ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಬರಹ

.

ರಾಮಕೃಷ್ಣ ಗುಂದಿ ಅವರ ಆತ್ಮಕಥೆ23

ಆತ್ಮಾನುಸಂಧಾನ

ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ…

Delhi Colleg of Art | DCA | AFA India no 1 institute for fashion & art

ಬಿ.ಎ. ಪದವಿ ಶಿಕ್ಷಣ ಪಡೆಯುವುದಕ್ಕಾಗಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ ಸೇರಲು ಬಯಸಿದೆ. 1966ರಲ್ಲಿ ಮಾನ್ಯ ದಿನಕರ ದೇಸಾಯಿಯವರು ತಮ್ಮ ಕೆನರಾ ವೆಲ್ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಸ್ಥಾಪಿಸಿದ ಗೋಖಲೆ ಸೆಂಟನರಿ ಕಾಲೇಜು ನನ್ನಂಥ ಸಾವಿರಾರು ಬಡ ವಿದ್ಯಾರ್ಥಿ ಗಳ ಪದವಿ ಶಿಕ್ಷಣದ ಕನಸನ್ನು ನನಸಾಗಿಸಿದ್ದು ಈಗ ಇತಿಹಾಸ.

ನಾನು ವಿದ್ಯಾರ್ಥಿಯಾಗಿ ಕಾಲೇಜು ಸೇರುವ ಹೊತ್ತಿಗೆ ಪದವಿ ಅಭ್ಯಾಸ ಮುಗಿಸಿದ ಮೊದಲ ತಂಡ ಕಾಲೇಜಿನಿಂದ ಹೊರಗೆ ಹೋಗಲು ಅಣಿಯಾಗುತ್ತಿತ್ತು. ಕಾಲೇಜಿನ ಸಂಸ್ಥಾಪಕ ಪ್ರಾಚಾರ್ಯರಾಗಿದ್ದ ಪ್ರೊ.ಕೆ.ಜಿ. ನಾಯ್ಕ ಅವರು ಅತ್ಯಂತ ಶಿಸ್ತು ಮತ್ತು ದಕ್ಷತೆಯಿಂದ ಕಾಲೇಜಿನ ಆಡಳಿತವನ್ನು ನಡೆಸುತ್ತಿದ್ದರು. ಅವರ ಮತ್ತು ಮಾನ್ಯ ದಿನಕರ ದೇಸಾಯಿಯವರ ಮಾರ್ಗದರ್ಶನದಂತೆಯೇ ಅಹರ್ನಿಶಿ ಕಾರ್ಯ ನಿರ್ವಹಿಸುವ ಅಧ್ಯಾಪಕ ಮತ್ತು ಆಫೀಸು ಸಿಬ್ಬಂದಿಗಳ ತಂಡ ಕಾಲೇಜನ್ನು ಒಂದು ಮಾದರಿ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲು ಕ್ರಿಯಾಶೀಲರಾಗಿದ್ದರು. ಎಲ್ಲ ವಿಭಾಗಗಳಲ್ಲಿ ಕಾರ್ಯನಿರತರಾಗಿದ್ದ ಪ್ರತಿಭಾ ಸಂಪನ್ನ ಅಧ್ಯಾಪಕ ವರ್ಗ ಕಾಲೇಜಿಗೆ ಒಂದು ವಿಶಿಷ್ಟ ಗಾಂಭೀರ್ಯವನ್ನು ತಂದುಕೊಟ್ಟಿತ್ತು.

ಕಲಾ ವಿಭಾಗವಾಗಲಿ, ವಿಜ್ಞಾನ ವಿಭಾಗವಾಗಲಿ ಜ್ಞಾನದಿಂದ ಪರಿಪೂರ್ಣರೆನಿಸಿದ ಅಧ್ಯಾಪಕರಿಂದ ತುಂಬಿತ್ತು. ಪ್ರತಿ ಹಂತದ ಆಯ್ಕೆ ಅನುಷ್ಠಾನಗಳಲ್ಲಿ ಡಾ. ದಿನಕರ ದೇಸಾಯಿ ಮತ್ತು ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯ ಕೆ.ಜಿ. ನಾಯ್ಕ ಅವರ ದೂರದರ್ಶಿತ್ವ ಉತ್ತಮ ಫಲಿತಾಂಶ ನೀಡಿತ್ತು. ಇದು ಮೂರ್ನಾಲ್ಕು ವರ್ಷಗಳ ಅಲ್ಪಾವಧಿಯಲ್ಲಿಯೇ ಕಾಲೇಜಿಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಗೌರವಾದರಗಳನ್ನು ದೊರಕಿಸಿಕೊಟ್ಟಿತ್ತು.

