತ ಗುಪ್ತರೂಪೀ ಪ್ರತಿರೋಧಗಳ ಬಗ್ಗೆ ಪ್ರಭುತ್ವಗಳಿಗೆ ಬಹಳ ಆತಂಕ. ದಾರಾಶುಕೊವಿನ ಗುರುವಾಗಿದ್ದ ಸೂಫಿ ಸರ್ಮದನನ್ನು ರಾಜದ್ರೋಹದ ಮೇಲೆ ಕೊಲ್ಲುವಾಗ ಔರಂಗಜೇಬನಿಗೆ ಅಂಜಿಕೆಯಾಗಿದ್ದು ಸಂತನ ಜನಪ್ರಿಯತೆ ಮತ್ತು ಆತನ ಸಾಂಕೇತಿಕವಾದ ಹುಚ್ಚುವರ್ತನೆಗಳು. ಸ್ವಾತಂತ್ರ್ಯ ಚಳುವಳಿಯಲ್ಲಿ ರಾಕ್ಷಸರನ್ನು ವಧಿಸುವ ವಸ್ತುವುಳ್ಳ ಸಿನಿಮಾ ಮತ್ತು ನಾಟಕಗಳು ಬ್ರಿಟಿಶ್ ಸರ್ಕಾರದ ವಿರುದ್ಧ ಆಕ್ರೋಶ ಹುಟ್ಟಿಸುವ ಗುಪ್ತಭಾಷೆಯನ್ನು ಕಂಡುಕೊಂಡಿದ್ದವು. ಬ್ರಿಟಿಶರು ರಾಕ್ಷಸವಧೆಯ ವಸ್ತುವುಳ್ಳ ಅನೇಕ ಪೌರಾಣಿಕ ಸಿನಿಮಾ-ನಾಟಕಗಳ ಮೇಲೆ ಪಹರೆ ಇಟ್ಟಿದ್ದರು. ಕೆಲವನ್ನು ನಿಷೇಧಿಸಿದರು ಕೂಡ.

ಕನ್ನಡದಲ್ಲಿ ರಾಜದ್ರೋಹದ ಆಪಾದನೆಗೊಳಗಾಗಿ ಸೆರೆವಾಸ ಅನುಭವಿಸಿದ ಲೇಖಕರಲ್ಲಿ ಬೇಂದ್ರೆ ಒಬ್ಬರು. ಅವರ `ನರಬಲಿ’ ಕವನವು (1933), ಬ್ರಿಟಿಶರು `ದುಃಶಾಸನ ಪಾಶ’ `ದುರೋಧನಾಂಕುಶ’ದಿಂದ ದೇಶವನ್ನು ಹಿಡಿದಿಟ್ಟಿದ್ದಾರೆಂದು ಚಿತ್ರಿಸುತ್ತದೆ. ಕಾಳಿಯಪೂಜೆಯನ್ನೂ ದೇಶದ ಸ್ವಾತಂತ್ರ್ಯದ ಹೋರಾಟವನ್ನೂ ಏಕೀಕರಿಸುತ್ತದೆ. `ಬಲಗಾಲಲಿ ಬಿಡುಗಡೆಯನು ಮೆಟ್ಟಿ ನಿಂತಿ’ರುವ ಕಾಳಿಯ `ಬಲಗಾಲ್ ಬುಡದಿಂ ಬಿಡಿಸಲು ನರಬಲಿಯೇ ಬೇಕು’ ಎನ್ನುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಪೌರತ್ವ ಕಾಯಿದೆಯನ್ನು ಪ್ರಶ್ನಿಸಿ ಬೀದರಿನ ಶಾಲಾಮಕ್ಕಳು ಮಾಡಿದ ನಾಟಕದ ವಿರುದ್ಧ ದೇಶದ್ರೋಹದ ಕಾಯಿದೆಯಡಿ ಮೊಕದ್ದಮೆ ಹೂಡಿದ್ದನ್ನು ಇಲ್ಲಿ ನೆನೆಯಬಹುದು. ಕಲೆ ಬಳಸುವ ಗುಪ್ತಭಾಷೆಗೆ ಒರೊಮಾ ಬುಡಕಟ್ಟಿನ ಸ್ವಾತಂತ್ರ್ರ್ಯಕ್ಕಾಗಿ ದನಿಯೆತ್ತಿದ ಇಥಿಯೋಪಿಯಾದ ಜನಪ್ರಿಯ ಹಾಡುಗಾರ ಒಚಲು ಅಪೂರ್ವ ನಿದರ್ಶನ. ಆತ “ನಾನೊಬ್ಬ ಕೇವಲ ಹಾಡುಗಾರ. ರಾಜಕಾರಣಿಯಲ್ಲ. ನನ್ನ ಜನರ ಆಶೋತ್ತರಗಳನ್ನು ಹಾಡುವೆ. ಅವರ ಮತ್ತು ಅವರ ಭಾಷೆಯ ಸ್ವಾತಂತ್ರ್ಯ ಮತ್ತು ಘನತೆಗಾಗಿ ಹಾಡುವೆ’ ಎಂದು ಸಾರಿದ. ಆದರೆ ಅವನ ಕಲೆಯು ದಮನಿತರ ಪರವಾದ ರಾಜಕೀಯವೇ ಆಗಿತ್ತು. ಪ್ರಭುತ್ವವು ಅವನನ್ನು ಅಪಾಯಕಾರಿ ಎಂದು ಪರಿಭಾವಿಸಿತು; ರಾಜದ್ರೋಹದ ಕಾನೂನು ಬಳಸದೆಯೇ  ಫಿತೂರಿಯಿಂದ (2020) ಗುಂಡಿಕ್ಕಿತು.

