ಅಂಕಣ ಬರಹ

ತೊರೆಯ ಹರಿವು

  ‘ಅಪ್ಪ’ ಎನುವ ಕಾಪಿಡುವ ಅನುಭೂತಿ..!

रावण के द्वारा रचे शास्त्र | Dussehra wallpapers, Diwali wallpaper, Happy  dussehra wallpapers

 ರಾಕ್ಷಸ ಸಂಹಾರಕ್ಕೆ ವೀರರಾದ ಬಾಲಕರನ್ನು ಕಳಿಸಿಕೊಡೆಂದು ಕೇಳಿದಾಗ ದಶರಥ ಮಹಾರಾಜ ಹೌಹಾರಿದ್ದನೆಂದೇ ರಾಮಾಯಣ ಹೇಳುತ್ತದೆ. ‘ಮಕ್ಕಳಿನ್ನೂ ಹಾಲುಗಲ್ಲದ ಹಸುಗೂಸುಗಳು, ನಾನೇ ಬರುವೆ, ಸೈನ್ಯ ತರುವೆ..‘ ಎಂದು ಚಡಪಡಿಸಿ ಬಡಬಡಾಯಿಸಿದ್ದ ಎಂದು ತಿಳಿದಾಗ, ಎಂಥಾ ರಾಜಾಧಿರಾಜ ಆದರೂ ಅಪ್ಪನೆಂಬ ಅಂತಃಕರಣ ಮೀರಲಾದೀತೇ ಎನಿಸುತ್ತದೆ. 

   ‘ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ…’ ಎಂದು ಮನಸ್ಸು ಎಷ್ಟೇ ಹಾತೊರೆದರೂ, ಅಪ್ಪನ ಮುಂದೆ ಗಟ್ಟಿ ನಿಂತು ಮಾತನಾಡುವುದು ಎಷ್ಟು ಮಂದಿಗೆ ಸಾಧ್ಯವಿತ್ತು?! ಈಗಿನ ಕತೆ ಬಿಡಿ, ಅಪ್ಪನೆಂದರೆ ಅಮ್ಮನಿಗಿಂತಲೂ ಮಕ್ಕಳೊಡನೆ ಹೆಚ್ಚು ಅಟ್ಯಾಚ್ಮೆಂಟ್ ಬೆಳೆಸಿಕೊಳ್ಳುವ ಜೀವ ಎನ್ನುವಂತಾಗುತ್ತಿದೆ. ಯಾರ ಮುಂದೆ ತಲೆ/ದನಿ ತಗ್ಗಿಸಿ ನಿಲ್ಲಲಾಗುತ್ತಿತ್ತೋ.. ಯಾರ ಮುಂದೆ ಕೂತರೆ ತಪ್ಪು, ನಿಂತರೆ ತಪ್ಪೆಂದು ಭಾವಿಸಲಾಗುತ್ತಿತ್ತೋ.. ಆ ಹಿರೀ ಜೀವ ಅಪ್ಪ ಇಂದು ಮಮತೆಯ ಪ್ರತಿರೂಪವೂ ಮೃದುತ್ವದ ಸಾಕಾರವೂ ಆಗುತ್ತಿರುವುದು ಕಾಲಚಕ್ರದ ಪರಿಭ್ರಮಣೆಯನ್ನು ತೋರುವುದಲ್ಲವೇ..!

   ‘ಅಮ್ಮನ ಸೀರೆ ಮಡಚೋಕಾಗಲ್ಲ; ಅಪ್ಪನ ದುಡ್ಡು ಎಣಿಸೋಕಾಗಲ್ಲ’ ಎನ್ನುವ ಮಾತು ತೂತು ಬಿದ್ದ ಜೇಬಿನ ಅಪ್ಪನನ್ನು ಅಣಕಿಸಿತೇನೋ…ಅದಕ್ಕೇ ಪ್ರಾಜ್ಞರು ‘ಅಪ್ಪ ಎಂದರೆ ಆಕಾಶ’ ಎಂದು ಅಪ್ಪನನ್ನು ಗ್ರಹಿಕೆ ನಿಲುಕದ ವಿಸ್ತಾರವಾಗಿಸಿದರು. 

