ಟಿ.ಎಸ್.ಶ್ರವಣ ಕುಮಾರಿ
ಯಾರೂ ಓದದೆಯೇ ಹೋದ ಕತೆ…
ಇದೋ ಅತ್ಯಂತ ಜನನಿಬಿಡವಾದ ಮಾರುಕಟ್ಟೆ ಪ್ರದೇಶ. ಈ ಮಾರುಕಟ್ಟೆ ಸಂಕೀರ್ಣ ಮತ್ತು ಅದರ ಸುತ್ತಮುತ್ತಲಿನ ಅಂಗಡಿಗಳಲ್ಲಿ ಮಾರದ, ಸಿಗದ ವಸ್ತುವೇ ಇಲ್ಲ ಎಂದುಕೊಳ್ಳಿ. ಸಣ್ಣ ಪುಟ್ಟ ಸಾಸುವೆ, ಪಿನ್ನು ಇಂತಹ ವಸ್ತುಗಳನ್ನು ಮಾರುವ ಅಂಗಡಿಗಳಿಂದ ಹಿಡಿದು ಕಾರು, ರಿಯಲ್ ಎಸ್ಟೇಟ್ ಏಜೆನ್ಸಿಯಂತ ದೊಡ್ಡ ವಹಿವಾಟುಗಳೂ ಇಲ್ಲಿವೆ. ಇವೆಲ್ಲವೂ ಇಲ್ಲಿದೆ ಎಂದ ಮೇಲೆ ಇವನ್ನೆಲ್ಲಾ ಮಾರುವವರು, ಕೊಳ್ಳುವ ಗಿರಾಕಿಗಳು, ಸರಕನ್ನು ಹೊರುವ ಹಮಾಲಿಗಳು, ಸಾಗಿಸುವ ಚಾಲಕರು, ವ್ಯವಹಾರವನ್ನು ಕುದುರಿಸುವ ದಲ್ಲಾಳಿಗಳು, ಪಾರ್ಕಿಂಗ್ ಕಾಸು ವಸೂಲಿ ಮಾಡುವ ಹುಡುಗರು, ಇವೆಲ್ಲ ವ್ಯವಹಾರಗಳನ್ನು ನೋಡಿ ಮಜಾ ತೆಗೆದುಕೊಳ್ಳುವ, ಅಂದಿನ ನಾಷ್ಟ, ಊಟ, ಬೀಡಿ, ಸಿಗರೇಟು, ಸೇಂದಿ, ಖರ್ಚಿಗೊಂದಿಷ್ಟು ಕಾಸು ಇವನ್ನೆಲ್ಲಾ ಕಂಡವರ ದುಡ್ಡಿನಲ್ಲಿ ಗಿಟ್ಟಿಸುವ ಉಡಾಫೆ ಮಂದಿಗಳೂ ಸಾಕಷ್ಟು ಇದ್ದಾರೆ. ಅಂತೆಯೇ ಮಾರುಕಟ್ಟೆಯ ಸುತ್ತಲೂ ಬೀದಿಯ ಇಕ್ಕೆಲಗಳಲ್ಲೂ ಬುಟ್ಟಿ ವ್ಯಾಪಾರಸ್ತರೋ, ತಳ್ಳು ಗಾಡಿಯವರೋ ತಂತಮ್ಮ ಸರಕನ್ನು ಮುಂಜಾವಿನಿಂದ ಸರಿ ರಾತ್ರಿಯವರೆಗೂ ಮಾರುತ್ತಾ ತಮ್ಮ ದಿನದ ಸಂಪಾದನೆ ಎಣಿಸುತ್ತಿರುತ್ತಾರೆ.ಅಲ್ಲಿ, ಇಲ್ಲಿ ಗಿರಾಕಿಗಳಿಗೆ ಗಾಳ ಹಾಕುತ್ತಾ ನಿಲ್ಲುವ ವೈಯಾರಿಗಳು, ಇವರನ್ನೇ ಹುಡುಕುತ್ತಾ ಬರುವ ರಸಿಕ ಮಹಾಶಯರೂ ಇಬ್ಬರ ನಡುವಿನ ತಲೆಹಿಡುಕರೂ ಅಲ್ಲಿಲ್ಲಿ ಕಾಣ ಸಿಗುತ್ತಾರೆ.ಇಷ್ಟೆಲ್ಲದರ ಮದ್ಯೆಯೇ ಸಮಾಜದಲ್ಲಿ ಮರ್ಯಾದಸ್ತರೆಂದು ಗುರುತಿಸಿಕೊಂಡಿರುವ ಬಹಳಷ್ಟು ಜನರೂ ಯಾವುದೋ ಒಂದಲ್ಲ ಒಂದು ವ್ಯವಹಾರಕ್ಕೆ ಇಲ್ಲಿಗೆ ಬರುತ್ತಿರುತ್ತಾರೆ.ಇಷ್ಟೆಲ್ಲವೂ ಇದ್ದ ಮೇಲೆ ಪೋಲೀಸರ ಮೇಲ್ವಿಚಾರಣೆ? ಅವರೂ ಇದ್ದಾರೆ.ಇಷ್ಟೆಲ್ಲವನ್ನೂ ಏಕೆ ಹೇಳುತ್ತಿದ್ದೇನೆಂದರೆ ಇದು ಇಡೀ ಜಗತ್ತಿನ ಮಾರುಕಟ್ಟೆಯ ಒಂದು ಸಣ್ಣ ಸ್ವರೂಪವೆಂದು ಹೇಳುವುದಕ್ಕಷ್ಟೆ ಮತ್ತು ನನ್ನ ಈ ಕತೆ ಈ ಮಾರುಕಟ್ಟೆಯ ಬದಿಯ ಫುಟ್ ಪಾತೊಂದರಲ್ಲಿ ಬಿದ್ದಿದ್ದಕ್ಕೆ.
