ಅಂಕಣ ಬರಹ
ತೊರೆಯ ಹರಿವು
ಧರ್ಮಕ್ಕೆ ದಟ್ಟಿ ಕೊಟ್ಟರೆ
ಜಗತ್ತಿನ ಎಲ್ಲಾ ಧರ್ಮಗಳು ‘ದಾನ’ ಧರ್ಮದ ವಿಚಾರವನ್ನು ಹೇಳುತ್ತವೆ. ಹಾಗೆ ಹೇಳುತ್ತಲೇ, ದಾನವು ಶ್ರೇಷ್ಠ ಎನ್ನುವ ವಿಚಾರ ಪ್ರತಿಪಾದಿಸುತ್ತವೆ ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ.
ದಾನದಲ್ಲೂ ಎಷ್ಟೋ ವಿಧಾನಗಳಿವೆ ಅಲ್ಲವೇ? ಹಾಗಿರುವಾಗಲೂ ಇದೇ ಪ್ರದಾನ ದಾನ; ಇದೇ ಶ್ರೇಷ್ಠ ದಾನ ಎಂದು ಅವುಗಳಲ್ಲಿ ಕೆಲವನ್ನು ಉದಾಹರಿಸುವುದುಂಟು. ಉದಾಹರಣೆಗೆ ಅನ್ನದಾನ, ವಿದ್ಯಾದಾನ, ಗೋದಾನ, ಭೂದಾನ, ಕನ್ಯಾದಾನ.. ಮೊದಲಾದ ದಾನಗಳ ವಿಷಯ ಆಗಾಗ್ಗೆ ಕಿವಿ ಮೇಲೆ ಬೀಳುತ್ತಿರುತ್ತದೆ. ಅನ್ನದಾನ, ವಿದ್ಯಾದಾನ, ರಕ್ತದಾನ, ಪುತ್ರದಾನ, ಕನ್ಯಾದಾನ, ನೇತ್ರದಾನ, ವಸ್ತ್ರದಾನ, ಗೋದಾನ, ಭೂದಾನ, ಸಿರಿದಾನ, ದೇಹದಾನ, ಸಮಯ ದಾನ, ಅಧಿಕಾರ ದಾನ, ಅಂಗಾಗ ದಾನ, ಕೇಶ ದಾನ, ಆಭರಣ ದಾನ, ಜೀವದಾನ, ಕ್ಷಮಾದಾನ… ಪಟ್ಟಿ ಮಾಡಲು ಹೋದರೆ ಇನ್ನೂ ಹತ್ತಾರು ದಾನಗಳನ್ನು ಈ ಪಟ್ಟಿಗೆ ಹೆಸರಿಸಬಹುದು.
ಮೂರು ಲೋಕಗಳಲ್ಲಿ ಅನ್ನದಾನವೇ ಶ್ರೇಷ್ಠದಾನ ಎನ್ನುವುದು ಒಂದು ಮಾತಿದೆ. ‘ಅನ್ನಂ ಬ್ರಹ್ಮೇತಿ’ ಎಂಬ ವೇದೋಕ್ತಿ ಸಹ ಇದನ್ನು ಸಮರ್ಥಿಸುತ್ತದೆ.
ನಮ್ಮ ಕವಿ ಸರ್ವಜ್ಞ, ‘ಅನ್ನ ದೇವರ ಮುಂದೆ ।ಇನ್ನು ದೇವರು ಉಂಟೆ ।ಅನ್ನವಿರುವನಕ ಪ್ರಾಣವು ।ಜಗದೊಳಗೆ ಅನ್ನವೇ ದೈವ ಸರ್ವಜ್ಞ।’ಎಂದು ಹಸಿವನ್ನು ಇಂಗಿಸುವ ಆಹಾರವೇ ದೈವ. ಎಂದು ಯಾವ ಸಮೀಕರಣವೂ ಹೇಳದಷ್ಟು ಸರಳವಾಗಿ ಅನ್ನ ಎಂದರೆ ಪ್ರಾಣ; ಪ್ರಾಣವೆಂದರೆ ದೇವರೆಂದು ತಿಳಿಸಿದ್ದಾರೆ.
‘ಅನ್ನದಾನ’ ಪವಿತ್ರ ಎನ್ನುವುದರೊಳಗೊಂದು ಗೂಢಾರ್ಥವಿದೆ. ಬಡವರ ಹಸಿವೆ ತಣಿಸಿ ಹಸಿವಿನ ಹಾಹಾಕಾರ ಕಡಿಮೆ ಮಾಡುವ ಸಲುವಾಗಿ ‘ಅನ್ನದಾನ’ ಪರಿಕಲ್ಪನೆ ರೂಢಿಗೆ ಬಂದಿರಬಹುದು. ಅದರಲ್ಲೂ ಹೊತ್ತಿನ ತುತ್ತಿಗೂ ತ್ರಾಸ ಪಡುವ ಜನರೇ ಶೇಕಡಾವಾರು ಹೆಚ್ಚಿರುವ ಭಾರತದಂತಹ ದೇಶದಲ್ಲಿ ‘ಅನ್ನದಾನ ನಿಜವಾದ ವರದಾನ’.
ದಾನದ ಪರಿಕಲ್ಪನೆ ಹೇಗೆ ಬೆಳೆದು ಬಂದಿತೋ.. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಇದರ ಪಾತ್ರ ವಿಶೇಷವಾದದ್ದು ಎಂದು ಹೇಳಬಹುದಾದರೂ, ಪೈಪೋಟಿಗೆ ಬಿದ್ದೋ, ಪ್ರತಿಸ್ಪರ್ಧೆ ಒಡ್ಡಿಯೋ ದಾನ ಮಾಡುವುದು ಅಪಾಯಕಾರಿಯೇ… ಕೆಲವು ದಾನಶೂರರು ‘ಮನೆಗೆ ಮಾರಿ ಪರರಿಗೆ ಉಪಕಾರಿ’ ಎಂಬಂತಿರುತ್ತಾರೆ. ಯಾರಿಗೆ ಅವಶ್ಯಕತೆ ಇದೆಯೋ ಅವರನ್ನು ಬಿಟ್ಟು ಅವಶ್ಯಕತೆ ಇಲ್ಲದವರು ದಾನ ಪಡೆದರೆ? ಆಗ ದಾನದ ಧೇಯೋದ್ದೇಶವೇ ವಿಫಲವಾಗುತ್ತದೆ. ‘ಸತ್ಪಾತ್ರ ದಾನ’ ಮಾಡಬೇಕು ಎನ್ನುವುದು ಇದಕ್ಕೇ. ಇಂಥ ದಾನದ ಮೂಲಕ ಅವಶ್ಯಕತೆ ಉಳ್ಳವರಿಗೆ ಅಗತ್ಯ ಸಹಕಾರ ನೀಡುವುದರಿಂದ ದಾನ ಮಾಡಿದವರಿಗೆ ನೆಮ್ಮದಿಯೂ, ದಾನ ಪಡೆದವರಿಗೆ ಉಪಕಾರವೂ ಆಗಬಹುದು. ‘ಅಪಾತ್ರ’ರಿಗೆ ದಾನ ಮಾಡಬಾರದು ಎಂದು ಹಿರಿಯರೂ ಹೇಳಿದ್ದಾರೆ. ಹಾಗೆಯೇ ದಾನ ಮಾಡುವ ಮನಸ್ಸಾದಾಗ ತಕ್ಷಣ ಮೀನಾಮೇಶ ಎಣಿಸದೆ ಕೊಟ್ಟುಬಿಡಬೇಕೆಂದು, ತಡ ಮಾಡಿದರೆ ದಾನ ಮಾಡುವ ಮನಸ್ಸು ಬದಲಾಗಬಹುದೆಂದು ತಿಳಿಸಲು, ‘ಬಲಗೈಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು’ ಎಂಬರ್ಥದ ಮಾತಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಶಿಬಿ ಚಕ್ರವರ್ತಿ, ಬಲೀಂದ್ರ, ಕರ್ಣ ಇವರನ್ನು ತ್ಯಾಗವೀರರೂ- ದಾನನಶೂರರೂ ಎಂದೇ ಪುರಾಣ ಕತೆಗಳಲ್ಲಿ ಕರೆದು ಕೊಂಡಾಡುತ್ತಾರೆ. ತಮ್ಮಲ್ಲಿದ್ದ ಸಂಪತ್ತು, ಐಶ್ವರ್ಯ ದಾನ ಮಾಡಿದ ಮಾತು ಹಾಗಿರಲಿ, ತಮ್ಮ ದೇಹ ಹಾಗೂ ಬದುಕಿನ ಮೇಲಿನ ವ್ಯಾಮೋಹ ಕಳಚಿ ಪ್ರಾಣದಾನ ಮಾಡಿದ ಮಹಾನುಭಾವರಿವರು ಎಂದು ಈ ಮೂವರನ್ನು ನೆನೆಯಲಾಗುತ್ತದೆ.
ಹಿಂದೆ ರಾಜಮಹಾರಾಜರ ಆಳ್ವಿಕೆಯಿದ್ದಾಗ ಅವರು ಋಷಿಮುನಿಗಳಿಗೆ, ಕಲಾವಿದರಿಗೆ, ಸೈನಿಕರಿಗೆ, ನೆಚ್ಚಿನ ಭಟರಿಗೆ, ಪುರೋಹಿತರಿಗೆ, ಮಠಗಳಿಗೆ, ದೇವಸ್ಥಾನ, ಛತ್ರಗಳಿಗೆ ದಾನಶಾಸನ, ದಾನಪತ್ರಗಳನ್ನು ನೀಡುತ್ತಿದ್ದುದಕ್ಕೆ ಸಾಕ್ಷಿಯಾಗಿ ಇಂದಿಗೂ ಹಲವಾರು ದಾನಶಾಸನಗಳು, ದಾನ ಪತ್ರಗಳನ್ನು ಕಾಣಬಹುದು.
ಆಚಾರ್ಯರೆಂದೇ ಗೌರವಿಸುವ ಶ್ರೀ ವಿನೋಬಾ ಭಾವೆಯವರು ೧೯೫೫ ರಲ್ಲಿ ಚಾಲನೆ ನೀಡಿದ ಭೂದಾನ ಚಳವಳಿಯು ಭಾರತದಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಉಳ್ಳವರು ಇಲ್ಲದವರಿಗೆ ತಮ್ಮಲ್ಲಿನ ಭೂಮಿ ದಾನ ಮಾಡುವ ಮೂಲಕ ಅದೆಷ್ಟೋ ಸಹಸ್ರ ಕುಟುಂಬಗಳು ಒಂದು ಹೊತ್ತಿನ ಊಟಕ್ಕೆ ದಾರಿ ಕಂಡಿದ್ದು ಭೂದಾನ ಆಂದೋಲನದಿಂದ ಎನ್ನುವುದು ಈಗ ಇತಿಹಾಸ. ‘ಎಂಜಲು ಕೈಲಿ ಕಾಗೆ ಓಡಿಸಿದರೆ ಅಗುಳೆಲ್ಲಿ ಹಾರಿಹೋಗುವುದೋ’ ಎಂಬ ಜಿಪುಣಾಗ್ರೇಸರ ಕಾಲವಿದು.
