ಅಂಕಣ ಬರಹ
ಹೊಸ್ತಿಲು ದಾಟಿದರೆ ಅಂಗಳವೇ
“ನಾಯಕರೇ…ನಾಯಕರೇ….”
ಆಪ್ಯಾಯಮಾನದ,ಅಷ್ಟೇ ಗಂಭೀರ ಸ್ವರ ಅಂಗಳದಿಂದ ಅನುರಣಿಸಿದಾಗ, ನಾನು ಅಡುಗೆ ಚಾವಡಿಯಲ್ಲಿ ಕುಳಿತು ಅರೆಯುವ ಕಲ್ಲಿನಲ್ಲಿ ಚಟ್ಣಿ ಅರೆಯುತ್ತಿದ್ದೆ.
“ಯಾರೂ?”.. ಅಂತ ಅಲ್ಲಿಂದಲೇ ಕೂಗಿ ಚಿಗರೆಯಂತೆದ್ದು ಮುಖಚಾವಡಿಗೆ ಬಂದರೆ, ಹೊಸ್ತಿಲಿನಾಚೆಗೆ ಬಿಳಿತಲೆಗೂದಲಿನ,ಗೌರವವರ್ಣದ, ಹದ ಎತ್ತರದ ಹಿರಿಯರು ನಿಂತಿದ್ದರು. ಅವರಿಗೆ ಬಲ ತುಂಬಲೆಂಬಂತೆ ಅವರ ಎರಡು ಬದಿ ನಿಂತ ತರುಣರಿಬ್ಬರು.
” ಸುರೇಶ್ ನಾಯಕ್ ಅವರು ಮನೆಯಲ್ಲಿಲ್ಲವೇ”
“ಹ್ಞಾ ಇದ್ದಾರೆ, ಈಗ ಕರೆಯುತ್ತೇನೆ..”
ಹೇಳುತ್ತಾ ಚೊಂಬು ತುಂಬಾ ನೀರು ಕೊಟ್ಟೆ,
ಅವರು ಅಂಗಳದ ಮೂಲೆಯತ್ತ ನಡೆದು ಕೈಕಾಲು ಮುಖ ತೊಳೆದು ಬೈರಾಸಿನಲ್ಲಿ ಮುಖ ಒರೆಸುತ್ತಾ ಒಳಬಂದರು.
ನನಗೆ ಚೂರುಪಾರು ಪರಿಚಯವಿತ್ತು. ಆಗಿನ ನನ್ನ ವ್ಯಕ್ತಿತ್ವವೇ ಎಂಬಂತಿದ್ದ ಸಂಕೋಚದ ಚಿಪ್ಪಿನೊಳಗಿಂದ ತುಸು ಸರಿದು ” ಕುಳಿತುಕೊಳ್ಳಿ” ಎಂದು ಒಂದು ಗಿಣ್ಣಲೆಯಲ್ಲಿ ಬೆಲ್ಲದ ತುಂಡುಗಳು, ಕುಡಿಯಲು ನೀರಿನ ಚೊಂಬು, ಗ್ಲಾಸು ಗಳನ್ನು ಎದುರಿಗಿಟ್ಟು, ಆಸರು ಆರಿಸಿಕೊಳ್ಳಿ ಎಂದೆ.
ಅವರು, ದಂಪತಿಗಳೆದುರು ಒಂದು ಸುಂದರ ಕಲ್ಪನಾಲೋಕದ ಪರಿಚಯವನ್ನು ಮಾಡಿಸುತ್ತಿದ್ದರು. ನನ್ನವನು
“ಬೇಡ”
ಎಂಬ ಒಂದೇ ಪದದ ಉತ್ತರ ಇತ್ತಾಗಿತ್ತು. ಆದರೂ ಸೋಲುವುದು ನಮ್ಮ ಜಾಯಮಾನವಲ್ಲ ಎಂಬಂತೆ ಅವರು ಮತ್ತೆ ಮತ್ತೆ ವಿವರಿಸುತ್ತಿದ್ದರು.