      ಜನ್ಮ ಕೊಟ್ಟ ಅಪ್ಪ ಮಕ್ಕಳ ಮುಂದೆ ಎಷ್ಟೇ ಬಿಗುಮಾನ ತೋರಿದರೂ, ತೌರೂರ ಬಂಧನ ಕಡಿದುಕೊಂಡು ಗಂಡನ ಮನೆಗೆ ಹೊರಟ ಮಗಳಿಗಾಗಿ ಚೌಕದ ಅಂಚಲ್ಲಿ ಕಂಬನಿ ಒರೆಸದಿರುವನೇ? ಹಾಗೆ ಧಾರೆ ಎರೆದುಕೊಟ್ಟ ಮೇಲೆ, ಮಗಳು ಎರಡು ಜೀವವಾಗಿ ಬಾಣಂತನಕೆಂದು ಬಂದಾಗ, ಅಪ್ಪನಾಗಿದ್ದಕ್ಕಿಂತ ಅಜ್ಜನಾಗುವುದಕ್ಕೇ ಹೆಚ್ಚು ಸಂಭ್ರಮಿಸುತ್ತಾನೆ! ಮೊಮ್ಮಗುವ ಹೆಗಲ ಮೇಲೆ ಹೊತ್ತು ಮೆರೆಸುವ, ಕೂಸುಮರಿ ಮಾಡುವ, ‘ಆನೆ ಬಂತೊಂದಾನೆ..’ ಎಂದು ಬೆನ್ನುಬಾಗಿಸುವ ಅಜ್ಜನಿಗೆ ಗಂಡನ ಮನೆಗೆ ಹಿಂದಿರುಗಬೇಕಾದ ಮಗಳು-ಮೊಮ್ಮಗುವಿಗೆ ಹಾಲು-ಹೈನದ ಕೊರತೆ ಆಗದಿರಲೆಂದು ಅಪಾರ ಕಾಳಜಿಯಿಂದ ಹೈನವನ್ನೂ ಜೊತೆಗೆ ಸಾಗಿಸಿ ಹರಸುತ್ತಾನೆ…, 

  ‘’ತೊಟ್ಟಿಲ ಹೊತ್ತ್ಕೊಂಡು ತೌರುಬಣ್ಣ   ಉಟ್ಕೊಂಡು|| ಅಪ್ಪಾ ಕೊಟ್ಟೆಮ್ಮೆ ಹೊಡ್ಕೊಂಡು

ತೌರೂರ ತಿಟ್ಹತ್ತಿ ತಿರುಗಿ ನೋಡ್ಯಾಳೆ…’’

    ಹೀಗೆ ಮಗಳಿಗಾಗಿ ಜೀವ ಮುಡಿಪಿಡುವ ಅಪ್ಪನನ್ನು ವರದಕ್ಷಿಣೆ ಎಂಬ ಭೂತ ಹಿಂಡಿಹಿಪ್ಪೆ ಮಾಡುವುದು ಸಾಮಾಜಿಕ ವ್ಯವಸ್ಥೆಯ ದುರಂತ. 

     ಹಿಂದೆ ಹೀಗಿರಲಿಲ್ಲವೇನೋ… ಶಂತನು ಎಂಬ ಮಹಾರಾಜ ಸತ್ಯವತಿಯನ್ನು ಮೋಹಿಸಿ ಮದುವೆಯಾಗಲು ಬಯಸಿದಾಗ, ಆ ‘ಯೋಜನಾಗಂಧಿ’ಯ ತಂದೆ ಉಪರಿಚರ ವಾಸುವು ಹಾಕಿದ ಕಂಡೀಷನ್ನುಗಳು ಮಹಾಭಾರತ ಕತೆಯ ಮೊದಲ ದೊಡ್ಡ ತಿರುವು. ಅದನ್ನು ಬಿಟ್ಟು ‘ರಾಮೇಶ್ವರಕ್ಕೆ ಹೋದ್ರೂ ಶನೇಶ್ವರನ ಕಾಟ ತಪ್ಪಲಿಲ್ಲ’ ಎಂದು ದ್ರೌಪದಿಯನ್ನೇ ಎಲ್ಲಕ್ಕೂ ನೇರ ಹೊಣೆಗಾರಳನ್ನಾಗಿ ಮಾಡುತ್ತಾ ಮುಂದೆ ಯಾವಾಗಲೋ ಘಟಿಸಿದ ಎಲ್ಲ ಅವಘಡಗಳನ್ನೂ ಅವಳ ತಲೆ ಮೇಲೆ ಹೊರಿಸುವ ಜಾಣತನವನ್ನು ನಮ್ಮ ಜನ ತೋರುತ್ತಾರೆ. 

