ಅಂಕಣ ಬರಹ

ರಂಗ ರಂಗೋಲಿ

ಹಕ್ಕಿ ಹಾರಿತು ನೋಡಿದಿರಾ!

ಲೋಹದ ಹಕ್ಕಿ ರೆಕ್ಕೆ ತೆರೆದುಕೊಳ್ಳುತ್ತ ಆ ವಿಶಾಲವಾದ ಬಯಲಿನಲ್ಲಿ  ಓಡತೊಡಗಿತು. ಕಿಟಕಿಯ ಪಕ್ಕದಲ್ಲಿ ಕೂತವಳು ನೋಟವನ್ನು ಉದ್ದಗಲಕ್ಕೆ ವಿಸ್ತರಿಸಿ ನೋಡುತ್ತಿದ್ದೆ. ವೇಗ ಹೆಚ್ಚುತ್ತ ನೆಲದ ನಂಟು ಕಡಿದು ಎತ್ತರಕ್ಕೆ ಮೇಲೆ ಹಾರುತ್ತಿದೆ, ಜತೆಗೆ ನಾನೂ. ಒಂದು ಕ್ಷಣ ಹೊಕ್ಕುಳ ಬಳ್ಳಿ ಕಡಿದಂತೆ,  ತಳಮಳದಂತಹ ಭಾವವು ಮೊದಲೇ ಪೇರಿಸಿಟ್ಟ ಅಂಜಿಕೆಯ ಮೇಲೆ ಕೂತಂತಾಗಿ ಕಣ್ಣು ಮುಚ್ಚಿದೆ. ಯೋಚನೆಗಳು, ತಮ್ಮ ತಮ್ಮದೇ ಪುಷ್ಪಕ ವಿಮಾನ ಹತ್ತಿ ವಿಹರಿಸಹತ್ತಿದವು.

 ಹಾಗೆ ನೋಡಿದರೆ ಅದು‌ ಮೊದಲ  ವಿಮಾನ ಪ್ರಯಾಣವಾಗಿರಲಿಲ್ಲ. ಆದರೆ ಈ ಪ್ರಯಾಣ ಹಲವು ಕಾರಣಗಳಿಂದ ಅನೂಹ್ಯವೆನಿಸಿತ್ತು. ನಮ್ಮ ನೆಲ, ಮಣ್ಣಿನಾಚೆ ಸಾಗುವ ಅನುಭವದ ಕುತೂಹಲ ಸುಳಿಯಾಗಿ ಒಳಗೆ ತಿರುಗುತ್ತಿತ್ತು. ಜೊತೆಜೊತೆಗೆ ಕರುಳಬಂಧ ಕಡಿದುಕೊಳ್ಳುವ ವೇದನೆ. ನಾವು ಹೋಗುತ್ತಿರುವುದು ಪ್ರವಾಸಕ್ಕಲ್ಲ. ಕಲಾತಂಡದಲ್ಲಿ ಕಲಾವಿದೆಯಾಗಿ ದೂರದ ಮರುಭೂಮಿಯ ಬಿಸಿಲಿಗೆ ತಾಯ್ನೆಲ ತೊರೆದು ಹೋಗಿ ದುಡಿಮೆಗೆ ಹೊಂದಿಕೊಂಡ ಅಲ್ಲಿರುವ ನಮ್ಮ ನೆಲಹೊಲದವರ ಎದುರು ಕಲೆಯ ಪ್ರಸ್ತುತಿಗಾಗಿ.

ಆ ಮಣ್ಣಿಗೆ, ವಿಚಾರಗಳಿಗೆ, ಜನರಿಗೆ ಪೂರ್ತಿ ಅನಾಮಿಕಳು ನಾನು. ಅಲ್ಲಿ ಹೇಗೆ, ಯಾವ ಬಗೆ ಹೇಗಾಗುವುದು. ಎಂಬ ಎಂತದೋ ಚಿಂತೆ.

