ಅಂಕಣ ಬರಹ

ತೊರೆಯ ಹರಿವು

ಸಾವಯವ ಸಿರಿಧಾನ್ಯಗಳ ಮಹತ್ವ

Siridhanya - Photos | Facebook

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಇದೊಂದು ಸತ್ಯದ ಮಾತಾಗಿದ್ದು, ಸಾರ್ವಕಾಲಿಕ ಮನ್ನಣೆ ಪಡೆದಿದೆ. ಹಿಂದೆಲ್ಲಾ ಚಿಂತೆ ಇರುವವನಿಗೆ ರೋಗ ಜಾಸ್ತಿ ಅಂತಿದ್ರು. ಆದ್ರೆ ಈಗೆಲ್ಲಾ ಯಾವುದೇ ಚಿಂತೆ ಇಲ್ಲದಿದ್ರೂ ನಮ್ಮ ಜೀವನ ಶೈಲಿ, ಆಹಾರ ಪದ್ಧತಿಗಳ ಮೂಲಕ ನೂರಾರು ಬಗೆಯ ರೋಗಗಳಿಗೆ ನಾವೇ ನೇರಾನೇರವಾಗಿ ಆಹ್ವಾನ ನೀಡುತ್ತಿದ್ದೇವೆ ಅಲ್ಲವೇ? 

  ನಮ್ಮ ಗಡಿಬಿಡಿಯ ಬದುಕಿನಲ್ಲಿ ದೇಹಾರೋಗ್ಯಕ್ಕೆ ಏನು ಕೊಡುತ್ತಿದ್ದೇವೆ ಎಂದು ಯೋಚಿಸದ ನಾವು; ಗಾಡಿಗಳಿಗೆ ಪೆಟ್ರೋಲು ಡೀಸೆಲ್ಲು ಹಾಕಿಸುವ ಹಾಗೆ, ಹೊಟ್ಟೆಗೆ ಟೈಂಗೊಂದಿಷ್ಟು ಹಾಕಿದ್ರಾಯ್ತು ಹೇಗೋ ನಡೆಯುತ್ತೆ ಎನ್ನುವ ಉದಾಸೀನ ಜಾಯಮಾನದವರು. 

 ಆದರೆ ಈ ಗಾಡಿಗಳ ವಿಚಾರದಲ್ಲಿ ಮಾತ್ರ ನಾವು ನಿರ್ಲಕ್ಷ್ಯ ಮಾಡುವುದಿಲ್ಲ. ಅವುಗಳ ಎಂಜಿನ್ನುಗಳನ್ನು ಅನುಲಕ್ಷಿಸಿ; ಪೆಟ್ರೋಲು ಗಾಡಿಗೆ ಪೆಟ್ರೋಲೇ ಹಾಕಿಸುತ್ತೀನಿ. ಅಪ್ಪಿತಪ್ಪಿ ಡೀಸೆಲ್ ಹಾಕಿಸಿದರೆ ಹೇಗೆ?! ಸೀಸ್ ಆಗುವ ಎಂಜಿನ್ನಿನ ರಿಪೇರಿಗೆ ಹಣ ದಂಡ ಮಾಡುವುದಕ್ಕೆ ನಿರಾಕರಿಸುತ್ತಾ ಎಚ್ಚರದಿಂದ ಯಾವ ಇಂಧನ ಬೇಕೋ ಅದನ್ನೇ ಹಾಕಿಸುವ ಜಾಣರು. ಆದರೆ, ಇದೇ ಜಾಣತನವನ್ನು ನಮ್ಮ ಶರೀರ ಎಂಬ ಎಂಜಿನ್ನಿನ ಹೊಟ್ಟೆ ಎಂಬ ಇಂಧನ ಟ್ಯಾಂಕ್ ತುಂಬಿಸುವಾಗ ತೋರುವುದಿಲ್ಲ. ಕಾಳಜಿ ವಹಿಸುವುದಿಲ್ಲ. ಅಧರಕ್ಕೆ ಸಿಹಿಯಾದರೆ ಮುಗಿಯಿತು, ಉದರದ ಕತೆ ಕಟ್ಟಿಕೊಂಡು ನಮಗೇನಾಗಬೇಕು?! ಎಂದು ನಿರ್ಲಕ್ಷ್ಯ ಮಾಡಿದರೂ ಅನಂತರ ಆಸ್ಪತ್ರೆ, ಔಷಧ ಇತ್ಯಾದಿಗಳಿಗೆ ದುಡಿಮೆಯ ಹಣ ಸುರಿಯುತ್ತಾ ಕಳೆದ ಆರೋಗ್ಯ ಮರಳಿ ಪಡೆಯಲು ಸರ್ಕಸ್ ಮಾಡುತ್ತೇವೆ.