ಸಂಸ್ಕೃತ ವಿಭಾಗದಲ್ಲಿ ಪ್ರೊ. ಎಂ.ಪಿ. ಭಟ್, ಕನ್ನಡ ವಿಭಾಗದ ಪ್ರೊ. ವಿ.ಎ. ಜೋಷಿ, ಕೆ.ವಿ. ನಾಯಕ ಇತಿಹಾಸ ವಿಭಾಗದಲ್ಲಿ, ಪ್ರೊ. ಎ.ಎಚ್. ನಾಯಕ, ಟಿ.ಟಿ. ತಾಂಡೇಲ್ ಇಂಗ್ಲೀಷ್ ವಿಭಾಗದಲ್ಲಿ, ಪ್ರೊ. ಎನ್.ಜಿ. ಸಭಾಹಿತ, ದಿವಾಸ್ಪತಿ ಹೆಗಡೆ, ಎಂ.ಎನ್. ಡಂಬಳ, ಶ್ರೀಮತಿ ನಿರ್ಮಲಾ ಗಾಂವಕರ ಹಿಂದಿ ವಿಭಾಗದಲ್ಲಿ, ಪ್ರೊ. ಕೆ.ಪಿ. ಕುಲಕರ್ಣಿ ಅರ್ಥಶಾಸ್ತ್ರ ವಿಭಾಗಕ್ಕೆ, ಪ್ರೊ. ಡಿ.ಆರ್.ಪೈ, ಡಿ.ವ್ಹಿ. ಹೆಗಡೆ ರಾಜ್ಯಶಾಸ್ತ್ರದಲ್ಲಿ, ಪ್ರೊ. ಎಂ.ಡಿ. ರಾಣಿ ಮುಂತಾದ ಮಹನೀಯರು ಕಲಾ ವಿಭಾಗದ ಗೌರವಾನ್ವಿತಿ ಅಧ್ಯಾಪಕರಾಗಿದ್ದಾರೆ. ವಿಜ್ಞಾನ ವಿಭಾಗದ ಗಣಿತ ಶಾಸ್ತ್ರಕ್ಕೆ ಸ್ವತಃ ಪ್ರಾಚಾರ್ಯರಾಗಿದ್ದಾಗ ಕೆ.ಜಿ. ನಾಯ್ಕ, ಪಿ.ಎಂ. ರಾಣೆ, ಎಂ.ಜಿ. ಹೆಗಡೆ ಮುಖ್ಯವಾಗಿದ್ದರು. ಪ್ರೊ. ಸಿ.ಎನ್. ಶೆಟ್ಟಿ, ಪ್ರೊ ವಿ.ಆರ್. ವೆರ್ಣೆಕರ್ ರಸಾಯನಶಾಸ್ತ್ರ ವಿಭಾಗದಲ್ಲಿ, ಪ್ರೊ. ಬಿ.ಎನ್. ಭಟ್, ಪ್ರೊ. ಮೋಹನ ಹಬ್ಬು ಭೌತಶಾಸ್ತ್ರ ವಿಭಾಗದಲ್ಲಿ, ಪ್ರೊ. ಶ್ರೀಮತಿ ಶಾಂತಾ ಥಾಮಸ್, ಆರ್.ಬಿ. ನಾಯ್ಕ ಜೀವಶಾಸ್ತ್ರ, ಸಸ್ಯಶಾಸ್ತ್ರ ವಿಭಾಗದಲ್ಲಿ ಕರ್ತವ್ಯನಿಷ್ಠರಾಗಿ ಕಾರ್ಯನಿರ್ವಹಿಸುತ್ತ ವಿಜ್ಞಾನ ವಿಭಾಗದ ಘನತೆಯನ್ನು ಹೆಚ್ಚಿಸಿದ್ದರು.

