ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ28

ಆತ್ಮಾನುಸಂಧಾನ

ಬಹುಮುಖೀ ವ್ಯಕ್ತಿತ್ವದ ರಾಕಜ್ಜ

oldman | Indian art paintings, Rajasthani painting, Indian paintings

ನಮ್ಮ ತಾಯಿಯ ಚಿಕಪ್ಪ ರಾಕು. ಬಾಲ್ಯದಲ್ಲಿಯೇ ತಂದೆ, ಅವಳ ವಿವಾಹದ ಬಳಿಕ ತಾಯಿಯನ್ನು ಕಳೆದುಕೊಂಡ ಅವ್ವನಿಗೆ ತೌರುಮನೆಯ ಕಡೆಯಿಂದ ಕೊನೆಯವರೆಗೂ ಹತ್ತಿರದಲ್ಲಿ ಕುಟುಂಬದ ಸದಸ್ಯನೇ ಎಂಬಂತೆ ಆಧಾರವಾಗಿದ್ದವನು ಚಿಕ್ಕಪ್ಪ ರಾಕು. ನಮಗೆಲ್ಲ ಅಕ್ಕರೆಯ ರಾಕಜ್ಜ.

ವಿಶೇಷವೆಂದರೆ ಬಾಲ್ಯದಿಂದಲೂ ನನ್ನನ್ನು ವಿಶೇಷವಾಗಿ ಎದೆಗೆ ಹಚ್ಚಿಕೊಂಡು ಅಕ್ಕರೆ ತೋರಿದವನು ರಾಕಜ್ಜನೇ. ಜಾತ್ರೆಗೋ, ಯಕ್ಷಗಾನ ಬಯಲಾಟ ನೋಡುವುದಕ್ಕೋ ನನ್ನನ್ನು ಹೆಗಲೇರಿಸಿಕೊಂಡು ಹೊರಡುವ ರಾಕಜ್ಜ ನಾನು ಬೇಡಿದುದನ್ನು ಕೊಡಿಸುತ್ತ ಮುದ್ದು ಮಾಡಿ ಬೆಳೆಸಿದವನು.

ನಾನು ಬೆಳೆದಂತೆ ಕಾರಣಾಂತರಗಳಿಂದ ದೂರವಿರಬೇಕಾದಾಗಲೆಲ್ಲ ಹೆಂಗಸರಂತೆ ಬಿಕ್ಕಿ ಬಿಕ್ಕಿ ಅಳುತ್ತಲೇ ಬೀಳ್ಕೊಡುವ ಅಜ್ಜನ ಅಪಾರವಾದ ಅಕ್ಕರೆಯ ನಡುವೆಯೇ ನನಗೆ ಬುದ್ಧಿ ಬೆಳೆದಂತೆ ಅವನ ವ್ಯಕ್ತಿತ್ವದ ವಿವಿಧ ಮುಖಗಳು ಬಿಚ್ಚಿಕೊಳ್ಳುತ್ತ ವಿಸ್ಮಯವುಂಟುಮಾಡಿದವು.

ಅಜ್ಜನ ಕೈ ಹಿಡಿದವಳು ನಾನು ಹುಟ್ಟುವ ಮೊದಲೇ  ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಇಹಲೋಕ ತ್ಯಜಿಸಿದ್ದಳು. ಅಜ್ಜ ಇನ್ನೊಂದು ಮದುವೆ ಮಾಡಿಕೊಂಡಿದ್ದ ನಂತೆ. ಆದರೆ ಅವಳು ಅಜ್ಜನೊಟ್ಟಿಗೆ ಬಹುಕಾಲದ ನಿಲ್ಲದೆ ಅಂಕೋಲೆ ಕಡೆಯ ತೌರುಮನೆಗೆ ಹೊರಟು ಹೋದವಳು ಮತ್ತೆ ತಿರುಗಿ ಬರಲಿಲ್ಲ. ಹಾಗಾಗಿ ನನಗೆ ಬುದ್ಧಿ ಬಲಿತ ಕಾಲದಿಂದಲೂ ಅಜ್ಜ ಒಂಟಿಯಾಗಿರುವುದನ್ನು ಮಾತ್ರ ನಾನು ಕಂಡಿದ್ದೇನೆ.