 ಮಾನವರು ಆಧುನಿಕತೆಗೆ ಹತ್ತಿರವಾಗುತ್ತಿರುವಂತೆ, ದೇಸಿ ರೂಢಿಗಳಿಂದ ದೂರವಾಗುತ್ತಿದ್ದಾರೆ ಎನಿಸುವುದಿಲ್ಲವೇ? ಅದನ್ನು ಆಚರಣೆಗಳಲ್ಲಿ, ಉಡುಗೆ ತೊಡುಗೆಯ ವಿಚಾರದಲ್ಲಿ ಢಾಳಾಗಿ ಕಾಣಬಹುದಲ್ಲವೇ! ಅದರಲ್ಲೂ ಮುಖ್ಯವಾಗಿ  ಆಹಾರ ಪದ್ಧತಿಯಲ್ಲಿ ಮಹತ್ತರ ಬದಲಾವಣೆ ಆಗಿರುವುದನ್ನು ಕಡೆಗಣಿಸಲಾಗದು. ಭಾರತದ ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರದ  ಮನೆಯೊಂದರ ಊಟದ ತಟ್ಟೆಯಲ್ಲಿ ಆಗಾಗ್ಗೆ ಇಟಲಿ, ಚೀನಾ, ಅಮೇರಿಕಾ ಮೊದಲಾದ ದೇಶಗಳ ಖಾದ್ಯ ವೈವಿಧ್ಯಗಳಿರುವುದು ಸುಳ್ಳಂತೂ ಅಲ್ಲ. ಈ ನವ ಆಹಾರ ಸಂಸ್ಕೃತಿ ಗ್ರಾಮೀಣ ಪ್ರದೇಶಕ್ಕೂ ನಾಜೂಕಾಗಿ ಹರಿದುಹೋಗಿದೆ!!

    ನಮ್ಮದೇ ನೆಲದಲ್ಲಿ ಹಿಂದಿನ ತಲೆಮಾರಿನ ಜನರ ಬಳಕೆಯಲ್ಲಿದ್ದ ಹಾಗೂ ಇಲ್ಲಿಯೇ ಬೆಳೆಯುತ್ತಿದ್ದ ಸಹಜ ಬೆಳೆಗಳನ್ನು ದೇಹಪ್ರಕೃತಿ ಒಗ್ಗಿದ್ದ ಆಹಾರಗಳನ್ನು ಇಂದಿನವರು ಮರೆತಿರುವುದು ಅಷ್ಟೇಕೆ ಬಹುತೇಕ ತ್ಯಜಿಸಿರುವುದನ್ನು ನೋವಿನಿಂದ ಕಾಣಬಹುದು. ರಾಗಿ ಮುದ್ದೆ ಎಂದರೆ ಮೂಗು ಮುರಿಯುವವನು ರಾಗಿ ಬೆಳೆವ ರೈತನ ಮಗನೇ ಆಗಿರಬಹುದು. ಟೂ ಮಿನಿಟ್ಸ್ ನೂಡಲ್ಸಿಗೆ ಯಾರ ಬಾಯಲ್ಲೂ ನೀರೂರಬಹುದು! ಇನ್ನು ಕಜ್ಜಾಯ, ಚಿಕ್ಕಿನುಂಡೆ, ಚಿರೋಟಿಗಳೆಂದರೆ ಮುಖ ಕಿವುಚುವ ನಮ್ಮ ಜನರೆಷ್ಟಿಲ್ಲ!?

  ವರ್ಷಪೂರಾ ಸಾಲುಸಾಲಾಗಿ ಮೆರವಣಿಗೆಯಂತೆ ಬರುವ ಹಬ್ಬಹರಿದಿನಗಳಲ್ಲಿ ಮಾಡುವ ಹೋಳಿಗೆ, ತಂಬಿಟ್ಟು, ಶರಬತ್ತು, ಪಾಯಸ, ವಡೆ, ನಿಪ್ಪಟ್ಟು, ಚಕ್ಕುಲಿ, ಉಂಡೆ, ಕೋಡುಬಳೆ, ಕೋಸಂಬರಿ, ಕಜ್ಜಾಯ ಮೊದಲಾದ ಬಗೆಬಗೆಯ ವಿಭಿನ್ನ ರುಚಿಯ ವ್ಯಂಜನ- ಮೇಲೋಗರಗಳನ್ನು  ಕುಟುಂಬದವರೊಡನೆ  ಸೇರಿ ತಯಾರಿಸಿ ಬಂಧುಬಳಗವನ್ನು ಕರೆದು ಆದರಿಸಿ ಹಂಚಿತಿನ್ನುತ್ತಿದ್ದ ರೂಢಿಗಳು ಈಗ ಬಹುತೇಕ ಮರೆಯಾಗಿವೆ. ತೀರಾ ವಿಶೇಷವಾಗಿ ಎನ್ನುವಂತೆ ಅಪರೂಪಕ್ಕೊಮ್ಮೆ ದೇಸಿ ಅಡುಗೆಗಳನ್ನು ಮಾಡುವುದೇ ಸಹಜ ಎನಿಸಿಬಿಟ್ಟಿದೆ. 

  ಈಗಂತೂ ಜಗತ್ತಿನೆಲ್ಲೆಡೆ ಪ್ರಮುಖ ಆಹಾರವೆಂದು ಅಕ್ಕಿ, ಗೋಧಿ, ಜೋಳ, ಬಾರ್ಲಿ, ಮೈದಾಗಳನ್ನು ಪರಿಗಣಿಸಲಾಗುತ್ತಿದೆ. ಆದರೆ ಪ್ರಾಚೀನದಿಂದಲೂ ಆಕಾರದಲ್ಲಿ ಅಕ್ಕಿ ಗೋಧಿ, ಜೋಳ, ಬಾರ್ಲಿ… ಮೊದಲಾದವುಗಳಿಗಿಂತ ಗಾತ್ರ ಕಿರಿದಾಗಿರುವ, ಕಿರು-ಧಾನ್ಯಗಳೆಂದು ಕರೆಸಿಕೊಳ್ಳುತ್ತಿದ್ದ ನವಣೆ, ಕೊರ್ಲೆ, ಅರ್ಕಾ(ಹಾರಕ), ಬರಗು, ಊದಲು, ಸಜ್ಜೆ, ರಾಗಿ, ಸಾಮೆ, ಜೋಳಗಳನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಇವುಗಳನ್ನು ಬೆಳೆಯಲು ಹೆಚ್ಚೇನೂ ಶ್ರಮಪಡುವ ಅಗತ್ಯವಿರಲಿಲ್ಲ. ತುಸು ಕಡಿಮೆ ಆರೈಕೆಯಲ್ಲೇ ಸಮೃದ್ಧವಾಗಿ ಬೆಳೆಯುತ್ತಿದ್ದ ಬೆಳೆಗಳಿವು. ಹಾಗೂ ಹೆಚ್ಚು ಜನಬಳಕೆಯ ಬೆಳೆಗಳಾಗಿದ್ದವು. ದೇಸೀ ಆಹಾರದ ಮೂಲಗಳಾಗಿದ್ದವು. ಇಂದು ಆ ‘ಕಿರುಧಾನ್ಯ’ಗಳನ್ನೇ ‘ಸಿರಿಧಾನ್ಯ’ಗಳೆಂದು ಕರೆದು ವಿಶೇಷವಾಗಿ ಗೌರವಿಸಲಾಗುತ್ತಿದೆ. 

   ಶಿಲಾಯುಗದ ಕಾಲದಲ್ಲಿಯೇ ಜಗತ್ತಿನ ವಿವಿಧೆಡೆಗಳಲ್ಲಿ  ಈ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದುದಕ್ಕೆ ಹಲವು ಉತ್ಖನನಗಳಲ್ಲಿ ದಾಖಲೆಗಳೂ ಸಿಕ್ಕಿವೆ. ಭಾರತ, ಆಫ್ರಿಕಾ, ಯುರೋಪ್, ಚೀನಾದಲ್ಲಿದ್ದ ಮೂಲನಿವಾಸಿಗಳ ಪ್ರಮುಖ ಆಹಾರವಾಗಿ ಇವು ಬಳಕೆಯಲ್ಲಿದ್ದ ಕುರುಹುಗಳಿವೆ. ಐದಾರು ಸಾವಿರಕ್ಕೂ ಹೆಚ್ಚು ತಳಿಗಳಿದ್ದ ಸಿರಿಧಾನ್ಯಗಳಲ್ಲಿ ಇಂದು ಹಲವಾರು ತಳಿಗಳು ಕಣ್ಮರೆಯಾಗಿವೆಯೆಂದು ತಜ್ಞರು ಸಂಶೋಧಿಸಿ ವಿಶ್ಲೇಷಿಸುತ್ತಾರೆ. 

       ಸಹಜ  ಕೃಷಿಗೆ ಪೂರಕವಾಗಿರುವ ಸಿರಿಧಾನ್ಯಗಳು ಜೀವಿಗಳ ಚಯಾಪಚಯ ಕ್ರಿಯೆಗೂ ಅನುಕೂಲಕಾರಿ ಮತ್ತು ಪೌಷ್ಠಿಕಾಂಶಭರಿತ ಆಹಾರ ಎಂದು ಸಂಶೋಧನೆಗಳು ಸಾಬೀತು ಮಾಡಿವೆ. ಹಾಗಾಗಿ ಇಂದು ವೈದ್ಯಲೋಕ, ಆಹಾರ ತಜ್ಞರ ತಂಡ ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚು ಸೇವಿಸುವಂತೆ ಪ್ರಚುರಪಡಿಸುತ್ತಿದ್ದಾರೆ. ರಾಜ್ಯ- ರಾಷ್ಟ್ರ- ಅಂತಾರಾಷ್ಟ್ರೀಯ ಆಹಾರ- ಕೃಷಿ ಮೇಳಗಳಲ್ಲಿ  ಸರಿಧಾನ್ಯಗಳಿಗೆ ವಿಶೇಷ ಮನ್ನಣೆ ನೀಡಲಾಗುತ್ತಿದೆ. ನಗರ- ಪಟ್ಟಣಗಳಲ್ಲಿಯೂ ಸಿರಿಧಾನ್ಯಗಳ ಮಾರಾಟಕ್ಕೆ ಪ್ರತ್ಯೇಕ ಅಂಗಡಿ- ಮಳಿಗೆಗಳನ್ನು ತೆರೆದಿರುವುದನ್ನೂ ನಾವು ಕಾಣಬಹುದು. 

         ಸಿರಿಧಾನ್ಯಗಳಿಂದ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಮಾಡುವುದನ್ನು ಪಾಕ ಪ್ರವೀಣರು ಮಾಡಿ ತೋರಿದ್ದಾರೆ. ಸಾಮಾನ್ಯ ಅಡುಗೆಗಳಿಂದ ಹಿಡಿದು ವಿಶೇಷ ಖಾದ್ಯಗಳನ್ನೂ ಸಿರಿಧಾನ್ಯಗಳಿಂದ ಮಾಡಬಹುದಾಗಿದೆ! ಹೀಗೆ ತಯಾರಿಸಲಾದ ಆಹಾರೋತ್ಪನ್ನಗಳ ಬಳಕೆಯು ವಿಸ್ತರಿಸುತ್ತಿದೆ. ಹಾಗಾಗಿ ಬೇಡಿಕೆ ಹೆಚ್ಚಾದಂತೆ ಸಿರಿಧಾನ್ಯಗಳನ್ನು ಬೆಳೆಯುವ ಕೃಷಿ ಪ್ರದೇಶವೂ ವಿಸ್ತಾರಗೊಳ್ಳುತ್ತಿದೆ. ಹಿಂದೆ ಅಂದಾಜು ೧೯ – ೨೦ ಸಾವಿರ ಹೆಕ್ಟೇರು ವಿಸ್ತೀರ್ಣದಲ್ಲಿ ಬೆಳೆಯುತ್ತಿದ್ದ ಸಿರಿಧಾನ್ಯಗಳನ್ನು ಇತ್ತೀಚೆಗೆ  ಸುಮಾರು ೩೦- ೪೦ ಸಾವಿರ ಹೆಕ್ಟೇರು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. 

