
ಅಂಕಣ ಬರಹ
ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ
ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ
ಸರಣಿಬರಹದ ಕೊನೆಯ ಕಂತು

ಅಲ್ಲಿ ಸಂಜೆ ಐದೂವರೆ – ಆರು ಗಂಟೆಗೆಲ್ಲಾ ಸೂರ್ಯಾಸ್ತವಾಗುವುದರಿಂದ ಅಷ್ಟೇ ಬೇಗ ಅಂಗಡಿ ಮುಂಗಟ್ಟುಗಳೆಲ್ಲಾ ಮುಚ್ಚಲ್ಪಡುತ್ತವೆ. ನಾವು ಹೋಗುವುದರೊಳಗೆ ಸರ್ಕಾರಿ ಅಂಗಡಿಗಳೆಲ್ಲ ಮುಚ್ಚಿದ್ದವು. ಕೆಲವು ಖಾಸಗಿ ಅಂಗಡಿಗಳಲ್ಲಿ ಅವರು ಹೇಳಿದ್ದೇ ಬೆಲೆ.
ರಾಧಾನಗರ್ ಬೀಚ್ ಗೆ ಹೋಗುವ ದಾರಿಯಲ್ಲಿ ಸಂತೆ ಅಂಗಡಿಗಳು ಕೆಲವಿದ್ದವು. ಇಲ್ಲಿ ಬೇಡ, ನಿಮಗೆ ಕೊನೆ ದಿನ ಸರ್ಕಾರಿ ಸ್ವಾಮ್ಯದ ಅಂಗಡಿಗಳಲ್ಲೇ ಖರೀದಿಗೆ ಟೈಮ್ ಇರುತ್ತೆ. ಇಲ್ಲೆಲ್ಲ ಒಂದಕ್ಕೆರಡು ಬೆಲೆ ಹೇಳ್ತಾರೆ ಎಂದೆಲ್ಲಾ ಹೇಳಿ, ಈಗ ನೋಡಿದರೆ ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನೋ ಹಾಗಾಯ್ತು.
ಅಲ್ಲಿ ಆದಿವಾಸಿಗಳ ಸುಂದರ ಗೊಂಬೆಗಳಿದ್ದವು. ನಾವು ಭರಟಾಂಗ್ ಗೆ ಹೋಗುವ ದಾರಿಯಲ್ಲಿ ನೋಡಿದ್ದೇವಲ್ಲಾ. ಅಲ್ಲಿ ನಿಂತ ಆದಿವಾಸಿ ಮನುಷ್ಯನನ್ನು ನೋಡಿದಾಗ ಮರದಲ್ಲಿ ಕೆತ್ತಿ ನಿಲ್ಲಿಸಿದ್ದಾರೇನೋ ಅನ್ನುವ ಹಾಗೆಯೇ ಇದ್ದ. ಥೇಟ್ ನಾವು ಬೀಚ್ ಹತ್ರ ಅಂಗಡಿಗಳಲ್ಲಿ ನೋಡಿದ್ದ ಗೊಂಬೆಯಂತೆಯೇ.
ಅಂಥಾ ಗೊಂಬೆಗಳು ಬೇಕೆಂದು ಹುಡುಕಿ ಹೋದರೆ ಒಂದು ಅಂಗಡಿ ತೆರೆದಿತ್ತು. ಅಲ್ಲಿ ವಿಚಾರಿಸಿದಾಗ ಸಿಕ್ಕಿತು. ಆದರೆ ತುಂಬಾ ದುಬಾರಿ. ಟಿ-ಶರ್ಟ್ ಗಳು, ಇನ್ನೇನೇನೋ ಚಿಕ್ಕ ಪುಟ್ಟ ವಸ್ತುಗಳನ್ನು ಈ ಮಕ್ಕಳ ಆಸೆಗೆ ತೆಗೆದುಕೊಳ್ಳಬೇಕಾಯ್ತು.
ಅಲ್ಲಿಗೆ ಅಂಡಮಾನ್ ಪ್ರವಾಸದ ಕೊನೆಯ ಹಂತಕ್ಕೆ ಬಂದು ತಲುಪಿದೆವು. ಮಾರನೆಯ ಬೆಳಿಗ್ಗೆ ಆರುಗಂಟೆಯ ವಿಮಾನದಲ್ಲಿ ನಾವು ವಾಪಸ್ ನಮ್ಮ ಮುಖ್ಯ ಭೂಮಿಗೆ ಮರಳುವುದು. ಎಲ್ಲರೂ ಐದು ಗಂಟೆಗೆ ತಯಾರಾಗಿ ಲಗ್ಗೇಜ್ ನೊಂದಿಗೆ ಹೊಟೇಲ್ ನ ಲಾಂಜ್ ಲ್ಲಿ ಸೇರಬೇಕು. ಎಂದು ನಮಗೆ ಆದೇಶವಾಗಿತ್ತು.
