ಒಟ್ಟಾರೆ ಕಥೆಗಳು

ಪುಸ್ತಕ ಸಂಗಾತಿ

ಒಟ್ಟಾರೆ ಕಥೆಗಳು

ಒಟ್ಟಾರೆ ಕಥೆಗಳು :  ಕಥಾ ಸಂಕಲನ 
ಲೇಖಕರು :  ರವಿ ಬೆಳಗೆರೆ 
ಪ್ರಥಮ ಮುದ್ರಣ : ಡಿಸೆಂಬರ್ ೨೦೨೦ ಪ್ರಕಾಶಕರು :  ಗಣೈಕ್ಯ ಮುದ್ರಣಾಲಯ 

ಒಟ್ಟಾರೆ ಕಥೆಗಳು :  ಕಥಾ ಸಂಕಲನ 

ಲೇಖಕರು :  ರವಿ ಬೆಳಗೆರೆ 

ಪ್ರಥಮ ಮುದ್ರಣ : ಡಿಸೆಂಬರ್ ೨೦೨೦ ಪ್ರಕಾಶಕರು :  ಗಣೈಕ್ಯ ಮುದ್ರಣಾಲಯ 

ಪ್ರಸಿದ್ಧ ಪತ್ರಿಕೋದ್ಯಮಿ ಲೇಖಕ ಕಾದಂಬರಿಕಾರ ನಟ ಟಿವಿ ಧಾರಾವಾಹಿಗಳು ನಿರ್ಮಾತೃ ಹೀಗೆ ಬಹುಮುಖ ಪ್ರತಿಭೆಯ “ಹಾಯ್ ಬೆಂಗಳೂರ್” ಪತ್ರಿಕೆಯ ರವಿ ಬೆಳಗೆರೆ ಅವರ ಪರಿಚಯ ಎಲ್ಲರಿಗೂ ಇದ್ದೇ ಇದೆ.

ಪ್ರಸ್ತುತದ “ಒಟ್ಟಾರೆ ಕಥೆಗಳು” ಕಥಾ ಸಂಕಲನದಲ್ಲಿ ರವಿ ಬೆಳಗೆರೆಯವರ ಎಲ್ಲಾ  ೨೩ ಕತೆಗಳ ಸಂಗ್ರಹವಿದೆ. ೧೯೭೯ ರಿಂದ ೧೯೯೫ ರವರೆಗೆ ಹದಿನಾರು ವರ್ಷಗಳಲ್ಲಿ ಅವರು ಬರೆದ ಇಪ್ಪತ್ತೊಂದು ಕಥೆಗಳು ಮತ್ತು ಅನಂತರದ 2ಕಥೆಗಳು. 

ಈ ಒಟ್ಟಾರೆ ಕಥಾಸಂಕಲನಗಳನ್ನು ಓದುವಾಗ ಒಬ್ಬ ಕಥೆಗಾರ ಬೆಳೆದುಬಂದ ಹಾದಿ ಬದಲಾಗುವ ದೃಷ್ಟಿಕೋನ ಹಾಗೂ ಆದ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತದೆ.  ಅಂತೆಯೇ ಕಥೆಯ ನಿರೂಪಣಾ ಶೈಲಿ ಬಳಸುವ ತಂತ್ರಗಳಲ್ಲಿನ ಬದಲಾವಣೆ ಸುಧಾರಣೆಗಳ ಸ್ಪಷ್ಟ ಚಿತ್ರಣ ದೊರಕುತ್ತದೆ .೧೯೮೦ ಒಳಗೆ ಬರೆದ 4 ಕಥೆಗಳು ಇಲ್ಲಿವೆ ಶಾಲಿನಿ, ದಾರಿ, ಹಂತಕ ಕತ್ತಲೆ, ನೋವು ಮತ್ತು ಹೆಣ.  ನೇರ ನೇರ ಸ್ಪಷ್ಟ ಕಥೆ ಹೇಳುವ ಸರಳ ಶೈಲಿ ಈ ಕಥೆಗಳ ಮುಖ್ಯ ಲಕ್ಷಣ. 

