ರೈತ ಗಜಲ್
ಹೊಳೆಯ ಸಾಲಿನಲ್ಲಿ ಹೊನ್ನ ಬಿತ್ತಿ ಬೆಳೆದವನ ಮನದಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ
ಕಳೆ ಕಸ ತೆಗೆದು ಹೊಲ ಹಸನು ಮಾಡಿ ಹಸಿರುಕ್ಕುವ ಎದೆಯಲ್ಲಿ ಬೆಂಕಿ ಹತ್ತಿ ಉರಿದಿದೆ
ಕೂರಿಗೆ ತಾಳು ಬಾರುಕೋಲು ನೊಗದ ಮುಖ ಬಾಡಿದೆ ಮನೆಗಳಲ್ಲಿ ಜಾಗ ಹುಡುಕುತ್ತಾ
ಹಿಂಡಿ ಹತ್ತಿಕಾಳು ತಿಂದು ದುಂಡಗಾಗಿದ್ದ ಎತ್ತುಗಳಿಗೆ ಗತಕಾಲ ನೆನಪಾಗಿ ಉಳಿದಿದೆ
ಕೋಟಿ ವಿದ್ಯೆಯ ಬಿಟ್ಟು ಮೇಟಿ ಹಿಡಿಯಲು ಬಂದ ಮಗನ ಭವಿಷ್ಯ ಗಾಳಿಗಿಟ್ಟ ಹಣತೆ
ಮನೆ ಮಂದಿಯಲ್ಲ ಬೆವರು ಬಸಿದರೂ ಹಸಿರಾಗದ ಅಕ್ಕಡಿ ಸಾಲು ಈಟಿಯಾಗಿ ತಿವಿದಿದೆ
ನಾಡಿಗೆ ಅನ್ನ ಕೊಡುವ ಕೈಗಳಿವು ಬೊಗಸೆ ಒಡ್ಡುವಾಗ ವಿಲವಿಲನೆ ಒದ್ದಾಡುತ್ತದೆ ಜೀವ
ಬೆಳೆಗೆ ಬೆಲೆ ಇರದೆ ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆ ಗತಿಯಾಗಿ ಕಣ್ಣೀರ ಕೋಡಿ ಹರಿದಿದೆ
ಹಳ್ಳಿಯ ರೈತನ ಗೋಳು ದಿಲ್ಲಿಯ ದೊರೆಗಳಿಗೆ ಯಾವಾಗ ತಿಳಿಯುತ್ತದೆ ಅರುಣಾ
ಯುಗ ಯುಗಗಳಳಿದರೂ ಈ ಮಣ್ಣ ನಂಟು ಬಿಡಲಾಗದು ತೀರದ ಸಾಲ ಶೂಲವಾಗಿ ಎದೆಗೆ ಇರಿದಿದೆ
**********************
ಅರುಣಾ ನರೇಂದ್ರ