ಬರುವಾಗ ಬೇರೆ ವಿಮಾನದಲ್ಲಿ ಬಂದವರಿಗೆ ಒಂಭತ್ತು ಗಂಟೆಯ ವಿಮಾನವಿತ್ತು. ನಾವು ಹೊರಡುವಾಗ ಅವರೆಲ್ಲಾ ಆರಾಮಾಗಿ ಮಲಗಿದ್ದರು.
ಅಷ್ಟು ಬೆಳಿಗ್ಗೆ ನಮ್ಮ ಇಷ್ಟು ದಿನದ ಪ್ರವಾಸದಲ್ಲಿ ಜೊತೆಯಾಗಿದ್ದ ಹುಡುಗ ವಿಜಯ್ ನಮ್ಮನ್ನು ಮತ್ತೆ ವೀರ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಬಂದಿದ್ದ. ಅತೀ ಉತ್ಸಾಹದ ಮನುಷ್ಯ. ಲವಲವಿಕೆಯ, ನಗುನಗುತ್ತಲೇ ಎಲ್ಲರನ್ನೂ ನಗಿಸುತ್ತಾ, ಚುರುಕಾಗಿ ಓಡಾಡುವ ಆ ಹುಡುಗನನ್ನು ಮರೆಯುವುದು ಸಾಧ್ಯವಿಲ್ಲವೇನೋ.
ನಮ್ಮ ಲಗ್ಗೇಜ್‌ಗಳನ್ನು ಇಳಿಸಿ ಟ್ರಾಲಿಗಳಲ್ಲಿ ಇರಿಸಿಕೊಟ್ಟು ಅಷ್ಟೇ ಲಗುಬಗೆಯಿಂದ ನಮಗೆಲ್ಲಾ ವಿದಾಯ ಹೇಳಿ ಹೊರಡಲು ತಯಾರಾದವನನ್ನು ನಾವೇ ನಿಲ್ಲಿಸಿ ಸ್ವಲ್ಪ ದುಡ್ಡು ಕೈಗೆ ಕೊಟ್ಟೆವು. ಆಗ ನಮ್ಮ ಜೊತೆಯಿದ್ದವರೂ ಒಬ್ಬೊಬ್ಬರಾಗಿ ಕೊಡಲು ಶುರುಮಾಡಿದಾಗ ಭಾವುಕನಾಗಿ ಬಿಟ್ಟ ವಿಜಯ್.
ನಮ್ಮಂತಹ ಎಷ್ಟೋ ಪ್ರವಾಸಿಗರನ್ನು ದಿನಾ ದಿನಾ ನೋಡುವ ಅವನಿಗೆ ನಾವು ಎಲ್ಲರಂತೆ ನಾಲ್ಕೈದು ದಿನಗಳ ಅತಿಥಿಗಳು ಮಾತ್ರ. ನಮ್ಮನ್ನು ಬಿಟ್ಟು ಹೊರಡುವಾಗ ಅವನಿಗೆ ಇನ್ನೊಂದು ತಂಡ ತಯಾರಾಗಿರಬಹುದು. ನಮ್ಮನ್ನು ಅವನು ಸುಲಭವಾಗಿ ಮರೆತು ಬಿಡಬಹುದು.
ಆದರೆ ನಮ್ಮ ನೆನಪಿನಿಂದ ಅವನು ಅಷ್ಟು ಬೇಗ ಮಾಸಿ ಹೋಗುವವನಲ್ಲ.
ಹ್ಯಾವ್ಲೊಕ್ ಲ್ಲಿ ಜೊತೆಯಾದ ದರ್ಶನ್ ಪೋರ್ಟ್ ಬ್ಲೇರ್ ವರೆಗೆ ಬಂದು ಹಾಗೆಯೇ ನಮಗೆಲ್ಲಾ ವಿದಾಯ ಹೇಳಿ ಹೋದ. ನಾವು ಭರಟಾಂಗ್ ಗೆ ಹೋಗುವಾಗ ನಮ್ಮ ಜೊತೆ ವಿಜಯ್ ಬಂದು ನಮ್ಮ ಪ್ರವಾಸದ ಕೊನೆಯವರೆಗೂ ಇದ್ದುದರಿಂದ ಅವನೇ ಎಲ್ಲರಿಗೂ ಹತ್ತಿರದವನಾದ.
ಇಲ್ಲಿಯ ಯಾವುದೋ ಊರಿನಿಂದ ಎಷ್ಟೋ ವರ್ಷಗಳ ಹಿಂದೆ ಹೋಗಿ ಅಲ್ಲಿ ನೆಲೆಸಿದ್ದು ಅವರೆಲ್ಲಾ ಈಗ ಅಲ್ಲಿಯವರೇ ಆಗಿದ್ದಾರೆ.
