ವಾರದ ಕಥೆ
ಬಿಡುಗಡೆ
ಎಸ್.ನಾಗಶ್ರೀ
[9:17 am, 22/07/2021] NAGRAJ HARAPANALLY: ಐದೂವರೆ ಅಡಿ ಎತ್ತರ, ಬಿಳಿಗೋಧಿ ಬಣ್ಣದ ಮುವ್ವತ್ತರ ಚೆಲುವೆ ಬೆಂಗಳೂರಿಗೆ ಬಂದು ಹತ್ತು ವರ್ಷಗಳಾಗಿ ಅದೇ ಬಸವನಗುಡಿ ಬಸ್ಟಾಪಿನ ಮುಂದೆ ನೂರೆಂಟು ಸಲ ಓಡಾಡಿದ್ದರೂ, ಹತ್ತಾರು ಬಾರಿ ಪುಸ್ತಕ ಬಿಡುಗಡೆ ಸಮಾರಂಭದ ಪ್ರಯುಕ್ತ ವಲ್ಡ್ ಕಲ್ಚರಿನ ಕಟ್ಟಡದೊಳಗೆ ಕಾಲಿಟ್ಟು, ಉಪ್ಪಿಟ್ಟು ಕಾಫಿ ಹೊಟ್ಟೆಗಿಳಿಸಿ, ಪುಸ್ತಕ ಕೊಂಡು, ಫೋಟೋ ತೆಗೆಸಿಕೊಂಡು ಭಾನುವಾರಗಳನ್ನು ಕಳೆದಿದ್ದರೂ ಇಂದಿನ ಬೆಳಗು, ಇಂದಿನ ಸಮಾರಂಭ ಅವಳಿಗೆ ಬಲು ವಿಶೇಷವಾಗಿತ್ತು. ಅದರಿಂದಲೇ ಅವಳಿಗಿಷ್ಟದ ನೇರಳೆ ಬಣ್ಣದ ಸೀರೆಯುಟ್ಟು, ಸ್ಟೆಪ್ ಕಟ್ ಮಾಡಿಸಿದ ಗುಂಗುರು ಕೂದಲನ್ನು ಇಳಿಬಿಟ್ಟು,ಜರ್ಮನ್ ಸಿಲ್ವರ್ ಆಭರಣ ತೊಟ್ಟು ಮುತುವರ್ಜಿಯಿಂದ ಸಿಂಗರಿಸಿಕೊಂಡು ಬಂದಿದ್ದಳು. ಈ ದಿನದ ಬಗ್ಗೆ ಕಟ್ಟಿಕೊಂಡ ಕನಸುಗಳು, ತಲೆಯೊಳಗೆ ಚಿಗುರುತ್ತಿದ್ದ ಮಾತುಗಳು, ಅಪಾರ ನಿರೀಕ್ಷೆ, ಅವ್ಯಕ್ತ ಕಳವಳಗಳ ಒಟ್ಟು ಮೂಟೆಯೇ ಅದಿತಿಯಾಗಿದ್ದಳು. ಹಿಂದಿನ ರಾತ್ರಿ ನಿದ್ದೆಯೂ ಮಾಡದೆ, ಬೆಳಗಿನ ಜಾವದ ಸಣ್ಣ ಮಬ್ಬು ತೂಕಡಿಕೆಯೇ ಸಾಕೆಂಬುವಂತೆ ಐದೂವರೆಗೇ ಎದ್ದು ಸ್ನಾನ ಮುಗಿಸಿ, ತಿಂಡಿ, ಅಡುಗೆ ಕೆದಕಿಟ್ಟು ಏಳೂವರೆ ಸುಮಾರಿಗೆ ವಲ್ಡ್ ಕಲ್ಚರಿನ ಆವರಣದಲ್ಲಿದ್ದ ಅವಳನ್ನು ಕಂಡ ಯಾರಿಗೂ ಅವಳ ಒಳಗನ್ನು ಊಹಿಸಲು ಸಾಧ್ಯವಿರಲಿಲ್ಲ.