ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—37

ಆತ್ಮಾನುಸಂಧಾನ

ಬದುಕು ಕಟ್ಟಿಕೊಳ್ಳಲು

ಚದುರಿದ ಸನ್ಮಿತ್ರರು

Friendship Wall Art | Fine Art America

ಕೃಷ್ಣಮೂರ್ತಿ ಹೆಗಡೆ  ಹೀಗೆ ಮಾಂಸ ಸೇವನೆ ಮಾಡುವುದು ನನಗೆ ತೀರ ಅಚ್ಚರಿಯ ಸಂಗತಿಯಾಗಿಯೇ ತೋರಿತು.

……..

ಗೆಳೆಯ ಕೃಷ್ಣಮೂರ್ತಿ ಹೆಗಡೆ ನನ್ನ ಕೋಣೆಗೆ ಬಂದು ನೆಲೆಸಿದ ಬಳಿಕವಷ್ಟೇ ಆತನಿಗೆ ಮಾಂಸಹಾರವೂ ಇಷ್ಟವೆಂಬ ಸಂಗತಿ ನನಗೆ ತಿಳಿಯಿತು.

ವರ್ತಮಾನದಲ್ಲಿ ಯಾವ ಆಹಾರ ಕ್ರಮಗಳೂ ಯಾವುದೇ ಸಮುದಾಯಕ್ಕೆ ಸೀಮಿತ ಆಗಿಲ್ಲ ಎಂಬುದು ನಿಜ. ಆದರೆ ಅಂದಿನ ದಿನಗಳಲ್ಲಿ ಬ್ರಾಹ್ಮಣನೊಬ್ಬ ಮಾಂಸಹಾರ ಸೇವಿಸುವುದೆಂದರೆ ಅದು ಘನಘೋರ ಅಪರಾಧವೇ ಆಗಿತ್ತು. ಮತ್ತು ಸಂಧ್ಯಾವಂದನೆ,   ಗಾಯತ್ರಿ ಮಂತ್ರ ಜಪದ ಅನುಷ್ಠಾನ ಮುಂತಾದವುಗಳಲ್ಲಿ ನಿಷ್ಠೆ ತೋರುತ್ತಿರುವ ಕೃಷ್ಣಮೂರ್ತಿ ಹೀಗೆ ಮಾಂಸ ಸೇವನೆ ಮಾಡುವುದು ನನಗೆ ತೀರ ಅಚ್ಚರಿಯ ಸಂಗತಿಯಾಗಿಯೇ ತೋರಿತು.

ನಾವು ತಿಂಗಳಿಗೆ ಎರಡು ಬಾರಿಯಾದರೂ ಧಾರವಾಡ ನಗರದಜುಬಿಲಿ ಸರ್ಕಲ್ಸಮೀಪ ಇರುವಹೋಟೆಲ್ ಮಿಲನ್ನಲ್ಲಿ ಮಾಂಸದೂಟ ಮಾಡಿ ಬರುವುದನ್ನು ರೂಢಿಮಾಡಿಕೊಂಡಿದ್ದೆವು. ನಮ್ಮ ಇತರ ಬ್ರಾಹ್ಮಣ ಗೆಳೆಯರು ಬಹಳ ಮುಕ್ತವಾಗಿಯೇ ಕೃಷ್ಣ ಮೂರ್ತಿಯನ್ನು ಗೇಲಿ ಮಾಡತೊಡಗಿದರು. “ನಿಮ್ಮ ಹಾಗೆ ನಾನು ಕದ್ದು ತಿನ್ನುವವ ಅಲ್ಲನನಗೆ ಇಷ್ಟವಾದದ್ದು ನಾನು ತಿನ್ನುವುದಕ್ಕೆ ಯಾರ ಹಂಗೂ ಇಲ್ಲ…” ಎಂದೇ ಕೃಷ್ಣಮೂರ್ತಿ ಸೆಡ್ಡು ಹೊಡೆದು ಮಾಂಸಹಾರ ಸೇವನೆ ಮಾಡುತ್ತಿದ್ದ.