ಆ ಕತೆ ಮಾರುಕಟ್ಟೆಯ ಮುಂಬಾಗದ ಮೂಲೆಯಲ್ಲಿ ಫುಟ್ ಪಾತ್ ವ್ಯಾಪಾರಸ್ತರ ಹಿಂಬಾಗದಲ್ಲಿ ಗೋಡೆಯ ಪಕ್ಕದಲ್ಲಿ ಪ್ರಾಯಶಃ ಬೆಳಗಿನಿಂದಲೇ ಬಿದ್ದಿತ್ತೇನೋ, ಅದನ್ನು ಗಮನಿಸಿದರ‍್ಯಾರು? ಬೆಳಗಿನ ಹೋಲ್ ಸೇಲ್ ವ್ಯಾಪಾರದಲ್ಲಿ ಕೊಂಡ ಸರಕನ್ನೋ, ಬೇರೇನೇನೋ ಸರಕುಗಳನ್ನೋ ತುಂಡು ವ್ಯಾಪಾರಸ್ತರು ಎಂದಿನಂತೆ ತಮ್ಮ ತಮ್ಮ ಅನಧಿಕೃತವಾದ ಅಧಿಕೃತ ಜಾಗಗಳಲ್ಲಿ ಹರಡಿಕೊಂಡು ಕುಳಿತುಕೊಂಡರು. ಅಂತವರಲ್ಲೊಬ್ಬ ಹೆಂಗಸುತನ್ನ ಊಟದ ಡಬ್ಬಿ, ಛತ್ರಿ, ಬಟ್ಟೆಯ ಗಂಟು, ಕಂಕುಳಲ್ಲಿದ್ದ, ಓಡಾಡುತ್ತಿದ್ದ ಚಿಳ್ಳೆ ಪಿಳ್ಳೆಗಳಿಗೆ ಜಾಗ ಮಾಡಲು ಹೋದಾಗ ಅನಾಥವಾಗಿ ಬಿದ್ದಿದ್ದ ಈ ಕತೆಯು ಕಾಣಿಸಿತು.`ರಾತ್ರಿ ಕುಡಿದಿದ್ದು ಇನ್ನೂ ಇಳ್ದಿಲ್ಲಾನ್ನೋಂಗದೆ’ ಎನ್ನುತ್ತಾ ಆ ಹೆಂಗಸು ಅದನ್ನು ಪಕ್ಕಕ್ಕೆ ಒತ್ತರಿಸಿ ತನ್ನ ಬಿಡಾರಕ್ಕೆ ಜಾಗ ಮಾಡಿಕೊಂಡಳು. ಪಕ್ಕಕ್ಕೆ ದೂಡಿದಾಗ ಅದಕ್ಕೇನಾದರೂ ನೋವಾಯಿತೇನೋ… ನರಳಿತೇನೋ… ಯಾರಿಗೇನೂ ಕೇಳಲಿಲ್ಲ ಬಿಡಿ. ʻಅದ್ರ ತಂಟೇಗೋಗ್ಬೇಡಿ. ಅಸಿವಾದ್ರೆ ಕವರ‍್ನಾಗೆ ಬನ್ನದೆ, ಡಬ್ಬೀನಾಗೆ ರೊಟ್ಟಿಯಿದೆ, ತಿನ್ಕೊಳಿʼ ಎಂದು ತನ್ನ ಮರಿಗಳಿಗೆ ಹೇಳುತ್ತಾ ತನ್ನ ವಹಿವಾಟಿನ ಜಾಗಕ್ಕೆ ಪ್ಲಾಸ್ಟಿಕ್ ಶೀಟ್ ಹರಡಿ ಒಂದೊಂದೇ ತರಕಾರಿಯನ್ನು ಅದರ ಮೇಲೆ ಜೋಡಿಸಿಕೊಳ್ಳುತ್ತಾ ಹೋದಳು. ಸ್ವಲ್ಪ ಹೊತ್ತು ಸುಮ್ಮನಿದ್ದ ಮಕ್ಕಳು ʻಅವ್ವಾ ಅದೇನವ್ವಾʼ ಎಂದು ಬೆರಳು ತೋರುತ್ತಾ ಕೇಳಿದವು ʻಮುಚ್ಕೊಂಡು ಸುಮ್ಕೆ ಕೂರಕ್ ಬರಾಕಿಲ್ವಾ. ಏನ್ ಕತೆಯೋ ಏನ್ ಸುಡುಗಾಡೋ…ಇಲ್ಲಿ ಬಂದ್ ಬಿದ್ದದೆʼ ಎಂದು ಪಿಳ್ಳೆಗಳ ಮೇಲೆ ಒಂದು ಆವಾಜ್ ಹಾಕಿ ತನ್ನ ಕೆಲಸ ಮುಂದುವರಿಸಿದಳು. ಅವೂ ಕುತೂಹಲದಿಂದ ಹಿಂದೆ ಮುಂದೆ ಅಕ್ಕ ಪಕ್ಕ ಎಲ್ಲಾ ನೋಡಿದವು ಅವಕ್ಕಂತೂ ಅದನ್ನು ಓದಲು ಬರಲಿಲ್ಲ… ಜಾಗರೂಕತೆಯಿಂದ ಅದರ ಮೇಲೆ ಬೀಳದಂತೆ ಅವು ತಮ್ಮ ಪಾಡಿಗೆ ತಾವು ಆಡಿಕೊಳ್ಳತೊಡಗಿದವು…