    ಆದರೆ ಇಲ್ಲೊಂದು ವಿರೋಧಾಭಾಸ ಇರುವುದನ್ನು ಗಮನಿಸಬೇಕು. ಸತ್ಯವತಿಯ ಅಪ್ಪನೂ ಅಪ್ಪನೇ, ದ್ರೌಪದಿಯ ಅಪ್ಪನೂ ಅಪ್ಪನೇ… ಆದರೆ ಮಕ್ಕಳಿಗಾಗಿ ಅವರ ಹೃದಯ ಮಿಡಿದ ಕಾರಣಗಳು ಬೇರೆ ಬೇರೆ. ಸಾಮಾನ್ಯ ಬೆಸ್ತನ ಮಗಳಾಗಿರುವ ಮತ್ಸ್ಯಗಂಧಿ ಸತ್ಯವತಿಯು ಹಸ್ತಿನಾವತಿಯ ಮಹಾರಾಣಿಯಾಗಿ ಮೆರೆಯುವಾಗ ಯಾವ ಅಡ್ಡಿ ಆತಂಕಗಳೂ ಮಗಳಿಗೆ ಯಾವಕಾಲಕ್ಕೂ ಬಾಧಿಸದಿರಲಿ ಎಂದು ಮುಂಜಾಗರೂಕತೆಯಿಂದ ಮುತುವರ್ಜಿ ವಹಿಸುವ ಉಪರಿಚರ ವಾಸುವನ್ನು, ದ್ರೋಣನ ಮೇಲಿನ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ, ತನ್ನ ಸ್ವಾರ್ಥ ಸಾಧನೆಯ ಕಾರಣಕ್ಕಾಗಿ ದ್ರೌಪದಿಯನ್ನು ಹಡೆದ ದ್ರುಪದನೊಡನೆ ಹೋಲಿಸುವುದು ತರವೇ? 

   ಅಪ್ಪ ಎಂದರೆ ಬರಿಯ ಅಪ್ಪನಲ್ಲ, ‘ಅಪ್ಪ, ಅಪ್ಪಂ’ ಎಂಬುದು ಬಾಯಲ್ಲಿ ನೀರೂರಿಸುವ ಒಂದು ಬಗೆಯ ಖಾದ್ಯವೂ ಹೌದು. ಹಾಗೆಯೇ ಅಪ್ಪ ಎಂದರೆ ಹಸಿದ ಹೊಟ್ಟೆಗೆ ತುತ್ತನುಣಿಸುವ ರಟ್ಟೆಯೂ ಹೌದು. ಅಪ್ಪನ ಹೆಗಲಿಗೆ ಕೇವಲ ಮಕ್ಕಳೇರಿ ಕೂರುವುದಿಲ್ಲ. ಇಡೀ ಸಂಸಾರದ ಜವಾಬ್ದಾರಿಯೇ ಹತ್ತಿ ಕೂತಿರುತ್ತದೆ. ಆದರೆ, ಎಲ್ಲ ಅಪ್ಪಂದಿರ ಹೆಗಲೂ ಗಟ್ಟಿ ಇರುತ್ತದೆ ಎಂದಲ್ಲ. ಕೆಲವರು ಸಂಸಾರ ಭಾರ ಹೊರುವ ಬಂಡಿಯ ನೊಗಕ್ಕೆ ತಮ್ಮ ಹೆಗಲನ್ನು ಕೊಡುವುದೇ ಇಲ್ಲ. 