ವಿಮಾನದೊಳಗೆ ಶಿಸ್ತಿನ, ಸುಂದರ ಪೋಷಾಕಿನ ಚೆಲುವೆಯರು. ಅವರ ಉಡುಪಿನ ಹಾಗೇ ಶಿಷ್ಟಾಚಾರದ ಮಾತುಗಳು. ದೇಹ, ಮನಸ್ಸು, ಬುದ್ದಿಯನ್ನು ಏಕತ್ರಯಗೊಳಿಸಿ ಗಮನಿಸುತ್ತಿದ್ದೆ. ಕಿಟಕಿಯ ಹೊರಗೆ ನೋಡಿದರೆ ಬಲು ಸಮೀಪದಲ್ಲೇ ಹಿಮದ ರಾಶಿಯಂತೆ, ಹತ್ತಿಯ ಗುಡ್ಡದಂತೆ ವಿವಿಧ ಆಕಾರದಲ್ಲಿ ನಡೆದಾಡುವ ಮೋಡಗಳು. ಕೆಳಗೆ ನೀಲಿ ನೀಲಿ ಸಮುದ್ರ. ನಾವು ವಿಮಾನವೇರಿದ್ದೂ ಕಡಲತಡಿಯ ಊರು ಕಣ್ಣೂರಿನಿಂದ. ಇಳಿಯಲಿರುವುದು ಕೂಡಾ ಸಾಗರದ ತಟದಲ್ಲಿಯೇ.

 ರತ್ನಾಕರ!, ಹೌದು. ಅರಬ್ಬೀ ಸಮುದ್ರವನ್ನು ನಮ್ಮ ಗ್ರಂಥಗಳು ಹೆಸರಿಸಿರುವುದು ಅದೇ ಹೆಸರಿನಲ್ಲಿ. ಈಗ ಹೋಗುತ್ತಿರುವುದು ಅದೇ ಅರಬ್ಬರ ರಾಷ್ಟ್ರಕ್ಕೆ.

 ಸುಳಿಯುವ ಯೋಚನೆಗಳನ್ನು ಕೊಡವಿಕೊಂಡೆ. ಪಕ್ಕದಲ್ಲಿ ಆರಾಮವಾಗಿ ಕಣ್ಮುಚ್ಚಿ ಒರಗಿರುವ ಬಾಳಸಖ. ಬಹರೈನ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅಪರಿಚಿತತೆಗೆ ಹೊಂದಿಕೊಳ್ಳುವ ಯತ್ನ ನಡೆಸಿದೆ. ಸುತ್ತಲೂ ಕುತೂಹಲದ ನೋಟ ಹರಿಸಿದೆ. ಬಿಳಿಬಿಳಿ ಉದ್ದನೆಯ ನಿಲುವಂಗಿಯೊಳಗೆ ಹುದುಗಿದ ದೇಹಗಳು, ತಲೆಗೆ ಬಟ್ಟೆಯ  ಬಳೆಗಳನ್ನು ಧರಿಸಿದಂತಿರುವ ಅಲ್ಲಿನ ಪ್ರಜೆಗಳು. ಅಚ್ಚ ಬಿಳಿಬಣ್ಣ. ಬಿಳಿ ಉಡುಪು. ಸುತ್ತಲಿನ ಪರಿಸರ. ಎಲ್ಲೆಡೆ   ಸ್ವಚ್ಚತೆ. ಹದವಾದ ಅತ್ತರಿನ ವಾಸನೆ.

ಆರಂಭ ಹಂತದ ವಿಚಾರಣೆ ಮುಗಿಸಿ ಹೊರಬಂದರೆ ಸ್ವಾಗತಿಸಲು ಅದಾಗಲೇ ಬಹೈರೆನ್ ಕನ್ನಡ ಸಂಘದ ಪದಾಧಿಕಾರಿಗಳು ಕಾಯುತ್ತಿದ್ದರು. ವರ್ಷಗಳಿಂದ ಅಗಲಿದ ಬಂಧುಗಳನ್ನು ಕಂಡ ಆತ್ಮೀಯತೆ, ಕಣ್ಣಿನಲ್ಲಿ, ದೇಹಭಾವಗಳಲ್ಲಿ, ಮಾತಿನಲ್ಲಿ. ಹೌದು ಇದು ರಂಗ ಕಲಾವಿದೆಯಾಗಿ ನನ್ನ ಮೊದಲ ವಿದೇಶ ಪಯಣದ ತುಂಡಾಗಲಾರದ ತುಂಡು ನೆನಪಿನ ನೆನಕೆ.

