ಲೇಖನ
ಮಾತಾಗುವ ಮೌನ
ಮತ್ತು
ಮೌನದೊಳಗಣ ಮಾತು
ವಿಶ್ವನಾಥ ಎನ್ ನೇರಳಕಟ್ಟೆ
ಅದೊಂದು ಸಭೆ. ಪ್ರಮುಖ ನಿರ್ಣಯವೊಂದನ್ನು ಕೈಗೊಳ್ಳುವುದಕ್ಕಾಗಿ ಪದಾಧಿಕಾರಿಗಳು, ಸದಸ್ಯರೆಲ್ಲಾ ಅಲ್ಲಿ ಸೇರಿದ್ದರು. ಒಮ್ಮತ ಮೂಡದಿರುವ ವಿಷಯವನ್ನು ಚರ್ಚೆಗಿಟ್ಟು, ತೀರ್ಮಾನ ತೆಗೆದುಕೊಳ್ಳುವುದಾದರೂ ಹೇಗಪ್ಪಾ? ಏನೆಲ್ಲಾ ಮಾತು ಕೇಳಬೇಕಾದೀತು ಎನ್ನುವ ಚಿಂತೆ ವೇದಿಕೆ ಮೇಲಿದ್ದವರಿಗೆ. ಚರ್ಚಿಸಬೇಕಾದ ವಿಚಾರವನ್ನು ಪ್ರಸ್ತಾಪಿಸಿದ ಅವರು ಅಲ್ಲಿದ್ದವರ ಅನಿಸಿಕೆಗಾಗಿ ಸಮಯ ಮೀಸಲಿಟ್ಟರು. ಯಾರೋ ಎದ್ದುನಿಂತು ವೇದಿಕೆ ಮೇಲಿದ್ದವರ ಮಾತನ್ನು ವಿರೋಧಿಸಿದರು. ಇನ್ನ್ಯಾರೋ ‘ಸರಿ’ ಎಂದರು. ‘ಪೂರ್ವಗ್ರಹಪೀಡಿತವಾಗಿ ಮಾತನಾಡಬೇಡಿ’ ಮೆತ್ತನೆಯ ಸ್ವರದಲ್ಲಿ ನುಡಿದರು ಯಾರೋ ಒಬ್ಬರು. ಆಡಿದ ನಾಲಗೆಯೇ ನಾಚಿಕೆಪಟ್ಟುಕೊಳ್ಳುವಂತಹ ಮಾತುಗಳೂ ಬಂದವು. ಆರೇಳು ನಿಮಿಷಗಳಲ್ಲಿ ಆ ವಾತಾವರಣ ಪರ- ವಿರೋಧದ ರಣಾಂಗಣವಾಗಿ ಪರಿವರ್ತಿತವಾಯಿತು.
ವೇದಿಕೆ ಮೇಲಿದ್ದ ಪದಾಧಿಕಾರಿಯೊಬ್ಬ ನಿಧಾನಕ್ಕೆ ಎದ್ದುನಿಂತ. ತನ್ನ ಕೈಗಳನ್ನು ಮೇಲಕ್ಕೆತ್ತಿ ಅಲ್ಲಿದ್ದ ಎಲ್ಲರನ್ನೂ ಸುಮ್ಮನಿರುವಂತೆ ಸೂಚಿಸಿದ. ಬಳಿಕ ತನ್ನ ವಿರುದ್ಧ ಬಂದಿರುವ ಎಲ್ಲಾ ಅಭಿಪ್ರಾಯಗಳಿಗೂ ಅತ್ಯಂತ ದಿಟ್ಟತನದಿಂದ ಸ್ಪಷ್ಟವಾಗಿ ಉತ್ತರವಿತ್ತ. ಆತನ ಮಾತಿನ ಶಕ್ತಿ ಆತನನ್ನು ವಿರೋಧಿಸುತ್ತಿದ್ದವರನ್ನೂ ಬೆರಗುಗೊಳಿಸಿತು, ಸುಮ್ಮನಾಗಿಸಿತು. ಮಾತಿನಲ್ಲಿ ಈತನನ್ನು ಗೆಲ್ಲುವುದು ಸಾಧ್ಯವಿಲ್ಲ ಎಂದುಕೊಂಡ ಅವರು ಮುಂದೆ ಅವನೆದುರು ಮಾತನಾಡುವುದಕ್ಕೆ ಇಚ್ಛಿಸಲೇ ಇಲ್ಲ.