ಮೊದಲ ಹೆಂಡತಿ ಯಿಂದ ಪಡೆದ ಮಗಳನ್ನು ಪ್ರೀತಿಯಿಂದಲೇ ಬೆಳೆಸಿದ ಅಜ್ಜ, ಅವಳು ಹರೆಯಕ್ಕೆ ಬಂದಾಗ ಗುಂಡಬಾಳೆಯ ಕಡೆಯ ಹುಡುಗನೊಬ್ಬನಿಗೆ ಮದುವೆ ಮಾಡಿ ಕೊಟ್ಟವನು ಮಗಳು ಅಳಿಯನೆಂದು ವರ್ಷಕ್ಕೆ ಒಮ್ಮೆ ಅಥವಾ ಅನಿವಾರ್ಯವಾದ ಸಂದರ್ಭದ ಭೇಟಿಯಲ್ಲದೆ ಹೆಚ್ಚಿನ ಒಡನಾಟದ ಸಂಬಂಧ ಉಳಿಸಿಕೊಂಡಿರಲಿಲ್ಲ. ತಂದೆ-ತಾಯಿ ಇಬ್ಬರೂ ಇಲ್ಲದ ತಬ್ಬಲಿ ಎಂಬ ಕಾರಣದಿಂದಲೋ ಅವ್ವನನ್ನೇ ಪ್ರೀತಿಯ ಮಗಳು ಎಂದು ಮಮಕಾರ ತೋರುತ್ತಿದ್ದ.

ನಮ್ಮ ಮನೆಯ ಸನಿಹದಲ್ಲಿಯೇ ಅಜ್ಜನಿಗೆ ಸರಕಾರ ನೀಡಿದ ಐದು ಗುಂಟೆ ಭೂಮಿ, ಒಂದು ಜನತಾ ಮನೆಯಿತ್ತು. ಕೃಷಿ ಕೂಲಿ, ತೆಂಗು ಅಡಿಕೆ ಮರ ಹತ್ತಿ ಕೊಯ್ಲು ಮಾಡುವ ಕೌಶಲ್ಯ ರಾಕಜ್ಜನಿಗಿತ್ತು. ಕೂಲಿ ಕೆಲಸದ ಆಳುಗಳಿಗೆ ತಾನೇ ಮುಂದಾಳಾಗಿ ನಾಯಕತ್ವ ವಹಿಸುವ ಅವನ ಮಾತಿಗೆ ಸಮಾಜ ಬಾಂಧವರೂ ಮನ್ನಣೆ ನೀಡಿ ಗೌರವಿಸುತ್ತಿದ್ದರು. ಇದಕ್ಕೆ ಅಜ್ಜನ ಬಹುಮುಖೀ ವ್ಯಕ್ತಿತ್ವವೇ ಕಾರಣವಾಗಿದ್ದಿರಬೇಕೆಂದು ಅನ್ನಿಸುತ್ತದೆ.