ಝಾರ್ ಗಳ ವಿರುದ್ಧದ ಬಂಡಾಯದಲ್ಲಿ ಕಷ್ಟ ಅನುಭವಿಸಿದವರಲ್ಲಿ ರಶ್ಯನ್ ಲೇಖಕರು ಮುಖ್ಯರು. ಮರಣದಂಡನೆಗೆ ಗುರಿಯಾಗಿ ಕೊನೆಯ ಗಳಿಗೆಯಲ್ಲಿ ತಪ್ಪಿಸಿಕೊಂಡ ದಾಸ್ತೊವಸ್ಕಿ, ಆ ಹಿಂಸಾತ್ಮಕ ಅನುಭವವನ್ನೇ ಬಳಸಿ `ಕ್ರೈಂ ಅಂಡ್ ಪನಿಶ್ಮೆಂಷ್ಟ್ ’ ರಚಿಸಿದ. ತನ್ನ ಕಾಲದ ಜನದ್ರೋಹಿ ಸರ್ಕಾರಗಳ ವಿರುದ್ಧ ಬರೆದ ಕೀನ್ಯಾದ ಲೇಖಕ ಗೂಗಿಯವರನ್ನು ರಾಜದ್ರೋಹದ ಆಪಾದನೆ ಹೊರೆಸಿ ಜೈಲಲ್ಲಿರಿಸಲಾಯಿತು. ಕೊಲೆಯಿಂದ ತಪ್ಪಿಸಿಕೊಳ್ಳಲು ಗೂಗಿ ಸ್ವಯಂ ದೇಶಭ್ರಷ್ಟರಾದರು-ಗೌತಮನಂತೆ. ಬಂಧನಕಾರಿಯಾದ ಕುಟುಂಬ-ಮದುವೆ-ಸಂಸಾರದ ಚೌಕಟ್ಟಿನಿಂದ ಹೆಣ್ಣು ಮನೆಬಿಟ್ಟು ಹೋಗುವುದು, ಅಂಬೇಡ್ಕರ್ ತರಹದವರು ಧರ್ಮ ಬಿಟ್ಟುಹೋಗುವುದು, ಲೇಖಕರು ಚಳುವಳಿಗಾರರು ದೇಶಬಿಟ್ಟು ಹೋಗುವುದು ಎಲ್ಲವೂ, ಪವಿತ್ರೀಕರಿಸಿದ ಅಧಿಕಾರಸ್ಥ ಸಂಸ್ಥೆಗಳ ವಿರುದ್ಧ ನಡೆದ ವಿದ್ರೋಹದ ವಿವಿಧ ರೂಪಗಳೇ. ಒಂದೇ ಕ್ರಿಯೆಯು ಅಧಿಕಾರಸ್ಥರಿಗೆ ರಾಜದ್ರೋಹವೆನಿಸಿದರೆ, ಅಧಿಕಾರವಿಲ್ಲದವರಿಗೆ ಬಿಡುಗಡೆಯ ಹಾದಿಯಾಗುತ್ತದೆ.

