ಬಾಪು ಖಾಡೆ ಅವರ ಕವಿತೆ,ʼಬಾಲ್ಯ ಮಿತ್ರರುʼ

ಬಾಳ ಪಯಣದಿ ಬಾಲ್ಯ ಮಿತ್ರರು
ಬಿಡಿಸಲಾಗದ ಬಂಧವು
ಕೂಡಿ ಕಳೆದು ಆಡಿ ನಲಿದ
ಆ ದಿನಗಳೇ ಚೆಂದವು

ತುಂಟ ಮಕ್ಕಳ ಹರಟೆ ಕೀಟಲೆ
ಕೋಪ ತರಿಸಿತು ಗುರುವಿಗೆ
ಬೆತ್ತದೇಟಿನ ಬುದ್ದಿಮಾತು
ಚುರುಕು ಮುಟ್ಟಿತು ಓದಿಗೆ

ರಜೆಯು ಎಂಬುದು ಸಜೆಯು ಆಗದೆ
ಸುತ್ತಿ ಗೆಳೆಯರ ತೋಟವು
ಚೆಂಡು ಬುಗುರಿ ಗೋಲಿ ಲಗೋರಿ
ಎಂಥ ಮೋಜಿನ ಆಟವು

ಸೈಕಲ್ ತುಳಿಯುತ ಪೇಟೆ ಸುತ್ತಿ
ಸಿನಿಮಾ ನೋಡಿದ ಗೆಳೆಯರು
ಊರ ಮುಂದಿನ ಬಾವಿ ಕೆರೆಯಲಿ
ಜೊತೆಗೂಡಿ ಈಜಿದ ಹುಡುಗರು


One thought on “ಬಾಪು ಖಾಡೆ ಅವರ ಕವಿತೆ,ʼಬಾಲ್ಯ ಮಿತ್ರರುʼ

Leave a Reply

Back To Top