ಅಜ್ಜನ ಮನಯ ಮುಂದೆ ಒಂದು ಬೃಹತ್ತಾದ ತುಳಸಿ ಕಟ್ಟೆಯಿತ್ತು. ತಲೆ ತಲಾತಂತರಗಳಿಂದ ಬಂದ ಈ ತುಳಸಿ ಕಟ್ಟೆಗೆ ಅಜ್ಜನೇ ಪೂಜಾರಿ. ನಮ್ಮ ಕೇರಿಯಲ್ಲಿ ಇರುವುದು ಇದೊಂದೇ ತುಳಸಿ ಕಟ್ಟೆಯಾದ್ದರಿಂದ ಹಬ್ಬ ಹರಿದಿನಗಳಲ್ಲಿ, ವಿಶೇಷವಾಗಿ ಕಾರ್ತಿಕ ಮಾಸದ ತುಳಸಿ ವಿವಾಹ ಸಂಭ್ರಮದ ಪೂಜೆಯಲ್ಲಿ ಕೇರಿಯ ಎಲ್ಲರೂ ಬಂದು ಭಾಗವಹಿಸುತ್ತಿದ್ದರು. ಇಂಥ ಪೂಜಾ ಸಮಯದಲ್ಲಿ ಮಂಗಳಾರತಿ ಮುಗಿಯುತ್ತಿದ್ದಂತೆ ಅಕ್ಷತೆಯನ್ನು ಹಿಡಿದು ಕುಟುಂಬದ ಮತ್ತು ಊರಿನ ಎಲ್ಲರ ಕ್ಷೇಮದ ಕುರಿತು ಅಜ್ಜ ಪ್ರಾರ್ಥಿಸುತ್ತಿದ್ದ. ಇದೇ ಸಂದರ್ಭದಲ್ಲಿ ಅಜ್ಜನಿಗೆ ದೇವರು ಮೈಮೇಲೆ ಬರುವುದೂ, ಭಕ್ತಾದಿಗಳು ಪ್ರಶ್ನಿಸಿ ಪರಿಹಾರ ಕೇಳುವುದೂ ನಡೆಯುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೆವು. ಕೇರಿಯ ಹಲವರು ಬೇರೆಬೇರೆ ಬೇಡಿಕೆಯನ್ನಿಟ್ಟು ಪ್ರಾರ್ಥಿಸಿಕೊಳ್ಳುತ್ತಿದ್ದರು. ಬರುವ ವರ್ಷ ಅದೇ ಹಬ್ಬದ ಪೂಜೆಯಲ್ಲಿ ಹರಕೆಯೊಪ್ಪಿಸಿ ಕೃತಾರ್ಥರಾಗುತ್ತಿದ್ದರು. ಇಂಥ ಪೂಜೆಯ ವಿಶೇಷ ದಿನಗಳಲ್ಲಿ ಅಜ್ಜ ಪೂಜೆ ಮುಗಿಯುವವರೆಗೆ ನಿರಾಹಾರಿಯಾಗಿಯೇ ಇರುತ್ತಿದ್ದ. ಪೂಜೆಯ ಬಳಿಕ ಮಾಡಿದ ಅಡುಗೆಯನ್ನು ದೇವರಿಗೆ, ಪಿತೃಗಳಿಗೆ ಮೀಸಲು ಒಪ್ಪಿಸಿದ ಬಳಿಕವೇ ಊಟ ಮಾಡುತ್ತಿದ್ದ.

ಬಹುಶಃ ಇದೇ ಕಾರಣದಿಂದ ಕೇರಿಯ ಎಲ್ಲರೂ ಅಜ್ಜನನ್ನು ಗೌರವ ಭಾವದಿಂದ ಕಾಣುತ್ತಿರಬೇಕು.

ನಮ್ಮ ಸಮುದಾಯದ ಸಂಪ್ರದಾಯದಂತೆ ಸಮಾಜದ ಮದುವೆ, ನಾಮಕರಣ, ಅಂತ್ಯಸಂಸ್ಕಾರ ಇತ್ಯಾದಿ ಕರ್ಮಗಳಲ್ಲಿ ಬುಧವಂತ ಮತ್ತು ಕೋಲಕಾರರೆಂಬ ಇಬ್ಬರು ಹಿರಿಯರು ಕಾರ್ಯನಿರ್ವಹಣೆಯ ಸೂತ್ರಧಾರರಾಗಿ ಇರುತ್ತಿದ್ದರು. ಅಜ್ಜನಿಗೆ ಇಂಥ ನಿರ್ದಿಷ್ಟ ಸಾಮಾಜಿಕ ಅಧಿಕಾರವೇನೂ ಇರಲಿಲ್ಲ. ಆದರೆ ಜಾತಿಯ ವಿವಾಹ ಸಂಬಂಧ ಕುದುರಿಸುವ ಮತ್ತು ವಿವಾಹ ಮುಂತಾದ ಮಂಗಳ ಕಾರ್ಯಗಳ ನಿರ್ವಹಣೆಯಲ್ಲಿ ಊರಿನ ಬುಧವಂತ ಕೋಲಕಾರರೂ ಅಜ್ಜನನ್ನೆ ಮುಂದಿಟ್ಟುಕೊಂಡು ಅವನ ಸಲಹೆ-ಸಹಕಾರದಿಂದಲೇತಮ್ಮ ಜವಾಬ್ದಾರಿಯನ್ನು ಪೂರೈಸುವುದು ಅಜ್ಜನ ವ್ಯಕ್ತಿತ್ವದ ಒಂದು ಹೆಚ್ಚುಗಾರಿಕೆಯೆಂದೇ ತೋರುತ್ತಿತ್ತು.

