ಕವಿತೆ
ಶ್ರದ್ಧೆ
ಎಂ. ಆರ್. ಅನಸೂಯ
ಸ್ಪರ್ಧೆಯಿದ್ದಾಗ ಶ್ರದ್ದೆ
ಹೊರಗಿನದು
ಜಂಗಮದ ಹಾಗೆ ಹೊಕ್ಕಿದ್ದು
ತನುವನಲಂಕರಿಸುವ ವಸ್ತ್ರ
ಬಹಿರ್ಮುಖಿ ನೋಟ
ಗೆಲುವೊಂದೇ ಪ್ರಧಾನ
ಅನ್ಯರ ಮೆಚ್ಚಿಸುವ ಹಂಬಲ
ಗಮ್ಯವೊಂದೇ ಗಮನ
ಗುರಿ ಮುಟ್ಟುವ ತನಕ ಇಲ್ಲದ ಸಾವಧಾನ
ಚಂಚಲವಾಗುವ ಅವಧಾನ
ಗುರಿ ಮುಟ್ಟದ ಮೊಲದ ಓಟ
ಓಡುವಾಗ ಸ್ವಾದಿಸದ ಹಾದಿಯ ಸೊಗಸು
ಸ್ಪರ್ಧೆಯಿಲ್ಲದ ಶ್ರದ್ದೆ
ಒಳಗಿನದು
ಸ್ಥಾವರ ತಾನೆ ಉದ್ಬವಿಸಿದ್ದು
ಮನದೊಳಂಕುರಿಸಿದ ಅಸ್ತ್ರ
ಅಂತರ್ಮುಖಿ ಒಳನೋಟ
ಆತ್ಮ ತೃಪ್ತಿಯ ಸಮಾಧಾನ
ಬದುಕಿನ ನೆಮ್ಮದಿಯ ಸಾಧನ
ಮೇಲಾಟವಿಲ್ಲದ ವ್ಯವಧಾನ
ತೃಪ್ತಿಯಾಗುವ ತನಕ ತಣಿಯದ ಮನ
ಅಚಲವಾಗಿ ನಿಂತ ಮನ
ಗುರಿ ಮುಟ್ಟಿದ ಆಮೆಯ ನಡಿಗೆ
ನಡಿಗೆಯಲಿ ಸ್ವಾದಿಸಿದ ಹಾದಿಯ ಸೊಗಸು
*************************