ಕಾವ್ಯಯಾನ
ಕ್ಲಿಯೋ ಪಾತ್ರ..
ಮಾಸ್ಕೇರಿ .ನಾಯಕ
ಕಣ್ಣ ಕಂದಕದಲ್ಲಿ ಜುಗಳಿ ಜಾರಿದರೆಷ್ಟೊ
ಎದ್ದು ಬಂದುದು ಸುಳ್ಳು ಹದ್ದು ಮೀರಿ |
ತೆವಲು ಪಿತ್ತಕೆ ಪತರಗುಟ್ಟ ನೃಪಕುಲವೆಷ್ಟೊ
ಕಾಮಾಗ್ನಿ ಕುಂಡಲ ಪಿಂಡ ಕ್ಲಿಯೋಪಾತ್ರ ನಾರಿ ?
ಹುಟ್ಟಾ ಕೆಟ್ಟ ಬಳಿಕ ಕಟ್ಟುಕಟ್ಟಳೆ ಗೌಣ
ಹುಟ್ಟು ಗುಣ ಸುಟ್ಟರದು ಹೊಗದದು ನಿಜವೇ |
ವೀಕ್ಷೆಯಲೆ ವಿಷಕಾರು ವಿಶ್ವ ವಿಶೇಷ ತಳಿ
ಕ್ರಿಸ್ತಪೂರ್ವದ ಸಾಕ್ಷಿ ವರ್ತಮಾನಕು ಸಜವೆ ?
ಶಯನ-ಕಾರಾಗೃಹಕೆ ಅಂತರೊಂದೆ ಮಂಚ
ಬೇಟದಾಟಕೆ ಒಡಹುಟ್ಟಿಹರು ಬಲಿಯೆ |
ಸರ್ಪದರ್ಪದ ರಾಪು ಕುಲದವಾರಸುಗಾರ್ತಿ
ಸ್ವೇಚ್ಛಾಚಾರಕೆ ಉಚ್ಛ ಸ್ವಾತಂತ್ರ್ಯ ಹೊಣೆಯೆ ?
ಸೌಂದರ್ಯವೆನ್ನುವರೆ ಕಾಮತುಂಬಿದ ಚರ್ಯೆ
ಸತ್ಯ ಶಿವ ಸುಂದರತೆ ಸರ್ವರ್ತುಕ ಮಾತು |
ಶೀಲವಿಲ್ಲದ ಚೆಲುವು ಜೀವವಿಲ್ಲದ ದೇಹ
ಇದ್ದು ಇಲ್ಲದ ತರವೆ ಸರ್ವತ್ರ ನಾತು ||
***
Super sir
ಗ್ರೇಟ್…
ಒಂದು ಅದ್ಭುತ ಪದ್ಯ ಓದಿದ ಖುಷಿ ನನಗೆ…
ನವ್ಯವನ್ಙು ಉಡಿಯಲ್ಲಟ್ಟುಕೊಂಡು ನವೋದಯದ ಸತ್ಯ ಸಾರುವ ಕವಿತೆ…
ಬಹಳ ಚಂದದ ಕವಿತೆ…. ಖುಷಿಯಾಯಿತು ಓದಿ ಅಭಿನಂದನೆಗಳು
ವಿಮರ್ಶಾತ್ಮಕ ಚಿಂತನೆಗೆ ಹಚ್ಚುವ ಕವಿತೆ.ಸೌಂದರ್ಯ ಒಳಾಂತರದ ಶಕ್ತಿ. ಬಾಹ್ಯ ಬಣ್ಣಗಳ ಸಂತೆಯಲಿ ಕರಗುವ ಮನಕೆ ಇದೊಂದು ಅಧ್ಬುತ ಉದಾ.ತುಂಬಾ ಅರ್ಥಪೂರ್ಣ ಕವಿತೆ.ನವ ಚೈತನ್ಯದ ಪ್ರತಿರೂಪ