ರಾಕಜ್ಜನ ವ್ಯಕ್ತಿತ್ವದ ಬಹುಮುಖ್ಯವಾದ ಭಾಗವೆಂದರೆ ಯಕ್ಷಗಾನ. ಮಾಸ್ಕೇರಿಯ ಹಿರಿಯ ಯಕ್ಷಗಾನ ಕಲಾವಿದರೂ, ಪ್ರಸಂಗಕರ್ತರೂ, ವಿದ್ವಾಂಸರೂ ಆದ ತಿಮ್ಮಣ್ಣ ಗಾಂವಕಾರ ಎಂಬವರು ನಮ್ಮ ಸಮಾಜದ ಯುವಕರನ್ನು ಸಂಘಟಿಸಿ ಯಕ್ಷಗಾನ ತರಬೇತಿ ನೀಡುತ್ತಿದ್ದರೆಂದೂ, ಇದೇ ಕಾರಣದಿಂದ ಅವರು ತಮ್ಮ ಜಾತಿ ಬಾಂಧವರಿಂದ ಬಹಿಷ್ಕಾರದ ಶಿಕ್ಷೆ ಅನುಭವಿಸಿದ್ದರಂದೂ ನಾನು ನನ್ನ ಹಿಂದಿನ ಬರಹಗಳಲ್ಲಿ ಉಲ್ಲೇಖಿಸಿದ್ದೇನೆ.