ನವಕೋಟಿ ನಾರಾಯಣ ಎಂಬ ಅಗ್ರ ಜುಗ್ಗನು ದೈವಸಾಕ್ಷಾತ್ಕಾರ ಹೊಂದಿ ತನ್ನ ಸಿರಿಸಂಪತ್ತನ್ನೆಲ್ಲ ದಾನ ಮಾಡಿ ಪುರಂದರ ದಾಸರೆನಿಸಿ ದಾಸ ಶ್ರೇಷ್ಠರಾದುದು ಸುಳ್ಳೇ? ‘ಹೆತ್ತ ತಾಯ್ತಂದೆಯರ ಚಿತ್ತ ನೋಯಿಸಿ, ನಿತ್ಯ ದಾನವ ಮಾಡಿದಡೇನು ಫಲ?’ ಎಂಬ ದಾಸವಾಣಿಯು ‘ದಾನ’ ಶ್ರೇಷ್ಠವೇ ಇರಬಹುದು ಆದರೆ ಅದಕ್ಕೂ ಮುನ್ನ, ಕರ್ತವ್ಯ ಪ್ರಜ್ಞೆ ಜಾಗೃತವಾಗಿರಬೇಕು ಮನುಷ್ಯರು ತಮ್ಮ ಜವಾಬ್ದಾರಿ ನಿರ್ವಹಣೆಯನ್ನು ಮರೆಯಬಾರದು ಎಂಬ ಸಂಸ್ಕಾರವನ್ನು ತಿಳಿಸಿಕೊಟ್ಟಿಲ್ಲವೇ?!
ದಾನ ಧರ್ಮ ಮಾಡ್ತಿರೋದಕ್ಕೇ ಕಾಲಕಾಲಕ್ಕೆ ಮಳೆಬೆಳೆ ಆಗ್ತಿರೋದು ಎಂದು ನಂಬಿಸುವ ಮೂಲಕ ಜನರಲ್ಲಿ ಸದ್ಧುದಿ, ದಾನ ಮನೋಭಾವವನ್ನು ಜಾಗೃತವಾಗಿರಿಸಲಾಗಿದೆ. ಮದುವೆ, ಹುಟ್ಟಿದ ದಿನ, ಪಾಸಾದ ಕಾರಣ, ಹಿರಿಯರ ನೆನಪಿಗಾಗಿ, ಕಿರಿಯರ ಸಂಭ್ರಮಕ್ಕಾಗಿ ದಾನವನ್ನು ಮಾಡಲಾಗುತ್ತದೆ. ದಾನವನ್ನು ತ್ಯಾಗವೆಂದೂ ಪರಿಗಣಿಸವಾಗುತ್ತದೆ.
ವೈದ್ಯಲೋಕದ ಆವಿಷ್ಕಾರಗಳು, ಸಾಧ್ಯತೆಗಳು ದಾನದ ಮತ್ತೊಂದು ಮಜಲನ್ನು ಇಂದು ಅನಾವರಣಗೊಳಿಸಿವೆ. ಅಂಗಾಗ ದಾನ, ರಕ್ತ, ನೇತ್ರ, ಕಿಡ್ನಿ, ಯಕೃತ್, ಹೃದಯದ, ಅಸ್ಥಿಮಜ್ಜೆ, ವೀರ್ಯ, ಗರ್ಭಕೋಶ( ಸೆರೊಗಸಿ) ಮೊದಲಾದವನ್ನು ನೆನದರೆ ಸಾಕು ಮನುಷ್ಯ ಎಷ್ಟು ಪುಣ್ಯ ಜೀವಿಯೆಂದು ಅಭಿಮಾನ ಮೂಡುತ್ತದೆ. ದಾನದ ಮಹತ್ವ ಮನಗಾಣುವಂತಾಗುತ್ತದೆ. ವೈದ್ಯಲೋಕ ದಾನದ ಅರ್ಥವನ್ನು ತಿಳಿಸಿಕೊಟ್ಟಿರುವಂತೆ, ಅಂಗಾಂಗಗಳ ಕಳವು, ಮೋಸದ ಮಾರಾಟಜಾಲದ ಕರಾಳತೆಯನ್ನೂ ಮನವರಿಕೆ ಮಾಡಿಕೊಟ್ಟಿದೆ. ಇರಲಿ, ನಾವು ದಾನದ ಮಹತ್ವ ಅರಿಯುವಂತೆ ಇಂಥಾ ಮೋಸದ ಮರ್ಮವನ್ನೂ ತಿಳಿದಿರೋಣ. ಹರೀಶ್ ಎಂಬ ಯುವಕ ಅರ್ಧ ತುಂಡಾದ ದೇಹದೊಡನೆ ನರಳುತ್ತಿದ್ದಾಗಲೂ ತನಗಾಗಿ ಸಹಾಯ ಮಾಡದ ಮನುಷ್ಯರನ್ನು ದ್ವೇಷಿಸದೇ, ತನ್ನ ಅಂಗಾಗಗಳನ್ನು ದಾನ ಮಾಡಿ ಮಾದರಿಯಾದದ್ದು ನೆನಪಿಸಿಕೊಂಡು ಸಮಾಧಾನ ಮಾಡಿಕೊಳ್ಳೋಣ. ಹಾಗೆಯೇ ವರನಟ ಡಾ. ರಾಜ್ ನೇತ್ರದಾನ ಮಾಡಿ ಜನರುಗೆ ಪ್ರೇರಣೆಯಾದಪದನ್ನೂ ಸ್ಮರಿಸೋಣ. ದಿವಂಗತ ಲೋಕೇಶ್ ಮೊದಲಾದ ಮಹನೀಯರು ದೇಹದಾನ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸೋಣ.
ವೇದಿಕೆ ಕಾರ್ಯಕ್ರಮಗಳಲ್ಲಿ ಭಾಷಣ ಪ್ರಿಯರು, ಮೈಕಾಸುರರು ಇದ್ದರೆ, ಅಂತಹವರು ತಮ್ಮ ಆಸ್ತಿ ಬೇಕಾದರೂ ಕೊಟ್ಟಾರು ಸಮಯ ದಾನಕ್ಕೆ ಒಪ್ಪುವುದಿಲ್ಲ. ದಾನದಾನಗಳಲ್ಲಿ ಶ್ರೇಷ್ಠವಾದುದು ನಿಧಾನ, ಸಮಾಧಾನ ಎಂದು ಗೇಲಿ ಮಾಡುವ ಪಡ್ಡೆ ಮನಸ್ಸುಗಳು ಸಮಯದಾನದ ಮಹತ್ವವನ್ನು ವೇದಿಕೆ ಮೇಲೆ ಭೀಷಣ ಭಾಷಣ ಬಿಗಿಯುತಿರುವ ಅತಿಥಿ ಮಹೋದಯರಿಗೆ ಹೇಗೆ ತಿಳಿಸುವುದೆಂದು ಒದ್ದಾಡುತ್ತಿರುತ್ತಾರೆ. ಚೀಟಿ ಕಳಿಸಿಯೋ, ಕೆಮ್ಮಿ ಕ್ಯಾಕರಿಸಿ, ಗಡಿಯಾರ ನೋಡಿಕೊಂಡು, ಆಕಳಿಸಿ ಮೈಮುರಿದು, ತೂಕಡಿಸಿ, ಎದ್ದು ನಡೆದು, ನೇರ ಕೂತು… ಹೀಗೆ ನಾನಾ ಚೇಷ್ಟೆಗಳ ಮೂಲಕ ಸಂದೇಶ ಮುಟ್ಟಿಸಲು ಪ್ರಯತ್ನಿಸುತ್ತಿರುತ್ತಾರೆ. ಆ ಸಮಯದಲ್ಲಂತೂ ಮತ್ತೊಬ್ಬ ಭಾಷಣಕಾರರಿದ್ದು ಅವರು ಸ್ವಲ್ಪವೇ ಮಾತನಾಡಿಯೋ ಅಥವಾ ಮಾತನಾಡದೆಯೋ ಇದ್ದರೆ ಸಮಯದಾನದ ಪುಣ್ಯ ಅವರಿಗೆ ಸಲ್ಲುತ್ತದೆ.