ಆಡಳಿತ ಕಚೇರಿಯ ಮುಖ್ಯಸ್ಥರಾಗಿ ಕೃಷ್ಣಾನಂದ ಶೆಟ್ಟಿ ಎಂಬುವವರು ಕಾರ್ಯನಿರ್ವಹಿಸುತ್ತಿದ್ದರೆ, ಆನಂದು ಶೆಟ್ಟಿಯವರು ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಇವರಿಗೆ ಸೈಯದ್ ಎಂಬ ಮುಸ್ಲಿಂ ತರುಣನೊಬ್ಬ ಗುಮಾಸ್ತರಾಗಿ ಸಹಕರಿಸುತ್ತಿದ್ದರು.

ನನ್ನ ನೆನಪಿನಲ್ಲಿ ಉಳಿದಂತೆ, ಕಾಲೇಜಿನ ಗ್ರಂಥಾಲಯದ ಜವಾಬ್ದಾರಿಯನ್ನು ವಿಷ್ಣು ನಾಯ್ಕ ಎಂಬ ತರುಣ ಬರಹಗಾರರೊಬ್ಬರು ನೋಡಿಕೊಳ್ಳುತ್ತಿದ್ದು ಒಂದೆರಡು ವರ್ಷಗಳಲ್ಲಿಯೇ ಅವರು ಕೆನರಾ ವೆಲಫೇರ್ ಸಂಸ್ಥೆಯದ್ದೇ ಆದ ಹೈಸ್ಕೂಲಿಗೆ ಶಿಕ್ಷಕರಾಗಿ ನೇಮಕಗೊಂಡು ದಾಂಡೇಲಿಗೆ ವರ್ಗಾವಣೆಯಾದರು. ಆ ಬಳಿಕ ಎಸ್.ಆರ್. ಉಡುಪಿ ಎಂಬ ಗ್ರಂಥಾಲಯ ವಿಜ್ಞಾನ ಪದವೀಧರರು ಇಲ್ಲಿ ನೇಮಕಗೊಂಡು ಸುದೀರ್ಘಕಾಲ ಗ್ರಂಥಾಲಯ ಆಡಳಿತವನ್ನು ಸಮರ್ಥವಾಗಿ ನಡೆಸಿದರು.

ವಿದ್ಯಾರ್ಥಿ ಸಮುದಾಯದಲ್ಲಿ ಬಹು ಸಂಖ್ಯೆಯ ನಾಡವರು, ಕೊಂಕಣಿಗರು, ನಾಮಧಾರಿಗಳು, ಸ್ವಲ್ಪ ಪ್ರಮಾಣದಲ್ಲಿ ಹಾಲಕ್ಕಿಗಳು, ಕ್ರೈಸ್ತರು, ಮುಸ್ಲಿಂರು, ದಲಿತರು ಓದುತ್ತಿದ್ದರು. ಆರ್ಥಿಕ ಅಭಿವೃದ್ಧಿ ಹೊಂದಿರದ ಅಂದಿನ ಸಾಮಾಜಿಕ ಜೀವನದ ಪರಿಣಾಮ ವಿದ್ಯಾರ್ಥಿಗಳ ವೇಷ ಭೂಷಣಗಳಲ್ಲಿಯೇ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬಹುದೆಂದರೆ ಆರ್ಥಿಕ ಅನುಕೂಲತೆಯ ಕುಟುಂಬದ ಮಕ್ಕಳು ‘ಫುಲ್ ಪ್ಯಾಂಟ್’ ಧರಿಸಿ ಬರುತ್ತಿದ್ದರೆ, ಆರ್ಥಿಕ ಅನಾನುಕೂಲವಿದ್ದ ಕುಟುಂಬದ ಮಕ್ಕಳು ‘ಹಾಪ್ ಪ್ಯಾಂಟ್’ ಧರಿಸಿಯೇ ಕಾಲೇಜು ಪ್ರವೇಶಿಸಿದ್ದರು.