ಚಳಿಗಾಲದ ತಣ್ಣನೆ ಹವೆ ಮತ್ತು ಭಾನುವಾರದ ರಜೆಯ ಕಾರಣದಿಂದ ಬೆಂಗಳೂರು ಮುದ್ದು ಮಗುವಿನಂತೆ ಇನ್ನೂ ಮಲಗಿದ್ದ ಹಾಗೆನ್ನಿಸಿತು. ಪ್ರಕಾಶಕರು ಮತ್ತು ಅವರ ಸಹಾಯಕರು ವೇದಿಕೆ ಅಲಂಕಾರ, ಕ್ಯಾಟರಿಂಗ್ ಮೇಲ್ವಿಚಾರಣೆ, ಅತಿಥಿಗಳ ಯೋಗಕ್ಷೇಮ ಮುಂತಾದ ಜವಾಬ್ದಾರಿಯೊಳಗೆ ಮುಳುಗಿದ್ದರಿಂದ ಇವಳ ಮೇಲೆ ಯಾರ ನಿಗವೂ ಹರಿಯಲಿಲ್ಲ. ಊರಿಗೆ ಮುಂಚೆ ಬಂದ ಮುಜುಗರದ ಕೈ ಮೇಲಾಗದಂತೆ, ಒಂದು ಮೂಲೆ ಕುರ್ಚಿಯಲ್ಲಿ ಕುಳಿತು ಮನೆ, ಸ್ನೇಹಿತರು, ಬಂಧು ಬಾಂಧವರ ವಾಟ್ಸಪ್ ಗ್ರೂಪಿನಲ್ಲಿ ಇಂದಿನ ಸಮಾರಂಭದ ಆಹ್ವಾನಪತ್ರಿಕೆಯನ್ನು ಹಾಕಿ, ಬಂದ ಸಂದೇಶಗಳಿಗೆಲ್ಲಾ ಉತ್ತರಿಸುತ್ತಾ ಕೂತಳು. ಅದೂ ಸಾಕೆನಿಸಿದಾಗ, ಈಗಾಗಲೇ ಹಲವು ಸಾರಿ ಮನಸ್ಸಿನೊಳಗೆ ಗುನುಗಿಕೊಂಡಿದ್ದ ಅಂದಿನ ಭಾಷಣವನ್ನು ಮತ್ತಷ್ಟು ಚೆಂದಗಾಣಿಸುವ ಪ್ರಯತ್ನದಲ್ಲಿ ಮಗ್ನಳಾಗುವುದು ಸೂಕ್ತವೆನಿಸಿತು.
ಮೊಬೈಲನ್ನು ಬ್ಯಾಗಿನೊಳಗೆ ಜಾರಿಸಿ, ಕಣ್ಮುಚ್ಚಿ ಕುಳಿತಾಗ, ವೇದಿಕೆ ಅಲಂಕಾರ ಮಾಡುತ್ತಿದ್ದವರ ಗಡಿಬಿಡಿ, ಕಾಫಿ ಪರಿಮಳ, ರಸ್ತೆಯಲ್ಲಿ ಹೊರಟ ಗಾಡಿಯ ಶಬ್ದ, ಕ್ಯಾಟರಿಂಗ್ ಹುಡುಗರ ಸರಭರ ಒಮ್ಮೆ ಗಲಾಟೆಯೆನ್ನಿಸಿದರೂ ನಿಧಾನಕ್ಕೆ ಕರಗುತ್ತಾ ಬಂದಂತೆನಿಸಿ ಭಾಷಣಕ್ಕೆ ಆತುಕೊಂಡಳು. ಮುಖದ ಮೇಲೆ ಆಡುತ್ತಿದ್ದ ಮುಂಗುರುಳು ಕಚಗುಳಿಯಿಡುತ್ತಿತ್ತು.
