ಪುಸ್ತಕ ಸಂಗಾತಿ
ಮಾತು ಮೀಟಿ ಹೋಗುವ ಹೊತ್ತು
ಮಾತು ಮೀಟಿ ಹೋಗುವ ಹೊತ್ತು
ಮನಸ್ಸಿಗೆ ನಾಟುವ ಬಗೆ
ಪ್ರಕೃತಿ ವಿಕೋಪಗಳಿಂದ ತತ್ತರಿಸಿ ಹೋಗಿರುವ ಕೊಡಗಿನಲ್ಲಿ ಹಲವು ಸೃಜನಶೀಲ ಮನಸುಗಳು ಸದ್ದಿಲ್ಲದೆ ಸಾಹಿತ್ಯ ಪ್ರವಾಹ ಹರಿಸುತ್ತಿವೆ. ಸಾಹಿತ್ಯ ಕ್ಷೇತ್ರದಲ್ಲಿ ಕೊಡಗು ಹಿಂದುಳಿದಿದೆ ಎಂಬ ಮಾತನ್ನು ಇಂದು ಅನೇಕ ಪ್ರಮುಖ ಲೇಖಕ-ಲೇಖಕಿಯರು ಸುಳ್ಳಾಗಿಸುತ್ತಿರುವುದು ಶ್ಲಾಘನೀಯ. ಈ ಕಾರ್ಯದಲ್ಲಿ ಲೇಖಕಿಯರದ್ದೇ ಮೇಲುಗೈ ಎಂದರೆ ತಪ್ಪಾಗಲಾರದೇನೋ. ಹೊಸದಾಗಿ ಪ್ರಕಟವಾಗುತ್ತಿರುವ ಅನೇಕ ಕೃತಿಗಳು ಈ ಸಂಗತಿಯನ್ನು ಸಾಬೀತುಪಡಿಸುತ್ತಿವೆ. ಮಹಿಳಾ ಸಂವೇದನೆಯ ವಿಶಿಷ್ಟತೆಗಳೂ ಈ ಕೃತಿಗಳ ಮೂಲಕ ಅನಾವರಣಗೊಳ್ಳುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಿತಾ ಅಮೃತ್‍ರಾಜ್‍ರ ಪ್ರಬಂಧ ಸಂಕಲನ ‘ಒಂದು ವಿಳಾಸದ ಹಿಂದೆ’ ಮತ್ತು ಕವನ ಸಂಕಲನ ‘ಮಾತು ಮೀಟಿ ಹೋಗುವ ಹೊತ್ತು’ ಕೂಡ ಈ ಮಾತನ್ನು ಸಾಕ್ಷೀಕರಿಸುತ್ತವೆ.
‘ಮಾತು ಮೀಟಿ ಹೋಗುವ ಹೊತ್ತು’ ಕೃತಿ ಸ್ಮಿತಾರ ಮೂರನೆ ಕವನ ಸಂಕಲನ. ನಾಡಿನ ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್‍ರ ಮುನ್ನುಡಿಯೊಂದಿಗೆ ಒಟ್ಟು 52 ಕವನಗಳ ಸಂಗ್ರಹ ಇಲ್ಲಿದೆ. ಮನುಷ್ಯ ಮತ್ತು ಪ್ರಕೃತಿ, ಮನುಷ್ಯ ಮತ್ತು ಸಮಾಜ, ಮನುಷ್ಯ ಮತ್ತು ಮನುಷ್ಯರ ನಡುವಿನ ಮುಖಾಮುಖಿಯೂ ಸೇರಿದಂತೆ ಕವಿ ತನ್ನೊಳಗೇ ಮತ್ತು ತನ್ನ ಕವಿತೆಗಳ ಜೊತೆಗೆ ನಡೆಸುವ ಅನುಸಂಧಾನ ಇಲ್ಲಿನ ಒಟ್ಟಾರೆ ವಸ್ತು ಎಂದು ಸಂಗ್ರಾಹ್ಯವಾಗಿ ಹೇಳಬಹುದು. ಸೂಕ್ಷ್ಮಸಂವೇದನೆಯ ಕವಿ ತನ್ನ ಸುತ್ತಲಿನ ಪರಿಸರದ, ಸಮಾಜದ ಆಗುಹೋಗುಗಳಿಗೆ, ತನ್ನೊಳಗೇ ನಡೆಯುವ ಭಾವನೆಗಳ ತಾಕಲಾಟಕ್ಕೆ ಮತ್ತು ತನ್ಮೂಲಕ ಹುಟ್ಟುವ ಕಾವ್ಯ ಕೌತುಕಗಳಿಗೆ ತಾನೇ ಹೇಗೆ ಕನ್ನಡಿಯಾಗುತ್ತಾನೆಂಬುದು ಈ ಕವಿತೆಗಳಿಂದ ವೇದ್ಯವಾಗುತ್ತದೆ.