ನಾನು, ನನ್ನ ಗೆಳೆಯರೆಲ್ಲ ಈ ಎರಡನೆಯ ದರ್ಜೆಯವರೇ ಆಗಿದ್ದು ಹಾಪ್ ಪ್ಯಾಂಟ್ ಧಾರಿಗಳಾಗಿ ಕಾಲೇಜಿನ ಮೆಟ್ಟಿಲೇರುತ್ತಿದ್ದಂತೆ ದಿಗಿಲುಗೊಂಡದ್ದು ಸಹಜ. ಹಿಂದಿನ ಎಲ್ಲ ಶಾಲೆ ಹೈಸ್ಕೂಲುಗಳಿಂದ ತೀರ ಭಿನ್ನವೇ ಆದಂತಿರುವ ಶಿಕ್ಷಣ ವ್ಯವಸ್ಥೆಗೆ ನಮ್ಮನ್ನು ಹೊಂದಿಸಿಕೊಳ್ಳುವುದಕ್ಕೆ ಬಹುಕಾಲವೇ ಬೇಕಾಯಿತು. ಅದರಲ್ಲಿಯೂ ಇಂಗ್ಲೀಷ್ ಭಾಷೆಯ ಅಲ್ಪ ಸ್ವಲ್ಪ ಅರಿವಿನಲ್ಲೇ ಪಿ.ಯು ಪರೀಕ್ಷೆ ಹೇಗೋ ದಾಟಿ ಬಂದ ನಮಗೆಲ್ಲ ಇಂಗ್ಲಿಷ್ ಮಾಧ್ಯಮದ ಪಾಠ ಪ್ರವಚನಗಳು ಅಕ್ಷರಶಃ ಗಾಬರಿ ಹುಟ್ಟಿಸಿದ್ದವ

ಒಂದೊಂದು ತರಗತಿಯಲ್ಲಿ ತುಂಬಿ ತುಳುಕುವ ವಿದ್ಯಾರ್ಥಿ ಸಮುದಾಯ ಸೂಟು-ಬೂಟುಗಳಲ್ಲಿ ಗಂಭೀರವಾಗಿ ತರಗತಿಗಳನ್ನು ಪ್ರವೇಶಿಸಿ ನಿರರ್ಗಳವಾಗಿ ಇಂಗ್ಲೀಷ್ ಮಾಧ್ಯಮದಲ್ಲಿ (ಕನ್ನಡ ವಿಷಯ ಹೊರತಾಗಿ) ಉಪನ್ಯಾಸ ನೀಡುವ ಅಧ್ಯಾಪಕರ ವಾಗ್ ವೈಭವಕ್ಕೆ ಬೆರಗಾಗುತ್ತ ಹಿಂದಿನ ಸಾಲಿನ ಹುಡುಗರಾಗಿ ತರಗತಿಗೆ ಬಂದ ನಮ್ಮ ಗೆಳೆಯರ ಗುಂಪು ನಿಧಾನವಾಗಿ ಪುಸ್ತಕ ಪಾಠ ಇತ್ಯಾದಿಗಳನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತ ಕಾಲೇಜ್ ಕ್ಯಾಂಪಸ್ ಬದುಕಿಗೆ ಹೊಂದಿಕೊಳ್ಳತೊಡಗಿದ್ದೆವು.

*************************************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

About The Author

15 thoughts on “”

  1. Kamalakar S.Borkar

    ಸರ,
    ಗೋಖಲೆ ಸೆಂಟಿನರಿ ಕಾಲೇಜಿನ ಶಿಕ್ಷಣ ವೈಖರಿಯನ್ನು ಕಣ್ಣಿಗೆ ಕಟ್ಟಿದಂತೆ ಇದೆ.

  2. Phalgun gouda

    ಸರ್, ಚೆನ್ನಾಗಿದೆ. ನಿಮ್ಮ ಕಾಲೇಜಿನ ಅನುಭವಗಳನ್ನು ದಾಖಲಿಸಿ..

  3. ಶುಭಲಕ್ಷ್ಮಿ ಆರ್ ನಾಯಕ.