ಹನ್ನೊಂದು ಗಂಟೆಯಾಗುತ್ತಾ ಬಂದಂತೆ ಆ ಜಾಗದ ಮುಂದಿನ ವಾರಸುದಾರ ತನ್ನ ಸರಕುಗಳೊಂದಿಗೆ ಹಾಜರಾದ. “ಯಕ್ಕೋ ನಿಂಟೈಮಾಯ್ತು. ಉಳ್ದಿರೋವೆಲ್ಲಾ ಎತ್ಕೋ. ನಂಜಾಗ ಬಿಡು” ಎನ್ನುತ್ತಾ ದೊಡ್ಡ ದೊಡ್ಡ ಎರಡು ಮೂಟೆಗಳನ್ನಿಳಿಸಿದ. “ವಸಿ ತಡ್ಯಣ್ಣೋ, ಎಲ್ಲಾ ಬ್ಯಾರೆ ಬ್ಯಾರೆ ಕವರ‍್ನಾಗೆ ಮಡಿಕ್ಕೊಂತಿನಿ. ಬೆರ‍್ತೋದ್ರೆ ಬ್ಯಾರೆ ಮಾಡೋದು ಕಸ್ಟ ಎನ್ನುತ್ತಾ ತುಂಬತೊಡಗಿದಳು. “ಉಳ್ದಿರೋವೆಲ್ಲಾ ಏನ್ ಮಾಡ್ತೀಯೆ? ಮನೇಗೆ ಉಪಯೋಗಿಸ್ಕತೀಯ? ಇಲ್ಲಾ ಬೀದೀಲ್ ಮಾರ‍್ಕೊಂಡು ಓಯ್ತೀಯಾ ಎಂದ. “ಇಷ್ಟ್ ತಿನ್ನೋಕಾಯ್ತದಾ? ವಸಿ ಮಡೀಕೊಂಡು ಉಳ್ದವನ್ನ ಮನೇತ್ರ ಮೆಸ್ಸು, ಕ್ಯಾಂಟೀನು ಅವೆ. ಅವ್ರಿಗೆ ಸುರೀತೀನಿ”. “ಸರಿ, ಬೇಬೇಗ್ ಮಗ್ಸು” ಎನ್ನುತ್ತಾ ಒಂದು ಮೂಟೆಯನ್ನು ಹಿಂದಿಡಲು ನೋಡಿದಾಗ ಈ ಕತೆ ಕಾಣಬೇಕೆ?! “ಯಾವ್ದಕ್ಕೋ ಇದು ಇಲ್ಬಿದ್ದದೆ” ಎನ್ನುತ್ತಾ ಹಿಂದೆ ಹೋಗಿ ಅದನ್ನು ಪರಿಶೀಲಿಸಿದ. ಏನೂ ಅರ್ಥವಾಗಲಿಲ್ಲ. ಅಷ್ಟರಲ್ಲಿ ಆ ಹೆಂಗಸು ಜಾಗವನ್ನು ಖಾಲಿ ಮಾಡಿ “ಯಾವ್ದೋ ನಾಕಾಣೆ, ಬೆಳ್ಗಿಂದ ಅಂಗೇ ಬಿದ್ದದೆ… ತೊಗೋಣ್ಣೋ ನಿಂಜಾಗ. ಇದು ಮಡಿಕ್ಕೋ” ಎನ್ನುತ್ತಾ ಒಂದು ಕವರಿನಲ್ಲಿ ಹಾಕಿದ್ದ ಒಂದಿಷ್ಟು ತರಕಾರಿಯನ್ನು ಅವನಿಗೆ ಕೊಟ್ಟು ತನ್ನ ಗಂಟುಮೂಟೆಯನ್ನು ಕಟ್ಟಿಕೊಂಡು ಪಿಳ್ಳೆಗಳನ್ನು ಕಟ್ಟಿಕೊಂಡು ಹೊರಟಳು.ಇನ್ನು ತನ್ನ ವ್ಯಾಪಾರಕ್ಕೆ ತಡವಾಗುತ್ತದೆ ಎಂದುಕೊಳ್ಳುತ್ತಾ ಅವನೂ ಅದನ್ನು ಮತ್ತಷ್ಟು ಒತ್ತರಿಸಿ ತನ್ನ ಒಂದು ಮೂಟೆಯನ್ನು ಅಲ್ಲಿಟ್ಟ. ಮುಂದಿನ ಜಾಗದಲ್ಲಿ ತನ್ನ ಚಾಪೆಯನ್ನು ಹಾಸಿ ತನ್ನ ಸರಕಾದ ಚಡ್ಡಿ, ಬನೀನು, ಟೀಷರ್ಟು, ಟ್ರಾಕ್ ಪ್ಯಾಂಟು, ಮಕ್ಕಳ ಚಿಕ್ಕ ಪುಟ್ಟ ಉಡುಪುಗಳು ಮುಂತಾದವುಗಳಿಗೆ ಜಾಗಮಾಡಿಕೊಂಡು ತನ್ನ ಸರಕಿನ ಜಾಹೀರಾತನ್ನು ತಾನೇ ಕೂಗತೊಡಗಿದ. ಫುಟ್ಪಾತಿನುದ್ದಕ್ಕೂ, ಶೂ, ಚಪ್ಪಲಿಗಳು, ಪ್ಲಾಸ್ಟಿಕ್ ಸಾಮಾನು, ಆಟಿಕೆಗಳು, ಬಟ್ಟೆ, ಸೀರೆಗಳು, ಪೆಟಿಕೋಟ್, ಬ್ರಾ, ಪ್ಯಾಂಟೀಸ್‌ಗಳು, ತಿಂಡಿ ಸರಕುಗಳು ಇಂಥದೆನ್ನುವಂತಿಲ್ಲ ಎಲ್ಲ ಗೂಡುಗಳು ತಲೆಯೆತ್ತತೊಡಗಿದವು. ಪಕ್ಕದ ಬೀದಿಯಲ್ಲಿ ತಲಗಟ್ಟಮ್ಮನ ಜಾತ್ರೆ ಬೇರೆ. ಬಿಸಿಲಿನ ಚುರುಕಿನೊಂದಿಗೆ ವ್ಯಾಪಾರವೂ ಕುದುರಿಕೊಳ್ಳತೊಡಗಿತು.
