ದಾರಾವಾಹಿ

ಆವರ್ತನ

ಅದ್ಯಾಯ-28

Special Diwali Decor Set of 4 pcs Dot Mandala Art Handmade Rangoli to  Ranchi, India

ಮರುದಿನ ನಾಗರಹಾವು ಮತ್ತೆ ಭಾಗೀವನವನ್ನು ಪ್ರವೇಶಿಸಿ ತನ್ನ ರಹಸ್ಯ ಮಾರ್ಗವನ್ನು ಹಿಡಿದು ಹೊರಟಿತು. ಆದರೆ ಅದು ಇವತ್ತು ಸುಮಿತ್ರಮ್ಮನ ಮನೆಗೆ ಹೋಗದೆ ಅವರ ನೆರೆಮನೆಯ ರಾಜೇಶನ ಮನೆಯ ದೇವರ ಕೋಣೆಯನ್ನು ಹೊಕ್ಕಿತು. ರಾಜೇಶ ಅತೀವ ದೈವಭಕ್ತ. ಅವನು ಪ್ರತಿನಿತ್ಯ ಮುಂಜಾನೆದ್ದು ಸ್ನಾನ ಮಾಡಿ ತುಂಡು ಬೈರಾಸುಟ್ಟು ರಸ್ತೆಗಿಳಿಯುವವನು ತನ್ನ ವಠಾರದಲ್ಲಿ ಅದೆಷ್ಟು ಮನೆಗಳಿವೆಯೋ ಅವೆಲ್ಲದರ ದಂಡೆ, ಪಾಗರಗಳನ್ನು ಹತ್ತಿ ಜಿಗಿದು ಅಲ್ಲಿನ ಹೂವಿನ ಗಿಡಗಳನ್ನೆಲ್ಲ ಬಗ್ಗಿಸಿ ರೆಂಬೆಕೊಂಬೆಗಳ ಸಮೇತ ಮುರಿದು ಕಿತ್ತು ಬಗೆಬಗೆಯ ಹೂವುಗಳನ್ನು ಹರಿವಾಣದ ತುಂಬ ತುಂಬಿಕೊಂಡು ತಂದು ತನ್ನ ದೇವರ ಕೋಣೆಯಲ್ಲಿದ್ದ ಹತ್ತಿಪ್ಪತ್ತು ಬಗೆಯ ದೇವರ ಫೋಟೋಗಳ ಮುಡಿಗೇರಿಸಿ ದೀಪ ಹಚ್ಚಿ ಆರತಿ ಮಂಗಳಾರತಿ ಬೆಳಗಿಸುವವರೆಗಿನ ಬರೋಬ್ಬರಿ ಒಂದು ಗಂಟೆಯ ಪೂಜೆಯನ್ನು ನೆರವೇರಿಸದೆ ಅವನು ಎಂದೂ ತನ್ನ ದಿನಚರಿಯನ್ನು ಆರಂಭಿಸಿದವನಲ್ಲ. ಎಂದಿನಂತೆ ಇಂದೂ ಅವನು ಬೆಳಿಗ್ಗೆ ಹೂವುಗಳನ್ನು ಕೊಯ್ದುಕೊಂಡು ಬಂದು ದೇವರ ಕೋಣೆಗೆ ಹೋದ. ಅನೇಕ ದೇವರಗಳ ಮುಂದೆ ಚಕ್ಕಳ ಬಕ್ಕಳ ಹಾಕಿ ಭಕ್ತಿಯಿಂದ ಕುಳಿತು ಹಿಂದಿನ ದಿನದ ಬಾಡಿ ಮುದುಡಿದ್ದ ಹೂವುಗಳನ್ನೆಲ್ಲ ತೆಗೆದು ಮೂಲೆಯಲ್ಲಿದ್ದ ಹಳೆಯ ರಾಶಿಯ ಮೇಲೆಸೆದ. ತಾಜಾ ಹೂವುಗಳನ್ನೆತ್ತಿ ಮೊದಲಿಗೆ ಸರ್ವಶಕ್ತೆ ಮಹಾಕಾಳಿಯ ಮುಡಿಗೇರಿಸುವ ಆಸೆಯಿಂದ ಅವಳ ಫೋಟೋವನ್ನು ಸ್ವಲ್ಪವೇ ಮುಂದೆ ಬಾಗಿಸಿದನಷ್ಟೇ. ದೇವಿಯ ಹಿಂದುಗಡೆ ಅವಿತಿದ್ದ ಹಾವು ತಟ್ಟನೆ ಫೋಟೋದೆಡೆಗಳಿಂದ ಅರೆಹೆಡೆಯನ್ನು ತೂರಿಸಿ ಜೋರಾಗಿ ಬುಸುಗುಟ್ಟಿತು! ಮರುಕ್ಷಣ ಅವನ ಕೈಯಲ್ಲಿದ್ದ ಹರಿವಾಣ ಛಾವಣಿಗೆ ಚಿಮ್ಮಿಬಿಟ್ಟಿತು. ಹೂವುಗಳೆಲ್ಲ ಒಮ್ಮೆಲೇ ಸರ್ವದೇವರ ಮೇಲೂ ಪುಷ್ಪಾರ್ಚನೆಗೈಯಲ್ಪಟ್ಟವು. ಗಂಡನ ಬೊಬ್ಬೆಗೂ ಕಂಚಿನ ಹರಿವಾಣದ ಲಯತಪ್ಪಿದ ಕುಣಿತದ ಸದ್ದಿಗೂ ಹೆದರಿ ಕಂಗೆಟ್ಟ ರೇವತಿ ಧಾವಿಸಿ ಬಂದಳು. ಕಣ್ಣುಬಾಯಿ ಬಿಟ್ಟುಕೊಂಡು ತರತರ ಕಂಪಿಸುತ್ತಿದ್ದ ಗಂಡನನ್ನು ಹಿಡಿದುಕೊಂಡು, ‘ಏನು, ಏನಾಯ್ತುರೀ…?’ ಎಂದಳು ಆತಂಕದಿಂದ. ಆಗ ರಾಜೇಶ ಸ್ವಲ್ಪ ಹತೋಟಿಗೆ ಬಂದವನು ಹಾವಿನತ್ತ ಬೊಟ್ಟು ಮಾಡಿದ. ಅದನ್ನು ಕಂಡ ಅವಳೂ ಹೌಹಾರಿ ರಪ್ಪನೆ ಗಂಡನನ್ನು ಬಿಟ್ಟು ಹೊರಗೆ ನೆಗೆದವಳು, ‘ಅಯ್ಯಯ್ಯೋ ಇದು…ಇದೂ, ಸುಮಿತ್ರಮ್ಮನ ಮನೆಗೆ ಬಂದ ಅದೇ ಹಾವು ಮಾರಾಯ್ರೇ…!’ ಎಂದಳು ತಳಮಳಿಸುತ್ತ.

‘ಹೌದು ಮಾರಾಯ್ತೀ, ಅದೇ ಇರಬೇಕು…!’ ಎಂದ ಅವನೂ ಆತಂಕದಿಂದ. ರೇವತಿ ಕೂಡಲೇ ಸುಮಿತ್ರಮ್ಮನ ಸಹಾಯ ಪಡೆಯಲು ಗಂಡನಿಗೆ ಸೂಚಿಸಿದಳು. ಇಬ್ಬರೂ ಕಳವಳದಿಂದ ಸುಮಿತ್ರಮ್ಮನ ಮನೆಗೆ ಧಾವಿಸಿದರು. ವಿಷಯವನ್ನು ಅವರಿಗೆ ತಿಳಿಸಿ, ‘ನೀವೇ ಕಾಪಾಡಬೇಕು ಸುಮಿತ್ರಮ್ಮಾ…!’ ಎಂದು ಬೇಡಿಕೊಂಡರು. ಸುಮಿತ್ರಮ್ಮ ಮೊದಲಿಗೆ ಅವಕ್ಕಾದರು. ಆದರೆ ಸದ್ಯ ತಮ್ಮ ಮನೆಯ ಪೀಡೆಯೊಂದು ಪಕ್ಕದ ಮನೆಗೆ ತೊಲಗಿದ್ದನ್ನು ನೆನೆದು ಒಳಗೊಳಗೇ ಸಮಾಧಾನಪಟ್ಟರು. ‘ನೀವೇನೂ ಹೆದರಬೇಡಿ. ಆ ನಾಗರಹಾವು ಈ ವಠಾರದಲ್ಲಿ ಪದೇಪದೇ ಕಾಣಿಸಿಕೊಳ್ಳಲು ಕಾರಣ ಏನು ಮತ್ತು ಅದರ ನಿವಾರಣೆಯ ಮಾರ್ಗ ಯಾವುದು ಅಂತ ನಾವು ತಿಳಿದುಕೊಂಡಾಗಿದೆ. ಅದನ್ನು ಆಮೇಲೆ ತಿಳಿಸುತ್ತೇನೆ!’ ಎಂದು ಗತ್ತಿನಿಂದ ಅಂದವರು ಕೂಡಲೇ ದೇವರ ಕೋಣೆಗೆ ಹೋಗಿ ಅಕ್ಷತೆಕಾಳುಗಳನ್ನೂ ತೀರ್ಥ ಪ್ರಸಾದವನ್ನೂ ತೆಗೆದುಕೊಂಡು ಅವರೊಡನೆ ಹೊರಟರು.

