ಕೃತಿ-ಮುಳುಗದಿರಲಿ ಬದುಕು(ಅನುವಾದಿತ)
ಲೇ:-ಡಾ.ಸುಭಾಷ್ ರಾಜಮಾನೆ
ಎಪಿಕ್ಟೆಟಸ್ ನ ‘ ದಿ ಆರ್ಟ್ ಆಫ್ ಲಿವಿಂಗ್’
ಕೃತಿಯ ಬಗ್ಗೆ ಒಂದು ಟಿಪ್ಪಣಿ
ಡಾ.ಮಹಾಲಿಂಗ ಪೋಳ
ದಿನಾಂಕ ೦೮-೧೨-೨೦೧೯ ರಂದು ಭಾನುವಾರ ಬಿಡುಗಡೆಯಾಗುತ್ತಿರು ‘ಮುಳುದಿರಲಿ ಬದುಕು’ ಡಾ.ಸುಭಾಷ್ ರಾಜಮಾನೆಯವರ ೪ ನೇ ಕೃತಿ. ೩ ನೇ ಅನುವಾದದ ಕೃತಿ.ಈಗಾಗಲೆ ಸಿನಿಮಾಕ್ಕೆ ಸಂಬಂಧಿಸಿದ ‘ ದಿ ಆರ್ಟಿಸ್ಟ್’ ಮತ್ತು ವಿಕ್ಟರ್ ಪ್ರ್ಯಾಂಕಲ್ ನ ‘ ಬದುಕಿನ ಅರ್ಥ ಹುಡುಕುತ್ತಾ’ ಎಂಬ ಕೃತಿಗಳನ್ನು ಅನುವಾದಿಸಿದ್ದಾರೆ.
ಕನ್ನಡದಲ್ಲಿ ಇಲ್ಲದ ವಿಶಿಷ್ಟವಾದ ವಸ್ತುವುಳ್ಳ ಪುಸ್ತಕವನ್ನು ಆಯ್ದುಕೊಂಡು ಅನುವಾದ ಮಾಡುವುದು ಡಾ.ಸುಭಾಷ್ ರಾಜಮಾನೆಯವರ ವಿಶೇಷತೆ.ಕ್ರಿ.ಶ ೫೫-೧೩೫ ರ ಕಾಲಾವಧಿಯಲ್ಲಿ ಬದುಕಿದ್ದ ಗ್ರೀಸ್ ನ ತತ್ತ್ವಜ್ಞಾನಿ ಎಪಿಕ್ಟೆಟಸ್ ನ ‘ ದಿ ಆರ್ಟ್ ಆಫ್ ಲಿವಿಂಗ್’ ಎಂಬ ಮಹತ್ವದ ಪುಸ್ತಕವನ್ನು ಈಗ ಕನ್ನಡಕ್ಕೆ ತಂದಿದ್ದಾರೆ.ತತ್ತ್ವಶಾಸ್ತ್ರ ವಿಷಯವನ್ನು ಓದುವ ,ಬೋಧಿಸುವ ಕಾಲ ನಿಂತುಹೋದ ಈ ಸಂದರ್ಭದಲ್ಲಿ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವನ್ನು ಕನ್ನಡದ ಓದುಗರಿಗೆ ನೀಡುತ್ತಿರುವುದು ಸಂತೋಷದ ವಿಷಯ.ಪಾಶ್ಚಾತ್ಯ ತತ್ತ್ವಜ್ಞಾನಿಗಳ ಪುಸ್ತಕ ಕನ್ನಡದಲ್ಲಿ ಸಿಗುವುದು ಅಪರೂಪ.ಅವರ ಚಿಂತನೆಗಳನ್ನು ಓದಬೇಕೆಂದರೆ ಇಂಗ್ಲಿಷ್ ಕೃತಿಗಳ ಇಲ್ಲವೆ ಇಂಟರ್ ನೆಟ್ ನ ಮೊರೆಹೋಗಬೇಕು.( ನಾನು ಎಂ.ಎ;ತತ್ತ್ವಶಾಸ್ತ್ರ ಓದುವಾಗ ಈ ಕಹಿ ಅನುಭವ ಆಗಿದೆ.)