ನಿಸರ್ಗದಲ್ಲೇ ಹೆಚ್ಚು ಒಡನಾಡಿರುವ ಈ ಕವಿಗೆ ಮರ, ಬೇರು, ಬಳ್ಳಿ, ಮಳೆಹನಿ, ಹಸಿಮಣ್ಣು, ಹಕ್ಕಿ, ಗುಲಾಬಿ, ಹಳದಿ ಹೂವು, ಕಾಡು ಹೂವು, ನದಿ, ಬಿಸಿಲು, ಬೆಳಕು, ಗಾಳಿ, ಹೀಗೆ ನಿಸರ್ಗದ ಅನೇಕ ಎಲಿಮೆಂಟ್‍ಗಳನ್ನು ಬಳಿಸಿಕೊಳ್ಳುವ ಕಾತುರವಿದೆ ನಿಜ, ಆದರೆ ಅವು ಇಲ್ಲಿ ರೋಮ್ಯಾಂಟಿಕ್ ಆಗಿ, ಜಾಳು ಜಾಳಾಗಿ ಬಳಕೆಯಾಗಿಲ್ಲ ಬದಲಿಗೆ ಅದರಾಚೆಗಿನ ಕೆಲ ಗಂಭೀರವಾದ ಸಂಗತಿಗಳು ಅವುಗಳ ಮೂಲಕ ಅಭಿವ್ಯಕ್ತವಾಗಿವೆ. ಅದಕ್ಕೊಂದು ಪುರಾವೆ ಇಲ್ಲಿದೆ. ಪ್ರಕೃತಿ ಒಮ್ಮೊಮ್ಮೆ ತಾಳುವ ರೌದ್ರತೆಗೆ, ತೋರುವ ಕ್ರೌರ್ಯಕ್ಕೆ ಕವಿಯ ವಿಶಾದವಿದೆ.
ದಿಕ್ಕಾಗಿದ್ದ ನದಿ ತಾನೇ
ದಿಕ್ಕು ಬದಲಿಸಿ ಕೆಂಪಗೆ ಹರಿಯುವಾಗ
ದಿಕ್ಕು ಕಾಣದೆ ದಿಕ್ಕೆಟ್ಟು ನಾನು ನದಿ
ಹರಿಯುವ ದಿಕ್ಕಿಗೆ ಮುಖಮಾಡುವುದ
ನಿಲ್ಲಿಸಿದ್ದೇನೆ.
ಎನ್ನುತ್ತಾ ,‘ಈಗ ನದಿ ತಿಳಿಯಾಗಿದೆ/ ಮುಖ ನೋಡಿಕೊಳ್ಳಬಹುದು ಎನ್ನುತ್ತಾರೆ/ ಮುಖವಾಡ ಹಾಕಲು ನದಿಗೂ ಸಾಧ್ಯವಾ..?’ ಎಂದು ಅಚ್ಚರಿಯಿಂದ ಪ್ರಶ್ನಿಸುತ್ತಾರೆ. ಇದು ಕವಿಗಷ್ಟೇ ಆದ ಆಘಾತವಲ್ಲ ಕೊಡಗಿನಂತಹ ಮಲೆನಾಡಿನಲ್ಲಿ ಸಂಭವಿಸಿದ ಮಹಾ ಪ್ರವಾಹಾಘಾತ ಎಲ್ಲರನ್ನೂ ಹೀಗೇ ಘಾಸಿಗೊಳಿಸಿದ್ದು ನಿಜ. ಅತೀವೃಷ್ಟಿಯ ಪ್ರವಾಹದ ಕಥೆ ಹೀಗಾದರೆ ಅನಾವೃಷ್ಟಿಯ ಬರಗಾಲವೂ ಕವಿಗೆ ಅಸಹನೀಯವಾಗಿದೆ.
ಎದೆಗಿಳಿಯದ ಹನಿ
ಉಸಿರಿಗೆ ದಕ್ಕದ ಹಸಿಮಣ್ಣ ಕಂಪು
ಹೊಯ್ದರೆಷ್ಟು? ಬಿಟ್ಟರೆಷ್ಟು?