   ರಾಜೇಶನ ಮನೆಗೆ ಬಂದ ಸುಮಿತ್ರಮ್ಮ ಅವನಿಗೆ ಉದ್ದದ ದೋಟಿಯನ್ನು ತರಲು ಸೂಚಿಸಿದರು. ಅವನು ತಕ್ಷಣ ತಂದೊಪ್ಪಿಸಿದ. ಆ ಕೋಲಿನಿಂದ ಅವರು ಒಂದೊಂದೇ ಫೋಟೋಗಳನ್ನು ಸರಿಸುತ್ತ ಹೋದರು. ಆದರೆ ಹಾವು ಕಾಣಿಸಲಿಲ್ಲ. ಅನುಮಾನ ಬಂದು ಕೋಣೆಯ ಮೂಲೆಯಲ್ಲಿದ್ದ ಕೊಳೆತ ಹೂವಿನ ರಾಶಿಯನ್ನೂ ಅಸಂಖ್ಯಾತ ನುಸಿ, ನೊಣಗಳು ಗುಂಯ್ಯಿಗುಟ್ಟುತ್ತಿದ್ದ ಒಡೆದ ತೆಂಗಿನ ಕಾಯಿ ಮತ್ತು ಕೊಳೆತ ಬಾಳೆಹಣ್ಣಿನ ಸಣ್ಣಗುಡ್ಡೆಯೊಂದನ್ನೂ ಕೆದಕಿದರು. ಹಾವು ಅದರೊಳಗಿತ್ತು. ಅದು ತಟ್ಟನೆ ಸೆಟೆದು ನಿಂತದ್ದು ಸುಮಿತ್ರಮ್ಮನನ್ನು ಕಂಡು ಇನ್ನಷ್ಟು ಬೆದರಿತು. ಆದರೆ ಅವರು ಇವತ್ತು ಹಾವನ್ನು ನೋಡಿ ಹಿಂದಿನಷ್ಟು ಹೆದರಲಿಲ್ಲ. ಕೂಡಲೇ ತಮ್ಮ ಎಂದಿನ ವಿಧಿಯನ್ನು ಭಕ್ತಿಯಿಂದ ನೆರವೇರಿಸಿ ಹಾವಿಗೆ ಕೈಮುಗಿದು ಹೊರಗೆ ನಡೆದರು. ರಾಜೇಶ ದಂಪತಿಯೂ ಡೊಗ್ಗಾಲೂರಿ ನಮಸ್ಕರಿಸಿ ಸುಮಿತ್ರಮ್ಮನ ಹಿಂದೆ ನಡೆದರು. ಆದ್ದರಿಂದ ಹಾವಿಗೆ ಈಗಲೂ ಅಲ್ಲಿಂದ ಓಡಿ ಹೋಗದೆ ವಿಧಿಯಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಹಾವು ಹೊರಟು ಹೋದುದನ್ನು ಗಮನಿಸಿದ ರಾಜೇಶ ದಂಪತಿ ಸುಮಿತ್ರಮ್ಮನಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.

   ಸುಮಿತ್ರಮ್ಮ ಅವರ ಗೌರವವನ್ನು ಸ್ವೀಕರಿಸಿ ಹೆಮ್ಮೆ ಪಟ್ಟವರು, ‘ನೋಡು ರಾಜೇಶ, ಈ ನಾಗರಹಾವನ್ನು ನಾವು ಆದಷ್ಟು ಬೇಗ ನಮ್ಮ ವಠಾರದಿಂದ ನಿವಾರಿಸಿಕೊಳ್ಳಬೇಕು. ಇದು ಎಲ್ಲರ ಮನೆಗಳಲ್ಲೂ ಯಾಕೆ ಕಾಣಿಸಿಕೊಳ್ಳುತ್ತಿದೆ ಎಂಬುದು ಗೊತ್ತಾಗಿದೆ. ಅದಕ್ಕೆ ಉದಾಹರಣೆ ಆ ಹಾವು ಇವತ್ತು ನಿನ್ನ ದೇವರ ಕೋಣೆಯಲ್ಲೇ ಕಾಣಿಸಿಕೊಂಡಿರುವುದು! ನೀವಿದನ್ನೊಂದು ಸಣ್ಣ ವಿಚಾರ ಅಂತ ಭಾವಿಸಬೇಡಿ. ಇದರ ಹಿಂದೆ ನಾಗದೇವರ ಯಾವುದೋ ದೊಡ್ಡ ಉದ್ದೇಶವಿದೆಯಂತೆ. ಅದಕ್ಕೆ ನೀನೀಗ ಒಂದು ಸಣ್ಣ ಕೆಲಸ ಮಾಡಬೇಕಾಗಿದೆ. ಏನೆಂದರೆ ನಮ್ಮ ವಠಾರದವರನ್ನೆಲ್ಲ ಇವತ್ತು ಸಂಜೆ ನಮ್ಮ ಮನೆಯಲ್ಲಿ ಸೇರುವಂತೆ ಹೇಳಿಕೆ ನೀಡಬೇಕು. ವಿಷಯವೇನೆಂಬುದನ್ನು ಅಲ್ಲಿ ಎಲ್ಲರ ಮುಂದೆ ವಿವರಿಸುತ್ತೇನೆ!’ ಎಂದು ತಮ್ಮ ಗಾಂಭೀರ್ಯದಲ್ಲಿ ಸ್ವಲ್ಪ ಕುತೂಹಲವನ್ನೂ ತುರುಕಿಸುತ್ತ ಸೂಚಿಸಿದರು. ಸುಮಿತ್ರಮ್ಮನಂತೆ ರಾಜೇಶ ದಂಪತಿಯೂ ಅತೀವ ನಾಗಭಕ್ತರು. ಹಾಗಾಗಿ ದೇವರಕೋಣೆಯಲ್ಲಿ ಹಾವನ್ನು ಕಂಡಾಗಿನಿಂದ ಅವರೂ ಅಧೀರರಾಗಿ ಏನೇನೋ ಅನುಮಾನ, ಗೊಂದಲಗಳಿಗೆ ಬಿದ್ದಿದ್ದರು. ಈಗ ಸುಮಿತ್ರಮ್ಮನ ಮಾತುಗಳಿಂದ ಇನ್ನಷ್ಟು ವಿಚಲಿತರಾದರು. ಆದ್ದರಿಂದ ರಾಜೇಶ ಮರುಪ್ರಶ್ನಿಸದೇ, ‘ಆಯ್ತು ಸುಮಿತ್ರಮ್ಮ ಹಾಗೆಯೇ ಮಾಡುವ. ಇದೋ ಈಗಲೇ ಹೊರಟೆ…!’ ಎಂದು ಹುರುಪಿನಿಂದ ಹೇಳಿ ಅವರೊಂದಿಗೇ ಹೊರಟವನು, ‘ಕೇಳಿ ಮಾರಾಯ್ರೇ ಕೇಳೀ…ಇವತ್ತು ಸಂಜೆ ಸುಮಿತ್ರಮ್ಮನವರ ಮನೆಯಲ್ಲಿ ನಾಗಸಂಬಂಧಿಯಾಗಿ ವಿಶೇಷ ಮಾತುಕತೆಯೊಂದು ನಡೆಯಲಿರುವ ಕಾರಣ ಬಡಾವಣೆಯ ಎಲ್ಲರೂ ಬಂದು ಸೇರಬೇಕಾಗಿ ಕಳಕಳಿಯ ವಿನಂತಿ!’ ಎಂಬಂತೆ ವಠಾರದ ಪ್ರತಿ ಮನೆಮನೆಗಳಿಗೂ ಡಂಗುರ ಸಾರುತ್ತ ಬಂದ.

ರಾಜೇಶನ ಹೇಳಿಕೆಗೆ ಓಗೊಟ್ಟ ಹೆಚ್ಚಿನ ಮನೆಯವರು ಅಂದು ಸಂಜೆ ಸಮಯಕ್ಕೆ ಸರಿಯಾಗಿ ವಿಶೇಷ ಕುತೂಹಲ ಮತ್ತು ಭಯಭಕ್ತಿಯಿಂದ ಬಂದು ಸುಮಿತ್ರಮ್ಮನ ಅಂಗಳದಲ್ಲಿ ಸೇರಿದರು. ಇನ್ನು ಕೆಲವರು ಒಲ್ಲದ ಮನಸ್ಸಿನಿಂದ ನಂಬಿಕೆಯೋ, ಮೂಢನಂಬಿಕೆಯೋ ಎಂಬ ಗೊಂದಲದಲ್ಲೇ ಬಂದು ನಿಂತುಕೊಂಡರು. ಆದರೆ ರಾಜೇಶ ಹೇಳಿಕೆ ನೀಡಲು ಹೋಗಿದ್ದಾಗ ಡಾಕ್ಟರ್ ನರಹರಿ ಮನೆಯಲ್ಲಿರಲಿಲ್ಲ. ಅವನಿಗೆ ಮರು ಹೇಳಿಕೆ ನೀಡಲು ರಾಜೇಶನೂ ಮರೆತಿದ್ದರಿಂದ ಅವನೊಬ್ಬನ ಗೈರುಹಾಜರಿಯಿತ್ತು. ಸುಮಿತ್ರಮ್ಮನ ಒತ್ತಾಯಕ್ಕೆ ಮಣಿದು ಲಕ್ಷ್ಮಣಯ್ಯ ತಮ್ಮ ಮನೆಯ ಮುಂದಿನ ವಿಶಾಲ ಅಂಗಳದಲ್ಲಿ ಸಭಾಧ್ಯಕ್ಷರಂತೆ ಆಸೀನರಾಗಿದ್ದರು. ಸುಂದರಯ್ಯ ಮತ್ತು ರಾಜೇಶನನ್ನು ಹೊರತುಪಡಿಸಿ ಮತ್ತ್ಯಾರಿಗೂ ಕುಳಿತುಕೊಳ್ಳಲು ಸುಮಿತ್ರಮ್ಮನ ಮನೆಯಲ್ಲಿ ಕುರ್ಚಿಗಳು ಇರಲಿಲ್ಲ. ಆದ್ದರಿಂದ ಉಳಿದವರು ಅಲ್ಲಲ್ಲಿ ನಿಂತುಕೊಂಡು, ಒಂದಷ್ಟು ಜನ ಇಂಟರ್‍ಲಾಕ್ ಹೊದೆಸಿದ್ದ ನೆಲದ ಮೇಲೆ ಮತ್ತು ತೆಂಗಿನ ಕಟ್ಟೆಯಲ್ಲಿ ಕುಳಿತು ಚರ್ಚೆಯಲ್ಲಿ ಭಾಗವಹಿಸಲು  ತಯಾರಾದರು.