ಎಲ್ಲರಿಗೂ ನಮಸ್ಕಾರ. ನನ್ನ ಮೊದಲ ಪುಸ್ತಕ ಬಿಡುಗಡೆಯಾಗುತ್ತಿರುವುದು ಏಕಕಾಲಕ್ಕೆ ಸಂಭ್ರಮ, ಹೆದರಿಕೆಯನ್ನುಂಟು ಮಾಡುತ್ತಿದೆ. ಮುನ್ನುಡಿ, ಬೆನ್ನುಡಿ ಬರೆದುಕೊಟ್ಟು ಹರಸಿದ ಹಿರಿಯರಿಗೂ, ನಂಬಿಕೆಯಿಟ್ಟು ಪ್ರಕಟಿಸಲು ಮುಂದಾದ ಪ್ರಕಾಶಕರಿಗೂ, ಮುಖಪುಟ, ಒಳಪುಟ ವಿನ್ಯಾಸಕರಿಗೂ, ತಂದೆ- ತಾಯಿ, ಶಿಕ್ಷಕರು, ಸ್ನೇಹಿತರು, ಫೇಸ್ ಬುಕ್ ಬಳಗಕ್ಕೂ ಕೃತಜ್ಞತೆಗಳು ಎಂದು ಮುಗಿಸುವುದು ಸುಲಭ.ಆದರೆ ಹತ್ತಾರು ವರ್ಷದಿಂದ ಕಂಡ ಕನಸಿಗೆ ನೀರೆರೆದು ಪೋಷಿಸಿದವರು, ಬರೆಯಲೇ ಬೇಕೆಂದು ಹಠಹಿಡಿದು ಬರೆಸಿಕೊಂಡ ಘಟನೆಗಳು, ಪ್ರತಿಯೊಂದು ಅಕ್ಷರವನ್ನೂ ಬಿಡದೆ ಓದಿ ಪ್ರತಿಕ್ರಿಯಿಸಿದ, ತಿದ್ದಿದ ಸ್ನೇಹಿತರು, ಬೆನ್ನುತಟ್ಟಿ ಹರಸಿದ, ಎಚ್ಚರಿಸಿದ ಹಿರಿಯರನ್ನು ಸಭೆಯ ಮುಂದಿಡದೆ, ಯಾರೂ ಆಡಬಹುದಾದ ನಾಲ್ಕು ಮಾತು ಆಡಿ ಏನು ಉಪಯೋಗ? ತಂದೆ-ತಾಯಿ ಮತ್ತು ಮನೆಯವರ ಸಹಕಾರ ಎಂದಾಗ, ಅಲ್ಲಿ ಅತ್ತೆ- ಮಾವನ ಹೆಸರೂ ಸೇರಬಹುದು.ಬದುಕಿಗೆ ಸಹಕಾರವಿದ್ದರಾಯಿತೆ? ಬರವಣಿಗೆಗೆ ಎಂತಹ ಸಹಕಾರ ಸಿಕ್ಕಿದೆ? ಅಳುತ್ತಿರುವ ಮಗುವನ್ನು ಅರ್ಧಗಂಟೆ ಸಮಾಧಾನಿಸಲಾಗದವರು, ಬರವಣಿಗೆಗೆ ಕೂತಾಗಲೇ ಕೆಲಸ ಹಚ್ಚಿ ಲಹರಿ ಹಾಳು ಮಾಡಿದವರು, ಬರೆದು ಉದ್ಧಾರ ಆದವರು ಯಾರಿದ್ದಾರೆಂದು ಸೂಚ್ಯವಾಗಿ ಹಂಗಿಸಿದವರು, ಹಣ ಸಂಪಾದನೆಯಿಲ್ಲದ ಮೇಲೇನು ಪ್ರಯೋಜನವೆಂದು ತಿವಿದವರು ಕೊಟ್ಟ ಸಹಕಾರವಾದರೂ ಏನು? ಅವರಿಗೇಕೆ ಕೃತಕವಾಗಿ ಧನ್ಯವಾದಗಳನ್ನು ಸೂಚಿಸಬೇಕೆಂಬ ಪ್ರಶ್ನೆ ಬಲವಾಯಿತು. ಸರಿ ಹಾಗಾದರೆ… ತಂದೆ-ತಾಯಿ, ಗಂಡ, ಮಗುವಿನ ಪ್ರಸ್ತಾಪ ಮಾಡಿ ಮಿಕ್ಕವರನ್ನು ಬಿಟ್ಟರಾಯಿತು