ಎಂಬ ತಿರಸ್ಕಾರ ಭಾವ ವ್ಯಕ್ತವಾಗುತ್ತದೆ. ಆದರೆ ಅದೇ ಕವಿಮನ ಪ್ರಕೃತಿಯ ಲೀಲೆಗಳನ್ನು ಬೆರಗಿನಿಂದಲೂ ನೋಡುತ್ತದೆ. ಮಳೆ ಹನಿಗಳ ಬಗ್ಗೆ ಕವಿಗೆ ಮುಗ್ಧ ಕುತೂಹಲವಿದೆ. ‘ವಾಚಾಳಿ ಮುಗಿಲು’ ‘ಮೂಕಿ ನೆಲ’ದ ಜೊತೆ ಯಾವ ಕಾರಣವೂ ಇಲ್ಲದೆ ಬಂಧ ಬೆಸೆದುಕೊಳ್ಳಲು ಬೀಳುವ ಈ ಮಳೆಹನಿಗಳು ಬೊಗಸೆಗಿಳಿಯದೆ ಹೇಗೆಲ್ಲಾ ಸತಾಯಿಸುತ್ತವೆ ಎಂದರೆ;
ಒಡ್ಡಿದ ಅಂಗೈ ಮೇಲೆ
ಒಲ್ಲೆ ಎನ್ನುತ್ತಾ ಸಿಡಿದು
ನೂರು ಚೂರಾಗಿ ಹಾರಿ
ಬರೇ ತೇವವನ್ನಷ್ಟೇ ಉಳಿಸಿ
ಬಿಡದೇ ಕಾಡುತ್ತವೆ.
ಕವಿಯೂ ಕೂಡ ಕುಟುಂಬ ಮತ್ತು ಸಮಾಜದ ಒಂದು ಅಂಗವಾಗಿರುವುದರಿಂದ ಅಪ್ಪ, ಅಮ್ಮ, ಚಿಕ್ಕಪ್ಪ, ಮಗಳು, ಮಕ್ಕಳು, ಗೆಳತಿ, ದಾಂಪತ್ಯದಂತಹ ಮಾನವೀಯ ಸಂಬಂಧಗಳೊಂದಿಗಿನ ಅನುಸಂಧಾನದ ಜೊತೆಗೆ ಸ್ತ್ರೀ ಸಂವೇದನೆಯ ಹಲವು ಆಯಾಮಗಳೂ ಇಲ್ಲಿ ವ್ಯಕ್ತವಾಗಿವೆ. ‘ಅದಕೆ ದಕ್ಕಿದ ಭಾಗ್ಯ’, ‘ಅನಾವರಣ’, ‘ಗೆರೆ’, ‘ವಿಮೋಚನೆ’, ‘ಪಾತ್ರ’, ‘ಮೂಗುತಿ ಸುಂದರಿ’ಯಂತಹ ರಚನೆಗಳಲ್ಲಿ ಇದು ವೇದ್ಯವಾಗುತ್ತದೆ. ‘ಅಮ್ಮಂದಿರೆಲ್ಲಾ ಅಮ್ಮಂದಿರಾಗಿಯೇ ಉಳಿಯಬೇಕಿತ್ತು’ ಎಂಬ ಹಂಬಲ ಕವಿಗಿದೆ. ಅಪ್ಪ ಅಜ್ಜನಾಗದೇ ಮರಣಿಸಿಬಿಡುವುದು ಅಸಹನೀಯವೆನಿಸುತ್ತದೆ. ತನ್ನ ಪುಟ್ಟ ಮಕ್ಕಳ ಹಳೆ ಬಟ್ಟೆಗಳನ್ನೂ ಬೇರೆ ಮಕ್ಕಳಿಗೆ ಕೊಡಲಾರದ ಕಕ್ಕುಲಾತಿ ತಾಯಿಯನ್ನೂ ಇಲ್ಲಿ ಕಾಣಬಹುದು. ಹೀಗೆ ಮನುಷ್ಯ ಸಂಬಂಧದ ಅನೇಕ ಭಾವುಕ ಎಳೆಗಳು ಇಲ್ಲಿ ಬಿಂಬಿತವಾಗಿವೆ.
ಪ್ರತಿ ಕವಿಗೂ ಒಮ್ಮೆಯಾದರೂ ಕವಿತೆಯೇ ಕಾವ್ಯವಸ್ತುವಾಗುವುದು ಹೊಸದೇನಲ್ಲ. ಅಂತೆಯೇ ಸ್ಮಿತಾರ ಅನೇಕ ಕವಿತೆಗಳಿಗೆ ಕಾವ್ಯವೇ ವಸ್ತುವಾಗಿದೆ. ಕವಿತೆ ಹುಟ್ಟುವ ಕ್ಷಣಗಳನ್ನು ಅವರು ವಿಸ್ಮಯದಿಂದಲೇ ನೋಡುತ್ತಾರೆ. ಕವಿ-ಕಾವ್ಯ ಸಂಬಂಧವನ್ನು ಅವರು ನೋಡುವ ರೀತಿ ಅರ್ಥಪೂರ್ಣವಾಗಿದೆ.
ಕವಿತೆಯೇ
ಅರೆಕ್ಷಣ ನಿನ್ನ ಬಿಟ್ಟು ನಾ
ಯೋಚಿಸಬಲ್ಲೆನೇ. . .?