ವಿದ್ಯೆ ಲೋಕಾನುಭವಕೆ ಹೆಬ್ಬಾಗಿಲೆನ್ನುತ್ತಾ ‘ವಿದ್ಯಾದಾನವೇ ಶ್ರೇಷ್ಠದಾನ’ ಎಂದು ತಿಳಿಯಲಾಗಿದೆ. ವಿದ್ಯಾವಂತರು ತಾವೂ ಬಾಳಿ ಮತ್ತೆ ನಾಕಾರು ಜನರ ಬಾಳ್ವೆಗಳನ್ನು ಬೆಳಗಿಯಾರೆಂದು ಇದರರ್ಥ. ಹಾಗೆಂದೇ ಹಿಂದಿನ ಕಾಲದಲ್ಲಿ ಅನ್ನಸತ್ರಗಳಿದ್ದಂತೆ ಪಾಠಶಾಲೆಗಳೂ, ಧರ್ಮಸತ್ರಗಳೂ ಇದ್ದವು. ಅಲ್ಲಿಯೇ ಅಕ್ಷರಾಭ್ಯಾಸ ಮಾಡಿಸಲಾಗುತ್ತಿತ್ತು. ಆ ಮೂಲಕ ವಿದ್ಯೆ ಕಲಿಸಲಾಗುತ್ತಿತ್ತು. ಕಲಿಸುವ ಗುರುವನ್ನು ದೇವರೆಂದು ನೋಡುವುದು ಉತ್ತಮ ಸಂಸ್ಕೃತಿ. ಗುರುಕಾಣಿಕೆಗಾಗಿ ತಲೆದಂಡವ ನೀಡುವ ಶಿಷ್ಯೋತ್ತಮರೂ ನಮ್ಮ ಕತೆ- ಪುರಾಣ/ಇತಿಹಾಸಗಳಲ್ಲಿ ಆಗಿಹೋಗಿಲ್ಲವೇ! ಒಂದಕ್ಷರ ಕಲಿಸಿದಾತ ಗುರು. ಗುರು ಸಾಕ್ಷಾತ್ ಪರಬ್ರಹ್ಮ!! ಹಾಗಾಗಿ ಗುರು ಮುಖೇನ ಕಲಿತ ವಿದ್ಯೆ ಬಾಳು ಬಂಗಾರ ಮಾಡುವುದು. ಗುರುಗಳೂ ಸಹ ಸ್ವಾರ್ಥ ಪರರಾಗಿರದೆ, ವಿದ್ಯಾದಾನ ಶ್ರೇಷ್ಠದಾನವೆಂದು ಪರಿಗಣಿಸುತ್ತಿದ್ದರು.
ವಸ್ತ್ರದಾನ, ಧನದಾನ,ಗೋದಾನ, ಕೇಶದಾನ ಮೊದಲಾದವು ಕೆಲವು ಸಮಾರಂಭಗಳಲ್ಲಿ ಕಡ್ಡಾಯವಾಗಿ ಆಚರಣೆಯಲ್ಲಿರುವ ವಿಚಾರ. ಇದು ದೋಷಪರಿಹಾರಕ್ಕೆ, ಯಾವುದೋ ಹರಕೆಗೆ ಯಾವುದೋ ಮನಃಶಾಂತಿಗೆ ನಡೆದು ಬಂದುದಾಗಿದ್ದರೂ ಇದರೊಳಗೂ ಮೋಸ ತಾರತಮ್ಯಕ್ಕೇನೂ ಕಡಿಮೆಯಿಲ್ಲ. ಬಡವರೆಲ್ಲಿಂದ ಇಂಥ ದಾನ ಕರ್ಮಗಳನ್ನು ಮಾಡಲಾದೀತು? ಉಳ್ಳವರು ಏನನ್ನಾದರೂ ದಾನ ಮಾಡಿಯಾರು! ಅಲ್ಲವೇ?
