ಕವಿತೆ
ಒಡನಿದ್ದವಳೊಂದು ದಿನ……..
ಬೆಂಶ್ರೀ ರವೀಂದ್ರ
ಒಡನಿದ್ದವಳೊಂದು ದಿನ …………..
………………………………ಕರಗಿಹೋದೆ
ಕಾಲದಲಿರುವೆಯೆಂದು
ಕಾದೆ ಚೈತ್ರದ ಯುಗಾದಿಗಾಗಿ
ರವಿರಶ್ಮಿಯಲಿರುವೆಯೆಂದು
ಕಾದೆ ವೈಶಾಖದ ಬಿಸಿಲಿಗಾಗಿ
ಬುವಿಯಲಿರುವೆಯೆಂದು
ಕಾದೆ ಜೇಷ್ಠದ ಕಾರಹುಣ್ಣಿಮೆಗಾಗಿ
ಗಾಳಿಯಲಿರುವೆಯೆಂದು
ಕಾದೆ ಆಷಾಢದ ಸುಳಿಗಾಗಿ
ಮೋಡದಲಿರುವೆಯೆಂದು
ಕಾದೆ ಶ್ರಾವಣ ಮಳೆಗಾಗಿ
ಬುದ್ದಿಶಕ್ತಿಲಿರುವೆಯೆಂದು
ಕಾದೆ ಭಾದ್ರಪದದ ಚೌತಿಗಾಗಿ
ಗೊಂಬೆಯಲಿರುವೆಯೆಂದು
ಕಾದೆ ಆಶ್ವಯುಜದ ದಸರೆಗಾಗಿ
ದೀಪದಲಿರುವೆಯೆಂದು
ಕಾದೆ ಕಾರ್ತಿಕದ ದೀಪಾವಳಿಗಾಗಿ
ಕೃಷ್ಣನುಡಿಯಲಿರುವೆಯೆಂದು
ಕಾದೆ ಮಾರ್ಗಶಿರದ ಗೀತಾಹಬ್ಬಕಾಗಿ
ಸುಗ್ಗಿಯಲಿರುವೆಯೆಂದು
ಕಾದೆ ಪುಷ್ಯದ ಸಂಕ್ರಾಂತಿಗಾಗಿ
ವಿರಾಗದಲಿರುವೆಯೆಂದು
ಕಾದೆ ಮಾಘದ ಶಿವರಾತ್ರಿಗಾಗಿ
ಬಣ್ಣಗಳಲಿರುವೆಯೆಂದು
ಕಾದೆ ಫಾಲ್ಗುಣದ ಹೋಳಿಗಾಗಿ
ವಸಂತನ ರಮ್ಯತೆಯಲಿ
ಗ್ರೀಷ್ಮನ ಬಿಸಿ ಗಾಳಿಯಲಿ
ವರ್ಷನ ಮರುಹುಟ್ಟಿನಲಿ
ಶರದನ ಸಡಗರದಲಿ
ಹೇಮಂತನ ಹಿಮದಲಿ
ಶಿಶಿರನ ವಿರಕ್ತಿ ರಕ್ತಿಯಲಿ
ಹುಡುಕಿದೆ ಹುಡುಗಿ
ಈಗ
ಅರಿವಾಯ್ತು ನೀ ಕರಗಿ
ನನ್ನೊಳಗೇ ಇರುವೆಯೆಂದು.
***********************
ವಾವ್ ಸುಂದರವಾದ ಕಲ್ಪನೆ ಕವಿತೆ ಸೊಗಸಾಗಿದೆ