ಕರ್ತವ್ಯಕ್ಕೆ ಬೇಕು ಪ್ರೀತಿಯ ಕೀಲೆಣ್ಣೆ

ಲೇಖನ

ಕರ್ತವ್ಯಕ್ಕೆ ಬೇಕು ಪ್ರೀತಿಯ ಕೀಲೆಣ್ಣೆ

Pottery, Handmade, Hands, Cup, Vase

ನಾನೀಗ ಹೇಳ ಹೊರಟಿರುವ ಕತೆ ಹೊಸದೇನಲ್ಲ. ದಿನಂಪ್ರತಿ ನಾವೆಲ್ಲ ನೋಡುವ ಕೆಲಸಗಾರರಲ್ಲಿ ಮತ್ತು ನಮ್ಮಲ್ಲಿ ಕೆಲಸದ ಬಗ್ಗೆ ಇರುವ ಮನೋಭಾವ ಕೆಲಸದ ಪ್ರತಿ ಇರುವ ಪ್ರೀತಿ ಇಲ್ಲವೇ ನಿರ್ಲಕ್ಷ್ಯ ಬದುಕಿನಲ್ಲಿ ಯಾವ ರೀತಿ ವ್ಯತ್ಯಾಸವನ್ನು ತರಬಲ್ಲದು ಎಂಬ ಸಂದೇಶವನ್ನು ಸಾರುವ ಸ್ವಾರಸ್ಯಕರ ಕತೆ. ಕುತೂಹಲವೇ? ಹಾಗಾದರೆ ಕೇಳಿ.
ಒಂದು ಊರಿನಲ್ಲಿ ದೊಡ್ಡ ದೇವಸ್ಥಾನದ ನಿರ್ಮಾಣ ಕಾರ್ಯ ಆರಂಭವಾಗಿತ್ತು. ನೂರಾರು ಕಾರ್ಮಿಕರು ಕಲ್ಲು ಕೆತ್ತುವ ಕೆಲಸದಲ್ಲಿ ತೊಡಗಿದ್ದರು. ಅವರೆಲ್ಲರೂ ಒಂದೇ ಕೆಲಸ ಮಾಡುತ್ತಿದ್ದುದರಿಂದ ಸಮಾನ ಸಂಬಳ ನೀಡಲಾಗುತ್ತಿತ್ತು. ಕೆಲಸವೇನೋ ಒಂದೇ ಆಗಿತ್ತು ಆದರೆ ಕೆಲಸದ ಪ್ರತಿ ಭಾವನೆಗಳು ಭಿನ್ನವಾಗಿದ್ದವು. ಕಲ್ಲನ್ನು ಕೆತ್ತದಿದ್ದರೆ ಹೊಟ್ಟೆಗಿಲ್ಲವೆಂದು ಅನಿವಾರ್ಯವಾಗಿ ಈ ಕೆಲಸ ಮಾಡಲೇಬೇಕೆಂದು ಕೆಲವರು ಗೊಣುಗುತ್ತಿದ್ದರು. ಇನ್ನು ಕೆಲವರಿಗೆ ದೇವರು ನೆಲೆಸುವ ತಾಣದ ನಿರ್ಮಾಣ ಕಾರ್ಯದಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆಂಬ ಧನ್ಯತಾಭಾವವಿತ್ತು. ಹೀಗಾಗಿ ಕೆತ್ತನೆಯ ಕಾರ್ಯವೆಂದರೆ ಅವರಿಗೆ ದೇವರೊಲುಮೆ ಪಡೆದು ಪುನೀತರಾಗುವ ಪವಿತ್ರ ಕಾರ್ಯವಾಗಿತ್ತು. ಆದ್ದರಿಂದ ಅವರು ಪ್ರತಿ ಕೆತ್ತನೆಯಲ್ಲೂ ಸಂಪೂರ್ಣ ತುಡಿತ ಮಿಡಿತದೊಂದಿಗೆ ಸಮರ್ಪಿಸಿಕೊಂಡು ಕೃತಾರ್ಥಭಾವ ಹೊಂದುತ್ತಿದ್ದರು.