ಹೌದು ಅದು ಉಡುಪಿ ರಂಗಭೂಮಿ ಸಂಸ್ಥೆಯ ಪದಾಧಿಕಾರಿಗ಼ಳು. ರಂಗಭೂಮಿಯ ನಾಟಕದಲ್ಲಿ ಪಾತ್ರವಹಿಸುವಂತೆ ಕೋರಿಕೆಯನ್ನೂ,ರಂಗದ ಹಿನ್ನೆಲೆ, ಕಥೆಗಳು ನಾಟಕವಾಗುವ ಅದ್ಭುತ, ರಂಗಕುಟುಂಬವೆಂಬ ಭಾವಲೋಕ, ಪ್ರಸ್ತುತಿಗೊಳ್ಳಲಿರುವ ನಾಟಕ, ಪ್ರಯಾಣ ಹೀಗೆ ಮಾತು ಸಾಗುತ್ತಿತ್ತು.
ಮಗುವಿನೆದುರು ಚಾಕಲೇಟು ತೋರಿಸಿ ತಗೋ ತಗೋ ಎಂದಂತೆ. ಇವರು ನನ್ನನ್ನೇ ಅರಸಿಕೊಂಡು ಬಂದು ಅಭಿನಯಿಸಲು ಕೇಳಿಕೊಳ್ಳಲು ಹಿನ್ನೆಲೆಯಿದೆ.
ಉಡುಪಿಯ ಮಹಾತ್ಮಗಾಂಧಿ ಕಾಲೇಜಿನ ಆವರಣದಲ್ಲಿ ವರ್ಷಕ್ಕೊಮ್ಮೆ ರಾಜ್ಯಮಟ್ಟದ ನಾಟಕ ಸ್ಪರ್ಧೆ ನಡೆಯುತ್ತದೆ. ಸಂಜೆಯ ಸಮಯ ನಾಟಕ ನೋಡುವ ಆಸೆಯಿಂದ ಪ್ರತೀದಿನವೂ ನನ್ನ ಹಾಜರಾತಿ. ಯಾರ ಪರಿಚಯ ವೂ ಇಲ್ಲ. ನಾಟಕದ ಪರಿಚಯ ಮಾಡಿಕೊಂಡು ಅದರೊಳಗೆ ಪ್ರವೇಶ ಪಡೆದು ನಾನು ಅದಾಗಿ ನಾಟಕ ನಾನಾಗಿ ಮನಸ್ಸಿನಿಂದ ಒಂದಷ್ಟು ಸಾಂದ್ರತೆಯನ್ನು ಇಳಿಸಿ, ಮತ್ತೊಂದಷ್ಟು ಕನಸು ತುಂಬಿಕೊಂಡು ಹೊರಬರುತ್ತಿದ್ದೆ.
ನನ್ನ ಆಸಕ್ತಿಯನ್ನು ರಂಗ ಕಲಾವಿದರು ಗಮನಿಸುತ್ತಿರಬೇಕು. ಒಂದು ದಿನ ಹೋಗದಿದ್ದರೂ ಮರುದಿನ ಟಿಕೇಟ್ ಕೊಳ್ಳುವ ಸಂದರ್ಭ ನಿನ್ನೆ ಬಂದಿರಲಿಲ್ವಾ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಈ ಆಸಕ್ತಿ ನನ್ನನ್ನು ರಂಗ ಕುಟುಂಬಕ್ಕೆ ಸೇರಿಸಿಕೊಳ್ಳುವ ಉಮೇದಿಗೆ ಮೂಲ ಕಾರಣವಾಗಿತ್ತು. ಅವರು ರಂಗಭೂಮಿಯಿಂದ ಭಡ್ತಿ ಪಡೆದ ಕಲಾವಿದರ ಹೆಸರು, ರಂಗಭೂಮಿಯಲ್ಲಿ ಕಟ್ಟಿದ ನಾಟಕಗಳು ಇವನ್ನೆಲ್ಲ ಹೇಳುತ್ತಿದ್ದರೆ ನನ್ನ ಕಲ್ಪನೆ ರಂಗಚಾವಡಿಗೆ ತೆರೆದುಕೊಂಡಂತೆ ಅನಿಸುತ್ತಿತ್ತು.