ಅದೆಷ್ಟು ಜನ ಆ ಫುಟ್ ಪಾತಿನ ಮೇಲೆ ಓಡಾಡಿದರೋ ಲೆಕ್ಕವಿಟ್ಟರ‍್ಯಾರು.ಕೆಲವರ ಕಣ್ಣಿಗಾದರೂ ಇದು ಬೀಳದೇ ಇರಲು ಸಾಧ್ಯವೇ?! ಬಿದ್ದೇ ಬಿತ್ತು. ಒಬ್ಬಿಬ್ಬರು ಏನಿರಬಹುದು ಇದು… ಯಾಕೆ ಇಲ್ಲಿ ಬಿದ್ದಿದೆ… ಎಂದುಕೊಂಡರು. ಆದರೆ ಅವರಿಗೆ ಇದನ್ನು ನೋಡಿ ಓದಲು ವ್ಯವಧಾನವೆಲ್ಲಿದೆ? ನಾಳೆಯ ಹೊತ್ತಿಗೆ ಇಡೀ ಜಗತ್ತೇ ಮುಳುಗಿಹೋಗುವುದೇನೋ? ಅಷ್ಟರೊಳಗೆ ತಾನು ಮಾಡಿ ಮುಗಿಸಬೇಕಾದ ಕೆಲಸ ಒಂದು ಜನ್ಮಕ್ಕಾಗುವಷ್ಟಿದೆ! ಅಂತಹುದರಲ್ಲಿ ಯಾವುದೋ ಬಿಸಾಡಿಹೋದ ಈ ಕತೆಯನ್ನು ನೋಡುತ್ತಾ ಕೂಡುವುದೇ?! ಮೊದಲು ಇಲ್ಲಿನ ಕೆಲಸ ಮುಗಿಸಿ ಓಡಬೇಕು ಮುಂದಿನ ಕೆಲಸದ ಕಡೆಗೆ… ಎಲ್ಲರೂ ಓಡುವವರೆ… ಕತೆಗೋ ಇದ್ಯಾವುದರ ಪರಿವೆಯೂ ಇಲ್ಲ. ಬಿದ್ದುಕೊಂಡಿದೆ ತನ್ನ ಪಾಡಿಗೆ ತಾನು. ನೋಡಿಕೊಂಡೂ ಓಡುತ್ತಿರುವವರು ಓಡುತ್ತಿದ್ದಾರೆ ತಂತಮ್ಮ ಪಾಡಿಗೆ…
ಮಧ್ಯಾನ್ಹದ ಹೊತ್ತಿಗೆ ಅಲ್ಲೇ ಮೂಲೆಯ ತಳ್ಳುಗಾಡಿಯವನಿಂದ ಪಲಾವನ್ನು ಕೊಂಡು ತಿಂದು ನೀರು ಕುಡಿಯಲೆಂದು ಹಿಂದಿನ ಮೂಟೆಯ ಬಳಿ ಇಟ್ಟಿದ್ದ ನೀರಿನ ಬಾಟಲಿಗೆ ಕೈ ಹಾಕಿದವನಿಗೆ ಮತ್ತೆ ಇದರಮೇಲೆ ಬಿಸಿಲು ಬೀಳುತ್ತಿದ್ದುದು ಕಾಣಿಸಿತು. ಏನು ಸುಡುಗಾಡೋ ಎಂದುಕೊಳ್ಳುತ್ತಾ ಒಂದಷ್ಟು ನೆರಳಿನೆಡೆಗೆ ನೂಕಿದ. ಅಷ್ಟರಲ್ಲಿ ಯಾರೋ ಗಿರಾಕಿ ಕರೆಯುತ್ತಿದ್ದರು. “ಬಂದೇ.ಡಜನ್ನಿಗೆ ನೂರೈವತ್ತು ಕಣಕ್ಕ. ಈ ಕೈ ಟವಲು ನೋಡಿ. ಬಟ್ಟೆ ಎಂಗದೆ. ಇದಾದ್ರೆ ಇನ್ನೂರೈವತ್ತು ಆಗತ್ತೆ…” ತನ್ನದೇ ಕತೆಯಲ್ಲಿ ಮುಳುಗಿಹೋದ… ಮುಂದಿನ ಪಾಳಿಯವನು ಬಂದು ಜಾಗಕ್ಕೆ ತಕರಾರು ಮಾಡಿದಾಗಲೇ ಅವನಿಗೆ ಸಮಯವಾದದ್ದು ತಿಳಿದದ್ದು. “ಓ… ಎದ್ದೆ ಕಣಣ್ಣೋ” ಎನ್ನುತ್ತಾ ತನ್ನ ಬಿಡಾರವನ್ನು ಖಾಲಿ ಮಾಡತೊಡಗಿದ. “ಎಂಗಾಯ್ತು ಇವತ್ತು ವ್ಯವಾರ” ಮುಂದಿನವನು ತನ್ನ ಕಂತೆಯನ್ನು ಬಿಚ್ಚುತ್ತಾ ಕೇಳಿದ. “ಪರ‍್ವಾಗಿಲ್ಲ ಕಣಾ. ತಲಗಟ್ಟಮ್ಮನ್ ಜಾತ್ರೆ ಅಲ್ವಾ. ವಸಿ ಜನಾ ಜಾಸ್ತೀನೇ ದಿನಕ್ಕಿಂತ.” “ಸೇಂದೀಗ್ ನಾಕ್ ಕಾಸು ಜಾಸ್ತಿ ಸಿಗ್ತೂನ್ನು” “ಇಲ್ ಕಣಣ್ಣೋ ಚಿಕ್ಮಗೀಗೆ ರವಷ್ಟು ಉಸಾರಿಲ್ಲ. ಎಂತೆಂತದೋ ಟೆಸ್ಟುಗಳಂತೆ ಬರ‍್ಕೊಟ್ಟವ್ರೆ. ನಾಳೀಕೆ ಕರ‍್ಕೊಂಡೋಗ್ಬೇಕು. ಅದಿಕ್ಕೊಂದೀಷ್ಟು ಅಗುರಾಯ್ತು ಅಷ್ಟೇಯ” ಅನ್ನುತ್ತಾ ತನ್ನೆರಡೂ ಮೂಟೆಗಳನ್ನು ಎತ್ತಿಕೊಳ್ಳುವಾಗ ಮತ್ತೊಮ್ಮೆ ಮುಖ ತೋರಿದ ಕತೆಗೆ ಮುಖದಿರುವಿ ನಡೆದ.