   ಸುಮಿತ್ರಮ್ಮ ಅವರನ್ನುದ್ದೇಶಿಸಿ ಮಾತಾಡತೊಡಗಿದರು: ‘ಎಲ್ಲರಿಗೂ ನಮಸ್ಕಾರ… ಇವತ್ತು ನಾವಿಲ್ಲಿ ಸೇರಿರುವ ವಿಷಯ ನಮ್ಮೆಲ್ಲರ ಪಾಲಿಗೆ ಬಹಳ ಮುಖ್ಯವಾದದ್ದು ಅಂತ ಅನ್ನಿಸುತ್ತದೆ. ಯಾಕೆಂದರೆ ಒಂದು ಬಡಾವಣೆ ಎಂದರೆ ಅದೊಂದು ಅವಿಭಕ್ತ ಕುಟುಂಬವಿದ್ದಂತೆಯೇ! ಹಾಗಾಗಿ ಅಲ್ಲಿ ಯಾವ ಒಂದು ಕುಟುಂಬಕ್ಕೆ ಏನೇ ತೊಂದರೆಯಾದರೂ ಅದರ ಪರಿಣಾಮ ಒಂದಲ್ಲ ಒಂದು ರೀತಿಯಲ್ಲಿ ಉಳಿದ ಕುಟುಂಬಗಳ ಮೇಲಾಗುವುದೂ ಸ್ವಾಭಾವಿಕ. ಈಗ ಅಂಥದ್ದೇ ದೊಡ್ಡ ಸಮಸ್ಯೆಯೊಂದು ನಮ್ಮೆಲ್ಲರಿಗೂ ಬಂದು ಬಡಿಯುವುದರಲ್ಲಿದೆ. ಅದರ ಮೊದಲ ಸೂಚನೆಯೇ ಕೆಲವು ದಿನಗಳಿಂದ ನಾಗರಹಾವೊಂದು ನಮ್ಮೆಲ್ಲರ ಮನೆಗಳೊಳಗೂ ಕಾಣಿಸಿಕೊಳ್ಳುತ್ತ ಹೆದರಿಕೆ ಹುಟ್ಟಿಸುತ್ತಿರುವುದು. ನಮ್ಮ ವಠಾರದ ಪಕ್ಕದಲ್ಲೇ ಒಂದು ದೊಡ್ಡ ನಾಗಬನವಿರುವುದು ಎಲ್ಲರಿಗೂ ಗೊತ್ತಿದೆ. ಈ ಹಾವು ಅದೇ ಬನಕ್ಕೆ ಸೇರಿದ್ದಂತೆ. ನಮ್ಮ ಬಡಾವಣೆಯು ನಾಗನಡೆಯ ಜಾಗವಾಗಿರುವುದರಿಂದ ಅದು ಅಶುದ್ಧವಾಗಿದೆಯಂತೆ! ಅದರ ಸೂಚನೆ ನೀಡಲೇ ನಾಗಧೂತನು ಈ ಹಾವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ ಅಂತ ನಾವು ಮೊನ್ನೆ ಪ್ರಶ್ನೆಯಿಟ್ಟಾಗ ಏಕನಾಥ ಗುರೂಜಿಯವರು ಸ್ಪಷ್ಟಪಡಿಸಿದ್ದಾರೆ!’ ಎಂದು ಅರ್ಧ ವಿಷಯವನ್ನು ವಿವರಿಸಿದ ಸುಮಿತ್ರಮ್ಮ ಸ್ವಲ್ಪಹೊತ್ತು ಮಾತು ನಿಲ್ಲಿಸಿದರು. ಅಷ್ಟರಲ್ಲಿ, ‘ಅಲ್ವಾ ಮತ್ತೇ…! ನಾನು ನಿಮಗೆ ಆವತ್ತೇ ಹೇಳಲಿಲ್ಲವಾ ಸುಮಿತ್ರಮ್ಮ… ನಮ್ಮಿಂದ ನಾಗನಿಗೇನೋ ತೊಂದರೆಯಾಗಿರಬೇಕು. ಅದಕ್ಕೇ ಅವನು ಸುತ್ತಾಡುತ್ತಿದ್ದಾನೆ ಅಂತ. ಆದರೆ ಲಕ್ಷ್ಮಣಯ್ಯ ನನ್ನ ಮಾತಿಗೆ ಬೆಲೆನೇ ಕೊಡಲಿಲ್ಲ ನೋಡಿ…!’ ಎಂದು ಸುಂದರಯ್ಯ ತಮ್ಮ ಅಲೌಕಿಕ ಜ್ಞಾನವನ್ನೂ, ಅಂದಿನ ಅಸಮಾಧಾನವನ್ನೂ ಒಟ್ಟಿಗೆ ತೋರಿಸಿಕೊಂಡರು.

   ಅತ್ತ ಲಕ್ಷ್ಮಣಯ್ಯ ತಮ್ಮ ಹೆಂಡತಿಯ ಭಾಷಣವನ್ನೂ ಅದಕ್ಕೆ ಪ್ರತಿಕ್ರಿಯೆಯಾಗಿ ಪದೇಪದೇ ಬದಲಾಗುತ್ತಿದ್ದ ವಠಾರದವರ ಮುಖಭಾವಗಳನ್ನೂ ಗಮನಿಸುತ್ತಿದ್ದವರು, ಸುಂದರಯ್ಯನ ಮಾತಿನಿಂದ ತಟ್ಟನೆ ತಮ್ಮ ಗ್ರಹಿಕೆಯಿಂದ ಹೊರಗೆ ಬಂದು, ‘ಒಮ್ಮೆ ಸುಮ್ಮನಿರೋ ಹುಚ್ಚುಮುಂಡೆ ಮಗನೇ…!’ ಎಂದು ಒಳಗೊಳಗೇ ಬೈದುಕೊಂಡು ಅವರತ್ತ ಒಣ ನಗೆ ಬೀರಿದರು. ಅದನ್ನು ಗ್ರಹಿಸಿದ ಸುಂದರಯ್ಯ ಅವರಿಂದ ನೋಟವನ್ನು ಕಿತ್ತು ಸುಮಿತ್ರಮ್ಮನತ್ತ ನೆಟ್ಟರು. ‘ಹೌದು ಸುಂದರಯ್ಯ, ನಿಮ್ಮ ಮಾತು ಆವತ್ತು ನನಗೂ ನಿಜ ಅನ್ನಿಸಿತ್ತು. ಅದಕ್ಕೇ ಪ್ರಶ್ನೆಯಿಡಲು ಹೋಗಿದ್ದು. ಹ್ಞಾಂ ಅಂದಹಾಗೆ ನಮ್ಮ ವಠಾರವು ಯಾರಿಂದ ಅಶುದ್ಧವಾಗಿದೆ ಅಂತಲೂ ಅಲ್ಲಿ ತಿಳಿದು ಬಂತು!’ ಎಂದ ಸುಮಿತ್ರಮ್ಮ ತಲೆಯೆತ್ತಿ ಗೋಪಾಲ ದಂಪತಿಯನ್ನು ದಿಟ್ಟಿಸಿದರು. ಅಷ್ಟು ಮಂದಿ ಶ್ರೀಮಂತರೊಂದಿಗೆ ಎಲ್ಲರ ಹಿಂದುಗಡೆ, ತೆಂಗಿನಕಟ್ಟೆಯ ಸಮೀಪ ಅಸ್ಪೃಶ್ಯರಂತೆ ನಿಂತುಕೊಂಡು ಸುಮಿತ್ರಮ್ಮನ ಮಾತುಗಳನ್ನು ಆತಂಕದಿಂದ ಕೇಳಿಸಿಕೊಳ್ಳುತ್ತಿದ್ದ ಗೋಪಾಲ ದಂಪತಿಯು, ಸುಮಿತ್ರಮ್ಮ ಮಾತು ನಿಲ್ಲಿಸಿ ತಮ್ಮತ್ತ ನೋಡಿದಾಗ ತಣ್ಣಗೆ ಬೆವರಿದರು. ಅಯ್ಯಯ್ಯೋ ದೇವರೇ…! ಈಗೇನು ಮಾಡುವುದಪ್ಪಾ…? ಈ ದೊಡ್ಡವರೆಲ್ಲ ಸೇರಿ ನಮ್ಮನ್ನು ಇಲ್ಲಿಂದ ಓಡಿಸುವುದಕ್ಕೇ ಪ್ರಯತ್ನಿಸುತ್ತಿದ್ದಾರೋ ಏನೋ…? ಎಂದುಕೊಂಡ ರಾಧಾ ಕಳವಳದಿಂದ ಹಿಡಿಯಾಗಿ, ‘ಓ ಪಂಜುರ್ಲಿಯೇ ಕಾಪಾಡಪ್ಪಾ…!’ ಎಂದು ತನ್ನ ತವರಿನ ದೈವದೊಡನೆ ಆರ್ತಳಾಗಿ ಪ್ರಾರ್ಥಿಸಿ ಒತ್ತರಿಸಿ ಬಂದ ದುಃಖವನ್ನು ಹತ್ತಿಕ್ಕಿಕೊಂಡಳು. ಆದರೆ ಗೋಪಾಲ ಇಂದು ನಿರ್ಭಯನಾಗಿದ್ದ. ಕಾರಣ ಅವನಲ್ಲಿ ಆವತ್ತು ತಾನು ಮುತ್ತಯ್ಯನಿಗೆ ಗದರಿಸಿದಂಥ ಉದ್ರಿಕ್ತಭಾವವು ಜಾಗ್ರತಗೊಂಡಿತ್ತು. ಆದ್ದರಿಂದ ತಮ್ಮತ್ತ ದೃಷ್ಟಿ ಹರಿಸಿದ ಸುಮಿತ್ರಮ್ಮನೊಂದಿಗೆ ಇನ್ನೂ ಕೆಲವರನ್ನು ದಿಟ್ಟಿಸಿದವನು, ನಾವು ಯಾರಿಗೆ ಯಾಕೆ ಹೆದರಬೇಕು…? ನಾವೇನು ಇವರ ಜಾಗದಲ್ಲಿ ಅಕ್ರಮವಾಗಿ ಬಂದು ಮನೆ ಕಟ್ಟಿ ಕುಳಿತಿದ್ದೇವಾ? ಇವರಷ್ಟು ಅಲ್ಲದಿದ್ದರೂ ನಾವೂ ಲಕ್ಷ ಲಕ್ಷ ಲಕ್ಷ ಕೊಟ್ಟೇ ಜಾಗ ಕೊಂಡಿರುವುದು. ಅದೇನಾಗುತ್ತದೋ ನೋಡಿಯೇ ಬಿಡುವ! ಎಂಬ ಭಾವದಿಂದ ಎದೆ ಸೆಟೆಸಿ ನಿಂತ.   