ಎನ್ನಿಸಿತು. ಅಷ್ಟಕ್ಕೂ ಈ ವಿಷಯ ನನಗಿಷ್ಟು ಮುಖ್ಯವೇ ಹೊರತು, ಕೇಳುಗರಿಗಲ್ಲ. ಹಾಗೆ ಪ್ರತಿ ಅಂಶವನ್ನೂ ತೂಗಿ ಅಳೆದು ಆಯಾಸಗೊಳ್ಳುವುದು ಬೇಡವೆನ್ನಿಸಿದರೂ, ತಲೆ ತನ್ನ ಪಾಡಿಗೆ ತಾನು ಯೋಚಿಸುವುದನ್ನು ಮುಂದುವರೆಸಿತ್ತು. ನಿಧಾನವಾಗಿ ಜನ ಸೇರತೊಡಗಿದ್ದರು. ಅಸಲಿಗೆ ಅಂದು ನಾಲ್ಕು ಪುಸ್ತಕಗಳು ಬಿಡುಗಡೆಯಾಗುತ್ತಿತ್ತು. ಇಬ್ಬರು ಅನುಭವಿ ಲೇಖಕರ ಪುಸ್ತಕದ ಜೊತೆಗೇ ತನ್ನದೂ ಆಗುತ್ತಿರುವುದರಿಂದ ಈ ಸಂಭ್ರಮ, ಹುರುಪು, ನಿರೀಕ್ಷೆಗಳು ಹೆಚ್ಚಾಗಿವೆ. ನನ್ನೊಬ್ಬಳದೇ ಆಗಿದ್ದರೆ ಸಭೆಗೆ ಹತ್ತು ಜನವಾದರೂ ಸೇರುತ್ತಿದ್ದರೇ? ಅಷ್ಟಕ್ಕೂ ಸಮಾರಂಭವೇ ನಡೆಯುತ್ತಿರಲಿಲ್ಲವೆನಿಸಿ ನಗು ಬಂತು. ಆಗ ಈ ಹಾಳು ಭಾಷಣದ ಉಸಾಬರಿಯೇ ಇರುತ್ತಿರಲಿಲ್ಲ. ಈಗಲೂ ಪ್ರಕಾಶಕರಿಗೆ ಒಮ್ಮೆ ಸೂಕ್ಷ್ಮವಾಗಿ ಇಷಾರೆಯಿತ್ತರೂ , ನಾನು ಮಾತಾಡುವ ಪ್ರಮೇಯವೇ ಇರುವುದಿಲ್ಲ. ಬಂದ ಜನ ಎಷ್ಟಂತ ಕೊರೆಸಿಕೊಂಡಾರು? ಮೈಕಿನ ಮುಂದೆ ನಿಂತರೆ ಯಾರಿಗಾದರೂ ಖುಷಿ ನೆತ್ತಿಗೇರಿ, ಭಾಷಣ ಮುಗಿಸುವುದೇ ಸಾಹಸವಾಗುತ್ತದೆ. ಕಡಿಮೆ ಮಾತಾಡಿದವರು ಜನರ ಕಣ್ಣಲ್ಲಿ ಒಳ್ಳೆಯವರು, ಮೌನವಹಿಸಿದವರು ದೇವರಾಗುತ್ತಾರೆ. ನಾನೂ ದೇವರಾಗಲೆ ಎನ್ನಿಸಿತು. ಆದರೆ ಮಾತೇ ಬಂಡವಾಳವಾದ ಉದ್ಯೋಗದಲ್ಲಿದ್ದೂ, ಮಖೇಡಿಯಂತೆ ವರ್ತಿಸಿದಳೆಂಬ ಕುಖ್ಯಾತಿ ತಲೆಗಂಟುವುದು ಬೇಡ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಜಾಣತನ ಇನ್ನಾದರೂ ಕಲಿಯಬೇಕೆಂದುಕೊಳ್ಳುವಾಗಲೇ ತಿಂಡಿ- ಕಾಫಿಗೆ ಕರೆ ಬಂದು , ಈ ಸ್ವಗತಕ್ಕೆ ತಡೆಯಾಯ್ತು. ಕಾಲ ಮಿಂಚಿನಂತೆ ಸರಿದು, ಅದಿತಿ ಅದಾಗಲೇ ವೇದಿಕೆಯ ಮೇಲಿದ್ದಳು.