ಹಾಗೆಯೇ ಪಾವೆಂ ಹೇಳಿದ ಕಥೆಯಲ್ಲಿ ಅಸಫಲ ಮದುವೆಯಲ್ಲಿ ಸಿಲುಕಿದ ಹೆಣ್ಣು ಎರಡನೇ ಮದುವೆ ಎಂದು ತಿಳಿದೂ ಕೊಟ್ಟ ತವರು ಹಾಗೂ ದುರ್ಬಲ ಗಂಡ ಇಬ್ಬರನ್ನು ಬಿಟ್ಟು ಬದುಕು ಕಟ್ಟಿಕೊಳ್ಳುವಾಕೆ.  ತನ್ನ ಶಿಕ್ಷಕರೊಂದಿಗೆ ಕಥೆ ಹೇಳುವ ರೀತಿಯಲ್ಲಿ ತನ್ನ ಬದುಕನ್ನು ಬಿಚ್ಚಿಡುತ್ತಾಳೆ. ಆದರೆ ಹೆಚ್ಚು ಕಡಿಮೆ ಅದೇ ತರಹದ ದುರ್ಬಲ ಗಂಡ ಹಾಗೂ ಸುತ್ತಿರುವ ರೀತಿರಿವಾಜುಗಳಲ್ಲಿ ಒದ್ದಾಡುವ “ವಿತಥ” ಕಥೆಯ ಅನಸೂಯಾ,  ಕಲ್ಪನಾ ಹಾಗೂ ಭ್ರಾಮಕ ಲೋಕದಲ್ಲಿ ಮುಳುಗಿಬಿಡುತ್ತಾಳೆ . ಪ್ರಬುದ್ಧರಾಗುತ್ತಾ ಅಥವಾ ಹೊರಗಿನ ಜಗತ್ತಿಗೆ ಹೆಚ್ಚು ತೆರೆದುಕೊಳ್ಳುತ್ತಾ ಹೋದಂತೆ ಸಂದರ್ಭಗಳ ಬಗೆಗಿನ ದೃಷ್ಟಿಕೋನವೂ ಸಂಕೀರ್ಣವಾಗುತ್ತಾ ಹೋಗುವುದಕ್ಕೆ ಇದು ಉದಾಹರಣೆಯಾಗಬಹುದೇನೋ.  

ಹಾಗೆಯೇ ಬದುಕೊಂದು ಸತತ ಅಭ್ಯಾಸದಲ್ಲಿ  ತೊನ್ನು ಬಂದು ತನ್ನದೇ ಪ್ರಪಂಚದೊಳಗೆ ಆಮೆಯ ಹಾಗೆ ಹುದುಗುವ ವ್ಯಕ್ತಿತ್ವದ ಪರಿಚಯ ಮಾಡಿಸುವ ಲೇಖಕರು ಗಿಡ್ಡಾಂಜನೇಯಸ್ವಾಮಿ ಕಥೆಯಲ್ಲಿ ನೈತಿಕತೆಯ ಪರಿಧಿ ದಾಟಿ ಪಶ್ಚಾತಾಪದ ಬೆಂಕಿಯಲ್ಲಿ ತಾನೇ ದಗ್ಧವಾಗುವ ಮನಸ್ಥಿತಿಯನ್ನು ವಿವರಿಸುತ್ತಾರೆ.

ಇದು ಮಾನವ ಸ್ವಭಾವಗಳ ವೈರುಧ್ಯಗಳ ಆಯಾಮವನ್ನು ತೋರಿಸುತ್ತದೆ  . 