ಕವಿಯ ಪಾಲಿಗೆ ‘ಪದಗಳು ಬರೇ ಪದಗಳಲ್ಲ’ ಬದಲಿಗೆ ಅವು ‘ತುಂಬು ಮೌನದಿಂದ ಅಂಕುರಿಸಿದ ಭಾವಗಳು’. ಇಂತಹ ಭಾವಗಳ ‘ಪದ ಪದಗಳ ನಡುವೆ/ ಹದವಿಟ್ಟ ಗಳಿಗೆ/ ತುಂಬಿ ಹರಿಯುವುದು ನವ/ ನಾದ ನಡಿಗೆ’ಯಾಗಿದೆ ಕವಿತೆ. ಹೆತ್ತವರಿಗೆ ಮಗು ಹೇಗಿದ್ದರೂ ಮುದ್ದಾದುಲ್ಲವೇ? ಹಾಗಾಗಿಯೇ ಕವಿ ತನ್ನ ಕವಿತೆಗಳಿಗೆ ತಾಯಿಯಾಗಿಬಿಡುವುದು.
ಕಾಲಿಲ್ಲದ ಕೈಯಿಲ್ಲದ ಕವಿತೆ
ಹೇಗಿದ್ದರೇನಂತೆ?
ನನ್ನೊಡಲ ಕುಡಿಗೆ ನನ್ನದೇ ಪಡಿಯಚ್ಚು ತಾನೆ?
ಎಂಬ ಸಾಲುಗಳು ಕವಿ- ಕಾವ್ಯ ಸಂಬಂಧ ತಾಯಿ ಮಗುವಿನ ಸಂಬಂಧ ಎಂಬುದನ್ನು ಹೇಳುವ ಜೊತೆಜೊತೆಗೆ ಕವಿಯ ಮನಸಿಗೂ ಮತ್ತು ಆ ಮನಸಸ್ಸು ಸೃಜಿಸುವ ಕಾವ್ಯಕ್ಕೂ ಇರುವ ಅವಿನಾಭಾವ ಸಂಬಂಧವನ್ನೂ ಇದು ಸೂಚಿಸುತ್ತದೆ. ಮಗು ಹೇಗಿದ್ದರೂ ತಾಯಿಗೆ ಅದರಮೇಲೆ ಅವರ್ಣನೀಯ ಅಕ್ಕರೆ. ಹಾಗಾಗಿಯೇ ಕವಿತೆ ‘ಇಲ್ಲೇ ಗಿರಕಿ ಹೊಡೆಯುತ್ತಾ/ ಹಾಡಿಕೊಂಡೇ ಇರಲಿ ಲಾಲಿ/ ಬೇಜಾರೇನಿಲ್ಲ’, ‘ಅಕಸ್ಮಾತ್ ರೆಕ್ಕೆ ಹುಟ್ಟಿ. . . ದೂರ ಹಾರುತ್ತಾ ಸಾಗಿದರೆ/ ಅದು ಅದಕೆ ದಕ್ಕಿದ ಭಾಗ್ಯ/ ನನ್ನದಲ್ಲ’, ಎನ್ನುವ ಸಾರ್ಥಕ ಭಾವ ಕವಿಗಿದೆ. ‘ಸುರಿವ ಮಳೆಯಲ್ಲಿ ಹಾಡಲು ಬಾರದ ಹುಡುಗಿಯೂ ಕೊಡೆಯೊಳಗೆ ಗುನುಗಿಕೊಂಡಂತೆ’ ಸುಖಿಸುತ್ತಾ ಆ ‘ಬೆಚ್ಚಗಿನ ಭಾವದೊಳಗೆ ಕವಿತೆ ಕಾವು ಕೂರುತ್ತದೆ’, ‘ಕವಿತೆ ಹುಟ್ಟುವ ಕ್ಷಣಗಳಿಗೆ ಕಾಡುವ ಭಾವವೇ ಸಾಕ್ಷಿ’ ಎಂದು ಹೇಳುತ್ತಲೇ ‘ಸುಲಭವಾಗಿ ಅರ್ಥಕ್ಕೆ ದಕ್ಕುವುದಿಲ್ಲ ಕವಿತೆ’, ಏಕೆಂದರೆ ‘ಕವಿತೆ ನಿರಾಕಾರ ನಿರ್ವಿಕಾರ’ ಎನ್ನುವುದು ಕವಿಯ ನಂಬಿಕೆ. ಬಹುಷಃ ಈ ಎಲ್ಲ ಕಾರಣಗಳಿಂದಾಗಿಯೇ ಬಿ.ಆರ್.ಲಕ್ಷ್ಮಣರಾಯರು “ಸ್ಮಿತಾ ತನ್ನ ಆತ್ಮಸಂಗಾತಕ್ಕೆ ನೆಚ್ಚಿಕೊಂಡಿರುವುದು ಕೇವಲ ತನ್ನ ಕವಿತೆಯನ್ನು.” ಎಂದಿರುವುದು.
