ರೈತ ಗಜಲ್
ದೇಶದ ಬೆನ್ನೆಲುಬು ನೀನೆಂದು ಹೊಗಳುತ್ತಾರೆ ಎಲ್ಲರೂ
ನಿನ್ನ ಮೂಳೆ ಚಕ್ಕಳ ಮೈಯ ಮರೆಯುತ್ತಾರೆ ಎಲ್ಲರೂ
ಮೂಕ ಬಸವನ ಕೂಡ ಮೌನ ದುಡಿಮೆ ನಿನ್ನದು
ನಿನ್ನ ಹಿತವ ಗುತ್ತಿಗೆ ಹಿಡಿದಂತೆ ಆಡುತ್ತಾರೆ ಎಲ್ಲರೂ
“ರೈತನ ಬೆವರಿಗೆ ಬೆಲೆ ಎಲ್ಲಿ” ಅಬ್ಬರದ ಮಾತು
ಬೆಳೆಯ ಕೊಳ್ಳುವಾಗ ಅಗ್ಗಕ್ಕೇ ಕೇಳುತ್ತಾರೆ ಎಲ್ಲರೂ
“ಅನ್ನದಾತ ರೈತ, ಜೈಕಿಸಾನ್!” ಘೋಷಣೆ ಜೋರು
ಪೋಷಣೆಯ ಅರಸಿದರೆ ಕಣ್ಣು ತಪ್ಪಿಸುತ್ತಾರೆ ಎಲ್ಲರೂ
ಆ ನಿಸ್ತೇಜ ಕಣ್ಣುಗಳಲ್ಲಿ ಬಿರಿದ ನೆಲ, ಕಮರಿದ ಫಸಲು
ನಿನ್ನ ಹೆಣದ ಮೇಲೆ ಚದುರಂಗ ಆಡುತ್ತಾರೆ ಎಲ್ಲರೂ
ಬೆಳೆಯುವುದನ್ನೇ ಬದುಕಾಗಿಸಿದವನು ನೀನು ‘ಜಂಗಮ’
ಅರೆಹೊಟ್ಟೆಯ ನಿನ್ನ ಮರೆತು ಡೊಳ್ಳು ತುಂಬಿಸುತ್ತಾರೆ ಎಲ್ಲರೂ
*********************************************
ಡಾ. ಗೋವಿಂದ ಹೆಗಡೆ
ಉತ್ತಮ ಮನಮುಟ್ಟುವ ಗಜಲ್
ತುಂಬಾ ಚೆನ್ನಾಗಿದೆ..
ಮನಮುಟ್ಟುವ ಕಾವ್ಯ…
ಚಂದದ ಗಜಲ್. ವಸ್ತುನಿಷ್ಠ ಕೂಡ…