ದಾಂಪತ್ಯ ಸಂಬಂಧಗಳ ಬಗೆಗಿನ ಮೊದಲಿನ ಕಥೆಯಾದ  ಶಾಲಿನಿಯಲ್ಲಿ ಪ್ರೀತಿಸಿ ಮದುವೆಯಾಗಿ ವಿವಾಹವಾದ ವರ್ಷಕ್ಕೆ ದಾಂಪತ್ಯದಲ್ಲಿ ಸ್ವಾರಸ್ಯಕರ ಕಳೆದುಕೊಳ್ಳುವ ನಾಯಕ ನಂತರ ಮತ್ತೆ ಹೆಂಡತಿಯ ಮಡಿಲಿಗೆ ಬರುತ್ತಾನೆ.  ಇದು ಸಾಮಾನ್ಯ ಓದುಗನಿಗೆ ಇಷ್ಟವಾಗುವ ಅಂತ್ಯ . ಆದರೆ ಸತ್ಯಭಾಮೆಯ ತೆಕ್ಕೆಯಿಂದ ಕಥೆಯಲ್ಲಿ ಅವನಿಗೆ ಅರಿವುಂಟಾಗಿ ಬರುವ ವೇಳೆಗೆ ತಡವೇ ಆಗಿರುತ್ತದೆ . ಮತ್ತು ಇಲ್ಲಿ ಕಥೆ ಹೆಣೆದಿರುವ ತಂತ್ರದ ಕಡೆಗೆ ಹೆಚ್ಚಿನ ಒತ್ತೆ ಹೊರತು ಕಥೆಗಲ್ಲ ಎಂಬುದನ್ನು ಗಮನಿಸಬೇಕು . 

ವಂಧ್ಯಾ ಕತೆಯಲ್ಲಿ ಬ್ರಾಹ್ಮಣ ತರುಣಿಯೊಬ್ಬಳು 3 ಹದ್ದುಗಳ ಗೆಳೆತನದಲ್ಲಿ ತಾನು ಹದ್ದಾಗಿ ಮಾರ್ಪಟ್ಟು ಮನೆಯ ಬಂಧನ ಕಳಚಿಕೊಂಡು ಹಾರಿ ಹೋಗುತ್ತಾಳೆ. ಇಲ್ಲಿ ಹದ್ದು ಹೊರಗಿನ ಆಕರ್ಷಣೆಗಳ ರೂಪಕವೇ? ಸ್ಪಷ್ಟವಾಗಿ ಅರ್ಥವಾಗಲಿಲ್ಲ . ಕುಹೂ ಕುಹೂ ಕತೆಯಲ್ಲಿ ಕಲಾವಿದನೊಬ್ಬ ಕ್ರೂರಿ ಜಗದ ಮೋಸ ವಂಚನೆಗೆ ಸಿಲುಕಿ ತನ್ನ ಮಾರ್ದವತೆ ಕಳೆದುಕೊಂಡು ಸ್ಮಶಾನದ ಗೋರಿ ಅಗೆಯುವ ಕೆಲಸಕ್ಕೆ ತೊಡಗಿದರೂ,  ನಿಸ್ವಾರ್ಥ ಪ್ರೀತಿಗೆ ಕಟ್ಟು ಬೀಳುವುದು ಇನ್ನೂ ಮಾಯವಾಗದ ಮಾನವೀಯತೆಗೆ ಸಾಕ್ಷಿಯಾಗುತ್ತದೆ . ತಲೆಕೆಟ್ಟು ಬಸ್ಟ್ಯಾಂಡಿನಲ್ಲಿ ಮೈಕಿನಲ್ಲಿ ಬಡಬಡಿಸುವ ಸಾರಿಗೆ ಇಲಾಖೆಯ ವ್ಯಕ್ತಿಯ ಚಿತ್ರಣ “ಮೈಕು” ನಲ್ಲಿ ಬರುತ್ತದೆ. ಇಲ್ಲೆಲ್ಲಾ ಕಥೆಗಿಂತ ಹೆಚ್ಚು ಪ್ರಾಮುಖ್ಯತೆ ಕಟ್ಟುವ ಶೈಲಿ ಬಳಸುವ ಪ್ರತಿಮೆ ರೂಪಕಗಳಿಗೆ ದಕ್ಕುತ್ತದೆ. ನೇರ ಸರಳ ಕಥನ ವಿರದೆ ಅರ್ಥೈಸಿಕೊಳ್ಳುವುದು ಸಾಮಾನ್ಯ ಓದುಗನಿಗೆ ಸ್ವಲ್ಪ ಕಷ್ಟವೇ . 