ದೇವಸ್ಥಾನದ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಹೊಟ್ಟೆಪಾಡಿಗಾಗಿ ಕೆಲಸ ಮಾಡಿದ ಕಾರ್ಮಿಕರು ನಾಳೆಯಿಂದ ಬೇರೆಡೆಗೆ ಕೆಲಸಕ್ಕೆ ಹೋಗಬೇಕೆಂಬ ಭಾವ ವ್ಯಕ್ತಪಡಿಸಿದರು.ಧನ್ಯತಾಭಾವದಿಂದ ಕೆಲಸ ಮಾಡಿದವರು ಬೆವರಿನ ಲೀಲೆಯ ಫಲವಾಗಿ ದೇವಸ್ಥಾನದ ಸೌಂದರ್ಯ ಹೆಚ್ಚಿದೆಯೆಂದು ಆನಂದ ವ್ಯಕ್ತಪಪಡಿಸಿದರು. ಉದ್ಘಾಟನೆಗೆ ಬಂದ ಭಕ್ತ ಸಮೂಹವೆಲ್ಲ ದೇವಸ್ಥಾನದ ಭವ್ಯ ನಿರ್ಮಾಣ ಕಂಡು ಅತ್ಯದ್ಭುತ ಕೆಲಸವೆಂದು ಉದ್ಗರಿಸಿದಾಗ ಭಕ್ತರ ಸಂತಸದಲ್ಲಿ ತಾವೂ ಆನಂದತುಂದಲಿತರಾದರು. ಇದು ತಮ್ಮ ಕರ್ತವ್ಯನಿಷ್ಟೆಗೆ ಸಿಕ್ಕ ಬಹುಮಾನ. ಎಂದುಕೊಂಡರು..’ತುಕ್ಕು ಹತ್ತಿ ಹೋಗುವುದಕ್ಕಿಂತ ಸವೆದು ಹೋಗುವುದು ಲೇಸು.’ ಎಂಬ ಗಾದೆ ಮಾತಿನಂತೆ ಸಂಬಳಕ್ಕಾಗಿ ದುಡಿದು ಪ್ರಾಣಿಗಳಂತೆ ಹೊಟ್ಟೆ ತುಂಬಿಸಿಕೊಂಡರೆ ಮುಂದೊಂದು ದಿನ ಪಶ್ವಾತ್ತಾಪ ಖಚಿತ. ಕರ್ತವ್ಯದ ಪ್ರೀತಿಯೇ ಜೀವನದ ಹೂದೋಟವನ್ನು ವರ್ಣಮಯಗೊಳಿಸುವುದು. ಬದುಕೇ ಭಾರವೆಂದು ತಿಳಿದವನಿಗೆ ದೇವನ ಹೂದೋಟದ ಅರಿವೇ ಇಲ್ಲ.
ಜೀವನೋಪಾಯಕ್ಕಾಗಿ ನಾವೆಲ್ಲ ಒಂದಿಲ್ಲೊಂದು ಕೆಲಸ ಮಾಡುತ್ತಿರುತ್ತೇವೆ.ಮಾಡುವ ಕೆಲಸದ ಪ್ರತಿ ಗೌರವ ಶ್ರದ್ಧೆ ಇದ್ದರೆ ಅದರ ಫಲ ಸಂತೋಷವನ್ನು ನೂರ್ಮಡಿಗೊಳಿಸುವುದು. ಒಂದು ವೇಳೆ ಸಂಬಳಕ್ಕಾಗಿ ಮಾತ್ರ ಕೆಲಸ ಮಾಡುವ ಯೋಚನೆ ನಮ್ಮದಾಗಿದ್ದರೆ ಅದರ ಫಲಿತಾಂಶವೂ ಸಾಮಾನ್ಯವಾಗಿರುತ್ತದೆ. ಉತ್ಪಾದಕತೆಯೂ ಹೇಳಿಕೊಳ್ಳುವ ಮಟ್ಟಕ್ಕಿರುವುದಿಲ್ಲ. ಗುಣಮಟ್ಟವಂತೂ ಶ್ರೇಷ್ಠತೆಯನ್ನು ದಿಗ್ದರ್ಶಿಸುವುದಿಲ್ಲ. ಮಾಡುವ ಕೆಲಸವನ್ನು ಪ್ರೀತಿಸಿದರೆ ಅದ್ಭುತವಾದುದನ್ನೇ ಸಾಧಿಸಬಹುದು. ಕರ್ತವ್ಯಪರತೆಯನ್ನು ಎತ್ತಿ ಹಿಡಿಯಬಹುದು. ಅಷ್ಟೇ ಅಲ್ಲ ಸಂಬಳದ ಜೊತೆಗೆ ಸದಾ ಉಲ್ಲಸಿತರಾಗಿಯೂ ಇರಬಹುದು. ನಾವು ಮಾಡುವ ಕೆಲಸದ ಗುಣಮಟ್ಟದ ಮೇಲೆ ಕೆಲಸದ ಪ್ರತಿ ನಮಗಿರುವ ಮನೋಭಾವದ ಮೇಲೆ. ಜನ ನಮ್ಮನ್ನು ಗೌರವಿಸುತ್ತಾರೆ. ಈ ರೀತಿ ಪಡೆದ ಗೌರವ ಆಂತರ್ಯದ ಆನಂದವನ್ನು ಅಧಿಕಗೊಳಿಸುತ್ತದೆ. ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಸುಲಭ ಮತ್ತು ಸುಗಮ ಮಾರ್ಗವೆಂದರೆ ಕರ್ತವ್ಯದ ಮಾರ್ಗ. ಕರ್ತವ್ಯದ ಕುರಿತು ಸ್ವಾಮಿ ವಿವೇಕಾನಂದರು ಹೇಳಿದ ನುಡಿ ಅತ್ಯಂತ ಮನನೀಯವಾಗಿದೆ. ‘ಕರ್ತವ್ಯವೆಂದಿಗೂ ಸುಗಮವಾಗುವುದಿಲ್ಲ. ಪ್ರೀತಿಯ ಕೀಲೆಣ್ಣೆಯು ಬಿದ್ದಾಗಲೇ ಅದು ಸರಾಗವಾಗಿ ಸಾಗುತ್ತದೆ. ಇಲ್ಲದಿದ್ದರೆ ಘರ್ಷಣೆ ತಪ್ಪಿದ್ದಲ್ಲ.’ ಭಗದ್ಗೀತೆಯ ಪ್ರಕಾರ ‘ನಮಗೆ ಕರ್ತವ್ಯ ಮಾಡಲು ಮಾತ್ರ ಹಕ್ಕಿದೆ.’ ಕರ್ತವ್ಯಪರತೆಯಿಂದ ಮಾತ್ರ ಜೀವನ ಅಪ್ಯಾಯಮಾನವಾಗುತ್ತದೆ ರಸಭರಿತವಾಗುತ್ತದೆನೀ ಜಗವನ್ನು ಹಸನಾಗಿ ಹದವಾಗಿ ಇಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕರ್ತವ್ಯದ ಬೀಜ ಬಿತ್ತಿ ಜೀವನದ ಪರಮೋಚ್ಛ ಗುರಿಯಾದ ಮುಕ್ತಿಯ ಬೆಳೆಯನ್ನು ಬೆಳೆಯಬಹುದು.. ಅದಕ್ಕಾಗಿ ಕರ್ತವ್ಯಪರತೆಗೆ ಮನದ ಭೂಮಿಯನ್ನು ಹಸನು ಮಾಡಿ. ಹದಗೊಳಿಸಬೇಕು. ಕರ್ತವ್ಯಪರತೆಯು ಸಾಧಕರ ಎದೆಗಿಳಿದಿರುವ ಫಲವಾಗಿಯೇ ಅಮೂಲ್ಯ ಮಾನವ ಜೀವನದ ಮೌಲ್ಯವನ್ನು ಎತ್ತಿ ಹಿಡಿಯಲು ಸಾಧ್ಯವಾಗಿದೆ ಅಲ್ಲವೇ

***********************************

ಜಯಶ್ರೀ ಜೆ.ಅಬ್ಬಿಗೇರಿ

2 thoughts on “ಕರ್ತವ್ಯಕ್ಕೆ ಬೇಕು ಪ್ರೀತಿಯ ಕೀಲೆಣ್ಣೆ

Leave a Reply

Back To Top