    ಸರ್ ನಾನೂ ಓದಿದ,ತಮ್ಮಂಥ ಗುರುಗಳನ್ನುಪಡೆದ ಗೋಖಲೆ ಶತಾಬ್ಧಿ ಕಾಲೇಜಿನ ಗೌರವಾನ್ವಿತ ಎಲ್ಲ ಉಪನ್ಯಾಸಕ ಬಂಧುಗಳನ್ನು ನೆನಪಿಸಿದಿ . ತಾವು ಅಲ್ಲೇ ಉಪನ್ಯಾಸಕರಾಗಿ ಶಿಷ್ಯಕೋಟಿಯ ಮೆಚ್ಚುಗೆಗಳಿಸಿದ್ದನ್ನು ಮುಂದಿನ ಅಂಕಣಗಳ್ಲಿ ನಿರೀಕ್ಷಿಸುವೆ.

    ಸುಂದರ ಸರ್

  4. ಗುರುರಾಜ ಹನುಮಂತರಾವ್ ಸೊಂಡೂರ.

    ನೀವು ಕಲಿತ ಮಹಾವಿದ್ಯಾಲಯದಲ್ಲಿಯೇ ನಾನೂ ಕೂಡ ವೀದ್ಯಾಭ್ಯಾಸ ಮಾಡಿದ್ದೇವೆ ಎನ್ನುವುದೇ ಹೆಮ್ಮೆಯ ವಿಷಯ.

  5. Vigneshwar Gunaga

    ಸರ್, ತಮ್ಮ ಈ ಅಂಕಣವು, ನಮ್ಮ ಕಾಲೇಜು ಜೀವನವನ್ನು ಇನ್ನೊಮ್ಮೆ ಮೆಲುಕು ಹಾಕುವ ಅವಕಾಶವನ್ನು ಕಲ್ಪಿಸಿತು. ಅದರೊಂದಿಗೆ, ಜಿ.ಸಿ.ಕಾಲೇಜಿನ ಗತ ವೈಭವದ ನೆನಪನ್ನೂ ಮರುಕಳಿಸುವಂತೆ ಮಾಡಿತು. ಮುಂದಿನ ಅಂಕಣಗಳನ್ನು ಕುತೂಹಲದಿಂದ ನಿರೀಕ್ಷಿಸುತ್ತಿರುವೆ.

  6. ಗುರೂಜಿ,
    ನಿಮ್ಮ ಕಾಲೇಜಿನ ದಿನಗಳು ಓಡುವಾಗ ನನ್ನ ಕಾಲೇಜಿನ ದಿನಗಳು ನೆನಪಾದವು.
    ನಿಮ್ಮ ಕಾಲೇಜಿನ ಗ್ರಂಥಾಲಯ ಜವಾಬ್ದಾರಿಯನ್ನು ವಿಷ್ಣು ನಾಯ್ಕ ಬರಹಗಾರರೊಬ್ಬರು ನೋಡಿಕೊಳ್ಳುತ್ತಿದ್ದರು ಎಂದು ಬರೆದಿದ್ದಿರಿ ಅವರು ಜನತಾ ವಿದ್ಯಾಲಯ ದಾಂಡೇಲಿ ಹೈಸ್ಕೂಲ್ನನಲ್ಲಿ ನಾನು ಹೈಸ್ಕೂಲ್ನನಲ್ಲಿ ಓದುವಾಗ ಅಂದರೆ 1974 ರಿಂದ 1977 (8th to 10th) ಕನ್ನಡ ವಿಷಯ ಪಾಠ ಮಾಡಿದ್ಧಾರೆ, ಅವರು ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು. ಅವರು ನಾವು 10th ಓದುವಾಗ ಒಂದು ಪುಸ್ತಕ ಬರೆದಿದ್ದರು “ನಾನು ಹೆಣ್ಣಾಗಬೆಕಾಗಿತ್ತು” ತುಂಬಾ ಚನ್ನಾಗಿ ಬರೆದಿದ್ದರು. ಯಾಕೆ ಎಂದು ಕೇಳಿದಾಗ ಆದರ ವಿವರ ಕೂಡ ಹೇಳಿದ್ದರು.