ಆ ಸಂಕೀರ್ಣದಲ್ಲೇ ಇದ್ದ ಸಬ್ ರಿಜಿಸ್ತ್ರಾರ್ ಆಫೀಸಿನ ಮುಂದೆ ಆ ಬ್ರೋಕರ್ ಮದ್ಯಾನ್ಹ 3 ಘಂಟೆಯಿಂದಲೇ ಕಾಯುತ್ತಿದ್ದ. ಕ್ಷಣಕ್ಕೊಮ್ಮೆ ಮೊಬೈಲನ್ನು ಹಿಡಿದು “ಎಲ್ಲಿದೀರ? ಬೇಗಬನ್ನಿ. ಇಲ್ದಿದ್ರೆ ಇವತ್ತು ಕೆಲ್ಸ ಆಗಲ್ಲ. ಸಾಹೇಬ್ರು ಮುಂದಿನವಾರ ಟೂರ‍್ನಲ್ಲಿರ‍್ತಾರೆ. ನಿಮ್ಗೇ ತೊಂದ್ರೆ” ಎಂದು ಅವಸರಿಸುತ್ತಿದ್ದ. “ಹಾ… ಸರಿ ಸರಿ ಬೇಗ್ಬನ್ನಿ… ಇಲ್ಲೇ ಮುಂದುಗಡೆ ಫುಟ್ಪಾತ್ ಅಂಗಡಿಗ್ಳು ಇದಾವಲ್ಲ ಅಲ್ಲೇ ಎರಡನೇ ಕಂಬದ ಹತ್ರ ನಿಂತುಕೊಂಡಿದೀನಿ” ಬರುವವರಿಗೆ ಸುಳಿವುಗಳನ್ನು ಕೊಡುತ್ತಿದ್ದ. ನೋಡುನೋಡುತ್ತಲೇ ನಾಲ್ಕು ಗಂಟೆಯಾಗಿ ಹೋಯ್ತು. ‘ಇವ್ರ ಕಮಿಷನ್ ನೆಚ್ಕೊಂಡು ನಾಳೇ ತಿರುಪತೀಗೆ ಕರಕೊಂಡು ಹೋಗ್ತೀನಿ ಅಂದಿದೀನಿ. ಈವಯ್ಯಾ ಏನಾದ್ರೂ ಕೈಕೊಟ್ರೆ ಮನೇನಲ್ಲಿ ಗೋವಿಂದಾ… ಗೋವಿಂದಾ’ ಎಂದುಕೊಳ್ಳುತ್ತಾ ಬಾಯಲ್ಲಿ ಬಂದ ಎಂಜಲನ್ನು ಉಗಿಯಲು ಕಟ್ಟೆಯ ಪಕ್ಕಕ್ಕೆ ಹೋದರೆ ಅಲ್ಲಿ ಬಿದ್ದಿದ್ದ ಕತೆ ಕಾಣಬೇಕೆ! ‘ಅಯ್ಯೋ ನನ್ಮಗಂದ್ ಇದ್ಯಾವುದಿದು’ ಎನ್ನುತ್ತಾ ಅದರೆಡೆಗೆ ಬಗ್ಗಿದ. ಅಷ್ಟರಲ್ಲಿ ಫೋನ್ ಬಡಕೊಳ್ಳಬೇಕೆ… ಒಂದೇ ಸಲ ನೆಟ್ಟಗಾಗಿ “ಬಂದೇ ಸಾರ್ ಬಂದೇ. ಇಲ್ಲೇ ಇದೀನಿ…”ಎನ್ನುತ್ತಾ ತಾನು ಸೂಚಿಸಿದ್ದ ಜಾಗದೆಡೆಗೆ ಓಡಿದ.
ಮುಂದಿನವನು ತನ್ನ ಸರಕನ್ನೆಲ್ಲಾ ಮುಂದೆ ಜೋಡಿಸಿಕೊಳ್ಳುತ್ತಾ ಹೋದ. ಅಷ್ಟರಲ್ಲೇ ವ್ಯಾಪಾರ ಶುರುವಾಗಿದ್ದರಿಂದ ಎಷ್ಟೋ ಹೊತ್ತು ಹಿಂತಿರುಗಿ ನೋಡಲಾಗಲಿಲ್ಲ. ಬಳೆ, ರಿಬ್ಬನ್ನು, ಪೌಡರ್, ಸೆಂಟು, ಬಾಚಣಿಕೆ… ಒಂದೇ ಎರಡೇ. ಹೆಣ್ಣು ಮಕ್ಕಳು ಮುಗಿಬೀಳುವ ಎಲ್ಲಾ ಸಾಮಾನುಗಳೂ ಅವನ ಸರಕಲ್ಲಿತ್ತು. ವಯಸ್ಸಿನ ಹೆಣ್ಣುಮಕ್ಕಳು ಮುಂದೆ ವ್ಯಾಪಾರಕ್ಕೆ ನಿಂತಿದ್ದಾಗ, ನಗನಗ್ತಾ ಚೌಕಾಸಿ ಮಾಡುತ್ತಿದ್ದಾಗ ಹೊತ್ತು ಓಡಿದ್ದು ಗೊತ್ತಾಗಲು ಸಾಧ್ಯವೇ. ಹೇಳಿ ಕೇಳಿ ಜಾತ್ರೆಗೆ ಬಂದಿದ್ದ ಪೋರಿಯರು. ವ್ಯಾಪಾರ ಭರ್ಜರಿಯಾಗೇ ಸಾಗಿತ್ತು. ಮದ್ಯದಲ್ಲೊಮ್ಮೆ ವಂದಕ್ಕೆ ಹೋಗಿಬರುವಾ ಅನ್ನಿಸಿದ್ದಕ್ಕೆ ಪಕ್ಕದಲ್ಲಿದ್ದೋನನ್ನ ಸ್ವಲ್ಪ ಹೊತ್ತು ಅಂಗಡಿ ನೋಡಿಕೊಳ್ಳಕ್ಕೆ ಹೇಳಿ ಎದ್ದು ಹೋದವನಿಗೆ ಬಂದು ಕೂರುವಾಗ ಇದು ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದ… ಏನೂ ಅರ್ಥವಾಗದೆ “ಯಾವಾಗಿಂದ ಬಿದ್ದದೆ?” ಪಕ್ಕದವನನ್ನು ಕೇಳಿದ. ”ಯಾವಾಗಿಂದ ಬಿದ್ದದೋ ಕಂಡರ‍್ಯಾರು? ನಾನೂ ಆಗ್ಲೇ ಎದ್ದೋಗಿದ್ದಾಗ ನೋಡ್ದಿ. ಏನೂ ತಿಳೀನಿಲ್ಲ. ಯಾವ್ದೋ ಬ್ಯಾವರ್ಸಿ; ಬದ್ಕೈತೋ, ಸತ್ತೈತೋ… ನಮ್ನಮ್ ಕತೆ ನೋಡ್ಕೊಂಡು ಹೋದ್ರೆ ಸಾಲ್ದಾ. ದಿನಕ್ಕಿಂತಾವೆಷ್ತೋ ಕಂಡೋರ‍್ಯಾರು” ಎಂದು ತನ್ನ ಸರಕಿನ ಜಾಹೀರಾತನ್ನು ಕೂಗುತ್ತಾ ಮಾತಿಗೆ ವಿರಾಮ ಹಾಕಿದ. ಅಷ್ಟು ಹೊತ್ತಿಗೆ ಇವ್ನ ಮುಂದೂ ಗಿರಾಕಿಗಳು ಬಂದಿದ್ದರಿಂದ ಈ ವಿಷಯ ಮರೆತು ತನ್ನ ವ್ಯಾಪಾರದಲ್ಲಿ ತಲ್ಲೀನನಾದ.