ಇದೇ ತಿಮ್ಮಣ್ಣ ಗಾಂವಕರರ ಶಿಷ್ಯ ಬಳಗದಲ್ಲಿ ತರಬೇತಿ ಪಡೆದ ನಮ್ಮ ರಾಮಕಜ್ಜನು ಉತ್ತಮ ಯಕ್ಷ ಕಲಾವಿದನಾಗಿಯೂ ಪ್ರಸಿದ್ಧಿ ಪಡೆದಿದ್ದ. ವಿಶೇಷವಾಗಿ ಸ್ತ್ರೀ ಪಾತ್ರದಲ್ಲಿ ಪರಿಣಿತಿ ಹೊಂದಿದ್ದ ರಾಕಜ್ಜನು ದಕ್ಷಿಣದ ಕಡೆಯ ಯಕ್ಷಗಾನ ಕಲಾವಿದರಂತೆ (ಸ್ತ್ರೀ ಪಾತ್ರಗಳಿಗೆ ಅನುಕೂಲಕರವಾಗಿ) ಉದ್ದ ತಲೆಗೂದಲು ಬಿಟ್ಟುಕೊಂಡೇ ಇದ್ದ. ಅವನ ಮೂಗಿನಲ್ಲಿ ಮೂಗುತಿಯ ಗುರುತುಗಾಯ, ಕಿವಿಯಲ್ಲಿ ಕಿವಿಯೋಲೆ ಚುಚ್ಚುವ ಗಾಯಗಳನ್ನು ನಾನು ದೊಡ್ಡವನಾದ ಮೇಲೆಯೂ ಗಮನಿಸಿದ್ದೇನೆ. ಆದರೆ ನಾನು ಯಕ್ಷಗಾನ ಪಾತ್ರ ಮಾಡಲಾರಂಭಿಸಿದಾಗ ರಾಕಜ್ಜ ವಯೋ ಸಹಜ ಕಾರಣಗಳಿಂದ ಸ್ತ್ರೀ ಪಾತ್ರ ಮಾಡುವುದನ್ನು ಸಂಪೂರ್ಣ ನಿಲ್ಲಿಸಿದ್ದ. ತೀರ ಅಪರೂಪವಾಗಿ ಪುರುಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಒಂದು ತಾಮ್ರಧ್ವಜ ಕಾಳಗ ಯಕ್ಷಗಾನ ಬಯಲಾಟದಲ್ಲಿ ಅಜ್ಜನೇ ಅರ್ಜುನನಾಗಿ ಪಾತ್ರ ವಹಿಸಿದ್ದರೆ ನಾನು ಕೃಷ್ಣನ ಪಾತ್ರ ಮಾಡಿದ್ದೆ. ಅದೇ ಪ್ರಸಂಗದಲ್ಲಿ ನಾನು ಬಲಗೈಯಲ್ಲಿ ಬಿಲ್ಲು ಹಿಡಿದು ಎಡಗೈಯಲ್ಲಿ ಬಾಣ ಪ್ರಯೋಗಿಸುವಂತೆ ತಪ್ಪಾಗಿ ಅಭಿನಯಿಸಿದೆನೆಂದು ಆಟದ ಮರುದಿನ ಎಲ್ಲರೆದುರು ಅಜ್ಜ ಅಪಹಾಸ್ಯ ಮಾಡಿ ನಕ್ಕಿದ್ದು ಅಜ್ಜನ ರಂಗಪ್ರಜ್ಞೆಯ ವಿವೇಕವೇ ಆಗಿತ್ತು ಎಂಬುದು ನಿಧಾನವಾಗಿ ನನಗೆ ಅರಿವಾಯಿತು.

ಅಜ್ಜನಿಗೆ ಅಕ್ಷರಾಭ್ಯಾಸವಿರಲಿಲ್ಲ. ಯಕ್ಷಗಾನ ಕಲೆಯ ಆರಾಧಕನಂತೆ ಅದನ್ನು ಹಚ್ಚಿಕೊಂಡಿದ್ದ ಆತನಿಗೆ ಮಹಾಭಾರತಗಳು ಕಂಠಪಾಠದಂತೆ ಅವನ ಸ್ಮೃತಿಯಲ್ಲಿ ನೆಲೆಸಿದ್ದವು. ಭಾರತದ ಹದಿನೆಂಟು ಪರ್ವಗಳಲ್ಲಿ ಯಾವ  ಏನಿದೆ? ಎಂಬುದನ್ನು ತಪ್ಪಿಲ್ಲದೆ ಹೇಳುತ್ತಿದ್ದ. ಯಾವುದೇ ಹೊಸ ಪ್ರಸಂಗವಿದ್ದರೂ ಅದರ ಪದ್ಯವನ್ನು ಕೇಳುತ್ತಲೇ ಅರ್ಥ ವಿವರಿಸುವ ಪ್ರಾಜ್ಞತೆ ಅವನಿಗೆ ಲೋಕಾನುಭವದಿಂದಲೇ ಸಾಧ್ಯವಾಗಿತ್ತು.