   ಅಷ್ಟರಲ್ಲಿ ರಾಜೇಶ ಮಾತಾಡಿದ, ‘ಅಶುದ್ಧ ಆಗಿರುವುದಂತೂ ಖಂಡಿತಾ ಹೌದು ಸುಮಿತ್ರಮ್ಮ. ಅದು ಆ ಹಾವಿನ ಭಯಂಕರ ವರ್ತನೆಯಿಂದಲೇ ತಿಳಿಯುತ್ತದೆ. ಆದರೆ ಹೇಗೆ ಮತ್ತು ಯಾವ ರೀತಿಯಿಂದ ಆಗಿದೆ ಅನ್ನುವುದನ್ನು ನೀವೇ ಹೇಳಬೇಕು!’ ಎನ್ನುತ್ತ ಸುಮಿತ್ರಮ್ಮನನ್ನು ನೋಡಿದ. ಆದರೆ ಅದಕ್ಕೆ ಅವರು ಉತ್ತರಿಸಲು ಬಾಯಿ ತೆರೆಯುವಷ್ಟರಲ್ಲಿ, ಅವನು ಮತ್ತೆ, ‘ಮಾಂಸಹಾರ ಮಾಡುವ ಜನ ಬನದ ಹತ್ತಿರ, ನಾಗನಡೆಯ ಜಾಗದಲ್ಲಿ ಅಥವಾ ಹುತ್ತದ ಸುತ್ತಮುತ್ತ ಎಲ್ಲೂ ವಾಸಿಸಬಾರದು ಅಂತ ಹೇಳುತ್ತಾರೆ. ಬಹುಶಃ ಅದರಿಂದಾಗಿಯೇ ಇರಬಹುದಾ…?’ ಎಂದು ಮತ್ತೊಮ್ಮೆ ಸುಮಿತ್ರಮ್ಮನತ್ತಲೂ ಉಳಿದವರತ್ತಲೂ ಪ್ರಶ್ನಾರ್ಥಕವಾಗಿ ನೋಡಿದವನು, ‘ಒಂದು ವೇಳೆ ಹಾಗಿದ್ದರೆ ನಾವೂ ಅಲ್ಪ ಸ್ವಲ್ಪ ಮಾಂಸಹಾರಿಗಳೇ ಸುಮಿತ್ರಮ್ಮ. ಆದರೆ ಒಂದು ಮಾತನ್ನು ಈಗಲೇ ಸ್ಪಷ್ಟಪಡಿಸಿಬಿಡುತ್ತೇನೆ. ನಾವು ಯಾವಾಗಲೋ ಅಪರೂಪಕ್ಕೊಮ್ಮೆ ಮೀನು, ಮಾಂಸ ತಿನ್ನುವವರು. ಅದರ ಒಂಚೂರು ಹಾಳು ಮೂಳನ್ನೂ ಹೊರಗೆಲ್ಲೂ ಎಸೆಯದೆ ನಾಲ್ಕೈದು ದಿನ ಫ್ರೀಡ್ಜ್‍ನಲ್ಲಿಟ್ಟು ನಮ್ಮ ಡ್ಯಾನಿಗೂ, ಪುಸ್ಸಿಗೂ (ಡಾಬರ್‍ಮನ್ ಜಾತಿಯ ನಾಯಿ ಮತ್ತು ಬೆಕ್ಕು!) ಹಾಕಿ ಮುಗಿಸುತ್ತೇವೆ. ಯಾಕೆಂದರೆ, ಈ ವಠಾರದಲ್ಲಿ ಮಡಿಮೈಲಿಗೆಯ ಜನರೇ ಹೆಚ್ಚಾಗಿರುವುದರಿಂದ ಅವರ್ಯಾರಿಗೂ ನಮ್ಮಿಂದ ತೊಂದರೆಯಾಗಬಾರದು ಅಂತ ನಾನಿವಳಿಗೆ ಮೊದಲೇ ತಾಕೀತು ಮಾಡಿದ್ದೇನೆ. ಹಾಗಾಗಿ ಇವಳು ಮೀನು ಮಾಂಸದಡುಗೆಯ ವಾಸನೆಯನ್ನೂ ಮನೆಯಿಂದ ಹೊರಗೆ ಹೋಗಲು ಬಿಡುವುದಿಲ್ಲ!’ ಎಂದು ಗತ್ತಿನಿಂದ ಹೇಳಿದವನು, ‘ಅಲ್ವೇನೇ…?’ ಎಂಬಂತೆ ಹೆಂಡತಿಯನ್ನು ದಿಟ್ಟಿಸಿದ. ಅದಕ್ಕವಳು ತಟ್ಟನೆ, ‘ಹೌದು, ಹೌದು…!’ ಎಂದು ಗೋಣಲ್ಲಾಡಿಸಿದಳು. ಆಗ ಉಳಿದ ಮಾಂಸಹಾರಿಗಳಲ್ಲೂ ಬಹುತೇಕರು ಧೈರ್ಯ ತಂದುಕೊಂಡು ಸರಿಸುಮಾರಾಗಿ ರಾಜೇಶನಂಥದ್ದೇ ಸಮರ್ಥನೆಗಳನ್ನು ಕೊಟ್ಟುಕೊಳ್ಳುತ್ತ ಒಟ್ಟಾರೆ ಈ ವಠಾರವು ನಮ್ಮಿಂದ ಅಶುದ್ಧವಾದುದೇ ಅಲ್ಲ! ಎಂಬಂತೆ ಸಾಬೀತುಪಡಿಸುತ್ತ ಮಾತಾಡಿದರು. ಆದರೆ ಸುಂದರಯ್ಯನೂ, ಬ್ಯಾಂಕರ್ ನಾರಾಯಣರೂ ಚಕಾರವೆತ್ತಲಿಲ್ಲ. ಏಕೆಂದರೆ ಅವರಿಬ್ಬರೂ ಅದೆಂಥ ಮಾಂಸಹಾರಿಗಳೆಂದರೆ ಮಂಜುಗಡ್ಡೆ ಹಾಕಿದ ಮೀನನ್ನಾಗಲೀ ಫಾರಮ್ಮಿನ ಕೋಳಿಗಳನ್ನಾಗಲೀ ಎಂದೂ ಕಣ್ಣೆತ್ತಿಯೂ ನೋಡಿದರಲ್ಲ. ಬದಲಿಗೆ ಮೂರು ನಾಲ್ಕು ಕಿಲೋಮೀಟರ್ ದೂರದ ಮೀನಿನ ಬಂದರಿಗೆ ಹೋಗಿ ಹಸಿಹಸಿ ಮೀನುಗಳನ್ನೂ ಹೆಚ್ಚು ಬೆಲೆಯ ನಾಟಿ ಕೋಳಿಗಳನ್ನೂ ತಂದು ತಿನ್ನುವಂಥ ಪರಿಶುದ್ಧ ಮಾಂಸಹಾರಿಗಳ ಪಟ್ಟಿಗೆ ಸೇರಿದ್ದವರವರು. ಹಾಗಾಗಿ ಅವರಿಬ್ಬರಿಗೆ ರಾಜೇಶನ ಒಣ ವಿವರಣೆಗಳು ಸರಿಬರಲಿಲ್ಲ. ಆದ್ದರಿಂದ ಅವರು ಅವನನ್ನು ಕೆಕ್ಕರಿಸಿ ನೋಡುತ್ತ ಕುಳಿತಿದ್ದರು.