ಲಂಕೇಶ್ ರ ನಾಟಕ ‘ಸಿದ್ದತೆ’ ಹಾಗೂ‌ ಮಲೆಯಾಳಂ ನಿಂದ ‘ಗುಡ್ ನೈಟ್’ ನಾಟಕಗಳನ್ನು ರಂಗನಿರ್ದೇಶಕರಾದ‌ ಕಾಸರಗೋಡು ಚಿನ್ನಾರವರು” ಕರ್ಮಾಧೀನ್” ಹಾಗೂ” ಎಕ್ಲೋ ಅನೆಕ್ಲೋ” ಎಂಬ ಹೆಸರಿನಲ್ಲಿ ಕೊಂಕಣಿಗೆ ಅನುವಾದಿಸಿದ್ದರು.  ಇದನ್ನು ಉಡುಪಿಯ ರಂಗಕಲಾವಿದರನ್ನು ಸೇರಿಸಿ ರಂಗಕ್ಕೆ ತರಬೇಕೆನ್ನುವ ನಿರ್ಧಾರ ಮಾಡಿದ್ದರು.

 ಕರ್ಮಾಧೀನ್ ನಾಟಕವು ಮೂರು ಪಾತ್ರಗಳನ್ನು ಒಳಗೊಂಡ ಏಕಾಂಕ ನಾಟಕ. ಗಂಡ,ಹೆಂಡತಿ ಹಾಗೂ ಮಗ. ಕಲಾವಿದನೊಬ್ಬನ ಮಾನಸಿಕ ಸಂಘರ್ಷಗಳನ್ನು ಬಿಡಿಸಿಡುವ ಕಥಾನಕ. ಮಧ್ಯಮವರ್ಗದ ಗುಮಾಸ್ತ‌ನೊಬ್ಬ ಉದ್ಯೋಗದ ನಡುವೆ ತನ್ನ  ಅತ್ಯಂತ ಪ್ರೀತಿಯ ಕಲೆಗೆ ತನ್ನನ್ನು ಒಪ್ಪಿಸಿಕೊಳ್ಳಲಾಗದೆ ಈಡೇರದ ಕನಸುಗಳ ಹಂಬಲಿಕೆಯಲ್ಲಿರುತ್ತಾನೆ.  ಎಂದೋ ತನ್ನ ಹರೆಯದಲ್ಲಿ ಅಭಿನಯಿಸಿದ ನಾಟಕಗಳ ಬಗ್ಗೆ ಕನವರಿಸುತ್ತ ಕಲ್ಪನಾ ಲೋಕದಲ್ಲಿ ಇರುತ್ತಾನೆ. ಆದರೆ ಅವನ ಪತ್ನಿ ವಾಸ್ತವವಾದಿ. ಜೊತೆಗೆ ಅವಳದ್ದು ಆಳವಾದ ಪ್ರೀತಿ, ಕಾಳಜಿ ಪತಿಯ ಬಗ್ಗೆ. ಪತಿಯನ್ನು ಅತಿಯಾಗಿ ಪ್ರೀತಿಸುವ ಆಕೆ ಅವನೊಳಗಿನ ಕಲಾವಿದನನ್ನು ಕಂಡು ಮುಖ ತಿರುವುತ್ತಾಳೆ. ಕಲ್ಪನೆಯಲ್ಲಿ ವಿಹರಿಸುವವನನ್ನು ಥಟ್ಟೆಂದು ವಾಸ್ತವಕ್ಕೆ ಮುಖಮಾಡಿಸುತ್ತಾಳೆ. ಜೊತೆಗೆ ಕಲಾವಿದರ ಚರಿತ್ರೆಯೇ ಸರಿಯಿಲ್ಲ. ತನ್ನ ಗಂಡ ತನ್ನ ಹಿಂದಿನ ನೃತ್ಯ, ನಾಟಕ ನೆನಪಿಸಿಕೊಳ್ಳುವುದನ್ನು ಅವಳು ಇಷ್ಟ ಪಡಳು. ಆ ನೆನಪುಗಳೂ  ಅವಳಿಗೆ ಕಹಿ, ಸಹಿಸಳು. ಇವರ ಜೊತೆಗೆ ಅಪ್ಪನನ್ನು ಗೌರವಿಸದ, ನಿರ್ಲಕ್ಷ ತೋರುವ ಮನೋಭಾವದ ಮಗ. ಈ ಮೂರು ಪಾತ್ರಗಳ ಸುತ್ತ ಕಥೆ ಓಡುತ್ತದೆ. ಉಡುಪಿಯ ರಂಗ ಕಲಾವಿದರಾದ ರಾಜಗೋಪಾಲ ಶೇಟ್ ರವರು ಇದರಲ್ಲಿ ಉದ್ಯೋಗದಿಂದ ನಿವೃತ್ತನಾದ ಮುಂದೆ ತನ್ನ ಇಚ್ಛೆಯಂತೆ ಕಲಾವಿದನಾಗಿ ಬದುಕು ನಡೆಸುವ ಹಂಬಲದ ಕಲಾವಿದ. ನಾನು ಕಲಾವಿದನ ಪತ್ನಿಯ ಪಾತ್ರ.  25 ನಿಮಿಷಗಳ ನಾಟಕದಲ್ಲಿ ಫಟಫಟ ಬೆಸೆದುಕೊಳ್ಳುವ ಸಂಭಾಷಣೆ ಜೊತೆಗೆ ರಂಗ ಚಟುವಟಿಕೆಗಳು ನಡೆಯುತ್ತದೆ.  ಎಲ್ಲೂ ವಿರಾಮವಿಲ್ಲ.  ಒಂದಷ್ಟು ಶೋಗಳ‌ ನಂತರ ನಿರ್ದೇಶಕರು ನಾಟಕವನ್ನು ವಿದೇಶಕ್ಕೆ ತೆಗೆದುಕೊಂಡು ಹೋಗುವ ರೂಪುರೇಷೆ ತಯಾರಿಸಿದರು.