ರಾಜದ್ರೋಹದ ಆಪಾದನೆ, ಬಂಧನ, ವಿಚಾರಣೆ, ಶಿಕ್ಷೆ ಮತ್ತು ಬಿಡುಗಡೆಯ ಹಲವು ಚಾರಿತ್ರಿಕ ವ್ಯಂಗ್ಯಗಳಿವೆ. ಅವೆಂದರೆ-  ಸ್ಥಾಪಿತ ಸಾಮಾಜಿಕ ರಾಜಕೀಯ ಧಾರ್ಮಿಕ ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದು ಹುಟ್ಟಿದ ಧರ್ಮಗಳು, ಮುಂದೆ ಸಾಂಸ್ಥಿಕಗೊಂಡು ಮತ್ತು ಸಂಕುಚಿತಗೊಂಡು, ತಮ್ಮನ್ನು ಪ್ರಶ್ನಿಸಿದವರನ್ನು ಧರ್ಮದ್ರೋಹಿಗಳೆಂದು ಶಿಕ್ಷಿಸುವುದು; ಸಾಮಾನ್ಯ ಬಂಡುಕೋರರು (ಉದಾ: ಕನ್ಹಯ್ಯ ಕುಮಾರ್) ದೇಶದ್ರೋಹದ ಶಿಕ್ಷೆಯಿಂದ ಜನಪ್ರಿಯ ನಾಯಕರಾಗಿ ಹೊಮ್ಮುವುದು; ಒಂದೇ ಕಾಯಿದೆಯ ಅಡಿಯಲ್ಲಿ ಪರಸ್ಪರ ವಿರುದ್ಧವಾದ ಸಿದ್ಧಾಂತ ಮತ್ತು ರಾಜಕೀಯ ಚಿಂತನೆಯುಳ್ಳವರು ಏಕಕಾಲಕ್ಕೆ ಶಿಕ್ಷೆಗೆ ಒಳಗಾಗುವುದು. (ಐಪಿಸಿ 121ಎ ಕಾಯ್ದೆಯಡಿ ಗಾಂಧಿ ತಿಲಕ್ ಸಾವರ್ಕರ್ ಸೆರೆಯಾಗಿದ್ದರು); ಒಮ್ಮೆ ರಾಜದ್ರೋಹಿ ಎನಿಸಿಕೊಂಡವರು ಮುಂದೆ ಅದೇ ಪ್ರಭುತ್ವದ ಬೆಂಬಲಿಗರಾಗಿ ಮಾರ್ಪಡುವುದು (ಸಾವರ್ಕರ್); ರಾಜದ್ರೋಹದ ಕಾಯಿದೆಯಡಿ ಬಂಧಿತರಾಗಿ ನರಳಿದವರೇ ಅಧಿಕಾರ ಸಿಕ್ಕಾಗ ಸರ್ವಾಧಿಕಾರಿಯಾಗುವುದು ಮತ್ತು ರಾಜದ್ರೋಹದ ಅಡಿಯಲ್ಲಿ ರಾಜಕೀಯ ಸೈದ್ಧಾಂತಿಕ ಭಿನ್ನಮತವುಳ್ಳವರನ್ನು ಬಂಧಿಸುವುದು; ದೇಶದ ರಹಸ್ಯವನ್ನು ವಿದೇಶಗಳಿಗೆ ರವಾನಿಸುವುದನ್ನು ರಾಜದ್ರೋಹ ಎನ್ನುವ ಪ್ರಭುತ್ವಗಳು, ಇದೇ ಕೆಲಸವನ್ನು ನೆರೆದೇಶದ ಪ್ರಜೆ ತಮಗಾಗಿ ಮಾಡಿದರೆ ಉಪಕಾರವೆಂದು ಭಾವಿಸುವುದು; ವ್ಯಕ್ತಿ ಅಧಿಕಾರದಲ್ಲಿದ್ದಾಗ ಹೊಗಳಿದವರೇ ಆತ ಅಧಿಕಾರದಿಂದಿಳಿದ ಬಳಿಕ ದೇಶದ್ರೋಹದ ಆಪಾದನೆ ಮಾಡಿ ಹತ್ಯೆ ಮಾಡುವುದು; ರಾಜಶಾಹಿ, ಧಾರ್ಮಿಕಶಾಹಿ ಅಥವಾ ಮಿಲಿಟರಿ ಸರ್ವಾಧಿಕಾರಿಗಳಿರುವ ದೇಶಗಳಿಗಿಂತ, ಪ್ರಜಾಪ್ರಭುತ್ವ ಇರುವ ದೇಶಗಳು, ಭಿನ್ನಮತ ದಮನಕ್ಕಾಗಿ ದೇಶದ್ರೋಹದ ಕಾಯಿದೆಯನ್ನು ದುರುಪಯೋಗ ಮಾಡುವುದು-ಇತ್ಯಾದಿ.