ವೇದಿಕೆಯಲ್ಲಿದ್ದ ಮತ್ತೊಬ್ಬ ಮುಖಂಡ ಮೌನವಾಗಿ ಗಲ್ಲದ ಮೇಲೆ ಕೈಯ್ಯಿಟ್ಟು ಕುಳಿತಿದ್ದ. ತನ್ನ ವಿರುದ್ಧ ಬಂದ ಅಭಿಪ್ರಾಯಗಳನ್ನು ಆತ ಮನಸ್ಸಿಗೆ ಹಚ್ಚಿಕೊಂಡಂತೆ ಕಾಣಿಸಲೇ ಇಲ್ಲ. ಆತನ ಮೌನಪರ್ವತವನ್ನು ಮೀರುವುದು ತಮ್ಮಿಂದಾಗದ ಕೆಲಸ ಎಂದುಕೊಂಡ ಭಿನ್ನಾಭಿಪ್ರಾಯಿಗಳು ಆತನನ್ನು ಕೆಣಕುವುದಕ್ಕೆ ಹೋಗಲೇ ಇಲ್ಲ.
***
‘ಮಾತು ಬೆಳ್ಳಿ, ಮೌನ ಬಂಗಾರ’ ಎನ್ನುವ ಗಾದೆಮಾತಿದೆ. ಲೋಕಾನುಭವದ ಆಧಾರದಲ್ಲಿ ಹಿರಿಯರು ಮಾತಿಗಿಂತಲೂ ಮೌನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ನನ್ನ ಪ್ರಕಾರ, ಮಾತು ಹಾಗೂ ಮೌನ ಎರಡಕ್ಕೂ ಅವುಗಳದ್ದೇ ಆದ ಪ್ರಾಮುಖ್ಯತೆ ಇದೆ. ಸಂದರ್ಭಕ್ಕೆ ಅನುಸಾರವಾಗಿ ಇವೆರಡೂ ಬಂಗಾರವಾಗಿ ಮಾರ್ಪಡಬಲ್ಲವು. ಹಲವಾರು ಜನ ಮಾತನ್ನೇ ಬಂಡವಾಳವಾಗಿ ಇರಿಸಿಕೊಂಡು ಬದುಕು ರೂಪಿಸಿಕೊಂಡಿದ್ದಾರೆ. ಮೌನದ ತಳಪಾಯದಲ್ಲಿ ಚಿಂತನೆಯ ಸೌಧವನ್ನು ನಿರ್ಮಿಸಿಕೊಂಡವರಿದ್ದಾರೆ. ಮಾತು ಕಡಿಮೆಯಿದ್ದವರು ಮಾತನಾಡಹೊರಟಾಗ ಅವರ ಮಾತುಗಳಿಗೆ ವಿಶೇಷ ಬೆಲೆ ಬರುತ್ತದೆ. ಮಹಾನ್ ವಾಚಾಳಿಗಳು ಒಂದು ಚೂರು ಮೌನವಾದರೆ ಸಾಕು, ಏನಾಯಿತೆಂದು ಕಾಳಜಿಯಿಂದ ವಿಚಾರಿಸುವವರು ಹಲವರಿರುತ್ತಾರೆ. ಬಳಸಿಕೊಳ್ಳುವವರ ಜಾಣ್ಮೆಯನ್ನು ಮಾತು- ಮೌನಗಳು ಆಧರಿಸಿಕೊಳ್ಳುತ್ತವೆ ಎನ್ನುವುದು ನಿಜ. ಕೆಲವು ಸಂದರ್ಭಗಳಲ್ಲಿ ಮಾತನಾಡದೇ ಹೋದರೆ ನಮ್ಮ ಅಸ್ತಿತ್ವದ ವೃಕ್ಷಕ್ಕೆ ಕೊಡಲಿಯೇಟು ಬೀಳುತ್ತದೆ. ಕೆಲವು ಸಂದರ್ಭಗಳಲ್ಲಿ ಮೌನ ವಹಿಸದೇ ಹೋದರೆ ರಂಗು ರಂಗಾಗಿರುವ ವಾತಾವರಣ ಬಣ್ಣಗೆಡುತ್ತದೆ.