   ಎಲ್ಲರ ಮಾತುಗಳನ್ನು ಕೇಳಿಸಿಕೊಂಡ ಸುಮಿತ್ರಮ್ಮ ಮಾತಾಡತೊಡಗಿದರು. ‘ಹೌದು ಹೌದು. ನೀವೆಲ್ಲರೂ ಮಾಂಸಹಾರಿಗಳೆಂದು ನನಗೆ ಗೊತ್ತಿದೆ ಮತ್ತು ಅದನ್ನೆಷ್ಟೊಂದು ನೇಮನಿಷ್ಠೆಯಿಂದ ಸೇವಿಸುತ್ತೀರಿ ಅಂತಲೂ ತಿಳಿದಿದೆ. ಹಾಗಾಗಿ ಈ ವಠಾರದಲ್ಲಿ ಅಶುದ್ಧವಾಗಿರುವುದು ನಿಮ್ಮ ಯಾರಿಂದಲೂ ಅಲ್ಲ. ಅದು ಈ ಬಡಾವಣೆಯ ಕೊನೆಯಲ್ಲಿರುವ ಮತ್ತು ಆ ನಾಗಬನಕ್ಕೆ ಹತ್ತಿರವಿರುವ ಗೋಪಾಲನ ಕುಟುಂಬದಿಂದಲೇ ಆಗಿರುವುದು ಅಂತ ಗುರೂಜಿಯವರ ಬಲ್ಮೆಯಿಂದ ಕಣ್ಣಿಗೆ ಕಟ್ಟಿದಂತೆ ತಿಳಿದು ಬಂದಿದೆ!’ ಎಂದು ತಾವೇ ಗುರೂಜಿಯ ಪರಕಾಯ ಪ್ರವೇಶ ಮಾಡಿ ಕಂಡಷ್ಟು ನಿಖರವಾಗಿ ಹೇಳಿಬಿಟ್ಟರು. ಹಾಗಾಗಿ ಅಷ್ಟರವರೆಗೆ ಇತರ ಮಾಂಸಹಾರಿಗಳೆಲ್ಲ ಒಳಗೊಳಗೇ ತಳಮಳಿಸುತ್ತಿದ್ದವರು ಒಮ್ಮೆಲೇ ನೆಮ್ಮದಿಯ ಉಸಿರು ಬಿಟ್ಟು ರಪ್ಪನೆ ಗೋಪಾಲ ದಂಪತಿಯತ್ತ ಹೊರಳಿ ಆ ಬಡಪಾಯಿಗಳನ್ನು ಅಸಹನೆ, ವಿಷಾದದಿಂದ ನೋಡಿದರು.

   ‘ನಿಮಗೆ ಇನ್ನೊಂದು ಸತ್ಯವನ್ನೂ ಹೇಳಬೇಕು. ಆವತ್ತು ಆ ನಾಗರಹಾವು ನಮ್ಮ ಮನೆಗೆ ಬರುವ ಒಂದು ವಾರದ ಮುಂಚೆ ಗೋಪಾಲನ ಮನೆಯಲ್ಲೇ ಮೊದಲು ಕಾಣಿಸಿಕೊಂಡಿತ್ತು. ಆದರೆ ಅದನ್ನವರು ಹೆದರಿಸಿ ಓಡಿಸಿದ್ದರು!’ ಎಂದು ಸುಮಿತ್ರಮ್ಮ ಏರುಧ್ವನಿಯಲ್ಲಿ ಹೇಳಿದವರು, ‘ಏನಂತೀಯಾ ರಾಧಾ ಹೌದಲ್ಲವಾ…?’ ಎಂದು ಅವಳನ್ನು ತಿವಿಯುವಂತೆ ಪ್ರಶ್ನಿಸಿದರು. ರಾಧಾ ಅವಕ್ಕಾಗಿ, ‘ಹ್ಞೂಂ ಹೌದು. ಆದರೆ ಮನೆಯೊಳಗೆ ಅಲ್ಲ ಅಂಗಳಕ್ಕೆ ಬಂದಿತ್ತು…!’ ಎಂದಳು ಅಳುಕುತ್ತ. ಅಷ್ಟರಲ್ಲಿ ಗೋಪಾಲನೂ ನೆಟ್ಟಗಾದ. ‘ಹೌದು ಸುಮಿತ್ರಮ್ಮ ಹಾವು ಬಂದಿತ್ತು. ಆದರೆ ನಮ್ಮದು ಮಕ್ಕಳು ಮರಿಗಳು ಮತ್ತು ಒಂದಷ್ಟು ಸಾಕುಪ್ರಾಣಿಗಳೆಲ್ಲ ಇರುವಂಥ ಮನೆಯಲ್ಲವಾ. ಹಾಗಾಗಿ ನಮ್ಮಿಂದ ಆ ಹಾವಿಗೂ ಅದರಿಂದ ನಮಗೂ ತೊಂದರೆಯಾಗಬಾರದು ಅಂತಲೇ ನಾನು ಬಹಳ ಜಾಗ್ರತೆಯಿಂದ ಅದನ್ನು ಆ ಬನದತ್ತ ಕಳುಹಿಸಿ ಬಂದದ್ದು ಹೌದು. ಆದರೆ ನಾವೂ ನಾಗನನ್ನು ನಂಬುವವರೇ ಅಲ್ಲವಾ ಸುಮಿತ್ರಮ್ಮ. ಹಾಗಾಗಿ ಆ ಹಾವಿಗೆ ಚೂರೂ ನೋವು ಮಾಡಲು ಹೋಗಲಿಲ್ಲ!’ ಎಂದು ಖಡಕ್ಕಾಗಿ ಉತ್ತರಿಸಿದ.

ಗೋಪಾಲನ ಮಾತು ಸುಮಿತ್ರಮ್ಮನಿಗೆ ಮುಖಕ್ಕೆ ಹೊಡೆದಂತೆನಿಸಿತು. ಅವರು ರಪ್ಪನೇ ಉದ್ರಿಕ್ರರಾಗಿ, ‘ಅದು ಸರಿ ಗೋಪಾಲ…,ಆದರೆ ಹಾಗೆಲ್ಲಾ ಮಾಡುವ ಮೊದಲು ನಮ್ಮನ್ನೊಂದು ಮಾತು ಕೇಳಬೇಕು ಅಂತ ಅನಿಸಲಿಲ್ಲವಾ ನಿಂಗೆ…? ಯಾಕೆ ಕೇಳಲಿಲ್ಲ? ಆ ಹಾವು ಮೊದಲು ನಿಮ್ಮ ಮನೆಗೇ ಯಾಕೆ ಬಂತು ಅಂತನಾದರೂ ಯೋಚಿಸಿದ್ದೀಯಾ? ನಿಮ್ಮಿಂದಾಗಿಯೇ ಇಡೀ ವಠಾರದವರು ನಾವೆಲ್ಲ ಅನುಭವಿಸುವಂತಾಗಿದೆ ಎಂಬುದು ನಿನಗೆ ಗೊತ್ತುಂಟಾ? ಆ ನಿನ್ನ ಘನಕಾರ್ಯದಿಂದಾಗಿಯೇ ಹಾವು ನಮ್ಮ ಮನೆಗೂ ರಾಜೇಶನ ಮನೆಗೂ ಬಂದು ಕಾಣಿಸಿಕೊಂಡಿದ್ದು! ಅದಕ್ಕಿಂತ ಮೊದಲು ಅದು ನಿಮ್ಮ ಮನೆಗೆ ಬರಲು ಕಾರಣ, ನೀವು ಸಾಕಿರುವ ಆ ಹಾಳು ಪ್ರಾಣಿಗಳು ಮತ್ತು ಅವುಗಳ ಹೊಲಸು ಗಲೀಜಂತೆ! ನಾಗದೇವನಿಗೆ ಅಶುದ್ಧವಾಗಲೂ ಅದೇ ಕಾರಣ ಅಂತ ಗುರೂಜಿಯವರೇ ಹೇಳಿದ್ದಾರೆ! ಇದಕ್ಕೇನು ಹೇಳುತ್ತೀರೀ…?’ ಎಂದು ಸುಮಿತ್ರಮ್ಮ ಗೋಪಾಲ ದಂಪತಿಯ ಎದೆಯ ಮೇಲೆ ನೆಗೆದು ಕುಳಿತು ಕೊರಳು ಹಿಸುಕಿದಂತೆಯೇ ಪ್ರಶ್ನಿಸಿದರು. ಆದರೆ ಅಷ್ಟು ಕೇಳಿದ ಗೋಪಾಲನ ಧೈರ್ಯ ತಟ್ಟನೆ ಕುಸಿಯಿತು. ಆತ ನಿರುತ್ತರನಾದ. ರಾಧಾಳೂ ತಳಮಳಗೊಂಡವಳಿಗೆ ಅಳುವುಕ್ಕಿ ಬಂತು. ‘ಅಯ್ಯಯ್ಯೋ ದೇವರೇ…! ತಿಳಿಯದೆ ನಮ್ಮಿಂದೇನೋ ತಪ್ಪು ನಡೆದಿರಬಹುದು ಸುಮಿತ್ರಮ್ಮಾ. ತೀರಾ ಬಡವರು ನಾವು! ಹಿಂದೆಲ್ಲಾ ಸ್ವಂತದ್ದೊಂದು ನೆಲೆಯಿಲ್ಲದೆ ಎಷ್ಟೋ ವರ್ಷ ಎಲ್ಲೆಲ್ಲೋ ಪರದಾಡಿಕೊಂಡು ಬದುಕಿದೆವು. ಕೊನೆಗೆ ಸೋತು ಸುಣ್ಣವಾಗುವ ಹೊತ್ತಿಗೆ ದೇವರೇ ದಯೆ ತೋರಿಸಿ ಈ ಜಾಗವನ್ನು ಕರುಣಿಸಿದ ಅಂತ ಕಾಣಿಸುತ್ತದೆ. ಹಾಗಾಗಿ ಸ್ವಲ್ಪ ನೆಮ್ಮದಿಯನ್ನು ಕಾಣುತ್ತಿದ್ದೇವೆ. ಹೀಗಿರುವಾಗ ಇನ್ನು ಮುಂದೆ ನೀವಲ್ಲದೆ ನಮಗೆ ಬೇರೆ ಯಾರೂ ದಿಕ್ಕಿಲ್ಲ ಸುಮಿತ್ರಮ್ಮಾ. ದಯವಿಟ್ಟು ನಮ್ಮ ಮೇಲೆ ಕರುಣೆ ತೋರಿಸಬೇಕು…!’ ಎಂದು ಕೈಮುಗಿದು ಗಳಗಳನೇ ಅಳುತ್ತಾ ಬೇಡಿಕೊಂಡಳು.