 ಅಲ್ಲಿನ ಕನ್ನಡಸಂಘವನ್ನು ಸಂಪರ್ಕಿಸಿದರು. ತಂಡದಲ್ಲಿ ನಿರ್ದೇಶಕರು, ನಾಟಕದ ಹಿನ್ನೆಲೆ ಸಂಗೀತದ ಸಂತೋಷ್ ಪಾನ ಎಂಬ ಹುಡುಗ,ಎಕ್ಲೋ ಅನೆಕ್ಲೋ’ ನಾಟಕದ ಕಲಾವಿದರಾದ ಶಶಿಭೂಷಣ್ ಹಾಗೂ ಸುರೇಶ್.ಸಿದ್ಧತೆ’ ನಾಟಕದ  ಮೂವರು ಕಲಾವಿದರು. ಎಲ್ಲರೂ ವಿದೇಶ ಪ್ರಯಾಣ ಮಾಡಿ ನಾಟಕ ಆಡಲು ಸಿದ್ದತೆ ಮಾಡಿಕೊಂಡೆವು.

ಕಣ್ಣೂರಿನಿಂದ ವಿಮಾನವು ಬಹ್ರೇನ್ ಗೆ ತಲುಪಿತು. ಹೋದ ತಕ್ಷಣವೇ ಅಚ್ಚಕನ್ನಡದ ರುಚಿರುಚಿ ತಿಂಡಿ, ಚಹಾ ಕನ್ನಡದವರ ರೆಸ್ಟೋರೆಂಟಿನಲ್ಲಿ ಕುಡಿದಾಯಿತು. ಎಲ್ಲ ಕಡೆ ಕನ್ನಡ,ತುಳುವಿನ ಆತ್ಮೀಯತೆ ಪಸರಿಸಿ ಕೊಂಡಿತ್ತು. ನಿಜವಾಗಲೂ ವಿದೇಶದ ನೆಲದಲ್ಲಿ ಪಾದವೂರಿದ ನೆನಪೇ ಮರೆಗೆ ಸರಿದಂತೆ.