ಅವನ ನಿರ್ಭೀತ ನಿಲುವು ನನಗೆ ತುಂಬ ಮೆಚ್ಚುಗೆಯಾಯಿತು. ಎಲ್ಲ ಕಾರಣಗಳಿಂದಲೇ ಕೃಷ್ಣಮೂರ್ತಿ ಹೆಗಡೆ ನನ್ನ ಗೆಳೆಯರ ಬಳಗದಲ್ಲಿ ಅತ್ಯಂತ ಆಪ್ತನೆನಿಸಿದ.

ಎಂ. ಅಂತಿಮ ವರ್ಷದ ಓದಿನ ಸಂದರ್ಭದಲ್ಲಿ ಒಂದು ಮಹತ್ವಪೂರ್ಣವಾದ ಮಿತ್ರಲಾಭವಾಯಿತು. ಅದನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು.

ಶಾಲ್ಮಲಾ ಹಾಸ್ಟೆಲಿನಲ್ಲಿ ನನ್ನ ವಾಸ್ತವ್ಯ ಅನಿವಾರ್ಯವಾದದ್ದು ನನಗೆ ಅನುಕೂಲವೇ ಆಯಿತು. ಏಕೆಂದರೆ ಗೋಕರ್ಣದ ಹುಡುಗ ಜಯಂತ ಕಾಯ್ಕಿಣಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಎಂ.ಎಸ್ಸಿ ಮಾಡಲು ಬಂದವನು ಇದೇ ಹಾಸ್ಟೆಲಿನಲ್ಲಿ ವಸತಿಗಾಗಿ ಸೇರಿಕೊಂಡ. ಕುಮಟಾ ಕಾಲೇಜಿನಲ್ಲಿ ಬಿ.ಎಸ್ಸಿ ಓದಿದ ಜಯಂತ್ ಅದೇ ಕಾರಣದಿಂದ ನನಗೆ ಅಪರಿಚಿತನಾಗಿದ್ದನಾದರೂ ಸಾಹಿತ್ಯ ವಲಯದಲ್ಲಿ ಆರಂಭಿಕ ಆದರೂ ಮಹತ್ವದ ಹೆಜ್ಜೆಯಿಡುತ್ತಿದ್ದ ಜಯಂತ್ ಹೆಸರು ಕೇಳಿ ತಿಳಿದಿದ್ದೆ. ಅದಾಗಲೇಸಂಯುಕ್ತ ಕರ್ನಾಟಕಮೊದಲಾದ ದೈನಿಕಗಳಲ್ಲಿಸಾಕ್ಷಿಯಂಥ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಕಥೆ, ಕವನಗಳನ್ನು ಬರೆಯುತ್ತ ಪ್ರಸಿದ್ಧಿಗೆ ಬರುತ್ತಿದ್ದ ಜಯಂತ ಕಾಯ್ಕಿಣಿ ನಮ್ಮ ವಸತಿಗೃಹದಲ್ಲಿಯೇ ಉಳಿದಿರುವುದು ನನಗೆ ಸಂತೋಷವಾಗಿತ್ತು. ಪರಿಚಯ ಇರಲಿಲ್ಲ. ತರಗತಿಗೆ ಹೋಗುವಾಗ ಬರುವಾಗ ಆತನನ್ನು ನೋಡುತ್ತಿದ್ದೆ. ತುಂಬಾ ಮುದ್ದಾದ, ಚೂಟಿಯಾದ ಹುಡುಗ. ಆದರೆ ಯಾವಾಗಲೂ ಅವನ ಹಿಂದೆ ಮುಂದೆ ಒಂದು ದೊಡ್ಡ ಗೆಳೆಯರ ದಂಡೇ ಇರುತ್ತಿತ್ತು. ಸದಾ ಸಂಕೋಚದ ಮುದ್ದೆಯಾಗಿದ್ದ ನನಗೆ ಎಂದೂ ಜಯಂತನನ್ನು ಎದುರುಗೊಂಡು ಮಾತನಾಡಿಸಲು ಧೈರ್ಯವೇ ಬರಲಿಲ್ಲ. ಆತ ಕಾಣಸಿಕ್ಕಾಗೆಲ್ಲ ಅಭಿಮಾನದ ನೋಟ ಬೀರಿ ಸಮ್ಮನಿರುತ್ತಿದ್ದೆ.