  ಅತ್ತ ಸುಮಿತ್ರಮ್ಮನ ಸರ್ವಾಧಿಕಾರದ ಮಾತುಗಳನ್ನೂ ರಾಧಾಳ ಅಳುವನ್ನೂ ಕಂಡ ನಾರಾಯಣರಿಗೆ ಕಸಿವಿಸಿಯಾಯಿತು. ಆದ್ದರಿಂದ ಅವರು, ‘ಅಳಬೇಡ, ಅಳಬೇಡ ರಾಧಾ… ನಾವೆಲ್ಲ ಇದ್ದೇವೆ. ಎಲ್ಲ ಸಮ ಮಾಡುವ…!’ ಎಂದು ಸಾಂತ್ವನಿಸಿದವರು, ‘ಅದೆಲ್ಲ ಆಗಿ ಹೋಯ್ತಲ್ಲ ಸುಮಿತ್ರಮ್ಮಾ ಬಿಟ್ಟುಬಿಡುವ. ಈಗ ಅದಕ್ಕೆ ಪರಿಹಾರ ಏನು ಅನ್ನುವುದನ್ನು ಮಾತಾಡುವ!’ ಎಂದರು ತುಸು ಖಾರವಾಗಿ. ಆಗ ಸುಮಿತ್ರಮ್ಮ ಸ್ವಲ್ಪ ತಣ್ಣಗಾದರು. ಆದರೂ ಸೋಲೊಪ್ಪಿಕೊಳ್ಳದೆ, ‘ಅದನ್ನೇ ನಾನೂ ಹೇಳಲು ಹೊರಟಿದ್ದು ನಾರಾಯಣರೇ…! ಇವರು ಗಂಡ ಹೆಂಡತಿ ನಿನ್ನೆ ಬೆಳಿಗ್ಗೆ ನನ್ನೆದುರು ಬೆಪ್ಪು ತಕ್ಕಡಿಗಳಂತೆ ತಪ್ಪೊಪ್ಪಿಕೊಂಡವರು ಈಗ ಎಲ್ಲರೆದುರು ಕಥೆ ತಿರುಗಿಸಿ ಮಾತಾಡುತ್ತಿದ್ದಾರೆಂದು ಬೇಸರವಾಯಿತಷ್ಟೆ. ಇನ್ನು ಮುಂದಾದರೂ ನಮ್ಮ ಬಡಾವಣೆಯೊಳಗೆ ಕೆಟ್ಟ ಪ್ರಾಣಿಪಕ್ಷಿಗಳನ್ನೆಲ್ಲ ಸಾಕುತ್ತ ಗಲೀಜು ಮಾಡುವುದನ್ನು ನಿಲ್ಲಿಸಬೇಕು ಅಂತ ಗುರೂಜಿಯವರು ಒತ್ತಿ ಹೇಳಿದ್ದಾರೆ. ಅದನ್ನು ತಿಳಿಸುವ ಕೆಲಸ ನನ್ನದು. ಇನ್ನು ಅವರಿಗೆ ನೀವೇ ಬುದ್ಧಿ ಹೇಳಬೇಕು. ಇಲ್ಲದಿದ್ದರೆ ನಮಗೆಲ್ಲ ಆ ಹಾವಿನ ತೊಂದರೆ ಮಾತ್ರವಲ್ಲದೇ ಅದರಿಂದಲೇ ಎಂದಾದರೊಂದು ದಿನ ಪ್ರಾಣಹಾನಿಯೂ ತಪ್ಪಿದ್ದಲ್ಲ!’ ಎಂದು ಉದ್ವೇಗದಿಂದ ಅಂದ ಸುಮಿತ್ರಮ್ಮನ ಕಂದುಬಣ್ಣದ ಜೋಲು ಮುಖದಲ್ಲಿ ಆಕ್ರೋಶ ಹೆಪ್ಪುಗಟ್ಟಿತ್ತು.

ವಿಧಿಯಿಲ್ಲದೆ ಅವರೆಲ್ಲರ ನಡುವೆ ಕುಳಿತುಕೊಂಡು ಮೂಕಪಾತ್ರವನ್ನು ನಿಭಾಯಿಸುತ್ತಿದ್ದ ಲಕ್ಷ್ಮಣಯ್ಯನಿಗೆ ಚರ್ಚೆಯು ಬಿಸಿಯೇರಿ ದಾರಿ ತಪ್ಪಿದ್ದನ್ನು ಕಂಡು ಮುಜುಗರವಾಯಿತು. ಇನ್ನಿಲ್ಲಿ ಕುಳಿತರಾಗದು ಎಂದುಕೊಂಡವರು, ‘ನೀವೆಲ್ಲ ಮಾತಾಡುತ್ತಿರೀ ಈಗ ಬಂದೆ…!’ ಎಂದು ಹೇಳಿ ಯಾರನ್ನೂ ನೋಡದೆ ಎದ್ದು, ಎಲ್ಲರೂ ಸತ್ತು ಕೊಳ್ಳಿ ಅತ್ಲಾಗೆ! ಎಂದು ಒಳಗೊಳಗೇ ಬೈದುಕೊಂಡು ಮನೆಯೊಳಗೆ ಹೊರಟು ಹೋದರು. ಗಂಡನ ವರ್ತನೆಯಿಂದ ಸುಮಿತ್ರಮ್ಮ ಕೋಪಗೊಂಡರು. ಆದರೂ ಸಹಿಸಿಕೊಂಡು ನಾರಾಯಣರನ್ನು ಅಸಹನೆಯಿಂದ ದಿಟ್ಟಿಸಿದರು. ಅವರು ರಾಧಾ, ಗೋಪಾಲರತ್ತ ತಿರುಗಿ, ‘ಏನಂತೀರಿ ಇದಕ್ಕೆ…?’ ಎಂದು ಮೃದುವಾಗಿ ಕೇಳಿದರು. ಆಗ ಗೋಪಾಲ ಮತ್ತೆ ಚುರುಕಾದವನು, ‘ಅದು ಹೇಗಾಗುತ್ತದೆ ನಾರಾಯಣಣ್ಣಾ! ಮನೆಯ ಸಾಲ ಮತ್ತು ಅಡವಿಟ್ಟ ಚಿನ್ನವಿನ್ನೂ ಬ್ಯಾಂಕಿನಲ್ಲೇ ಕೊಳಿತಾ ಇದೆ. ಅಲ್ಲದೇ ಆ ಪ್ರಾಣಿಗಳ ಉತ್ಪತ್ತಿಯನ್ನೇ ನಂಬಿಕೊಂಡಿರುವವರು ನಾವು. ಹೀಗಿರುವಾಗ ಒಮ್ಮಿಂದೊಮ್ಮೆಲೇ ಅವುಗಳನ್ನು ಸಾಕುವುದನ್ನು ನಿಲ್ಲಿಸಿಬಿಡಿ ಎಂದರೆ ಹೇಗೆ…? ಅಷ್ಟೊಂದು ಗಡಬಿಡಿಯಲ್ಲಿ ಅವುಗಳನ್ನು ಕೊಂಡುಕೊಳ್ಳುವವರಾದರೂ ಬೇಕಲ್ಲವಾ! ಇನ್ನು ಸದ್ಯದಲ್ಲೇ ದೊಡ್ಡ ಮಾರಿಪೂಜೆಯೂ, ಗರಡಿಗುಡ್ಡೆಯ ದೈವಗಳ ಕೋಲವೂ ಹತ್ತಿರವಾಗುತ್ತಿದೆ. ಅದಕ್ಕೆ ಈಗಲೇ ನಾಲ್ಕಾರು ಮನೆಯವರು ನನ್ನಲ್ಲಿ ಕೋಳಿಗಳನ್ನು ಕೇಳಿಟ್ಟಿದ್ದಾರೆ. ಅದೆಲ್ಲ ದೇವರ ಹರಕೆಯ ಮಾತಲ್ಲವಾ. ನಾನದನ್ನು ಪೂರೈಸದಿರಲು ಆಗುತ್ತದಾ? ಆದರೂ ಇನ್ನು ಮುಂದೆ ವಠಾರದ ಯಾವ ಮನೆಗಳಿಗೂ ನಮ್ಮ ನಾಯಿ, ಕೋಳಿಗಳು ಹೆಜ್ಜೆಯಿಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಈ ಒಂದು ವಿಷಯದಲ್ಲಿ ನೀವೆಲ್ಲ ದೊಡ್ಡ ಮನಸ್ಸು ಮಾಡಬೇಕು!’ ಎಂದು ಒರಟಾಗಿಯೇ ಕೇಳಿಕೊಂಡ.