     ಸರ್ವಋತು ಬೆಳೆಗಳಾಗಿರುವ ಸಿರಿಧಾನ್ಯಗಳು ಪರಿಸರ ಪೂರಕವಾದ ಬೆಳೆಗಳು. ಅಧಿಕ ಪೌಷ್ಠಿಕಾಂಶ, ಕಬ್ಬಿಣಾಂಶ, ನಾರಿನಂಶ ಹೊಂದಿರುವುದರಿಂದ ಇವು ಉತ್ತಮ ಆಹಾರವೇ ಆಗಿವೆ.  ಜೀವನ ಶೈಲಿ, ಅನುವಂಶೀಯ ಕಾಯಿಲೆಗಳಾದ ಮಧುಮೇಹ, ಆ್ಯಸಿಡಿಟಿ, ರಕ್ತದೊತ್ತಡ, ಮಲಬಾಧೆ, ಕರಳು ಸಂಬಂಧಿ ಕಾಯಿಲೆಗಳೇ ಮೊದಲಾದವುಗಳಿಗೆ ಸಿರಿಧಾನ್ಯಗಳ ನಿಯಮಿತ ಬಳಕೆಯಿಂದ ಶಾಶ್ವತ ಪರಿಹಾರವಿದೆಯೆಂದು ಆಹಾರತಜ್ಞರು ಪ್ರತಿಪಾದಿಸುತ್ತಿದ್ದಾರೆ. ಅಬಾಲವೃದ್ಧರ ಪಚನಕ್ರಿಯೆಗೆ ಸಿರಿಧಾನ್ಯಗಳು ಸರಳವಾಗಿ ಒಗ್ಗುವುದರಿಂದ ಅವುಗಳ ಮಹತ್ವ ಅರಿತು ಬಳಸೋಣ. 

   ನಗರದ ಅಂಗಡಿಗಳಲ್ಲಿ ಒಂದು ಕೆಜಿ ಸಿರಿಧಾನ್ಯಕ್ಕೆ ನೂರಾರು ರೂಪಾಯಿ ಬೆಲೆ ಇರುವದನ್ನು ಕಾಣಬಹುದು. ಇದೇ ಮೌಲ್ಯ ಬೆಳೆಗಾರರಿಗೂ ತಲುಪುತ್ತದೆಯೇ? ರೈತರು ಸಿರಿಧಾನ್ಯಗಳ ಬೆಳೆಯಿಂದ ಲಾಭ ಕಾಣುತ್ತಿದ್ದಾರೆಯೇ?! ಇದು ಅಧ್ಯಯನ ಯೋಗ್ಯ ವಿಷಯ ಎನ್ನುತ್ತಾ…. ಸಾವಯವ ವಿಧಾನದಿಂದ ಬೆಳೆಯುವ ಸಿರಿಧಾನ್ಯಗಳಿಗೆ ನಮ್ಮ ಅಡುಗೆ ಕೋಣೆಯಲ್ಲಿ ಜಾಗ ಕೊಡುವ ಜಾಣರಾಗೋಣ ಹಾಗೂ ‘ಆರೋಗ್ಯವೇ ಭಾಗ್ಯ’ವಾಗಿರುವುದರಿಂದ ಸಹಜ- ಸಮೃದ್ಧ ಆರೋಗ್ಯಕ್ಕಾಗಿ, ಸಿರಿವಂತ ಸಿರಿಧಾನ್ಯಗಳನ್ನು ಪ್ರೀತಿಯಿಂದ ಬಳಸೋಣ.

******************************

ವಸುಂಧರಾ ಕದಲೂರು

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ  ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

3 thoughts on “

  1. ಎಲ್ಲರೂ ಅಡುಗೆ ಮನೆಯಲ್ಲಿ ಸಿರಿ ಧಾನ್ಯಕ್ಕೆ ಜಾಗ ಕೊಟ್ಟರೆ,ರೈತನಿಗೂ ಸಿರಿತನ ದಕ್ಕ ಬಹುದು. ಚಿಂತನೆಗೆ ಹಚ್ಚುವ ಬರಹ.ಚೆನ್ನಾಗಿದೆ ವಸುಂಧರಾ

Leave a Reply

Back To Top