ಆದರೆ ನನ್ನ ಸುದೈವ! ಒಂದು ದಿನ ಸ್ವತಃ ಜಯಂತ್ ಕಾಯ್ಕಿಣಿ ತನ್ನ ಗೆಳೆಯರ ಗುಂಪಿನೊಡನೆ ನನ್ನ ಕೋಣೆಗೆ ಬಂದು ಬಾಗಿಲು ತಟ್ಟಿದರು! ನನಗೆ ದಿಗಿಲಾಯಿತು. ಸ್ವಾಗತಿಸಿ ಕೂಡ್ರಿಸಿದೆ.

ಜಯಂತನಿಗೆ ಯಾರೋ ಹೇಳಿದರಂತೆನಿಮ್ಮ ಗೋಕರ್ಣ ಸಮೀಪದ ನಾಡುಮಾಸ್ಕೇರಿಯ ಒಬ್ಬ ದಲಿತ ಹುಡುಗ ಇದೇ ಹಾಸ್ಟೆಲ್ಲಿನಲ್ಲಿ ಇದ್ದಾನೆ…” ಎಂದು. ಕುತೂಹಲದಿಂದ ಜಯಂತ್ ನನ್ನನ್ನು ನೋಡಿ ಮಾತನಾಡಿಸಲು ನನ್ನ ಕೋಣೆಯನ್ನು ಅರಸಿ ಬಂದಿದ್ದರು.

ಅಂದಿನಿಂದ ಜಯಂತ್ ನನ್ನ ಪರಿಚಿತನಾಗಿದ್ದು ,ಮುಂದೆ ಸ್ನೇಹದಲ್ಲಿ ಮುಂದುವರಿದಿದ್ದು ನನ್ನ ಪಾಲಿನ ಅದೃಷ್ಟ ಮತ್ತು ಬಹುಮುಖ್ಯವಾದಮಿತ್ರ ಲಾಭಎಂದೇ ಭಾವಿಸಿದ್ದೇನೆ.

ಎಂ. ಪದವಿಯ ಬಳಿಕ ನಾವೆಲ್ಲರೂ ನಮ್ಮ ನಮ್ಮ ಬದುಕಿನ ಕ್ಷೇತ್ರಗಳನ್ನು ಆಯ್ದುಕೊಂಡು ಬೇರೆ ಬೇರೆ ದಿಕ್ಕಿಗೆ ತೆರಳುವುದು ಅನಿವಾರ್ಯವಾಯಿತು. ನನ್ನ ಗೆಳೆಯರಲ್ಲಿ ಹೆಚ್ಚಿನವರು ಉಪನ್ಯಾಸಕ ವೃತ್ತಿಯನ್ನೇ ಆಯ್ದುಕೊಂಡರು. ಜಿ.ಎಂ.ಹೆಗಡೆ ಸಂಶೋಧನೆಗೆ ತೊಡಗಿ ಡಾ.ಜಿ.ಎಂ ಹೆಗಡೆ ಆದ ಬಳಿಕ ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾದ. ಅಲ್ಲಿ ವಿಭಾಗ ಮುಖ್ಯಸ್ಥ, ಪ್ರಾಂಶುಪಾಲ ಇತ್ಯಾದಿ ಪದೋನ್ನತಿ ಪಡೆದು ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ನಾಮಾಂಕಿತ ಕನ್ನಡ ವಿದ್ವಾಂಸ, ವಿಮರ್ಶಕರೆಂದು ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.

ನನ್ನ ಬ್ರಾಹ್ಮಣೇತರ ಗೆಳೆಯರಲ್ಲಿ ಮುಖ್ಯರಾದ ಟಿ.ಎಸ್.ಗೊರವರ ಮತ್ತು ಅಲ್ಲಮಪ್ರಭು ಬೆಟ್ಟದೂರು ಎಂಬ ಇಬ್ಬರೂ ವೃತ್ತಿಯಿಂದ ಉಪನ್ಯಾಸಕರಾಗಿ ರಾಜ್ಯಬಂಡಾಯ ಚಳುವಳಿಯ ಮುಖ್ಯ ಲೇಖಕರೂ, ಸಂಘಟಕರೂ ಆಗಿ ಖ್ಯಾತರಾಗಿದ್ದಾರೆ.