ಈಗದು ಕತ್ತಲಲ್ಲಿ ಮಲಗಿತ್ತು. ಮುಂದಿನ ಬೀದಿಯ ದೀಪದ ಬೆಳಕು ಅದನ್ನು ತಲುಪುತ್ತಾ ಇರಲಿಲ್ಲ. ಆ ದೀಪದ ಕಂಬದ ಬಳಿ ತನ್ನ ಮಾಮೂಲಿ ಗಿರಾಕಿಗೆ ಕಾಯುತ್ತಾ ನಿಂತಿದ್ದವಳಿಗೆ ಎಷ್ಟು ಹೊತ್ತಾದರೂ ಬಾರದ್ದರಿಂದ ಕೋಪವುಕ್ಕುತ್ತಾ ಇತ್ತು. ಸುಮ್ಮನಿರಲಾಗದೇ ಈ ವ್ಯಾಪಾರಿ “ಏನವ್ವಾ ಇನ್ನೂ ಅಕ್ಕಿ ಬಂದಂಗಿಲ್ಲ” ಎನ್ನುತ್ತಾ ಮಾತಿಗೆಳೆದ. ಮೊದಲೇ ಕೋಪದಲ್ಲಿದ್ದವಳು “ಸುಮ್ ಕುಂತ್ಕೊಂಡು ನಿನ್ನ ಕ್ಯಾಮೆ ನೋಡ್ಕಾ” ಎನ್ನುತ್ತಾ ಮುಖದಿರುವಿದಳು. ಅವಳ ಕೋಪ ಕಂಡು ಖುಷಿಯಾಗಿ ಇವನು ಕಿಸಕ್ಕೆಂದು ನಕ್ಕ. ತಿರುಗಿಸಿ ಏನಾದರೂ ಅನ್ನುತ್ತಿದ್ದಳೇನೋ ನಮ್ಮ ಪುಣ್ಯ ಬಿಡಿ ಅವಳ ಮಾತುಗಳನ್ನು ಕೇಳಿಸಿಕೊಳ್ಳುವ ಭಾಗ್ಯ ನಮಗಿಲ್ಲ – ಅಷ್ಟರಲ್ಲಿ ಯಾವುದೋ ಹೊಸ ಮಿಕ ಅವಳ ಬಲೆಗೆ ಬಿದ್ದಿತ್ತು. ವ್ಯವಹಾರ ಕುದುರಿಸಲು ಅವಳು ಆ ಕತೆ ಬಿದ್ದಿದ್ದ ಕತ್ತಲೆಯ ಕಡೆಗೆ ಅವನನ್ನು ಸನ್ನೆ ಮಾಡಿ ಕರೆದಳು. ಇನ್ನೇನು ಅದನ್ನೇ ಎಡುವುವವಳಿದ್ದಳು “ಥತ್ ಸೂಳೇಮಗಂದು” ಎಂದು ಝಾಡಿಸಿ ಒದ್ದು ಜಾಗಮಾಡಿಕೊಂಡಳು. “ಏನದು?” ಎಂದ ಹೊಸ ಮಿಕ. “ದರಬೇಸಿ ನನ್‌ಮಗಂದು… ಅದನ್ ಅತ್ತಾಗ್ ಬಿಡು” ಎನ್ನುತ್ತಾ ವ್ಯವಹಾರ ಕುದುರಿದ ತಕ್ಷಣ ಅವರಿಬ್ಬರೂ ಆ ಕತ್ತಲಲ್ಲೇ ಎಲ್ಲೋ ಕರಗಿಹೋದರು.