ಪ್ರಶ್ನೆಯೆಂದರೆ, ಸ್ವತಃ ಪ್ರಭುತ್ವಗಳೇ ಅಪರಾಧ ಮತ್ತು ಅನ್ಯಾಯಗಳ ಮೇಲೆ ನಿಂತಿದ್ದಾಗ, ಅವುಗಳ ವಿರುದ್ಧ ದನಿಯೆತ್ತುವುದು ದೇಶದ್ರೋಹ ಹೇಗಾಗುತ್ತದೆ? ಸಂವಿಧಾನದ ವಿರುದ್ಧ ವರ್ತನೆ ಎನ್ನುವುದೇ ದೇಶದ್ರೋಹ ಆಗುವುದಾದರೆ ಅಧಿಕಾರದಲ್ಲಿದ್ದು ದೇಶದ ಆರ್ಥಿಕತೆಯನ್ನೇ ತನ್ನ ಕೆಟ್ಟನೀತಿಗಳಿಂದ ಹಾಳುಗೆಡುಹುವ ಪ್ರಭುತ್ವವು ಸ್ವತಃ ದೇಶದ್ರೋಹಿ ಅಲ್ಲವೇ? ಪ್ರಜಾಪ್ರಭುತ್ವದ ಹಾದಿಯಲ್ಲಿ ಆಯ್ಕೆಯಾದ ಸರ್ಕಾರವನ್ನು ಹಿಂಸಾತ್ಮಕ ವಿಧಾನದಿಂದ ಉರುಳಿಸಲು ಯತ್ನಿಸುವುದು ದೇಶದ್ರೋಹವಾದರೆ, ಶಾಸಕರ ಖರೀದಾರಿ ಮಾಡಿ ಸರ್ಕಾರ ಬೀಳಿಸುವುದು, ಜನತೆಯ ತೆರಿಗೆಯ ಹಣವನ್ನು ಬಂಡವಾಳಶಾಹಿಗಳ ಅನುಕೂಲಕ್ಕೆ  ವಿನಿಯೋಗಿಸುವುದು, ಪ್ರಜೆಗಳಲ್ಲಿ ಧರ್ಮದ ಹೆಸರಲ್ಲಿ ದ್ವೇಷ ಬಿತ್ತುವುದು ದೇಶದ್ರೋಹವಲ್ಲವೇ? ಒಬ್ಬ ವ್ಯಕ್ತಿಯ, ಒಂದು ಸಂಘಟನೆಯ ಅಥವಾ ಸಮುದಾಯದ ಬೇಡಿಕೆ ಮಾತು ಬರೆಹ ಹಾಡು ಚಳುವಳಿಗಳು, ನ್ಯಾಯಬದ್ಧ ಹಕ್ಕಿನ ಪ್ರಶ್ನೆಗಳನ್ನು ಒಳಗೊಂಡಿದ್ದಾಗ; ಅವು ಸಕಾರಣವಾಗಿ ಕೆಟ್ಟ ಪ್ರಭುತ್ವವನ್ನು ವಿಮರ್ಶಿಸುವುದು ಅಥವಾ ಪ್ರತಿರೋಧಿಸುವುದು ದೇಶದ್ರೋಹ ಹೇಗಾಗುತ್ತದೆ? ಅವನ್ನು ಹೆಚ್ಚೆಂದರೆ ಪ್ರಭು ಅಥವಾ ಪ್ರಭುತ್ವದ ವಿರೋಧ ವಿಮರ್ಶೆ ಎನ್ನಬಹುದು. ಅವು ಪರೋಕ್ಷವಾಗಿ ದೇಶಪ್ರೇಮವೂ ಆಗಿರುತ್ತವೆ. ಚರಿತ್ರೆಯಲ್ಲಿ ದೇಶದ್ರೋಹದ ಆಪಾದನೆಗೊಳಗಾದ ಬಹುತೇಕರು ಪ್ರಭುತ್ವದ ವಿಮರ್ಶಕರಾಗಿದ್ದವರು. ವಿಭೀಷಣ, ವಿದುರ ಮುಂತಾದವರು ನ್ಯಾಯಪ್ರಜ್ಞೆಯ ಪ್ರತೀಕವಾಗಿದ್ದು ಹೀಗೆ. ಸಾಕ್ರೆಟಿಸ್ ಎತ್ತಿದ ಪ್ರಶ್ನೆಗಳು ಅಥೆನ್ಸಿನ ಜನರಲ್ಲಿ ವಿಚಾರ ಮಾಡುವ ಮತ್ತು ಪ್ರಭುತ್ವಕ್ಕೆ ಪ್ರಶ್ನೆ ಕೇಳುವ ಉದ್ದೇಶವುಳ್ಳವಾಗಿದ್ದವು. ಅರ್ಥಪೂರ್ಣ ಭಿನ್ನಮತ, ವಿಮರ್ಶೆ, ಪ್ರತಿರೋಧ, ಪ್ರತಿಭಟನೆಗಳು ಪ್ರಭುತ್ವವು ಜನಪರವಾಗಬೇಕೆಂದೂ, ಸಮಾಜವು ಮುಕ್ತತೆಯನ್ನು ಹೊಂದಿರಬೇಕೆಂದೂ, ದಮನಿತರ ಹಕ್ಕು ನ್ಯಾಯ ಸಿಗಬೇಕೆಂದೂ ನಡೆಸುವ ಬದಲಾವಣೆಯ ರಾಜಕೀಯ ಒತ್ತಾಸೆಯಾಗಿರುತ್ತವೆ. ಹೀಗಾಗಿ ಅವನ್ನು ಕಾನೂನು ಮತ್ತು ಕೋರ್ಟುಗಳು ದೇಶದ್ರೋಹವೆಂದು ಹೇಗೆ ತೀರ್ಮಾನಿಸುತ್ತವೆ?