ಅಂಡಮಾನ್ ದ್ವೀಪದ ಮೂಲನಿವಾಸಿಗಳೆಂದರೆ ಸುಮಾರು ಅರವತ್ತು ಸಾವಿರ ವರುಷಗಳ ಹಿಂದೆ ಆಫ್ರಿಕಾದಿಂದ ವಲಸೆ ಬಂದು ನೆಲೆಸಿದ ಬುಡಕಟ್ಟು ಜನಾಂಗದವರು. ಅವರಿನ್ನೂ ಕಾಡುಗಳಲ್ಲೇ ಉಳಿದು ಹೋದರು.
ಮುಖ್ಯವಾಹಿನಿಯಲ್ಲಿರುವವರೆಲ್ಲಾ ತಮಿಳುನಾಡಿನಿಂದ, ಉತ್ತರ ಭಾರತದಿಂದ, ಪಶ್ಚಿಮ ಬಂಗಾಳದಿಂದ ಬಂದು ನೆಲೆಸಿದ್ದವರೇ. ಅವರೇ ಎಲ್ಲಾ ರೀತಿಯ ವ್ಯಾಪಾರ ವ್ಯವಹಾರಗಳನ್ನು ನಡೆಸುವವರು. ಹೆಚ್ಚಾಗಿ ಹಿಂದಿಯಲ್ಲೇ ಎಲ್ಲಾ ವ್ಯವಹಾರಗಳು ನಡೆಯುತ್ತವೆ.
ನಮ್ಮ ವಿಮಾನ ನೇರ ಬೆಂಗಳೂರಿಗಿರಲಿಲ್ಲ. ಚೆನೈಯಲ್ಲಿ ಇಳಿದು ಮತ್ತೆ ಬೆಂಗಳೂರಿನ ವಿಮಾನ ಹತ್ತಬೇಕಿತ್ತು. ಚೆನೈನಲ್ಲಿ ಇಳಿದಾಗ ಜೋರು ಹಸಿವೆಯಾಗಿತ್ತು. ವಿಮಾನ ನಿಲ್ದಾಣದಲ್ಲಿ ಒಂದೊಂದು ಮಸಾಲೆ ದೋಸೆ ಮತ್ತು ಕಾಫಿ ಕುಡಿದು ಮುಂದಿನ ಪ್ರಯಾಣಕ್ಕಾಗಿ ಕಾದು ಕೂತೆವು.
ಬೆಂಗಳೂರು ತಲುಪುವುದರೊಳಗೆ ಮೈಸೂರಿನ ಇನ್ನೊವಾ ಕಾಯುತ್ತಾ ಇತ್ತು.
ಮದ್ಯಾಹ್ನ ಒಂದೂವರೆಗೆ ಬೆಂಗಳೂರು ತಲುಪಿದರೂ ಮೈಸೂರಿಗೆ ಬರುವ ದಾರಿಯಲ್ಲಿ ಅಡ್ಯಾರ್ ಆನಂದ ಭವನದಲ್ಲಿ ಊಟ ಮಾಡೋಣವೆಂದುಕೊಂಡು ಹೊರಟರೆ, ಎಷ್ಟು ಬಂದರೂ ಆನಂದ ಭವನವಿನ್ನೂ ಸಿಕ್ಕುತ್ತಲೇ ಇಲ್ಲ. ಬೇರೆ ಏನೂ ಕೆಲಸವಿಲ್ಲದಿದ್ದರೆ ಹೊಟ್ಟೆ ಹಸಿವು ಬೇಗ ಬೇಗ ಆಗುತ್ತದಂತೆ.
ಅಂತೂ ಇಂತೂ ಮೂರು ಗಂಟೆಗೆ ಆನಂದ ಭವನ ತಲುಪಿದಾಗ ಹಸಿದು ಹುಲಿಗಳಂತೆ ಆಗಿದ್ದೆವು.
ಮತ್ತೆ ಮೈಸೂರು ತಲುಪಿದಾಗ ಅಂಡಮಾನ್ ನ ಮಧುರ ನೆನಪುಗಳು ತುಂಬಿ ತುಂಬಿ ನಮ್ಮೊಂದಿಗೆ ಬಂದಿದ್ದವು.
(ಮುಗಿಯಿತು.)
****
ಸತತವಾಗಿ ಹತ್ತು ವಾರಗಳ ಕಾಲ ತಮ್ಮ ಪ್ರವಾಸದ ಅನುಭವವನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಂಡ ಲೇಖಕಿಗೆ ಪತ್ರಿಕೆ ಕೃತಜ್ಞತೆಗಳನ್ನು ಅರ್ಪಿಸುತ್ತದೆ
–ಶೀಲಾ ಭಂಡಾರ್ಕರ್.

ತುಂಬಾ ಧನ್ಯವಾದಗಳು. .