ಇನ್ನು “ಮಿನಾರುಗಳ ಊರಲ್ಲಿ ಅವರು” ಕಥೆ ವಿವಾಹೇತರ ಸಂಬಂಧದ ಬಗೆಗಿನ ಕಥೆ.  ಇಲ್ಲಿಯೂ ಅತಿ ಭಾವುಕತೆ ಮತ್ತು ರೂಪಕಗಳ ಬಳಕೆ. ತೆಲುಗು ಕಥೆಗಳ ಪ್ರಭಾವ ಇಲ್ಲಿ ಹೆಚ್ಚು ಆದಂತೆ ಅನ್ನಿಸಿತು .ತೆಲುಗಿನದೇ ಅನುವಾದವೇನೋ ಅನ್ನಿಸುವಷ್ಟು.

“ಭ್ರೂಣ ಸಂಭಾಷಣೆ” ಕತೆಯಲ್ಲಿ ಅಂತರಂಗದ ಮಾತುಗಳು ಭ್ರೂಣದ ಬಾಯಿಂದ ಹೊರಬರುವ ವಿಧಾನ,  ಫಕೀರನ ಪಾತ್ರದಲ್ಲಿ ಸಂಬಂಧಗಳ ಬದಲಾಗುವ ಆಯಾಮಗಳ

ಹಾಗೂ ವಿಶದೀಕರಣದ ಉಪಮೆ ಎದ್ದುತೋರುತ್ತದೆ.  

“ಆಕ್ರಮಣ”ದಲ್ಲಿ ಜೊತೆಯವರೊಂದಿಗೆ ಆಪ್ತ ನಾಗಲೊಲ್ಲದ ವಿಕ್ಷಿಪ್ತ ಮನಸ್ಥಿತಿಯ ವ್ಯಕ್ತಿಯ ಪಾತ್ರ ನಿರೂಪಣೆ.  ಮತ್ತಲ್ಲಲ್ಲೇ ಅವನ ಪತ್ನಿ ಹಾಗೂ ಸ್ನೇಹಿತನ ಸಂಬಂಧಗಳ ಸುತ್ತ ಗಿರಕಿ ಹೊಡೆಯುತ್ತದೆ. 

ಸಂಕಲನದ ಕಡೆಯ ಕಥೆ “ಬರುವನೇನೆ ಚೆಲುವ” ತಂದೆ_ಮಗಳ ಸುಮಧುರ ಬಾಂಧವ್ಯ, ವಿವಾಹಪೂರ್ವ ಪ್ರೀತಿ ಬಸಿರುಗಳ ಚಿತ್ರಣವಾದರೂ ಕಡೆಯಲ್ಲಿನ ರಹಸ್ಯದ ಎಳೆ ಅರಿತಾಗ ಕಾಣದ ಅನುಬಂಧಗಳ ಹೆಣೆತಗಳ ಬಗ್ಗೆ ವಿಸ್ಮಯ ಮೂಡಿಸುತ್ತದೆ. ಚರ್ವಿತ ಕಥಾವಸ್ತುವಾದರೂ ಹೆಣೆದಿರುವ ರೀತಿ ಹೊಸತೆನಿಸುತ್ತದೆ . 