ದೇಶದ್ರೋಹದ ಕಾನೂನಿನ ಅಡಿಯಲ್ಲಿ ಹೆಚ್ಚು ಆಪಾದನೆಗೆ ಒಳಗಾದವರು ಮತ್ತು ಬಂಧಿತರಾದವರು ರಾಜಕೀಯ ಚಳುವಳಿಗಾರರು ಮಾತ್ರವಲ್ಲ, ಲೇಖಕರು ಮತ್ತು ಮಾಧ್ಯಮದವರು ಕೂಡ. ವ್ಯಂಗ್ಯವೆಂದರೆ, ಕೊಡಲಿಯ ಕಾವು ಕುಲಕ್ಕೆ ಮೃತ್ಯು ಎಂಬಂತೆ ಇವರನ್ನು ದೇಶದ್ರೋಹದ ಕಾಯಿದೆಯಡಿಯಲ್ಲಿ ಬಂಧಿಸಲು ಮಾಧ್ಯಮಗಳೇ ನೆರವಾಗುವುದು. ಪ್ರಭುತ್ವವನ್ನು ನಿಯಂತ್ರಿಸುವ ಶಕ್ತಿ ಪಡೆದಿರುವ ದೊಡ್ಡ ಬಂಡವಾಳದಾರರಿಂದ ಮತ್ತು ಸರ್ಕಾರದಿಂದ ಖರೀದಿಗೊಂಡ ಮಾಧ್ಯಮಗಳಿವು. ಇವು ದೊರೆಸ್ವಾಮಿಯವರಂತಹ ಸ್ವಾತಂತ್ರ್ಯ ಹೋರಾಟಗಾರನನ್ನೂ; ತಾವು ಬೆಳೆದ ಬೆಳೆಗೆ ನ್ಯಾಯಬದ್ಧ ಬೆಲೆ ಸಿಗಬೇಕೆಂದು ಚಳುವಳಿ ಮಾಡಿದ ರೈತರನ್ನೂ ದೇಶದ್ರೋಹಿ ಎಂದು ಕರೆದವು. ತಿಲಕ್ ಮತ್ತು ಗಾಂಧಿ ಬ್ರಿಟಿಶರ ರಾಜದ್ರೋಹದ ಕಾಯ್ದೆಯಡಿ ಬಂಧನಕ್ಕೆ ಒಳಗಾಗಿದ್ದು ತಮ್ಮ `ಕೇಸರಿ’ ಮತ್ತು `ಯಂಗ್ ಇಂಡಿಯಾ’ದಲ್ಲಿ ಪ್ರಕಟಿಸಿದ ಲೇಖನಗಳಿಂದ ಎನ್ನುವುದನ್ನು ಅವು ಮರೆತಿವೆ. ರಾಜಕೀಯ ಸೈದ್ಧಾಂತಿಕ ಭಿನ್ನಮತವುಳ್ಳವರನ್ನು `ದೇಶವಿರೋಧಿಗಳು’ ಎಂದು ಕರೆದು ಪ್ರಭುತ್ವವು ಕರೆಯುತ್ತಿದ್ದ ಚಾರಿತ್ರಿಕ ಸನ್ನಿವೇಶದಲ್ಲಿ, ಕಾರ್ನಾಡರು `ನಾನೂ ನಗರ ನಕ್ಸಲ್’ ಎಂಬ ಕೊರಳಫಲಕ ಹಾಕಿಕೊಂಡು ಪ್ರತಿರೋಧ ಮಾಡಿದ್ದು ನೆನಪಾಗುತ್ತಿದೆ. ಇದು  ಏಸುವಿನ ಕೊರಳಿಗೆ ತೊಡಿಸಲಾದ ಕೊರಳ ಫಲಕವನ್ನೇ ನೆನಪಿಸುವಂತಿದೆ.