ನಮ್ಮ ಹಿರಿಯರು ಮೌನವ್ರತವನ್ನು ರೂಪಿಸಿದ್ದರು. ಅದನ್ನು ಇಂದಿಗೂ ಆಚರಿಸುವವರಿದ್ದಾರೆ. ಮೌನವ್ರತವನ್ನು ಆಧ್ಯಾತ್ಮಿಕತೆ, ಧಾರ್ಮಿಕತೆಯ ಕನ್ನಡಕದೊಳಗಿಂದ ಕಂಡು, ಹೀಗಳೆಯುವವರೂ ಇದ್ದಾರೆ. ಆದರೆ ಅದು ಸಂಪೂರ್ಣವಾಗಿ ಮನಸ್ಸಿಗೆ ಸಂಬಂಧಿಸಿದ್ದು. ದಿನವೆಲ್ಲಾ ಮೌನ ವಹಿಸಬೇಕೆಂದಾದರೆ ಅದಕ್ಕೆ ಮಾನಸಿಕ ತಯಾರಿ ಬೇಕಾಗುತ್ತದೆ. ತಾನು ಮಾತನಾಡಬಾರದು ಎನ್ನುವ ಅಲಾರಾಮ್ ಮನದಲ್ಲಿ ಸದಾ ಎಚ್ಚರ ಇರಬೇಕಾಗುತ್ತದೆ. ಏಕಾಗ್ರತೆ ವಹಿಸಬೇಕಾಗುತ್ತದೆ. ಮಾತಿನ ಏಕತಾನತೆಯನ್ನು ನೀಗಿಕೊಳ್ಳಲು ನಮ್ಮ ಹಿರಿಯರು ರೂಪಿಸಿಕೊಂಡ ಮಾರ್ಗವಿದು. ಮಾತು ಅತಿಯಾದಾಗ ಬದುಕು ಹದಗೆಡುತ್ತದೆ. ಹೊಳೆದದ್ದೆಲ್ಲವನ್ನೂ ಫಿಲ್ಟರ್ ಇಲ್ಲದೆ ಮಾತಿಗಿಳಿಸುವ ಮನೋಭಾವವನ್ನು ಮೌನವ್ರತ ಹೋಗಲಾಡಿಸುತ್ತದೆ. ಮೂಳೆಯಿಲ್ಲದ ನಾಲಗೆಗೆ ಲಗಾಮು ಬಿಗಿಯುತ್ತದೆ. ಮೌನದ ಮೂಲಕ ಮಾತಿನ ಪರಿಪೂರ್ಣತೆಯನ್ನು ಕಂಡುಕೊಳ್ಳಲೆತ್ನಿಸಿದ, ಅದಕ್ಕೆ ಧಾರ್ಮಿಕ ಆಯಾಮವನ್ನಿತ್ತು ಜನರಲ್ಲಿ ನಿಷ್ಠೆಯನ್ನು ಮೂಡಿಸಿದ ಹಿರಿಯರ ಬೌದ್ಧಿಕತೆಗೆ ಎಣೆಯಿಲ್ಲ.