ಮೆಟೀರಿಯಲಿಸ್ಟಿಕ್ ಜಗತ್ತೂ ಕೂಡ ಕವಿ ಮನವನ್ನು ಕಲಕುತ್ತದೆ. ಹಾಗಾಗಿ ರೈಲು, ಶಹರು, ಕುಕ್ಕರ್, ತಪ್ಪಲೆ, ವಸ್ತ್ರ, ಒಡವೆ, ಕೊನೆಗೆ ಸೋಪು, ಸಾಸಿವೆ, ಕರಿಬೇವುಗಳು ಕೂಡ ಇಲ್ಲಿನ ಕವಿತೆಗಳಲ್ಲಿ ಅಲ್ಲಲ್ಲಿ ಕಾಣಸಿಗುತ್ತವೆ. ನಗರೀಕರಣದ ಕರಾಳಮುಖಗಳನ್ನು ಹಲವು ಪವರ್‍ಫುಲ್ ಸಾಲುಗಳಲ್ಲಿ ಕಟ್ಟಿಕೊಡುತ್ತಾರೆ;
ತಲೆಯೆತ್ತಿದೆ ವಿಶಾಲ ಸಭಾಂಗಣ
ತೇವದ ಕುರುಹೇ ಸಿಗದಂತೆ
ಕೆರೆಯ ಸಮಾಧಿಯ ಮೇಲೆ.
ಮೋಡ ಬಿತ್ತನೆ, ನದಿತಿರುವು, ರಸ್ತೆ ಕಾಮಗಾರಿಗಳೆಲ್ಲ ಅಭಿವೃದ್ಧಿಯ ಹೆಸರಲ್ಲಿ ನಡೆಯುವ ಕುಚೇಷ್ಟೆಗಳಲ್ಲದೆ ಮತ್ತಿನ್ನೇನು? ಇದಕ್ಕೆಲ್ಲ ಉತ್ತರ ಪ್ರಕೃತಿಯಲ್ಲಿದೆ ಎಂಬ ಆಶಾವಾದದ ಧ್ವನಿ ಇದೆ.
ಸಾವಿಗೆ ಸೆಡ್ಡು ಹೊಡೆದ ದೈತ್ಯ ಮಹಲುಗಳು
ದಿಟ್ಟಿಸುವಾಗ ಬಿಡುಗಣ್ಣಿನಿಂದ
ನಾನಿಲ್ಲಿ ಧ್ಯಾನಿಸುತ್ತಿರುವೆ
ತೊಂಡೆ, ಬೆಂಡೆ, ಬಸಳೆ
ಬೇರು ಸೋಕುವ ಹಸಿ ಮಣ್ಣ
. . . . ಹಂಚುವುದಕ್ಕಾಗಿ.
‘ಆತ್ಮ ಸಖಿ ನೆನಪಾಗಲೇ ಇಲ್ಲವೇ?’ ಮತ್ತು ‘ಹಾಡಾಗಿ ಆವರಿಸು’ ದಂತಹ ಕವಿತೆಗಳು ಅನುಭಾವಿ ಮೀರಾಳನ್ನೋ ಅಥವ ವಿರಹಿ ಗೋಪಿಕೆಯರನ್ನೋ ನೆನಪಿಸುವ ಕವಿತೆಗಳು. ಈ ಎರೆಡೂ ರಚನೆಗಳು ಸುಂದರವಾಗಿವೆ.
ನಿಜ ಹೇಳು ಕೃಷ್ಣಾ . .
ಪಟ್ಟದರಸಿಗೆ ದೇವಲೋಕದಿಂದ
ಪಾರಿಜಾತ ಗಿಡ ಅರಸಿತರುವಾಗ
ನಿನಗೆ ಒಮ್ಮೆಯೂ ಯಮುನಾ ತಟದ
ಆತ್ಮಸಖಿ ನೆನಪಾಗಲೇ ಇಲ್ಲವೇ?
ಎಂಬಂತಹ ಆಲಾಪನೆಗಳನ್ನು ಎಷ್ಟು ಬಾರಿ ಕೇಳಿದರೂ ಹಿತವೆನಿಸುತ್ತದೆ. ಕೃಷ್ಣನಾದರೋ ಅದೇ ತುಂಟ ನಗೆಯ ಬೀರಿ ಪ್ರಶ್ನೆಗಳನ್ನು ಪ್ರಶ್ನೆಗಳನ್ನಾಗಿಯೇ ಉಳಿಸಿಬಿಡುತ್ತಾನೆ.