ನಮ್ಮ ಹೊರತಾಗಿ ಕನ್ನಡ ನಾಡಿನಿಂದ ಮಾತನಾಡುವ ಗೊಂಬೆ’ ಖ್ಯಾತಿಯ ಹಾಸ್ಯ ಕಲಾವಿದೆ ಇಂದುಶ್ರೀ ಹಾಗೂ ಡಿಂಕೂ ಬಂದಿದ್ದರು. ನಮಗಾಗಿಯೇ ಎರಡು ಫ್ಲಾಟ್ ಗಳನ್ನು ಉಳಕೊಳ್ಳಲು ನೀಡಿದ್ದರು.

ಕನ್ನಡ ವೈಭವ ಕಾರ್ಯಕ್ರಮವು ಅಲ್ಲಿನ ರಾಜಾಸ್ಕೂಲ್ ಆಡಿಟೋರಿಯಂನಲ್ಲಿ ಬಹಳ ವೈಭವದಲ್ಲಿ ನಡೆದಿತ್ತು. ಸುಂದರವಾದ ಆಡಿಟೋರಿಯಂ, ಕನ್ನಡದ ವೈಭವ ಸಾರಲು ಮದುವಣಗಿತ್ತಿಯಂತೆ ಅಲಂಕಾರಗೊಂಡಿತ್ತು.

ಈ ಕಾರ್ಯಕ್ರಮದಲ್ಲಿ ನಾನು ಲಾಟರಿ ಗೆದ್ದಂತೆ  ನಾಟಕದ ಹೊರತಾಗಿ ಮಗದೊಂದು ಸುಂದರ ಅವಕಾಶ  ಕಾದಿತ್ತು. ಕಾರ್ಯಕ್ರಮದ ಪ್ರಯೋಜಕರು ನಿರೂಪಣೆ ಮಾಡುವಂತೆ ನನ್ನನ್ನು ಕೇಳಿದಾಗ ಹೊಸ ಸಂತಸ, ಖುಷಿ. ಸಣ್ಣನೆಯ ಭಯದ ಜೊತೆಗೆ ನನ್ನದು ಲಿವ್ ಇನ್ ರಿಲೇಶನ್ ಶಿಪ್ ಅಂತ ಬೇರೆ ಹೇಳಬೇಕಾಗಿಲ್ಲ ತಾನೇ. ನಮ್ಮ ತಂಡದ ಸದಸ್ಯರ ಹಾಗೂ ನಿರ್ದೇಶಕರ ಸಹಕಾರ, ಪ್ರೋತ್ಸಾಹ ಜೊತೆಗಿತ್ತು. ವಿದೇಶಿ ನೆಲದ ವೇದಿಕೆಯಲ್ಲಿ ಮೈಕ್ ಹಿಡಿದು ಕನ್ನಡ ಮಾತನಾಡುವ,  ನಿರೂಪಣೆ ಮಾಡುವ ಚಿನ್ನದಂತಹ ಅವಕಾಶ.  ಕನ್ನಡ ಮಾತುಗಳನ್ನು ಆಡುವಾಗ ಎಂದೂ ಇಲ್ಲದ ರೋಮಾಂಚನ.  ಕಾರ್ಯಕ್ರಮದ ಯಶಸ್ಸಿನಿಂದ  ಭಾವುಕಳಾಗಿದ್ದೆ. ಕನ್ನಡ ತಾಯಿಗೆ ನಮಿಸುವೆ.

 ಇಲ್ಲಿ ಕನ್ನಡದ ” ಸಿದ್ದತೆ ಹಾಗೂ ಗುಡ್ ನೈಟ್” ನಾಟಕಗಳು ಪ್ರದರ್ಶನಗೊಂಡು ಅಲ್ಲಿಯ ಕನ್ನಡಿಗರ ಅಪಾರ ಮೆಚ್ಚುಗೆ ಗಳಿಸಿತು. ಅದೆಷ್ಟು ಕನ್ನಡ ಮನಸ್ಸುಗಳ ಪ್ರೀತಿಯ ಮುತ್ತಿಗೆ. ಆ ಸಂಭ್ರಮ. ಅಲ್ಲಿ ಸಿಕ್ಕಿದ ಆದರ, ಉಪಚಾರ ಮತ್ತು ಔದಾರ್ಯತೆ ಯಾವತ್ತೂ ನೆನಪಿನಲ್ಲಿ ಉಳಿಯುವಂತಹುದು. ನಾವು ಅಲ್ಲಿ ದೊರಕಿದ ಪರಿಕರಗಳನ್ನೇ ಬಳಸಿಕೊಂಡು ನಾಟಕವಾಡಿದ್ದೆವು.