ನೆಲ್ಲೀಕೆರೆ ವಿಜಯಕುಮಾರ್ ಎನ್ನುವವರು ಬರೆದ ‘ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ’ ಪುಸ್ತಕದಲ್ಲಿ ಬರುವ ಕಥೆಯೊಂದು ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ಸರಕಾರಿ ಅಧಿಕಾರಿಯೊಬ್ಬರು ಯಾವುದೋ ಕಾರಣಕ್ಕಾಗಿ ಸಂತರೊಬ್ಬರನ್ನು ಭೇಟಿಯಾಗುವುದಕ್ಕೆಂದು ಬರುತ್ತಾರೆ. ಸುತ್ತಲೂ ಜನ ಸೇರಿಕೊಂಡಿರುವುದರಿಂದ ಆ ಅಧಿಕಾರಿಗೆ ತಕ್ಷಣಕ್ಕೆ ಆ ಸಂತರ ಭೇಟಿ ಸಾಧ್ಯವಾಗುವುದಿಲ್ಲ. ಅಲ್ಲೇ ಕುಳಿತು ಅಲ್ಲಿಯ ಆಗುಹೋಗುಗಳನ್ನು ವೀಕ್ಷಿಸತೊಡಗುತ್ತಾರೆ. ಅಲ್ಲಿಯ ಜನರ ವರ್ತನೆ ಅವರಲ್ಲಿ ಅಚ್ಚರಿ ಹುಟ್ಟಿಸುತ್ತದೆ. ಚಲನೆಯಿಲ್ಲದೆ, ಮಾತಿಲ್ಲದೆ, ನಗುವಿಲ್ಲದೆ ಸುಮ್ಮನೆ ಕುಳಿತ ಆ ಸಂತರನ್ನು ನೋಡುವುದಕ್ಕಾಗಿ ಜನ ಬರುತ್ತಲೇ ಇದ್ದಾರೆ. ಬಂದವರು ಅವರೆದುರು ನಿಂತು ಕೈ ಮುಗಿಯುತ್ತಿದ್ದಾರೆ. ಕಾಲಿಗೆ ಬೀಳುತ್ತಿದ್ದಾರೆ. “ಸುಮ್ಮನೆ ಕುಳಿತ ನಿಮ್ಮನ್ನು ಅಷ್ಟೊಂದು ಜನ ನೋಡುತ್ತಾರಾದರೂ ಯಾತಕ್ಕೆ? ನಮಸ್ಕರಿಸುವುದಾದರೂ ಏಕೆ?”- ತನಗೆ ಭೇಟಿಯ ಅವಕಾಶ ದೊರೆತಾಗ ತನ್ನ ತಲೆ ಕೊರೆಯುತ್ತಿದ್ದ ಪ್ರಶ್ನೆಗಳನ್ನು ಆ ಅಧಿಕಾರಿ ಸಂತರ ಮುಂದಿಡುತ್ತಾರೆ. ಸಂತರ ಉತ್ತರ ಸರಳವಾಗಿತ್ತು- “ನಾನು ಸುಮ್ಮನೆ ಇರುವುದರಿಂದಲೇ ಅವರು ನನ್ನನ್ನು ನೋಡುತ್ತಾರೆ, ನಮಸ್ಕರಿಸುತ್ತಾರೆ.” ಸುಮ್ಮನೆ ಇರುವುದು ಸರಳವಲ್ಲ. ಅದೂ ಗುಂಪಿನಲ್ಲಿದ್ದಾಗ ಸುಮ್ಮನಿರುವುದೆಂದರೆ ಅದು ನಮ್ಮ ಮನಸ್ಸು ಎದುರಿಸುವ ಅತ್ಯಂತ ಕಠಿಣ ಪರೀಕ್ಷೆ. ಸುಮ್ಮನೆ ಯೋಚಿಸಿ ನೋಡಿ, ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೇವೆ. ನಮ್ಮ ಬಾಯಿ ಸುಮ್ಮನಿರುವುದಿಲ್ಲ. ಪರಿಚಯ ಇಲ್ಲದವರನ್ನೂ ಪರಿಚಯಿಸಿಕೊಂಡು ಮಾತನಾಡುತ್ತದೆ. ಬಾಯಿ ಸುಮ್ಮನಿದ್ದರೂ ಮನಸ್ಸು ಸುಮ್ಮನಿರುವುದಿಲ್ಲ. ಬಂದು ಹೋಗುವವರ ಬಗೆಗೆ, ಬದುಕಿನ ಬಗೆಗೆ ಯೋಚಿಸತೊಡಗುತ್ತದೆ. ನಿಂತೂ ನಿಂತೂ ಬೋರು ಹೊಡೆಸಿಕೊಂಡ ಕಾಲುಗಳು ಅತ್ತಿಂದಿತ್ತ ಚಲಿಸತೊಡಗುತ್ತವೆ. ಒಟ್ಟಿನಲ್ಲಿ ಸುಮ್ಮನಿರಲಂತೂ ನಮ್ಮಿಂದ ಸಾಧ್ಯವಾಗುವುದಿಲ್ಲ. ಆದರೆ ಧ್ಯಾನ ಇದನ್ನು ಸಾಧ್ಯಮಾಡುತ್ತದೆ. ಹೊರಗಿನ ಯಾವ ಜಂಜಾಟಗಳಿಗೂ ಪ್ರತಿಕ್ರಿಯಿಸದ ಮನಸ್ಸಿನ ಅತ್ಯುನ್ನತ ನಿರ್ಲಿಪ್ತತೆಯನ್ನು ಧ್ಯಾನದ ಮೂಲಕ ಕಂಡುಕೊಳ್ಳುವುದಕ್ಕೆ ಸಾಧ್ಯವಿದೆ. ಆದ್ದರಿಂದಲೇ ನಮ್ಮ ಹಿರಿಯರು ಧ್ಯಾನವನ್ನೇ ತಪಸ್ಸಾಗಿ, ಅದರಿಂದ ಹೊರಬರುವುದನ್ನು ಸಾಧನೆಯ ವೈಫಲ್ಯತೆಯಾಗಿ ಗುರುತಿಸಿದ್ದಾರೆ.
ನಾನು ಗಮನಿಸಿಕೊಂಡಿದ್ದೇನೆ, ಮೌನಿಗಳಾಗಿರುವವರನ್ನು ಕೀಳಂದಾಜಿಸುವವರಿದ್ದಾರೆ. ‘ಹೆಚ್ಚು ಮಾತನಾಡದ ಅವರು ಏನೆಂದರೆ ಏನೂ ಸಾಧಿಸಲಿಕ್ಕಿಲ್ಲ’ ಎಂದು ತೀರ್ಪು ಕೊಡುವವರಿದ್ದಾರೆ. ಆದರೆ ಯಾರೋ ಮೌನವಾಗಿದ್ದಾರೆ ಎಂದರೆ ಶೂನ್ಯರಾಗಿದ್ದಾರೆ ಎಂದರ್ಥವಲ್ಲ. ಮಾತನಾಡುವವರಿಗಿಂತಲೂ ಹೆಚ್ಚಿನ ಯೋಚನೆಯನ್ನು ಮೌನಿಯಾಗಿರುವವರ ಮನಸ್ಸು ಹೊಂದಿರುತ್ತದೆ. ಮೌನ ಚಿಂತನೆಗೆ ಈಡುಮಾಡುತ್ತದೆ, ಸೃಜನಶೀಲತೆಗೆ ಕಾರಣವಾಗುತ್ತದೆ. ಉತ್ತಮ ಮಾತುಗಾರಿಕೆ ಹೊರಹೊಮ್ಮಬೇಕಾದರೆ ಮೌನದ ಸಹಕಾರ ಬೇಕೇ ಬೇಕು. ಮಾತಿನ ಮೂಲಕ ದೊರಕಿದ ಮಾಹಿತಿಗಳ ಭ್ರೂಣ ಸುಸ್ವರೂಪ ಪಡೆಯಬೇಕಾದರೆ ಮೌನದ ಗರ್ಭದೊಳಗಲ್ಲಿ ಫಲಿತು ಹೊರಬರಬೇಕಾಗುತ್ತದೆ.
***