ಬ್ರಾಹ್ಮಣ ಸನ್ಮಿತ್ರರಲ್ಲಿ ಜೆ.ಎಂ. ಹೆಗಡೆ, ಪಿ.ಜಿ.ಪಂಡಿತ್, ಆರ್.ಆರ್.ಹೆಗಡೆ, ಎಸ್.ಎನ್.ಭಟ್ ಮುಂತಾದವರೆಲ್ಲ ಉಪನ್ಯಾಸಕರಾಗಿಯೇ ಬದುಕು ಕಟ್ಟಿಕೊಂಡರು.

ಗೆಳೆಯ ಮೋಹನ ಭಟ್ ಮಾತ್ರ ತನ್ನ ಸ್ವಂತ ಊರು ಶಿರ್ಶಿಯಲ್ಲಿ ಕೃಷಿಕನಾಗಿ ನೆಲೆ ನಿಂತು ಉದ್ಯಮಿ ಆಗಿಯೂ ಹೆಸರು ಮಾಡಿದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುತ್ತಸಾಹಿತ್ಯ ಪರಿಷತ್ತುಇತ್ಯಾದಿ ಸಂಘಟನೆಯಲ್ಲಿ ಸಕ್ರಿಯರಾಗಿಯೂ ಇದ್ದರು. ಕವಿತೆ ಬರೆಯುತ್ತ, ನಾಟಕಗಳಲ್ಲಿ ಅಭಿನಯಿಸುತ್ತ ಜನಮನ್ನಣೆ ಗಳಿಸಿದ್ದರು. ಬಹಳ ಮುಖ್ಯವಾಗಿ, ಸಾಹಿತ್ಯ ಸಂಘಟನೆಯಲ್ಲಿಯೇ ಹೆಚ್ಚಿನ ಆಸಕ್ತಿ ಹೊಂದಿದ ಮೋಹನ್ ಭಟ್ ಕಳೆದ ಮೂರು ವರ್ಷಗಳ ಹಿಂದೆ ತಮ್ಮದೇ ವೇದಿಕೆಗೆ ನನ್ನನ್ನು ಆಮಂತ್ರಿಸಿ ಉಪನ್ಯಾಸ ಕೊಡಿಸಿದ್ದ. ಸಮಯದಲ್ಲಿ ನಮ್ಮ ಓದಿನ ದಿನಗಳನ್ನು ನೆನಪಿಸಿಕೊಂಡುಕತೆಗಾರನಾಗಿ ನಾನು ಗುರುತಿಸಿಕೊಂಡುದಕ್ಕೆ ನನ್ನನ್ನ ಅಭಿನಂದಿಸಿ ಸುಂದರವಾದಬಾಲ್ಪೆನ್ಒಂದನ್ನು ನೆನಪಿನ ಕಾಣಿಕೆಯಾಗಿ ಕೊಟ್ಟು ಕಳುಹಿಸಿದ್ದ.

ದುರ್ದೈವದ ಸಂಗತಿಯೆಂದರೆ ನನ್ನ ಮುದ್ದು ಮುಖದ ಪ್ರಿಯ ಸ್ನೇಹಿತ ಮೋಹನ್ ಭಟ್ ಎರಡು ವರ್ಷಗಳ ಹಿಂದೆ ಹೃದಯಾಘಾತದಿಂದ ಮಡಿದ ಆಘಾತಕಾರಿ ಸುದ್ದಿಯನ್ನು ನಾನು ಕೇಳಬೇಕಾಯಿತು.