    ‘ಅಪ್ಪ’ ಎಂದರೆ ‘ಅಮ್ಮ’ ಎಂಬರ್ಥವೂ ಹಿಂದಿನ ಹಳಗನ್ನಡದಲ್ಲಿ ಇತ್ತೆನ್ನುತ್ತಾರೆ ಹಿರಿಯ ವಿದ್ವಾಂಸರು. ಅಮ್ಮೆ, ಅಬ್ಬೆ ಎಂದು ಅಪ್ಪನನ್ನು ಸಂಭೋದಿಸಿದ ಉದಾಹರಣೆಗಳಿವೆ. ಅಪ್ಪನೆಂದರೆ ಕಾಣುವ ದೇವರು! ‘ಪಿತೃ ದೇವೋಭವ’ ಅಮ್ಮನೊಡನೆ ಕರುಳ ಬಾಂಧವ್ಯವಿದ್ದರೆ ಅಪ್ಪನೊಡನೆ ರಕ್ತ ಸಂಬಂಧವಿರುತ್ತದೆ. ಹೆಣ್ಣು ಹೊರೆಯುವ ಹೆರುವ ಸಂಕಟಗಳನ್ನು ಭೌತಿಕವಾಗಿ ಅನುಭವಿಸಿದರೆ, ಆ ಗಳಿಗೆಯ ಅಪ್ಪನ ಮಾನಸಿಕ ತುಮಲಗಳೂ ಕಡಿಮೆ ಏನಲ್ಲಾ. ಅಪ್ಪ ಜವಾಬ್ದಾರಿ ಮಾತ್ರವೇ? ಅಪ್ಪನೆಂದರೆ ಕಾಠಿಣ್ಯವೇ? ಎನ್ನುವವರಿಗೆ ‘ವಜ್ರಾದಪಿ ಕಠೋರಾಣೀ ಮೃದೂನೀ ಕುಸುಮಾದಪಿ’ ಗೆ ಸಮಂಜಸ ಹೋಲಿಕೆ ಅಪ್ಪನೆಂದು ತೋರಬಹುದು. 

   ಗತಿಸಿ ಹೋದ ಪೂರ್ವಿಕರಿಗಾಗಿ ‘ಪಿತೃಪಕ್ಷ’ ಆಚರಿಸುವ ನಮ್ಮ ಪರಂಪರೆಗೆ ಆಧುನಿಕರ ‘ಅಪ್ಪಂದಿರ ದಿನ’ ಸಾಟಿಯಾಗುವುದೇ ಎಂದು ಹೋಲಿಸುವುದು ಅಸಂಬದ್ಧ ತರ್ಕ. ಅಪ್ಪನನ್ನು ಹೆಸರಿಗೆ ದಿನಾ ನೆನೆಯದಿದ್ದರೂ ಉಸಿರು ನಿಲ್ಲೋವರೆಗೂ ಅಪ್ಪನ್ನು ಮರೆಯಲಾಗದಲ್ಲವೇ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೂನ್ ಮೂರನೆಯ ಭಾನುವಾರವನ್ನು ಅಪ್ಪಂದಿರ ದಿನವೆಂದು ವರ್ಷಂಪ್ರತಿ ಆಚರಿಸುವುದು ೧೯೧೦ರಿಂದ ಜಾರಿಗೆ ಬಂದಿರುವುದರಿಂದ ಅಪ್ಪನ ಮಹತ್ವ ಹೆಚ್ಚಾಯ್ತು ಎನ್ನುವಂತಿಲ್ಲ. ಅಮ್ಮ ಎದೆಹಾಲೂಡಿ ಬೆಳಿಸಿದ್ರೆ ಅಪ್ಪ ಬೆವರು ಹರಿಸಿ ಸಾಕಿರುತ್ತಾರೆ.. ಅಪ್ಪ ವಿಲನ್ ಆಗಿಯೇ ಚಿತ್ರಿಸಿಕೊಂಡು ಬಂದಿರುವ ನಿಜವಾದ ನಾಯಕ ನಟ. 

   ಅಪ್ಪ, ಅಪ್ಪ ಆಗೋದು ಯಾವಾಗ?! ಈ ಮಾತು ಆಶ್ಚರ್ಯ ತರಬಹುದು. ಹೌದು, ಹೆಣ್ಣು ಮಗುವು ಹುಟ್ಟುತ್ತಲೇ ತಾಯಿಯ ಅನುಭವ, ಮನಸ್ಥಿತಿ ಹೊತ್ತು ಬರುತ್ತದೆಯಂತೆ! ಆದರೆ, ಗಂಡು ಮಕ್ಕಳು ಮಾತ್ರ ‘ಅಪ್ಪತನ’, ‘ತಂದೆತನ’ ಹೊಂದುವುದು

