ಗಜಲ್ ಜುಗಲ್ ಬಂದಿ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-13
ಏರಿದ ಏಣಿಯನು ಮರೆತುಬಿಟ್ಟರೆ ಹೇಗೆ
ಬೀಜವೂರಿದ ಕೈಗಳನು ಮರೆತುಬಿಟ್ಟರೆ ಹೇಗೆ
ನೋಟ ಮುಂದಿರುವುದೇನೋ ಸಹಜ
ಬೆನ್ನಿನ ಬಲವನು ಮರೆತುಬಿಟ್ಟರೆ ಹೇಗೆ
ಸಂಜೆಯ ಸೊಬಗಿಗೆ ಮನ ಹಿಗ್ಗಬಹುದು
ಮೊದಲ ಬೆಳಗನು ಮರೆತುಬಿಟ್ಟರೆ ಹೇಗೆ
ಬೆಳೆದ ಪೈರು ಮನೆಯ ಸೇರಿದರೆ ಸಾಕೇ
ನೆಲದ ಋಣವನು ಮರೆತುಬಿಟ್ಟರೆ ಹೇಗೆ
‘ರೇಖೆ’ಗೊಂದು ಗುರುತಿರಬಹುದು ಈಗ
ಮೂಲಬಿಂದುವ ಮರೆತುಬಿಟ್ಟರೆ ಹೇಗೆ
ರೇಖಾ ಭಟ್
**********************************
ಬಂದ ದಾರಿಯನು ಮರೆತು ಬಿಟ್ಟರೆ ಹೇಗೆ
ಎಡವಿದ ಕಲ್ಲನು ಮರೆತುಬಿಟ್ಟರೆ ಹೇಗೆ
ತಿರುಗಿ ನೋಡುವ ಪರಿಪಾಠವೂ ಉಂಟು
ಆಡಿಕೊಳ್ಳುವವರನು ಮರೆತುಬಿಟ್ಟರೆ ಹೇಗೆ
ಅನುದಿನದ ಕನವರಿಕೆ ಮಾತ್ರ ಪ್ರೀತಿಯೇನು
ಅಂತ್ಯಕ್ಕೆ ಜೊತೆಯನು ಮರೆತುಬಿಟ್ಟರೆ ಹೇಗೆ
ತಡೆದು ನಿಲ್ಲಿಸುತ್ತಾರೆ ಸಾಗುವ ಬದುಕನ್ನೂ ಇಲ್ಲಿ
ನದಿ ಕಡಲ ಸೇರುವುದನು ಮರೆತುಬಿಟ್ಟರೆ ಹೇಗೆ
ತಪ್ಪುಗಳ ಯಾರು ಮಾಡಲಾರರು “ಮಾಧವ”
ಕ್ಷಮಿಸುವ ಗುಣವನು ಮರೆತು ಬಿಟ್ಟರೆ ಹೇಗೆ
ಸ್ಮಿತಾ ಭಟ್
***********************