 ನಾಟಕವನ್ನು ನೋಡಿದ ಮಲೆಯಾಳ ಸಂಘದವರೂ  ‌‌‌‌   ಮರುದಿನ ಆತ್ಮೀಯತೆಯಿಂದ ತಮ್ಮಲ್ಲಿಗೆ ಬರಮಾಡಿಕೊಂಡು ಸಂಭ್ರಮಿಸಿದ್ದರು. ನಾವು ಇಲ್ಲಿ ಕೊಂಕಣಿ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ನಾಟಕ ಆಡಿದ್ದೆವು. ನಾಟಕವೊಂದು ದೊರಕಿದ ಪರಿಸರಕ್ಕೆ ಅನುಗುಣವಾಗಿ ಅಲ್ಲಿಯ ವಾತಾವರಣ ಪರಿಕರಗಳನ್ನು ಉಪಯೋಗಿಸಿ ಪರಿಸರಕ್ಕೆ ಸರಿಯಾಗಿ ತನ್ನನ್ನು ತಾನು ಕಟ್ಟಿಕೊಳ್ಳುತ್ತದೆ. ನಿರ್ದೇಶಕ ಹಾಗೂ ಕಲಾವಿದರೂ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡು ತಯಾರಾಗಬೇಕು ಎಂಬುವುದು ಈ ಪ್ರವಾಸದಲ್ಲಿ ಕಂಡುಕೊಂಡಿದ್ದೆ.

ಸಿದ್ದತೆ ನಾಟಕ 24 ಪ್ರಸ್ತುತಿಗಳನ್ನು ಕಂಡಿದೆ. ಅದರಲ್ಲಿ ವಿಶ್ವ ಕನ್ನಡ ಸಮ್ಮೇಳನವು ಕುಂದ ನಾಡಿನಲ್ಲಿ  ನಡೆದಾಗ ಅಲ್ಲಿಯ ಪ್ರಸ್ತುತಿಯೂ ಮುಖ್ಯವಾದುದು. ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದಲ್ಲಿ

 “ಸಿದ್ದತೆ ” ಕಂಪು ಸೂಸಿತ್ತು. ಈ ಕಾರ್ಯಕ್ರಮದ ಸಮಯದಲ್ಲಿ ನಾವು ಒಂದಷ್ಟು ಇತರ ನಾಟಕಗಳನ್ನು ನೋಡುವ ಅವಕಾಶವೂ ಅಲ್ಲಿ ದೊರಕಿತ್ತು.

   ‘ಸಿದ್ದತೆ’ ನಾಟಕ ಹಲವು ಕಾರಣಗಳಿಂದ ನನಗೆ ವೈಶಿಷ್ಟ್ಯ ಪೂರ್ಣವಾದುದು. ಸಾಮಾನ್ಯವಾಗಿ ಸಂಜೆ ಸಮಯದಲ್ಲಿ ನಾಟಕಗಳು ಪ್ರಸ್ತುತಿಯಾಗುವುದು. ಆದರೆ ‘ಸಿದ್ದತೆ’ ಹಲವು ಬಗೆಯಲ್ಲಿ ಸಿದ್ದಗೊಂಡು ಅನಾವರಣವಾದ ನಾಟಕ. ಸಂಜೆ, ರಾತ್ರಿ, ಬೆಳಗಿನ 9 ಕ್ಕೆ, ಮಧ್ಯಾಹ್ನ ಹೀಗೆ ಕಾಲಕ್ಕೆ ತಕ್ಕ ಕೋಲ ಅದರದ್ದು.  ದೇವಾಲಯದ ಅಂಗಣ, ಯಾವುದೋ ಚಾವಡಿ, ಶಾಲೆಯ ಕೊಠಡಿ, ದೊಡ್ಡ ಸಭಾಂಗಣ..ಮುಕ್ತ ಬಯಲು ಎಲ್ಲಾ ನೆಲಕ್ಕೆ ನೆಲೆಕಾಣುವ ಬೆರಗು ಅದರದ್ದು. ಕನ್ನಡಿಗರೆದುರು, ಮಲೆಯಾಳ ಭಾಷಿಗರೆದುರು, ವಿದೇಶಿಯರೆದುರು, ಮರಾಠಿ ಮಾತನಾಡುವವರ ಸಮ್ಮುಖ. ಕ್ರಿಶ್ಚಿಯನ್ ಕೊಂಕಣಿಗರೆದುರು. ಹೀಗೆ ಭಾಷೆಯಾಚೆಗಿನ ಭಾವಕ್ಕೆ ಮನೆಯಾಗುವ ಶಕ್ತಿಯೂ ಅದರದ್ದು.