ಅವಳಿಗೆ ಕೊನೆಯ ಸಾಲಿನಲ್ಲಿ ಗಂಡ, ಮಗು, ಅತ್ತೆ- ಮಾವ, ಪರಿಚಯಸ್ಥರು ಸೇರಿದಂತೆ ಹತ್ತು- ಹನ್ನೆರಡು ಜನರ ತಂಡವೇ ಕಾಣಿಸಿ ಆಶ್ಚರ್ಯವಾಯಿತು. ಅರೆ! ಒಬ್ಬಬ್ಬರೂ ಒಂದೊಂದು ನೆಪ ಹೇಳಿ, ನೀನೊಬ್ಬಳು ಹುಷಾರಾಗಿ ಹೋಗಿ ಬಾ ಎಂದಿದ್ದರಲ್ಲವೇ? ಮಾವನಿಗೆ ಮಂಡಿ ನೋವು.ನಡೆಯಲಾಗಲ್ಲ. ಅತ್ತೆಗೆ ಇತ್ತೀಚೆಗೆ ತೀರಾ ಸುಸ್ತು. ಮಗು ಹಠ ಹಿಡಿದರೆ ಕೆಲಸ ಹಾಳು. ನೋಡಿಕೊಂಡು ಮನೆಯಲ್ಲಿರುತ್ತೇನೆಂದ ಗಂಡ. ಮನೆಯವರಿಗೇ ಇಲ್ಲದ ಉತ್ಸಾಹ ನೆರೆಹೊರೆಯವರಿಗೇನು? ಅವರಿಗೊಂದು ಮಾತು ತಿಳಿಸಲೂ ಇಲ್ಲ. ಬಹುಶಃ ನನ್ನ ಗಂಡನೇ ಸಿಹಿಯಚ್ಚರಿ ಕೊಡಬೇಕೆಂದು ಇಷ್ಟೆಲ್ಲಾ ಪಾಡುಪಟ್ಟು ಜನರನ್ನು ಸೇರಿಸಿದ್ದಾನೆಂದು ಮುದ್ದು ಉಕ್ಕಿಬಂತು. ಯಾವ ಸುಖ- ದುಃಖಗಳೂ ಹೆಚ್ಚು ಕಾಲ ಬಾಳಲಾರದೆಂದು ಅರಿವಾಗುವ ಸಮಯ ಬಹಳ ಹತ್ತಿರ ಬಂದಿತ್ತು. ಅದಾಗಲೇ ಅವಳ ಪುಸ್ತಕ ಪರಿಚಯ ಶುರುವಾಯಿತು. ಕಥಾಸಂಕಲದ ಕೆಲವು ಕಥೆಗಳನ್ನು, ಪಾತ್ರಗಳನ್ನು ಉಲ್ಲೇಖಿಸಿ ಸಹೃದಯತೆಯ ನಾಲ್ಕಾರು ನುಡಿಗಳನ್ನು ಅವರಾಡುತ್ತಿದ್ದಾಗಲೇ, ತಲೆಯಲ್ಲಿ ಧಿಗ್ಗೆಂದು ದೀಪ ಹೊತ್ತಿ ಕೊಂಡಿತು. ತನ್ನ ಕಥೆಗಳಲ್ಲಿ ಕೆಲವು ಕಾಲ್ಪನಿಕ ಪಾತ್ರಗಳಿದ್ದರೂ, ಬದುಕಿನ ಜೀವಂತ ಪಾತ್ರಗಳನ್ನು ಎಷ್ಟೋ ಸಲ ಸೂಕ್ಷ್ಮಕುಸುರಿಯಲ್ಲಿ ಅಲ್ಲಿ ಮೂಡಿಸಿದ್ದಿದೆ. ಕೆಲವು ಸನ್ನಿವೇಶ, ಸಂಭಾಷಣೆಗಳನ್ನಂತೂ ಯಥಾವತ್ತಾಗಿ ಚಿತ್ರಿಸಿರುವುದರಿಂದ ಸ್ವಂತದವರು ಖಂಡಿತ ಗುರುತಿಸಬಹುದಾಗಿತ್ತು. ಹಾಗೇನಾದರೂ ಆದರೆ, ಇಷ್ಟು ವರ್ಷ ಮೌನವಾಗಿ ನುಂಗಿದ ಭಾವಗಳೆಲ್ಲಾ ಎದೆಗೊದ್ದಂತೆ ಎದುರಿಗೆ ನಿಂತರೆ ಸಹಿಸುವ ಶಕ್ತಿ , ಸಾಮರ್ಥ್ಯ ಅವರಿಗಿದೆಯೆ? ಬಹುಶಃ ನನಗಿರುವಂತೆಯೇ ಅವರಿಗೂ ಅವರ ಮನೋವ್ಯಾಪಾರಕ್ಕೆ ಅನುಸಾರ ಸರಿತಪ್ಪುಗಳಿರಬಹುದು. ಅವರು ಮಾಡಿರುವುದೆಲ್ಲ ಸರಿಯೆನಿಸಿಯೇ ಮಾಡಿದವುಗಳಾಗಿರಬಹುದು. ಕಥೆಯಲ್ಲಿನ ಪ್ರತಿ ಶಬ್ದವನ್ನು ಗಂಭೀರವಾಗಿ ಪರಿಗಣಿಸಿದರೆ ನಾನು ಇದುವರೆಗೂ ಮಾಡಿದ್ದೆಲ್ಲಾ ನಾಟಕ. ಒಳಗೆ ವಿಷ ತುಂಬಿಕೊಂಡು ಹೊರಗೆ ನಗು ನಟಿಸಿದ್ದು ಎನ್ನುವ ತೀರ್ಮಾನಕ್ಕೆ ಬರಬಹುದು. ಒಂದು ಕನಸು ಒಂದಿಡೀ ಬದುಕಿನ ನೆಲಗಟ್ಟನ್ನೇ ಅಲ್ಲಾಡಿಸಿಬಿಟ್ಟರೆ? ಛೇ! ಯಾಕಾದರೂ ವಾಸ್ತವಕ್ಕೆ ಹತ್ತಿರದ ಕಥೆ ಬರೆಯುವ ಹುಚ್ಚಿನಲ್ಲಿ ಇವರ ಪಾತ್ರಗಳನ್ನೆಲ್ಲಾ ಹಸಿಹಸಿಯಾಗಿ ತಂದುಬಿಟ್ಟೆನೋ ಎಂಬ ಪಶ್ಚಾತ್ತಾಪ ಅದಿತಿಯನ್ನು ಕೊರೆಯಲಾರಂಭಿಸಿತು. ಪುಸ್ತಕ ಪರಿಚಯ, ಅತಿಥಿಗಳ ಭಾಷಣ ಇತ್ಯಾದಿ ವೇದಿಕೆ ಕಾರ್ಯಕ್ರಮಕ್ಕೆ ಪೂರ್ತಿ ವಿಮುಖಳಾಗದೆ ಅಲ್ಲಿ ಇಲ್ಲಿ ಜೀಕುವಷ್ಟರಲ್ಲಿ ಮಾತಿನ ಸರದಿ ಬಂದೇಬಿಟ್ಟಿತು.