‘ಆದರೂ ನಾವು ಮರವಾಗಿದ್ದೇವೆ’ ಎಂಬ ಕವಿತೆ ಮೂಡ್ನಾಕೂಡು ಚಿನ್ನಸ್ವಾಮಿಯವರ ‘ನಾನೊಂದು ಮರವಾಗಿದ್ದರೆ’ ಎಂಬ ಕವಿತೆಯನ್ನು ನೆನಪಿಸುತ್ತದೆಯಾದರೂ ಈ ಕವಿತೆಯ ವಸ್ತು ವಿನ್ಯಾಸ ಮಾತ್ರ ಭಿನ್ನ ರೀತಿಯವು. ‘ಬೇಲಿ’ ಕವಿತೆÀ ಖ್ಯಾತ ಇಂಗ್ಲಿಷ್ ಕವಿ ರಾಬರ್ಟ್ ಫ್ರಾಸ್ಟ್‍ನ ‘ಮೆಂಡಿಂಗ್ ವಾಲ್’ ಕವಿತೆಯನ್ನು ನೆನಪಿಸುತ್ತದೆಯಾದರೂ ಇದು ಕನ್ನಡದ ಸತ್ವವನ್ನು ಹೀರಿಕೊಂಡು ಸ್ವಲ್ಪ ವಿಭಿನ್ನವಾಗಿದೆ. ಪರಸ್ಪರ ವಿರೋಧದ ಬೇಲಿಮೇಲೆ ಬೆಳೆವ ಸಹಬಾಳ್ವೆಯ ಪ್ರೀತಿಬಳ್ಳಿ ಇಲ್ಲಿ ಬಹಳ ಮುಖ್ಯವಾಗುತ್ತದೆ.
ಹೇಳ ಹೆಸರಿಲ್ಲದ ಬೀಜ
ಕೊಳೆತ ರಸವನ್ನೇ ಹೀರಿ ಅದು ಹೇಗೋ
ಬೇರೂರಿ ಮೇಲೇರಿ ನಿಂತೇಬಿಟ್ಟಿತು.
ಹೀಗೆ ಹಬ್ಬುವ ಪ್ರೀತಿಯ ಬಳ್ಳಿಗೆ ಯಾವ ದ್ವೇಷದ ಬೇಲಿಯೂ ಲೆಕ್ಕಕ್ಕಿಲ್ಲ. ಅದಕ್ಕೆ ಗೊತ್ತಿರುವುದು ಹೂಬಿಟ್ಟು ಫಲಕೊಡುವುದು ಮಾತ್ರವೇ. ಹಾಗಾದರೆ ಮನುಷ್ಯ ಮಾಡಬೇಕಿರುವುದೇನು? ಅದಕ್ಕೆ ಕವಿಯ ಉತ್ತರ ಹೀಗಿದೆ.
ಅವರದನ್ನು ಇವರು ಆಯ್ದರು
ಇವರದನ್ನು ಅವರು
ಮಾಲೆ ಕಟ್ಟಿದರು, ದೇವರ ದೀಪಕ್ಕಿಟ್ಟರು.
ಸ್ನೇಹ ಸಂಬಂಧದ ಮಾಲೆ ಕಟ್ಟುವುದಷ್ಟೇ ಮನುಷ್ಯಕುಲ ಮಾಡಬೇಕಿರುವ ಕೆಲಸ. ‘ಪತ್ರ ತಲುಪಿಸುವ ಹೊಣೆ ನಿಮ್ಮ ಮೇಲಿರಲಿ’ ಕವಿತೆ ಕೂಡ ಯುದ್ಧದ ಕರಾಳ ಛಾಯೆ ಹೇಗೆ ಕುಟುಂಬಗಳನ್ನು ಬಾದಿಸುತ್ತದೆ ಎಂಬುದನ್ನು ಹೇಳುತ್ತಾ ಕೊನೆಯಲ್ಲಿ ಯುದ್ಧ ದ್ವೇಷವಿಲ್ಲದ ಶಾಂತಿ ಸೌಹಾರ್ದದ ಅಗತ್ಯತೆಯನ್ನು ವ್ಯಕ್ತಪಡಿಸುತ್ತದೆ.
ನಾವು ಮಕ್ಕಳು ಈ ಸಲದ ಮಳೆಗಾಲಕ್ಕೆ ಬಂದು
ಗಡಿ ರೇಖೆಯ ಉದ್ದಕ್ಕೂ ಗುಲಾಬಿ ಸಸಿ ಊರುವೆವು
ನಿಮ್ಮಲ್ಲಿಯ ಮಕ್ಕಳು ಪಾರವಾಳಗಳನ್ನು ತಂದು
ಬಿಡಲಿ.