ಇದಲ್ಲದೆ ಒಂದೇ ದಿನ ನಾಲ್ಕು ಕಡೆ ನಾಲ್ಕು ಪ್ರಸ್ತುತಿ ಕಂಡು ಹೊಸ ಬಗೆಯ  ಪುಳಕದ ಧಾರೆಯೆರೆದಿದೆ.

ಈಗ ಏಕಾಂತದಲ್ಲಿ ಈ ಎಲ್ಲ ಪಿಸುಗುಡುವ ನೆನಪುಗಳು ಕಲರವಗೈದು ಮುದ ನೀಡುತ್ತವೆ. ನೆನಪುಗಳ ಮಾತು ಮಧುರ, ಬಲು ಸುಂದರ.

   ಸಿದ್ದತೆ- ಗುಡ್ ನೈಟ್ ನಾಟಕಗಳು ಸಾಧಾರಣ ನಟಿಯೊಬ್ಬಳಿಂದ  ಸಹೃದಯರು ಗುರುತಿಸುವ ಅಭಿನೇತ್ರಿಯೊಬ್ಬಳನ್ನು ಪರಿಚಯಿಸಿದೆ, ಜೊತೆಗೆ ರಂಗದ ಅ,ಆ ಇ ತಿಳಿಯದ ಸುರೇಶ್ ರಂತವರನ್ನು ರಂಗಕ್ಕೆ ತಂದು ಕಲಾವಿದರೆನ್ನಿಸಿದ, ಶಶಿಭೂಷಣರಂತಹ ಪ್ರತಿಭಾವಂತ ನಟನನ್ನು ಪರಿಚಯಿಸಿದೆ ಎಂದರೆ ಅತಿಶಯೋಕ್ತಿ ಆಗದು.

 ನಾಟಕ ನೋಡಿದ ಅದೆಷ್ಟು ಸಿರಿವಂತ ಹೃದಯದವರು ದೊಡ್ಡ ದೊಡ್ಡ ಹೆಸರು ಮಾಡಿದ ಕಲಾವಿದರೊಂದಿಗೆ ನನ್ನನ್ನು ಹೋಲಿಸಿ ಶಹಭಾಷ್ ಎಂದಾಗ ಕಲಾವಿದೆಯಾಗಿ ತೊರೆ ತೆರೆದು ಅರಳುವಿಕೆಗೆ ಸಮರ್ಪಣೆ ಮಾಡಿದ್ದು  ಸಾರ್ಥಕ ಅನ್ನಿಸಿದೆ.

ನನ್ನ ನಡೆಸಿದ ಕಾಣದ ಶಕ್ತಿಗೆ ಶರಣೆನ್ನುವೆ

*************

ಪೂರ್ಣಿಮಾ ಸುರೇಶ್


ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ





2 thoughts on “

  1. ಎಳೆ ಎಳೆಯಾಗಿ ಬಿಡಿಸಿಟ್ಟ ಪರಿ ಸೊಗಸು.ನೆನಪುಗಳ ಮಾತೇ ಮಧುರ.ಚೆಂದದ ಕಸೂತಿ ಯಂತ ಬರಹ ಸಿರಿ

Leave a Reply

Back To Top