ಆಗಲೇ ರೂಪಿಸಿಕೊಂಡ ಸಾಲುಗಳ ಜೊತೆಗೆ, ಮನೆಯವರ ಸಹಕಾರದ ಕುರಿತು ಹೇಳುವಾಗ ” ನಮ್ಮ ಆತ್ಮೀಯರು, ಮನೆಯವರು ನಮ್ಮ ಬರಹಗಳನ್ನು ಓದಿದರಷ್ಟೇ ಪ್ರೋತ್ಸಾಹ ಎಂದು ಭಾವಿಸಬಾರದು. ಎಷ್ಟೋ ಸಲ ಅವರು ಬದುಕಿನ ಭಾಗವಾಗಿರುವುದೇ ನಮ್ಮ ಸುದೈವವಾಗಿರುತ್ತದೆ. ನನ್ನ ಕುಟುಂಬ ನನ್ನ ಶಕ್ತಿ.” ಎಂದು ಹೇಳಿಬಿಟ್ಟಳು. ಅವರು ಓದಿದರೆ ಪರಿಣಾಮ ಏನಾಗತ್ತೋ ಎಂಬ ಭಯದಲ್ಲಿ ಕಲಾಸೃಷ್ಟಿ ಅಸಾಧ್ಯ. ಹೇಗಿದ್ದರೂ ಓದುವುದಿಲ್ಲ ಎಂಬ ನಿರಾಳತೆಯೇ ಬರವಣಿಗೆಯ ಹರಿವನ್ನು ಸರಾಗವಾಗಿ ಕೊಂಡೊಯ್ದಿದೆ ಎಂಬ ಅರಿವು ಮೂಡಿತ್ತು. ವೇದಿಕೆ ಕಾರ್ಯಕ್ರಮ ಮುಗಿದು ಜನರು ಮುತ್ತುವಾಗ, ಅದಿತಿಯ ಹತ್ತಿರ ಬಂದ ಗಂಡ ” ಹೇಗಿತ್ತು ಸರ್ಪೈಸ್? ” ಅಂದ. ” “ಓಹ್…ಬಹಳ ಖುಷಿಯಾಯ್ತು..ಇದನ್ನ ಯಾವತ್ತಿಗೂ ಬಹುಶಃ ನಾನು ಮರೆಯಲ್ಲ” ಎಂದ ಅದಿತಿಗೆ ಎದೆಯ ಭಾರ, ಸಂಕೋಲೆಗಳು ಕಳಚಿ, ಮೈಮನಸ್ಸು ಹಗುರಾಗಿ ರೆಕ್ಕೆ ಮೂಡಿದಂತೆನಿಸಿತ್ತು.
ಸಭೆಯಿಂದ ಹೊರಹೋಗುತ್ತಿದ್ದ ಹೆಂಗಸರಿಬ್ಬರು ” ಗಂಡ, ಮನೆ,ಮಕ್ಕಳು, ಸಂಸಾರ ಅಂತ ಕಟ್ಟಿಕೊಂಡು ನಮ್ಮ ಹಾಗೆ ಏಗುವವರಿಗೆ ಕಥೆಕವಿತೆ ಬರೆಯುವ ಪುರುಸೊತ್ತಾದ್ರೂ ಎಲ್ಲಿರುತ್ತೆ? ಬಣ್ಣದ ಬೀಸಣಿಕೆಯಂತೆ ಬಳುಕುತ್ತಾ, ಅತ್ತೆ ಮಾವನಿಗೆ ಮನೆ ಚಾಕರಿ ಹಚ್ಚಿ ಝಂ ಅಂತ ಓಡಾಡಿಕೊಂಡಿರೋವ್ರು ಒಂದಲ್ಲ ನೂರು ಪುಸ್ತಕ ಬರೀತಾರೆ…ಭಾನುವಾರವಾದರೂ ಮನೆಕೆಲಸಕ್ಕೆ ಒಂದಷ್ಟು ಬಿಡುವು ಸಿಕ್ಕಲಿ ಅಂತ ಇಲ್ಲಿ ಬಂದು ಕೂರೋದು. ತಿಂಡಿ ತಿಂದು, ಮಾತು ಕೇಳ್ತಾ ತೂಕಡಿಸಿ ಮನೆಗೆ ಹೋಗೋದು..” ಎನ್ನುತ್ತಾ ಅಂಗಳ ದಾಟಿದರು.