ಕುವೆಂಪು ತಮ್ಮ ಮಗ ತೇಜಸ್ವಿಗೆ ಹೇಳಿದರೆಂಬ ಮಾತಿನಂತೆಯೇ ಆಗುವುದು ಮಾತ್ರ ಸುಳ್ಳಲ್ಲ. ಅಪ್ಪ ಯಾವಾಗ ಆಗೋದು ಎನ್ನುವುದಕ್ಕೆ ರಸಋಷಿಗಳ ಮಾತು ಸುಂದರ ಉದಾಹರಣೆಯಾಗಿದೆ

‘‘ನೀನು ಎರಡು ವರುಷದ ಕಂದ,       

ನಾನೂ ಎರಡೇ ವರುಷದ ತಂದೆ.   ನಾವಿಬ್ಬರೂ ಒಂದೇ” 

    ಎಂದು…!! ಹೀಗೆ ಮನೆಯಲ್ಲಿ ಒಂದು ಮಗು ಹುಟ್ಟಿದರೆ, ಅದರ ಜೊತೆಗೆ ತಂದೆ ಕೂಡ ಹುಟ್ಟುತ್ತಾನೆ. When a baby is born; father is also born. 

     ‘ಅಪ್ಪನಿಗೆ ಹುಟ್ಲಿಲ್ಲಾ ಅನ್ನಿಸಿ ಬಿಡ್ತೀನಿ’ ಎಂದು ಅಬ್ಬರಿಸುವ ಮಾತಿದೆ. ಸಾಯಿಸಿಬಿಡ್ತೀನಿ ಎಂದು ನೇರವಾಗಿ ಹೇಳದೆ, ಹೀಗೆ ಅನೇರವಾಗಿ ರೋಪು ಹಾಕುವುದು ಜನಪ್ರಿಯ ಮಾದರಿಯ ‘ಸಿನೆಮಾ ಡೈಲಾಗ್’!! ಜನಪದರಲ್ಲೊಂದು ಮಾತಿದೆ. ಅಮ್ಮ ಸತ್ಯ ಹಾಗೂ ಅಪ್ಪ ನಂಬಿಕೆ ಎಂದು. ಕರಳು ಬಳ್ಳಿ ಹಂಚಿಕೊಂಡು ಹುಟ್ಟಿಸಿದ ಅಮ್ಮನಿಗೆ ಮಾತ್ರ ಮಗುವಿನ ಅಪ್ಪನ ಬಗೆಗಿಗೆ ವಿವರಗಳು ನೇರವಾಗಿ ಗೊತ್ತಿರುತ್ತವೆ ಎಂದು ಇದರರ್ಥ. 

   ಪರಶುರಾಮನೂ, ರಾಮಚಂದ್ರನೂ ‘ಪಿತೃವಾಕ್ಯ ಪರಿಪಾಲಕ’ರೆಂದೇ ತಮ್ಮ ಕಥಾ ಸರಣಿಗಳ ಮೂಲಕ ಜನಜನಿತರಾದವರು. ತಂದೆಗೆ ಕೊಟ್ಟ ಮಾತನ್ನು ನಡೆಸಿಕೊಡುವ ಜವಾಬ್ದಾರಿಯ ಮಹತ್ತನ್ನು ಈ ಕತೆಗಳು ನಿರೂಪಿಸುತ್ತವೆ. ಮಕ್ಕಳು   ಅಪ್ಪನ ಮನೆತನಕ್ಕೆ ಸೇರಿ ಅಪ್ಪನ ಆಸ್ತಿ- ಕರ್ತವ್ಯಗಳಿಗೆ ಹಕ್ಕುಬಾಧ್ಯಸ್ಥರಾಗುತ್ತಾರೆಯೇ ಹೊರತು ನವಮಾಸ ಗರ್ಭದೊಳಗಿಟ್ಟುಕೊಂಡು ಹೆರುವ ಅಮ್ಮನಿಗಲ್ಲ. ಇದು ಪುರುಷ ಪ್ರಧಾನ ವ್ಯವಸ್ಥೆಯ ತೀರ್ಮಾನಗಳು. ಮಕ್ಕಳ ಇನ್ಷಿಯಲ್ ನಲ್ಲಿಯೂ ಅಪ್ಪನ ಊರು, ಅಪ್ಪನ ಹೆಸರು ಪ್ರಧಾನವಾಗಿರುತ್ತದೆ. 