ಹಾಗೆ ಮನೆಗೆ ಬಂದಿದ್ದರಲ್ಲಾ. ಮಾತುಕತೆ ನಡೆದು, ಕೊನೆಗೂ
“ಮುಂದೆ ನೋಡೋಣ”
ಎಂಬ ಅರೆಒಪ್ಪಿಗೆಯ ಕರಾರು ಪತ್ರ ಸ್ವೀಕರಿಸಿದವರಂತೆ ಬಂದವರು ಬಂದಂತೆಯೇ ತೆರಳಿದ್ದರು.
ಆಗೆಲ್ಲ ನಾಟಕದ ಅಭಿನಯ ಹೆಣ್ಣಿಗೆ ಸುಲಭವಾಗಿರಲಿಲ್ಲ. ಆದೂ ನಮ್ಮೂರು ಅಂತಹ ದೊಡ್ಡ ನಗರವೂ ಅಲ್ಲದ, ಪೂರ್ತಿ ಗ್ರಾಮೀಣಪ್ರದೇಶವೆಂದು
ಕರೆಸದ ನಡು ಗಡಿಯಲ್ಲಿದ್ದ ಊರು.
ಮನೆಯೋ, ಶ್ಯಾನುಭೋಗರ ಮನೆಯದು.ಮನೆಗೆ ಒಂದು ಅಗಲವಾದ ಎತ್ತರದ ಘನವಾದ ಹೊಸ್ತಿಲು.
ಮನೆ ತುಂಬಾ ಜನರು. ಸಂಪ್ರದಾಯ, ಹಬ್ಬ ಹರಿದಿನಗಳು. ತೋಟ, ಗದ್ದೆ. ಇದರ ಮಧ್ಯೆ ಮನೆಯ ಸೊಸೆ ನಾಟಕವೆಂದು ಹೊರಟರೆ?
ಆದರೆ ಅದುಮಿಡಲಾಗದ ಬಯಕೆಯ ಕುತ್ತಿಗೆ ಹಿಸುಕಲಾದೀತೇ? ತಳಮಳ, ಸೆಳೆತ.
ಮೊದಲು ನನ್ನವನನ್ನು ಒಪ್ಪಿಸಬೇಕಾಗಿತ್ತು. ದಿನಕ್ಕೊಂದು ಕಂತು ಕಂತು ನಾಟಕದ ಬಗ್ಗೆ ಧಾರವಾಹಿ ಯಂತೆ ಮಾತನಾಡಿ ಅನುನಯಿಸುತ್ತಿದ್ದೆ.
” ಬೇಡ ಅಂದಮೇಲೂ ಹಠವೇಕೆ?”
“ಮಾಡಬಹುದಾದ, ಮಾಡಬೇಕಾದ ಅದೆಷ್ಟೋ ಬೇರೆ ಕೆಲಸಗಳೂ ಇವೆ.”
ಇದು ಆಗದ ಸಂಗತಿ ಎಂದುಕೊಂಡು ವಿಷಯಕ್ಕೆ ಅರ್ಧವಿರಾಮ ನೀಡಿದೆ.
ಹಾಗಿದ್ದರೆ ನಾಟಕ ನೋಡಲು ನನ್ನ ಜೊತೆ ಬನ್ನಿ ಎಂದು ಅವರನ್ನೂ ಬರುವಂತೆ ಪೀಡಿಸತೊಡಗಿದೆ. ಆಗ ರಂಗಭೂಮಿ ಕಲಾವಿದರು
” ಸುಳಿಗೆ ಸಿಕ್ಕವರು”
ಎಂಬ ನಾಟಕವನ್ನು ಪ್ರದರ್ಶಿಸುತ್ತಿದ್ದರು. ‘ಬಾಸುಮಾ ಕೊಡಗು’ ಅವರ ನಿರ್ದೇಶನ. ನಾಲ್ಕು ಜನ ಕಲಾವಿದರು.