************************
ಬರಹಗಾರ್ತಿ ಬವಣೆಗಳನ್ನು ಬಹಳ ಚೆಂದಕ್ಕೆ ಕಟ್ಟಿ ಕೊಟ್ಟಿರುವಿರಿ ನಾಗಶ್ರೀ.ಅಭಿನಂದನೆ ಒಳ್ಳೆಯ ಕತೆಗಾಗಿ.
ಧನ್ಯವಾದಗಳು ಸ್ಮಿತಾ … ತುಂಬಾ ಖುಷಿಯಾಯ್ತು.
ಇಂದಿನ ಮಹಿಳೆಯ ಚಿತ್ರಣ ಚೆನ್ನಾಗಿ ಪ್ರತಿಬಿಂಬವಾಗಿದೆ.
ಧನ್ಯವಾದಗಳು ಮೇಡಂ
ಬರೆವ ಅಂಬೆಗಾಲಿಡುವವರಿಗೆ ಪ್ರೇರಣೆ, ಅಭಿನಂದನೆಗಳು ನಾಗಶ್ರೀ
ಧನ್ಯವಾದಗಳು
ಅಹ್ಹಾ..! ಸೊಗಸಾದ ಕತೆ. ಕಲ್ಪನೆಯೋ ವಾಸ್ತವವೋ..? ಎರಡೂ ಆಗಬಹುದು..
ಧನ್ಯವಾದಗಳು ಮೇಡಂ…ಚೂರುಪಾರು ಮಾರ್ಪಾಡಿರಬಹುದು. ಬಿಟ್ಟರೆ ಬಹುಶಃ ಎಲ್ಲಾ ಬರಹಗಾರ್ತಿಯರ ಅನುಭವ ಇದು.
ಬೆಳಗು ತೂಕಡಿಸುವಾಗ ಬರಹಗಾರ್ತಿಯ ಬೆರಳಿಗಂಟಿದ ರಂಗೋಲಿ ಕಥೆಯಾಗಿತ್ತು…❤
ಧನ್ಯವಾದಗಳು ಮೇಡಂ
ಒಳಗೆ ಎಂಥಾ ಕುದಿ ಇದ್ದರೂ, ಸೃಜನಶೀಲತೆಗೆ, ಮಾನವೀಯತೆಗೆ ಭಂಗ ಬರದಂತೆ ಸ್ವಂತ ಅನುಭವಗಳನ್ನು ಚಿತ್ರಿಸಿಬಿಟ್ಟರೆ ಆದೀತು. ಇಂಥ ಅದ್ಭುತ ಕಿರುಕತೆಯಾದೀತು. ಮನತುಂಬಿ ಬಂತು ನಾಗಶ್ರೀ.
ಧನ್ಯವಾದಗಳು ಅಮೂಲ್ಯ. ನಿನ್ನ ಪ್ರೀತಿಯ ಸ್ಪಂದನೆಗೆ
ಕಥೆ ತುಂಬ ಚಿಂತನೆಗೆ ಹಚ್ಚುತ್ತೆ. ಬಹಳ ಇಷ್ಟವಾಯಿತು ನಾಗಶ್ರೀ. ಅಭಿನನಂದನೆಗಳು.
ಧನ್ಯವಾದಗಳು ಮೇಡಂ. ಖುಷಿಯಾಯ್ತು….