ಗುಲಾಬಿ ಮತ್ತು ಪಾರಿವಾಳಗಳು ಪ್ರೀತಿ ಶಾಂತಿಯ ಸಂಕೇತಗಳೆಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲಿ ಮುಖ್ಯವಾಗುವುದು ಮುಗ್ಧತೆಯ ಪ್ರತೀಕಗಳಾದ ಮಕ್ಕಳ ಪಾತ್ರ. ಇದೇ ಬಗೆಯ ಒಳನೋಟ ‘ಗೆರೆ’ ಎಂಬ ಕವಿತೆಯಲ್ಲೂ ಇದೆ. ಎರಡು ಮನ, ಮನೆ ಮತ್ತು ದೇಶಗಳ ನಡುವಿನ ಕಂದಕ ಎಷ್ಟು ಕ್ಷುಲ್ಲಕ ಎಂಬುದು ಕವಿಗೆ ಅರಿವಿದೆ. ಇದೇ ಒಬ್ಬ ಕವಿ ಜಗತ್ತಿಗೆ ನೀಡಬಹುದಾಗಿರುವ ಆದರ್ಶ ಮತ್ತು ಕಾಣ್ಕೆ. ಮನುಷ್ಯ ಮನುಷ್ಯರ ನಡುವೆ ಬೇಲಿ, ಗಡಿ, ಗೆರೆಗಳ ಅವಶ್ಯಕತೆಯಾದರೂ ಏನಿದೆ? ಕೂಡಿ ಬಾಳಿದರೆ ತಾನೆ ಸ್ವರ್ಗಸುಖ?
ಇಲ್ಲಿನ ಕೆಲ ಕವಿತೆಗಳಲ್ಲಿ ಕಾಣಬರುವ ಒಂದು ಗಮನಾರ್ಹ ಸಂಗತಿಯೆಂದರೆ ಅದು ಎರೆಡು ವಿರುದ್ಧ ಅಂಶಗಳನ್ನು ಮುಖಾಮುಖಿಯಾಗಿಸುವ ಇಮೇಜರಿಗಳದ್ದು. ‘ಸುಡು ಸುಡು ಬಿಸಿಲನ್ನು ಉಂಡಷ್ಟು / ತಂಪು ತಂಪು ನೆಳಲ ಹಾಸು’, ‘ಇರುಳಲ್ಲಿ ಬೇಯುತ್ತಾ ಹಗಲಲ್ಲಿ ಹಾಡುತ್ತಾ’, ‘ಚಂದ್ರಮನ ಹಗಲಲ್ಲಿ ಎದ್ದು/ ಇರುಳಲ್ಲಿ ಬೇಯುತ್ತಾ’, ‘ಎ.ಸಿಯೊಳಗೂ ಸುರಿವ ಬೆವರು,’ ‘ಚಿವುಟಿದಷ್ಟೂ ಚಿಗುರಿಕೊಳ್ಳುತ್ತದೆ,’ ‘ಜಗದ ಭಾರವನ್ನೆಲ್ಲಾ ಹೆಕ್ಕಿ ಹೆಕ್ಕಿ/ ಪುಕ್ಕದಲ್ಲಿಟ್ಟು (ಹಕ್ಕಿ ಬಾಲ) ತೂಗುತ್ತಲೇ ಇದೆ.’ ‘ಶಬ್ಧವನ್ನು ನಿಶ್ಯಬ್ಧವಾಗಿ ಇಳಿಸಿಬಿಡು’, ‘ಇಡಿ ಇರುಳಿಗೆ ಬೆಳಕಿನ ಕುಲಾವಿ ತೊಡಿಸಿ’, ‘ಗಾಳಿ ಕೂಡ ಆ ಹೊತ್ತು ನಿಶ್ಚಲವಾಗಿಬಿಡುತ್ತದೆ,’ ಎಂಬಂತಹ ಸಾಲುಗಳನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಪರಸ್ಪರ ವಿರುದ್ಧವಾಗಿರುವ ಎರಡು ಸಂಗತಿಗಳನ್ನು ಹದವಾಗಿ ಒಟ್ಟಿಗೆ ಮುಖಾಮುಖಿಯಾಗಿಸುವ ತಂತ್ರ ಅದ್ಭುತವಾಗಿದೆ. ಈ ಪ್ಯಾರಾಡಾಕ್ಸಿಕಲ್ ಇಮೇಜರಿಗಳು ಕೊಡುವ ಅರ್ಥವಿಶೇಷತೆಗಳನ್ನೇ ಪ್ರತ್ಯೇಕವಾಗಿ ಅಧ್ಯಯನ ಮಾಡಬಹುದೆನಿಸುತ್ತದೆ. ಇದು ಕವಿಯ ಯುಕ್ತಿಯೂ ಹೌದು, ಶಕ್ತಿಯೂ ಹೌದು. ವೈಜ್ಞಾನಿಕವಾಗಿ ಅಸಾಧ್ಯವೆನಿಸಿದ ಸಂಗತಿಗಳನ್ನು ಕವಿ ತನ್ನ ಕಲ್ಪನಾ ಶಕ್ತಿಯಿಂದಲೇ ಸಾಧಿಸಿಬಿಡುವುದು ವಿಸ್ಮಯವೇ ಸರಿ.