ನನ್ನ ಕಣ್ಣಮುಂದೆ ಅದ್ಬುತವೊಂದು ಸ್ವಯಂಭೂ ಆದಂತೆ. ಪ್ರತಿಯೊಂದು ಪಾತ್ರವೂ ನಾನೇ ಆಗಿ ರಂಗದ ಮೇಲಿರುತ್ತಿದ್ದೆ. ಎದುರಲ್ಲಿ ಕೂತದ್ದು ಕೇವಲ ಕಾಯವಷ್ಟೆ. ಆ ಆಂಗಿಕ ಚಲನೆಗಳು, ಭಂಗಿ, ಮಾತು ಎಲ್ಲವೂ ನಾನೇ ಆದಂತೆ. ಹುಚ್ಚು ಎಂಬ ಪದದ ಆಚೆಗೆ ಕಾಣುವ ಮರುಳು ಮರಳುಗಾಡಿನಲ್ಲೂ ಓಯಸಿಸ್ ಅರಸುತ್ತಿತ್ತು.
ಮನೆಗೆ ಬಂದರೂ ನಿದ್ದೆಯಲ್ಲೂ, ಕೆಲಸಗಳಲ್ಲೂ ಆ ನಾಟಕವೇ ನನ್ನೆದುರು ಪ್ರಸ್ತುತಗೊಳ್ಳುತ್ತಿತ್ತು. ನಾನು ಅಭಿನಯಿಸಲೇಬೇಕು. ರಂಗ ಹತ್ತದೆ ನಾನು ಸತ್ತರೆ ಅತೃಪ್ತ ಆತ್ಮವಾಗಿ ತಿರುಗಾಡಿಯೇನು ಎಂದೆಲ್ಲ ಸ್ವಗತವಾಡುತ್ತಿದ್ದೆ.
ನನ್ನ ಪದವಿ ಓದಿನ ಸಂದರ್ಭ. ಓದು ಮುಗಿದು ಫಲಿತಾಂಶವಿನ್ನೂ ಪ್ರಕಟಗೊಳ್ಳುವ ಮುನ್ನ ನಾನು ತಾತ್ಕಲಿಕವಾಗಿ ಒಂದು ಉದ್ಯೋಗ ಕಂಡುಕೊಂಡಿದ್ದೆ. ಅಲ್ಲಿ ಚೆಂದದ ಹುಡುಗಿಯೊಬ್ಬಳು ಗೆಳತಿಯಾಗಿದ್ದಳು. ಅವಳ ಹೆಸರೂ ಗುಣವತಿ. ಅವಳು ರಂಗಭೂಮಿಯ ನಾಟಕದಲ್ಲಿ ಅಭಿನಯಿಸಿದ್ದಳು. ನಮ್ಮ ಆತ್ಮೀಯತೆ ಹೆಚ್ಚಾಗಿದ್ದ ಆ ಸಮಯ ತನ್ನ ನಾಟಕ ಅಭಿನಯದ ಫೋಟೋ ತಂದು ನನಗೆ ತೋರಿಸಿದ್ದಳು. ರಾಣಿಯ ಅಲಂಕಾರ.
“ಇದು ಯಾವ ನಾಟಕ ‘ಗುಣಾ’?”
“ಯಯಾತಿ ನಾಟಕ. ಅದರಲ್ಲಿ ನಾನು ದೇವಯಾನಿ” ಆಕೆಯ ಕಣ್ಣೊಳಗೆ ಅದೆಷ್ಟು ಹೊಳಪು!.
ಮುಂದೊಂದು ದಿನ ಆಕೆ ಅಂದಿದ್ದಳು,
” ದುಬೈಗೆ ಹೋಗಿದ್ದೆವು. ಅಲ್ಲಿಯೂ ಎಲ್ಲರೂ ಮೆಚ್ಚಿದ್ದರು”
ಗೆಳತಿಯ ಮಾತಿನೊಳಗಿನ ಪ್ರಾಣ ನನ್ನೊಳಗೆ ಬಂದು ಸೇರಿತ್ತು. ನಾನೂ ಅಭಿನಯಿಸುವಂತಿದ್ದರೆ..? ನಮ್ಮ ಮನೆಯಲ್ಲಿ ಒಪ್ಪಲಾರರು. ಆ ದಿನ ಕನಸು ಅಲ್ಲೇ ಸ್ಮೃತಿಹೀನವಾದಂತೆ ಒರಗಿತ್ತು. ಈ ಸಮಯ ಮತ್ತೆ ಎಲ್ಲವೂ ಚೇತರಿಸಿಕೊಂಡು ನನ್ನೊಳಗನ್ನು ಆಡಿಸುತ್ತಿತ್ತು.