ಗೆಳೆಯ ಕೃಷ್ಣಮೂರ್ತಿ ಹೆಗಡೆ ಎಲ್ಲರಂತೆ ಉಪನ್ಯಾಸಕನಾಗದೆ ತನ್ನ ಆಸಕ್ತಿಯ ಮಾದ್ಯಮ ಕ್ಷೇತ್ರವನ್ನು ಆಯ್ದುಕೊಂಡ. ಎಂ.. ಓದು ಮುಗಿಯುತ್ತಿದ್ದಂತೆ ಬೆಂಗಳೂರಿಗೆ ಹೊರಟು ಅಂದಿನ ಪ್ರಸಿದ್ಧ ವಾರಪತ್ರಿಕೆಯಾದಪ್ರಜಾಮತವಾರಪತ್ರಿಕೆಯಲ್ಲಿ ಕೆಲಸ ಆರಂಭಿಸಿದ. ಅಲ್ಲಿಯೂ ತನ್ನ ರೆಬೆಲ್ ವ್ಯಕ್ತಿತ್ವಕ್ಕೆ ತಕ್ಕಂತೆಬ್ರೇಕಿಂಗ್ ನ್ಯೂಸ್ವರದಿಗಾರನಾಗಿಯೇ ಸುದ್ದಿಯಾದ. ಅಂದಿನ ಕೋಲ್ಡಡ್ರಿಂಕ್ಸ್   ‘ಗೋಲ್ಡ್ಸ್ಫಾಟ್ಬಾಟಲಿಯಲ್ಲಿ ಪ್ಲಾಸ್ಟಿಕ್ ಚೂರು ಇರುವುದನ್ನು ಸುದ್ದಿಮಾಡಿ ಕಂಪನಿಯಲ್ಲಿ ಸಂಚಲನ ಸೃಷ್ಟಿಸಿದ್ದ. ಅಂದಿನ ಸ್ಟಾರ್ ನಟಿ ಮಂಜುಳಾ ಅವರ ಚೀಟಿ ವ್ಯವಹಾರವನ್ನು ವರದಿ ಮಾಡಿ ಕೋಲಾಹಲವನ್ನುಂಟು ಮಾಡಿದ.

ಕೆಲವು ಕಾಲದ ಬಳಿಕ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರನಾಗಿ ಸೇರಿಕೊಂಡು ಮಾಧ್ಯಮ ಕ್ಷೇತ್ರದಲ್ಲಿಯೇ ನೆಲೆ ನಿಂತುಕೊಂಡ. ಬಹುಶಃ ತೊಂಬತ್ತರ ದಶಕದಲ್ಲಿ ಕಾರವಾರ ಜಿಲ್ಲಾ ವರದಿಗಾರನೆಂದು ಕಾರವಾರದಲ್ಲಿ ಕೆಲಸ ಮಾಡುವಾಗ ಮತ್ತೆ ಒಂದೆರಡು ಬಾರಿ ಕೃಷ್ಣಮೂರ್ತಿ ಹೆಗಡೆಯನ್ನು ಕಾಣುವ ಅವಕಾಶ ದೊರೆಯಿತು.

ಒಮ್ಮೆ ಕಾರವಾರದಲ್ಲಿಗಂಡಭೇರುಂಡಚಲನ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ನನ್ನನ್ನು ಕರೆಸಿಕೊಂಡ ಕೃಷ್ಣಮೂರ್ತಿ ಚಿತ್ರತಂಡದ ಭೇಟಿಗೆ ಅವಕಾಶ ಪಡೆದುಕೊಂಡಿದ್ದ. ಅಂದು ಕಾರವಾರದ ಪ್ರತಿಷ್ಠಿತ ಗೋವರ್ಧನ ಹೋಟೆಲಿನಲ್ಲಿ ನಾಯಕ ನಟರಾದ ಶ್ರೀನಾಥ, ಶಂಕರನಾಗ್, ಖಳನಟ ವಜ್ರಮುನಿ ಮತ್ತು ನಾಯಕಿ ಜಯಮಾಲಾ ಅವರ ಜೊತೆಯಲ್ಲಿ ಒಂದೆರಡು ಗಂಟೆಗಳ ಕಾಲ ಸಮಯ ಕಳೆದದ್ದು ಒಂದು ಅವಿಸ್ಮರಣೀಯ ಸಂದರ್ಭವೇ ಆಗಿತ್ತು.

ಕೃಷ್ಣಮೂರ್ತಿ ತನ್ನ ಮಾಧ್ಯಮ ಕ್ಷೇತ್ರದ ಸೇವೆಯ ಕೊನೆಯ ಅವಧಿಯಲ್ಲಿ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಹುಬ್ಬಳ್ಳಿ ವಿಭಾಗದ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿ ಈಗ ನಿವೃತ್ತಿ ಹೊಂದಿದ್ದಾನೆ.

***********

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿ
ದೆ

Leave a Reply

Back To Top