ಜೀವದಾನ, ಕ್ಷಮಾದಾನವು ನ್ಯಾಯದ ತಕ್ಕಡಿಯಲ್ಲಿ ತೂಗಿ ಪಡೆಯಬೇಕಾದ ದಾನ. ಈಗಂತೂ ಭಾರತದ ರಾಷ್ಟ್ರಪತಿಗಳಿಗೆ ಮರಣದಂಡನೆಗೆ ಗುರಿಯಾದ ಅಪರಾಧಿಗೂ ಕ್ಷಮಾದಾನ ನೀಡುವ ಅಧಿಕಾರವನ್ನು ನೀಡಲಾಗಿದ್ದು ಅದು ಅವರ ವಿವೇಚನೆಗೆ ಬಿಡಲಾಗಿದೆ. ಈಗ ಸಂದೇಶಗಳು ಟಣ್ ಎಂದು ಕ್ಷಣದಲ್ಲಿ ಸಿಗುವುದರಿಂದ ಕ್ಷಮಾದಾನ ಪಡೆದವರು ಬದುಕಬಹುದಾದರೂ, ಹಿಂದಿನ ದುರ್ಬರ ಕಾಲದಲ್ಲಿ ಸಕಾಲದಲ್ಲಿ ಕ್ಷಮಾದಾನ ತಲುಪದೇ ಸಾವಿನ ಮನೆ ಹೊಕ್ಕವರೆಷ್ಟೋ… ಬಹುಶಃ ನಮ್ಮ ಸಿನೆಮಾಗಳಲ್ಲಿ ಇಂಥ ಸನ್ನಿವೇಶಗಳನ್ನು ವಿಶೇಷ ಸೌಂಡ್ ಎಫೆಕ್ಟಿನೊಡನೆ ತೋರಿಸುವ ಮೂಲಕ ನೋಟಕರನ್ನು ಕುರ್ಚಿಯ ತುದಿ ಕೂರಿಸಿರುತ್ತಾರೆ.
ಪುತ್ರದಾನದ ಬಗ್ಗೆ ಹೆಚ್ಚು ಮಾತು ಕೇಳಿಬರದಿದ್ದರೂ, ಕನ್ಯಾದಾನದ ಬಗ್ಗೆ ಮಾತ್ರ ಹೆಂಗೂಸು ಹುಟ್ಟಿದ ಮುಹೂರ್ತದಲ್ಲೇ ಮಾತನಾಡುವುದು ಭಾರತದ ಸಂಪ್ರದಾಯ. ಮಕ್ಕಳಿಲ್ಲದ ಸೋದರ ಸಂಬಂಧಿಗೆ ಮನೆಯ ಕಿರಿಯ ಅಥವಾ ಹೆಚ್ಚು’ವರಿ’ ಮಗನನ್ನು ಸಾಗಹಾಕುವ ತಾಯ್ತಂದೆಯರು ಇದ್ದರೂ ಅವರ ಹೆತ್ತ ಕರುಳು ಕ್ಷಣವಾದರೂ ಹಿಂಡಿರದಿದ್ದೀತೆ? ಹೆಣ್ಣು ಮಗು ಸುಲಕ್ಷಣವಾಗಿ ಲಗ್ನವಾಗಿ ಒಂದು ಒಳ್ಳೆ ಮನೆ ಸೇರಿದರೆ ಹಿರಿಹಿರಿ ಹಿಗ್ಗುತ್ತಾರೆ. ‘ಕನ್ಯಾದಾನ’ ಬರೀ ಮದುವೆಯ ಮಾತಲ್ಲ. ಇಲ್ಲಿ ವಧು ಇನ್ನೂ ಕನ್ಯೆಯೇ ಇದ್ದಾಳೆ ಎಂದು ಡಂಗೂರ ಸಾರುವ ವಿಷಯ ಇರುವುದನ್ನು ಗಮನಿಸಬೇಕು. ಈಗ ಭಾರತೀಯ ಹೆಣ್ಣುಮಕ್ಕಳು ಚೆನ್ನಾಗಿ ಕಲಿತು ಕೆಲಸ ಹೊಂದಿ ಆರ್ಥಿಕ ಸ್ವಾತಂತ್ಯ್ರ ಗಳಿಸಿದ ಮೇಲೆ ಇಂಥಾ ಕನ್ಯಾದಾನದ ಅರ್ಥ ಬದಲಾಗಿದೆ. ಇಲ್ಲದಿದ್ದರೆ, ಅಪ್ರಾಪ್ತ ಬಾಲಕಿಯರ ಮದುವೆ ನಡೆಯಲು ಈ ಬಗೆಯ ದಾನವೂ ಒಂದು ಕಾರಣವಾಗುತ್ತದೆ.