ಈ ಎಪಿಕ್ಟೆಟಸ್ ಗ್ರೀಸ್ ನ ತತ್ತ್ವಜ್ಞಾನಿಗಳಲ್ಲಿ ಪ್ರಮುಖನಾದವನು.ಗ್ರೀಕ್ ಮತ್ತು ರೋಮನ್ನರ ಮೇಲೆ ಮತದೃಷ್ಟಿಯಿಂದ ಪ್ರಭಾವ ಬೀರಿದ ‘ಸ್ಟೋಯಿಕ್’ ಪಂಥಕ್ಕೆ ಸೇರಿದವನು.ಈ ಪಂಥ ‘ ವಿಶ್ವದೇವೈಕ್ಯವಾದ’ದಿಂದ ಪ್ರಾರಂಭವಾಗಿ ‘ ಏಕೇಶ್ವರ’ಭಾವನೆಯೆಡಗೆ ಬೆಳೆದಿದೆ.ಈ ಪಂಥಕ್ಕೆ ಎಪಿಕ್ಟೆಟಸ್ ನ ಕೊಡುಗೆ ಮಹತ್ವದ್ದಾಗಿದೆ.ಇವನ ಬೋಧನೆಗಳು ಕ್ರೈಸ್ತ್ ರ ಹೊಸ ಒಡಂಬಡಿಕೆಯ ಮಾತುಗಳಂತಿವೆ.ಅಲ್ಲದೆ ಕ್ರೈಸ್ತ್ ಧರ್ಮದ ಪ್ರಚಾರಕ್ಕೆ ಇವುಗಳನ್ನು ಬಳಸಿಕೊಳ್ಳಲಾಗಿದೆ.ಇವನು ” ಒಬ್ಬ ದೇವರಿದ್ದಾನೆ,ಅವನ ಚೇತನ ವಿಶ್ವವನ್ನು ವ್ಯಾಪಿಸಿದೆ,ಅದು ನಮ್ಮ ಕಾರ್ಯಗಳಲ್ಲದೆ ನಮ್ಮ ಆಲೋಚನೆಗಳಲ್ಲೂ ಭಾವಗಳಲ್ಲೂ ವಿಕಾಸವಾಗುತ್ತದೆ” ಎಂದಿದ್ದಾನೆ.
ಗ್ರೀಸ್ ನ ಹಿಂದಿನ ತತ್ತ್ವಜ್ಞಾನಗಳೆಲ್ಲ ಭೌತಜಗತ್ತಿನ ಕುರಿತಾದ ಚಿಂತನೆಗೆ ಹೆಚ್ಚು ಒತ್ತುಕೊಟ್ಟಿದ್ದರು.ಈ ಸ್ಟೋಯಿಕ್ ಪಂಥದವರು ಭೌತಜಗತ್ತಿನ ಚಿಂತನೆಯ ಜೊತೆಗೆ ಮನುಷ್ಯನ ಬುದ್ಧಿ,ಆಲೋಚನೆ,ಬಾಹ್ಯಕ್ರಿಯೆಗಳ ಕುರಿತಾಗಿ ಚಿಂತಿಸಿದ್ದಾರೆ.ಅದರಲ್ಲೂ ಎಪಿಕ್ಟೆಟಸ್ ಮನುಷ್ಯನ ಬುದ್ಧಿಶಕ್ತಿ,ಆಲೋಚನೆ,ದೃಷ್ಟಿಕೋನ ರೂಪುಗೊಳ್ಳುವುದರ ಕುರಿತಾಗಿ ಚಿಂತಿಸಿದ್ದಾನೆ.” ಮನುಷ್ಯ ಯಾವುದೇ ಘಟನೆಗಳನ್ನೋ,ಪರಿಸ್ಥಿಗಳನ್ನೋ ಎದುರುಗೊಂಡಾಗ ಅವು ಬಾಹ್ಯ ಸಂಗತಿಗಳಾಗಿ ಬಾಧಿಸುವುದಿಲ್ಲ; ಅವುಗಳ ಬಗ್ಗೆ ನಮ್ಮ ಆಲೋಚನೆಗಳೇನು ಎನ್ನುವುದು ಮುಖ್ಯವಾಗುತ್ತದೆ.ಬರಿ ಘಟನೆಗಳು ನಮ್ಮನ್ನು ವಿಚಲಿತರನ್ನಾಗಿ ಮಾಡುವುದಿಲ್ಲ; ಅವುಗಳ ಬಗೆಗಿನ ನಮ್ಮ ವ್ಯಾಖ್ಯಾನಗಳೇ ವಿಚಲಿತರನ್ನಾಗಿಸುತ್ತವೆ.ತಮ್ಮಷ್ಟಕ್ಕೆ ತಾವು ವಸ್ತುಗಳಾಗಲಿ,ಘಟನೆಗಳಾಗಲಿ ನಮಗೆ ನೋವು ನೀಡಲಾರವು.ನಾವು ಆ ವಸ್ತುಗಳಿಗೆ ಘಟನೆಗಳಿಗೆ ಯಾವ ರೀತಿ ಸ್ಪಂದಿಸುತ್ತೇವೆ ಎಂಬುದರಿಂದ ನಮ್ಮ ಮನೋಧರ್ಮಗಳು ರೂಪುಗೊಳ್ಳುತ್ತವೆ.” ಎಂಬ ಎಪಿಕ್ಟೆಟಸ್ ನ ಮಾತುಗಳು ಆಧುನಿಕ ಮನೋವಿಜ್ಞಾನದ ಸಿದ್ಧಾಂತವನ್ನೇ ತಿಳಿಸುತ್ತವೆ.