ರಾಜದ್ರೋಹದ ಕಾಯಿದೆ ದುರುಪಯೋಗಿಸಿಕೊಂಡ ಪ್ರಭುತ್ವಗಳು ಜನರಿಂದ ಶಿಕ್ಷೆಗೆ ಒಳಗಾಗಿದ್ದುಂಟು; ರಾಜದ್ರೋಹದ ಕಾಯಿದೆಗಳಿಂದ ಶಿಕ್ಷೆಗೊಳಗಾದವರು ಹೊಸ ಚೈತನ್ಯವಾಗಿ ಸಮುದಾಯಗಳ ಬದುಕಿನಲ್ಲಿ ಸೇರಿಹೋಗುವುದುಂಟು. ಆದರೆ ಎಲ್ಲ ಕಾಲದಲ್ಲೂ ಇದು ಸಾಧ್ಯವಾಗುವುದಿಲ್ಲ. ಪ್ರಭುತ್ವ ಮತ್ತು ಬಂಡುಕೋರರ ಮುಖಾಮುಖಿಯ ಪ್ರಶ್ನೆ ಬಂದಾಗ ಬಹುಸಂಖ್ಯಾತ ಜನ ಯಾರ ಜತೆಗಿರುತ್ತಾರೆ ಎನ್ನುವುದು ನಿರ್ಣಾಯಕ ಸಂಗತಿ. ನಾಗರಿಕ ಸಮಾಜವು ಕೆಟ್ಟಪ್ರಭುತ್ವದ ಬಗ್ಗೆ ವಿಮರ್ಶಾತ್ಮಕವಾಗಿದ್ದರೆ, ದೇಶದ್ರೋಹಿ ಎನಿಸಿಕೊಂಡವರು ದೇಶಪ್ರೇಮಿಗಳಾಗಿ ತೋರುವರು; ಅದು ಪ್ರಭುತ್ವದ ಕೃತ್ಯಗಳಿಗೆ ಬೆಂಬಲಿಸಿದರೆ, ದೇಶಪ್ರೇಮಿಗಳು ಬಂಧನ ಮತ್ತು ಮರಣಗಳಲ್ಲಿ ನುಗ್ಗಾಗುವರು.

…..

ಡಾ.ರಹಮತ್ ತರೀಕೆರೆ.

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

3 thoughts on “

  1. ವರ್ತಮಾನದ ಕಣ್ಣು ತೆರೆಸುವ ಬರಹ.‌ಕನ್ನಡ ನಾಡಿನ ವೈಚಾರಿಕ ಬರದ ಈ ಕಾಲದಲ್ಲಿ ರಹಮತ್ ಸರ್ …ಅಧಿಕಾರ ಶಾಹಿ ವ್ಯವಸ್ಥೆಗೆ ಚುಚ್ಚುಮದ್ದು ನೀಡುವಂತೆ ಬರೆದಿದ್ದಾರೆ …

  2. ತಾಲಿಬಾನ್ ನವರ ನಡೆಯ ಬಗ್ಗೆ ಏಕೆ ಬರೆದಿಲ್ಲ. ವಿಶ್ವಕ್ಕೇ ಕಂಟಕ ಅವರು.. ರೈತರ ಚಳವಳಿ ರಾಜಕೀಯ ಪ್ರೇರಿತ
    .

  3. ಪೂರ್ಣಯ್ಯ ನವರನ್ನು ದೇಶದ್ರೋಹಿ ಅಂತ ನಿಮ್ಮ ಬರಹದಲ್ಲಿ ಮಾತ್ರ ಓದಿದ್ದು. ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವೇ ಇದೆಯಲ್ಲ..

Leave a Reply

Back To Top