    ನಾನು ಬಿ. ಕಾಂ ಪದವಿ ಓದುತ್ತಿರುವಾಗ ಪ್ರೊ. ಎನ್. ಜಿ. ಸಭಾಹಿತ, ಬಾಂಗೂರ ನಗರ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾಗಿದ್ದರು, ನಾನು ಬಿ. ಕಾಂ ಫಸ್ಟ್ year 1980 ಯಲ್ಲಿ ಓದುವಾಗ ನಮಗೆ ಇಂಗ್ಲಿಷ್ ವಿಷಯದಲ್ಲಿ ಬೋಧನೆ ಮಾಡಿದ್ದರು. ತುಂಬಾ ಶಿಸ್ತಿನ ವ್ಯಕ್ತಿ ಆದರೆ ಅವರು ಈಗ ಇಲ್ಲ. ಅವರು ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರದವರು.

    ಗುರೂಜಿ ನಿಮ್ಮಿಂದ ನನ್ನ ಹಳೆಯ ನೆನಪುಗಳು ನೆನಪಿಸುತ್ತಿದ್ದಿರಿ……..

    ನನ್ನ ಜೀವನದಲ್ಲಿ ಗುರುಗಳು ಅಂದರೆ ದೇವರ ಸಮಾನ.

    ಮುಂದುವರಿದ ಸಂಚಿಕೆ ಎದುರಾಗಿರುವೆ….

  7. Prof. V. R. Vernekar

    ಹಳೆಯ ಕಾಲದ ಪುಟಗಳನ್ನು ತಿರುವಿ ಹಾಕಿದಂಥ ಅನುಭವವಾಯಿತು.

  8. ಕಾಲೇಜಿನ ಪ್ರಾಧ್ಯಾಪಕರ ಹಾಗೂ ಸಿಬ್ಬಂದಿಗಳ ವಿವರದೊಂದಿಗೆ ನಿಮ್ಮ ಪ್ರವೇಶದ ವಿವರ, ಕಾಲೇಜಿನ ಹಿರಿಮೆ,ಗರಿಮೆಗಳ ಉಲ್ಲೇಖ ಮನನೀಯ.

  9. Shridhar Bommayya Nayak

    ನಾವು ಓದುವಾಗ ಸಭಾಹಿತ,ದಿವಸ್ಪತಿ ಹೆಗಡೆ ಇರಲಿಲ್ಲ.ಮೊದಲ ತಲೆಮಾರಿನ ಈ ಹಿರಿಯರ ಜೊತೆಗೆ ಎರಡನೇ ತಲೆಮಾರಿನಲ್ಲಿ ನೀವು,ಶ್ರೀಪಾದ ಶೆಟ್ಟಿ,ಸ್ನೇಹಲತಾ ಮೇಡಂ,ಕೆ.ಆರ್.ಭಟ್,ಎಸ್,ಎನ್,ಭಟ್,ಎಸ್.ಎಚ್.ನಾಯಕ,ಎನ್.ವಿ.ನಾಯಕ ಇವರೆಲ್ಲ ಇದ್ದರು.ಶಾಮ್ ಹುದ್ದಾರ್,ಅಮ್ಮೆಂಬಳ ಆನಂದ ಅವರು ಕಚೇರಿಯಲ್ಲಿದ್ದರು.ಬಹುಮುಖ ವ್ಯಕ್ತಿತ್ವದ ಪ್ರತಿಭಾವಂತರೆಲ್ಲ ಒಂದೆಡೆ ಮೇಳೈಸಿದ ಸಂಸ್ಥೆಯಾಗಿತ್ತು ಗೋಖಲೆ ಕಾಲೇಜು.ನಿಮ್ಮ ಕಾಲೇಜು ದಿನಗಳೊಂದಿಗೆ ನಮ್ಮ ಕಾಲೇಜು ದಿನಗಳನ್ನು ನೆನಪು ಮಾಡಿಕೊಳ್ಳಲು ಅವಕಾಶವಾಯಿತು ಸರ್.

  10. Ramakrishna Gundi

    ದಯವಿಟ್ಟು ನಾನು ಮರೆತುದನ್ನು ನೆನಪಿಸಿ

Leave a Reply

You cannot copy content of this page

Scroll to Top