ನಾನು ನಮ್ಮೂರಿನ ಬಯಲಾಟ ಪ್ರದರ್ಶನಗಳಿಗಾಗಿ ನನ್ನ ಬಿ.ಎ. ದ್ವಿತೀಯವರ್ಷದ ಕಲಿಕೆಯ ಹಂತದಲ್ಲಿಯೇ ಯಕ್ಷಗಾನ ಪ್ರಸಂಗ ರಚನೆಗೆ ತೊಡಗಿದ್ದೆ. ಆಗ ನಮ್ಮ ತಂದೆಯವರೂ ಸಮರ್ಥ ಕಲಾವಿದರೂ, ಭಾಗವತರೂ ಆಗಿ ಸುತ್ತೆಲ್ಲ ಪ್ರಸಿದ್ಧಿ ಪಡೆದಿದ್ದರು. ನಾನು ರಚಿಸಿದ ಪದ್ಯಗಳನ್ನು ಅವರಿಗೆ ತೋರಿಸಿ ಸರಿಪಡಿಸಿಕೊಳ್ಳಲು ಧೈರ್ಯವಿಲ್ಲದೆ ನಾನು ರಾಕಜ್ಜನನ್ನೇ ಅವಲಂಬಿಸಿದ್ದೆ. ನಾಲ್ಕಾರು ಭಾಮಿನಿ-ವಾರ್ಧಕ ಷಟ್ಪದಿಗಳನ್ನು, ವಿವಿಧ ತಾಳಗಳ ಪದ್ಯಗಳನ್ನು ಬರೆದಾದ ಬಳಿಕ ಅಜ್ಜನ ಮುಂದೆ ಹಾಡಿ ತೋರಿಸುತ್ತಿದ್ದೆ. ಅದರ ಅರ್ಥ ಹೇಳುವುದರೊಂದಿಗೆ ಹಾಡಲು ಸರಿಹೊಂದದಿದ್ದರೆ ಛಂದೋ ದೋಷವಿದೆಯೆಂದೂ ಅಜ್ಜ ಸಲಹೆ ನೀಡುತ್ತಿದ್ದ.

ತನಗೆ ಲಭ್ಯವಾದ ಸಂಕುಚಿತ ಪರಿಸರದಲ್ಲಿಯೇ ತನ್ನ ಅದ್ಭುತ ವ್ಯಕ್ತಿತ್ವಕ್ಕೆ ಸಾಣೆ ಹಿಡಿಸಿಕೊಂಡು ಬೆಳೆದು-ಬೆಳಗಿ ಮರೆಯಾದ ರಾಕಜ್ಜ ಇಂದಿನ ಆಧುನಿ ಪ್ರಪಂಚದಲ್ಲಿ ಬದುಕಿ ಇದ್ದಿದ್ದರೆ?…… ಎಂದು ಹಲವು ಬಾರಿ ನನಗನಿಸಿದೆ

********************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

3 thoughts on “

  1. ಗುರೂಜಿ,
    ನಿಮ್ಮ ಜೀವನದಲ್ಲಿ ರಾಕು ಅಜ್ಜ ಎಷ್ಟು ಸ್ಪೂರ್ತಿ ತುಂಬಿದ್ದಾರೆ ನಿಮಗೆ ಮರೆಯಲಾಗದ ನೆನಪು. ಅವರಿಂದ ಎಷ್ಟೊಂದು ನೀವು ಕಲಿತಿರಿ. ಅಂತಹ ಜನ ಈಗ ಇಲ್ಲ. ನೀವು ಪುಣ್ಯ ಮಾಡಿದ್ದೀರಿ, ಮರೆಯದೆ ಸದಾ ಅವರನ್ನು ನಿಮ್ಮ ಆತ್ಮದಲ್ಲಿ ಇಟ್ಟುಕೊಂಡು ಪೂಜಿಸಿ…….

    ಮುಂದುವರಿದ ಸಂಚಿಕೆ….
    ಎದುರಾಗಿರುವೆ…..!

  2. ಸರ,
    ತಮ್ಮ ಹಿರಿಯರಾದ ರಾಕು ಅಜ್ಜನವರ ಕುರಿತು ಗೌವರಪುರ್ವ್
    ನೆನಪು ಮಾಡಿಕೊಂಡು ಅವರಿಗೆ ಸ್ಮರಣೆ ಮಾಡಿರುತ್ತೀರಿ. ಇಂತಹ ವಿಶೇಷ ವಿಷಯಗಳು ತಮ್ಮಿಂದ ನಿರೀಕ್ಷೆಯಲ್ಲಿ ಇದ್ದೇವೆ.

Leave a Reply

Back To Top