   ಗೋಪಾಲ, ಮಾರಿಪೂಜೆಯ ಮತ್ತು ತಮ್ಮ ಗ್ರಾಮದ ದೈವಗಳ ಹೆಸರೆತ್ತುತ್ತಲೇ ನಾರಾಯಣರೂ, ಸುಂದರಯ್ಯನೂ ಹಾಗೂ ಇನ್ನುಳಿದ ಹಲವರೂ ಮೌನವಾದರು. ಕಾರಣ, ಅವರೆಲ್ಲರೂ ಒಂದಲ್ಲಾ ಒಂದು ಕಾರಣಕ್ಕೆ ತಮ್ಮ ದೈವಭೂತಗಳಿಗೆ ಹೊತ್ತುಕೊಳ್ಳುವ ಹರಕೆ, ಪೂಜೆಗಳಿಗೆ ಆಗಾಗ ಊರ ಕೋಳಿಗಳ ಅಗತ್ಯ ಬೀಳುತ್ತಿತ್ತು. ಅದು ಗೋಪಾಲನಿಂದ ಸಿಗುವುದೆಂದು ತಿಳಿದ ಎಲ್ಲರೂ ಅವರ ಮೇಲಿನ ಹಗುರ ಭಾವನೆಯನ್ನೂ ಆರೋಪವನ್ನೂ ಸ್ವಲ್ಪ ಸಡಿಲಿಸಿಕೊಂಡರು. ‘ಸರಿ, ಸರಿ ಗೋಪಾಲ ನಿಮ್ಮ ಜೀವನ ನಿಮ್ಮದು. ನಿಮಗೆ ಇಷ್ಟ ಬಂದಂತೆ ಬದುಕಬಹುದು. ಅದನ್ನು ಕೇಳುವ ಹಕ್ಕು ನಮಗ್ಯಾರೀಗೂ ಇಲ್ಲ. ಆದರೆ ಅದರಿಂದ ನಿಮ್ಮ ಸುತ್ತಮುತ್ತಲಿನವರಿಗೆ ತೊಂದರೆಯಾಗದಿದ್ದರಾಯ್ತು. ನಾಗನ ವಿಷಯದಲ್ಲಿ ನೀವೂ ಸ್ವಲ್ಪ ಜಾಗ್ರತೆವಹಿಸುವುದು ಒಳ್ಳೆಯದು!’ ಎಂದು ನಾರಾಯಣರು ಗಂಭೀರವಾಗಿ ಅಂದರು.

‘ಖಂಡಿತಾ ಜಾಗ್ರತೆ ಮಾಡುತ್ತೇವೆ ನಾರಾಯಣಣ್ಣ. ಇನ್ನು ಮುಂದೆ ನಮ್ಮಿಂದ ಯಾರೀಗೂ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇವೆ!’ ಎಂದು ಗೋಪಾಲನೂ ಭರವಸೆ ನೀಡಿದ. ಆಗ ನಾರಾಯಣರು ಸುಮಿತ್ರಮ್ಮನತ್ತ ತಿರುಗಿ, ‘ಇದಕ್ಕೇನಂತೀರಿ ಸುಮಿತ್ರಮ್ಮಾ ಆಗಬಹುದಲ್ಲ…?’ ಎಂದು ನಗುತ್ತ ಪ್ರಶ್ನಿಸಿದರು.

‘ಅವನ ಜವಾಬ್ದಾರಿಯನ್ನು ನೀವುಗಳೇ ಹೊತ್ತುಕೊಂಡ ಮೇಲೆ ನಾನೇನು ಹೇಳುವುದು? ವಠಾರದವರು ನೀವೆಲ್ಲ ಹೇಗೆ ಹೇಳುತ್ತೀರೋ ಹಾಗೆ…!’ ಎಂದು ಸುಮಿತ್ರಮ್ಮ ತಮ್ಮ ಅಸಹನೆಯನ್ನು ಹತ್ತಿಕ್ಕಿಕೊಳ್ಳುತ್ತ ಅಂದರು. ಆದರೆ ನಾರಾಯಣರು ಅದಕ್ಕೆ ಸೊಪ್ಪು ಹಾಕದೆ, ‘ಆಯ್ತು ಆಯ್ತು, ಅದು ಹಾಗಿರಲಿ. ಈಗ ಮೊದಲು ನಮಗೆಲ್ಲ ತಗುಲಿರುವ ನಾಗನ ಸಮಸ್ಯೆಗೆ ಪರಿಹಾರ ಹೇಗೆ ಮತ್ತು ಏನೆನ್ನುವುದನ್ನು ಹೇಳಬೇಕು ನೀವು!’ ಎಂದರು ಮಾತು ಮರೆಸುತ್ತ.

   ಆಗ ಸುಮಿತ್ರಮ್ಮ ಮತ್ತೆ ಮುಖ್ಯ ಪಟ್ಟಕ್ಕೇರಿದರು. ‘ಹೌದು, ಅದನ್ನೊಂದು ಹೇಳಿ ಬಿಡುತ್ತೇನೆ. ಆನಂತರ ಅದನ್ನು ನಿವಾರಿಸಿಕೊಳ್ಳುವುದು, ಬಿಡುವುದು ನಿಮಗೆ ಸೇರಿದ್ದು!’ ಎಂದು ಗಂಭೀರವಾಗಿ ಹೇಳಿ ಮಾತು ಮುಂದುವರೆಸಿದರು. ‘ನಮ್ಮ ಮನೆಗೆ ಆ ಹಾವು ಬಂದಿರುವುದಕ್ಕೆ ನಾವು ಗಂಡ ಹೆಂಡತಿ ಪ್ರತ್ಯೇಕವಾಗಿ ಷಣ್ಮುಖಕ್ಷೇತ್ರಕ್ಕೆ ಹೋಗಿ ಶಾಂತಿ ಮಾಡಿಸಿಕೊಂಡು ಬರಬೇಕೆಂದು ಗುರೂಜಿ ಸೂಚಿಸಿದ್ದಾರೆ. ಅದನ್ನು ನಾವು ನೆರವೇರಿಸುತ್ತೇವೆ. ಆದರೆ ವಠಾರಕ್ಕೆ ತಟ್ಟಿರುವ ನಾಗದೋಷಕ್ಕೆ ಎಲ್ಲರೂ ಸೇರಿ ಆಶ್ಲೇಷಬಲಿಯೊಂದನ್ನು ಮಾಡಿಸಿ ನಾಗಶಾಂತಿ ಮಾಡಿಸಬೇಕು. ಆಗ ನಾಗರಹಾವು ಸುತ್ತಾಡುವುದು ನಿಂತು ಎಲ್ಲರ ಸಮಸ್ಯೆಗಳೂ ಪರಿಹಾರವಾಗುತ್ತವೆ ಅಂತನೂ ಅವರು ಹೇಳಿದ್ದಾರೆ!’ ಎಂದು ತಮ್ಮ ನೆತ್ತಿಯ ಮೇಲಿದ್ದ ದೊಡ್ಡ ಹೊರೆಯನ್ನು ಇಳಿಸಿದವರಂತೆ ಮಾತು ಮುಗಿಸಿ ನಿಟ್ಟುಸಿರುಬಿಟ್ಟರು.

