ಕಾವ್ಯಯಾನ
ಎದ್ದು ಬಿದ್ದು ಹೋಗುವ ಕವಿತೆ
ಶಂಕರಾನಂದ ಹೆಬ್ಬಾಳ
ಸೋತು ಸೊರಗಿದ ಜೀವಕೆ ಸಾಂತ್ವನವಾಗಿ,
ಮುರಿದ ಮನಸುಗಳ ಸೇತುವೆಯಾಗಿ,
ಬಡವರ ಕಂಬನಿಯೊರೆಸುವ ಕರವಸ್ತ್ರವಾಗಿ,
ಎದ್ದು ನಿಲ್ಲುವುದು ನನ್ನ ಕವಿತೆ..!!
ಮಾನವ ಧರ್ಮಕ್ಕೆ ಬೆಂಬಲವಾಗಿ,
ಹೆಣ್ಣಿನ ಆರ್ತನಾದಕ್ಕೆ ಇಂಬಾಗಿ,
ಶುದ್ದ ನಿರ್ಮಲ ಮನಸಿನ ನುಡಿಯಾಗಿ,
ಎದ್ದು ನಿಲ್ಲುವುದು ನನ್ನ ಕವಿತೆ..!!
ದುರುಳರ ಅಟ್ಟಹಾಸಕ್ಕೆ ಸಿಂಹಸ್ವಪ್ನವಾಗಿ,
ಪಾಪಿಷ್ಟರಿಗೆ ಪ್ರಾಯಶ್ಚಿತ್ತವಾಗಿ,
ಹೆಗಲಿಗಿಟ್ಟ ಜೋಡೆತ್ತಿನ ನೊಗವಾಗಿ,
ಎದ್ದು ನಿಲ್ಲುವುದು ನನ್ನ ಕವಿತೆ..!!
ದನಿತಗ್ಗಿದವರ ಪರವಾಗಿ,
ಶೋಷಣೆಗೆ ಪ್ರತಿಕಾರವಾಗಿ,
ಅಂಧಕಾರ ಕಳೆವ ಆಶಾಕಿರಣವಾಗಿ,
ಆಸೆಯಲ್ಲಿ,
ಎದ್ದು ನಿಲ್ಲುವುದು ನನ್ನ ಕವಿತೆ..!!
ಜಾತಿಮಥಪಂಥಗಳ ಎಲ್ಲೆದಾಟಿ,
ಮೌಢ್ಯಗಳ ಬೇಲಿ ಜಿಗಿದು,
ಸರ್ವತ್ರ ಸ್ವತಂತ್ರನಾಗಿ ,
ಯಾರ ಹಂಗಿಗೂ ಒಳಗಾಗದೆ
ಎದೆತಟ್ಟಿ,
ಎದ್ದು ನಿಲ್ಲುವುದು ನನ್ನ ಕವಿತೆ..!!
ಸಾರ್ವಭೌಮತ್ವವನ್ನು ಮೆರೆಯಲಿಲ್ಲ,
ಸಂಭ್ರಮವನ್ನು ಅನುಭವಿಸಲಿಲ್ಲ,
ಸುಖದಲ್ಲಿ ತಾನೊಮ್ಮೆಯು ತೇಲಲಿಲ್ಲ,
ಹೋರಾಟದಲ್ಲೆ ಜೀವ ಸವೆಸುತ್ತ
ಕೊನೆಗೊಮ್ಮೆ,
ಬಿದ್ದು ಹೋಗುವುದು ನನ್ನ ಕವಿತೆ..!!
************************