ಈ ” ಮುಳುಗದಿರಲಿ ಬದುಕು” ಕೃತಿ ಎಪಿಕ್ಟೆಟಸ್ ನ ಯಾವುದೋ ಒಂದು ಸಿದ್ಧಾಂತದ ಕುರಿತಾಗಿ ತಿಳಿಸುವ ಪುಸ್ತಕವಲ್ಲ.ಬದಲಾಗಿ ಅವನ ಒಟ್ಟು ಚಿಂತನೆಯ ಸಾರವನ್ನು ಇದರಲ್ಲಿ ಭಟ್ಟಿ ಇಳಿಸಿದಂತಿದೆ.ಕೃತಿಯು ಎರಡು ಭಾಗಗಳಲ್ಲಿದ್ದು,ಮೊದಲ ಭಾಗದಲ್ಲಿ ‘ ವ್ಯಕ್ತಿತ್ವ ವಿಕಸನ’ಕ್ಕೆ ಬೇಕಾಗುವ ಎಲ್ಲ ಮೂಲ ತತ್ತ್ವಗಳು,ಜೀವನ ಮೌಲ್ಯಗಳನ್ನು ಬೋಧಿಸುವ ಬರಹಗಳಿವೆ.ಸಮಾಜದಲ್ಲಿ ಮನುಷ್ಯ ಭ್ರಮೆಗಳಿಂದ ಮುಕ್ತನಾಗಿ ಸದ್ಗುಣಿಯಾಗಿ ಹೇಗೆ ಬದು
ಕಬೇಕು,ಅದಕ್ಕೆ ಬೇಕಾಗುವ ಮೂಲದ್ರವ್ಯ ಯಾವುದು ಎಂಬುದರ ಕುರಿತಾದ ಬರಹಗಳಿವೆ.ಇಲ್ಲಿ ಇಚ್ಛಾಶಕ್ತಿ,ಪ್ರೇರಣೆ,ದೃಷ್ಟಿಕೋನ,ಯೋಗ್ಯತೆ,ಪ್ರಾಮಾಣಿಕತೆ,ವಾಸ್ತವತೆ,ಬದುಕನ್ನು ನೋಡುವ ರೀತಿ,ನೆಮ್ಮದಿ,ಧನಾತ್ಮಕತೆ,ಆದರ್ಶಗಳು,ವಿವೇಕಯುಕ್ತತೆ,ಸಚ್ಚಾರಿತ್ರ್ಯ,ಸಂಬಂಧಗಳು,ವಿಶ್ವಾಸಾರ್ಹತೆ,ಘನತೆಯ ವ್ಯಕ್ತಿತ್ವ,ಪ್ರಕೃತಿಗೆ ಹೊಂದಿಕೊಳ್ಳುವುದು ಹೀಗೆ ಒಬ್ಬ ಮನುಷ್ಯ ಆದರ್ಶದ ಮಾದರಿಯಾಗಿ ಸಾಮುದಾಯಿಕ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಮಾರ್ಗದರ್ಶಕ ಚಿಕ್ಕ ಚಿಕ್ಕ ಅಧ್ಯಾಯಗಳಿವೆ.
ಎರಡನೆಯ ಭಾಗದಲ್ಲಿ ತತ್ತ್ವಜ್ಞಾನದ ಮೂಲ ಉದ್ದೇಶ ,ಪುಸ್ತಕಗಳ ಉಪಯುಕ್ತತೆ,ಸಜ್ಜನರ ಗೆಳೆತನ,ತಪ್ಪುಗಳ ಮನ್ನಣೆ,ಸಚ್ಚಾರಿತ್ಯದ ನಿರಂತರತೆ,ಸದ್ಗುಣತೆ,ವೈಚಾರಿಕತೆ ,ಸಂತೋಷ ಹೀಗೆ ಹಲವು ವಿಷಯಗಳ ಕುರಿತು ಮೌಲ್ಯಯುತವಾದ ಬರಹಗಳಿವೆ. ಇಲ್ಲಿಯ ಬರಹಗಳನ್ನು ಪುಸ್ತಕದ ಮೊದಲ ಅಧ್ಯಾಯದಿಂದಲೇ ಓದಬೇಕೆಂಬ ನಿಯಮವೇನೂ ಇಲ್ಲ.ಯಾಕೆಂದರೆ ಪ್ರತಿಯೊಂದು ಬರಹಗಳು ತಮ್ಮಷ್ಟಕ್ಕೆ ಮುಕ್ತಕಗಳಂತೆ ಸ್ವತಂತ್ರವಾಗಿವೆ.ಯಾವುದೇ ಪುಟ ತೆಗೆದರೂ ಅಲ್ಲೊಂದು ನಿರ್ದಿಷ್ಟ ಮೌಲ್ಯದ ಮೂಲದ್ರವ್ಯ ಇರುವುದನ್ನು ಕಾಣುತ್ತೇವೆ.ಈ ಪುಸ್ತಕದ ವಿಶೇಷವೆಂದರೆ ಇಲ್ಲಿಯ ಅಧ್ಯಾಯಗಳು ಕನಿಷ್ಟ ಮೂರು ಸಾಲಿನ ,ಹೆಚ್ಚೆಂದರೆ ಎರಡು ಪುಟ ಮೀರುವುದಿಲ್ಲ.(ಓದಲು ಸಮಯವೇ ಇಲ್ಲದ ಈ ಕಾಲದಲ್ಲಿ ಸುದೀರ್ಘವಾದ ಬರಹಗಳನ್ನು ಯಾರು ಓದುತ್ತಾರೆ? ಎನ್ನುವವರಿಗೆ ಈ ಪುಸ್ತಕ ಹೆಚ್ಚು ಇಷ್ಟವಾಗಬಹುದೇನೋ !.)
ಈ ಅನುವಾದದ ಕುರಿತಾಗಿ ಹೇಳಬೇಕೆಂದರೆ ಇದು ಅನುವಾದ ಮಾಡಿದ ಪುಸ್ತಕ ಎಂಬ ಭಾವನೆ ಎಲ್ಲೂ ಬರುವುದಿಲ್ಲ.ಕನ್ನಡದ ಚಿಂತನೆಯಿಂದಲೇ ರೂಪಗೊಂಡ ಕೃತಿಯಂತೆ ಭಾಸವಾಗುತ್ತದೆ.ಇಲ್ಲಿಯ ಚಿಂತನೆಗಳು ಮನುಷ್ಯನ ಒಳಗನ್ನು ( ಅಂತರಂಗ) ಗಟ್ಟಿಗೊಳಿಸಿ ಬಾಹ್ಯ ನಡವಳಿಗಳನ್ನು ತಿದ್ದುವ ಮತ್ತು ಗ್ರಹಿಕೆಯನ್ನು ಸ್ಪಸ್ಟ ಹಾಗೂ ವಾಸ್ತವಗೊಳಿಸುವತ್ತ ನಮ್ಮನ್ನು ಕೈ ಹಿಡಿದು ನಡೆಸುತ್ತವೆ.ಅದು ತತ್ತ್ವಶಾಸ್ತ್ರದ ಉದ್ದೇಶವೂ ಹೌದು.
ಒಂದು ಚಿಕ್ಕ ಅಧ್ಯಾಯ:
“ಒಳ್ಳೆಯದು ಒಳ್ಳೆಯದೇ”
‘ಒಳ್ಳೆಯತನ ಸ್ವತಂತ್ರವಾಗಿದ್ದು,ನಮ್ಮ ಒಳಗಿನಿಂದಲೇ ಅದಕ್ಕೊಂದು ಅಸ್ತಿತ್ವ ದೊರಕುತ್ತದೆ.ಒಳ್ಳೆಯತನ ಎಂದಿಗೂ ಇದ್ದೇ ಇರುತ್ತದೆ.ನಮ್ಮ ಅಸ್ತಿತ್ವಕ್ಕೂ ಮೊದಲೇ ಇತ್ತು’ (ಪುಟ.೧೪೦)
-----------------------------