ಅಧಿಕಾರ ದಾನದ ಮಾತು ಹರಿಶ್ಚಂದ್ರನ ಕಾಲಕ್ಕೆ ಪ್ರತಿಷ್ಠೆ ಗೌರವದ ವಿಚಾರವಾಗಿರಬಹುದು. ಕುರ್ಚಿಗಂಟಿ ಕೂರುವ, ವಂಶಾವಳಿಯ ಆಳ್ವಿಕೆ, ಕುಟುಂಬರಾಜಕಾರಣ ಮಾಡುವ, ನವ- ವಸಾಹುತುಶಾಹಿಯಂತೆ ಕೋರುವ ರಾಜಕೀಯ ವಾತಾವರಣವು, ಅಧಿಕಾರ ದಾನವನ್ನು ಕನಸಿನಲ್ಲಿಯೂ ನೆನದುಕೊಳ್ಳದೇನೋ…
ಗಾಂಧೀಜಿ, ವಿನೋಬಾರ ಕಾಲಕ್ಕೇ ಸರಿದು ಹೋಯ್ತು ಸಿರಿದಾನ, ಭೂದಾನ, ಆಭರಣದಾನ.. ಇನ್ನು ಪುರು-ಯಯಾತಿಯರ ಕಾಲಕ್ಕೇ ಯೌವನದಾನ ಮುಗಿಯಿತು. ಇನ್ನೇನಿದ್ದರು ಇನ್ನೂ ಬೇಕು ಮತ್ತೂ ಬೇಕೆನ್ನುವ ಸ್ವಾರ್ಥ ಜೀವನ.
ದಾನದೊಡನೆ ಸಿಗುವ ಸಾಧನಗಳನ್ನು ದಾನಕೊಟ್ಟವರ ಯೋಗ್ಯತೆ ಅಳೆಯಲು ಮಾಪಕವಾಗಿ ಬಳಸುವ ಮಂದಿಯೇ ಈಗ ಹೆಚ್ಚು. ಹೇಗೋ ಬಂದು ಸೇರಿಬಿಟ್ಟ ತಮಗೆ ಇಷ್ಟವಾಗದ ದಾನದ ವಸ್ತುವನ್ನು ಹಾಗೆಯೇ ಮತ್ತೊಂದು ನೆಪ ಮಾಡಿ ಮತ್ತೊಬ್ಬರಿಗೆ ದಾಟಿಸುವುದು ಈಗಿನವರ ಚಾಣಾಕ್ಷತನ. ಆದ್ದರಿಂದಲೇ ನಾವು ‘ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳಹಾಕುವುದು’…
*******************************************
ವಸುಂಧರಾ ಕದಲೂರು.
೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ಚೆನ್ನಾಗಿದೆ ಬರಹ ವಸುಂಧರ
Thank you ಸ್ಮಿತಾ
ಮೇಡಂ, ಅದ್ಭುತವಾದ ಎಲ್ಲಾ ವಿವರವುಳ್ಳ ಸಂಗ್ರಹಯೋಗ್ಯ ಲೇಖನ!
ಅಭಿನಂದನೆಗಳು.