ನನ್ನವನಲ್ಲಿ ಮತ್ತೆ ಅದೇ ಮಾತು ಕೇಳುವ ಧೈರ್ಯವಿಲ್ಲ. ಆ ದಿನ ಅದೇ ಕಾಲೇಜಿನ ಆವರಣದಲ್ಲಿ ಮತ್ತೆ
“ಸುಳಿಗೆ ಸಿಕ್ಕವರು”
ನಾಟಕ, ತುಳುವಿನಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ನಾಟಕ ಮುಗಿದು ಅದೇ ಗುಂಗಿನಲ್ಲಿ ಹೊರಬರುವಾಗ ರಂಗಭೂಮಿಯ ಹಿರಿಯರಾದ ‘ಉಪೇಂದ್ರ’ ಅಂಕಲ್ ಎದುರಾದರು. ಮನೆಗೆ ಬಂದು ಕಲಾವಿದೆಯಾಗಬೇಕು ಎಂಬ ಆಸೆಯನ್ನು ಹಸಿಮಣ್ಣಿಗೆ ಬಿತ್ತಿದ ಹಿರಿಯರು ಅವರೇ.
” ಏನಾಯಿತು” ಎಂದರು.
ಸೌಮ್ಯ ನುಡಿ. ನಸುನಕ್ಕೆ. ಸರಿದು ಹೋಗುವ ಘಳಿಗೆಯಲ್ಲಿ ತಡೆಯಲಾರದೆ ಮೆಲ್ಲನೆ ನುಡಿದೆ..
” ಇನ್ನೊಮ್ಮೆ ಕೇಳಬಹುದೇ”.
ನಸುನಕ್ಕರು. ಆ ಹಿರಿಯರು ಮತ್ತೆ ನಮ್ಮ ಆಫೀಸಿಗೆ ಬಂದರು. ಅಪರಾಧಿ ಎದುರಿಗಿದ್ದೆ.
” ನೀವು ಹಿರಿಯರು. ಮತ್ತೆ ಮತ್ತೆ ಕೇಳಿದರೆ ಏನನ್ನಲೀ”
ಎಂದು ನನ್ನವನ ಅಳಲು.
“ಅವಳಲ್ಲಿ ಕಲಾವಿದೆ ಇದ್ದಾಳೆ. ಈಗ ಬರಲಿ. ಆಮೇಲೆ ಬೇಡ ಅನ್ನಿಸಿದರೆ ನಿಲ್ಲಿಸಿದರಾಯಿತು.”
ನನ್ನವನು ನನ್ನ ಮುಖ ನೋಡಿದ. ಇಷ್ಟವಿರದಿದ್ದರೂ
” ಅವಳಿಷ್ಟ” ಎಂದದ್ದಕ್ಕೆ
ಅಂಕಲ್ ಮುಖದಲ್ಲಿ ಬೆಳದಿಂಗಳು ನಗುತ್ತಿತ್ತು.
ಗಂಡು ಮನಸ್ಸನ್ನು ಓಲೈಸಿದೆ.
“ಈಗ ಹೋಗುವೆ.”
“ಆಸೆಗಾಗಿ ಅಷ್ಟೇ “.
” ಒಂದೇ ನಾಟಕ. ಒಮ್ಮೆ ರಂಗದ ರುಚಿ ಕಾಣಬೇಕು. ಆಮೇಲೆ ಬೇಡ. ನಿಜವಾಗ್ಲೂ..”
ಸರಿ” ಎಂಬ ಸಮ್ಮತಿ ನನಗೆ ಒಪ್ಪ ಒಪ್ಪ ಅನಿಸಿತ್ತು.