‘ಅನಾವರಣ’, ‘ಅಮ್ಮ ಹೇಳುತ್ತಾಳೆ’, ‘ಗೆರೆ’, ‘ವಿಮೋಚನೆ’, ‘ಪುರಾವೆ’, ‘ಬೆಳಕ ನೇಯುವ ಕವಿತೆ’, ‘ಆತ್ಮ ಸಖಿ ನೆನಪಾಗಲೇ ಇಲ್ಲವೇ’, ‘ಮಳೆಬರುವ ಕಾಲಕ್ಕೆ’, ‘ನದಿ ದಿಕ್ಕು ಬದಲಿಸಿದೆ’ ಯಂತಹ ಅನೇಕ ಅದ್ಭುತ ರಚನೆಗಳು ಈ ಸಂಕಲನದಲ್ಲಿವೆ. ವ್ಯಕ್ತಿ, ಸಮಾಜ ಮತ್ತು ಪರಿಸರದ ಸಾಮಾನ್ಯ ಸಂಗತಿಗಳೇ ಕವಿತೆಯ ವಸ್ತುಗಳಾಗಿದ್ದರೂ ಅವನ್ನು ಪ್ರಸ್ತುತ ಪಡಿಸುವ ಕವಿಯ ಕಲಾತ್ಮಕ ಜಾಣ್ಮೆ ಮೆಚ್ಚುವಂತಹುದು. ಕೊಡಗಿನ ಕಾನನದ ಮಡಿಲೊಳಗಿದ್ದುಕೊಂಡು ಯಾವ ವಾದ-ಪಂಥಗಳಿಗೂ ಪಕ್ಕಾಗದೆ, ಆಪ್ತವೆನಿಸುವಂತಹ ತಮ್ಮದೇ ಶೈಲಿ, ಭಾಷೆ, ತಂತ್ರ ಮತ್ತು ರೂಪಕಗಳನ್ನು ಕಂಡುಕೊಳ್ಳುತ್ತಾ ಕಾವ್ಯ ಕೃಷಿ ಮಾಡುತ್ತಿದ್ದಾರೆ ಸ್ಮಿತಾ. ಹೀಗೆಯೇ ಕಾವ್ಯದ ಸುಗ್ಗಿಯಾಗಿ ಅವರು ಸಾಹಿತ್ಯ ಶಿಖರದ ಉತ್ತುಂಗಕ್ಕೇರಲಿ ಎಂಬುದು ಓದುಗರ ಆಶಯ.
*******
ಬಿ. ಜಿ. ಜಗದೀಶ್ ಸಾಗರ್
ಅಭಿನಂದನೆಗಳು ಸ್ಮಿತಾ…
ಸ್ಮಿತಾ ಅಮೃತರಾಜ್ ಅವರ ಬರಹಗಳು ಸಹಜವಾಗಿ ಮೂಡಿಬಂದಿದೆ ಹಾಗಾಗಿ ಆಪ್ತವೆನಿಸುತ್ತದೆ. ಮುಂದಿನ ದಿನಮಾನಗಳಲ್ಲಿ ಇನ್ನೊಂದಿಷ್ಟು ಕೃಷಿಯ ಜೊತೆಗೆ ಸಾಹಿತ್ಯಕೃಷಿಯನ್ನು ಮಾಡಲಿ ಎಂದು ಆಶಿಸುವೆ.
ಸ್ಮಿತಾ ಕವಿತೆ ಆವರಷ್ಟೇ ಚೆಂದ..ಪ್ರತಿ ಕವಿತೆಯೊಳಗಿಳಿದು ವಿಶ್ಲೇಸಿದ ರೀತಿ ಅದ್ಭುತವಾಗಿರುವುದು ಜಗದೀಶ್ ರವರ ಓದಿನ ವಿಸ್ತಾರ…ಇಬ್ಬರಿಗೂ ಅಭಿನಂದನೆಗಳು..
ಧನ್ಯವಾದಗಳು
ಅಪ್ತ ವಿಶ್ಲೇಷಣೆ. ಸ್ಮಿತಕ್ಕ ಕನ್ನಡದ ಸೂಕ್ಷ್ಮ ಕವಯಿತ್ರಿ…
Thank you ಸಹೋದರ ನಾಗರಾಜ್ ರವರಿಗೆ
ಧನ್ಯವಾದಗಳು ಸಂಗಾತಿ,ಜಗದೀಶ್ ಸರ್,sunitakka, ವಸು,ವಿಜಯ್ ಸರ್