ರಾತ್ರಿ ಹತ್ತಾಗುತ್ತಾ ಬಂದಿತ್ತು. ಅಲ್ಲಿ ವ್ಯಾಪಾರ ಮಾಡುತ್ತಾ ಕುಳಿತಿದ್ದವರೆಲ್ಲಾ ತಂತಮ್ಮ ಸರಕನ್ನು ಎತ್ತಿಡತೊಡಗಿದರು. ಜಾತ್ರೆಯ ದಿನವಾದ್ದರಿಂದ ಅವರಿಗೆ ನಾಲ್ಕು ಕಾಸು ಹೆಚ್ಚಾಗಿಯೇ ಸಂಪಾದನೆಯಾಗಿತ್ತು. ಕಟ್ಟಿಕೊಂಡ ಸರಕನ್ನು ಬೆನ್ನ ಮೇಲೆ ಹೊತ್ತು ಸಿಟಿಬಸ್ಸಿನ ಕಡೆಗೋ, ಅಥವಾ ಸ್ಟ್ಯಾಂಡಿನಲ್ಲಿ ನಿಲ್ಲಿಸಿದ್ದ ತಮ್ಮ ವಾಹನಗಳಿಗೆ ಕಟ್ಟಿಕೊಂಡೋ ಹೊರಡುವ ತಯಾರಿ ಮಾಡಿಕೊಂಡರು. ಇದರ ಮುಂದಿದ್ದವನೂ ತನ್ನ ಗಂಟುಮೂಟೆ ತಯಾರಿಸಿ ಇಟ್ಟುಕೊಂಡು ಗೆಳೆಯನಿಗಾಗಿ ಕಾಯುತ್ತಿದ್ದ. ಇಬ್ಬರೂ ಸೇರಿ ಆಟೋದಲ್ಲಿ ಹಾಕಿಕೊಂಡು ಹೋಗುವ ಮಾತಾಡಿಕೊಂಡಿದ್ದರು. ಆಗ ಅವನಿಗೆ ಹಿಂದೆ ಬಿದ್ದಿದ್ದ ಅದರ ಜ್ಞಾಪಕ ಬಂತು. ʻಏನಾಗಿದ್ಯೋ ನೋಡುಮಾʼ ಎಂದುಕೊಳ್ಳುತ್ತಾ ಅದರ ಹತ್ತಿರ ಹೋದ. ಇನ್ನೂ ಉಸಿರಾಡ್ತಾ ಇದೆಯೇನೋ ಅನ್ನಿಸ್ತು. ಬಗ್ಗಿ ಇನ್ನೇನು ಮುಟ್ಟಬೇಕು, ಅಷ್ಟರಲ್ಲಿ ಆಟೋ ಮಾಡಿಕೊಂಡು ಬಂದಿದ್ದ ಗೆಳೆಯ “ಬೇಗ ಬಾ.. ಒತ್ತಾಗೈತೆ ಅಲ್ಲೇನ್ ನೋಡ್ತಾ ನಿಂತಿದೀಯ.. ಬಿರೀನ್ ಬಾ.. ಮನೇ ಅತ್ರ ರಾತ್ರಿ ನಾಟ್ಕ ಆಡ್ತಾವ್ರೆ. ನೋಡಾಕ್ ಓಗ್ಬೇಕು” ಎಂದು ಅವಸರಿಸಿದ. “ಬಂದೇ ಇರು; ಇದೇನ್ ಬದ್ಕಿದ್ಯೋ ಸತ್ತಿದ್ಯೋ ನೋಡುಮಾ ಅನ್ಕಂಡಿ. ಬದ್ಕಿದ್ರೆ ನಾ ಏನ್ಮಾಡೇನು… ಸತ್ತಿದ್ರೆ ಏನ್ಮಾಡೇನು. ಎಲ್ಲಾ ಒಂದೇ.. ಅಂದಂಗೆ ಯಾವ್ ನಾಟ್ಕಾ ಅಂದಿ” ಎನ್ನುತ್ತಾ ತನ್ನ ಗಂಟು ಮೂಟೆಗೆ ಆಟೋದಲ್ಲಿ ಜಾಗಮಾಡಿಕೊಂಡು, ಹಸ್ತವಿಡುವಷ್ಟು ಉಳಿದ ಜಾಗದಲ್ಲಿ ಕುಂಡಿಯೂರಿಕೊಂಡು ಕುಳಿತ. ಆಟೋ ಬರ‍್ರನೆ ಹೋಗುವುದರಲ್ಲಿ ಅವರು ಮುಂದೇನು ಮಾತಾಡಿಕೊಂಡರೋ ಕೇಳಲಿಲ್ಲ.
ಬೆಳಗಿನಿಂದ ಗಿಜಿಗಿಜಿಗುಡುತ್ತಿದ್ದ ವಾಣಿಜ್ಯ ಸಂಕೀರ್ಣ ನಿಧಾನವಾಗಿ ನಿರ್ಜನವಾಗುತ್ತಿತ್ತು. ಎಲ್ಲ ಅಂಗಡಿ ಮುಂಗಟ್ಟುಗಳೂ ಬಾಗಿಲನ್ನು ಜಡಿದುಕೊಂಡವು.ವಾಹನ ನಿಲ್ದಾಣದಲ್ಲಿದ್ದ ವಾಹನಗಳೆಲ್ಲಾ ಖಾಲಿಯಾದವು. ಸಿಟಿಬಸ್ಸಿನ ಕಂಡಕ್ಟರ್ “ಲಾಸ್ಟ್ ಟ್ರಿಪ್, ಲಾಸ್ಟ್ ಟ್ರಿಪ್. ಬೇಗ ಬೇಗ ಹತ್ತಿಕೊಳ್ಳಿ” ಎಂದು ಅಳಿದುಳಿದವರನ್ನು ಹತ್ತಿಸಿಕೊಳ್ಳತೊಡಗಿದ. ಪಕ್ಕದ ಬೀದಿಯ ಜಾತ್ರೆಯ ಸಂಭ್ರಮವೂ ಮುಗಿದು ತಲಗಟ್ಟಮ್ಮ ತನ್ನ ದೇಗುಲದಲ್ಲಿ ಬಂದಿಯಾಗಿ, ಸುಸ್ತಾಗಿ, ಕುಳಿತಲ್ಲೇ ನಿದ್ದೆಮಾಡತೊಡಗಿದಳು. ದಿನವಿಡೀ ಕಾಯೊಡೆದು, ಮಂಗಳಾರತಿ ಮಾಡಿ, ತಾಯಿತ ಕಟ್ಟಿ, ಭಂಡಾರ ಬಳಿದಿದ್ದ ಅಯ್ಯ ಮೈಯೆಲ್ಲಾ ಮುರಿದು ಹೋಗುವಷ್ಟು ಬಸವಳಿದಿದ್ದು, ಅಂದಿನ ಸಂಪಾದನೆಯನ್ನು ಕೈಚೀಲಕ್ಕೆ ತುರುಕಿಕೊಂಡು, ಬಾಗಿಲಿಗೆ ಬೀಗ ಜಡಿದು ಮನೆಯ ಕಡೆಗೆ ನಡೆದ. ಮಾರುಕಟ್ಟೆ ಬಳಸಿಕೊಂಡು ಹಿಂದಿನ ಬೀದಿಗೆ ಹೋದರೆ ಅವನ ಮನೆ. ಬಸ್ಸಿನ ದಾರಿಯಲ್ಲ; ಆಟೋದವರು ಬರುವುದಿಲ್ಲ. ಹೇಗೋ ಕಷ್ಟಪಟ್ಟುಕೊಂಡು ಬರುತ್ತಿರುವಾಗ ಕತ್ತಲಲ್ಲಿ ಕಾಣದೇ ಆ ಕತೆಯನ್ನು ಎಡವಿ ಅದರ ಮೇಲೇ ಬಿದ್ದುಬಿಟ್ಟ. ಪ್ರಾಣವೇ ಹೋದಷ್ಟು ಭಯವಾಗಿ “ಅಮ್ಮಾ ತಲಗಟ್ಟಮ್ಮಾ” ಎಂದು ಕಿರಿಚಿಕೊಂಡ. ಹತ್ತಿರದಲ್ಲಿ ಯಾರೂ ಓಡಾಡುತ್ತಿರಲಿಲ್ಲವಾದ್ದರಿಂದ ಯಾರಿಗೂ ಅವನ ಕೂಗು ಕೇಳಲಿಲ್ಲ. ಎದ್ದು ಕುಳಿತುಕೊಂಡು ಅಲುಗಾಡಿಸಿ ನೋಡಿದ. ಇನ್ನೂ ಸಣ್ಣಗೆ ಉಸಿರಾಡುತ್ತಿತ್ತು. ‘ಸಧ್ಯ ನಾನು ಬಿದ್ದು ಜೀವ ಹೋಗಲಿಲ್ಲವಲ್ಲ’ ಎಂದು ಸಮಾಧಾನಿಸಿಕೊಂಡು ಎದ್ದು ನಿಂತ. ಕೆಳಗೆ ಬಿದ್ದಿದ್ದ ತನ್ನ ಕೈಚೀಲವನ್ನು ಹೆಕ್ಕಿಕೊಂಡು ಮತ್ತೊಮ್ಮೆ ಅದರ ಕಡೆಗೆ ನೋಡಿದ. ‘ತಾನು ನೋಡುತ್ತಿರುವಾಗಲೇ ಏನಾದರೂ ಆಗಿ ಬಿಟ್ಟರೆ… ತಾನೇ ಏನಾದರೂ ಮಾಡಿದ್ದೇನೆಂದು ಯಾರಾದರೂ ತೀರ್ಮಾನಿಸಿಬಿಟ್ಟರೆ’ ಮೈಯೆಲ್ಲಾ ನಡುಗತೊಡಗಿತು. ಮೈಯ ಆಯಾಸವನ್ನೂ ಮರೆತು ಮತ್ತೆ ಹಿಂತಿರುಗಿ ನೋಡದೆ ಅಲ್ಲಿಂದ ಓಡತೊಡಗಿದ ಮನೆ ಸೇರುವವರೆಗೂ…
ಡಿಸೆಂಬರಿನ ಛಳಿ… ರಾತ್ರಿಯಾಗುತ್ತಾ ನೀರು ಹೆಪ್ಪುಗಟ್ಟುವ ಕೊರೆತ.. ಹುಣ್ಣಿಮೆಯ ದಿನವಾದರೂ ಸಣ್ಣಗೆ ಮಂಜಿನ ಪರದೆಯಿದ್ದುದರಿಂದ ಚಂದ್ರಮನೂ ಸ್ವಲ್ಪ ಡಲ್ಲಾಗೇ ಕಾಣುತ್ತಿದ್ದ. ಸಂಕೀರ್ಣದ ಕಾವಲುಗಾರರು ಇದ್ದುದರಲ್ಲಿ ಬೆಚ್ಚಗಿನ ಜಾಗಗಳನ್ನು ಹುಡುಕಿಕೊಂಡು ತಮ್ಮ ದರಿದ್ರ ಕೆಲಸವನ್ನು ಬೈದುಕೊಳ್ಳುತ್ತಾ ಕಂಬಳಿಗಳಲ್ಲಿ ಮುದುರಿಕೊಂಡರು. ಬೀಟಿನ ಪೋಲೀಸಿನವರು ದಾರಿಯ ಆ ಕೊನೆಯಲ್ಲೊಬ್ಬರು, ಈ ಕೊನೆಯಲ್ಲೊಬ್ಬರು ನಿಂತಲ್ಲೇ ಸೀಟಿಯನ್ನು ಊದಿ ತಮ್ಮ ಕೆಲಸ ಪೂರೈಸಿ ತಮ್ಮ ಮಲಗುವ ಅಡ್ಡಾಗೆ ತೆರಳಿದರು. ಆ ಕತೆ ಮಾತ್ರ ಯಾರ, ಯಾವುದರ ಪರಿವೆಯೂ ಇಲ್ಲದೆ ಮಂಜಿನಲ್ಲಿ ನಿಧಾನವಾಗಿ ಕಲ್ಲಾಗುತ್ತಿತ್ತು…
ಬೆಳಗಿನ ಜಾವ ಕಸ ಎತ್ತುವ ಕಾರ‍್ಪೋರೇಶನ್ ಕೆಲಸಗಾರರು, ಲಾರಿಯವರು ಬಂದು ಹಿಂದಿನ ದಿನದ ಎಲ್ಲ ಅವಶೇಷಗಳನ್ನೂ ಗುಡಿಸಿ ಗುಡ್ಡೆ ಹಾಕಿ ಲಾರಿಗಳಿಗೆ ತುಂಬತೊಡಗಿದರು. ಹೀಗೇ ಗುಡಿಸುತ್ತಾ ಬರುವಾಗ ನಿರ‍್ಜೀವವಾಗಿದ್ದ ಈ ಕತೆಯೂ ಕಾಣಿಸಿತು. “ಯಾವ ಬೇವರ‍್ಸೀ ನನ್ ಮಕ್ಳೋ. ಸಾಯಕ್ಕೆ ಮುಂಡೇಮಕ್ಳಿಗೆ ಇದೇ ಜಾಗ ಬೇಕಾ?” ಎಂದು ಬೈದುಕೊಳ್ಳುತ್ತಾ “ನೀನೂ ಒಂದು ಕೈ ಹಾಕು ಬಾ” ಎನ್ನುತ್ತಾ ಜೊತೆಯವನನ್ನು ಕರೆದು ಅದನ್ನು ಸುತ್ತಿ ಲಾರಿಗೆಸೆದರು. ಅಂತೂ ಇಂತೂ ಯಾರೂ ಓದದ ಕತೆಯೊಂದು ಹೀಗೇ ಮುಗಿದುಹೋಗಿತ್ತು… ಕಸದ ರಾಶಿಯಲ್ಲಿ ಒಂದಾಗಿ ಹೋಗಿತ್ತು…