    ರಾಷ್ಟ್ರಪಿತ, ಸಂಶೋಧನೆಗಳ ಪಿತಾಮಹ – ಜನಕ ಎಂಬ ನುಡಿಗಟ್ಟುಗಳು ‘ತಂದೆ’ಯ ಸ್ಥಾನದ ಮಹತ್ತು ಹಾಗೂ ಗೌರವವನ್ನು ಪ್ರತಿಪಾದಿಸುತ್ತವೆ. ಪ್ರಕೃತಿಯಲ್ಲಿ ನೀರು, ನೆಲ, ಕಾಡು,ಮಳೆ, ನಕ್ಷತ್ರ ಮೊದಲಾದವನ್ನು ಹೆಣ್ಣೆಂದರೆ; ಸೂರ್ಯ, ಚಂದ್ರ, ಬೆಟ್ಟ, ಸಾಗರ, ಪರ್ವತ ಮುಂತಾದವನ್ನು ಗಂಡೆಂದು ಚಿತ್ರಿಸಲಾಗುತ್ತದೆ. ಹೀಗೆ ಮಾಡುವ ಮೂಲಕ ಗಂಡಿನ ಆ ಮೂಲಕ ಅಪ್ಪನ ಅಸ್ತಿತ್ವದ ಗಟ್ಟಿತನ ಪ್ರತಿಪಾದನೆ ಮಾಡಲಾಗುತ್ತಿದೆಯೇ?!

  ಬಸವಣ್ಣ ‘ಅಯ್ಯಾ’ ಎಂದರೆ ಸ್ವರ್ಗ; ಎಲವೋ ಎಂದರೆ ನರಕ ಎಂದುದರಲ್ಲಿ ಕೇವಲ ಅಪ್ಪನಿಲ್ಲ. ಅಲ್ಲಿ ‘ಅಯ್ಯ’ ಎಂಬುದು ಗೌರವ ವಾಚಿಕೆಯಾಗಿ ಬಳಕೆಯಾಗುವುದನ್ನು ತಿಳಿಸುತ್ತದೆ. ದೇವರಿಗೂ ಅಪ್ಪನೆನ್ನುವ ಅಯ್ಯನೆನ್ನುವ ಮೂಲಕ ಅವಿನಾಭಾವ ಸಂಬಂಧ ಕಲ್ಪಿಸಿಕೊಳ್ಳುವುದು ಗ್ರಾಮೀಣ ಮುಗ್ಧತೆ. ಮಾದಯ್ಯ, ತಿಮ್ಮಪ್ಪ ಹೀಗೆ…. 

   ಅಮ್ಮನಿಗೆ ವಿಶೇಷ ಪರಿಗಣನೆ ಕೊಡುತ್ತಾ ಅಪ್ಪನನ್ನು ಪರದೆ ಹಿಂದೆ ತಳ್ಳಿದ ಜಾಣಮರೆವು ಇತ್ತೀಚೆಗೆ ಕಾಣೆಯಾಗುತ್ತಿದೆ. ಅಪ್ಪನೆಂದರೆ ವೀರ, ಜಾದೂಗಾರ, ಜಾಣ, ಒಲವು ಉಣಿಸುವ ಉದಾರಿ ಎಂದೆಲ್ಲಾ ಗೌರವಿಸಲಾಗುತ್ತಿದೆ. ಹಾಗಾಗಿಯೇ ಮಕ್ಕಳೀಗ ಮನದುಂಬಿ ಹಾಡುತ್ತಾರೆ, ‘’ಅಪ್ಪಾ ಐ ಲವ್ ಯೂ ಪಾ….’’

****************************

 – ವಸುಂಧರಾ ಕದಲೂರು.

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

6 thoughts on “

  1. ಕೆಲವೊಮ್ಮೆ ತಾಯಿಯಷ್ಟೇ…. ಸಕಲ, ತಂದೆಯ ಪಾತ್ರವೇ ಗೌಣ ಎಂಬುವಲ್ಲಿ ಈ ಲೇಖನ ತಂದೆಯ ಜವಾಬ್ದಾರಿ ಮತ್ತು ಪಿತೃ ವಾತ್ಸಲ್ಯದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಚೆಂದದ ಬರಹವಾಗಿ ಮೂಡಿದೆ.ಅಭಿನಂದನೆಗಳು ವಸುಂಧರಾ

Leave a Reply

Back To Top