   ಸುಮಿತ್ರಮ್ಮ ತಮ್ಮ ಮಾತಿನ ನಡುವೆ ಪದೇಪದೇ ಏಕನಾಥ ಗುರೂಜಿಯ ಹೆಸರೆತ್ತುತ್ತಿದ್ದುದನ್ನು ಕೇಳುತ್ತಿದ್ದ ವಠಾರದ ಹೆಚ್ಚಿನವರು ತಣ್ಣಗಾಗಿದ್ದರು. ಏಕೆಂದರೆ ಗುರೂಜಿಯವರು ನಾಡಿನ ಪ್ರಸಿದ್ಧ ಜೋಯಿಸರಲ್ಲಿ ಒಬ್ಬರು ಎಂಬುದು ಮತ್ತು ಅಂಥ ಧಾರ್ಮಿಕ ವೃತ್ತಿಗೆ ಅವರೆಲ್ಲರೂ ತಲತಲಾಂತರದಿಂದ ಗೌರವಾದರ ತೋರಿಸುತ್ತ ಬಂದುದೂ ಅದಕ್ಕೆ ಕಾರಣವಾಗಿತ್ತು. ರಾಜೇಶನೂ ಸುಮಿತ್ರಮ್ಮನಿಗೆ ಬೆಂಬಲವಾಗಿ ಮಾತಾಡಿದ. ‘ಹಾಗೇನಿಲ್ಲ ಸುಮಿತ್ರಮ್ಮ, ನೀವು ಯಾವ ಕಾರ್ಯವನ್ನು ಕೈಗೊಂಡಿದ್ದೀರೋ ಅದು ವಠಾರದವರ ಒಳ್ಳೆಯದಕ್ಕೇ ಆಗಿರುತ್ತದೆ. ಹಾಗಾಗಿ ನಾನು ತಯಾರಿದ್ದೇನೆ. ನಮ್ಮ ಕಡೆಯಿಂದ ಏನಾಗಬೇಕು ಮತ್ತು ಎಷ್ಟು  ಕೊಡಬೇಕೆನ್ನುವುದನ್ನು ತಿಳಿಸಿದರಾಯ್ತು!’ ಎಂದು ಎಲ್ಲರತ್ತ ಗತ್ತಿನಿಂದ ನೋಡುತ್ತ ಹೇಳಿದ. ಆಗ ಸುಂದರಯ್ಯನೂ ಚುರುಕಾದರು. ‘ನಿನಗಿಂತ ನಾವೂ ಕಡಿಮೆಯಿಲ್ಲವೋ…!’ ಎಂಬಂತೆ ಅವರೂ, ‘ಹೌದು ಸುಮಿತ್ರಮ್ಮ ನೀವು ಹೇಳಿದಂತೆಯೇ ಮಾಡುವ. ನನಗೆ ಇದೆಲ್ಲ ಮೊದಲೇ ಗೊತ್ತಿತ್ತು. ನಾಗದೋಷದ ಸಮಸ್ಯೆಗೆ ಈಗ ಎಲ್ಲರೂ ಮಾಡುವುದು ಅದೇ ಪೂಜೆಯನ್ನಲ್ಲವಾ. ನೀವು ಗುರೂಜಿಯವರೊಡನೆ ಮಾತಾಡಿ ದಿನ ಗೊತ್ತುಪಡಿಸಿ. ಖರ್ಚುವೆಚ್ಚವನ್ನೂ ತಿಳಿದುಕೊಂಡು ನಮಗೆ ಹೇಳಿ. ಎಷ್ಟಾಗುವುದೋ ಅದನ್ನು ಎಲ್ಲರೂ ಸಮಪಾಲು ಮಾಡಿಕೊಂಡು ನೆರವೇರಿಸಿಬಿಡುವ…!’ ಎಂದೆನ್ನುತ್ತ ನಾರಾಯಣರತ್ತಲೂ ಉಳಿದವರತ್ತಲೂ ತಿರುಗಿ, ‘ನೀವೆಲ್ಲರೂ ಏನಂತೀರಿ ನಾರಾಯಣಣ್ಣಾ, ಸರಿಯಲ್ಲವಾ…?’ ಎಂದರು ಉಮೇದಿನಿಂದ. ಆದ್ದರಿಂದ ನಾಗನಂಬಿಕೆಯಿದ್ದ ಹೆಚ್ಚಿನವರು ಸುಂದರಯ್ಯನ ಮಾತಿನಂತೆ ತಂತಮ್ಮ ಪಾಲು ನೀಡಲು ಒಪ್ಪಿಗೆ ಸೂಚಿಸಿದರು. ಆದರೆ ಆ ಆಚರಣೆ ಮತ್ತು ಸಂಪ್ರದಾಯಗಳ ಮೇಲೆ ನಂಬಿಕೆಯಿಲ್ಲದ ಒಂದಷ್ಟು ಆಧುನಿಕರೂ ಅಲ್ಲಿದ್ದರು. ಅಲ್ಲದೇ ಅವರ ನಡುವೆಯೂ ನಂಬಿಕೆಯೋ, ಮೂಢನಂಬಿಕೆಯೋ ಎಂಬ ದ್ವಂದ್ವ, ಗೊಂದಲಗಳಿಂದ ತೊಳಲಾಡುತ್ತಿದ್ದವರೂ ಇದ್ದರು. ಅವರೆಲ್ಲ ಸ್ವಲ್ಪಹೊತ್ತು ತಮ್ಮಷ್ಟಕ್ಕೇ ಚರ್ಚಿಸಿಕೊಂಡವರು ಕೊನೆಯಲ್ಲಿ ಏನೇ ಇರಲಿ. ಹತ್ತು ಜನ ಸೇರಿ ನಿರ್ಧರಿಸುವ ವಿಷಯಕ್ಕೆ ತಾವೇಕೆ ನಕಾರ ಸೂಚಿಸಿ ನಿಷ್ಠೂರ ಕಟ್ಟಿಕೊಳ್ಳಬೇಕು? ನಮ್ಮ ವಠಾರದಲ್ಲಿ ನಡೆಯುವ ಶುಭಕಾರ್ಯವೊಂದಕ್ಕೆ ನಾವೂ ಪಾಲು ಕೊಡುತ್ತಿದ್ದೇವೆ ಎಂದುಕೊಂಡರಾಯಿತು ಎಂದು ಯೋಚಿಸಿದ ಅವರೆಲ್ಲ ಸಹಮತಕ್ಕೆ ಬಂದು ತಮ್ಮ ಒಪ್ಪಿಗೆಯನ್ನೂ ಸೂಚಿಸಿದರು. ಅಲ್ಲಿಗೆ ಸುಮಿತ್ರಮ್ಮ ನಿರಾಳರಾದರು.

   ‘ಸರಿ ಹಾಗಾದರೆ, ನೀವೆಲ್ಲರೂ ನನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡು ಒಪ್ಪಿಗೆ ನೀಡಿದ್ದು ನನಗೆ ನೆಮ್ಮದಿಯಾಯಿತು. ಇನ್ನು ಮುಂದಿನ ಕಾರ್ಯವನ್ನೂ ಅದಕ್ಕೆ ತಗುಲುವ ಖರ್ಚುವೆಚ್ಚದ ವಿಚಾರವನ್ನೂ ಸದ್ಯದಲ್ಲೇ ಗುರೂಜಿಯವರೊಡನೆ ಮಾತಾಡಿ ಎಲ್ಲರಿಗೂ ತಿಳಿಸುತ್ತೇನೆ!’ ಎಂದು ಸುಮಿತ್ರಮ್ಮ ನಗುತ್ತ ಹೇಳಿದವರು ಕುಳಿತಲ್ಲಿಂದಲೇ ಎಲ್ಲರಿಗೂ ಕೈಮುಗಿದು ಸಭೆಯನ್ನು ಮುಕ್ತಾಯಗೊಳಿಸಿದರು. ಆದ್ದರಿಂದ, ‘ಸರಿ ಸುಮಿತ್ರಮ್ಮ ಹಾಗೆಯೇ ಮಾಡಿ.  ನಾವಿನ್ನು ಹೊರಡುತ್ತೇವೆ. ಮುಂದಿನ ಕಾರ್ಯದ ಕುರಿತು ನೀವು ನಿರ್ಧರಿಸಿದ ದಿನದಂದು ಮತ್ತೆ ಸೇರುವ, ನಮಸ್ಕಾರ…’ ಎಂದ ನಾರಾಯಣರು ಎದ್ದು ಹೆಂಡತಿಯೊಂದಿಗೆ ಮನೆಯತ್ತ ನಡೆದರು. ಆಗ ಉಳಿದವರೂ ಸುಮಿತ್ರಮ್ಮನಿಗೆ ನಮಸ್ಕರಿಸಿ ಹೊರಟು ಹೋದರು.

(ಮುಂದುವರೆಯುವುದು)

********

ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

4 thoughts on “

  1. ಹಾವು ಮನೆಯೊಳಗೆ ಪ್ರವೇಶಿಸಿ ಅಲ್ಲಿನ ನಿವಾಸಿಗಳ ಮನಸ್ಸಿನಲ್ಲಿ ಸೃಷ್ಟಿಸಿದ ಭಯಾತಂಕಗಳು…. ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ಅಲ್ಲಿ ಹಮ್ಮಿಕೊಂಡ ಸಭೆಯಲ್ಲಿ ನಡೆಯುವ ಚರ್ಚೆ ತೀರ್ಮಾನಗಳು ಈ ಅಧ್ಯಾಯದಲ್ಲಿ ರಸವತ್ತಾಗಿ ಮೂಡಿ ಬಂದಿದೆ. ಅಭಿನಂದನೆಗಳು

    1. ಪ್ರಸ್ತುತ ನಡೆಯುತ್ತಿರುವಂಥ ವಾಸ್ತವವಿದು. ಧನ್ಯವಾದ ಮೇಡಮ್…

Leave a Reply

Back To Top