  ಪ್ರಾಯಶಃ ಬಡತನದ ಮಗ್ಗಲುಗಳನ್ನು ಜಗತ್ತಿನ ಕ್ರೂರ ಮುಖಗಳನ್ನು ನೇರಾನೇರ ನೋಡಿದ ಅನುಭವ ಅವರ ಲೇಖನಿಯಿಂದಲೂ ಅದೇ ಹರಿತ ಮೊನಚಿನ ಪ್ರಭಾವ ಮೂಡಿಸುತ್ತದೆ .ಹಣವೊಂದೇ ಪ್ರಧಾನ ಎನಿಸಿದ  ಜಗತ್ತಿನ ಜೋಗತಿಯರ ಜೀವನದ ಕಥೆ ಹೀಗೂ ಉಂಟೆ ಅನ್ನಿಸುವಂತೆ ಮಾಡುತ್ತದೆ. ವೇಷಗಳು ಕಥೆಯಲ್ಲಿನ ಅಂತರ್ಗತ ಆ ಸ್ವಾರ್ಥ ಶೋಷಣೆಗಳು ಬದುಕಿನ ನಮಗೆ ತಿಳಿಯದ ಅನೇಕ ಅಂಶಗಳನ್ನು ದಾಖಲಿಸುತ್ತದೆ.  ಹೋಟೆಲಿನಲ್ಲಿ ದುಡಿಯುವ ಹುಡುಗರು ಎದುರಿಸಬೇಕಾದ ಶೋಷಣೆಯ ಮುಖವನ್ನು “ದಾರಿ” ಕನ್ನಡಿಯಂತೆ ಎದುರಿಗಿಡುತ್ತದೆ . ಒಟ್ಟಿನಲ್ಲಿ ಒಂದು ತರಹದ “ಕಂಫರ್ಟ್ ಝೋನ್” ನಲ್ಲಿದ್ದು ನಮ್ಮ ಸುತ್ತಮುತ್ತಲೇ ಪ್ರಪಂಚ ಇದುವೇ ಜೀವನ ಎಂದುಕೊಂಡು ಅಂತಹ ಕಥೆಗಳಲ್ಲೇ ಆಸಕ್ತಿ ಅಭಿರುಚಿ ಬೆಳೆಸಿಕೊಂಡಿರುವ ನಮಗೆ ಇದು ಬೇರೆಯೇ ಲೋಕದ ಕಪ್ಪು ಕರಾಳ ಬದುಕಿನ, ಕ್ರೂರತೆ ದೌರ್ಜನ್ಯ , ಎದುರಿಸಬೇಕಾದ ಅಸಹಾಯಕತೆಯ ದಾರುಣ ಸ್ಥಿತಿಗಳ ಅನಾವರಣ ಮಾಡಿಸುತ್ತದೆ.   ಹೆದ್ದಾರಿಯಲ್ಲಿ ಪ್ರಯಾಣ ಮಾಡುವಂತಹ ನೇರ ಕಥೆಗಳ ಅಭ್ಯಾಸವಾದವರಿಗೆ ಪ್ರತಿಮೆ ರೂಪಕಗಳ ಸಂದುಗೊಂದಿನಲ್ಲಿ ಸುತ್ತಿ ದಾರಿ ಮಾಡಿಕೊಳ್ಳುವ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಒಟ್ಟಿನಲ್ಲಿ ಓದಲೇಬೇಕಾದ ಪುಸ್ತಕಗಳ ಪಟ್ಟಿಗೆ ಸೇರುವಂತಹ ಪುಸ್ತಕ .

ತಡರಾತ್ರಿ ಓದಿ ಮುಗಿಸಿದ ಪ್ರಭಾವವೋ ಏನೋ ಕನಸಿನಲ್ಲಿ “ಮಿನಾರದ ಮೇಲೆ ಕುಳಿತು ನೋಡುವಾಗ ಸ್ಮಶಾನದಲ್ಲಿ ಗೋರಿ ಯ ಹೆಣಗಳು ಮೇಲೆದ್ದಿದ್ದವು . ಫಕೀರನ ಪಟ್ಟಣಶೆಟ್ಟಿ ಯಂತಹವರ ಅಟ್ಟಹಾಸದಲ್ಲಿ  ಆಂಜನಪ್ಪ ನಂತಹ ಮಗು ಹುಚ್ಚು ನಗೆ ಬೀರುತ್ತಾ ಕುಣಿಯುತ್ತಿತ್ತು . ಅನಸೂಯಳ ಹುಚ್ಚುಮಾತು ಹಾರಾಡುವ 4 ಹದ್ದುಗಳು. ಅಬ್ಬಾ ! ಭಯದಲ್ಲಿ ನಡುಗುವಾಗ “ಅಪ್ಪ” ನನ್ನ ಅಣ್ಣನನ್ನೇ ನೆನಪಿಸಿ ಧೈರ್ಯ ಅಭಯ ಹಿತ ನೀಡಿ ಎಚ್ಚರವಾಯಿತು.” ಹೊರಗಡೆ ಹೊಸದಿನ ಉದಯಿಸಿತ್ತು.

********************************

ಸುಜಾತಾ ರವೀಶ್       

2 thoughts on “ಒಟ್ಟಾರೆ ಕಥೆಗಳು

  1. ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು .ಸಂಪಾದಕರಿಗೆ ನಾನು ಆಭಾರಿ .
    ಸುಜಾತಾ ರವೀಶ್

Leave a Reply

Back To Top