“ಸುಳಿಗೆ ಸಿಕ್ಕವರು” ನಾಟಕ ನೆನಪಿಸಿಕೊಂಡೆ ಓಹ್..ನಾನೂ ಅಂತಹ ಪಾತ್ರ ಮಾಡುವವಳಿದ್ದೇನೆ. ರಂಗವೇ ನನ್ನದಾಗುವುದು. ನನ್ನನ್ನೂ ಪೂರ್ತಿ ಒಪ್ಪಿಸಿಕೊಳ್ಳಬೇಕು. ಕಲಿಯಬೇಕು. ಎಂತಹ ದೊಡ್ಡದೊಡ್ಡ ಕಲಾವಿದರಿದ್ದಾರೆ. ಪರವಾಗಿಲ್ಲ..ಹೋಗುವುದಂತೂ ನಿರ್ಧಾರವಾಗಿದೆ. ಅಭಿನಯಿಸುವೆ.
ಚಿಕ್ಜವಳಿರುವಾಗ ಪ್ರತೀ ಶುಕ್ರವಾರ ಪತ್ರಿಕೆಗಳಲ್ಲಿ ಬರುತ್ತಿದ್ದ ಸಿನೇಮಾದ ಅಭಿನಯದ ಚಿತ್ರಗಳನ್ನು ಕಂಡು ಅದೇ ಭಂಗಿಯನ್ನು ಅನುಕರಿಸುತ್ತಿದ್ದುದು ನೆನಪಿಗೆ ಬಂತು.
ಸಂಜೆ ಆರು ಗಂಟೆಗೆ ರಿಹರ್ಸಲ್ ನಡೆಯುತ್ತಿದ್ದ ಶಾಲೆಗೆ ಬರಲು ಹೇಳಿದ್ದರು. ನಸುಕತ್ತಲು ಸ್ಟೇಜಿನಲ್ಲಿ ಟ್ರಯಲ್ ನಡೆಯುತ್ತಿತ್ತು. ನನಗೋ ಅವರೆಲ್ಲ ಯಾವುದೋ ಬೇರೆ ಲೋಕದವರು ಅತಿಥಿಗಳಾಗಿ ಇಲ್ಲಿ ಓಡಾಡುತ್ತಿದ್ದಾರೆ ಅನಿಸುತ್ತಿತ್ತು. ನನಗೆ ಕೆಳಗಡೆ ಕೂತು ಮೌನವಾಗಿ ಗಮನಿಸುವುದಷ್ಟೆ ಕೆಲಸ.
” ಈಗ ನೋಡುತ್ತಿರಿ. ಪ್ರತಿಯೊಂದನ್ನೂ ಗಮನಿಸಿ”
ಎಂಬ ಮೊದಲ ಪಾಠದ ಅಪ್ಪಣೆ, ನಿರ್ದೇಶಕರಿಂದ.
ಅಚ್ಚರಿಗಳು ಅಚ್ಚರಿಯೊಳಗೇ ತೆರೆದುಕೊಳ್ಳುವ ಜಾದೂ ನೋಡುತ್ತಿದ್ದೆ. ಅಲ್ಲಿ ನಡೆಯುತ್ತಿದ್ದುದು
” ಚಮ್ಮಾರನ ಚಾಲಾಕಿ ಹೆಂಡತಿ”
ಎತ್ತರದ ಹೊಸ್ತಿಲಿನಾಚೆಗಿನ ಅಂಗಳಕ್ಕೆ ಮನೆಯ ಸೊಸೆ ದಾಟಿ ಬಂದದ್ದೇ, ನಾಟಕದ ಮೊದಲ ದೃಶ್ಯಕ್ಕೆ ತೆರೆ ತೆರೆದಂತೆಯೇ, ಅಲ್ಲವೇ.
******************************
ಪೂರ್ಣಿಮಾ ಸುರೇಶ್
ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ
ನಿಮ್ಮ ರಂಗ ಪ್ರವೇಶ ನೀವು ನಡೆದು ಬಂದ ದಾರಿ ರಂಗಭೂಮಿ ಯಲ್ಲಿ ತೊಡಗಿಸಿಕೊಂಡ ರೀತಿ ಎಲ್ಲವೂ ಮೆಚ್ಚುವ ವಿಷಯ.